samachara
www.samachara.com
ಸಂಭ್ರಮಾಚರಣೆ- ಕರಾಳ ದಿನ: ವೈರುಧ್ಯಗಳ ನಡುವೆಯೇ ಉದ್ಘಾಟನೆಗೊಂಡ ಪಟೇಲ್ ಪ್ರತಿಮೆ
COVER STORY

ಸಂಭ್ರಮಾಚರಣೆ- ಕರಾಳ ದಿನ: ವೈರುಧ್ಯಗಳ ನಡುವೆಯೇ ಉದ್ಘಾಟನೆಗೊಂಡ ಪಟೇಲ್ ಪ್ರತಿಮೆ

ಅತಿ ಎತ್ತರದ ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಿಸಿರುವ ಸರಕಾರ ನೆಲೆ ಕಳೆದುಕೊಂಡಿರುವ ಬುಡಕಟ್ಟು ಜನರನ್ನು ನಿರ್ಲಕ್ಷಿಸಿದೆ.

ಗುಜರಾತ್‌ನ ನರ್ಮದಾ ನದಿಯ ಸರ್ದಾರ್‌ ಸರೋವರದ ಎದುರು ನಿರ್ಮಾಣವಾಗಿರುವ ಜಗತ್ತಿನ ಅತಿ ಎತ್ತರದ ಸರ್ದಾರ್‌ ಪಟೇಲ್‌ ಪ್ರತಿಮೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಕಳಶ ಪೂಜಿಸಿ, ಆರತಿ ಎತ್ತಿ ಉದ್ಘಾಟಿಸಿದ್ದಾರೆ.

ಉದ್ಘಾಟನೆ ಬಳಿಕ ಮಾತನಾಡಿರುವ ಮೋದಿ ಸರ್ದಾರ್ ಪಟೇಲ್ ಅವರ ಸಾಧನೆಗಳನ್ನು ಪಟ್ಟಿ ಮಾಡುತ್ತಾ ಭಾರತದಲ್ಲಿದ್ದ 500ಕ್ಕೂ ಹೆಚ್ಚು ರಾಜ್ಯಗಳ ರಾಜರು ರಾಷ್ಟ್ರದ ಏಕೀಕರಣಕ್ಕೆ ಒಪ್ಪಲು ಸರ್ದಾರ್‌ ಪಟೇಲ್‌ ಅವರೇ ಕಾರಣ ಎಂದಿದ್ದಾರೆ. ಅಲ್ಲದೆ, ಏಕೀಕರಣಕ್ಕಾಗಿ ಸರ್ದಾರ್‌ ಪಟೇಲ್‌ ಅವರ ನಿರ್ಧಾರಕ್ಕೆ ಸಮ್ಮತಿಸಿದ ಅಂದಿನ ರಾಜರ ತ್ಯಾಗವನ್ನೂ ದೇಶದ ಜನತೆ ಮರೆಯಬಾರದು ಎಂದಿದ್ದಾರೆ.

“ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಬೃಹತ್‌ ಪ್ರತಿಮೆ ನಿರ್ಮಾಣದ ಕನಸು ಕಂಡಿದ್ದೆ. ಈಗ ಪ್ರಧಾನಿಯಾಗಿ ನಾನೇ ಈ ಪ್ರತಿಮೆಯನ್ನು ಉದ್ಘಾಟಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಗುಜರಾತ್‌ನ ಜನತೆ ನನ್ನ ಈ ಕಾರ್ಯಕ್ಕಾಗಿ ಸನ್ಮಾನ ಪತ್ರ ನೀಡಿದ್ದಾರೆ. ಜನರ ಈ ಆಶೀರ್ವಾದದಿಂದ ಸಂತೋಷವಾಗಿದೆ” ಎಂದಿದ್ದಾರೆ ಮೋದಿ.

ಸರ್ದಾರ್ ಪಟೇಲ್‌ ಪ್ರತಿಮೆ ಲೋಕಾರ್ಪಣೆಯನ್ನು ದೇಶದೆಲ್ಲೆಡೆ ಸಂಭ್ರಮಿಸಲು ಕರೆ ನೀಡಿರುವ ಬಿಜೆಪಿ ಸರಕಾರ ಸ್ಥಳೀಯ ಬುಡಕಟ್ಟು ಜನರ ಪ್ರತಿರೋಧದ ದನಿಯನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ. ಪ್ರತಿಮೆ ಉದ್ಘಾಟನೆಯ ದಿನ ಪ್ರತಿಭಟನೆಗಳು ನಡೆಯಬಾರದು ಎಂಬ ಕಾರಣಕ್ಕೆ 16ಕ್ಕೂ ಹೆಚ್ಚು ಮಂದಿ ಬುಡಕಟ್ಟು ನಾಯಕರನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ. ಸರ್ದಾರ್‌ ಪ್ರತಿಮೆ ಹಾಗೂ ಸರ್ದಾರ್‌ ಸರೋವರಕ್ಕಾಗಿ ನೆಲೆ ಕಂಡುಕೊಂಡಿರುವ ಸಾವಿರಾರು ಬುಡಕಟ್ಟು ಜನರು ಈ ದಿನವನ್ನು ‘ಕರಾಳ ದಿನ’ ಎಂದು ಕರೆದು ಇಂದು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಾಣಕ್ಕಾಗಿ ಮೋದಿ ಯೋಜಿಸಿದ್ದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ. ಆ ಹೊತ್ತಿಗೇ ಸರ್ದಾರ್‌ ಸರೋವರ ಹಾಗೂ ಸರ್ದಾರ್‌ ಪ್ರತಿಮೆಯ ಸುತ್ತಮುತ್ತಲಿನ ಸುಮಾರು 100 ಕಿ.ಮೀ. ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೆಸರಲ್ಲಿ ಆ ಪ್ರದೇಶಗಳಲ್ಲಿದ್ದ ಸ್ಥಳೀಯ ಬುಡಕಟ್ಟು ಜನರು ಹಾಗೂ ಗ್ರಾಮಗಳ ಜನರನ್ನು ಒಕ್ಕಲೆಬ್ಬಿಸಲಾಗಿದೆ. ಆದರೆ, ನೆಲೆ ಕಳೆದುಕೊಂಡ ಈ ಬುಡಕಟ್ಟು ಜನರಿಗೆ ಸೂಕ್ತ ಪುನರ್‌ ವಸತಿ ಕಲ್ಪಿಸಲು ಸರಕಾರ ಸೋತಿದೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿಬರುತ್ತಿವೆ.

Also read: ಸರ್ದಾರ್ ವಲ್ಲಭಬಾಯಿ ಪಟೇಲ್ ಬೃಹತ್ ಪ್ರತಿಮೆ: ಮೇಡ್ ಇನ್ ಚೈನಾ!

ಉದ್ಘಾಟನೆಯ ದಿನದಂದು ಬುಡಕಟ್ಟು ಜನರು ಪ್ರತಿಭಟನೆ ನಡೆಸಬಹುದೆಂಬ ಕಾರಣಕ್ಕೆ ಪ್ರತಿಮೆ ನಿರ್ಮಾಣವಾಗಿರುವ ಕೆವಾಡಿಯ ಕಾಲೋನಿಯ ಸುತ್ತಮುತ್ತಲಿನ ಹಳ್ಳಿಗಳ ಬುಡಕಟ್ಟು ಮುಖಂಡರನ್ನೂ ಪೊಲೀಸರು ಮಂಗಳವಾರ ಸಂಜೆಯೇ ಬಂಧಿಸಿದ್ದಾರೆ. ಬುಡಕಟ್ಟು ಮುಖಂಡರ ಜತೆಗೆ ಗುಜರಾತ್‌ನ ಮಾನವಹಕ್ಕುಗಳ ಕಾರ್ಯಕರ್ತರಾದ ರೋಹಿತ್‌ ಪ್ರಜಾಪತಿ, ನೀತಾ ವಿದ್ರೋಹಿ, ಮೋದಿತಾ ವಿದ್ರೋಹಿ ಮೊದಲಾದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

“ಸರಕಾರವೇನೋ ಸಾವಿರಾರು ಕೋಟಿ ರೂಪಾಯಿ ಸುರಿದು ಪ್ರತಿಮೆ ನಿರ್ಮಾಣ ಮಾಡಿದೆ. ಆದರೆ, ಈ ಪ್ರತಿಮೆಯಿಂದ ಬುಡಕಟ್ಟು ಜನರಿಗೆ ಏನು ಉಪಯೋಗ? ಬುಡಕಟ್ಟು ಜನರ ಜೀವನ ಕಸಿದುಕೊಂಡು ಪ್ರತಿಮೆ ನಿರ್ಮಾಣ ಮಾಡಿದ್ದರಿಂದ ಸರಕಾರ ಸಾಧಿಸಿದ್ದೇನು? ಬುಡಕಟ್ಟು ಜನರನ್ನು ಸಂಕಷ್ಟಕ್ಕೆ ತಳ್ಳಿ ಅತಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಿ ಏನು ಪ್ರಯೋಜನ? ಬುಡಕಟ್ಟು ಜನರ ಹಕ್ಕುಗಳನ್ನು ಸರಕಾರ ಕಸಿದುಕೊಂಡಿದೆ” ಎಂದು ಬಿಲಿಸ್ತಾನ್‌ ಟೈಗರ್‌ ಸೇನಾದ ಮುಖಂಡ ಚೋಟು ವಸಾವಾ ಆರೋಪಿಸಿದ್ದಾರೆ.

ಸ್ಥಳೀಯ ಗ್ರಾಮಸ್ಥರೂ ಕೂಡ ಈ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. “ಇಲ್ಲಿನ ಅರಣ್ಯ, ನದಿ, ಸರೋವರ, ಜಲಪಾತ, ನೆಲೆ, ಕೃಷಿ ಎಲ್ಲವೂ ಬುಡಕಟ್ಟು ಜನರಿಗೆ ಸೇರಿದ್ದು. ಇದರಿಂದಲೇ ನಾವು ಇಷ್ಟೂ ದಿನ ಬದುಕಿದ್ದೇವೆ. ಆದರೆ, ಈಗ ಇವೆಲ್ಲವನ್ನೂ ನಾಶಪಡಿಸಿ ಸಂಭ್ರಮಕ್ಕೆ ತಯಾರಿ ನಡೆದಿದೆ. ನೆಲೆ ಕಳೆದುಕೊಂಡಿರುವವರಿಗೆ ಸೂಕ್ತ ನೆಲೆ ಒದಗಿಸದೆ ಪ್ರತಿಮೆ ಉದ್ಘಾಟನೆಯನ್ನು ಸಂಭ್ರಮಿಸುತ್ತಿರುವುದು ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಮಾಡುತ್ತಿರುವ ಹಾಗಿದೆ. ಸಾವಿನ ಮನೆಯಲ್ಲಿ ಸಂಭ್ರಮ ಸರಿಯೇ” ಎಂದು ಸರ್ದಾರ್‌ ಪ್ರತಿಮೆ ನಿರ್ಮಾಣವಾಗಿರುವ ಪ್ರದೇಶದ ಸುತ್ತಮುತ್ತಲಿನ 22 ಹಳ್ಳಿಗಳ ಸರಪಂಚರು ಸೋಮವಾರವೇ ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದಾರೆ.

“ಸರ್ದಾರ್‌ ಪ್ರತಿಮೆ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ಖರ್ಚು ಮಾಡಿರುವ ಸರಕಾರ ಇಲ್ಲಿ ನೆಲೆ ಕಳೆದುಕೊಂಡಿರುವ ಬುಡಕಟ್ಟು ಜನರನ್ನ ನಿರ್ಲಕ್ಷ್ಯಿಸಿದೆ. ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮುಂದಿನ 21 ದಿನಗಳ ಕಾಲ ಗುಜರಾತ್‌ನಲ್ಲಿ ಬುಡಕಟ್ಟು ಜನರಿರುವ ಪ್ರದೇಶಗಳನ್ನು ಸಂಪರ್ಕಿಸುವ ರ್ಯಾಲಿಯನ್ನು ಆಯೋಜಿಸಿದ್ದೇವೆ. ಈ ಪ್ರತಿಭಟನಾ ರ್ಯಾಲಿ ಶಾಂತಿಯುತವಾಗಿ ನಡೆಯಲಿದೆ. ನಮ್ಮದು ಅಹಿಂಸಾ ಹೋರಾಟ” ಎಂದು ಬಿಲಿಸ್ತಾನ್‌ ಟೈಗರ್‌ ಸೇನಾದ ಮುಖಂಡರು ಹೇಳಿದ್ದಾರೆ.

ಒಂದು ಕಡೆ ಸರಕಾರ ಸುಮಾರು 3,500 ಕೋಟಿ ರೂಪಾಯಿ ವೆಚ್ಚದಲ್ಲಿ ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಾಣ ಮಾಡಿ ಇತಿಹಾಸ ಸೃಷ್ಟಿಸಿದೆ. ಮತ್ತೊಂದು ಕಡೆಗೆ ಬುಡಕಟ್ಟು ಜನರ ನೆಲೆಯನ್ನೇ ಹೊಸಕಿ ಹಾಕಿ ಅವರ ಬದುಕಿನ ಜತೆಗೆ ಅವರ ಸಾಂಸ್ಕೃತಿಕ ಸ್ಮೃತಿಯನ್ನೂ ಇಲ್ಲವಾಗಿಸುತ್ತಿದೆ. ಮೋದಿ ಆಡಳಿತ ವೈರುಧ್ಯಗಳಿಗೆ ಪಟೇಲ್ ಪ್ರತಿಮೆಯೂ ಸೇರಿಕೊಂಡಿರುವುದು ಮಾತ್ರ ವಿಪರ್ಯಾಸ.