samachara
www.samachara.com
ಹೊಟ್ಟೆ ತುಂಬಿದ ಜಗತ್ತು ಊಟವಿಲ್ಲದೆ ಸಾವನ್ನಪ್ಪಿದ ಅಮಲ್‌ಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ?
COVER STORY

ಹೊಟ್ಟೆ ತುಂಬಿದ ಜಗತ್ತು ಊಟವಿಲ್ಲದೆ ಸಾವನ್ನಪ್ಪಿದ ಅಮಲ್‌ಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ?

ಆಧುನಿಕ ಕಾಲಘಟ್ಟದ ಈ ಕೃತಕ ಕ್ಷಾಮಕ್ಕೆ ಮೊದಲು ಬಲಿಯಾಗುತ್ತಿರುವುದು ಮಕ್ಕಳು, ಅವುಗಳ ಪೈಕಿ ಅಮಲ್ ಸಂಕೇತವಾಗಿದ್ದಾಳೆ.

ಮೇಲಿನ ಚಿತ್ರವನ್ನು ದಿಟ್ಟಿಸಿ ನೋಡಿ. ಈಕೆಯ ಹೆಸರು ಅಮಲ್ ಹುಸೇನ್. ಯಮೆನ್‌ನ ನಿರಾಶ್ರಿತ ಶಿಬಿರದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಈಕೆಯ ಚಿತ್ರವನ್ನು ಮೊದಲು ‘ನ್ಯೂಯಾರ್ಕ್‌ ಟೈಮ್ಸ್‌’ ಕಳೆದ ವಾರ ಪ್ರಕಟಿಸಿತ್ತು. ಈ ಮೂಲಕ ಯಮೆನ್‌ ನಿರಾಶ್ರಿತ ಶಿಬಿರಗಳ ಪರಿಸ್ಥಿತಿಗೆ ಜಗತ್ತು ಮರಗುವಂತಾಗಿತ್ತು. ನೋವಿನ ಸಂಗತಿ ಏನೆಂದರೆ, ಅಮಲ್ ಹುಸೇನ್ ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ಈಗ ‘ಟೈಮ್ಸ್’ ವರದಿ ಮಾಡಿದೆ.

ಅರಬ್‌ ದೇಶಗಳಲ್ಲಿ ಹುಟ್ಟಿಕೊಂಡ ಆಂತರಿಕ ಸಂಘರ್ಷ ಸಾಮಾನ್ಯ ಜನರನ್ನು ನಿರಾಶ್ರಿತರನ್ನಾಗಿಸುತ್ತಿದೆ. ಲಕ್ಷಾಂತರ ಮಂದಿ ಮನೆ, ನೆಲೆ ಕಳೆದುಕೊಂಡು ಆಯಾ ದೇಶಗಳಿಂದ ಹೊರಬೀಳುತ್ತಿದ್ದಾರೆ. ಇಂತವರು ಹೊಸ ಬದುಕು ಹುಡುಕಿಕೊಂಡು ಅಪಾಯಕಾರಿ ಪರಿಸ್ಥಿತಿಯಲ್ಲಿ ಸಮುದ್ರ ದಾಟಿಕೊಂಡು ಯರೋಪ್ ದೇಶಗಳ ಕಡೆಗೆ ಹೊರಟಿದ್ದು ಕಳೆದ ವರ್ಷ. ಯಾವಾಗ ನಿರಾಶ್ರಿತರಿಗೆ ಯರೋಪಿನ ಕೆಲವು ದೇಶಗಳು ಬೇಲಿ ಹಾಕಿದವೋ, ಅನಿವಾರ್ಯವಾಗಿ ಅರಬ್ ದೇಶಗಳಲ್ಲಿಯೇ ನಿರಾಶ್ರಿತ ಶಿಬಿರಗಳು ತಲೆ ಎತ್ತಲಾರಂಭಿಸಿದವು. ಆದರೆ ಅಲ್ಲಿ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಒಂದು ಕಡೆ ಜಗತ್ತು ಆಧುನಿಕತೆಗೆ ತೆರೆದುಕೊಂಡು, ಐಶಾರಾಮಿ ಬದುಕಿನ ಕನಸು ಕಾಣುತ್ತಿರುವ ಹೊತ್ತಿನಲ್ಲೇ ಇಂತಹ ನಿರಾಶ್ರಿತ ಶಿಬಿರಗಳಲ್ಲಿ ಊಟಕ್ಕೂ ಇಲ್ಲದೆ ಜನ ಸಾಯಲಾರಂಭಿಸಿದ್ದಾರೆ. ಆಧುನಿಕ ಕಾಲಘಟ್ಟದ ಈ ಕೃತಕ ಕ್ಷಾಮಕ್ಕೆ ಮೊದಲು ಬಲಿಯಾಗುತ್ತಿರುವುದು ಮಕ್ಕಳು, ಅವುಗಳ ಪೈಕಿ ಅಮಲ್ ಸಂಕೇತವಾಗಿದ್ದಾಳೆ.

“ನನ್ನ ಹೃದಯ ಒಡೆದು ಹೋಗಿದೆ. ಆಕೆ ಸಾವುವವರೆಗೂ ನಗುತ್ತಲೇ ಇದ್ದಳು. ಅವಳು ಹೋದ ಮೇಲೆ ನನ್ನ ಉಳಿದ ಮಕ್ಕಳ ಬಗ್ಗೆ ಚಿಂತೆ ಶುರುವಾಗಿದೆ,’’ ಎಂದು ‘ಟೈಮ್ಸ್‌'ಗೆ ಅಮಲ್ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಅಮಲ್‌ಳನ್ನು ಕೊನೆಯವರೆಗೂ ಉಳಿಸಿಕೊಳ್ಳಲು ಹೋರಾಟವೊಂದು ನಡೆದಿತ್ತು. ಆಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಮೆಕೈ ಮೆಹದಿ, “ಇಂತಹ ನೂರಾರು ಮಕ್ಕಳು ನಿರಾಶ್ರಿತ ಶಿಬಿರದಲ್ಲಿದ್ದಾರೆ,’’ ಎಂದಿದ್ದಾರೆ.

2015 ಸೆ. 2ರಂದು ಅಲನ್ ಕುರ್ದಿ ಎಂಬ ಸಿರಿಯಾದ ನಿರಾಶ್ರಿತ ಪುಟ್ಟ ಕಂದಮ್ಮನ ಸಾವು, ಇಡೀ ಜಗತ್ತನ್ನೇ ಮಮ್ಮಲ ಮರುಗಿಸಿತ್ತು. ಸಮುದ್ರ ದಂಡೆಯ ಮೇಲೆ ಬೋರಲಾಗಿ ಬಿದ್ದ ಮೂರು ವರ್ಷದ ಪುಟ್ಟ ಕಂದ ಅಲನ್ ಕುರ್ದಿಯ ಚಿತ್ರ ನೋಡುಗರ ಮನ ಕಲಕಿಸಿತ್ತು. ಇದಾದ ಬೆನ್ನಿಗೆ ಮಧ್ಯ ಪೂರ್ವ ದೇಶಗಳ ನಿರಾಶ್ರಿತರ ಬಗ್ಗೆ, ವಿಶ್ವದಾದ್ಯಂತ ವಿಶೇಷ ಅನುಕಂಪ ಸೃಷ್ಟಿಸಿತ್ತು.

ಇದಾಗಿ ಸುಮಾರು ಮೂರು ವರ್ಷಗಳು ಕಳೆಯುತ್ತ ಬಂದರೂ ಪರಿಸ್ಥಿತಿ ಬದಲಾಗಿಲ್ಲ. ಜಗತ್ತಿನ ಸಂಪನ್ಮೂಲಗಳನ್ನು ಅಗತ್ಯ ಇರುವವರಿಗೆ ಹಂಚುವ ಕೆಲಸ ನಡೆಯುತ್ತಿಲ್ಲ. ಮೇಲ್ಮಟ್ಟದ ಅನುಕಂಪ ಸೃಷ್ಟಿಯಾಯಿತೇ ವಿನಃ, ತಳ ಮಟ್ಟದ ನಿರಾಶ್ರಿತರ ಪರಿಸ್ಥಿತಿಗಳಲ್ಲಿ ಯಾವುದೇ ಬದಲಾವಣೆಗಳಾಗಲೇ ಇಲ್ಲ.

ಕುರ್ದಿ ಮತ್ತು ಆತನ ಐದು ವರ್ಷದ ಅಣ್ಣ ಗಾಲಿಪ್ ಸಾವನ್ನಪ್ಪಿದ ಒಂದೇ ಒಂದು ತಿಂಗಳ ಅಂತರದಲ್ಲಿ ಸುಮಾರು 70 ಮಕ್ಕಳು ಇದೇ ಪರಿಸ್ಥಿತಿ ಅನುಭವಿಸಬೇಕಾಯಿತು. ಅವರೂ ಗ್ರೀಸ್ ಮತ್ತು ಟರ್ಕಿ ನಡುವೆ ಸಮುದ್ರ ದಾಟುವ ಯತ್ನದಲ್ಲಿ, ಕಣ್ಣು ಬಿಟ್ಟು ಜಗತ್ತನ್ನ ನೋಡುವ ಮೊದಲೇ ಇಹಲೋಕ ತ್ಯಜಿಸಿದರು.

ಮಧ್ಯ ಪೂರ್ವ ಏಷ್ಯಾ ದೇಶಗಳ ಆಂತರಿಕ ಸಂಘರ್ಷ ಸೇರಿದಂತೆ 2015ರಿಂದ ಇಲ್ಲೀವರೆಗೆ ಒಟ್ಟಾರೆ ನಿರಾಶ್ರಿತರಾದವರ ಸಂಖ್ಯೆಯೇ ಸುಮಾರು 6 ಕೋಟಿ 53 ಲಕ್ಷ ದಾಟಿದೆ. ಇವರಲ್ಲಿ ರಾಜಕೀಯ ನಿರಾಶ್ರಿತರು, ದೇಶಗಳೊಳಗೆ ತಮ್ಮ ನೆಲೆ ಬದಲಾಯಿಸಿದವರು, ವಿದೇಶಗಳಿಗೆ ವಲಸೆ ಹೋದವರೆಲ್ಲಾ ಸೇರಿದ್ದಾರೆ. ಇವರಲ್ಲಿ 2 ಕೋಟಿ 13 ಲಕ್ಷ ಜನರಿಗೆ ಅನಿವಾರ್ಯವಾಗಿ ದೇಶಗಳನ್ನೇ ಬಿಟ್ಟು ವಲಸೆ ಹೋಗಬೇಕಾದ ಸ್ಥಿತಿ ಬಂದೊದಗಿತ್ತು. ಇಡೀ ವಲಸಿಗರಲ್ಲಿ 18 ವರ್ಷ ಕೆಳಗಿನವರ ಸಂಖ್ಯೆಯೇ 51 ಶೇಕಡಾ ದಾಟುತ್ತದೆ.

ವಿಶ್ವಸಂಸ್ಥೆಯ ನಿರಾಶ್ರಿತರ ಉನ್ನತ ಆಯೋಗದ ಮುಂದೆ ತಮ್ಮ ಹೆಸರು ನೋಂದಾಯಿಸಿಕೊಂಡವರ ಸಂಖ್ಯೆಯೇ 1 ಕೋಟಿ 61 ಲಕ್ಷ. ಇವರಲ್ಲಿ 52 ಲಕ್ಷ ಪ್ಯಾಲೆಸ್ಟೀನಿಯರು ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್ ಆಯೋಗದ ಮುಂದೆ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟಕ್ಕೆ ನಿರಾಶ್ರಿತರಾಗಿ ಹೆಸರು ನೋಂದಾಯಿಸಿಕೊಂಡಿದ್ದು ಇದೇ ಮೊದಲು.

ಲಿಬಿಯಾ ದೇಶದ ಕರಾವಳಿಯಲ್ಲಿ ಇತ್ತೀಚೆಗೆ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 29 ಜನ 2016ರ ನವೆಂಬರ್‌ನಲ್ಲಿ ಸಾವನ್ನಪ್ಪಿದ್ದರು. ಈ ಮೂಲಕ, 2016ರಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟುವ ಸಮಯದಲ್ಲಿ ಜೀವತೆತ್ತ ನಿರಾಶ್ರಿತರ ಸಂಖ್ಯೆ 3800ರ ಗಡಿ ಮುಟ್ಟಿತ್ತು.

2017ರಲ್ಲಿ ಸಿರಿಯಾದ ಮಗುವಿನ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾವಿಗೀಡಾದ ತನ್ನ ತಾಯಿ ಮತ್ತುಎಡಗಣ್ಣನ್ನು ಕಳೆದುಕೊಂಡ ಮಗುವಿನ ಚಿತ್ರವು ವಿಶ್ವದಾದ್ಯಂತ ಜನರ ಗಮನವನ್ನು ಸೆಳೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಮಗುವಿನ ಹೆಸರು ಕರೀಮ್. ಕೇವಲ ಮೂರು ತಿಂಗಳ ಈ ಮಗು ತನ್ನ ಎಡಗಣ್ಣನ್ನು ಕಳೆದುಕೊಂಡಿತ್ತು. ಅಷ್ಟೇ ಅಲ್ಲದೆ ಅದರ ತಲೆ ಬುರುಡೆಗೆ ಗಾಯಗಳಾಗಿದ್ದವು.

ಈ ವರ್ಷ ಅಮಲ್ ಚಿತ್ರ ಮತ್ತೊಮ್ಮೆ ನಿರಾಶ್ರಿತರ ಚಿಂತಾಜನಕ ಸ್ಥಿತಿಯನ್ನು ಜಗತ್ತಿಗೆ ನೆನಪಿಸಿದೆ. ಇಂತಹ ನಿರಂತರ ನೆನಪುಗಳ ಆಚೆಗೂ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಅಭಿವೃದ್ಧಿಶೀಲ ಜಗತ್ತು ತನ್ನೊಳಿನ ಕ್ರೂರತೆಯನ್ನು ಎಷ್ಟರ ಮಟ್ಟಿಗೆ ಮೈಗೂಡಿಸಿಕೊಂಡಿದೆ ಎಂಬುದನ್ನು ಇವು ಸಾರಿ ಹೇಳುತ್ತಿವೆ.