ಬಿಜೆಪಿ ರಾಜಕೀಯಕ್ಕೆ ಅಯ್ಯಪ್ಪನ ಬಳಕೆ; ಕೇರಳ ಪ್ರವೇಶಕ್ಕೆ ಶಬರಿಮಲೆ ‘ಮಾರ್ಗ’
COVER STORY

ಬಿಜೆಪಿ ರಾಜಕೀಯಕ್ಕೆ ಅಯ್ಯಪ್ಪನ ಬಳಕೆ; ಕೇರಳ ಪ್ರವೇಶಕ್ಕೆ ಶಬರಿಮಲೆ ‘ಮಾರ್ಗ’

ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ಉದ್ದೀಪಿಸಿ ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿಗೆ ಹೊಸದೇನೂ ಅಲ್ಲ.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶ ವಿಚಾರದಲ್ಲಿ ಕೇರಳದಲ್ಲಿ ‘ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ’ ಎಂಬ ಕಿಡಿ ಹೊತ್ತಿಸಿರುವ ಬಿಜೆಪಿ, ಶಬರಿಮಲೆ ‘ಮಾರ್ಗ’ವಾಗಿ ಕೇರಳ ಪ್ರವೇಶಿಸಿ ನೆಲೆ ಕಂಡುಕೊಳ್ಳುವ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಸುಪ್ರೀಂಕೋರ್ಟ್‌ ತೀರ್ಪು ಹೊರ ಬಿದ್ದ ಮರುದಿನದಿಂದಲೇ ಧಾರ್ಮಿಕ ನಂಬಿಕೆಗಳ ವಿಷಯದಲ್ಲಿ ಹಿಂದೂಗಳ ಭಾವನೆ ಕೆರಳುವಂತೆ ಮಾಡಿದ ಬಿಜೆಪಿ ಕೇರಳದಲ್ಲಿ ಬೃಹತ್‌ ಪ್ರತಿಭಟನೆಗಳನ್ನು ಆಯೋಜಿಸಿತ್ತು. ಅಯ್ಯಪ್ಪ ದೇಗುಲದ ಬೀಗ ತೆರೆಯುವ ಮುನ್ನವೇ ‘ಅಗತ್ಯ’ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಬಿಜೆಪಿಗೆ ಸದ್ಯ ಕೇರಳದಲ್ಲಿ ನೆಲೆ ನಿಲ್ಲಲು ಬೇಕಾದ ತಳಹದಿಯಂತೂ ತಕ್ಕಮಟ್ಟಿಗೆ ನಿರ್ಮಾಣವಾಗಿದೆ.

ಶನಿವಾರ ಕೇರಳದ ಕಣ್ಣೂರಿಗೆ ಭೇಟಿ ಕೊಟ್ಟಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಶಬರಿಮಲೆಯಲ್ಲಿ ಹಿಂಸಾಚಾರ ನಡೆಸಿದವರನ್ನು ಬೆಂಬಲಿಸಿ ಮಾತನಾಡಿದ್ದಾರೆ. ಹಿಂಸಾಚಾರ ನಡೆಸಿದ ಭಕ್ತರ ಸೋಗಿನ ಗೂಂಡಾಗಳ ಪರವಾಗಿ ಮಾತನಾಡಿರುವ ಅಮಿತ್‌ ಶಾ ಸರಕಾರ ಅವರನ್ನು ಬಂಧಿಸಿರುವುದು ತಪ್ಪು ಎಂದಿದ್ದಾರೆ.

Also read: ಶಬರಿಮಲೆ ಹಿಂಸಾಚಾರ; 2000 ಜನರ ವಿರುದ್ಧ ಪ್ರಕರಣ, 200 ಮಂದಿ ಬಂಧನ

“ಕೇರಳದಲ್ಲಿ ಈಗ ಧಾರ್ಮಿಕ ನಂಬಿಕೆಗಳು ಹಾಗೂ ರಾಜ್ಯ ಸರಕಾರದ ವಿರುದ್ಧ ಸಂಘರ್ಷ ಏರ್ಪಟ್ಟಿದೆ. ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ಇತರೆ ಸಂಘಟನೆಗಳಿಗೆ ಸೇರಿದ 2000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆದರೆ, ಬಿಜೆಪಿ ಭಕ್ತರ ಪರವಾಗಿ ಬಂಡೆಯಂತೆ ನಿಲ್ಲಲಿದೆ” ಎಂದಿದ್ದಾರೆ ಅಮಿತ್‌ ಶಾ.

“ಒಂದು ವೇಳೆ ಕೇರಳ ಸರಕಾರ ಭಕ್ತರ ನಂಬಿಕೆಗಳಿಗೆ ವಿರುದ್ಧವಾಗಿ ನಡೆದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು” ಎಂದಿರುವ ಅಮಿತ್‌ ಶಾ, ಬಿಜೆಪಿ ಪ್ರಾಯೋಜಿತ ಮತ್ತೊಂದು ಸುತ್ತಿನ ಹಿಂಸಾಚಾರದ ಸೂಚನೆ ನೀಡಿದ್ದಾರೆ.

“ಭಕ್ತರ ಬೆಂಬಲಕ್ಕೆ ನಾವಿದ್ದೇವೆ” ಎಂದು ಹೇಳುವ ಮೂಲಕ ಅಮಿತ್‌ ಶಾ ಶಬರಿಮಲೆಯಲ್ಲಿ ಹಿಂಸಾಚಾರ ನಡೆಸಿದ್ದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮುಂದೆ ನಡೆಯಲಿರುವ ಹಿಂಸಾಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಸಂದೀಪಾನಂದ ಗಿರಿ ಸ್ವಾಮೀಜಿ ಆಶ್ರಮಕ್ಕೆ ಬೆಂಕಿ
ಸಂದೀಪಾನಂದ ಗಿರಿ ಸ್ವಾಮೀಜಿ ಆಶ್ರಮಕ್ಕೆ ಬೆಂಕಿ

ಅಮಿತ್‌ ಶಾ ಕೇರಳಕ್ಕೆ ಭೇಟಿ ಕೊಡುವ ದಿನವೇ ತಿರುವನಂತಪುರದ ಸಂದೀಪಾನಂದ ಗಿರಿ ಸ್ವಾಮೀಜಿ ಆಶ್ರಮಕ್ಕೆ ಬೆಂಕಿ ಬಿದ್ದಿದೆ. ಸಂದೀಪಾನಂದ ಸ್ವಾಮೀಜಿ ಸುಪ್ರೀಂಕೋರ್ಟ್‌ ತೀರ್ಪಿನ ಪರವಾಗಿದ್ದರು. ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆಗೆ ಪ್ರವೇಶ ನೀಡಬೇಕೆಂದು ಅವರು ಹೇಳಿದ್ದರು.

ಅಮಿತ್‌‌ ಶಾ ಕೇರಳ ಭೇಟಿಗೂ ಮುನ್ನ ಆಶ್ರಮಕ್ಕೆ ಬೆಂಕಿ ಬಿದ್ದಿರುವುದು ಹಾಗೂ ಶಬರಿಮಲೆ ಹಿಂಸಾಚಾರದ ಬಳಿಕ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಕಾಕತಾಳೀಯವೇನೂ ಅಲ್ಲ. ಶಬರಿಮಲೆ ವಿಚಾರದಲ್ಲಿ ದೇವರ ಸ್ವಂತನಾಡಿನಲ್ಲಿ ನೆಲೆಯೂರಿ ಒಂದಂಕಿ ಇರುವ ಪಕ್ಷದ ಬಲ ಹೆಚ್ಚಿಸಿ ಅಧಿಕಾರಕ್ಕೆ ಬರುವ ಕನಸನ್ನು ಬಿಜೆಪಿ ಕಾಣುತ್ತಿದೆ.

ಅಂದಹಾಗೆ, ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ಉದ್ದೀಪಿಸಿ ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿಗೆ ಹೊಸದೇನೂ ಅಲ್ಲ. ಗುಜರಾತ್‌, ಉತ್ತರ ಪ್ರದೇಶಗಳಲ್ಲಿ ನಡೆಸಿದ ಕೋಮುವಾದಿ ಪ್ರಯೋಗಗಳನ್ನು ಬಿಜೆಪಿ ಈಗ ದೇಶದ ದಕ್ಷಿಣ ತುದಿಯಲ್ಲಿ ಮಾಡಲು ಹೊರಟಿದೆ.

ಶಬರಿಮಲೆಯಲ್ಲಿ ನಡೆದ ಗೂಂಡಾಗಿರಿ, ಅದಕ್ಕೂ ಮೊದಲು ನಡೆದ ಬೃಹತ್‌ ಪ್ರತಿಭಟನೆಗಳು, ಆಶ್ರಮಕ್ಕೆ ಬೆಂಕಿ, ಅಮಿತ್‌ ಶಾ ಭೇಟಿ ಇವೆಲ್ಲವೂ ಕೇರಳದಲ್ಲಿ ಕೋಮುದಳ್ಳುರಿಯ ರಿಹರ್ಸಲ್‌ಗಳಂತೆ ಕಾಣುತ್ತಿವೆ. ಕೇರಳದಲ್ಲಿ ಕಮ್ಯುನಿಷ್ಟ್ ಪಕ್ಷವನ್ನು ಕಿತ್ತೊಗೆಯಲು ಕಾಂಗ್ರೆಸ್‌ ಕೂಡಾ ಬಿಜೆಪಿ ಜತೆಗೆ ಕೈ ಜೋಡಿಸಿದೆ ಎಂಬ ಮಾತುಗಳೂ ಇವೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ ದೇವರ ಸ್ವಂತ ನಾಡಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಸಿಗಲು ಶಬರಿಮಲೆ ವಿಚಾರವೇ ಬುನಾದಿಯಾಗಲಿದೆ.

Also read: ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!