ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಲಂಡನ್‌ನಲ್ಲಿ ನಡೆದಿದ್ದ ಮೋದಿ ವಿರೋಧಿ ಪ್ರತಿಭಟನೆಯಲ್ಲಿ ಕಂಡುಬಂದಿದ್ದ ಫೋಸ್ಟರ್
COVER STORY

ಭಾರತಕ್ಕೆ ಬರಲು ಟ್ರಂಪ್‌ ಹಿಂದೇಟು; ಜಾಗತಿಕ ಮಟ್ಟದಲ್ಲಿ ದೇಶದ ಮಾನ ತೆಗೆದರೇ ಮೋದಿ?

ಭಾರತ ವಿಶ್ವಗುರುವಾಗುತ್ತಿದೆ ಎಂಬ ಹುಸಿ ಹೇಳಿಕೆಗಳನ್ನು ಬಿತ್ತುತ್ತಿರುವ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಕಳೆದರೇ ಎಂಬ ಅನುಮಾನಗಳು ಶುರುವಾಗಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಸದ್ಯ ಜಪಾನ್‌ ಪ್ರವಾಸದಲ್ಲಿದ್ದಾರೆ. ವಿದೇಶ ಸುತ್ತಾಟಕ್ಕೇ ಹೆಸರಾಗಿರುವ ಮೋದಿ ಜಪಾನ್‌ ಪ್ರಧಾನಿ ಶಿಂಜೋ ಅಬೆ ಜತೆಗೆ ಇತ್ತ ದಕ್ಷಿಣ ಏಷ್ಯಾ ಹಾಗೂ ಪ್ರಾದೇಶಿಕ ರಕ್ಷಣೆಯ ಬಗ್ಗೆ ಮಾತುಕತೆ ನಡೆಸುತ್ತಿದ್ದರೆ, ಅತ್ತ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಲು ಹಿಂದೇಟು ಹಾಕಿದ್ದಾರೆ.

2019ರ ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಭಾಗವಹಿಸುವಂತೆ ಭಾರತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಈ ವರ್ಷದ ಆಗಸ್ಟ್‌ ತಿಂಗಳಲ್ಲೇ ಅಧಿಕೃತ ಆಮಂತ್ರಣ ಕಳಿಸಿತ್ತು. ವೈಟ್‌ ಹೌಸ್ ಕೂಡಾ ಈ ಆಮಂತ್ರಣವನ್ನು ಖಚಿತ ಪಡಿಸಿತ್ತು. ಆದರೆ, ಈಗ ಟ್ರಂಪ್‌ ಭಾರತದ ಅತಿಥಿಯಾಗಿ ಬರಲು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.

ಟ್ರಂಪ್‌ ಭಾರತ ಭೇಟಿ ಬಗ್ಗೆ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಟ್ರಂಪ್‌ ಪ್ರವಾಸದ ಬಗ್ಗೆ ವೈಟ್ ಹೌಸ್‌ ಮಾತ್ರವೇ ಹೇಳಿಕೆ ನೀಡಬಹುದು ಎಂದು ರಾಯಭಾರ ಕಚೇರಿ ತಿಳಿಸಿದೆ. ಅತ್ತ ವೈಟ್‌ ಹೌಸ್, “ಅಧ್ಯಕ್ಷರ ಭಾರತ ಭೇಟಿ ಇನ್ನೂ ನಿಗದಿಯಾಗಿಲ್ಲ” ಎಂದು ಹೇಳಿದೆ. ಒಟ್ಟಿನಲ್ಲಿ ಟ್ರಂಪ್‌ ಭಾರತ ಭೇಟಿ ವಿಚಾರ ಅಸ್ಪಷ್ಟವಾಗಿದೆ.

ಮುಳುವಾಯಿತೇ ಮೋದಿ ವಿರೋಧಿ ಅಲೆ:
ಭಾರತದೊಂದಿಗೆ ಅಮೆರಿಕದ ಸಂಬಂಧವೇನೂ ಹಳಸಿಲ್ಲ. ಆದರೂ ಟ್ರಂಪ್‌ ಭಾರತ ಭೇಟಿಗೆ ಹಿಂದೇಟು ಹಾಕಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ಎದ್ದಿರುವ ಮೋದಿ ವಿರೋಧಿ ಅಲೆ ಕಾರಣ ಎನ್ನಲಾಗುತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯಲು ಮೋದಿ ಸರಕಾರ ವಿಫಲವಾಗಿದೆ ಎಂದು ಜಾಗತಿಕ ಮಟ್ಟದಲ್ಲಿ ಮೋದಿ ವಿರೋಧಿ ಅಲೆ ಎದ್ದಿದೆ.

ಗೋ ರಕ್ಷಣೆ ಹೆಸರಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ನಡೆದ ದಾಳಿಗಳು ಜಾಗತಿಕ ಮಟ್ಟದಲ್ಲಿ ಮೋದಿ ಇಮೇಜ್‌ ಅನ್ನು ಕುಗ್ಗುವಂತೆ ಮಾಡಿವೆ. ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಮೋದಿ ಲಂಡನ್‌ ಭೇಟಿ ವೇಳೆ ಇದೇ ಕಾರಣಕ್ಕೆ ಮೋದಿ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಮೋದಿ ಸರಕಾರ ಜನಾಂಗೀಯ ದಾಳಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಕಾರಣಕ್ಕೆ ‘ ಮೋದಿ ಗೋ ಬ್ಯಾಕ್‌’ ಘೋಷಣೆಗಳು ಕೇಳಿಬಂದಿದ್ದವು.

ಜಾಗತಿಕ ಮಟ್ಟದಲ್ಲಿ ಎದ್ದಿರುವ ಈ ಮೋದಿ ವಿರೋಧಿ ಅಲೆ ಕೇವಲ ಮೋದಿಗಷ್ಟೇ ಮುಳುವಾಗಿಲ್ಲ, ಭಾರತದ ಹೆಸರಿಗೂ ಈ ಮಸಿ ಅಂಟಿದೆ. ವಿಶ್ವಶಾಂತಿಗೆ ಹೆಸರಾಗಿದ್ದ ಭಾರತ ಈಗ ಜಾಗತಿಕ ಮಟ್ಟದಲ್ಲಿ ಜನಾಂಗೀಯ ದಾಳಿಯ ಕುಖ್ಯಾತಿಯ ದಾರಿಯಲ್ಲಿದೆ. ಭಾರತ ವಿಶ್ವಗುರುವಾಗುತ್ತಿದೆ ಎಂಬ ಹುಸಿ ಹೇಳಿಕೆಗಳನ್ನು ಬಿತ್ತುತ್ತಿರುವ ಮೋದಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಕಳೆದರೇ ಎಂಬ ಅನುಮಾನಗಳು ಶುರುವಾಗಿವೆ.

ತಮ್ಮ ಆಡಳಿತದ ಅವಧಿಯಲ್ಲಿ ಮೋದಿ ಭಾರತಕ್ಕೆ ಅಂಟಿಸಿರುವ ಈ ಕಳಂಕದ ಕಾರಣಕ್ಕೇ ಟ್ರಂಪ್‌ ಭಾರತ ಭೇಟಿಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ವರ್ಷ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಅಮೆರಿಕ ಈಗ ಭಾರತದ ಬಗ್ಗೆ ಇಂಥ ನಿಲುವು ತಳೆಯಲು ಮೋದಿ ಆಡಳಿತದ ವೈಫಲ್ಯ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ದೇಶದೊಳಗೆ ಜಗತ್ತು ಸುತ್ತುವ ಜಾಗತಿಕ ನಾಯಕ ಎಂದು ಮೋದಿಯನ್ನು ಭಕ್ತರು ಹಾಡಿ ಹೊಗಳುತ್ತಿದ್ದರೆ, ಜಾಗತಿಕ ಮಟ್ಟದಲ್ಲಿ ಮೋದಿ ಭಾರತದ ಮಾನವನ್ನು ಕಳೆಯುತ್ತಾ ಬಂದಿದ್ದಾರೆ. ದೇಶ ಆಳಲು ಮೋದಿ ಬಿಟ್ಟರೆ ಮತ್ಯಾರೂ ಇಲ್ಲ ಎಂಬ ಭ್ರಮೆ ಬಿತ್ತುತ್ತಿರುವ ಭಕ್ತರು ಈಗ ದೇಶದ ಆಚೆಗೆ ಭಾರತದ ಹೆಸರು ಏನಾಗಿದೆ ಎಂಬುದರ ಕಡೆಗೂ ನೋಡಬೇಕಾದ ಸ್ಥಿತಿ ಬಂದಿದೆ.