samachara
www.samachara.com
ಉದ್ಯಮಿ- ರಾ ಅಧಿಕಾರಿ-ಸಿಬಿಐ ವಿಶೇಷ ನಿರ್ದೇಶಕ: ಇದು ಬೇಲಿಯೇ ಎದ್ದು ಹೊಲ ಮೇಯಲು ಹೊರಟ ಕತೆ!
COVER STORY

ಉದ್ಯಮಿ- ರಾ ಅಧಿಕಾರಿ-ಸಿಬಿಐ ವಿಶೇಷ ನಿರ್ದೇಶಕ: ಇದು ಬೇಲಿಯೇ ಎದ್ದು ಹೊಲ ಮೇಯಲು ಹೊರಟ ಕತೆ!

ಅಸ್ತಾನಾ ವಿರುದ್ಧ ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್‌ ಬಾಬು ಸನಾ ವಿಚಾರಣೆ ವೇಳೆ ಭಯಾನಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.

‘ಸಿಬಿಐ ವರ್ಸಸ್‌ ಸಿಬಿಐ’ ಪ್ರಕರಣ ಈಗ ಸ್ಪಷ್ಟವಾಗಿ ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ಬಂದು ನಿಂತಿದೆ. ರಜೆ ಮೇಲೆ ತೆರಳಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದಕ್ಕೆ ಪ್ರಬಲ ಸಾಕ್ಷ್ಯಗಳಿವೆ ಎಂದು ಸಿಬಿಐ ಡೆಪ್ಯುಟಿ ಎಸ್‌ಪಿ ಅಜಯ್‌ ಕುಮಾರ್‌ ಬಸ್ಸಿ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮತ್ತು ಇದಕ್ಕೆ ಬೇಕಾದ ಪುರಾವೆಗಳನ್ನು ಅವರು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ತಮ್ಮನ್ನು ಪೋರ್ಟ್‌ಬ್ಲೇರ್‌ಗೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವ ಬಸ್ಸಿ, ಆರೋಪಿಗಳು ಮತ್ತು ಸಿಬಿಐ ನಿರ್ದೇಶಕರ ನಡುವಿನ ದೂರವಾಣಿ ಸಂವಹನಗಳು ಲಭ್ಯವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಪ್ರಮುಖ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ಉದಯ್‌ ಲಲಿತ್‌ ಮತ್ತು ಕೆ. ಎಂ. ಜೋಸೆಫ್‌ ನ್ಯಾಯಪೀಠದ ಮುಂದೆ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ಕಳೆದ ವಾರ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾರನ್ನು ಕೇಂದ್ರ ಸರಕಾರ ರಜೆ ಮೇಲೆ ಕಳುಹಿಸದ ಬೆನ್ನಲ್ಲೇ, ಅಸ್ತಾನಾ ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಬಸ್ಸಿಯನ್ನು ಅಂಡಮಾನ್‌ಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅವರು ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದ್ದು, ಅಸ್ತಾನಾ ವಿರುದ್ಧ ದಾಖಲಾಗಿರುವ ದೂರು ಮತ್ತು ಅದರ ತನಿಖೆಯ ಎಳೆ ಎಳೆಯನ್ನೂ ಬಿಚ್ಚಿಟ್ಟಿದ್ದಾರೆ.

ಅಸ್ತಾನಾ ವಿರುದ್ಧ ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್‌ ಬಾಬು ಸನಾ ವಿಚಾರಣೆ ವೇಳೆ ಭಯಾನಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ. ತೆರಿಗೆ ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಸಮನ್ಸ್‌ನಿಂದ ಪಾರಾಗಲು ಸನಾ ರಾಕೇಶ್‌ ಅಸ್ತಾನಾಗೆ ಲಂಚ ನೀಡಿದ್ದರು. ಇದಕ್ಕೆ ದುಬೈನಲ್ಲಿ ವಾಸವಾಗಿರುವ ‘ರಾ’ ಮಾಜಿ ನಿರ್ದೇಶಕ ದಿನೇಶ್ವರ್‌ ಪ್ರಸಾದ್‌ ಪುತ್ರ ಮನೋಜ್‌ ಪ್ರಸಾದ್ ಮಧ್ಯವರ್ತಿಯಾಗಿದ್ದರು. ಅವರ ಸಹೋದರ ಸೋಮೇಶ್‌ ಪ್ರಸಾದ್‌ ಕೈವಾಡವೂ ಇದರಲ್ಲಿದ್ದು ಇವರ ಜತೆ ಸೇರಿ ಅಸ್ತಾನಾ ಭ್ರಷ್ಟಾಚಾರ ನಡೆಸಿದ್ದಾರೆ ಮತ್ತು ಅಕ್ರಮ ಮಾರ್ಗದಲ್ಲಿ ಲಾಭ ಗಳಿಸಿದ್ದಾರೆ ಎಂಬುದಾಗಿ ಸಾಹು ಬಾಯ್ಬಿಟ್ಟಿದ್ದಾರೆ ಎಬುದಾಗಿ ಬಸ್ಸಿ ತಿಳಿಸಿದ್ದಾರೆ.

ಕೋಟಿ ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಹಣ ಪಾವತಿ ಮಾಡಲಾಗಿದೆ. ಆರೋಪಿಗಳ ಮೊಬೈಲ್‌ನಲ್ಲಿ ದಾಖಲಾದ ಸಂದೇಶಗಳು ರಾಕೇಶ್‌ ಅಸ್ತಾನಾ ಮತ್ತು ಸಿಬಿಐ ಅಧಿಕಾರಿ ದೇವೆಂದರ್‌ ಕುಮಾರ್‌ ಬಗ್ಗೆ ಸ್ಪಷ್ಟವಾದ ಮಾಹಿತಿಗಳನ್ನು ನೀಡುತ್ತಿವೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಮತ್ತು ಪಡೆದುಕೊಂಡ ಘಟನೆಗಳು ಡಿಸೆಂಬರ್‌ 2017 ಮತ್ತು ಅಕ್ಟೊಬರ್‌ 2018ರಲ್ಲಿ ನಡೆದಿವೆ. 2017ರ ಡಿಸೆಂಬರ್‌ನಲ್ಲಿ 2.95 ಕೋಟಿ ರೂಪಾಯಿ ಲಂಚ ಪಡೆದಿದ್ದರೆ, 2018ರ ಅಕ್ಟೋಬರ್‌ನಲ್ಲಿ 36 ಲಕ್ಷ ರೂಪಾಯಿ ಹಣ ಪಡೆಯಲಾಗಿದೆ. ರಾಕೇಶ್‌ ಅಸ್ತಾನಾ ಹೆಸರಿನಲ್ಲಿ ಪ್ರಸಾದ್‌ ಸಹೋದರರು ಐದು ಕಂತುಗಳಲ್ಲಿ ಹಣ ಪಡೆದುಕೊಂಡಿದ್ದಾರೆ ಎಂಬುದಾಗಿ ಬಸ್ಸಿ ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಇನ್ನೋರ್ವ ಪ್ರಭಾವಿ ಭಾಗಿಯಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ‘ರಾ’ ವಿಶೇಷ ಕಾರ್ಯದರ್ಶಿಯಾಗಿರುವ ಸಮಂತ್ ಗೋಯಲ್‌ ಇದರಲ್ಲಿ ಭಾಗಿಯಾಗಿದ್ದಾರೆ ಎಂದವರು ತಿಳಿಸಿದ್ದಾರೆ. ತನಿಖೆ ವೇಳೆ ತಾಂತ್ರಿಕ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಕರೆ ವಿವರದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇವುಗಳ ಪ್ರಕಾರ ಅಕ್ಟೋಬರ್ 16 ರಂದು ಮನೋಜ್‌ ಪ್ರಸಾದ್‌ ಬಂಧನವಾಗುತ್ತಿದ್ದಂತೆ ಸೋಮೇಶ್‌ ಸಮಂತ್ ಗೋಯಲ್‌ಗೆ ಕರೆ ಮಾಡಿದ್ದಾರೆ. ತಕ್ಷಣ ಗೋಯಲ್‌ ರಾಕೇಶ್‌ ಅಸ್ತಾನಾರಿಗೆ ಕರೆ ಮಾಡಿದ್ದಾರೆ ಎಂದವರು ತಿಳಿಸಿದ್ದಾರೆ. ಹೀಗೊಂದು ನಂಟು ಇವರ ನಡುವೆ ಇದೆ ಎಂಬುದನ್ನು ಬಸ್ಸಿ ಸಾಕ್ಷಿ ಸಮೇತ ನ್ಯಾಯಾಲಯದ ಮುಂದಿಟ್ಟಿದ್ದಾರೆ.

ತನಿಖೆ ವೇಳೆ ಸೋಮೇಶ್‌ ಪ್ರಸಾದ್‌ ಫೋನ್‌ ಮೆಲೆ ನಿಗಾ ಇಡಲಾಗಿತ್ತು. ಈ ವೇಳೆ ಸೋಮೇಶ್‌ ಮತ್ತು ಸಮಂತ್ ಗೋಯಲ್‌ ಮತ್ತು ಸೋಮೇಶ್‌ ಮತ್ತು ಅವರ ಅಳಿಯ ಸುನಿಲ್‌ ಮಿತ್ತಲ್‌ ನಡುವೆ ನಡೆದ ಸಂಭಾಷಣೆಗಳು ಪ್ರಕರಣದಲ್ಲಿ ಬಹುದೊಡ್ಡ ಸಾಕ್ಷ್ಯಗಳಾಗಿವೆ ಎಂದು ಬಸ್ಸಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ಆಸ್ತಾನಾ ನಮ್ಮ ಮನುಷ್ಯ. ಮನೋಜ್‌ 3 ರಿಂದ 4 ಬಾರಿ ಅಸ್ತಾನಾರನ್ನು ಭೇಟಿಯಾಗಿದ್ದಾರೆ. ಸಮಂತ್‌ ಭಾಯಿ ಪ್ರಕರಣ ದಾಖಲಾದ ನಂತರ ಅಸ್ತಾನಾರನ್ನು ಭೇಟಿಯಾಗಿದ್ದಾರೆ. ಸಮಂತ್‌ ಭಾಯಿ ಅಸ್ತಾನರಿಗೆ ತುಂಬಾ ಹತ್ತಿರದಲ್ಲಿದ್ದಾರೆ,” ಎಂಬುದಾಗಿ ಸೊಮೇಶ್‌ ಸುನಿಲ್‌ ಮಿತ್ತಲ್‌ಗೆ ತಿಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಸಂದರ್ಭದಲ್ಲಿ ಸೋಮೇಶ್‌ಗೆ ಯಾವುದೇ ಕಾರಣಕ್ಕೂ ಭಾರತಕ್ಕೆ ಬರಬೇಡ ಎಂದು ಸಮಂತ್‌ ಗೋಯಲ್‌ ಸಲಹೆ ನೀಡಿದ್ದರಂತೆ.

ಈ ಎಲ್ಲಾ ದಾಖಲೆಗಳ ನಕಲುಗಳು ಸಿಬಿಐ ಬಳಿಯಲ್ಲಿವೆ. ಆದರೆ ದಾಖಲೆಗಳಿಂದ ಇವು ಕಾಣೆಯಾಗಬಹುದು ಎಂಬ ಬಗ್ಗೆ ಗಂಭೀರ ಅನುಮಾನಗಳಿವೆ. ಅದನ್ನು ತಿರುಚುವ ಮತ್ತು ನಾಶ ಪಡಿಸುವ ಸಾಧ್ಯತೆ ಇದೆ ಎಂದವರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಜತೆಗೆ ಅರ್ಜಿದಾರನ ಸ್ವಾತಂತ್ರ್ಯ ಮತ್ತು ಗೌರವಕ್ಕೆ ಅಪಾಯ ಎದುರಾಗಿದೆ ಎಂದಿದ್ದಾರೆ.

ವಿಚಿತ್ರವೆಂದರೆ ತನಿಖೆ ನಡೆಸಿದವರೇ ಇವತ್ತು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿ ಬಂದಿದೆ. ಪ್ರಕರಣದಲ್ಲಿ ಅವರನ್ನೇ ಈಗ ಹರಕೆಯ ಕುರಿ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕೆ ನನ್ನ ವರ್ಗಾವಣೆಯನ್ನು ರದ್ದುಗೊಳಿಸಬೇಕು, ತಡೆ ಹಿಡಿಯಬೇಕು ಅಥವಾ ಬದಲಾವಣೆ ಮಾಡಬೇಕು ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಜತೆಗೆ ಅರ್ಜಿದಾರರು ಸಂಗ್ರಹಿಸಿದ ಎಲ್ಲಾ ಮಾಹಿತಿಗಳನ್ನು ಸಿಬಿಐ ಇಟ್ಟುಕೊಳ್ಳುವಂತೆ ಕೋರ್ಟ್‌ ನಿರ್ದೇಶನ ನೀಡಬೇಕು. ಮತ್ತು ಈ ಸಂಬಂಧದ ದಾಖಲೆಗಳನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ನೀಡುತ್ತಿದ್ದೇನೆ ಎಂದು ಅವರು ಹೇಳಿದರು. ರಾಕೇಶ್‌ ಅಸ್ತಾನಾ ವಿರುದ್ಧ ಗೌರಾವಾನ್ವಿತ ನ್ಯಾಯಾಲಯದ ಉಸ್ತುವಾರಿ ಮತ್ತು ನಿಯಂತ್ರಣದಲ್ಲಿ ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ನೇಮಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಬಸ್ಸಿ ಅಸ್ತಾನಾ ವಿರುದ್ಧದ ಎಫ್‌ಐಆರ್‌ ಮಾತ್ರವಲ್ಲದೆ 2016ರಲ್ಲಿ ವಡೋದರದಲ್ಲಿ ನಡೆದ ಅವರ ಮಗಳ ಮದುವೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದರು. ಮದುವೆಗೆ ಸ್ಥಳಾವಕಾಶ ನೀಡಿದ ವಿವಿಧ ಹೊಟೇಲ್‌ ಮಾಲಿಕರಿಗೆ ಅವರು ಸಮನ್ಸ್‌ಗಳನ್ನೂ ನೀಡಿದ್ದರು. ಇದರಲ್ಲಿ ಕೇವಲ ನಾಲ್ವರು ಮಾತ್ರ ಉತ್ತರ ನೀಡಿದ್ದಾರೆ. ಈ ಮದುವೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದ ಬಗ್ಗೆ ಅನುಮಾನಗಳಿವೆ.

ಆದರೆ ತನಿಖೆಗೆ ಇಳಿದ ಬಸ್ಸಿ ವಿರುದ್ಧವೇ ಅಸ್ತಾನಾ ಕೇಂದ್ರ ಜಾಗೃತ ಆಯೋಗಕ್ಕೆ ದೂರು ನೀಡಿದ್ದರು. ಅವರ ಕಾರ್ಯದಕ್ಷತೆ ಬಗ್ಗೆ ಅನುಮಾನಗಳಿವೆ ಎಂದು ಹೇಳಿದ್ದ ಅವರು, ನನ್ನ ವೈಯಕ್ತಿಕ ಜೀವನದ ಬಗ್ಗೆ ತನಿಖೆ ನಡೆಸಲು ವಡೋದರಕ್ಕೆ ಅವರನ್ನು ಕಳುಹಿಸಿದ್ದಾರೆ. ಸ್ಟೆರ್ಲಿಂಗ್‌ ಬಯೋಫಟೆಕ್‌ ಮಾಲೀಕರಾದ ಚೇತನ್‌ ಮತ್ತು ನಿತಿನ್‌ ಸಂದೇಸರ ಅವರಿಗೂ ನನಗೂ ಸಂಬಂಧ ಕಟ್ಟುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದಿದ್ದರು.

ಸದ್ಯ ಸುಪ್ರೀಂ ಕೋರ್ಟ್‌ ದೂರುದಾರ ಸತೀಶ್‌ ಬಾಬು ಸನಾಗೆ ಸೂಕ್ತ ರಕ್ಷಣೆ ನೀಡುವಂತೆ ಹೈದರಾಬಾದ್ ಪೊಲೀಸ್‌ ಆಯಕ್ತರಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಹೀಗೆ ಸಿಬಿಐ ವರ್ಸಸ್‌ ಸಿಬಿಐ ಪ್ರಕರಣವು ಸುಪ್ರೀಂ ಕೋರ್ಟ್‌ನ ತಿರುವ ಹಾದಿಯಲ್ಲಿ ಬಂದು ನಿಂತಿದೆ.