samachara
www.samachara.com
ಅಧ್ಯಕ್ಷರ ಹತ್ಯೆ ಯತ್ನ, ಪ್ರಧಾನಿ ವಜಾ ಮತ್ತು ಅರಾಜಕ ಶ್ರೀಲಂಕಾದಲ್ಲಿ ಮಹಿಂದಾ ರಾಜಪಕ್ಷೆ ನೂತನ ಪಿಎಂ!
COVER STORY

ಅಧ್ಯಕ್ಷರ ಹತ್ಯೆ ಯತ್ನ, ಪ್ರಧಾನಿ ವಜಾ ಮತ್ತು ಅರಾಜಕ ಶ್ರೀಲಂಕಾದಲ್ಲಿ ಮಹಿಂದಾ ರಾಜಪಕ್ಷೆ ನೂತನ ಪಿಎಂ!

2015ರ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸೆಯನ್ನು ಸೋಲಿಸಿದ್ದ ಸಿರಿಸೇನಾ ಈಗ ಅವರನ್ನೇ ಮತ್ತೆ ಪ್ರಧಾನಿ ಸ್ಥಾನಕ್ಕೆ ಕರೆ ತಂದಿದ್ದಾರೆ.

ನಾಗರಿಕ ಯುದ್ಧದ ಅರಾಜಕತೆಯಿಂದ ಮೇಲೆದ್ದು ಬಂದಿದ್ದ ರಾಷ್ಟ್ರ ಶ್ರೀಲಂಕಾದಲ್ಲಿ ಮತ್ತೆ ಅಂಥದ್ದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಅಧ್ಯಕ್ಷ, ಪ್ರಧಾನಿ ಮತ್ತು ಜನರ ನಡುವಿನ ಕಚ್ಚಾಟ ದಿನೇ ದಿನೇ ಬಿಗಡಾಯಿಸುತ್ತಿದ್ದು, ಭಾರತದ ನೆರೆಯ ರಾಷ್ಟ್ರದಲ್ಲಿ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಇಂದು ಅಚ್ಚರಿಯ ರೀತಿಯಲ್ಲಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ನೂತನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಭಾನುವಾರ ಸಂಜೆ ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಕಿತ್ತೊಗೆದಿದ್ದರು. ಆದರೆ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ಒಪ್ಪಿರಲಿಲ್ಲ. ಬೆನ್ನಿಗೆ ದೇಶದಲ್ಲಿ ಪ್ರತಿಭಟನೆ ಆರಂಭಗೊಂಡಿತ್ತು. ಇದೀಗ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ನಿರ್ಗಮಿತ ಪ್ರಧಾನಿಯ ಸಂಪುಟದ ಸಚಿವರೊಬ್ಬರ ಅಂಗರಕ್ಷಕರ ಗುಂಡಿಗೆ ಪ್ರತಿಭಟನಾಕಾರನೊಬ್ಬ ಸಾವಿಗೀಡಾಗಿ, ಇಬ್ಬರು ಗಾಯಗೊಂಡಿದ್ದಾರೆ.

ಭಾನುವಾರ ಭಾಷಣ:

ಭಾನುವಾರ ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಭಾಷಣದಲ್ಲಿ, ‘ತಪ್ಪು ಆರ್ಥಿಕ ನಿರ್ವಹಣೆಗಾಗಿ ಪ್ರಧಾನ ಮಂತ್ರಿಯನ್ನು ವಜಾ ಮಾಡುತ್ತಿರುವುದಾಗಿ’ ಘೋಷಿಸಿದ್ದರು. ಜತೆಗೆ ತಮ್ಮ ಮತ್ತು ಮಾಜಿ ರಕ್ಷಣಾ ಕಾರ್ಯದರ್ಶಿ ಮೇಲೆ ಹತ್ಯಾಯತ್ನ ನಡೆಸಿದ ಆರೋಪ ಹೊರಿಸುತ್ತಿರುವ ಸಚಿವರನ್ನೂ ಅವರು ವಜಾಗೊಳಿಸಿದರು.

ವಜಾಗೊಂಡಿದ್ದರೂ ಪೆಟ್ರೋಲಿಯಂ ಸಚಿವ ಅರ್ಜುನ್ ರಣತುಂಗಾ ‘ಸೆಯ್ಲಿನ್‌ ಪೆಟ್ರೋಲಿಯಂ ಕಾರ್ಪೊರೇಷನ್‌’ನಲ್ಲಿರುವ ಕಚೇರಿ ಪ್ರವೇಶಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ದಾರಿಯಲ್ಲಿ ಸಿರಿಸೇನಾ ಬೆಂಬಲಿಗರು ಅವರನ್ನು ಕಚೇರಿ ಪ್ರವೇಶಿಸದಂತೆ ತಡೆದರು. ಈ ವೇಳೆ ರಣತುಂಗಾ ಅಂಗರಕ್ಷಕರು ಅವರತ್ತ ಗುಂಡು ಹಾರಿಸಿದ್ದಾರೆ.

ಘಟನೆಯಲ್ಲಿ 34 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ ಅಂಗರಕ್ಷಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಣತುಂಗಾ, ‘ಗುಂಪಿನಲ್ಲಿದ್ದವರು ನನ್ನ ಹತ್ಯೆಗೆ ಮುಂದಾಗಿದ್ದರಿಂದ ಗುಂಡು ಹಾರಿಸಬೇಕಾಯಿತು’ ಎಂದಿದ್ದಾರೆ.

ರಾಜಪಕ್ಷೆ ಪುನರಾಗಮನ:

ದೇಶದ ಪ್ರಧಾನಿ ಹುದ್ದೆಗೆ ರಣಿಲ್‌ ವಿಕ್ರಮಸಿಂಘೆ ಬದಲು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಷೆಯವರನ್ನು ಕರೆತರಲು ಸಿರಿಸೇನಾ ಶುಕ್ರವಾರ ನಿರ್ಧರಿಸಿದ್ದರು. ಅಂದೇ ಅವರಿಗೆ ಪ್ರಮಾಣ ವಚನವನ್ನೂ ಬೋಧಿಸಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಹಿಂದಾ ರಾಜಪಕ್ಷೆ ಆಗಮನದ ನಿರ್ಧಾರದ ಬೆನ್ನಲ್ಲೇ ಪ್ರತಿಭಟನೆ ಹುಟ್ಟಿಕೊಂಡಿತ್ತು. ಆದರೆ ರಾಜಪಕ್ಸೆ ಬೆಂಬಲಿಗರು ಮಾತ್ರ ವಿಕ್ರಮಸಿಂಘೆ ಕಚೇರಿ ತೊರೆಯಬೇಕು ಎಂದು ಭಾನುವಾರಕ್ಕೆ ಅಂತಿಮ ಗಡುವು ನೀಡಿದ್ದರು.

ಶುಕ್ರವಾರ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಮಹಿಂದಾ ರಾಜಪಕ್ಸೆ
ಶುಕ್ರವಾರ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಮಹಿಂದಾ ರಾಜಪಕ್ಸೆ
/ರಾಯ್ಟರ್ಸ್‌

ಇದಕ್ಕೆ ಜಗ್ಗದ ವಿಕ್ರಮಸಿಂಘೆ ‘ಸಿರಿಸೇನಾ ನಿರ್ಧಾರ ಸಂವಿಧಾನ ವಿರೋಧಿ’ ಎಂಬುದಾಗಿ ಜರೆದಿದ್ದರು. ಮಾತ್ರವಲ್ಲದೇ ತಾವು ವಾಸವಾಗಿದ್ದ ‘ಟೆಂಪಲ್‌ ಟ್ರೀ’ ಗೃಹ ಕಚೇರಿಯನ್ನು ತೊರೆಯಲು ಅವರು ನಿರಾಕರಿಸಿದ್ದರು. ಬದಲಿಗೆ ತಮ್ಮ ಬೆಂಬಲಿಗರ ಸಭೆಯನ್ನು ಅವರು ಇಲ್ಲಿ ಹಮ್ಮಿಕೊಂಡಿದ್ದರು. ಅವರಿಗೆ ಬಂಬಲ ಸೂಚಿಸಿ ನೂರಾರು ಕಾರ್ಯಕರ್ತರು ಅವರ ಗೃಹನಿವಾಸದ ಸುತ್ತಲೂ ನೆರೆದಿದ್ದಾರೆ. ಧಾರ್ಮಿಕ ನಾಯಕರ ಬೆಂಬಲವೂ ಅವರಿಗೆ ವ್ಯಕ್ತವಾಗಿದ್ದು ಬೌದ್ಧ ಧರ್ಮಗುರುಗಳು ಅವರನ್ನು ಬೆಂಬಲಿಸಿದ್ದಾರೆ.

ಹತ್ಯೆ ಸಂಚು ಮತ್ತು ಪ್ರಧಾನಿ ವಜಾ:

ಪ್ರಧಾನಿ ವಿಕ್ರಮಸಿಂಘೆ ವಜಾ ಮಾಡಲು ತಮ್ಮ ಹತ್ಯೆಯ ಸಂಚು ಕಾರಣ ಎಂದು ಸಿರಿಸೇನಾ ಪ್ರತಿಪಾದಿಸಿದ್ದಾರೆ. ಅವರ ಹತ್ಯೆಗೆ ಭಾರತದ ಗುಪ್ತಚರ ಇಲಾಖೆ ‘ರಾ’ ಖೆಡ್ಡಾ ತೋಡಿತ್ತು ಎಂಬುದು ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು. ಇದಕ್ಕೆ ಕುಮ್ಮಕ್ಕು ನೀಡಿದವರು ಇದೇ ವಿಕ್ರಮಸಿಂಘೆ ಮತ್ತು ಸಚಿವರೊಬ್ಬರು ಎಂಬುದಾಗಿ ಸಿರಿಸೇನಾ ನಂಬಿದ್ದಾರೆ. ಅವರು ಮುಂದೆ ಇದರಲ್ಲಿ ‘ರಾ’ ಪಾತ್ರವಿಲ್ಲ ಎಂದು ವಿವರಣೆ ನೀಡಿದರಾದರೂ ಪ್ರಕರಣವನ್ನು ತನಿಖೆಗೆ ವಹಿಸಿದ್ದರು. ಮತ್ತು ಇದರಲ್ಲಿ ಪ್ರಧಾನಿ ಕೈವಾಡ ಇದೆ ಎಂದು ಅವರು ಇವತ್ತಿಗೂ ನಂಬಿದ್ದಾರೆ.

ತಮ್ಮ ನಿರ್ಧಾರ ಸಂವಿಧಾನ ವಿರೋಧಿಯಲ್ಲ ಎಂದು ಪ್ರತಿಪಾದಿಸಿರುವ ಅವರು, ‘ಹತ್ಯೆಯ ಸಂಚಿನಿಂದಾಗಿ ತನಗೆ ವಿಕ್ರಮಸಿಂಘೆಯವರನ್ನು ಹುದ್ದೆಯಿಂದ ವಜಾ ಮಾಡದೆ ಬೇರೆ ಆಯ್ಕೆಗಳಿರಲಿಲ್ಲ’ ಎಂದಿದ್ದಾರೆ. ಜತೆಗೆ ತಾವು ವಹಿಸಿದ ತನಿಖೆಯ ಮೇಲೆ ಭಾರೀ ಒತ್ತಡವಿತ್ತು ಮತ್ತು ತನಿಖಾ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಂಡಿದ್ದರು ಎಂದು ದೂರಿದ್ದಾರೆ. ಇದಕ್ಕೆಲ್ಲಾ ವಿಕ್ರಮಸಿಂಘೆಯೇ ಕಾರಣ ಎಂಬುದು ಅವರ ವಾದ.

ಅದಲು ಬದಲು:

ಇದೇ ಹೊತ್ತಲ್ಲಿ ಅವರು ವಿಚಿತ್ರ ನಿರ್ಧಾರವೊಂದನ್ನು ಘೋಷಿಸಿ ಎಲ್ಲರ ಹುಬ್ಬೇರಿಸಿದ್ದಾರೆ. 2015ರ ಚುನಾವಣೆಯಲ್ಲಿ ಯಾರನ್ನು ಸೋಲಿಸಿದ್ದರೋ ಅವರನ್ನೇ ಮತ್ತೆ ಪ್ರಧಾನಿ ಸ್ಥಾನಕ್ಕೆ ಕರೆ ತಂದಿದ್ದಾರೆ. ‘ಇಂಥಹದ್ದೊಂದು ರಾಜಕೀಯ ಸಂದಿಗ್ಧತೆ, ಆರ್ಥಿಕ ತೊಂದರೆಗಳು ಮತ್ತು ನನ್ನನ್ನೇ ಹತ್ಯೆ ಮಾಡಲು ನಡೆದ ಗಂಭೀರ ಯತ್ನದ ನಂತರ ಇದ್ದಿದ್ದ ಏಕೈಕ ಪರ್ಯಾಯವೆಂದರೆ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಷೆಯವರನ್ನು ವಾಪಸ್‌ ಕರೆಸಿಕೊಳ್ಳುವುದು. ಅವರನ್ನು ಪ್ರಧಾನಿ ಹುದ್ದೆಗೆ ನೇಮಕಗೊಳಿಸಿ ಹೊಸ ಸರಕಾರ ರಚಿಸಲು ಅವಕಾಶ ನೀಡುವುದು ಬಿಟ್ಟರೆ ನನಗೆ ಬೇರೆ ಆಯ್ಕೆಗಳಿರಲಿಲ್ಲ,’ ಎಂದವರು ಸಮಜಾಯಿಷಿ ನೀಡಿದ್ದಾರೆ. ಅದರಂತೆ ಇಂದು ರಾಜಪಕ್ಷೆ ಪ್ರಧಾನಿ ಸಚಿವಾಲಯದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.

ನಿರ್ಗಮಿತ ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ
ನಿರ್ಗಮಿತ ಪ್ರಧಾನಿ ರಣಿಲ್‌ ವಿಕ್ರಮಸಿಂಘೆ ಮತ್ತು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ
/ಮಿಡ್‌ಡೇ

ದೇಶದಲ್ಲಿ ನಡೆದಿರುವ ಈ ಬೆಳವಣಿಗೆ ಭಾರತ ಸೇರಿದಂತೆ ಸ್ವತಃ ಶ್ರೀಲಂಕನ್ನರನ್ನು ಅಚ್ಚರಿಯಲ್ಲಿ ಕೆಡವಿದೆ. 2015ರ ಚುನಾವಣೆಗೂ ಮುನ್ನ ರಾಜಪಕ್ಷೆಯನ್ನು ಸೋಲಿಸಲು ಸಿರಿಸೇನಾ ಮತ್ತು ವಿಕ್ರಮಸಿಂಘೆ ಒಂದಾಗಿದ್ದರು. ಈ ಮೂಲಕ ಶ್ರೀಲಂಕಾದಲ್ಲಿ 26 ವರ್ಷಗಳಿಂದ ನಡೆಯುತ್ತಿದ್ದ ನಾಗರಿಕ ಯುದ್ಧಕ್ಕೆ ಕೊನೆ ಹಾಡಿದ್ದ ಮಹಿಂದಾ ರಾಜಪಕ್ಷೆಯನ್ನು ಹುದ್ದೆಯಿಂದ ಕಿತ್ತೊಗೆದಿದ್ದರು.

ಇದೀಗ ಸಿರಿಸೇನಾ ಕರೆಯ ಮೇಲೆ ಮುಖ್ಯಭೂಮಿಕೆಗೆ ಬಂದಿರುವ ರಾಜಪಕ್ಸೆ ಕೇಂದ್ರ ಕ್ಯಾಂಡಿ ಜಿಲ್ಲೆಯಲ್ಲಿರುವ ದೇವಸ್ಥಾನಗಳಿಗೆ ಭಾನುವಾರ ಭೇಟಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಹುಕಾಲದಿಂದ ನಡೆಯದೆ ಬಾಕಿ ಉಳಿದಿರುವ ಪ್ರಾಂತೀಯ ಚುನಾವಣೆಗಳನ್ನು ನಡೆಸುವಂತೆ ಒತ್ತಾಯಿಸಿದ್ದಾರೆ. ಜತೆಗೆ ಆದಷ್ಟು ಬೇಗ ಸಾರ್ವತ್ರಿಕ ಚುನಾವಣೆಯೂ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಹೀಗೊಂದು ಮುನ್ಸೂಚನೆ ರಾಜಪಕ್ಷೆಯವರಿಗೆ ಮೊದಲೇ ಇದ್ದಂತೆ ಕಾಣಿಸುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಕೆಲವು ತಿಂಗಳ ಕೆಳಗೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿ ಸುದೀರ್ಘ ಖಾಸಗಿ ಮಾತುಕತೆ ನಡೆಸಿದ್ದರು. ಇಲ್ಲಿ ಅವರ ಪದಗ್ರಹಣ ಕುರಿತಂತೆ ಚರ್ಚೆ ನಡೆದಿರುವ ಸಾಧ್ಯತೆಗಳಿವೆ.

ಭೂತದ ಬಾಯಲ್ಲಿ ಭಗವದ್ಗೀತೆ

“ಅಧಿಕಾರಕ್ಕೇರಿದವರೇ ದ್ವೇಷದ ರಾಜಕಾರಣವನ್ನು ಕಿತ್ತೊಗೆದು ಮಾನವ ಹಕ್ಕುಗಳನ್ನು ರಕ್ಷಿಸುವ ಆಂತರಿಕ ಸರ್ಕಾರವನ್ನು ರಚಿಸೋಣ. ಇದು ದೇಶದ ಸ್ವತಂತ್ರ ನ್ಯಾಯಾಂಗ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಿ” ಎಂದು ರಾಜಪಕ್ಷೆ ಕರೆ ನೀಡಿದ್ದಾರೆ.

ಆದರೆ ಅವರ ಈ ಮಾತುಗಳನ್ನು ‘ಭೂತದ ಬಾಯಲ್ಲಿ ಭಗವದ್ಗೀತೆ’ ಎಂಬ ಅರ್ಥದಲ್ಲಿ ಮಾನವ ಹಕ್ಕುಗಳ ಸಂಘಟನೆ ಹ್ಯೂಮನ್‌ ರೈಟ್ಸ್‌ ವಾಚ್‌ ಟೀಕಿಸಿದೆ. ಅವರ ಆಗಮನ ದೇಶದಲ್ಲಿ ದೌರ್ಜನ್ಯದ ರಾಜಕಾರಣದ ಭಯವನ್ನು ಹೆಚ್ಚಿಸಿದೆ ಎಂದು ಹೇಳಿದೆ.

ಶ್ರೀಲಂಕಾ ಆಂತರಿಕ ಸಂಘರ್ಷದಲ್ಲಿ ನಲುಗಿದ್ದ ದಿನಗಳು
ಶ್ರೀಲಂಕಾ ಆಂತರಿಕ ಸಂಘರ್ಷದಲ್ಲಿ ನಲುಗಿದ್ದ ದಿನಗಳು
/ನ್ಯೂಯಾರ್ಕ್‌ ಟೈಮ್ಸ್‌

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ದಕ್ಷಿಣ ಏಷ್ಯಾ ನಿರ್ದೇಶಕಿ ಮೀನಾಕ್ಷಿ ಗಂಗೂಲಿ, ಉತ್ತಮ ಆಡಳಿತ ಮತ್ತು ರಾಜಪಕ್ಸೆ ಸರಕಾರ ಎಸಗಿದ ದೌರ್ಜನ್ಯಗಳಿಗೆ ನ್ಯಾಯ ಕೊಡಿಸುವ ಭರವಸೆ ಮೇಲೆ ಸಿರಿಸೇನಾ ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದರು. ಇವತ್ತು ಅವರು ತಮಿಳು ಜನರಿಗೆ ತಾವು ನೀಡಿದ ಭರವಸೆ ಉಳಿಸಿಕೊಳ್ಳುವ ಬದಲು ಯಾರ ವಿರುದ್ಧ ಹೋರಾಡಿದ್ದರೋ ಅವರನ್ನೇ ಅಧಿಕಾರಕ್ಕೆ ಕರೆ ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜಪಕ್ಸೆ ಅಧಿಕಾರಕ್ಕೇರುವ ಮೂಲಕ ಅವರನ್ನು ಬಹಿರಂಗವಾಗಿ ಟೀಕಿಸಿದ್ದವರು ಈಗ ಜೀವ ಭಯದಲ್ಲಿ ಓಡಾಡುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಮಾತಿಗೆ ಪೂರಕವಾಗಿ ಸರಕಾರಿ ಸ್ವಾಮ್ಯದ ವಾಹಿನಿಗಳ ಕೇಂದ್ರ ಕಚೇರಿಯನ್ನು ಅವರ ಬೆಂಬಲಿಗರು ಈಗಾಗಲೇ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಜತೆಗೆ ಅಭಿಮಾನಿಗಳು ಬೀದಿಗೆ ಇಳಿದಿದ್ದು ವಿಕ್ರಮಸಿಂಘೆ ಬೆಂಬಲಿಗರ ಜತೆ ಬೀದಿ ಕಾಳಗಕ್ಕೆ ಇಳಿದಿದ್ದಾರೆ.

ಅತ್ತ ವಿಕ್ರಮಸಿಂಘೆ ಗೃಹ ಕಚೇರಿ ತೊರೆಯಲು ನಿರಾಕರಿಸಿರುವುದರಿಂದ ಶ್ರೀಲಂಕಾದ ಬೆಳವಣಿಗೆಗಳು ದಿಗಿಲು ಮೂಡಿಸುತ್ತಿವೆ. ಮುಖ್ಯವಾಗಿ ತುರ್ತು ಸಂಸತ್‌ ಅಧಿವೇಶನವನ್ನು ಅವರು ಕರೆದಿದ್ದು ತಮಗಿನ್ನೂ ಸಂಸತ್‌ನಲ್ಲಿ ಸಂಸದರ ಬೆಂಬಲವಿದೆ ಎಂಬುದನ್ನು ನಿರೂಪಿಸಲು ಹೊರಟಿದ್ದಾರೆ. ಇದಕ್ಕೆ ಸಡ್ಡು ಹೊಡೆದಿರುವ ಸಿರಿಸೇನಾ ಸಂಸತ್‌ ಅಧಿವೇಶನವನ್ನೇ ನವೆಂಬರ್‌ 16ರವರೆಗೆ ಮುಂದೂಡಿದ್ದಾರೆ.

ಸದ್ಯ ಶ್ರೀಲಂಕಾ ಸಂಸತ್‌ನ ವೆಬ್‌ಸೈಟ್‌ ಪ್ರಕಾರ, 225 ಸದಸ್ಯ ಬಲದ ಸಂಸತ್‌ನಲ್ಲಿ ವಿಕ್ರಮಸಿಂಘೆ ಅವರ ಯುಎನ್‌ಪಿ 106 ಸ್ಥಾನಗಳನ್ನು ಹೊಂದಿದ್ದರೆ, ಸಿರಿಸೇನಾ ಅವರ ಯುಪಿಎಫ್‌ಎಗೆ 95 ಸ್ಥಾನಗಳಿವೆ. ಇವರಲ್ಲಿ ಯುಎನ್‌ಪಿಯ ಇಬ್ಬರು ಪಕ್ಷ ಬದಲಿಸಿ ಸಿರಿಸೇನಾ ಜತೆ ಸೇರಿದ್ದಾರೆ. ಹೀಗಿದ್ದೂ ಹೆಚ್ಚಿನ ಸ್ಥಾನಗಳನ್ನು ವಿಕ್ರಮಸಿಂಘೆ ಪಕ್ಷವೇ ಹೊಂದಿದೆ. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಕರು ಜಯಸೂರ್ಯ ಕೂಡ ಅಧ್ಯಕ್ಷರ ನಿರ್ಧಾರವನ್ನು ಖಂಡಿಸಿದ್ದು, ಹೊಸ ಪ್ರಧಾನಿ ಆಯ್ಕೆಯಾಗುವವರೆಗೆ ತಮ್ಮ ಹಕ್ಕು ಮತ್ತು ಗೌರವವನ್ನು ಕಾಪಾಡಬೇಕು ಎಂಬ ವಿಕ್ರಮಸಿಂಘೆ ಅವರ ಮನವಿಯನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

ಹೀಗೆ ಸಂಸತ್‌ನ ಒಳಗೆ ಮತ್ತು ಹೊರಗೆ ಬೀದಿಯಲ್ಲಿಯೂ ಇಬ್ಬರ ಬೆಂಬಲಿಗರು ಪರಸ್ಪರ ಕಚ್ಚಾಟಕ್ಕೆ ಇಳಿದಿದ್ದಾರೆ. ಇದು ದ್ವೀಪರಾಷ್ಟ್ರದಲ್ಲಿ ಮತ್ತೊಂದು ಆಂತರಿಕ ಸಂಘರ್ಷದ ಭಯವನ್ನು ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನಕ್ಕೆ ಗೌರವ ನೀಡುವಂತೆ ಅಮೆರಿಕ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌ ಮನವಿ ಮಾಡಿಕೊಂಡಿವೆ. ಭಾರತ ಸದ್ಯಕ್ಕೆ ಈ ಪರಿಸ್ಥಿತಿಯನ್ನು ದೂರದಿಂದ ನಿಂತು ನೋಡುತ್ತಿದೆ.