ಕೊಡಗಿನ ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದೇಕೆ?
COVER STORY

ಕೊಡಗಿನ ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದೇಕೆ?

ನಮ್ಮ ಪಕ್ಷದಿಂದ ಯಾರನ್ನು ನಿಲ್ಲಿಸಿದರೂ ಜನರು ಮತ ನೀಡಿ ಗೆಲ್ಲಿಸುತ್ತಾರೆ ಎನ್ನುವ ಬಿಜೆಪಿ ಭ್ರಮೆಯು ಈಗ ಕೊಡಗಿನಲ್ಲಿ ಕಳಚಿ ಬಿದ್ದಿದೆ.

ಕೊಡಗಿನಲ್ಲಿ ಕಳೆದ ವಾರ ನಡೆದ ಮೂರು ಪಟ್ಟಣ ಪಂಚಾಯ್ತಿಗಳ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಕೊಡಗಿನ ವೀರಾಜಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೂರು ಕಡೆಗಳಲ್ಲಿ ಸರಳ ಬಹುಮತವನ್ನು ಪಡೆಯಲೂ ವಿಫಲವಾಗಿದೆ.

ವೀರಾಜಪೇಟೆ ಪಟ್ಟಣ ಪಂಚಾಯ್ತಿಯ 18  ಸ್ಥಾನಗಳಲ್ಲಿ 8 ಸ್ಥಾನ ಗಳಿಸಿರುವುದೇ ಬಿಜೆಪಿಯ ಸಾಧನೆ ಆಗಿದೆ. ಇಲ್ಲಿ ಪಕ್ಷೇತರರು 3 ಸ್ಥಾನ, ಕಾಂಗ್ರೆಸ್ 6 ಹಾಗೂ ಜೆಡಿಎಸ್ ಒಂದು ಸ್ಥಾನ ಗಳಿಸಿದೆ. ಇನ್ನುಳಿದಂತೆ ಕುಶಾಲನಗರ ಪಟ್ಟಣ ಪಂಚಾಯ್ತಿಯ 16 ಸ್ಥಾನಗಳಲ್ಲಿ ಬಿಜೆಪಿ ಗಳಿಸಿರುವುದು 6 ಸ್ಥಾನಗಳನ್ನು ಮಾತ್ರ. ಇಲ್ಲಿ ಕಾಂಗ್ರೆಸ್ 6 ಮತ್ತು ಜೆಡಿಎಸ್ 4 ಸ್ಥಾನ ಗಳಿಸಿದೆ.

ಎಲ್ಲಕ್ಕಿಂತಲೂ ಬಿಜೆಪಿಗೆ ತೀವ್ರ ಮುಖಭಂಗ ಆಗಿರುವುದು ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯಲ್ಲಿ. ಇಲ್ಲಿ ಈ ಹಿಂದೆ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಈ ಬಾರಿ ಕೇವಲ ಮೂರು ಸ್ಥಾನ ಗಳಿಸಿದೆ. 11 ಸ್ಥಾನಗಳ ಪಂಚಾಯ್ತಿಯಲ್ಲಿ ಈ ಬಾರಿ ಕಾಂಗ್ರೆಸ್ 4 ,ಜೆಡಿಎಸ್ 3 ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ ಗಳಿಸಿದ್ದು ಅಧಿಕಾರಕ್ಕೇರುವ ಬಿಜೆಪಿ ಕನಸು ನುಚ್ಚು ನೂರಾಗಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯ್ತಿಯು ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆ ಎಂದೇ ಹೆಸರುವಾಸಿ ಆಗಿತ್ತು. ಇದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ತವರು ಕ್ಷೇತ್ರವೂ ಆಗಿದ್ದು ಕಳೆದ 22 ವರ್ಷಗಳಿಂದಲೂ ಬಿಜೆಪಿಯೇ ಅಧಿಕಾರದಲ್ಲಿತ್ತು. ಸೋಮವಾರಪೇಟೆಯು ಮೊದಲು ವಿಧಾನ ಸಭಾ ಕ್ಷೇತ್ರ ಆಗಿದ್ದು 2008 ರಲ್ಲಿ ಕ್ಷೇತ್ರ ಪುನರ್ವಿಂಗಡನೆಯ ನಂತರ ಇದನ್ನು ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ವಿಲೀನಗೊಳಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪ್ಪಚ್ಚು ರಂಜನ್ ಅವರು ಪಕ್ಷದೊಳಗೇ ಮತ್ತು ಸಂಘ ಪರಿವಾರದ ತೀವ್ರ ವಿರೋಧವನ್ನು ಎದುರಿಸಿಯೂ 15 ಸಾವಿರ ಮತಗಳ ಮುನ್ನಡೆಯೊಂದಿಗೆ ಮಾಜಿ ಸಚಿವ ಜೆಡಿಎಎಸ್‌ನ ಜೀವಿಜಯ ಅವರನ್ನು ಸೋಲಿಸಿದ್ದರು. ಈ ಅಭೂತಪೂರ್ವ ಲೀಡ್ ಒಂದು ದಾಖಲೆಯೂ ಆಗಿದ್ದು, ಗೆದ್ದ ಹುಮ್ಮಸ್ಸಿನಲ್ಲಿದ್ದ ಶಾಸಕರು ಸ್ಥಳೀಯ ಸಂಸ್ಥೆಗಳಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಎಡವಿದ್ದು ಬಿಜೆಪಿಗೆ ಮುಳುವಾಗಿದೆ.

ಸೋಮವಾರಪೇಟೆಯಲ್ಲಿ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ 5 ಜನ ಹಿರಿಯ ಮುಖಂಡರ ಸಮಿತಿಯೊಂದನ್ನು ರಚಿಸಲಾಗಿದ್ದು ಸ್ವತಃ ಅಪ್ಪಚ್ಚು ಅವರೇ ಸಮಿತಿಯ ಅದ್ಯಕ್ಷರಾಗಿದ್ದರು. ಸೋಮವಾರಪೇಟೆಯಲ್ಲಿ ಪಕ್ಷದ ಕಾರ್ಯಕರ್ತರೇ ಆಗಿದ್ದ  ಜೀವನ್, ಜಯಂತಿ ಶಿವಕುಮಾರ್ ಮತ್ತು ಶುಭಾಕರ ಅವರಿಗೆ ಪಕ್ಷದ ಟಿಕೇಟ್ ನೀಡದೇ ಬೇರೆಯವರಿಗೆ ನೀಡಲಾಗಿತ್ತು. ಫಲಿತಾಂಶ ಹೊರಬಿದ್ದಾಗ ಈ ಮೂವರೂ ಕೂಡ ಅಲ್ಲಿ ಗೆದ್ದಿದ್ದರು. ಇದೇ ಬಿಜೆಪಿಯ ಹಿನ್ನಡೆಗೆ ಪ್ರಮುಖ ಕಾರಣ ಆಗಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯ ಹಾಲಿ ಅಧ್ಯಕ್ಷೆಯಾಗಿದ್ದ ವಿಜಯಲಕ್ಷ್ಮಿ ಸುರೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತಿದ್ದು ಇವರ ಪತಿ ಬಿ.ಎಂ. ಸುರೇಶ್ ಕೂಡ ಸೋತಿದ್ದಾರೆ.

ವೀರಾಜಪೇಟೆಯಲ್ಲಿಯೂ ಹೀಗೆಯೇ ಆಗಿದೆ. ಅಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಈ.ಸಿ. ಜೀವನ್ ಸೋತಿದ್ದಾರೆ. ಮಾಜಿ ಅಧ್ಯಕ್ಷೆ ದೇಚಮ್ಮ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಲ್ಲಿ ಬಿಜೆಪಿ ಶಾಸಕ ಬೋಪಯ್ಯ ವಿರುದ್ಧ ಪಕ್ಷದ ಮಾಜಿ ನಗರ ಘಟಕದ ಅಧ್ಯಕ್ಷ ಟಿ.ಪಿ. ಕೃಷ್ಣ ತಿರುಗಿ ಬಿದ್ದರು. ಬೋಪಯ್ಯ ಕೆಲವೇ ಜನ ನಾಯಕರ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದ್ದು ಅವರ ಕೈಗೊಂಬೆಯಂತೆ ವರ್ತಿಸುತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು. ಇದರಿಂದಾಗಿ ಇವರ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರಿಸಿ ಬಂದಿದ್ದಾರೆ.

ನಮ್ಮ ಪಕ್ಷದ ವತಿಯಿಂದ ಯಾರನ್ನು ನಿಲ್ಲಿಸಿದರೂ ಜನರು ಮತ ನೀಡಿ ಗೆಲ್ಲಿಸುತ್ತಾರೆ ಎನ್ನುವ ಬಿಜೆಪಿ ಭ್ರಮೆಯು ಈಗ ಕಳಚಿ ಬಿದ್ದಿದೆ. ಲೋಕಸಭಾ ಚುನಾವಣೆಯೂ ಹತ್ತಿರಾಗುತಿದ್ದು ಕೊಡಗು ಜಿಲ್ಲೆಯ ಮತಗಳಿಕೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಂಸದ ಪ್ರತಪ್ ಸಿಂಹ ಅವರೂ ಕೂಡ ಜಿಲ್ಲೆಗೆ ಭೇಟಿ ನೀಡುವುದೂ ಕಡಿಮೆಯೇ. ಹೀಗಾಗಿ ಮುಂದೆ ಕೊಡಗಿನಲ್ಲಿ ಬಿಜೆಪಿಗೆ ಡೋಲಾಯಮಾನ ಸ್ಥಿತಿ ನಿರ್ಮಾಣವಾಗಬಹುದು.