samachara
www.samachara.com
ಸರ್ದಾರ್ ವಲ್ಲಭಬಾಯಿ ಪಟೇಲ್ ಬೃಹತ್ ಪ್ರತಿಮೆ: ಮೇಡ್ ಇನ್ ಚೈನಾ!
COVER STORY

ಸರ್ದಾರ್ ವಲ್ಲಭಬಾಯಿ ಪಟೇಲ್ ಬೃಹತ್ ಪ್ರತಿಮೆ: ಮೇಡ್ ಇನ್ ಚೈನಾ!

ಸದ್ಯ ಮಾಧ್ಯಮಗಳಲ್ಲಿ ಪ್ರತಿಮೆ ಲೋಕಾರ್ಪಣೆಯ ಜಾಹೀರಾತು ಜೋರಾಗಿಯೇ ಓಡುತ್ತಿದೆ. ಗಂಟೆಗಟ್ಟಲೆ, ಪುಟಗಟ್ಟಲೆ ಮಾಹಿತಿ ಲಭ್ಯವಾಗುತ್ತಿದೆ. ಆದರೆ, ಇದು ಎಲ್ಲಿಯೂ ಲಭ್ಯವಾಗದ ಪ್ರತಿಮೆ ಬೆಳವಣಿಗೆಯ ಇನ್ನೊಂದು ಆಯಾಮ. 

ಡಿಸೆಂಬರ್‌ 2013. ಆಗಿನ್ನೂ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಕಾಲ. 2014ರ ಲೋಕಸಭೆ ಚುನಾವಣೆಗೆ ಸಿದ್ಧರಾಗುತ್ತಿದ್ದ ಅವರು ಇಡೀ ದೇಶವಾಸಿಗಳನ್ನು ತಲುಪಲು ಬೇಕಾದ ಸರಕುಗಳಿಗೆ ಹುಡುಕಾಟ ನಡೆಸುತ್ತಿದ್ದರು. ಹೀಗೆ ಹುಡುಕಾಡುತ್ತಿದ್ದ ಮೋದಿ ಅವರಿಗೆ ಒಂದು ಉಪಾಯ ಸಿಕ್ಕಿತ್ತು. ಆ ಉಪಾಯದ ಹೆಸರೇ ‘ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌’.

ಇದ್ದಕ್ಕಿದ್ದ ಹಾಗೆ, ಸರ್ದಾರ್‌ ಪಟೇಲ್‌ ಹೆಸರನ್ನು ಜನರ ಮನಸ್ಸಲ್ಲಿ ಬಿತ್ತಲು ಹೊರಟರು ಮೋದಿ. ನರ್ಮಾದಾ ನದಿ ತಟದಲ್ಲಿ ಪಟೇಲರ ಪ್ರತಿಮೆ ನಿರ್ಮಾಣವನ್ನು ಘೋಷಿಸಿದರು. ಅದಕ್ಕೆ ‘ಏಕತಾ ಪ್ರತಿಮೆ’ ಎಂಬ ವಿಶಾಲ ಅರ್ಥದ ಹೆಸರಿಟ್ಟರು. ಬ್ರ್ಯಾಂಡ್‌ ಪ್ರಮೋಷನ್‌ಗೆ ದೇಶದಾದ್ಯಂತ ಏಕತಾ ಓಟಗಳೆಲ್ಲಾ ನಡೆದವು. ರಾಮಮಂದಿರ ಇಟ್ಟಿಗೆ ಸಂಗ್ರಹಿಸಿದವರು, ಪ್ರತಿಮೆ ನಿರ್ಮಾಣಕ್ಕೆ ಕಬ್ಬಿಣ ಸಂಗ್ರಹಿಸಲು ಮನೆಮನೆಗೆ ಹೊರಟು ನಿಂತರು. ಹೀಗೆ ಜನರ ಮನೆ, ಮನೆಗಳಲ್ಲಿ ಪ್ರಚಾರವೊಂದು ಸದ್ದಿಲ್ಲದೆ ನಡೆಯಿತು.

ಇಂತಹ ಹಲವು ಉಪಾಯಗಳ ಒಟ್ಟು ಪರಿಣಾಮ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 2014ರಲ್ಲಿ ದೇಶದ ಪ್ರಧಾನಮಂತ್ರಿಯಾದರು. ಹುದ್ದೆಗೇರಿದರವರ ಸಿಂಹದ ಚಿತ್ರವನ್ನು ಬೆನ್ನಿಗಿಟ್ಟುಕೊಂಡು ‘ಮೇಕ್‌ ಇನ್‌ ಇಂಡಿಯಾ’ ಎಂದರು. ಚೀನಾದ ವಸ್ತುಗಳಿಗೆ ಸಡ್ಡು ಹೊಡೆದು ದೇಶದಲ್ಲಿ ಪ್ರಮುಖ ವಸ್ತುಗಳನ್ನು ಉತ್ಪಾದನೆ ಮಾಡುತ್ತೇವೆ ಎಂದು ಅಬ್ಬರಿಸಿದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಗತ್ತಿನ ನಾನಾ ದೇಶಗಳನ್ನು ಸುತ್ತುತ್ತಾ ಭಾರತದಲ್ಲಿ ಬಂಡವಾಳ ಹೂಡಿ, ಉತ್ಪಾದನೆ ಆರಂಭಿಸಿ ಎಂದು ಉದ್ಯಮಿಗಳನ್ನು ಹುರಿದುಂಬಿಸಿದರು.

ಆದರೆ ಏನಾಯಿತು? ಅವರು ಭಾಷಣ ಬಿಗಿದಿದ್ದೇ ಬಂತು. ಅವರ ಭಾಷಣ ಕೇಳಿ ಭಾರತದಲ್ಲಿ ಎಷ್ಟು ಜನ ಹೂಡಿಕೆ ಮಾಡಿದರೋ, ಬಿಟ್ಟರೋ ಗೊತ್ತಿಲ್ಲ. ಅವರ ಕನಸಿನ ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಾಣದ ಗುತ್ತಿಗೆ ಮಾತ್ರ ಚೀನಾದ ಪಾಲಾಯಿತು. ಎಲ್ಲವನ್ನೂ ತನ್ನ ಕಬಂಧ ಬಾಹುಗಳನ್ನು ಚಾಚಿ ಒಳಕ್ಕೆ ಎಳೆದುಕೊಳ್ಳುವ ಚೀನಾ, ‘ಮೇಕ್‌ ಇನ್‌ ಇಂಡಿಯಾ’ ಎನ್ನುತ್ತಿದ್ದ ಪ್ರಧಾನಿಯ ಮಹತ್ವಾಕಾಂಕ್ಷಿ ಪ್ರತಿಮೆ ನಿರ್ಮಾಣ ಯೋಜನೆಯಲ್ಲಿ ದೊಡ್ದ ಫಲಾನುಭವಿಯಾಯಿತು.

ಮೇಡ್‌ ಇನ್‌ ಚೈನಾ

ಗುಜರಾತ್‌ನಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿ ಅಲ್ಲಿನ ಸರಕಾರ ‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಏಕತಾ ಟ್ರಸ್ಟ್‌’ ಆರಂಭಿಸಿತು. ಟ್ರಸ್ಟ್‌ನ ಅಡಿಯಲ್ಲಿ ಜಗತ್ತಿನಲ್ಲೇ ಅತೀ ಎತ್ತರದ ಅಂದರೆ 182 ಮೀಟರ್‌ ಪ್ರತಿಮೆ ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಆರಂಭದಲ್ಲಿ ಇದಕ್ಕೆ ತಗುಲಲಿರುವ ವೆಚ್ಚ 3,001 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು. (ಸದ್ಯ ಇದು 3,500 ಕೋಟಿ ರೂಪಾಯಿ ದಾಟಿದೆ). ಅದರಂತೆ ಟೆಂಡರ್‌ ಕರೆದಾಗ ಎಲ್‌ & ಟಿ ಕಂಪನಿ 2,989 ಕೋಟಿ ರೂಪಾಯಿಗೆ ಪ್ರತಿಮೆಯನ್ನು ವಿನ್ಯಾಸ ಮಾಡುವ, ನಿರ್ಮಾಣ ಮಾಡುವ, ನಿರ್ವಹಣೆ ಮಾಡುವ ಗುತ್ತಿಗೆಯನ್ನು ಪಡೆದುಕೊಂಡಿತು.

ನಿರ್ಮಾಣ ಹಂತದಲ್ಲಿ ಪಟೇಲ್‌ ಪ್ರತಿಮೆ. 
ನಿರ್ಮಾಣ ಹಂತದಲ್ಲಿ ಪಟೇಲ್‌ ಪ್ರತಿಮೆ. 
/ದಿ ನೇಷನ್

ದೇಶಿಯವಾಗಿ ಪ್ರತಿಮೆ ನಿರ್ಮಾಣವಾಗಲಿದೆ ಎಂದು ಅವತ್ತು ಎಲ್ಲರೂ ಅಂದುಕೊಂಡಿದ್ದರು. ಆದರೆ ಸಬ್‌ ಕಾಂಟ್ರಾಕ್ಟ್‌ ನೀಡಿದ ಎಲ್‌ & ಟಿ ಚೀನಾದ ‘ಜಿಯಾಂಗ್ಸಿ ಟಾಂಗಿಂಗ್‌ ಮೆಡ್‌ ಹ್ಯಾಂಡಿಕ್ರಾಫ್ಟ್‌ ಕಂಪನಿ’ಗೆ ನಿರ್ಮಾಣವನ್ನು ವಹಿಸಿಕೊಟ್ಟಿತು. ಅಹಮದಾಬಾದ್‌ನಿಂದ 6,132 ದೂರದಲ್ಲಿ ಪ್ರತಿಮೆ ನಿರ್ಮಾಣ ಆರಂಭವಾಯಿತು. ‘ಪೀಪಲ್‌ ರಿಪಬ್ಲಿಕ್‌ ಆಫ್‌ ಚೀನಾ’ದ ನೆಲದ ಮೇಲೆ ಉಕ್ಕಿನ ಮನುಷ್ಯನ ಪ್ರತಿಮೆ ನಿರ್ಮಾಣ ಶುರುವಾಯಿತು.

ಈ ಸಂದರ್ಭ ಪ್ರತಿಕ್ರಿಯೆ ನೀಡಿದ್ದ ಸಂಸ್ಥೆಯ ಸಂಸ್ಥಾಪಕರ ಪುತ್ರ ಹ್ಯೂನ್‌ ಚಾಂಗ್‌, “ಈ ಯೋಜನೆ (ಸರ್ದಾರ್‌ ಪಟೇಲ್‌ ಪ್ರತಿಮೆ ನಿರ್ಮಾಣ)ಗೆ ನಮ್ಮನ್ನು ಆಯ್ಕೆ ಮಾಡಲಾಗಿದೆ. ಹಲವು ನಿರ್ಮಾಣ ಸಂಸ್ಥೆಗಳಿಗೆ ಭೇಟಿ ನೀಟಿ, ಮಾತುಕತೆಗಳನ್ನು ನಡೆಸಿದ ನಂತರ ನಮಗೆ ಉಪಗುತ್ತಿಗೆ ಸಿಕ್ಕಿದೆ. ನಮಗೆ ಈ ಹಿಂದೆಯೂ ಇಂಥಹ ಎತ್ತರ ಪ್ರತಿಮೆಗಳನ್ನು ನಿರ್ಮಾಣ ಮಾಡಿದ ಅನುಭವವಿದೆ ,” ಎಂದು ಅವರು ಹೇಳಿದ್ದರು. ಈ ಹಿಂದೆ ಚಾಂಗ್‌ಝೂನಲ್ಲಿರುವ ತಿಯಾನಿಂಗ್‌ ಟೆಂಪಲ್‌ನಲ್ಲಿ 153 ಮೀಟರ್‌ ಎತ್ತರದ ತಾಮ್ರದ ಪ್ರತಿಮೆಯನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು.

ಇದೀಗ ಸಂಸ್ಥೆ ಅದಕ್ಕಿಂತಲೂ ದೊಡ್ಡ ಪ್ರತಿಮೆಯ ನಿರ್ಮಾಣಕ್ಕೆ ಕೈ ಹಾಕಿತ್ತು. ಪೂರ್ವ ಚೀನಾದಲ್ಲಿರುವ ನಾನ್‌ಚಂಗ್‌ ಪ್ರಾಂತ್ಯದ ಜಗತ್ತಿನ ಅತೀ ದೊಡ್ಡ ಉತ್ಪಾದನಾ ಘಟಕದಲ್ಲಿ ಗಿನ್ನೆಸ್‌ ದಾಖಲೆ ಸೇರಲಿರುವ ಪ್ರತಿಮೆ ನಿರ್ಮಾಣ ಹೀಗೆ ಚಾಲ್ತಿ ಪಡೆದುಕೊಂಡಿತ್ತು. ಕಂಪನಿಯ 51,000 ಚದರ ಅಡಿಯ ಬೃಹತ್‌ ವರ್ಕ್‌ಶಾಪ್‌ನಲ್ಲಿ 700 ಕಾರ್ಮಿಕರು ಪ್ರತಿಮೆಯ ನಿರ್ಮಾಣದಲ್ಲಿ ತೊಡಗಿಸಿಕೊಂಡು ಅದನ್ನು ನಿಗದಿತ ಸಮಯದೊಳಕ್ಕೆ ಮುಗಿಸಿಕೊಟ್ಟಿದ್ದಾರೆ.

ಅಮೆರಿಕಾದ ನ್ಯೂಯಾರ್ಕ್‌ ನಗರದಲ್ಲಿರುವ 93 ಮೀಟರ್‌ ಎತ್ತರ ‘ಸ್ಟ್ಯಾಚ್ಯೂ ಆಫ್‌ ಲಿಬರ್ಟಿ’ ಪ್ರತಿಮೆಗಿಂತಲೂ ಎತ್ತರದ ಈ ಪ್ರತಿಮೆಯನ್ನು ಕನಿಷ್ಠ ಅವಧಿಯಲ್ಲಿ ಸಂಸ್ಥೆ ನಿರ್ಮಾಣ ಮಾಡಿಕೊಟ್ಟಿದೆ. ವೈರುದ್ಧವೆಂದರೆ, ಭಾರತವನ್ನು ಕಟ್ಟಿದ ವ್ಯಕ್ತಿಯ ಪ್ರತಿಮೆ ಮೇಲೆ ಮೇಡ್‌ ಇನ್‌ ಚೈನಾ ಮೊಹರು ಇರಲಿದೆ.

ಮೊದಲಿಗೆ ಇಂಥಹದ್ದೊಂದು ಪ್ರತಿಮೆ ನಿರ್ಮಾಣ ಮಾಡುವ ಮೊದಲು ನೊಯ್ಡಾದ ಸ್ಟುಡಿಯೋದಲ್ಲಿ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ತಯಾರಿಸಲಾಗಿತ್ತು. ಪ್ರತಿಮೆಯ ವಿನ್ಯಾಸಕಾರ ರಾಮ್‌ ವಿ ಸುತಾರ್‌ ನೋಯ್ಡಾದಲ್ಲಿ ಕಂಚಿನ ಪ್ರತಿಮೆ ತಯಾರಿಸಿದ್ದರು. ಇದರ ಪ್ರತಿಕೃತಿಯನ್ನೇ ಚೀನಾದಲ್ಲಿ ತಯಾರಿಸಲಾಗಿತ್ತು. ಬಿಡಿಭಾಗಗಳಾಗಿ ನಿರ್ಮಾಣ ಮಾಡಿ ನಂತರ ಭಾರತದಲ್ಲಿ ತಂದು ಅವುಗಳನ್ನು ಜೋಡಿಸಲಾಗಿತ್ತು. ಇದು ಟಿಪಿಕಲ್‌ ಇಂದಿನ ‘ಮೇಕ್‌ ಇನ್‌ ಇಂಡಿಯಾ’ಗೆ ಹಿಡಿದ ಕೈಗನ್ನಡಿಯಂತಿದೆ.

ಎಲ್ಲೆಲ್ಲೂ ವೈರುದ್ಧ

ಇವತ್ತು ನರ್ಮಾದಾ ನದಿ ದಂಡೆಯಲ್ಲಿ ಸರ್ದಾರ್‌ ಸರೋವರ ಅಣೆಕಟ್ಟಿನಿಂದ ಮೂರು ಕಿಲೋಮೀಟರ್‌ ಕೆಳಗೆ ಸಾಧುಬೆಟ್ಟದ ಮೇಲೆ ಪ್ರತಿಮೆ ತಲೆ ಎತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣ ಸುರಿಯಲಾಗಿದೆ. ಆದರೆ ಇದೇ ಪ್ರತಿಮೆ ನಿರ್ಮಾಣಕ್ಕಾಗಿ ಒಂದಷ್ಟು ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲಾಗಿತ್ತು. ಇವರಿಗೆ ಪರಿಹಾರ ಧನ ಸಿಕ್ಕಿರಲಿಲ್ಲ ಎಂದು ಔಟ್‌ಲುಕ್‌ 2015ರ ಆರಂಭದಲ್ಲಿ ತನಿಖಾ ವರದಿ ಹೊರ ತಂದಿತ್ತು. ಪ್ರತಿಮೆ ನಿರ್ಮಾಣದಿಂದ ಪರಿಸರದ ಮೇಲೆ ಹಾನಿಯಾಗಲಿದೆ ಎಂದು ಒಂದಷ್ಟು ಜನರು ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ದೂರು ನೀಡಿದ್ದರು. ಅವುಗಳನ್ನು ಮುಂದೆ ತಾಂತ್ರಿಕ ಕಾರಣಗಳಿಗೆ ವಜಾಗೊಳಿಸಲಾಗಿತ್ತು.

ಇನ್ನು ಪ್ರತಿಮೆ ನಿರ್ಮಾಣಕ್ಕಾಗಿ 1.67 ಲಕ್ಷ ಹಳ್ಳಿಗಳಿಂದ ಕಬ್ಬಿಣವನ್ನು ಸಂಗ್ರಹಿಸಲಾಗಿತ್ತು. ಕಬ್ಬಿಣವನ್ನು ದಾನ ನೀಡಿ ಎಂದು ಪ್ರಧಾನಿಯೂ ಕರೆ ನೀಡಿದ್ದರು. ಕೇಳಲು ಈ ವಾದ ಸೊಗಸಾಗಿತ್ತು. ಲೋಹ ಪುರುಷನ ಪ್ರತಿಮೆಗೆ ಕಬ್ಬಿಣ ದಾನ ಪಡೆದು ಜನರನ್ನು ಭಾವನಾತ್ಮಕವಾಗಿ ತಲುಪಲು ಇದು ಸಹಾಯಕವಾಗಿತ್ತು. ಆದರೆ ಮುಂದೆ ಈ ಕಬ್ಬಿಣದ ಗುಣಮಟ್ಟ ನಿರ್ಮಾಣಕ್ಕೆ ಸಾಲುತ್ತಿಲ್ಲ ಎಂದು ತಿಳಿದು ಬಂದಿತ್ತು. ಅದನ್ನು ಸರಕಾರ ಎಲ್‌ & ಟಿಗೆ ಹಸ್ತಾಂತರಿಸಿತ್ತು. “ಕಂಪನಿ ಅದನ್ನು ಅಗತ್ಯ ಬಿದ್ದಲ್ಲಿ ಬಳಸಿಕೊಳ್ಳುತ್ತೇವೆ ಎಂದು ಹೇಳಿತ್ತು,” ಎನ್ನುತ್ತಾರೆ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಕೆ. ಶ್ರೀನಿವಾಸ್‌.

ಹೀಗೆ ಮೋದಿ ಕನಸಿನ ಪ್ರತಿಮೆ ನಿರ್ಮಾಣವಾಗಿದೆ. ಒಂದು ಕಡೆ ತಮ್ಮ ಮನೆ ಮಠ ಕಳೆದುಕೊಂಡ ಬುಡಕಟ್ಟು ಜನ, ಸುರಿದ 3,500 ಕೋಟಿ ಹಣದ ನೆರಳಿನಲ್ಲಿ ದೇಶ ಪ್ರತಿಮೆಯನ್ನು ಸಂಭ್ರಮಿಸಬೇಕು ಎಂಬ ವಾತಾವರಣ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ.