samachara
www.samachara.com
ವೆನ್‌ಲಾಕ್ ಆಸ್ಪತ್ರೆಯ ವಾರ್ಡ್‌ ನಂಬರ್ 29ರಲ್ಲಿ ಚೈತ್ರಾ ಕುಂದಾಪುರ: ಮುಂದುವರಿದ ನ್ಯಾಯಾಂಗ ಬಂಧನ
COVER STORY

ವೆನ್‌ಲಾಕ್ ಆಸ್ಪತ್ರೆಯ ವಾರ್ಡ್‌ ನಂಬರ್ 29ರಲ್ಲಿ ಚೈತ್ರಾ ಕುಂದಾಪುರ: ಮುಂದುವರಿದ ನ್ಯಾಯಾಂಗ ಬಂಧನ

ಮಂಗಳೂರಿನ ವೆನ್‌ಲಾಕ್‌ ಜಿಲ್ಲಾಸ್ಪತ್ರೆಯ ವಾರ್ಡ್‌ 29ರ ಕೊನೆಯ ಬೆಡ್‌ನಲ್ಲಿ ಕಾಳಿಕಾ ಚಾಯೆ, ಹಿಂದೂ ಫೈರ್‌ ಬ್ರಾಂಡ್‌ ಅಂತೆಲ್ಲಾ ಕರೆಸಿಕೊಂಡಿದ್ದ ಚೈತ್ರಾ ನಾಯಕ್‌ಗೆ ಚಿಕಿತ್ಸೆ ಹೆಸರಿನಲ್ಲಿ ವಿಶ್ರಾಂತಿ ನೀಡಲಾಗಿದೆ.

ಕುಕ್ಕೆ ಸುಬ್ರಮಣ್ಯ ವಿವಾದದಲ್ಲಿ ಅಖಾಡಕ್ಕಿಳಿಯಲು ಹೋಗಿ ಆರು ದಿನಗಳ ಹಿಂದೆ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ ನ್ಯಾಯಾಂಗ ಬಂಧನ ಮುಂದುವರಿದಿದೆ. ಮಂಗಳೂರಿನ ವೆನ್‌ಲಾಕ್‌ ಜಿಲ್ಲಾಸ್ಪತ್ರೆಯ ವಾರ್ಡ್‌ 29ರ ಕೊನೆಯ ಬೆಡ್‌ನಲ್ಲಿ ಕಾಳಿಕಾ ಚಾಯೆ, ಹಿಂದೂ ಫೈರ್‌ ಬ್ರಾಂಡ್‌ ಅಂತೆಲ್ಲಾ ಕರೆಸಿಕೊಂಡಿದ್ದ ಚೈತ್ರಾ ನಾಯಕ್‌ಗೆ ಚಿಕಿತ್ಸೆ ಹೆಸರಿನಲ್ಲಿ ವಿಶ್ರಾಂತಿ ನೀಡಲಾಗಿದೆ. ಹೊರಗೆ, ಆಕೆ ಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣ ಕನ್ನಡದ ಹಿಂದೂ ಸಂಘಟನೆಯ ಮುಖಂಡರು ಹರಿಹಾಯುತ್ತಿದ್ದಾರೆ. ದಿನಕ್ಕೊಂದು ಮುದ್ರಿತ ದೂರವಾಣಿ ಕರೆಗಳು ಹೊರಬೀಳುತ್ತಿವೆ. ಇವುಗಳಲ್ಲಿ ಚೈತ್ರಾ ಬಿಜೆಪಿ ನಾಯಕರ ವಿರುದ್ಧವೇ ಹರಿಹಾಯ್ದಿರುವ ಸಂಭಾಷಣೆಗಳು ಜನರ ಗಮನ ಸೆಳೆಯುತ್ತಿವೆ.

ಒಟ್ಟಾರೆ ಪ್ರಕರಣದಲ್ಲಿ ಇನ್ನಷ್ಟು ಆಳಕ್ಕಿಳಿದರೆ ದಕ್ಷಿಣ ಕನ್ನಡದಲ್ಲಿ ಹಿಂದುತ್ವ ಪ್ರಚಾರಕ್ಕೆ ಹುಟ್ಟಿಕೊಂಡ ಸಂಘಟನೆಗಳು, ನಾಯಕರು ಹಾಗೂ ಅವರುಗಳ ನಡುವೆ ತಾರಕ್ಕೇರಿರುವ ಕಿತ್ತಾಟ ಕಾಣಿಸುತ್ತದೆ. ಒಬ್ಬರನ್ನೊಬ್ಬರು ಹಣಿಯುವ ಪ್ರಕ್ರಿಯೆ ವ್ಯವಸ್ಥಿತ ಸ್ವರೂಪ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗುತ್ತದೆ. ಜತೆಗೆ, ಸ್ಥಳೀಯ ಪೊಲೀಸರು ಎಸ್‌ಪಿ ರವಿಕಾಂತೇಗೌಡ ನೇತೃತ್ವದಲ್ಲಿ ಹಿಂದುತ್ವ ಪ್ರಚಾರದ ಮುಂಚೂಣಿ ನಾಯಕರಿಗೆ ಕಾನೂನಿನ ಅರಿವು ಮೂಡಿಲು ಹೊರಟಿರುವುದು ಗೋಚರವಾಗುತ್ತದೆ.

ಪೂರ್ವಯೋಜಿತ ಕೃತ್ಯ:

ಚೈತ್ರಾ ಕುಂದಾಪುರ ಬಂಧನಕ್ಕೆ ಒಳಗಾಗಲು ಪ್ರಮುಖ ಕಾರಣ ಕುಕ್ಕೆ ಸುಬ್ರಮಣ್ಯದಲ್ಲಿ ಕಳೆದ ವಾರ ನಡೆದ ಸಾರ್ವಜನಿಕ ಕಿತ್ತಾಟ ಪೂರ್ಜನಿಯೋಜಿತ ಎಂಬುದು. ಇದಕ್ಕೆ ಪೂರಕ ಎಂಬಂತೆ ಚೈತ್ರಾ ಕುಂದಾಪುರ ಗಲಾಟೆ ನಡೆದ ಸ್ಥಳಕ್ಕೆ ಹೋಗುವ ಮುಂಚೆ ಆಶಿತ್ ಪಂಜ ಎಂಬ ಮತ್ತೊಬ್ಬ ಹಿಂದುತ್ವ ಸಂಘಟನೆಯ ಮುಖಂಡನ ಜತೆ ನಡೆಸಿದ ದೂರವಾಣಿ ಸಂಭಾಷಣೆ ಈಗಾಗಲೇ ವೈರಲ್ ಆಗಿದೆ.

Also read: ‘ನೀನ್ ಯಾವನೋ ನಾಯಿ’ (387 ಸಲ), ಬೇವರ್ಸಿ (107 ಸಲ): ಇತಿ ಚೈತ್ರಾ ಕುಂದಾಪುರ!

ಈ ನಡುವೆ, ಚೈತ್ರಾ ವಿರುದ್ಧ ದೂರು ನೀಡಿದವರ ಹಿನ್ನೆಲೆಯ ಬಗ್ಗೆಯೂ ಕೆಲವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ದೊಂಬಿ ಗಲಾಟೆ, ರೌಡಿಸಂ ಕೃತ್ಯದಲ್ಲಿ ಪಾಲ್ಗೊಂಡವರು ನೀಡಿದ ದೂರನ್ನು ಪೊಲೀಸರು ಸ್ವೀಕರಿಸಿದ್ದಾರೆ. ಅವರ ವಿರುದ್ಧವೂ ದೂರು ನೀಡಲಾಗಿದೆ. ಆದರೆ ಅವರನ್ನು ಬಂಧಿಸದ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಚೈತ್ರಾ ಕಡೆಯವರು ಆರೋಪಿಸುತ್ತಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ಮಾಧ್ಯಮ ಪ್ರತಿಯೊಬ್ಬರ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಯೊಬ್ಬರು ಪ್ರಕರಣದ ಇತರೆ ಆರೋಪಿಗಳ ವಿಚಾರದಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. “ಚೈತ್ರಾ ಕುಂದಾಪುರ ಘಟನಾ ಸ್ಥಳಕ್ಕೆ ಪೂರ್ವನಿಯೋಜಿತರಾಗಿಯೇ ಹೋಗಿದ್ದರು. ಹೀಗಾಗಿ ಅವರನ್ನು ಬಂಧಿಸಿದ್ದೇವೆ. ಆಕೆಗೆ ಆಪ್ತ ಸಮಾಲೋಚನೆಯ ಅಗತ್ಯ ಇದೆ. ಕನಿಷ್ಟ ಈಗಲಾದರೂ ಆಕೆ ತನ್ನ ನಡೆಗಳ ಬಗ್ಗೆ ಆಲೋಚನೆ ಮಾಡಬೇಕು,’’ ಎಂದವರು ವಿವರಿಸಿದ್ದಾರೆ.

ಒಂದಷ್ಟು ಬೆಳವಣಿಗಗಳು:

ಚೈತ್ರಾ ಜೈಲು ಪಾಲಾಗುತ್ತಿದ್ದಂತೆ ಆಕೆಯ ಪರವಾಗಿ ಹಿಂದುತ್ವ ಸಂಘಟನೆಗಳು, ಬಿಜೆಪಿ ನಾಯಕರು ಧ್ವನಿ ಎತ್ತಲಿಲ್ಲ ಎಂಬ ಕೊರಗು ಸ್ವತಃ ಆಕೆಯಲ್ಲಿದೆ. ಹಿಂದೆ, ಚುನಾವಣೆ ಸಮಯದಲ್ಲಿ ಇಕ್ಬಾಲ್ ಅನ್ಸಾರಿ ವಿರುದ್ಧ ಗಂಗಾವತಿಯಲ್ಲಿ ಚೈತ್ರಾ ಭಾಷಣ ಮಾಡಿದ್ದಕ್ಕೆ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ವಾರೆಂಟ್ ಕೂಡ ಜಾರಿಯಾಗಿದೆ. ಆದರೆ ಬಿಜೆಪಿ ನಾಯಕರು ಜಾಮೀನಿಗೆ ಪ್ರಯತ್ನ ಮಾಡಿಲ್ಲ ಎಂದು ಆಕೆ ಬಂಧನಕ್ಕೂ ಮುಂಚೆ ಆಕ್ರೋಶ ತೋಡಿಕೊಂಡಿದ್ದಳು.

ಚೈತ್ರಾ ಕುಂದಾಪುರ ವಿರುದ್ಧ ಕುಕ್ಕೆ ಸುಬ್ರಮಣ್ಯದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನಿಗಾಗಿ ಮಠದವರು ಓಡಾಡುತ್ತಿದ್ದಾರೆ ಎಂದು ಆಕೆಯ ಆಪ್ತ ಮೂಲಗಳು ಹೇಳುತ್ತವೆ. ಪೋಸ್ಟ್‌ ಕಾರ್ಡ್‌ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗಡೆ ಕೂಡ ಆಕೆಯನ್ನು ಭೇಟಿಯಾಗಿ ಊಟ ಕೊಟ್ಟು ಬಂದಿದ್ದಾರೆ ಅವು ತಿಳಿಸುತ್ತವೆ. “ಇದು ಹಿಂದುತ್ವ ನಾಯಕರ ನಡುವಿನ ಕಿತ್ತಾಟ. ಹೀಗೆ ಧರ್ಮದೊಳಗೆ ಹೊಡೆದಾಡಿಕೊಳ್ಳುವುದು ಒಳ್ಳೆಯದಲ್ಲ. ಇದನ್ನು ಮಠಕ್ಕೆ ಬಂದರೆ ಇಬ್ಬರನ್ನೂ ಕೂರಿಸಿ ಸಮಾಧಾನ ಮಾಡಲಾಗುವುದು,’’ ಎಂದು ‘ಸಮಾಚಾರ’ಕ್ಕೆ ಋಷಿ ಕುಮಾರ ಸ್ವಾಮಿ ತಿಳಿಸಿದರು.

ಕೆಲವೇ ದಿನಗಳ ಹಿಂದೆ ತನ್ನ ಉಗ್ರ ಭಾಷಣಗಳ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಚೈತ್ರಾ ಕುಂದಾಪುರ ಆರು ದಿನಗಳ ನಂತರವೂ ನ್ಯಾಯಾಂಗ ಬಂಧನದಿಂದ ಹೊರಬರಲು ಸಾಧ್ಯವಾಗಿಲ್ಲ. ಜತೆಗೆ, ದಕ್ಷಿಣ ಕನ್ನಡದ ಹಿಂದುತ್ವ ಸಂಘಟನೆ ನಾಯಕರೇ ಆಕೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಯಾವ ಸಾಮಾಜಿಕ ಜಾಲತಾಣಗಳನ್ನು ಆಕೆ ಬಳಸಿಕೊಂಡು ತಮ್ಮ ವರ್ಚಸ್ಸು ಬೆಳೆಸಿಕೊಳ್ಳಲು ಪ್ರಯತ್ನ ಮಾಡಿದ್ದಳೋ, ಅದೇ ವೇದಿಕೆಯಲ್ಲಿ ಆಕೆಯ ವಿರುದ್ಧ ಅಭಿಯಾನವೊಂದು ಆರಂಭವಾಗಿದೆ. ಮೂಲಗಳ ಪ್ರಕಾರ, ಮುಂದಿನ ದಿನಗಳಲ್ಲಿ ಆಕೆಯ ಇನ್ನಷ್ಟು ಸಂಭಾಷಣೆಗಳು ಹೊರಬೀಳಲಿವೆ. ಒಟ್ಟಾರೆ, ಫೈರ್‌ ಬ್ರಾಂಡ್‌ ಚೈತ್ರಾ ತನ್ನ ಬದುಕಿನ ಅಮೂಲ್ಯ ಪಾಠಗಳನ್ನು ಈಗ ವೆನ್‌ಲಾಕ್ ಆಸ್ಪತ್ರೆಯ ಸಾಮಾನ್ಯ ವಾರ್ಡ್‌ನಲ್ಲಿ ಕಲಿಯಬೇಕಾಗಿ ಬಂದಿದೆ; ಅದೂ ವಿಚಾರಣಾಧೀನ ಕೈದಿಯಾಗಿ.

Update: ವರದಿಯಲ್ಲಿ ವಾರ್ಡ್ ನಂಬರ್ 29ರ ಬದಲಿಗೆ 39ಎಂದು ತಪ್ಪಾಗಿ ಪ್ರಕಟಿಸಲಾಗಿತ್ತು.