samachara
www.samachara.com
ಈ ಊರಿನ ಹೆದ್ದಾರಿ ವಿಸ್ತರಣೆಗೆ ಹೊರಟಿದೆ ಸರಕಾರ; ಬೆನ್ನಲ್ಲಿದೆಯೇ ಮೈನಿಂಗ್ ಮಾಫಿಯಾ?
COVER STORY

ಈ ಊರಿನ ಹೆದ್ದಾರಿ ವಿಸ್ತರಣೆಗೆ ಹೊರಟಿದೆ ಸರಕಾರ; ಬೆನ್ನಲ್ಲಿದೆಯೇ ಮೈನಿಂಗ್ ಮಾಫಿಯಾ?

ಶಿರಸಿ-ಕುಮಟ ಹೆದ್ದಾರಿಯ ಅಗಲೀಕರಣ ಮಾಡಿ ವಾಹನ ಸಂಚಾರ ಹೆಚ್ಚಿಸಿದಲ್ಲಿ ಪರಿಸರ ಅವಗಢಗಳು ಖಚಿತ ಎಂಬುದು ಪರಿಸರ ಸಂಘಟನೆಗಳ ವಾದ. ಇದು ಮತ್ತದೇ ಸೋ ಕಾಲ್ಡ್ ಅಭಿವೃದ್ಧಿ ವರ್ಸಸ್‌ ಪರಿಸರ ಫೈಟ್. 

ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟ ಹೆದ್ದಾರಿಯ ಅಗಲೀಕರಣ ಕಾಮಗಾರಿ ಪ್ರಾರಂಭವಾಗಲಿದೆ. ಅತ್ಯಂತ ಕಡಿದಾದ ದೇವಿಮನೆ ಘಟ್ಟದಂಥ ಕಣಿವೆ ಹೊಂದಿರುವ ಹೆದ್ದಾರಿ ಅಗಲೀಕರಣದಿಂದ ಕೊಡಗಿನಲ್ಲಾದಂತೆ ಅವಗಢಗಳು ಸಂಭವಿಸುತ್ತವೆ ಎಂದು ಪರಿಸರ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಅಗಲೀಕರಣ ಅಗತ್ಯ ಎಂಬುದು ಸ್ಥಳೀಯ ಜನರ ಮತ್ತು ಜನಪ್ರತಿನಿಧಿಗಳ ವಾದ. ಇಂತಹ ವೈರುಧ್ಯ ನಿಲುವುಗಳ ನಡುವೆ ವಸ್ತುಸ್ಥಿತಿ ವರದಿಯನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ.

ಭಾರತದ ಪಶ್ಚಿಮಘಟ್ಟ ಪ್ರದೇಶವು ಸೂಕ್ಷ್ಮ ಪರಿಸರ ವಲಯವಾಗಿ ವಿಶ್ವ ಭೂಪಟದಲ್ಲಿಯೇ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಇಲ್ಲಿರುವ ಹಲವಾರು ಜೀವವೈವಿಧ್ಯಗಳು ಇನ್ನೆಲ್ಲೂ ಕಂಡುಬರುವುದಿಲ್ಲ. ಇಂಥ ಸೂಕ್ಷ್ಮ ಪರಿಸರ ವಲಯದಲ್ಲಿದೆ ಸದ್ಯ ಮೇಲ್ದರ್ಜೆಗೇರಿಸಲ್ಪಟ್ಟ ಶಿರಸಿ- ಕುಮಟ ರಾಷ್ಟ್ರೀಯ ಹೆದ್ದಾರಿ. ಹಲವು ಪ್ರಾಣಿ ಕಾರಿಡಾರ್‌ಗಳು ಈ ಹೆದ್ದಾರಿಯನ್ನು ಹಾದು ಹೋಗುತ್ತವೆ. ಇಲ್ಲಿ ರಸ್ತೆ ಅಗಲೀಕರಣ ಮಾಡಿ ವಾಹನ ಸಂಚಾರ ಹೆಚ್ಚಿಸಿದಲ್ಲಿ ಪರಿಸರ ಅವಗಢಗಳು ಖಚಿತ ಎಂಬುದು ಪರಿಸರ ಸಂಘಟನೆಗಳ ವಾದ.

ಪರಿಸರ ಸಂಘಟನೆಗಳ ವಾದವೇನು?

ಶಿರಸಿ- ಕುಮಟ ಹೆದ್ದಾರಿಯ ಇಕ್ಕೆಲಗಳಲ್ಲಿ ಯೋಜಿಸಿದಂತೆ ಕಾಮಗಾರಿ ನಡೆದರೆ ಹೆದ್ದಾರಿ ಇನ್ನೂ 6 ಮೀಟರ್ ಹೆಚ್ಚು ಅಗಲವಾಗಲಿದೆ. ಇದರಿಂದ ಇಳಿಜಾರಿನ ಕಣಿವೆಗಳಲ್ಲಿ ಭೂಕುಸಿತ ಖಚಿತ. ದೇವಿಮನೆ ಘಟ್ಟದ ಕಣಿವೆ ಪ್ರದೇಶವನ್ನು 20ವರ್ಷಗಳ ಹಿಂದೆ ಔಷಧ ಮೂಲಿಕೆಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ. ‘ವಿನಾಶದ ಅಂಚಿನಲ್ಲಿರುವ ಹಲವು ಸಸ್ಯ- ವನ್ಯಜೀವಿ ಪ್ರಬೇಧಗಳಿವೆ’ ಎಂಬುದನ್ನು ಆಗಲೇ ರಾಷ್ಟ್ರೀಯ ಔಷಧ ಮೂಲಿಕೆಗಳ ಸಂರಕ್ಷಣ ಸಂಸ್ಥೆ ವಿಜ್ಞಾನಿಗಳು ವರದಿ ನೀಡಿದ್ದಾರೆ.

ರಸ್ತೆ ಅಗಲೀಕರಣವು ಅಘನಾಶಿನಿ ಕೊಳ್ಳದ ಪರಿಸರವನ್ನು ಬಾಧಿಸುವುದರಿಂದ ಬಹು ಅಪರೂಪದ ಪರಿಸರ ಸೂಕ್ಷ್ಮ ಪ್ರದೇಶ ವಿನಾಶದತ್ತ ಸಾಗಲಿದೆ. ಭಾರತೀಯ ವಿಜ್ಞಾನ ಸಂಸ್ಥೆಯೂ (ಐಐಎಸ್‌ಸಿ) ಸಹ ಹಿಂದೆಯೇ ಈ ಪ್ರದೇಶದಲ್ಲಿ ಅರಣ್ಯನಾಶದ ಯೋಜನೆ ಸಾಧ್ಯವಿಲ್ಲ ಎಂದು ವರದಿ ನೀಡಿದೆ. ಈ ಪ್ರದೇಶದ ಭೂಗರ್ಭದ ಧಾರಣಾ ಸಾಮರ್ಥ್ಯವೂ ಕಡಿಮೆ ಎಂದು ಈಗಾಗಲೇ ವೈಜ್ಞಾನಿಕ ವರದಿಗಳು ಹೇಳಿರುವ ಹಿನ್ನಲೆಯಲ್ಲಿ ಈಗಿರುವ ಹೆದ್ದಾರಿನ್ನೇ ಅಗಲ ಮಾಡದೇ ಪುನರ್‌ ನಿರ್ಮಾಣ ಮಾಡಬೇಕು.

ಶಿರಸಿ- ಕುಮಟ ರಸ್ತೆ ಅಗಲೀಕರಣದಿಂದ ಔಷಧ ಸಂಪತ್ತನ್ನೇ ಹೊದಿರುವ ದೇವಿಮನೆ ಘಟ್ಟಕ್ಕೆ ಹಾನಿಯಾಗುವ ಸಂಭವವಿರುವುದರಿಂದ ಈ ರಸ್ತೆಯ ಅಗಲೀಕರಣ ವಿಷಯವನ್ನು ಪರಾಮರ್ಶಿಸುವುದು ಸೂಕ್ತ.
– ಗಂಗಾಧರೇಂದ್ರ ಸ್ವಾಮೀಜಿ, ಸ್ವರ್ಣವಲ್ಲೀ ಮಠ, ಶಿರಸಿ

60 ಕಿ.ಮೀ. ಉದ್ದದ ಶಿರಸಿ- ಕುಮಟ ಹೆದ್ದಾರಿ ಅಗಲೀಕರಣದಿಂದ ಸಾವಿರಾರು ದೊಡ್ಡ ಮರಗಳೂ, ಲಕ್ಷಗಳ ಸಂಖ್ಯೆಯಲ್ಲಿ ಪೊದೆ, ಕುರುಚಲು, ಔಷಧ ಸಸ್ಯಗಳು ನಾಶವಾಗಲಿವೆ. ಸರಕಾರ ಪರಿಹಾರ ಕ್ರಮಗಳನ್ನು ಕೈಗೊಳ್ಳುವಾಗ ದೊಡ್ಡ ಮರಗಳನ್ನು ಮಾತ್ರ ಪರಿಗಣಿಸುವುದು ಅನುಭವದಲ್ಲಿದೆ. ಇಲ್ಲಿನ ಅಪಾರ ಜೀವವೈವಿಧ್ಯತೆಯ ಪರಿಸರ ಮೌಲ್ಯವನ್ನು ಪರಿಗಣಿಸಿ ಅದಕ್ಕೆ ಧಕ್ಕೆಯಾಗದಂತೆ ಕಾಮಗಾರಿ ಯೋಜಿಸಬೇಕು.

ಒಂದು ವೇಳೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದರೆ ಕುಮಟ ತಾಲೂಕು ವ್ಯಾಪ್ತಿಯ ಅಂತ್ರವಳ್ಳಿ, ಕತಗಾಲ, ಬೂದಿಹೊಳೆ, ಆನೆಗುಂಡಿ, ಮಾಸ್ತಿಕಟ್ಟೆ, ಯಾಣದ ಹೊಳೆ ಮತ್ತು ಶಿರಸಿ ವ್ಯಾಪ್ತಿಯ ರಾಗಿಹೊಸಳ್ಳಿ, ಬಣ್ಣೆಹೊಳೆ, ಬಂಡಲ, ಮೊಸಳೆಗುಂಡಿ, ಮಂಜುಗುಣಿ, ಚಿಕಡಿ, ರೇವಣಕಟ್ಟಾ ಹೊಳೆ, ಜಾನ್ಮನೆ, ಸಂಪಕಂಡ, ಕೊಳಗಿಬೀಸ್, ಹಾರೂಗಾರ ಮುಂತಾದ ಗ್ರಾಮೀಣ ಪ್ರದೇಶಗಳು ಕಾಮಗಾರಿಯಿಂದ ಬಾಧಿಸಲ್ಪಟ್ಟು ಭೂಕುಸಿತ, ನೆರೆಹಾವಳಿ ಹಾಗೂ ಮನೆ ತೋಟ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಶರಾವತಿ ಅಭಯಾರಣ್ಯ, ಅಘನಾಶಿನಿ- ಬೇಡ್ತಿ ಸಂರಕ್ಷಿತ ಪ್ರದೇಶ ಮತ್ತು ದಾಂಡೇಲಿ ಅಭಯಾರಣ್ಯಗಳ ವನ್ಯ ಜೀವಿಗಳ ಕಾರಿಡಾರ್ ಮತ್ತು ದಾಟುಸಾಲುಗಳು ಇಲ್ಲಿಯೂ ಇದೆ. ಆದ್ದರಿಂದ ಶಿರಸಿ-ಕುಮಟ ರಸ್ತೆ ಅಗಲೀಕರಣದಿಂದ ವನ್ಯಜೀವಿಗಳ ಸ್ವತಂತ್ರ ಓಡಾಟಕ್ಕೆ ತೀವ್ರ ಧಕ್ಕೆಯಾಗುವುದಲ್ಲದೇ ಪ್ರಾಣಿಗಳು ವಾಹನಗಳಿಗೆ ಡಿಕ್ಕಿ ಹೊಡೆದು ಸಾಯುವ ಪ್ರಮಾಣ ಹೆಚ್ಚುತ್ತದೆ. ವನ್ಯ ಪ್ರಾಣಿಗಳು ಅತಂತ್ರವಾಗುತ್ತವೆ.

ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ, ಮಂಗಳೂರಿನಿಂದ ಕಾರವಾರದವರೆಗೆ ಮಾತ್ರ ಅಗಲೀಕರಣ ಕಾರ್ಯ ಮಾಡಲಾಗಿದೆ. ಅಲ್ಲದೆ ನೆರೆಯ ಗೋವಾದಲ್ಲಿ ಅಗಲೀಕರಣ ಮಾಡುತ್ತಿಲ್ಲ. ಅದೇ ರೀತಿ ಬೆಂಗಳೂರು-ಹೊನ್ನಾವರ ಅಗಲೀಕರಣ ಸಂದರ್ಭದಲ್ಲೂ ಪರಿಸರ ಸೂಕ್ಷ್ಮ ಪ್ರದೇಶವಾದ ಗೇರುಸೊಪ್ಪಾದಲ್ಲಿ ಅಗಲೀಕರಣ ಕೈಬಿಟ್ಟು ಕಾಮಗಾರಿ ಮಾಡಲಾಗಿದೆ. ಈಗಾಗಲೇ ಈ ಪ್ರದೇಶದ ಸನಿಹದಲ್ಲಿ ಅಕ್ಕಪಕ್ಕದ ಹೊನ್ನಾವರವನ್ನು ಬೆಂಗಳೂರಿಗೆ ಜೋಡಿಸುವ ಮತ್ತು ಅಂಕೋಲ-ಯಲ್ಲಾಪುರ-ಹುಬ್ಬಳ್ಳಿಗಳನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿಗಳಿವೆ ಮತ್ತೇಕೆ ಇಲ್ಲಿ? ಇದರ ಅವಶ್ಯಕತೆ ಏನು? ಎಂದೂ ಪ್ರಶ್ನಿಸಲಾಗಿದೆ.

ಶಿರಸಿ- ಕುಮಟ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ವಿಷಯ ನನ್ನ ಗಮನಕ್ಕೆ ಬಂದಿದೆ. ಅಭಿವೃದ್ಧಿ ದೃಷ್ಟಿಯಿಂದ ಅಗಲೀಕರಣ ಅಗತ್ಯವಾಗಿದ್ದು ಇದಕ್ಕೆ ಪೂರಕವಾದ ಪರವಾನಿಗೆ ಸರಕಾರದಿಂದ ಸಹಕಾರ ನೀಡಲಾಗುವುದು.
– ಆರ್. ಶಂಕರ್, ಅರಣ್ಯ ಸಚಿವ

ಸಂಬಂಧಿಸಿದ ಇಲಾಖೆಗಳು ಏನು ಹೇಳುತ್ತವೆ?

ಇಷ್ಟೆಲ್ಲವೂ ಪರಿಸರ ಸಂಘಟನೆಗಳ ಅಹವಾಲಾದರೆ ಈ ಕಾಮಗಾರಿ ಅನುಷ್ಠಾನದ ಹಂತಕ್ಕೆ ಬಂದಿದ್ದರೂ ಕೇಂದ್ರ ಪರಿಸರ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ. ರಸ್ತೆ ಅಗಲೀಕರಣಕ್ಕೆ ಶಿರಸಿ, ಹೊನ್ನಾವರ, ಕಾರವಾರ ಅರಣ್ಯ ವಿಭಾಗಗಳಲ್ಲಿ ಎಷ್ಟು ಅರಣ್ಯ ನಾಶವಾಗಲಿದೆ ಎಂದು ಅಧ್ಯಯನ ನಡೆಸಿಲ್ಲ. 100 ಎಕರೆಗೂ ಹೆಚ್ಚು ಅರಣ್ಯ ಭೂಮಿ ಬಳಕೆಯಾಗುವುದರಿಂದ ಕೇಂದ್ರ ಪರಿಸರ ಮಂತ್ರಾಲಯದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಅರಣ್ಯ ಪ್ರದೇಶದಲ್ಲಿ ಅಗಲೀಕರಣ ಸಾಧ್ಯತೆ ಬಗೆಗೆ ವರದಿ ಪಡೆಯಲಾಗಿಲ್ಲ ಎಂಬುದನ್ನು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಇನ್ನುಳಿದಂತೆ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಿಗೂ ಈ ಕಾಮಗಾರಿ ಕುರಿತ ಸರಿಯಾದ ಮಾಹಿತಿ ಇಲ್ಲ. ಸ್ಥಳೀಯ ಜನರಿಗಷ್ಟೇ ಅಲ್ಲ ಜನಪ್ರತಿನಿಧಿಗಳಿಗೂ ಈ ಬಗ್ಗೆ ಅರಿವಿಲ್ಲ. ಈಗಾಗಲೇ 4 ಬಾರಿ ಸರ್ವೆ ಮಾಡಲಾಗಿದೆ ಎಂದು ಜನರೆನ್ನುತ್ತಾರೆ. ಸರ್ವೆಗೆ ಬಂದ ಸಿಬ್ಬಂದಿಗಳ ಬಳಿ ವಿಚಾರಿಸಿದಾಗಲೇ ಸ್ಥಳೀಯರಿಗೆ ಈ ರಸ್ತೆ ಕಾಮಗಾರಿ ನಡೆಯಲಿದೆ ಎಂದು ತಿಳಿದಿದೆಯಂತೆ! ಈ ಅಗಲೀಕರಣದಿಂದ ಹಲವು ಹಳ್ಳಿಗಳಲ್ಲಿ ಖಾಸಗೀ ಭೂಮಾಲಿಕರಿಗೆ ತೊಂದರೆಯಾಗಲಿದೆ. ಆದರೆ ಈ ವರೆಗೂ ಯಾರೂ ಈ ಕುರಿತು ಮಾತನಾಡಿಲ್ಲ. ಪ್ರತಿ ಹಳ್ಳಿಯ ರಸ್ತೆ ಬಂದು ಹೆದ್ದಾರಿಗೆ ಕೂಡುವ ಪ್ರದೇಶದಲ್ಲಿ ಅಗತ್ಯ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಡಬೇಕೆಂಬುದೂ ಸ್ಥಳೀಯರ ಅಹವಾಲು.

ಬದಲೀ ರಸ್ತೆ ದುಃಸ್ಥಿತಿ

ಇನ್ನು ಶಿರಸಿ-ಕುಮಟ ರಸ್ತೆ ಕಾಮಗಾರಿಗಾಗಿ ಬಂದು ಮಾಡಿದರೆ ವಾಹನಗಳು ಚಲಿಸಲು ಶಿರಸಿ- ಸಿದ್ದಾಪುರ-ಕುಮಟ ರಸ್ತೆಯಲ್ಲೇ ಬದಲಿ ವ್ಯವಸ್ತೆ ಮಾಡಬೇಕಾಗುತ್ತದೆ. ಈ ರಸ್ತೆಯಂತೂ ಇನ್ನಿಲ್ಲದಂತೆ ಹಾಳಾಗಿದ್ದು ಭಾರವಾದ ವಾಹನಗಳು ಚಲಿಸರಾದ ಸ್ಥಿತಿಯಲ್ಲಿದೆ. ಶಿರಸಿ- ಸಿದ್ದಾಪುರ ರಸ್ತೆಗಿಂತಲೂ ಸುಮಾರು 4- 5 ಪಟ್ಟು ಹೆಚ್ಚು ವಾಹನ ಭರಾಟೆ ಶಿರಸಿ-ಕುಮಟ ರಸ್ತೆಯಲ್ಲಿದೆ. ಈ ರಸ್ತೆಯನ್ನು ಬದಲಿ ರಸ್ತೆಯಾಗಿಸಿದರೆ ಹೆಚ್ಚುವ ವಾಹನ ದಟ್ಟಣೆ ಮತ್ತು ಒತ್ತಡವನ್ನು ಈ ರಸ್ತೆ ತಡೆದುಕೊಳ್ಳುವುದು ಅಸಾಧ್ಯ ಎನ್ನುವುದು ಸ್ಥಳೀಯರ ವಾದ. ಇದನ್ನು ಅಗತ್ಯಕ್ಕೆ ತಕ್ಕಂತೆ ರಿಪೇರಿ ಮಾಡಿ ಕ್ರಮ ಕೈಗೊಳ್ಳಲಾಗುವುದೇ? ಎಂಬ ಪ್ರಶ್ನೆಗೆ ಸಂಬಂಧಿಸಿದ ಇಲಾಖೆ ದಿವ್ಯ ಮೌನ ವಹಿಸಿದೆ.

ಸಿಡಿದೇಳಳುತ್ತಿದ್ದಾರೆ ಜನ

ಶಿರಸಿ ಮತ್ತು ಕುಮಟ ತಾಲೂಕುಗಳ ಹಲವು ಜನ ಮತ್ತು ಜನಸಂಘಟನೆಗಳು ಈ ಕಾಮಗಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿವೆ. ಅವರ ಹೋರಾಟ ತೀವ್ರತೆ ಪಡೆಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಬೇಡ್ತಿ- ಅಘನಾಶಿನಿ ಕಮೊಳ್ಳ ಸಂರಕ್ಷಣೆಗಾಗಿ ಬೀದಿಗಿಳಿದು ಪ್ರತಿಭಟಿಸಿ ಯಶಸ್ವಿಯಾಗಿ ಎಲ್ಲರಿಂದ ಹಸಿರು ಸ್ವಾಮಿಗಳೆಂದೆ ಗುರುತಿಸಲ್ಪಟ್ಟಿರುವ ಶಿರಸಿಯ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸ್ವಾಮೀಜಿ ದೇವಿಮನೆ ಘಟ್ಟ ಪ್ರದೇಶ ಹಾಗೂ ಸುತ್ತಮುತ್ತಲ ಅಮೂಲ್ಯ ಜೀವವೈವಿಧ್ಯ ರಕ್ಷಣೆಗೆ ಕರೆ ನೀಡಿದ್ದಾರೆ.

ಒಟ್ಟಾರೆ ಇದು ರಾಷ್ಟ್ರೀಯ ಸಾಗರಮಾಲಾ ಯೋಜನೆಯ ಒಂದು ಭಾಗವಾಗಿದ್ದರೂ ಸ್ಥಳಿಯರನ್ನು ಕತ್ತಲಲ್ಲಿಟ್ಟು ಗೊಂದಲವೆಬ್ಬಿಸಿರುವುದು ಅನುಮಾನಕ್ಕೆಡೆಮಾಡಿದೆ. ಈ ರಸ್ತೆ ಅಭಿವೃದ್ಧಿಯಾದಲ್ಲಿ ಅಗತ್ಯ ಸರಕು ಸಾಗಾಟ ಮತ್ತು ಪ್ರಯಾಣಿಕರ ಅನುಕೂಲಕ್ಕಿಂತ ಈ ಭಾಗದಲ್ಲಿ ಮೈನಿಂಗ್ ಮಾಫಿಯಾಕ್ಕೇ ಹೆಚ್ಚು ಅನುಕೂಲವಾಗಲಿದೆ ಎಂಬುದು ಜನಾಭಿಪ್ರಾಯ.