samachara
www.samachara.com
‘ರಾಮನಗರದ ಆಪರೇಷನ್ ಖೆಡ್ಡಾ’: ಉಪಚುನಾವಣೆ ಕಣದಿಂದ ಹಿಂದೆ ಸರಿದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ
COVER STORY

‘ರಾಮನಗರದ ಆಪರೇಷನ್ ಖೆಡ್ಡಾ’: ಉಪಚುನಾವಣೆ ಕಣದಿಂದ ಹಿಂದೆ ಸರಿದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ

ಇಂಥಹದ್ದೊಂದು ಖೆಡ್ಡಾ ಕಾರ್ಯಾಚರಣೆ ಕಳೆದ ಒಂದು ತಿಂಗಳಿನಿಂದ ರಾಮನಗರದಲ್ಲಿ ಚಾಲ್ತಿಯಲ್ಲಿತ್ತು. ಮಾಧ್ಯಮಗಳಿಗಾಗಲೀ, ರಾಜಕೀಯ ನಾಯಕರಿಗಾಗಲೀ ಸಣ್ಣ ಸುಳಿವೂ ಕೂಡ ಇರಲಿಲ್ಲ.

ಖೆಡ್ಡಾ ಎಂದರೇನು?

ಕಾಡಿನ ನಡುವೆ ಹೊಂಡ ತೋಡಿ ಅದನ್ನು ಮೇಲ್ಭಾಗದಲ್ಲಿ ಮಾತ್ರ ಮುಚ್ಚಿ ಅಲ್ಲೊಂದು ಗುಂಡಿ ಇದೆ ಎಂಬುದನ್ನು ಮರೆಮಾಚಲಾಗುತ್ತದೆ. ನಂತರ ಊಳಿಡುವ ಕಾಡಾನೆಗಳನ್ನು ಭಯ ಬೀಳಿಸಿ ಅವನ್ನು ಗುಂಡಿ ಇರುವ ದಾರಿಯಲ್ಲಿ ಓಡುವಂತೆ ಮಾಡಲಾಗುತ್ತದೆ. ಗಲಿಬಿಲಿಗೊಂಡ ಆನೆಗಳು ಈ ಹೊಂಡಕ್ಕೆ ಬಂದು ಬೀಳುತ್ತವೆ. ನಾನು ನಡೆದಿದ್ದೇ ಹಾದಿ ಎಂದು ಬೀಗುವ ಆನೆಗಳಿಗೆ, ಗುಂಡಿಗೆ ಬಿದ್ದಾಗ ತಮ್ಮ ಮಿತಿಗಳೇನು ಎಂಬುದು ನೆನಪಾಗುತ್ತದೆ. ಹಾಗೆ ಕಾಡಾನೆಗಳನ್ನು ಪಳಗಿಸುವ ಪ್ರಕ್ರಿಯೆ ನಡೆಯುತ್ತದೆ.

ಇಂಥಹದ್ದೇ ಒಂದು ಖೆಡ್ಡಾ ಕಾರ್ಯಾಚರಣೆ ಕಳೆದ ಒಂದು ತಿಂಗಳಿನಿಂದ ರಾಮನಗರದಲ್ಲಿ ಚಾಲ್ತಿಯಲ್ಲಿತ್ತು. ಸಚಿವ ಡಿ. ಕೆ. ಶಿವಕುಮಾರ್ ಹಾಗೂ ಸಂಸದ ಡಿ. ಕೆ. ಸುರೇಶ್ ಹೊರತು ಪಡಿಸಿ; ಮಾಧ್ಯಮಗಳಿಗಾಗಲೀ, ರಾಜಕೀಯ ನಾಯಕರಿಗಾಗಲೀ ಇದರ ಸಣ್ಣ ಸುಳಿವೂ ಕೂಡ ಇರಲಿಲ್ಲ.

ನವೆಂಬರ್ 1ರಂದು ಇಡೀ ರಾಜ್ಯ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿತ್ತು. ಸ್ವತಃ ಪ್ರಧಾನಿ ಮೋದಿ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಶುಭಾಷಯ ಕೋರಿದ್ದರು. ಶುಭಾಷಯ, ಸಂಭ್ರಮಗಳ ನಡುವೆಯೇ, ರಾಮನಗರದಲ್ಲಿ ತೋಡಿದ್ದ ಖೆಡ್ಡಾ ಕಾರ್ಯಚರಣೆಗೆ ಅಂತಿಮ ರೂಪ ನೀಡಲಾಗಿದೆ. ಉಪ ಚುನಾವಣೆಯ ಕಣದಿಂದ ರಾಷ್ಟ್ರೀಯ ಪಕ್ಷ ಬಿಜೆಪಿಯ ಅಭ್ಯರ್ಥಿ ಹೊರಬಿದ್ದಿದ್ದಾರೆ. ಬಹಿರಂಗ ಪ್ರಚಾರದ ಅಂತಿಮ ದಿನ ನಡೆದ ಈ ಹಠಾತ್ ಬೆಳವಣಿಗೆ ರಾಜಕೀಯದ ವಲಯದಲ್ಲಿ ಬಿಜೆಪಿಗೆ ಭಾರಿ ಮುಖಭಂಗವನ್ನು ಉಂಟುಮಾಡಿದೆ.

ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ನೀಡಿದ ಪತ್ರಿಕಾ ಹೇಳಿಕೆ. 
ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ನೀಡಿದ ಪತ್ರಿಕಾ ಹೇಳಿಕೆ. 

2018ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ. ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದ ಅವರು ಸಾಂಪ್ರದಾಯಿಕ ರಾಮನಗರಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಇಲ್ಲೀಗ ಉಪ ಚುನಾವಣೆ ನಡೆಯುತ್ತಿದೆ. ಇದೇ ಶನಿವಾರ ಇಲ್ಲಿ ಮತದಾನ ನಡೆಯಬೇಕಿದೆ. ಇಂದು ಸಂಜೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಇದೀಗ ಚುನಾವಣೆಗೆ 48 ಗಂಟೆಗಳಿರುವ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು ಕೇಸರಿ ಪಕ್ಷವನ್ನು ಅಘಾತಕ್ಕೆ ತಳ್ಳಿದ್ದಾರೆ. ಸದ್ಯ, ರಾಮನಗರದಲ್ಲಿ ಎಲ್. ಚಂದ್ರಶೇಖರ್ ವಿರುದ್ಧ 10-15 ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಖೆಡ್ಡಾಕ್ಕೆ ಬಿದ್ದ ಬಿಜೆಪಿ

ಹೇಳಿ ಕೇಳಿ ಬಿಜೆಪಿಗೆ ರಾಮನಗರದಲ್ಲಿ ನೆಲೆಯಿಲ್ಲ. ಇಲ್ಲಿ ಏನಿದ್ದರೂ ಕಳೆದ ಹಲವು ದಶಕಗಳಿಂದ ನಡೆದಿದ್ದು ಕೇವಲ ಎರಡು ಕುಟುಂಬಗಳ ನಡುವಿನ ಕದನ. ಕಾಂಗ್ರೆಸ್ ನಾಯಕ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮತ್ತು ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಕುಟುಂಬಗಳ ನಡುವಿನ ಕಲಹಕ್ಕೆ ರಾಮನಗರ ಚುನಾವಣಾ ಕಣ ಪ್ರಸಿದ್ಧಿ ಪಡೆದಿದೆ. 1985ರಲ್ಲಿ ಸೋತ ಲಿಂಗಪ್ಪ ಇಲ್ಲಿ 1989ರಲ್ಲಿ ಗೆದ್ದಿದ್ದರು. ಮುಂದೆ 94 ರಲ್ಲಿ ದೇವೇಗೌಡರು ಲಿಂಗಪ್ಪರನ್ನು ಸೋಲಿಸಿದರು. 1996ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ಮತ್ತೆ ಇಲ್ಲಿ ಲಿಂಗಪ್ಪ ಗೆದ್ದಿದ್ದರು; ಅದೂ ಅಂಬರೀಷ್‌ ವಿರುದ್ಧ. 1999ರಲ್ಲಿ ಮತ್ತೆ ಸಿ.ಎಂ. ಲಿಂಗಪ್ಪ ಗೆದ್ದರಾದರೂ ಮುಂದೆ 2004ರಲ್ಲಿ ಕುಮಾರಸ್ವಾಮಿ ಪ್ರವೇಶದಿಂದ ಮುಂದೆ 2008, 2013, 2018ರಲ್ಲಿ ಅವರ ಕಾರುಬಾರು ಇಲ್ಲಿ ನಡೆಯಲಿಲ್ಲ.

ಬಂಡಾಯ ನಂಬಿ ಕೆಟ್ಟ ಬಿಜೆಪಿ

ಕ್ಷೇತ್ರದಲ್ಲಿ ಲಿಂಗಪ್ಪ ಹಳೆಯ ಹುಲಿ. ಈ ಬಾರಿ ಕಾಂಗ್ರೆಸ್‌—ಜೆಡಿಎಸ್‌ ಮೈತ್ರಿಯಾಗಿದ್ದರಿಂದ ಅವರಿಗೆ ಸ್ಪರ್ಧೆಗೆ ಅವಕಾಶ ಇಲ್ಲವಾಯಿತು. ಸಹಜವಾಗಿಯೇ ಅವರು ಬಂಡಾಯದ ಮಾತುಗಳನ್ನು ಆರಂಭಿಸಿದರು. ಇದನ್ನೇ ನಂಬಿಕೊಂಡಿತು, ಶಸ್ತ್ರವಿಲ್ಲದೆ ಯುದ್ಧ ಎದುರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಬಿಜೆಪಿ.

ಅದೇ ಹೊತ್ತಿಗೆ ಆಪದ್ಭಾವರಂತೆ ಕಂಡಿದ್ದರು ಸಿ.ಎಂ. ಲಿಂಗಪ್ಪ ಪುತ್ರ ಎಲ್‌. ಚಂದ್ರಶೇಖರ್‌. ಚುನಾವಣಾ ಸಮಯದಲ್ಲಿ ನಡೆಯುವ ಸಾಮಾನ್ಯ ಬೆಳವಣಿಗೆಯಂತೆ ಅವರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಅವರನ್ನೇ ಅಭ್ಯರ್ಥಿಯನ್ನಾಗಿಯೂ ಘೋಷಿಸಿತು ಬಿಜೆಪಿ. ಯಾವತ್ತೂ ಗೆಲುವಿನ ತವಕದಲ್ಲಿರದಿದ್ದ ಬಿಜೆಪಿ ಈ ಬಾರಿ ಸಿ.ಎಂ. ಲಿಂಗಪ್ಪ ಪುತ್ರನೇ ಕಣಕ್ಕಿಳಿದಿದ್ದಾನೆ ಎಂಬ ಹಿನ್ನೆಲೆಯಲ್ಲಿ ತುಸು ಹೆಚ್ಚು ಉತ್ಸಾಹ ತಾಳಿತ್ತು.

ಎಲ್‌. ಚಂದ್ರಶೇಖರ್ ಅವರನ್ನೇ ಬಿಜೆಪಿ ಪೂರ್ತಿಯಾಗಿ ನಂಬಿತ್ತು. ಅದಕ್ಕೆ ಮಸಾಲೆ ಬೆರೆಸಿದ ಗಾಳಿ ಸುದ್ದಿಗಳೂ ಕಾರಣವಾಗಿದ್ದವು. ‘ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದಿರುವ ಲಿಂಗಪ್ಪ ವಿಚಾರ ಬಿಜೆಪಿಗೆ ಲಾಭ ತರಲಿದೆ’. ‘ರಾಮನಗರದಲ್ಲೇ ಇದ್ದರೆ ಮಗನ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕಾರಣಕ್ಕೆ ಲಿಂಗಪ್ಪರನ್ನು ಬಳ್ಳಾರಿ ಉಸ್ತುವಾರಿಯಾಗಿ ನೇಮಿಸಲಾಗಿದೆ’ ಎಂಬೆಲ್ಲಾ ಸುದ್ದಿಗಳು ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದವು.

ಇದನ್ನೇ ನಂಬಿಕೊಂಡು ತನ್ನ ಕಾಲಾಳುಗಳನ್ನು ಫೀಲ್ಡಿಗೆ ಇಳಿಸಿ, ಭರಪೂರ ಹಣ ಸುರಿದು ಗೆಲುವಿನ ಕನಸಿನಲ್ಲಿತ್ತು ಬಿಜೆಪಿ. ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ತಮ್ಮದು ಅಪ್ಪಟ ಕಾಂಗ್ರೆಸ್ ಕುಟುಂಬ ಎಂಬುದನ್ನು ನಿರೂಪಿಸಿರುವ ಎಲ್‌. ಚಂದ್ರಶೇಖರ್‌ ಚುನಾವಣಾ ಕಣದಿಂದ ಹಿಂದೆ ಸರಿದು ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಈ ಘೋಷಣೆಯಿಂದ ಆಘಾತಕ್ಕೆ ಗುರಿಯಾಗಿದೆ. ಅದಕ್ಕೆ ಉದಾಹರಣೆಯೇ ಬಿಜೆಪಿ ನಾಯಕ ಎಸ್‌.ಸುರೇಶ್‌ ಕುಮಾರ್‌ ಅವರ ಈ ಪೋಸ್ಟ್‌ಗಳು.

ಈ ರಾಜಕೀಯ ಬೆಳವಣಿಗೆ ಬೆನ್ನಿಗೇ ಸಾಲು ಸಾಲು ಪ್ರತಿಕ್ರಿಯೆಗಳು ಹೊರಬರುತ್ತಿವೆ. ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ, ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆಗಳು ಬಿಜೆಪಿಯನ್ನೇ ಗುರಿಯಾಗಿಸಿವೆ. ಇನ್ನೊಂದೆಡೆ ಬಿಜೆಪಿ ನಾಯಕರಾದ ಸದಾನಂದ ಗೌಡ, ಈಶ್ವರಪ್ಪ ಹೇಳಿಕೆಗಳು ಅಭ್ಯರ್ಥಿ ಖರೀದಿ ಆರೋಪವನ್ನು ಹೊರಿಸಿವೆ. ಎಲ್. ಚಂದ್ರಶೇಖರ್ ತಂದೆ ಲಿಂಗಪ್ಪ ಮಾತ್ರ ಮಗನ ನಿರ್ಧಾರ ತಪ್ಪು ಎನ್ನುತ್ತಿದ್ದರಾದರೂ, ಅವರ ಮುಖದ ಮೇಲಿನ ನಗು ತಂತ್ರಗಾರಿಕೆಯಲ್ಲಿ ಗೆದ್ದ ಖುಷಿಯನ್ನು ಬಿಂಬಿಸುತ್ತಿದೆ. ಡಿ. ಕೆ. ಶಿವಕುಮಾರ್ ಹೇಳಿಕೆ ಬಿಜೆಪಿಯ ಸರಕಾರ ರಚನೆ ಪ್ರಯತ್ನವನ್ನು ವ್ಯಂಗ್ಯವಾಡಿದೆ.

ಪರ- ವಿರೋಧದ ಹೇಳಿಕೆಗಳೇನೆ ಇರಲಿ, ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಕಣದಿಂದ ಹಿಂದೆ ಸರಿದಾಗಿದೆ. ರಾಮನಗರದ ಉಪಚುನಾವಣೆಯಲ್ಲಿ ಅಭ್ಯರ್ಥಿಯೇ ಇಲ್ಲದ ಕಾರಣ, ಯುದ್ಧಕ್ಕೆ ಮುನ್ನವೇ ಸೋಲೊಪ್ಪಿಕೊಳ್ಳುವ ಅನಿವಾರ್ಯತೆ ಬಿಜೆಪಿಗೆ ಸೃಷ್ಟಿಯಾಗಿದೆ. ಚುನಾವಣಾ ಚಾಣಕ್ಯ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಬಿಜೆಪಿಗೆ ಇಂತಹದೊಂದು ದುಃಸ್ಥಿತಿ ಬಂದೆರಗಿರುವುದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಬಹಿರಂಗ ಪ್ರಚಾರದ ಕೊನೆಯ ದಿನ ಅಭ್ಯರ್ಥಿಯೊಬ್ಬರು ಹಿಂದೆ ಸರಿಯುವುದರಿಂದ ಚುನಾವಣೆ ಪ್ರಕ್ರಿಯೆಗಳ ಮೇಲೆ ಯಾವುದೇ ಪರಿಣಾಮಗಳು ಬೀರುವುದಿಲ್ಲ. ಎಲ್. ಚಂದ್ರಶೇಖರ್ ಹೆಸರು ಹಾಗೂ ಬಿಜೆಪಿಯ ಕಮಲ ಚಿನ್ಹೆ ಬ್ಯಾಲೆಟ್‌ ಪೇಪರ್‌ ಮೇಲೆ ಯಥಾಪ್ರಕಾರ ಕಾಣಿಸಿಕೊಳ್ಳಲಿದೆ. ಆದರೆ ಅಭ್ಯರ್ಥಿಯೇ ಹಿಂದೆ ಸರಿದ ಮೇಲೆ ಜನ ಆದರೂ ಯಾಕೆ ಮತ ಹಾಕುತ್ತಾರೆ?