samachara
www.samachara.com
ಹಳಸಿದ ಆರ್‌ಬಿಐ, ಕೇಂದ್ರ ಸರಕಾರ ಸಂಬಂಧ: ಕಾರಣ & ಪರಿಣಾಮಗಳ ಸುತ್ತ...
COVER STORY

ಹಳಸಿದ ಆರ್‌ಬಿಐ, ಕೇಂದ್ರ ಸರಕಾರ ಸಂಬಂಧ: ಕಾರಣ & ಪರಿಣಾಮಗಳ ಸುತ್ತ...

ಕೇಂದ್ರ ಮತ್ತು ಆರ್‌ಬಿಐ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಅಂತಿಮ ಹಂತಕ್ಕೆ ಬಂದು ತಲುಪಿದೆ. ಬಿಕ್ಕಟ್ಟಿನಿಂದ ಬಸವಳಿದಂತೆ ಕಾಣುತ್ತಿರುವ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

“ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸದ್ಯ ಕಂಡು ಬರುತ್ತಿರುವ ವಸೂಲಾಗದ ಸಾಲಕ್ಕೆ ಆರ್‌ಬಿಐ ಹೊಣೆಗೇಡಿತನವೇ ಕಾರಣ.” ಹೀಗಂಥ ಸ್ವತಃ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಗಳವಾರ ಟೀಕಿಸಿದ್ದರು. ಈ ಮೂಲಕ ಆರ್‌ಬಿಐ ಮತ್ತು ಸರಕಾರದ ನಡುವಿನ ಸಂಘರ್ಷವನ್ನು ಅವರು ಬಹಿರಂಗವಾಗಿ ತೆರೆದಿಟಿದ್ದರು.

ಪರಿಣಾಮ ಹಲವು ತಿಂಗಳಿನಿಂದ ಕೇಂದ್ರ ಮತ್ತು ಆರ್‌ಬಿಐ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಅಂತಿಮ ಹಂತಕ್ಕೆ ಬಂದು ತಲುಪಿದೆ. ಬಿಕ್ಕಟ್ಟಿನಿಂದ ಬಸವಳಿದಂತೆ ಕಾಣುತ್ತಿರುವ ಆರ್‌ಬಿಐ ಗವರ್ನರ್‌, ಒಂದು ಕಾಲದ ರಿಲಯನ್ಸ್‌ ಸಂಸ್ಥೆಯ ಉನ್ನತ ಅಧಿಕಾರಿ ಊರ್ಜಿತ್‌ ಪಟೇಲ್‌ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ‘ಇಟಿ ನೌ’ ಮತ್ತು ‘ಸಿಎನ್‌ಬಿಸಿ ಟಿವಿ 18’ ಪಟೇಲ್‌ ಸದ್ಯದಲ್ಲೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿ ಮಾಡಿವೆ.

ಹಾಗೆ ನೋಡಿದರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರಕಾರದ ಸಂಬಂಧ ಚೆನ್ನಾಗಿಯೇ ಇತ್ತು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಳಕ್ಕೆ ತಕ್ಕಂತೆ ದೇಶದ ಕೇಂದ್ರ ಬ್ಯಾಂಕ್‌ನ್ನು ಕುಣಿಸುತ್ತಾ ಬಂದಿದ್ದರು. ಖಾಸಗಿ ಸಂಸ್ಥೆಯಿಂದ ಬಂದ ಉನ್ನತ ಅಧಿಕಾರಿಯೊಬ್ಬರನ್ನು ಅವರು ಭಾರತದ ಬ್ಯಾಂಕಿಂಗ್‌ ಕ್ಷೇತ್ರದ ಪ್ರಮುಖ ಹುದ್ದೆಗೆ ತಂದು ಕುಳ್ಳಿರಿಸಿದ್ದರು. ಊರ್ಜಿತ್‌ ಪಟೇಲ್‌ ಬಂದ ನಂತರವೇ ಅನಾಣ್ಯೀಕರಣದಂಥ ವಿವಾದಿತ ನಿರ್ಧಾರ ಹೊರ ಬಿದ್ದಿತ್ತು. ಈ ಸಂದರ್ಭದಲ್ಲಿ ದಿನಕ್ಕೊಂದು, ಗಳಿಗೆಗೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಆರ್‌ಬಿಐ ಭಾರೀ ಟೀಕೆಗೆ ಗುರಿಯಾದಾಗಲೂ ಸರಕಾರ ಮತ್ತು ಪಟೇಲ್‌ ನಡುವಿನ ಸಂಬಂಧ ಹಳಸಿರಲಿಲ್ಲ.

ಆದರೆ ಸಂಬಂಧಗಳಲ್ಲಿ ಏಕತಾನತೆ ಕಷ್ಟ. ಒಂದು ಕಾಲದ ಅಪೂರ್ವ ಸಂಬಂಧ ಹಾಳಾಗಲು ಪ್ರಮುಖ ಕಾರಣ, ಆರ್‌ಬಿಐಗೆ ಮೂಗುದಾರ ಹಾಕಲು ಹೊರಟ ಸರಕಾರ ಮತ್ತು ಅದು ಸೆಕ್ಷನ್‌ 7 ಅಡಿಯಲ್ಲಿ ಕಳುಹಿಸಿದ ಸಲಹೆ ಸೂಚನೆಗಳು ಕಾರಣವಾಗಿವೆ.

ಏನಿದು ಸೆಕ್ಷನ್‌ 7?

ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಆಕ್ಟ್‌ನ ಸೆಕ್ಷನ್‌ 7ರ ಪ್ರಕಾರ, ಕಾಲದಿಂದ ಕಾಲಕ್ಕೆ ಆರ್‌ಬಿಐಗೆ ಸಲಹೆ ಸೂಚನೆ ನೀಡಲು ಸರಕಾರಕ್ಕೆ ಅವಕಾಶವಿದೆ. ಗವರ್ನರ್‌ಗೆ ‘ಸಾರ್ವಜನಿಕರ ಹಿತಾಸಕ್ತಿ’ಯ ಮೇಲೆ ನಿರ್ದೇಶನಗಳನ್ನು ನೀಡಬಹುದಾಗಿದೆ. ಹೀಗೊಂದು ಅವಕಾಶ ಕಾಯಿದೆಯಲ್ಲಿ ಇದೆಯಾದರೂ ಅದನ್ನು ಇಲ್ಲಿಯವರೆಗೆ ಸರಕಾರಗಳು ಬಳಸಿದ್ದು ಕಡಿಮೆ. ಈಗ ಸರಕಾರ ಈ ಸೆಕ್ಷನ್‌ ಅನ್ನೇ ಆಧಾರವಾಗಿಟ್ಟುಕೊಂಡು ಮೇಲಿಂದ ಮೇಲೆ ಸೂಚನೆಗಳನ್ನು, ನಿರ್ದೇಶನಗಳನ್ನು ಆರ್‌ಬಿಐಗೆ ನೀಡುತ್ತಿದೆ.

ಇದಕ್ಕೆ ಆರ್‌ಬಿಐ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರ ಭಾಷಣದಲ್ಲಿ ಈ ಸಂಬಂಧ ಆರ್‌ಬಿಐ ಉಪ ಗವರ್ನರ್‌ ವಿರಲ್‌ ಆಚಾರ್ಯ ಬಹಿರಂಗವಾಗಿಯೇ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೇಂದ್ರ ಬ್ಯಾಂಕ್‌ನ ಸ್ವಾತಂತ್ರ್ಯದಲ್ಲಿ ಮೂಗು ತೂರಿಸುವುದರಿಂದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದ್ದರು.

ಸರಕಾರದ ಸೂಚನೆಗಳೇನು?

ಸರಕಾರ ಈಗ ಯಾಕೆ ಸೂಚನೆಗಳನ್ನು ನೀಡಲು ಮುಂದಾಗಿದ್ದೇಕೆ ಎಂದು ಹುಡುಕಿಕೊಂಡು ಹೊರಟರೆ ಅಲ್ಲಿ ದೇಶದ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಗಳು ಎದುರಾಗುತ್ತದೆ. ಮುಖ್ಯವಾಗಿ ವಸೂಲಾಗದ ಸಾಲಗಳು ಆರ್‌ಬಿಐಗೆ ತಲೆನೋವಾಗಿವೆ.

ಇದನ್ನು ಸರಿಪಡಿಸಲು ತಮಗೆ ಹೆಚ್ಚಿನ ಅಧಿಕಾರ ಬೇಕು ಎಂದು ಊರ್ಜಿತ್‌ ಪಟೇಲ್‌ ಪಟ್ಟು ಹಿಡಿದು ಕುಳಿತಿದ್ದಾರೆ. ಜತೆಗೆ ಸಂಕಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲ ನೀಡಬಾರದು ಎಂದು ಕುಳಿತಿದ್ದಾರೆ.

ಆದರೆ ಈ ಮಾತನ್ನು ಕೇಳಲು ಕೇಂದ್ರ ಸರಕಾರ ಸಿದ್ಧವಿಲ್ಲ. ಬದಲಿಗೆ 2008 ರಿಂದ 2014ರ ಯುಪಿಎ ಅವಧಿಯಲ್ಲಿ ಬೇಕಾಬಿಟ್ಟಿ ಸಾಲ ನೀಡಿದ್ದೇ ಎನ್‌ಪಿಎ ಸಮಸ್ಯೆ ಬೆಳೆಯಲು ಕಾರಣ ಎಂದು ಕೇಂದ್ರ ಹಣಕಾಸು ಸಚಿವರು ಅಬ್ಬರಿಸುತ್ತಿದ್ದಾರೆ. ಜತೆಗೆ ಮುಂದಿನ ವರ್ಷ ಚುನಾವಣೆ ಎದುರಿಸಬೇಕಾಗಿರುವುದರಿಂದ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಭರಪೂರ ಸಾಲಗಳನ್ನು ನೀಡುವಂತೆ ಆರ್‌ಬಿಐ ಮೇಲೆ ಕೇಂದ್ರ ಸರಕಾರ ಒತ್ತಡ ಹೇರುತ್ತಿದೆ.

ಇಷ್ಟಲ್ಲದೆ ಸರಕಾರ ಆರ್‌ಬಿಐಗೆ ಇನ್ನೂ ಹಲವು ಸೂಚನೆಗಳನ್ನು ನೀಡಿದೆ. ಮುಖ್ಯವಾಗಿ ಸಂಕಷ್ಟದಲ್ಲಿರುವ ಸರಕಾರಿ ಪ್ರಾಯೋಜಿತ ಬ್ಯಾಂಕ್‌ಗಳ ನಿರ್ವಹಣೆ ಬಗ್ಗೆ ಊರ್ಜಿತ್‌ ಪಟೇಲ್‌ ಅಭಿಪ್ರಾಯವನ್ನು ಸರಕಾರ ಕೇಳಿದೆ. ಅನುತ್ಪಾದಿತ ಸಾಲದ ಸಮಸ್ಯೆಗೆ ನಿಮ್ಮ ಪರಿಹಾರವೇನು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಎದುರಿಸುತ್ತಿರುವ ನಗದಿನ ಕೊರತೆಗೆ ನಿಮ್ಮ ಅನಿಸಿಕೆಗಳೇನು ಎಂದು ಕೇಂದ್ರ ಸರಕಾರ ಪಟೇಲ್‌ರನ್ನು ಪ್ರಶ್ನೆ ಮಾಡಿದೆ.

ಈ ಬೆಳವಣಿಗೆ ಆರ್‌ಬಿಐನ ತಾಳ್ಮೆಯ ಕಟ್ಟೆಯನ್ನೇ ಒಡೆಯುವಂತೆ ಮಾಡಿದೆ. ಪರಿಣಾಮ ಕೇಂದ್ರ ಬ್ಯಾಂಕ್‌ ಮತ್ತು ಕೇಂದ್ರ ಸರಕಾರದ ನಡುವೆ ಬೆಂಕಿ ಹತ್ತಿಕೊಂಡಿದೆ. ಬೆನ್ನಿಗೆ ಇಬ್ಬರೂ ಪರಸ್ಪರ ಕಚ್ಚಾಟದಲ್ಲಿ ತೊಡಗಿದ್ದಾರೆ. ತೈಲ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ, ಬ್ಯಾಂಕ್‌ ವಲಯದ ಬಿಕ್ಕಟ್ಟಿನಂಥ ಗಂಭೀರ ಸಮಸ್ಯೆಗಳನ್ನು ದೇಶ ಎದುರಿಸುತ್ತಿರುವ ಹೊತ್ತಲ್ಲಿ ಜವಾಬ್ದಾರಿ ಮೆರೆಯಬೇಕಾಗಿದ್ದವರು ಮೈಮರೆತಿದ್ದಾರೆ. ಇದೀಗ ಹೊಣೆಗಾರಿಕೆಯಿಂದಲೇ ನುಣುಚಿಕೊಳ್ಳಲು ರಾಜೀನಾಮೆಗೆ ಊರ್ಜಿತ್‌ ಪಟೇಲ್‌ ಮುಂದಾಗಿರುವ ಸಾಧ್ಯತೆಗಳೂ ಇವೆ; ಒಂದು ವೇಳೆ ಅವರು ರಾಜೀನಾಮೆ ನೀಡಿದರೆ, ಅದನ್ನು ಪಡೆದೆವು ಎಂದು ಕೇಂದ್ರ ಬೀಗಲೂಬಹುದು. ಆದರೆ ಈಗಾಗಲೇ ಆರ್ಥಿಕತೆಯನ್ನು ಸರಕಾರ ತೆಗೆದುಕೊಂಡ ಪಾಗಲ್ ಪನ್ ನಿರ್ಧಾರಗಳಿಂದ ಹೈರಾಣಾಗಿರುವ ಜನರ ಕತೆ ಮುಂದೇನಾಗಲಿದೆ? ಅದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.