ಎಲ್ಲಾ ನೆಟ್‌ವರ್ಕ್‌ಗಳಲ್ಲೂ ‘ಪೋರ್ನ್‌’ ಬ್ಯಾನ್; ಕಡಿವಾಣಕ್ಕೆ ಮುಂದಾದ ಕೇಂದ್ರ ಸರಕಾರ
COVER STORY

ಎಲ್ಲಾ ನೆಟ್‌ವರ್ಕ್‌ಗಳಲ್ಲೂ ‘ಪೋರ್ನ್‌’ ಬ್ಯಾನ್; ಕಡಿವಾಣಕ್ಕೆ ಮುಂದಾದ ಕೇಂದ್ರ ಸರಕಾರ

ಜಿಯೊ ಮಾತ್ರವಲ್ಲ, ಇನ್ನು ಮುಂದೆ ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲೂ ಪೋರ್ನ್‌ ಸೈಟ್‌ಗಳು ನಿಷೇಧವಾಗಲಿವೆ.

ಕಳೆದ ಎರಡು ಮೂರು ದಿನಗಳಿಂದ ಟ್ವಿಟರ್‌, ರೆಡಿಟ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋರ್ನ್‌ ವೆಬ್‌ಸೈಟ್‌ಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ತಮ್ಮ ‘ನೆಚ್ಚಿನ’ ಪೋರ್ನ್‌ ವೆಬ್‌ಸೈಟ್‌ ತೆರೆದುಕೊಳ್ಳುತ್ತಿಲ್ಲ ಎಂದು ಹಲವರು ಅಲವತ್ತುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಇಂಟರ್‌ನೆಟ್‌ ಸೇವಾ ಕಂಪೆನಿಗಳು ನಮ್ಮ ನೆಟ್‌ವರ್ಕ್‌ನಲ್ಲಿ ಪೋರ್ನ್ ವೆಬ್‌ಸೈಟ್‌ಗಳ ಮೇಲೆ ನಿಷೇಧ ಹೇರಿರುವುದು.

ಮೂರು ವರ್ಷಗಳ ಹಿಂದೆಯೇ ಕೇಂದ್ರ ಸರಕಾರ 800ಕ್ಕೂ ಹೆಚ್ಚು ಪೋರ್ನ್‌ ಸೈಟ್‌ಗಳನ್ನು ನಿಷೇಧಿಸಿತ್ತು. ಸರಕಾರವೇನೋ ಪೋರ್ನ್‌ ಸೈಟ್‌ಗಳನ್ನು ನಿಷೇಧಿಸಿತ್ತು. ಆದರೆ, ಬಹುತೇಕ ಇಂಟರ್‌ನೆಟ್‌ ಸೇವಾದಾರರು (ಐಎಸ್‌ಪಿ), ಟೆಲಿಕಾಂ ಕಂಪನಿಗಳು ಪೋರ್ನ್‌ ಸೈಟ್‌ಗಳ ಮೇಲೆ ಬಳಕೆಯ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ. ಆದರೆ, ಇನ್ನು ಮುಂದೆ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳು ಪೋರ್ನ್‌ ಕಂಟೆಂಟ್‌ ಇರುವ ಎಲ್ಲಾ ವೆಬ್‌ಸೈಟ್‌ಗಳ ಮೇಲೆ ಕಡಿವಾಣ ಹಾಕಲು ಮುಂದಾಗಿವೆ.

ಕಳೆದ ಕೆಲ ದಿನಗಳ ಹಿಂದೆ ಜಿಯೊ ನೆಟ್‌ವರ್ಕ್‌ನಲ್ಲಿ ಪೋರ್ನ್‌ ಸೈಟ್‌ಗಳು ತೆರೆಯುತ್ತಿರಲಿಲ್ಲ. ಈ ಬಗ್ಗೆ ‘ಅಸಮಾಧಾನ’ಗೊಂಡ ಜಿಯೊ ಗ್ರಾಹಕರು ಏರ್‌ಟೆಲ್‌ ಇಲ್ಲವೇ ವೋಡಾಫೋನ್‌ ಸೇವೆ ಬಳಸುವ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಇನ್ನು ಮುಂದೆ ಆ ಟೆಲಿಕಾಂ ಕಂಪನಿಗಳೂ ಪೋರ್ನ್‌ ಸೈಟ್‌ಗಳನ್ನು ನಿಷೇಧಿಸಲಿವೆ.

ಪೋರ್ನ್‌ ಸೈಟ್‌ಗಳ ಮೇಲಿನ ಕಡಿವಾಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಹರಿದಾಟವೂ ಜೋರಾಗಿದೆ. ಹಲವರು ತಮ್ಮ ‘ವೇದನೆ’ಯನ್ನು ಮೀಮ್‌ಗಳ ಮೂಲಕ ಹರಿಬಿಟ್ಟಿದ್ದಾರೆ.

ಏಕಾಏಕಿ ತೀರ್ಮಾನವಲ್ಲ:

857 ಪೋರ್ನ್‌ ಸೈಟ್‌ಗಳ ನಿಷೇಧದ ಆದೇಶ ಸಮರ್ಪಕವಾಗಿ ಜಾರಿಯಾಗಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಉತ್ತರಾಖಂಡ ಹೈಕೋರ್ಟ್‌ ಕಳೆದ ತಿಂಗಳು ಸರಕಾರಕ್ಕೆ ಸೂಚನೆ ನೀಡಿತ್ತು. “ಪೋರ್ನ್‌ ಸೈಟ್‌ಗಳ ನಿರಂತರ ಬಳಕೆಯು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಸೈಟ್‌ಗಳನ್ನು ಲಭ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು” ಎಂದು ಹೈಕೋರ್ಟ್‌ ಆದೇಶಿಸಿತ್ತು.

ಇಂಟರ್‌ನೆಟ್‌ ಸೇವಾದಾರರು ಒಂದು ವೇಳೆ ಪೋರ್ನ್‌ ಸೈಟ್‌ಗಳನ್ನು ಬ್ಲಾಕ್‌ ಮಾಡದಿದ್ದರೆ ಆ ಸೇವಾದಾರರಿಗೆ ನೀಡಿರುವ ಲೈಸೆನ್ಸ್‌ ರದ್ದುಪಡಿಸಲು ಹೈಕೋರ್ಟ್‌ ನಿರ್ದೇಶನ ನೀಡಿತ್ತು. ನಿಯಮಗಳನ್ನು ಉಲ್ಲಂಘಿಸಿದರೆ ಇಂಟರ್‌ನೆಟ್ ಸೇವಾದಾರರ ಲೈಸೆನ್ಸ್‌ ರದ್ದು ಪಡಿಸಲು ಐಟಿ ಆಕ್ಡ್‌ 2000ರ ಸೆಕ್ಷನ್‌ 25ರಡಿ ಅವಕಾಶವಿದೆ.

ಆದೇಶ ಪಾಲನೆಗೆ ಮುಂದಾದ ಸರಕಾರ:

857 ಪೋರ್ನ್‌ ಸೈಟ್‌ಗಳ ಪೈಕಿ 30 ಪೋರ್ಟಲ್‌ಗಳಲ್ಲಿ ಆಕ್ಷೇಪಕಾರಿ ವಿಷಯಗಳಿಲ್ಲ ಎಂಬ ಕಾರಣಕ್ಕೆ ಉಳಿದ 827 ಪೋರ್ನ್‌ ಸೈಟ್‌ಗಳ ನಿಷೇಧಕ್ಕೆ ಸರಕಾರ ಈಗ ಕಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ 827 ಪೋರ್ನ್‌ ಸೈಟ್‌ಗಳನ್ನು ನಿಷೇಧಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯು ಟೆಲಿಕಾಂ ಇಲಾಖೆಗೆ ನಿರ್ದೇಶನ ನೀಡಿದೆ.

“ಉತ್ತರಾಖಂಡ ಹೈಕೋರ್ಟ್‌ ಆದೇಶ ಹಾಗೂ ಕೇಂದ್ರ ಸರಕಾರದ ಆದೇಶದಂತೆ 827 ಪೋರ್ನ್‌ ಸೈಟ್‌ಗಳನ್ನು ತಕ್ಷಣವೇ ನಿಷೇಧಿಸಲು ಇಂಟರ್‌ನೆಟ್‌ ಸೇವಾದಾರರಿಗೆ ನಿರ್ದೇಶನ ನೀಡಬೇಕು” ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯು ಟೆಲಿಕಾಂ ಇಲಾಖೆಗೆ ಕಳಿಸಿರುವ ಆದೇಶದಲ್ಲಿ ಸೂಚಿಸಿದೆ.

ಭಾರತದಲ್ಲಿ ಮಾತ್ರವಲ್ಲದೆ ಚೀನಾದಲ್ಲಿಯೂ ಪೋರ್ನ್‌ ಸೈಟ್‌ಗಳ ಮೇಲೆ ನಿಷೇಧ ಹೇರಲಾಗಿದೆ. ಚೀನಾದಲ್ಲಿ ಕಳೆದ ತಿಂಗಳಷ್ಟೇ ಪೋರ್ನ್‌ ಕಂಟೆಂಟ್‌ ಹೊಂದಿದ್ದ 4 ಸಾವಿರಕ್ಕೂ ಹೆಚ್ಚು ವೆಬ್‌ಸೈಟ್‌ಗಳನ್ನು ನಿಷೇಧಿಸಲಾಗಿತ್ತು. ಈ ನಿಷೇಧವೂ ಸೇರಿ ಚೀನಾದಲ್ಲಿ ಈವರೆಗೆ 22 ಸಾವಿರಕ್ಕೂ ಹೆಚ್ಚು ಪೋರ್ನ್‌ ಸೈಟ್‌ಗಳನ್ನು ನಿಷೇಧಿಸಿದಂತಾಗಿದೆ.

ಕೆನೆಡಿಯನ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿ ಜತೆಗೆ ಟೊರಂಟೊ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ ಕಂಟೆಂಟ್‌ ಬ್ಲಾಕ್‌ ಮಾಡಿದ ಜಗತ್ತಿನ 10 ದೇಶಗಳ ಪೈಕಿ ಭಾರತವೂ ಒಂದು ಎನ್ನಲಾಗಿದೆ. 2013ರಲ್ಲೇ ಪೋರ್ನ್‌ ಸೈಟ್‌ಗಳ ನಿಷೇಧದ ಘೋಷಣೆಯಾಗಿತ್ತು. ಕೆಲ ಕಾಲ ಈ ನಿಷೇಧ ಜಾರಿಯಲ್ಲೂ ಇತ್ತು. ಆದರೆ, ಕಾಲ ಕ್ರಮೇಣ ಪೋರ್ನ್‌ ಸೈಟ್‌ಗಳು ಮತ್ತೆ ಲಭ್ಯವಾಗತೊಡಗಿದ್ದವು.

ಪೋರ್ನ್‌ ಸೈಟ್‌ ನಿಷೇಧ ಮತ್ತೆ ಗಂಭೀರವಾಗಿದ್ದೇಕೆ?

ಡೆಹ್ರಾಡೂನ್‌ ಶಾಲೆಯಲ್ಲಿ ಇತ್ತೀಚೆಗೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಉತ್ತರಾಖಂಡ ಹೈಕೋರ್ಟ್‌, ಮಕ್ಕಳ ಮನಸ್ಸಿನ ಮೇಲೆ ಪೋರ್ನ್‌ ಸೈಟ್‌ಗಳು ಬೀರುತ್ತಿರುವ ದುಷ್ಪರಿಣಾಮ ಸಮಾಜದಲ್ಲಿ ಲೈಂಗಿಕ ಕಿರುಕುಳ ಹೆಚ್ಚಳಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿತ್ತು.

ಡೆಹ್ರಾಡೂನ್‌ ಶಾಲೆಯ ವಿದ್ಯಾರ್ಥಿನಿ ಮೇಲೆ ಆಕೆಯ ಹಿರಿಯ ಸಹಪಾಠಿಗಳು ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ವೇಳೆ ವಿದ್ಯಾರ್ಥಿನಿಯ ಹೇಳಿಕೆ ಈ ನಿಷೇಧ ಆದೇಶದ ಕಟ್ಟುನಿಟ್ಟಿನ ಜಾರಿಗೆ ಕಾರಣವಾಗಿದೆ. ಹಿರಿಯ ಸಹಪಾಠಿಗಳು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಮುನ್ನ ಮೊಬೈಲ್‌ನಲ್ಲಿ ಪೋರ್ನ್‌ ವಿಡಿಯೊಗಳನ್ನು ನೋಡುತ್ತಿದ್ದರು ಎಂದು ವಿಧ್ಯಾರ್ಥಿನಿ ಹೇಳಿಕೆ ನೀಡಿದ್ದಳು.

ಹೀಗಾಗಿ ಲೈಂಗಿಕ ದೌರ್ಜನ್ಯಗಳು ಕಡಿಮೆಯಾಗಬೇಕೆಂದರೆ ಪೋರ್ನ್‌ ಸೈಟ್‌ಗಳ ಮೇಲೆ ಕಡಿವಾಣ ಅಗತ್ಯ ಎಂದು ನ್ಯಾಯಪೀಠ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ರಾಜೀವ್‌ ಶರ್ಮಾ ಮತ್ತು ಮನೋಜ್‌ ತಿವಾರಿ ಅವರಿದ್ದ ನ್ಯಾಯಪೀಠವು ಎಲ್ಲಾ ಪೋರ್ನ್‌ ಸೈಟ್‌ಗಳನ್ನೂ ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಆದೇಶಿಸಿತ್ತು.

ಹೆಚ್ಚುತ್ತಿರುವ ಪೋರ್ನ್‌ ಸೈಟ್‌ ಬಳಕೆ:

ಪೋರ್ನ್‌ ಸೈಟ್‌ಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಜಗತ್ತಿನಾದ್ಯಂತ ಇಂಟರ್‌ನೆಟ್‌ ಲಭ್ಯತೆ ಹೆಚ್ಚಾದಂತೆ ಪೋರ್ನ್‌ ಸೈಟ್‌ಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವಂತೆ ಸಮೀಕ್ಷೆಗಳು. ಪುರುಷರು ಮಾತ್ರವಲ್ಲ ಪೋರ್ನ್‌ ಸೈಟ್‌ಗಳನ್ನು ಹುಡುಕುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪೋರ್ನ್‌ಹಬ್‌ ಸಮೀಕ್ಷೆಯ ಪ್ರಕಾರ 24.7 ಬಿಲಿಯನ್‌ ಬಳಕೆದಾರರು ‘ಮಹಿಳೆಯರಿಗಾಗಿ ಪೋರ್ನ್’ (porn for women) ಎಂಬ ಕೀವರ್ಡ್‌ಗಳಿಂದ ಪೋರ್ನ್‌ ಸೈಟ್‌ಗಳನ್ನು ತಡಕಾಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪೋರ್ನ್ ಸೈಟ್‌ ಬಳಸುವ ಮಹಿಳೆಯರ ಸಂಖ್ಯೆ ಈ ವರ್ಷ ಶೇಕಡ 359ರಷ್ಟು ಹೆಚ್ಚಾಗಿದೆ. ಸಾಮಾನ್ಯ ಬಳಕೆದಾರರ ಸಂಖ್ಯೆ ಶೇಕಡ 1,400ರಷ್ಟು ಹೆಚ್ಚಿದೆ ಎನ್ನುತ್ತದೆ ಪೋರ್ನ್‌ ಹಬ್‌ ಸಮೀಕ್ಷೆ. ಪೋರ್ನ್‌ ಸೈಟ್‌ ಬಳಸುವ ಮಹಿಳೆಯರ ಸಂಖ್ಯೆ ಜಾಗತಿಕವಾಗಿ ಶೇಕಡ 2.4ರಷ್ಟು ಹೆಚ್ಚಾಗಿದೆ ಎಂಬುದು ಹ್ಯಾಮ್‌ಸ್ಟರ್‌ ಸಮೀಕ್ಷೆಯ ಮಾಹಿತಿ.

ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಬಳಕೆದಾರರ ಸಂಖ್ಯೆ ಶೇಕಡ 23ರಷ್ಟು ಹೆಚ್ಚಾಗಿದ್ದರೆ, ಸೌದಿ ಅರೇಬಿಯಾದಲ್ಲಿ ಶೇಕಡ 11ರಷ್ಟು ಹೆಚ್ಚಿದೆ. ಆದರೆ, ಇದಕ್ಕೆ ವಿರುದ್ಧ ಎನ್ನುವಂತೆ ಚೀನಾ ಮತ್ತು ಆಸ್ಟ್ರೇಲಿಯಾದಲ್ಲಿ ಈ ಪ್ರಮಾಣ ಕಡಿಮೆಯಾಗಿದೆ. ಚೀನಾದಲ್ಲಿ ಪೋರ್ನ್‌ ಸೈಟ್‌ ನೋಡುವ ಮಹಿಳೆಯರ ಸಂಖ್ಯೆ ಶೇಕಡ 28ರಷ್ಟು ಕಡಿಮೆಯಾಗಿದ್ದರೆ, ಆಸ್ಟ್ರೇಲಿಯಾದಲ್ಲಿ ಶೇಕಡ 17ರಷ್ಟು ಕುಸಿದಿದೆ.