samachara
www.samachara.com
ಡಿ. ಕೆ. ಶಿವಕುಮಾರ್ ಎಂಬ ಸೇನಾಧಿಪತಿಯೂ, ಕರ್ನಾಟಕದ ಮುಖ್ಯಮಂತ್ರಿ ಗಾದಿಯೂ...
COVER STORY

ಡಿ. ಕೆ. ಶಿವಕುಮಾರ್ ಎಂಬ ಸೇನಾಧಿಪತಿಯೂ, ಕರ್ನಾಟಕದ ಮುಖ್ಯಮಂತ್ರಿ ಗಾದಿಯೂ...

ರಾಮನಗರದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ತೋಡಿರುವ ಖೆಡ್ಡಾ, ಬಳ್ಳಾರಿಯಲ್ಲಿ ಡಿ. ಕೆ. ಶಿವಕುಮಾರ್ ತೋರಿಸುತ್ತಿರುವ ಶ್ರದ್ಧೆಗಳ ಹಿಂದೆ ರಾಜಕಾರಣಿಯೊಬ್ಬರ ಮಹತ್ವಾಕಾಂಕ್ಷೆ ನಡೆಗಳು ಗೋಚರಿಸುತ್ತಿವೆ.

ಸದ್ಯ ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಅವುಗಳ ಪರಿಣಾಮಗಳನ್ನು ಮುಂದಿಟ್ಟುಕೊಂಡರೆ, ದೊಡ್ಡಹಾಲಹಳ್ಳಿ ಕೆಂಪೇಗೌಡ ಶಿವಕುಮಾರ್ ಸದ್ದಿಲ್ಲದೆ ಮುಖ್ಯಮಂತ್ರಿ ಗಾದಿಯತ್ತ ಹೆಜ್ಜೆ ಇಡುತ್ತಿರುವ ಸಾದ್ಯತೆಗಳು ಕಾಣಿಸುತ್ತಿವೆ.

ಗುರುವಾರ ರಾಮನಗರದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿಗೆ ತೋಡಿರುವ ಖೆಡ್ಡಾ ಹಾಗೂ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ. ಎಸ್. ಉಗ್ರಪ್ಪ ಪರ ಪ್ರಚಾರದಲ್ಲಿ ಡಿ. ಕೆ. ಶಿವಕುಮಾರ್ ತೋರಿಸುತ್ತಿರುವ ಶ್ರದ್ಧೆಗಳ ಹಿಂದೆ ರಾಜಕಾರಣಿಯೊಬ್ಬರ ಮಹತ್ವಾಕಾಂಕ್ಷೆ ನಡೆಗಳು ಗೋಚರಿಸುತ್ತಿವೆ.

ರಾಜ್ಯದ ಪ್ರಬಲ ಸಮುದಾಯ ಒಕ್ಕಲಿಗರನ್ನು ಒತೆಗಿಟ್ಟುಕೊಂಡು, ಇನ್ನೊಂದು ಕಡೆ ಪಕ್ಷದ ಹೈಕಮಾಂಡ್‌ಗೂ ಸೈ ಎನ್ನಿಸಿಕೊಂಡು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನೂ ಜತೆಗಿಟ್ಟುಕೊಂಡು ಡಿಕೆಎಸ್‌ ಉರುಳಿಸುತ್ತಿರುವ ದಾಳಗಳ ಅಂತಿಮ ಫಲಿತಾಂಶ ಮುಖ್ಯಮಂತ್ರಿ ಹುದ್ದೆಯೇ ಆಗಿದೆ ಎಂಬುದರಲ್ಲಿ ಯಾವುದೇ ಅನುಮಾನಗಳು ಬೇಕಿಲ್ಲ.

ಸುಮಾರು 51 ವರ್ಷದ ಡಿ. ಕೆ. ಶಿವಕುಮಾರ್ ಒಂದು ಕಾಲದಲ್ಲಿ ಐಶಾರಾಮಿ ಕಾರು ಓಡಿಸಲು ಸಿಗುತ್ತೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಇನ್ನೊಬ್ಬ ಶ್ರೀಮಂತ ಸಚಿವ ಕೆ. ಜೆ. ಜಾರ್ಜ್‌ ಮನೆಗೆ ಹೋಗುತ್ತಿದ್ದರು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಇವತ್ತು ಸ್ವತಃ ಡಿಕೆಎಸ್‌ ಕೋಟಿ ಒಡೆಯರು, ಜತೆಗೆ ರಾಜಕಾಣಿಯಾಗಿಯೂ ಮಾಗಿದ ಹಾಗೆ ಕಾಣಿಸುತ್ತಾರೆ. ಬೆಳಗಾವಿಯಿಂದ ಹಿಡಿದು ಬೆಂಗಳೂರಿನವರೆಗೆ ಅವರ ಕಾರ್ಯಚರಣೆಗಳು ಕಾಣಸಿಗುತ್ತವೆ.

2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಐಟಿ- ಇಡಿ ದಾಳಿಗೆ ಗುರಿಯಾದವರಲ್ಲಿ ಪ್ರಮುಖ ರಾಜಕಾರಣಿ ಡಿ. ಕೆ. ಶಿವಕುಮಾರ್. ‘ಕಾಂಗ್ರೆಸ್ ಮುಕ್ತ ಭಾರತ’ ಮಾಡಲು ಹೊರಟ ಬಿಜೆಪಿಯ ದುರಾಲೋಚನೆಗಳಿಗೆ ಅಡ್ಡಿಯಾಗಿ ನಿಂತವರು. ಅದೇ ಕಾರಣಕ್ಕೆ ಐಟಿ- ಇಡಿ ದಾಳಿಗಳಿಗೆ ಗುರಿಯಾದವರು. ಒಂದು ಹಂತದಲ್ಲಿ ಡಿಕೆ ಕಾಂಗ್ರೆಸ್ ತೊರೆಯುತ್ತಾರೆ ಎಂಬ ಸುದ್ದಿಯನ್ನೂ ಹರಡಿಸಲಾಗಿತ್ತು. ಆದರೆ ಅವೆಲ್ಲವನ್ನೂ ಎದುರಿಸಿ ನಿಂತ ಡಿ. ಕೆ. ಶಿವಕುಮಾರ್, ತಮ್ಮ ರಾಜಕೀಯ ಪಟ್ಟುಗಳ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್‌ನ ಅತ್ಯುತ್ತಮ ಸೇನಾಧಿಪತಿ ಎನ್ನಿಸಿಕೊಂಡಿದ್ದಾರೆ.

ಅದಿನ್ನೂ ಕಾಂಗ್ರೆಸ್- ಜೆಡಿಎಸ್‌ ಮೊದಲ ಬಾರಿಗೆ 20-20 ಸರಕಾರ ರಚಿಸಿದ ಕಾಲಘಟ್ಟ. ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಆದರೆ ಡಿ. ಕೆ. ಶಿವಕುಮಾರ್ ಸಂಪುಟದ ಒಳಗೆ ಕಾಲಿಡಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ಜೆಡಿಎಸ್‌ನ ವರಿಷ್ಠ ದೇವೇಗೌಡರ ಕುಟುಂಬದ ಜತೆ ಕಟ್ಟಿಕೊಂಡಿದ್ದ ರಾಜಕೀಯ ಶತ್ರುತ್ವ. ರಾಜಕಾರಣರಲ್ಲಿ ಯಾವುದೂ ಶಾಶ್ವತ ಅಲ್ಲ ಎಂಬಂತೆ ಇವತ್ತು ದೇವೇಗೌಡ ಹಾಗೂ ಕುಮಾರಸ್ವಾಮಿ ಜತೆಗೆ ಡಿ. ಕೆ. ಶಿವಕುಮಾರ್ ಸಂಬಂಧ ಬೇರೆಯದೇ ನೆಲೆಯನ್ನು ಕಂಡುಕೊಂಡಿದೆ. ಸದ್ಯದ ಸಮ್ಮಿಶ್ರ ಸರಕಾರದಲ್ಲಿ ಆಯಕಟ್ಟಿನ ಸ್ಥಾನವೂ ಸಿಕ್ಕಿದೆ.

“ಕುಮಾರಸ್ವಾಮಿ ಆರೋಗ್ಯ ಹದಗೆಟ್ಟಿದೆ. ಅವರು ನಾನು ಸಾಯುತ್ತೇನೆ, ನಿಮ್ಮ ಋಣ ತೀರಿಸುತ್ತೇನೆ ಎನ್ನುತ್ತಿರುವುದು ರಾಜಕೀಯ ಗಿಮಿಕ್ ಅಷ್ಟೆ ಅಲ್ಲ. ಇಂತಹ ಸ್ಥಿತಿಯಲ್ಲಿ ಒಕ್ಕಲಿಗರ ಸಮುದಾಯದ ಮುಂದಿನ ತಲೆಮಾರಿನ ನಾಯಕರಾಗಿ ಮುನ್ನೆಲೆ ಬರುವ ಬಹುದೊಡ್ಡ ಅವಕಾಶ ಇರುವುದು ಡಿ. ಕೆ. ಶಿವಕುಮಾರ್‌ಗೆ ಎಂಬುದರಲ್ಲಿ ಅನುಮಾನ ಬೇಕಿಲ್ಲ,’’ ಎನ್ನುತ್ತಾರೆ ದೇವೇಗೌಡ ಕುಟುಂಬವನ್ನು ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತರೊಬ್ಬರು.

ಇದಕ್ಕೆ ಪೂರಕ ಎಂಬಂತೆ ಹಿಂದೆಲ್ಲಾ ತಮ್ಮ ತಾಳ್ಮೆ ಕಳೆದುಕೊಂಡ ನಡೆಗಳ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಡಿಕೆಎಸ್‌ ಇವತ್ತು ಸಂಯಮದ ಮೊರೆ ಹೋಗಿದ್ದಾರೆ. ಕುಮಾರಸ್ವಾಮಿ ಜತೆ ಸಂಬಂಧ ಗಟ್ಟಿ ಮಾಡಿಕೊಂಡಿದ್ದಾರೆ. ಅವರ ಹಳೆಯ ಕಹಿಗಳನ್ನು ಮರೆತು ಬಿಜೆಪಿ ವಿರುದ್ಧ ರಾಜಕೀಯ ಹೋರಾಟವನ್ನು ಮುನ್ನಡೆಸುತ್ತಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಜಾತಿ ಲೆಕ್ಕಾಚಾರಗಳು, ದೇವೇಗೌಡದ ಕುಟುಂಬದ ಸಂಬಂಧಗಳು ಡಿ. ಕೆ. ಶಿವಕುಮಾರ್ ನಡಿಗೆಗೆ ಪೂರಕವಾಗಿವೆ. ಮತ್ತೊಂದೆಡೆ ಕಾಂಗ್ರೆಸ್ ಹೈಕಮಾಂಡ್‌ನ ಅಳವು ಉಳಿವಿನ ಹೋರಾಟಕ್ಕೆ ಇಂತಹ ಸೇನಾಧಿಪತಿಯೊಬ್ಬರ ಅನಿವಾರ್ಯತೆ ಇದೆ. ಅದು ಗುಜರಾತ್ ಶಾಸಕರಿಗೆ ರೆಸಾರ್ಟ್‌ ಆಶ್ರಯ ನೀಡುವುದಿರಲಿ, ಚುನಾವಣೆಗೆ ಮುನ್ನವೇ ಬಿಜೆಪಿಗೆ ಖೆಡ್ಡಾ ತೋಡುವುದು ಇರಲಿ, ಡಿಕೆಎಸ್‌ ಹೊಣೆಗಾರಿಕೆಗಳು ಪುರಾತನ ಪಕ್ಷಕ್ಕೆ ಅನುಕೂಲವಾಗಿವೆ. ಇದೀಗ ಬಳ್ಳಾರಿ ಸರದಿ. ಒಂದು ವೇಳೆ, ವಿ. ಎಸ್. ಉಗ್ರಪ್ಪ ನೇರ ಚುನಾವಣೆಯಲ್ಲಿ ಗೆದ್ದು ಬಂದರೆ, ಅದರ ಸಂಪೂರ್ಣ ಕ್ರೆಡಿಟ್ ಸಲ್ಲಿಕೆಯಾಗುವುದು ಡಿಕೆಎಸ್‌ಗೆ. ಇದು ಕೂಡ ಮುಂದಿನ ದಿನಗಳಲ್ಲಿ ಕೆಪಿಸಿಸಿಯಲ್ಲಿ ಶಿವಕುಮಾರ್‌ಗೆ ಹೊಸ ಅವಕಾಶಗಳನ್ನು ಸೃಷ್ಟಿಮಾಡಲಿದೆ ಎಂಬುದು ರಾಜಕೀಯ ಲೆಕ್ಕಾಚಾರಗಳು.

ಇಷ್ಟರ ನಡುವೆ ಮುಖ್ಯಮಂತ್ರಿಯಂತಹ ಪ್ರಭಾವಿ ಹುದ್ದೆಗೆ ಹೋಗಲು ಅಗತ್ಯ ಇರುವುದು ಸಿದ್ದರಾಮಯ್ಯ ತರಹದ ಜನಪ್ರಿಯ ಹಾಗೂ ಅನುಭವಿ ನಾಯಕರ ಸಮ್ಮತಿ. ಕಳೆದ ಚುನಾವಣೆಯಲ್ಲಿ ಮೈಸೂರಿನಲ್ಲಿ ಸಿದ್ದರಾಮಯ್ಯ ನಂಬಿಕೊಂಡಿದ್ದ ಅವರು ಆಪ್ತರು ಕೈಕೊಟ್ಟಾಗ ನೆರವಿಗೆ ಬಂದವರು ಡಿ. ಕೆ. ಶಿವಕುಮಾರ್. ಅದಾದ ನಂತರ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ನಡುವಿನ ಸಂಬಂಧದಲ್ಲಿ ಸಮನ್ವಯವೊಂದು ಕಾಣಿಸುತ್ತಿದೆ. ಈಗಾಗಲೇ ರಾಜಕಾರಣದಿಂದ ದೂರ ಸರಿಯುವ ಮಾತುಗಳನ್ನು ಆಡುತ್ತಿರುವ ಸಿದ್ದರಾಮಯ್ಯ ಅವರ ತೀರ್ಮಾನವೂ ಡಿಕೆಎಸ್‌ಗೆ ಅವಕಾಶದ ಬಾಗಿಲು ತೆರೆಯಲು ಪೂರಕವಾಗಬಹುದು.

ಇವೆಲ್ಲಾ ಲೆಕ್ಕಾಚಾರಗಳ ಜತೆಗೆ, ಇವತ್ತು ಕರ್ನಾಟಕದಲ್ಲಿ ಬಿಜೆಪಿ ಕಳೆಗುಂದುತ್ತಿದೆ. ಬಿಜೆಪಿ ಮುಖವಾಣಿ ಎಂಬ ಆರೋಪಕ್ಕೆ ಗುರಿಯಾಗಿರುವ ರಿಪಬ್ಲಿಕ್ ಟಿವಿ ಹಾಗೂ ಸಿ- ವೋಟರ್‌ಗಳು ನಡೆಸಿದ ಸಮೀಕ್ಷೆಯೇ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕನಿಷ್ಟ 5 ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದೆ. ಉಪಚುನಾವಣೆಗಳಲ್ಲಿ ಉಬಯ ಪಕ್ಷಗಳು ಉರುಳಿಸುತ್ತಿರುವ ದಾಳಗಳು ಹಾಗೂ ಅವು ಮೂಡಿಸಿದ ಪರಿಣಾಮಗಳನ್ನು ಲೋಕಸಭೆವರೆಗೆ ಕಾಯ್ದುಕೊಂಡರೆ ರಾಷ್ಟ್ರೀಯ ಪಕ್ಷ ಬಿಜೆಪಿ ಎಲ್ಲಾ ಆಯಾಮಗಳಲ್ಲೂ ಸಂಕಷ್ಟದ ಸ್ಥಿತಿ ತಲುಪಲಿದೆ. ಇದು ಕೂಡ ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕಾರಣದಲ್ಲಿ ಮಹತ್ವಾಕಾಂಕ್ಷಿ ಹೆಜ್ಜೆಗಳನ್ನು ಇಡುತ್ತಿರುವ ಡಿಕೆಎಸ್‌ಗೆ ಅನುಕೂಲ ಮಾಡಿಕೊಡಲಿದೆ. ಪಕ್ಕದಲ್ಲಿ ಡಿ. ಕೆ. ಸುರೇಶ್ ಎಂಬ ತಂತ್ರಗಾರನ ಇರುವಿಕೆ ಸಹೋದರರ ಮಹತ್ವಾಕಾಂಕ್ಷೆಗಳಿಗೆ ಇನ್ನಷ್ಟು ಬಲವನ್ನು ತುಂಬಿದೆ.

ಹೀಗಾಗಿ, ಡಿ. ಕೆ. ಶಿವಕುಮಾರ್ ಮುಂದಿನ ದಿನಗಳಲ್ಲಿ ಇಡುವ ರಾಜಕೀಯ ನಡೆಗಳನ್ನು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದಲೇ ಗಮನಸಿಬೇಕಿದೆ.