samachara
www.samachara.com
ಜನಾರ್ದನ ರೆಡ್ಡಿ ‘ಪಾಪ’, ‘ಮೈನಿಂಗ್‌ ಮಾಫಿಯಾ’ ಪ್ರತಾಪ; ಸಿದ್ದರಾಮಯ್ಯ ಟ್ವೀಟ್ ನೆನಪಿಸಿದ್ದೇನು?
COVER STORY

ಜನಾರ್ದನ ರೆಡ್ಡಿ ‘ಪಾಪ’, ‘ಮೈನಿಂಗ್‌ ಮಾಫಿಯಾ’ ಪ್ರತಾಪ; ಸಿದ್ದರಾಮಯ್ಯ ಟ್ವೀಟ್ ನೆನಪಿಸಿದ್ದೇನು?

ಬಳ್ಳಾರಿ ರೆಡ್ಡಿಗಳ ಬಗ್ಗೆ ಮರೆಸಲಾಗಿದ್ದ ಅಧ್ಯಾಯಗಳನ್ನು ಉಪ ಚುನಾವಣೆ ವೇಳೆಗೆ ಸಿದ್ದರಾಮಯ್ಯ ನೆನಪಿಸಿದ್ದಾರೆ.

ಕೆಲವು ವಿಚಾರಗಳನ್ನು ಕಾಲ ತನ್ನಿಂತಾನೇ ಮರೆಸುತ್ತದೆ. ಆದರೆ, ಕೆಲವು ವಿಚಾರಗಳನ್ನು ಉದ್ದೇಶ ಪೂರ್ವಕವಾಗಿ ಮರೆಸಲಾಗುತ್ತದೆ. ಜನಾರ್ದನ ರೆಡ್ಡಿ, ಪ್ರತಾಪ್‌ ಸಿಂಹ ಮತ್ತು ಬಿಜೆಪಿ ವಿಚಾರಗಳನ್ನೂ ಹೀಗೆ ಉದ್ದೇಶ ಪೂರ್ವಕವಾಗಿ ಮರೆವಿಗೆ ತಳ್ಳಲಾಗಿದೆ. ಆದರೆ, ಈ ಭೂತಕಾಲವನ್ನು ಕೆದಕುವ ಸಣ್ಣ ಪ್ರಯತ್ನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ.

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋದರಿಯನ್ನು ಗೆಲ್ಲಿಸಲು ಶ್ರೀರಾಮುಲು ಇನ್ನಿಲ್ಲದ ‘ಶ್ರಮ’ ಹಾಕುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ಕೂಡಾ ಇಲ್ಲಿ ಉಗ್ರಪ್ಪ ಗೆಲುವಿಗೆ ಟೊಂಕ ಕಟ್ಟಿ ನಿಂತಿದೆ. 1952ರಿಂದ 2004ರವರೆಗೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ದಿಗ್ಗಜರ ದಂಡೇ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದೆ. ಇದರ ಬೆನ್ನಲ್ಲೇ ‘ಬಳ್ಳಾರಿ ರಿಪಬ್ಲಿಕ್’ನ ರೆಡ್ಡಿಗಳ ಬಗ್ಗೆ ಮರೆಸಲಾಗಿದ್ದ ಅಧ್ಯಾಯಗಳನ್ನು ಸಿದ್ದರಾಮಯ್ಯ ನೆನಪಿಸಿದ್ದಾರೆ.

“ಸಿದ್ದರಾಮಯ್ಯನವರು ಅನ್ಯಾಯವಾಗಿ ತನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ದನ ರೆಡ್ಡಿಯವರೇ, ದಯವಿಟ್ಟು ನಿಮ್ಮ ಪಕ್ಷದ ಸಂಸದರೇ ಬರೆದಿದ್ದ ಈ ಪುಸ್ತಕ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತೆ” ಎಂದು ಸಿದ್ದರಾಮಯ್ಯ ಸೋಮವಾರ ಟ್ವೀಟ್ ಮಾಡಿದ್ದಾರೆ.

ಒಂದು ಕಾಲದಲ್ಲಿ ಬಳ್ಳಾರಿಯಲ್ಲಿ, “ನಾವು ಹೇಳಿದ್ದಷ್ಟೇ ನಡೆಯುವುದು” ಎಂಬ ದರ್ಪ ತೋರಿದ್ದ, ತಾಕತ್ತಿದ್ದರೆ ಬಳ್ಳಾರಿಗೆ ಕಾಲಿಡಿ ಎಂದಿದ್ದ ಇದೇ ರೆಡ್ಡಿಗೆ ಈಗ ಬಳ್ಳಾರಿ ಪ್ರವೇಶ ನಿಷಿದ್ಧ. ಹಾಗಂಥ ಬಳ್ಳಾರಿಯ ಚುನಾವಣೆ ಹಾಗೂ ಶ್ರೀರಾಮುಲು ಸಖ್ಯದಿಂದೇನೂ ಜನಾರ್ದನ ರೆಡ್ಡಿ ದೂರಾಗಿಲ್ಲ. ಬಳ್ಳಾರಿಯಲ್ಲಿ ಶಾಂತಾ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವವರ ಪೈಕಿ ಜನಾರ್ದನ ರೆಡ್ಡಿಯೂ ಒಬ್ಬರು.

ಇದೇ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆಯ ಬಗ್ಗೆ 2010ರಲ್ಲಿ ಹೊರಬಂದಿದ್ದ ಪುಸ್ತಕವೇ ‘ಮೈನಿಂಗ್ ಮಾಫಿಯಾ’. ಇದನ್ನು ಬರೆದವರು ಬಿಜೆಪಿ ಸಂಸದ ಪ್ರತಾಪ್‌ ಸಿಂಹ. ಅವರು ಆಗಿನ್ನೂ ವಿಜಯ ಕರ್ನಾಟಕದಲ್ಲಿ ಪತ್ರಕರ್ತರಾಗಿದ್ದರು. ಆ ಹೊತ್ತಿಗೆ ಜನಾರ್ದನ ರೆಡ್ಡಿ ದರ್ಬಾರ್‌ ಇನ್ನೂ ನಡೆಯುತ್ತಿತ್ತು. ಹಿಂದೆ ಜನಾರ್ದನ ರೆಡ್ಡಿ ಮೈನಿಂಗ್ ಮಾಫಿಯಾ ಬಗ್ಗೆ ಹೀಗೊಂದು ಪುಸ್ತಕ ಬರೆದಿದ್ದ ಪ್ರತಾಪ್‌ ಸಿಂಹ ಈಗ ರೆಡ್ಡಿ ಇದ್ದ ಪಕ್ಷದಲ್ಲೇ ಸಂಸದರು!

1999ನಿಂದ 2018ರವರೆಗೆ

ರೆಡ್ಡಿ ರಾಜಕೀಯ ಬೆಳವಣಿಗೆಯೇ ಹಾಗಿತ್ತು. 1999ರಲ್ಲಿ ಬಳ್ಳಾರಿಯಲ್ಲಿ ತನ್ನ ಆಪ್ತ ಸ್ನೇಹಿತ ಶ್ರೀರಾಮುಲು ಜತೆಗೆ ರಾಜಕೀಯಕ್ಕೆ ಬಂದ ಜನಾರ್ದನ ರೆಡ್ಡಿ ಮುಂದಿನ ಐದು ವರ್ಷಗಳಲ್ಲಿ ಗಣಿ ನಾಡಿನಲ್ಲಿ ಅಧಿಕಾರದ ಕೇಂದ್ರದಲ್ಲಿದ್ದರು. ರಾಜಕೀಯ ಹಾಗೂ ಹಣ ಬಲ ಬೆಳೆಸಿಕೊಂಡಿದ್ದ ರೆಡ್ಡಿ ತಮ್ಮ ಸೋದರರಾದ ಕರುಣಾಕರ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಅವರನ್ನೂ ರಾಜಕೀಯಕ್ಕೆ ಎಳೆ ತಂದಿದ್ದರು.

2001ರಲ್ಲಿ ನಡೆದ ಬಳ್ಳಾರಿ ಮುನ್ಸಿಪಲ್‌ ಕೌನ್ಸಿಲ್‌ ಚುನಾವಣೆಯಲ್ಲಿ ರೆಡ್ಡಿ ಗ್ರೂಪ್‌ಗೆ ಗೆಲುವಾಗಿತ್ತು. ಬಳ್ಳಾರಿ ಮುನ್ಸಿಪಲ್‌ ಕೌನ್ಸಿಲ್‌ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದ ರೆಡ್ಡಿ, 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕರುಣಾಕರ ರೆಡ್ಡಿ ಮತ್ತು ಬಳ್ಳಾರಿ ವಿಧಾನಸಭಾ ಕ್ಷೇತ್ರಕ್ಕೆ ಬಿ. ಶ್ರೀರಾಮುಲು ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು.

ಸಿಡಿ ಬಿಡುಗಡೆಯಿಂದ ಸುದ್ದಿಯಾಗಿದ್ದ ರೆಡ್ಡಿ:

ಅದು 2006. ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿಯ ಯಡಿಯೂರಪ್ಪ ಜತೆಗೆ ಸರಕಾರ ರಚಿಸಿಕೊಂಡಿದ್ದರು. ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆಗ ಕುಮಾರಸ್ವಾಮಿ ಬಳ್ಳಾರಿಯ ಗಣಿ ಉದ್ಯಮಿಗಳಿಂದ 150 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ್ದ ಆರೋಪ ಮಾಡಿದ್ದರು ಜನಾರ್ದನ ರೆಡ್ಡಿ. ಈ ಕುರಿತ ಸಾಕ್ಷ್ಯದ ಸಿಡಿ ಬಿಡುಗಡೆಯಿಂದ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದ್ದರು. ಅಲ್ಲಿಯವರೆಗೂ ಜನಾರ್ದನ ರೆಡ್ಡಿ ಪರಿಚಯ ನಾಡಿನ ಹೆಚ್ಚಿನ ಜನರಿಗೆ ಇರಲಿಲ್ಲ. ಕುಮಾರಸ್ವಾಮಿ ವಿರುದ್ಧದ ಸಿಡಿಯಿಂದ ಸುದ್ದಿಯಾಗಿದ್ದ ಜನಾರ್ದನ ರೆಡ್ಡಿ 2006ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು.

ಕೊಟ್ಟ ಮಾತಿನಂತೆ ಯಡಿಯೂರಪ್ಪಗೆ ಅಧಿಕಾರ ಹಸ್ತಾಂತರ ಮಾಡದ ಕಾರಣಕ್ಕೆ 2008ರಲ್ಲಿ ಸಮ್ಮಿಶ್ರ ಸರಕಾರ ಮುರಿದು ಬಿತ್ತು. ಕುಮಾರಸ್ವಾಮಿ ಯಡಿಯೂರಪ್ಪಗೆ ‘ಅನ್ಯಾಯ’ ಮಾಡಿದ ಅನುಕಂಪ ಹಾಗೂ ರೆಡ್ಡಿ ಗ್ರೂಪ್‌ ಹರಿಸಿದ ಹಣದ ಹೊಳೆ 2008ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಸಿಗುವಂತೆ ಮಾಡಿತ್ತು. 2008ರ ಚುನಾವಣೆಯಲ್ಲಿ ಬಳ್ಳಾರಿಯಿಂದ ಬಿ.ಶ್ರೀರಾಮುಲು, ಬಳ್ಳಾರಿ ನಗರ ಕ್ಷೇತ್ರದಿಂದ ಸೋಮಶೇಖರ ರೆಡ್ಡಿ ಮತ್ತು ಹರಪ್ಪನಹಳ್ಳಿ ಕ್ಷೇತ್ರದಿಂದ ಕರುಣಾಕರ ರೆಡ್ಡಿ ಅವರನ್ನು ಗೆಲ್ಲಿಸಿಕೊಂಡ ಜನಾರ್ದನ ರೆಡ್ಡಿ ತಾವು ಮಾತ್ರ ಪರಿಷತ್‌ ಸದಸ್ಯರಾಗೇ ಉಳಿದುಕೊಂಡು ಬಿಟ್ಟರು.

ಯಡಿಯೂರಪ್ಪ ಸಂಪುಟದಲ್ಲಿ ರೆಡ್ಡಿ ಗ್ರೂಪ್‌ನ ಮೂವರಿಗೆ ಸಚಿವ ಸ್ಥಾನ ಹಾಗೂ ಸೋಮಶೇಖರ ರೆಡ್ಡಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಆದರೆ, ರೆಡ್ಡಿ ಅಬ್ಬರ ನಡೆದಿದ್ದು ಮುಂದಿನ ಮೂರು ವರ್ಷಗಳವರೆಗೆ ಮಾತ್ರ. ಎಂಎಲ್‌ಸಿಯಾಗಿಯೇ ಸಚಿವ ಸ್ಥಾನಕ್ಕೆ ಬಂದ ಜನಾರ್ದನ ರೆಡ್ಡಿ ಗ್ರಾಫ್‌ ಮುಂದಿನ ಮೂರು ವರ್ಷಗಳಲ್ಲೇ ಇಳಿಯಿತು. ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಗಡಿನಾಶ ಪ್ರಕರಣಗಳಲ್ಲಿ ಸಿಬಿಐ 2011ರ ಸೆಪ್ಟೆಂಬರ್‌ 5ರಂದು ಜನಾರ್ದನ ರೆಡ್ಡಿ ಅವರನ್ನು ಬಂಧಿಸಿತ್ತು.

ಹಿಂದೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿಗೆ ‘ಅಮ್ಮ’ ಆಗಿದ್ದ ಸುಷ್ಮಾ ಸ್ವರಾಜ್
ಹಿಂದೆ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿಗೆ ‘ಅಮ್ಮ’ ಆಗಿದ್ದ ಸುಷ್ಮಾ ಸ್ವರಾಜ್

2011ರಲ್ಲಿ ಜನಾರ್ದನ ರೆಡ್ಡಿ ಬಂಧನವಾದ ಸುಮಾರು ಒಂದು ತಿಂಗಳಲ್ಲೇ ಕಿಕ್‌ಬ್ಯಾಕ್‌ ಪಡೆದ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಬಂಧನವಾಯಿತು. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ಯಡಿಯೂರಪ್ಪ ಮುಂದೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ 2013ರ ಚುನಾವಣೆಯಲ್ಲಿ ಕೆಜೆಪಿಯಿಂದಲೇ ಸ್ಪರ್ಧಿಸಿದ್ದರು. ಅತ್ತ ಬಿಜೆಪಿ ತೊರೆದ ಶ್ರೀರಾಮುಲು ತಾವು ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಕಟ್ಟಿಕೊಂಡರು.

ಹಿಂದೆ ವಿಧಾನಸಭೆಯಲ್ಲಿ ‘ತಾಕತ್ತಿದ್ದರೆ ಬಳ್ಳಾರಿಗೆ ಬನ್ನಿ’ ಎಂದಿದ್ದ ರೆಡ್ಡಿ ಸೋದರರ ಸವಾಲನ್ನು ಬಹುತೇಕ ವೈಯಕ್ತಿಕವಾಗಿ ತೆಗೆದುಕೊಂಡಿದ್ದ ಸಿದ್ದರಾಮಯ್ಯ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ 2013ರ ಚುನಾವಣೆಯಲ್ಲಿ ಪಕ್ಷದೊಂದಿಗೆ ತಾವೂ ಗೆದ್ದಿದ್ದರು.

ರೆಡ್ಡಿ ಬಂಧನದ ಬಳಿಕ ಬಳ್ಳಾರಿಯಲ್ಲಿ ರೆಡ್ಡಿ ಗ್ರೂಪ್‌ ಪ್ರಭಾವ ಕಡಿಮೆಯಾಗುತ್ತಾ ಬಂತು. ಜನಾರ್ದನ ರೆಡ್ಡಿ ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರೆ ಅವರ ಸೋದರಾದ ಕರುಣಾಕರ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ತೆರೆಮರೆಗೆ ಸರಿದರು. 2014ರ ಲೋಕಸಭಾ ಚುನಾವಣೆಯ ವೇಳೆಗೆ ಯಡಿಯೂರಪ್ಪ, ಶ್ರೀರಾಮುಲು ಬಿಜೆಪಿಗೆ ಹತ್ತಿರವಾದರೆ ರೆಡ್ಡಿ ಸೋದರರು ರಾಜಕೀಯದಿಂದಲೇ ದೂರ ಉಳಿಯಬೇಕಾಯಿತು.

ಇದೆಲ್ಲವೂ ಹೆಚ್ಚೂ ಕಡಿಮೆ 20 ವರ್ಷದ ಇತಿಹಾಸ. ಆದರೆ, ಜನ ಎಲ್ಲವನ್ನೂ ಮರೆತಿದ್ದಾರೆ ಎಂಬಂತೆ ರೆಡ್ಡಿ ಬಳಗ ಮತ್ತೆ ರಾಜಕೀಯದಲ್ಲಿ ಮುನ್ನೆಲೆಗೆ ಬರಲು ಯತ್ನಿಸುತ್ತಿದೆ. ಗೆಳೆಯ ಶ್ರೀರಾಮುಲು ಮೂಲಕ ಅಧಿಕಾರಕ್ಕೆ ಹತ್ತಿರದಲ್ಲಿರಲು ಜನಾರ್ದನ ರೆಡ್ಡಿ ಬಯಸುತ್ತಿದ್ದಾರೆ. ಈ ಹಿಂದೆ ಏನೂ ಆಗಿಯೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಜನಾರ್ದನ ರೆಡ್ಡಿ ಸಾರ್ವಜನಿಕವಾಗಿ ಅಗತ್ಯಕ್ಕಿಂತ ಹೆಚ್ಚೇ ‘ವಿನಯವಂತಿಕೆ’ ಪ್ರದರ್ಶಿಸುತ್ತಿದ್ದಾರೆ.

ರೆಡ್ಡಿ ಸೋದರರು ಗಣಿಧಣಿಗಳಾಗಿ ‘ಲಕ್ಷ್ಮೀಪುತ್ರ’ರಂತೆ ಮೆರೆಯುತ್ತಿದ್ದ ಕಾಲದಲ್ಲಿ ಮನೆಮಕ್ಕಳಂತೆ ತಲೆಕಾಯ್ದ ಬಿಜೆಪಿ ಮುಖಂಡರು ಈಗ ಬಹಿರಂಗವಾಗಿ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. “ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವೇ ಇಲ್ಲ” ಎಂದು ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದರೂ, ಬಿಜೆಪಿಯ ಚುನಾವಣಾ ಖರ್ಚಿಗೆ ಈಗಲೂ ಬೇಕಿರುವುದು ರೆಡ್ಡಿ ಬಳಗದ ಹಣವೇ ಎಂಬುದು ಗೌಪ್ಯವಾಗೇನೂ ಉಳಿದಿಲ್ಲ.