samachara
www.samachara.com
ಸಿಬಿಐ ಶಿಕಾರಿಯ ರೋಚಕ ಕತೆ | ಅಂಬಾನಿ ಕುಟುಂಬದ  ರಕ್ಷಣೆಗೆ  ಅಂದು ಅಟಲ್, ಇಂದು ಮೋದಿ!
COVER STORY

ಸಿಬಿಐ ಶಿಕಾರಿಯ ರೋಚಕ ಕತೆ | ಅಂಬಾನಿ ಕುಟುಂಬದ  ರಕ್ಷಣೆಗೆ ಅಂದು ಅಟಲ್, ಇಂದು ಮೋದಿ!

ಇಬ್ಬರು ಉದ್ಯಮಿಗಳು, ಇಬ್ಬರು ಪ್ರಧಾನ ಮಂತ್ರಿಗಳು, ಒಂದು ಬೃಹತ್ ಉದ್ಯಮ, ಒಂದು ದೇಶಭಕ್ತ ಪಕ್ಷ ಹಾಗೂ ದೇಶದ ಪ್ರಮುಖ ಸಂಸ್ಥೆ. ಇಷ್ಟು ಜನ ಪಾತ್ರಧಾರಿಗಳಿರುವ ಮರೆತು ಮುಂದುವರಿಯಲು ಸಾಧ್ಯವೇ ಇಲ್ಲದ ಕ್ರೂರ ಇತಿಹಾಸದ ಚಿತ್ರಣ ಇದು. 

ಅದು ಮುಂಬೈನ ಮೇಲ್ವರ್ಗದ ಜನ ವಾಸಿಸುವ ಕಫೆ ಪರೇಡ್‌ ಪ್ರದೇಶ. ನವೆಂಬರ್‌ 19, 1998. ಚುಮು ಚುಮು ಚಳಿಯ ಮುಂಜಾನೆ ಸರಿಯಾಗಿ 8 ಗಂಟೆ ಹೊತ್ತಿಗೆ ಕೇಂದ್ರ ತನಿಖಾ ದಳ (ಸಿಬಿಐ)ದ ಅಧಿಕಾರಿಗಳನ್ನು ಹೊತ್ತ ಅಂಬಾಸಿಡರ್‌ ಕಾರುಗಳು ಏರಿಯಾ ಪ್ರವೇಶಿಸಿದ್ದವು. ಈ ಪ್ರದೇಶದೊಳಕ್ಕೆ ಹೀಗೆ ದೇಶದ ಪ್ರಮುಖ ತನಿಖಾ ಸಂಸ್ಥೆಯ ಕಾರುಗಳು ಬರುವುದೇ ದೊಡ್ಡ ವಿಷಯ. ಅಂಥಹದ್ದರಲ್ಲಿ ಬಂದ ಕಾರುಗಳು ನಿಂತಿದ್ದು ‘ಸೀ ವಿಂಡ್‌’ ಎನ್ನುವ ಕಟ್ಟಡದ ಮುಂದೆ. ಕಾರಿನಿಂದ ಇಳಿದ ಅಧಿಕಾರಿಗಳು ಕಟ್ಟಡದ ಒಳಗೆ ಕಾಲಿಟ್ಟರು. ಹಿನ್ನೆಲೆಯಲ್ಲಿ ಅವರ ಬೂಟಿನ ಸದ್ದು ಕೇಳಿಸುತ್ತಿತ್ತು.

‘ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ.’ ಎಂಬ ಕಂಪನಿ ಆರಂಭವಾಗಿ 35 ವರ್ಷ ಕಳೆದರೂ ದೇಶದ ಒಬ್ಬನೇ ಒಬ್ಬ ಸರಕಾರಿ ಸಂಸ್ಥೆಯ ಅಧಿಕಾರಿ ಈ ಕಟ್ಟಡದ ಮೆಟ್ಟಿಲು ಹತ್ತಿರಲಿಲ್ಲ; ತನಿಖೆಗಾಗಿ. ಹೀಗಾಗಿ ಈ ಅಧಿಕಾರಿಗಳ ನಡೆ ಅಲ್ಲಿದ್ದವರನ್ನು ಹುಬ್ಬೇರಿಸಿತ್ತು. ಮೆಟ್ಟಿಲು ಹತ್ತಿದವರೇ ‘ಸರ್ಚ್‌ ಮತ್ತು ಸೀಜ್‌ ವಾರಂಟ್‌’ ಹಿಡಿದು ನೇರವಾಗಿ ಕೊನೆಯ ಮಹಡಿಯಲ್ಲಿದ್ದ ಧೀರೂಭಾಯಿ ಅಂಬಾನಿ ಅಪಾರ್ಟ್‌ಮೆಂಟ್‌ ಬಾಗಿಲು ಬಡಿದರು. ಬಾಗಿಲು ತೆಗೆದ ಹಿರಿಯ ಉದ್ಯಮಿ, ಎದುರಿಗೆ ಕರ್ತವ್ಯ ನೆರವೇರಿಸಲು ಬಂದಿದ್ದ ಸಿಬಿಐ ಹೆಸರು ಕೇಳಿ ದಂಗು ಬಡಿದಿದ್ದರು.

ಏಕಕಾಲ ಸಿಬಿಐ ರಿಲಯನ್ಸ್‌ ಸಂಸ್ಥೆಗೆ ಸೇರಿದ ಮುಂಬೈ ಮತ್ತು ದೆಹಲಿಯ ಕಚೇರಿಗಳು ಮತ್ತು ಕಂಪನಿಯ ಉನ್ನತ ಅಧಿಕಾರಿಗಳ ಮನೆಗಳ ಮೇಲೆ ಅಕ್ಷರಶಃ ಮುಗಿಬಿದ್ದಿತ್ತು. ಅವತ್ತಿಗೆ 13,000 ಕೋಟಿ ರೂಪಾಯಿಗಳ ಉದ್ಯಮ ಥರ ಥರ ನಡುಗಲು ಆರಂಭಿಸಿತ್ತು. ಮುಂದಿನ 8 ಗಂಟೆಗಳ ಕಾಲ ಕಚೇರಿಗಳಲ್ಲಿ, ಮನೆಗಳಲ್ಲಿ ಪರಿಶೀಲನೆ, ದಾಖಲೆಗಳ ವಶ, ವಿಚಾರಣೆ ನಡೆಯಿತು. ಯಾವ ಕೋನದಿಂದ ನೋಡಿದರೂ ಅವತ್ತಿಗೆ ಇದೊಂದು ಸಾಮಾನ್ಯ ದಾಳಿಯಾಗಿರಲಿಲ್ಲ. ಮೂರು ದಶಕದಲ್ಲಿ 13 ಸಾವಿರ ಕೋಟಿ ಸಾಮ್ರಾಜ್ಯ ಕಟ್ಟಿದ ಕಂಪನಿಯೊಂದಕ್ಕೆ ಸಿಬಿಐನ ಸಂಘಟಿತ ದಾಳಿ ನಡುಕ ಹುಟ್ಟಿಸಿತ್ತು. ಕಂಪನಿಯ ಮೂರುವರೆ ದಶಕದ ಚರಿತ್ರೆಯಲ್ಲಿ ಕೇವಲ ಮೂರು ಬಾರಿ ದಾಳಿಗಳು ನಡೆದಿತ್ತು. ಅವೆಲ್ಲವೂ ಚಿಲ್ಲರೆ ದಾಳಿಗಳಾದ್ದವು ಮತ್ತು ಆ ಕಾಲಕ್ಕೆ ಅಧಿಕಾರದಲ್ಲಿದ್ದವರು ಅವರನ್ನು ರಕ್ಷಿಸಿದ್ದರು.

Also read: ‘ದಿ ಪ್ರೈಮ್ ಮಿನಿಸ್ಟರ್ಸ್ ಆಫ್ ರಿಲಯನ್ಸ್ ಇಂಡಿಯಾ’: ಇಂದಿರಾ ಗಾಂಧಿಯಿಂದ ಮೋದಿವರೆಗೆ...!

ಸಿಬಿಐನ ಹಿಂದಿನ ದಾಳಿಗಳಿಗಿಂತ ಈ ದಾಳಿಯಲ್ಲಿ ಏನೋ ಒಂದು ವಿಶೇಷತೆ ಇತ್ತು. ಯಾವುದೇ ಅಪರಾಧ ಚಟುವಟಿಕೆ ಸಂಬಂಧ ಈ ದಾಳಿ ನಡೆದಿರಲಿಲ್ಲ. ಬದಲಿಗೆ ‘ಅಧಿಕೃತ ಗೌಪ್ಯತಾ ಕಾಯ್ದೆ’ಯ ಉಲ್ಲಂಘನೆ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. 1923ರಲ್ಲಿ ಜಾರಿಗೆ ಬಂದ ಬ್ರಿಟೀಷರ ಕಾಲದ ಈ ಕಾಯ್ದೆಯಲ್ಲಿ ಕಠಿಣ ನಿಯಮಗಳಿದ್ದವು. ಈ ಕಾನೂನಿನ ವೈಶಿಷ್ಟ್ಯವೆಂದರೆ, ತನಿಖಾ ಸಂಸ್ಥೆ ಅಗತ್ಯ ಬಿದ್ದರೆ ಯಾರನ್ನೇ ಆದರೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಬಹುದಿತ್ತು. ಬಂಧನವನ್ನೂ ನಡೆಸುವ, ಆರೋಪಿಯನ್ನು ಎಷ್ಟು ಕಾಲ ಬೇಕಾದರೂ ಕಸ್ಟಡಿಗೆ ಪಡೆದುಕೊಳ್ಳುವ ಸ್ವಾತಂತ್ರ್ಯವನ್ನು ಇದು ನೀಡುತ್ತಿತ್ತು. ಇದರ ಅಡಿಯಲ್ಲಿ ಬಂಧಿತರಾದವರಿಗೆ ಹೆಚ್ಚು ಕಡಿಮೆ ಯಾವುದೇ ಕಾನೂನು ಸೇವೆಗಳು ಸಿಗುವುದಿಲ್ಲ.

‘ಧೀರೂಬಾಯಿ ಅಂಬಾನಿ ಮತ್ತು ರಿಲಯನ್ಸ್‌ ಸರಕಾರದ ಅಧಿಕೃತ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ’ ಎಂಬ ಆರೋಪದ ಹಿನ್ನೆಲೆಯಲ್ಲಿ ಇಷ್ಟು ಕಠಿಣ ಕಾನೂನಿನ ಅಡಿಯಲ್ಲಿ ನಡೆದ ದಾಳಿ ಅದಾಗಿತ್ತು. ಎಂತವರಿಗೂ ನಡುಕು ಹುಟ್ಟಿಸಲು ಅಷ್ಟು ಸಾಕಾಗಿತ್ತು.

ಎಲ್ಲಾ ಕಾಲಕ್ಕೂ ಪ್ರಧಾನಿಗಳನ್ನು ತನ್ನ ಅಂಕೆಯಲ್ಲಿ ಇಟ್ಟುಕೊಂಡು ಬಂದ ರಿಲಯನ್ಸ್‌ ಸಂಸ್ಥೆಗೆ ಸರಕಾರಿ ದಾಖಲೆಗಳು ತಲುಪುತ್ತವೆ ಎಂಬುದು ಹೊಸ ವಿಚಾರವೇನೂ ಆಗಿರಲಿಲ್ಲ. ಬಜೆಟ್‌ ಕಾಪಿ, ಹಣಕಾಸು ಸಚಿವರು ಓದುವ ಮುನ್ನ ಅಂಬಾನಿ ಓದಿರುತ್ತಾರೆ ಎಂಬ ಮಾತುಗಳು ಅವತ್ತಿಗೆ ಚಾಲ್ತಿಯಲ್ಲಿದ್ದವು. ಆದರೆ ಇದನ್ನು ಪತ್ತೆ ಹಚ್ಚಲು ಯಾರೂ ಹೋಗಿರಲಿಲ್ಲ. ಆದರೆ ಮೊದಲ ಬಾರಿಗೆ ಅಂಥಹ ಗಟ್ಟಿ ತೀರ್ಮಾನ ತೆಗೆದುಕೊಂಡಿದ್ದರು ಸಿಬಿಐನ ಅಂದಿನ ಪ್ರಭಾರಿ ಮುಖ್ಯಸ್ಥ ತ್ರಿನಾಥ್‌ ಮಿಶ್ರಾ.

ಸಿಬಿಐ ಮಾಜಿ ಪ್ರಭಾರಿ ನಿರ್ದೇಶಕ ತ್ರಿನಾಥ್‌ ಮಿಶ್ರಾ
ಸಿಬಿಐ ಮಾಜಿ ಪ್ರಭಾರಿ ನಿರ್ದೇಶಕ ತ್ರಿನಾಥ್‌ ಮಿಶ್ರಾ
/ಇಂಡಿಯಾ ಟುಡೇ

ದಾಳಿ ನಡೆಸಿದ್ದು ತ್ರಿನಾಥ್‌ ಮಿಶ್ರಾ ನೇತೃತ್ವದ ಸಿಬಿಐ. ಅಷ್ಟೊತ್ತಿಗಾಗಲೇ ಮೇವು ಹಗರಣ, ಬೋಫೋರ್ಸ್‌ ಹಗರಣ, ಸಾಸಿವೆ ಎಣ್ಣೆ ಕಲಬೆರಕೆ ಪ್ರಕರಣ, ಮುಂಬೈ ಗಲಭೆ, ಶಿವಪುರಿ ವಿಗ್ರಹ ಕಳವು ಪ್ರಕರಣಗಳನ್ನು ತನಿಖೆಗೆ ಒಳಪಡಿಸಿ ಅಪರಾಧಿಗಳಲ್ಲಿ ನಡುಕ ಹುಟ್ಟಿಸಿದ್ದರು ಮಿಶ್ರಾ. ಅವರ ನೇತೃತ್ವದಲ್ಲಿ ಸಿಬಿಐ ಸಂಸ್ಥೆ ತನ್ನ ಕಚೇರಿಗೆ, ಬಾಸ್‌ ಮನೆಗೆ ಕಾಲಿಟ್ಟಿದೆ ಎಂಬುದು ಗೊತ್ತಾಗುತ್ತಿದ್ದಂತೆ ರಿಲಯನ್ಸ್‌ ಸಮೂಹಕ್ಕೆ ಕಾಲಡಿಯಲ್ಲಿ ನೆಲವೇ ಕುಸಿದಂಥ ಅನುಭವವಾಗಿತ್ತು.

ಮೊದಲಿಗೆ ದಾಳಿ ನಡೆದೇ ಇಲ್ಲ ಎಂದು ವಾದಿಸಿತು ರಿಲಯನ್ಸ್‌. ಆದರೆ ಉದ್ಯಮ ವಲಯ, ಮಾಧ್ಯಮ ವಲಯದಲ್ಲಿ ‘ರಿಲಯನ್ಸ್ ಮೇಲೆ ದಾಳಿ ನಡೆದಿದೆಯಂತೆ’ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿಯಾಗಿತ್ತು. ಕೊನೆಗೆ ಮರುದಿನ ಮುಂಜಾನೆ ರಿಲಯನ್ಸ್‌ ವಕ್ತಾರರು ‘ಹೌದು ದಾಳಿ ನಡೆದಿದೆ’ ಎಂದು ತಲೆ ಬಗ್ಗಿಸಿ ಒಪ್ಪಿಕೊಂಡರು. ‘ಔಟ್‌ಲುಕ್‌ ಇಂಡಿಯಾ ಮ್ಯಾಗಜಿನ್‌’ಗೆ ಅಂದು ಪ್ರತಿಕ್ರಿಯೆ ನೀಡಿದ್ದ ಸಿಬಿಐ ಅಧಿಕಾರಿಗಳು ‘ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂಬ ವಿವರಗಳನ್ನು ನೀಡಿದ್ದರು. ಅಷ್ಟೇ ಅಲ್ಲ, ಪ್ರಮುಖ ಸುಳಿವೊಂದನ್ನು ಇದೇ ಸಂದರ್ಭದಲ್ಲಿ ಅವರು ಬಿಟ್ಟುಕೊಟ್ಟಿದ್ದರು.

ಮಹತ್ವದ ಸುಳಿವು:

‘ರಿಲಯನ್ಸ್‌ ಪೆಟ್ರೋಲಿಯಂ’ ಮತ್ತು ‘ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌’ ನಡುವೆ ಒಪ್ಪಂದವೊಂದು ನಡೆದಿತ್ತು. ವರುಷಗಳ ಕಾಲ ಕಂಪನಿ ಲಾಭದಲ್ಲಿ ನಡೆಯಲು ಬೇಕಾದಷ್ಟು ಸರಕುಗಳನ್ನು ಈ ಒಪ್ಪಂದ ರಿಲಯನ್ಸ್‌ಗೆ ಒದಗಿಸಿತ್ತು. ಈ ಒಪ್ಪಂದದ ಹಿನ್ನೆಲೆಯಲ್ಲಿ ಏನೇನು ನಡೆದಿರಬಹುದು ಎಂಬುದನ್ನು ಪತ್ತೆಹಚ್ಚಲು ಸಿಬಿಐ ಈ ದಾಳಿ ನಡೆಸಿತ್ತು.

ಅಸಲಿಗೆ ಈ ಒಪ್ಪಂದ ನಡೆಯಲು, ಈ ಒಪ್ಪಂದದ ಮೂಲಕ ರಿಲಯನ್ಸ್‌ ಭರಪೂರ ಲಾಭ ಗಿಟ್ಟಿಸಲು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಕೆಲವು ಗೌಪ್ಯ ದಾಖಲೆಗಳು ರಿಲಯನ್ಸ್‌ ಕೈಗೆ ಸಿಕ್ಕಿದ್ದು ಕಾರಣವಾಗಿತ್ತು. ‘ಅಧಿಕೃತ ಗೌಪ್ಯತಾ ಕಾಯ್ದೆ’ಯಡಿಯಲ್ಲಿ ಬರುವ ಈ ದಾಖಲೆಗಳು ಅಂಬಾನಿ ಕೈಯಲ್ಲಿದ್ದವು.

ಈ ದಾಳಿಗೂ ಮೊದಲೇ ದೆಹಲಿಯಲ್ಲೊಂದು ತನಿಖೆ ಆರಂಭವಾಗಿತ್ತು. ಮೊದಲಿಗೆ ನವದೆಹಲಿಯಲ್ಲಿ ದೆಹಲಿ ಪೊಲೀಸರು ರೊಮೇಶ್‌ ಶರ್ಮಾ ಎಂಬಾತನನ್ನು ಬಂಧಿಸಿದ್ದರು. ಮುಂದೆ ಈತ ದಾವೂದ್‌ ಇಬ್ರಾಹಿಂ ಬಂಟ ಎಂದು ಗೊತ್ತಾಯಿತು. ಶರ್ಮಾನಿಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ವಿ. ಬಾಲಸುಬ್ರಮಣಿಯಂಗೂ ಸಂಬಂಧ ಇರುವ ದಾಖಲೆಗಳು ಪೊಲೀಸರಿಗೆ ಸಿಕ್ಕಿದ್ದವು. ಈ ದಾಖಲೆ ಜಾಡು ಹಿಡಿದ ಪೊಲೀಸರು ಅವತ್ತಿಗೆ ದೆಹಲಿಯ ಅಧಿಕಾರ ಕೇಂದ್ರದ ಕಾರಿಡಾರುಗಳಲ್ಲಿ ‘ಬಾಲು’ ಎಂದೇ ಜನಪ್ರಿಯನಾಗಿದ್ದ ಬಾಲಸುಬ್ರಮಣಿಯಂ ವ್ಯಕ್ತಿಯ ಮನೆ ಮೇಲೆ ಅಕ್ಟೋಬರ್‌ 28ರಂದು ದಾಳಿ ನಡೆಸಿದರು. ದೆಹಲಿಯಲ್ಲಿ ಅಂಬಾನಿ ಡೀಲ್‌ಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ನಡೆದ ದಾಳಿಯನ್ನು ರಿಲಯನ್ಸ್‌ ಸಹಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಹೀಗಿದ್ದೂ ಅವರ ಮನೆಯಲ್ಲಿ ಪೊಲೀಸರಿಗೆ ಏನೂ ಸಿಕ್ಕಿರಲಿಲ್ಲ.

ಆದರೆ, ಬಾಲು ಕಚೇರಿಗಳಿಗೆ ಕಾಲಿಟ್ಟು, ಅಲ್ಲಿನ ಡ್ರಾಯರ್‌ಗಳನ್ನು ತೆರೆದರೆ ಅಲ್ಲಿ ಅಸಲಿ ರಹಸ್ಯ ಅಡಗಿತ್ತು. ಸರಕಾರದ ಅಧಿಕೃತ ದಾಖಲೆಗಳು ಡ್ರಾಯರ್‌ಗಳಲ್ಲಿ ಭದ್ರವಾಗಿದ್ದವು. ಸರಳವಾಗಿ ಹೇಳುವುದಾದರೆ ಸಂಪುಟ ಸಚಿವಾಲಯಕ್ಕೆ ಸೇರಿದ ಆರ್ಥಿಕ ಸಚಿವಾಲಯದ ಉನ್ನತ ನಾಯಕರ ಸಭೆಯ 17 ಪುಟಗಳ ದಾಖಲೆಗಳು, ಹೂಡಿಕೆಗೆ ಸಂಬಂಧಿಸಿದ ಉನ್ನತ ಕಾರ್ಯದರ್ಶಿಗಳ ಸಭೆಯ ಇಂಚಿಂಚು ವಿವರಗಳು, ಪೆಟ್ರೋಲಿಯಂ ಕಾರ್ಯದರ್ಶಿ ಟಿ. ಎಸ್‌. ವಿಜಯ್‌ ರಾಘವನ್‌ ಅಂದು ಆದಾಯ ಇಲಾಖೆ ಕಾರ್ಯದರ್ಶಿ ಜಾವೇದ್‌ ಚೌಧರಿಗೆ ಬರೆದ ಗೌಪ್ಯ ಪತ್ರಗಳು ಅಲ್ಲಿದ್ದವು. ‘ಕಸ್ಟಮ್‌ ಡ್ಯೂಟಿ’ಗಳನ್ನು ಮರುರೂಪಿಸುವ ಅತ್ಯಂತ ಗಂಭೀರ ಮಾಹಿತಿಗಳನ್ನು ಇವು ಒಳಗೊಂಡಿತ್ತು. ಈ ಕಡತಗಳನ್ನು ಇಟ್ಟುಕೊಂಡಿದ್ದಲ್ಲದೇ ರಿಲಯನ್ಸ್‌ನ ಮುಂಬೈ ಹೆಡ್‌ ಆಫೀಸಿಗೆ ಫ್ಯಾಕ್ಸ್‌ ಕೂಡ ಮಾಡಲಾಗಿತ್ತು. ಕೆಲವು ಅಪರಿಚಿತ ಸಂಖ್ಯೆಗಳಿಗೂ ಫ್ಯಾಕ್ಸ್‌ ಮೂಲಕ ಮಾಹಿತಿ ರವಾನೆಯಾಗಿತ್ತು. ಆ ಸಂಖ್ಯೆಗಳು ಮುಂಬೈ ಮೂಲದ್ದಾಗಿದ್ದವು. ಬಿಡಿಸಿ ಹೇಳಲು ಇದರಲ್ಲಿ ಏನೂ ಇರಲಿಲ್ಲ. ಉದ್ಯಮಪತಿಯ ಬೆಳವಣಿಗೆಯ ಅಸಲಿ ರಹಸ್ಯ ಬಹಿರಂಗವಾಗಿತ್ತು.

ಇದರಲ್ಲಿ ಕೆಲವು ದಾಖಲೆಗಳು ರಿಲಯನ್ಸ್‌ ಪಾಲಿಗೆ ಉಪಯೋಗಕ್ಕೆ ಬರಲಿಲ್ಲವಾದರೂ, ಪೆಟ್ರೋಲಿಯಂಗೆ ಸಂಬಂಧಿಸಿದ ದಾಖಲೆಗಳು ಲಾಭದಾಯಕವಾಗಿದ್ದವು. ತಮ್ಮ ಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದಿಡಲು ಇವು ರಿಲಯನ್ಸ್‌ಗೆ ಸಹಾಯಕವಾಗಿತ್ತು. ಹೀಗಾಗಿ ಪ್ರಕರಣ ಗಂಭೀರತೆ ಪಡೆದುಕೊಂಡಿತ್ತು.

ಸಾಮ್ರಾಜ್ಯ ಮುಳುಗುವ ಆತಂಕ:

ತನ್ನ ಹುಟ್ಟಿನಿಂದ ಹಲವು ಸವಾಲುಗಳನ್ನು ಮೆಟ್ಟಿ ಮೇಲೆ ಬಂದಿತ್ತು ರಿಲಯನ್ಸ್‌. ಆದರೆ ಈ ಬಾರಿ ಸವಾಲು ಕಂಪನಿಯ ಹಡಗನ್ನೇ ಮುಳುಗಿಸುವ ಸಾಧ್ಯತೆ ಇತ್ತು. ಯಾವಾಗ ಬಾಲು ಹೆಸರು ರೊಮೇಶ್‌ ಶರ್ಮಾ ಜತೆ ತಳುಕು ಹಾಕಿಕೊಂಡಿತೋ ‘ಅವರಿಬ್ಬರ ಸಂಬಂಧ ವೈಯಕ್ತಿಕವಾದದ್ದು ಎಂದಿತು ರಿಲಯನ್ಸ್‌’. ಕಂಪನಿಗೆ ಬೇರೆ ಆಯ್ಕೆಗಳಿರಲಿಲ್ಲ. ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಇದಾಗಿ ಇನ್ನು ದಾಖಲೆಗಳಿಗೆ ಸಂಬಂಧಿಸಿದಂತೆ ತಪ್ಪಿಸಿಕೊಳ್ಳಲು ಇದ್ದ ಏಕೈಕ ಆಯ್ಕೆಯೆಂದರೆ ‘ಬಾಲು ಈ ದಾಖಲೆಗಳನ್ನು ಸಹ ವೈಯಕ್ತಿಕ ನೆಲೆಯಲ್ಲಿ ಸಂಗ್ರಹಿಸಿದ್ದಾರೆ’ ಎನ್ನುವುದು. ಆದರೆ ಇದನ್ನು ರಿಲಯನ್ಸ್‌ ಕೇಂದ್ರ ಕಚೇರಿಗೆ ಫ್ಯಾಕ್ಸ್‌ ಮಾಡಿಯಾಗಿತ್ತು.

ಮೊದಲೇ ಹೇಳಿದ ಹಾಗೆ, ರಿಲಯನ್ಸ್‌ಗೆ ಸರಕಾರಿ ದಾಖಲೆಗಳು ಎಲ್ಲರಿಗಿಂತ ಮೊದಲು ಬಂದು ತಲುಪುತ್ತಿದ್ದವು. ಇದಕ್ಕೆ ಸರಕಾರಿ ಅಧಿಕಾರಿಗಳ ಜಾಲವನ್ನೇ ಕಂಪನಿ ಸಾಕಿಕೊಂಡು ಬಂದಿತ್ತು. ಸರಕಾರದ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿದುಕೊಂಡು ತನ್ನ ಉದ್ಯಮದ ರಣತಂತ್ರಗಳನ್ನು ಕಂಪನಿ ರೂಪಿಸುತ್ತಿತ್ತು. ಎಲ್ಲಿಯವರೆಗೆ ಎಂದರೆ ಬಜೆಟ್‌ ಓದುವ ಮೊದಲು ಅದರಲ್ಲಿರುವ ಪ್ರಪೋಸಲ್‌ಗಳು ಅಂಬಾನಿಗೆ ತಿಳಿದಿರುತ್ತಿದ್ದವು. ಇದಕ್ಕೆಲ್ಲಾ ಅಧಿಕೃತ ದಾಖಲೆಗಳು ಈಗಷ್ಟೇ ಸಿಕ್ಕಿದ್ದವು. ಮತ್ತು ಇದು ಅಧಿಕೃತ ಗೌಪ್ಯ ಕಾಯ್ದೆಯಡಿಯಲ್ಲಿ ಬರುತ್ತವೆ ಎಂಬುದನ್ನು ಸರಕಾರ ಸುಲಭವಾಗಿ ನಿರೂಪಿಸಬಹುದಾಗಿತ್ತು. ಈಗ ಅಂಬಾನಿ ಸಾಮ್ರಾಜ್ಯ ನಿಜವಾದ ದೊಡ್ಡ ಸಮಸ್ಯೆಗೆ ಸಿಲುಕಿತು. ಇದಕ್ಕಿದ್ದ ಒಂದೇ ದಾರಿ ರಾಜಕೀಯ ಸಂಪರ್ಕಗಳ ಶಕ್ತಿ ಪ್ರದರ್ಶನ. ಇದಕ್ಕಾಗಿ ಅಂಬಾನಿ ತಮಗಿದ್ದ ಎಲ್ಲಾ ಪಟ್ಟುಗಳನ್ನೂ ಹಾಕಬೇಕಾಗಿತ್ತು.

ಮೊದಲಿಗೆ ಹಾದಿ ತಪ್ಪಿಸುವ ಕೆಲಸಕ್ಕೆ ಚಾಲ್ತಿ ನೀಡಿದರು ಅಂಬಾನಿ. ‘ಬಾಲು ಕಚೇರಿಯಲ್ಲಿ ದಾಖಲೆ ಸಿಕ್ಕಿ ಇಷ್ಟು ದಿನ ಬಿಟ್ಟು ಯಾಕೆ ದಾಳಿ ಮಾಡಿದ್ದು?’ ಎಂಬುದು ಅವರ ಮೊದಲ ವಾದವಾಗಿತ್ತು. ಎರಡನೆಯದ್ದು ‘ಇದರ ಹಿಂದೆ ವೈರಿಗಳಿದ್ದಾರೆ. ಇದು ಕಾರ್ಪೋರೇಟ್‌ ಯುದ್ಧ’ ಎಂದು ಕರೆಯಿತು ರಿಲಯನ್ಸ್‌.

ಹೀಗೊಂದು ಪದ ಪ್ರಯೋಗವಾಗುತ್ತಿದ್ದಂತೆ, ಮತ್ತೊಬ್ಬ ಉದ್ಯಮಿ ನುಸ್ಲಿ ವಾಡಿಯಾ ಹೆಸರು ಮೊದಲಿಗೆ ಕೇಳಿ ಬಂತು. ಅಂಬಾನಿ ಹಾಗೂ ನುಸ್ಲಿ ವಾಡಿಯಾರದ್ದು ಆಸಕ್ತಿಕರ ಕಥೆ. ಬಾಂಬೆ ಡೈಯಿಂಗ್‌ ಮುಖ್ಯಸ್ಥ ವಾಡಿಯಾ ಸುಮಾರು ಎರಡು ದಶಕದಿಂದ ರಿಲಯನ್ಸ್‌ ಜತೆ ಬಹಿರಂಗ ಸಮರದಲ್ಲಿದ್ದರು. ‘ಇತ್ತೀಚೆಗೆ ರಿಲಯನ್ಸ್‌ ಎಷ್ಟು ಬೆಳೆದು ನಿಂತಿದೆಯೆಂದರೆ ಅದರ ಲಾಭದಷ್ಟು ವ್ಯವಹಾರ ವಾಡಿಯಾಗೆ ಇಲ್ಲ. ಹೀಗಾಗಿ ಇಲ್ಲಿ ವೈರತ್ವದ ಪ್ರಶ್ನೆ ಬರುವುದಿಲ್ಲ,’ ಎಂದಿದ್ದರು ವಾಡಿಯಾ ಆಪ್ತ ಬಿಜೆಪಿ ಸಚಿವ ಜಯಂತ್‌ ಮಲ್ಹೋತ್ರಾ. ಆದರೆ ಬರ ಬರುತ್ತಾ ವಾಡಿಯಾ ತಮ್ಮ ಜತೆ ರತನ್‌ ಟಾಟಾರನ್ನು ಈ ಯುದ್ಧದೊಳಗೆ ಎಳೆದುಕೊಂಡಿದ್ದರು ಎಂಬುದು ಗೊತ್ತಿರದ ವಿಚಾರವೇನೂ ಆಗಿರಲಿಲ್ಲ.

ಟಾಟಾ ಮುಖ್ಯಸ್ಥ ರತನ್‌ ಟಾಟಾ ಮತ್ತು ಬಾಂಬೆ ಡೈಯಿಂಗ್‌ ಮುಖ್ಯಸ್ಥ ನುಸ್ಲಿ ವಾಡಿಯಾ
ಟಾಟಾ ಮುಖ್ಯಸ್ಥ ರತನ್‌ ಟಾಟಾ ಮತ್ತು ಬಾಂಬೆ ಡೈಯಿಂಗ್‌ ಮುಖ್ಯಸ್ಥ ನುಸ್ಲಿ ವಾಡಿಯಾ
/ಹಿಂದೂಸ್ಥಾನ್‌ ಟೈಮ್ಸ್‌

ಅವತ್ತಿಗೆ ರತನ್‌ ಟಾಟಾ ಮತ್ತು ವಾಡಿಯಾ ಹಾಗೂ ವಾಡಿಯಾ ಮತ್ತು ಕೇಶುಬ್‌ ಮಹೀಂದ್ರಾ ನಡುವಿನ ಫೋನ್‌ ಸಂಭಾಷಣೆಯೊಂದು ಸೋರಿಕೆಯಾಗಿತ್ತು. ‘ಟಾಟಾ ಟೀ’ಗೂ ಅಸ್ಸಾಂ ಬಂಡುಕೋರ ಸಂಘಟನೆ ‘ಊಲ್ಫಾ’ಗೂ ಇದ್ದ ಸಂಬಂಧದ ಬೆಗೆಗಿನ ಟೇಪ್‌ ಅದಾಗಿತ್ತು. ಈ ಟೇಪ್ ಸೋರಿಕೆ ಹಿಂದೆ ಇಬ್ಬರನ್ನೂ ಮುಜುಗರಕ್ಕೆ ಕೆಡವುವ ಅಂಬಾನಿ ತಂತ್ರವಿತ್ತು ಎಂಬ ಸುದ್ದಿ ಅಂದು ದಟ್ಟವಾಗಿ ಹರಡಿತ್ತು.

ಕಾರ್ಪೊರೇಟ್‌ ಯುದ್ಧವೇ ಆಗಿದ್ದರೆ ಅಲ್ಲಿ ಇರಬೇಕಾಗಿದ್ದ ಇನ್ನೊಂದು ಹೆಸರು ‘ಹಿಂದೂಜಾ’ಗಳದ್ದು. ರಿಲಯನ್ಸ್‌ನ ಸಂಸ್ಕರಣಾ ಘಟಕದಿಂದ ದೊಡ್ಡ ಪ್ರಮಾಣದ ಪೆಟ್ರೋಲನ್ನು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಖರೀದಿಸಲು ಮುಂದಾಗಿದ್ದು ಇವರ ಪಾಲಿಗೆ ಕಹಿ ಸುದ್ದಿಯಾಗಿತ್ತು. ಹೀಗಾಗಿ ಅವರು ಇದರ ಹಿಂದೆ ಇರಬಹುದು ಎಂಬ ಮಾತುಗಳು ಚಾಲ್ತಿಗೆ ಬಂದಿದ್ದವು.

ಆದರೆ ಅಂದಿನ ‘ಔಟ್‌ಲುಕ್‌’ ವರದಿ ಪ್ರಕಾರ, ರಿಲಯನ್ಸ್‌ ಮೇಲೆ ದಾಳಿ ನಡೆಸುವ ತೀರ್ಮಾನ ಸಿಬಿಐ ನಿರ್ದೇಶಕ ತ್ರಿನಾಥ್‌ ಮಿಶ್ರಾ ಅವರದಾಗಿತ್ತು. ಪ್ರಧಾನಿ ಆಪ್ತರ ಪ್ರಕಾರ, ರೇಡ್‌ ನಡೆಯುವ ಕೆಲವು ದಿನ ಮೊದಲು ತಮ್ಮ ಯೋಜನೆಗಳನ್ನು ಮಿಶ್ರಾ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಅಂದಿನ ಗೃಹ ಸಚಿವ ಎಲ್‌.ಕೆ. ಅಡ್ವಾಣಿ ಗಮನಕ್ಕೆ ತಂದಿದ್ದರು. ಆಗ ಅವರಿಬ್ಬರೂ ‘ಈ ದಾಳಿ ನಮಗೆ ಬೇಕಾಗಿಲ್ಲ’ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದರು. ಹೀಗಿದ್ದೂ ಮಿಶ್ರಾ ಪಟ್ಟು ಬಿಡದಾಗ, ‘ನಿನಗೆ ಏನನಿಸುತ್ತೋ ಮಾಡು’ ಎಂಬ ತಿರಸ್ಕಾರದ ಆದೇಶ ನೀಡಲಾಯಿತು.

ಇದಕ್ಕೆ ಕಾರಣವೂ ಇತ್ತು. 1997ರ ಡಿಸೆಂಬರ್‌ ನಂತರ ಸುಪ್ರೀಂ ಕೋರ್ಟ್‌ ಸಿಬಿಐಗೆ ಸಂಬಂಧಿಸಿದಂತೆ ಆದೇಶವೊಂದನ್ನು ನೀಡಿತ್ತು. ಹಿಂದಿನ ನಿರ್ದೇಶಕ ಆರ್. ಸಿ. ಶರ್ಮಾ ಅವಧಿ ವಿಸ್ತರಣೆಗೆ ಕೋರ್ಟ್‌ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಸಂಸ್ಥೆ ಜತೆ ಕಾದಾಟಕ್ಕಿಳಿಯಲು ಸರಕಾರ ಹೆದರುತ್ತಿತ್ತು. ‘ನಮಗೆ ಯಾಕೆ ಉಸಾಬರಿ’ ಎಂದು ಕೇಂದ್ರ ಸರಕಾರ ಸಾಗ ಹಾಕಿತ್ತು. ದಾಳಿ ನಡೆಸಲಿ, ದಾಳಿ ನಂತರ ‘ಮಿಶ್ರಾ ತಮ್ಮ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದಾರೆ’ ಎಂಬುದನ್ನು ಬಿಂಬಿಸಲು ವಾಜಪೇಯಿ ಆಪ್ತರು ಮುಂದಾಗಿದ್ದರು.

ಶರ್ಮಾ ಅಂದು ಯಾಕೆ ದಾಳಿ ನಡೆಸಿದರು ಎಂಬುದಕ್ಕೆಯೂ ಹಲವು ವಾದಗಳಿವೆ. ಅವತ್ತಿಗೆ ಅವರು ಕೇವಲ ಪ್ರಭಾರ ನಿರ್ದೇಶಕರಾಗಿದ್ದರು. ‘ಕೇಂದ್ರ ಜಾಗೃತ ಆಯೋಗ’ ಪೂರ್ಣ ಅವಧಿಗೆ ಕೆಲವು ತಿಂಗಳಲ್ಲೇ ನಿರ್ದೇಶಕರನ್ನು ನೇಮಿಸಲಿತ್ತು. ಈ ದಾಳಿ ಮೂಲಕ ಜನಪ್ರಿಯತೆ ಪಡೆದುಕೊಂಡು ಅದನ್ನು ಬೆನ್ನಿಗಿಟ್ಟುಕೊಂಡು ಪೂರ್ಣಾವಧಿ ನಿರ್ದೇಶರಾಗುವ ಕಾರ್ಯಸೂಚಿಯನ್ನು ಅವರು ಹೊಂದಿದ್ದರು ಎನ್ನಲಾಗಿತ್ತು.

ಶರ್ಮಾ ಪ್ರಾಮಾಣಿಕತೆ, ದಕ್ಷತೆ ಬಗ್ಗೆ ಯಾರಿಗೂ ಎಳ್ಳಷ್ಟೂ ಅನುಮಾನಗಳು ಇರಲಿಲ್ಲವಾದರೂ ಅಂಬಾನಿ ಮನೆ ಮೇಲೆ ದಾಳಿ ನಡೆಸುವುದು, ಬೆಡ್‌ ರೂಂಗೆ ನುಗ್ಗುವುದನ್ನು ಯಾವ ಸಿಬಿಐ ನಿರ್ದೇಶಕರು ಮಾಡಲಾರರು ಎಂಬುದು ಅಂದಿನ ವಾದವಾಗಿತ್ತು. ಹಾಗಾಗಿ ಇದಕ್ಕೆ ರಾಜಕೀಯ ಆಯಾಮ ಇರಲೇಬೇಕು ಎಂಬುದು ಚರ್ಚೆಯ ವಸ್ತುವಾಯಿತು.

ಈ ವಾದದ ಪ್ರಕಾರ ನೋಡಿದರೆ, ಸಿಬಿಐ ಪ್ರಧಾನಿ ಅಡಿಯಲ್ಲಿ ಬರುತ್ತಿತ್ತು. ಅಧಿಕೃತ ಗೌಪ್ಯತಾ ಕಾಯ್ದೆ ಗೃಹ ಸಚಿವಾಲಯದ ಕೆಳಗೆ ಬರುತ್ತದೆ. ಹೀಗಿರುವಾಗ ಆದೇಶ ಕೊಟ್ಟವರು ಯಾರು ಎಂಬ ಪ್ರಶ್ನೆ ಮತ್ತಷ್ಟು ಸಂಕೀರ್ಣವಾಯಿತು. ಹಾಗೆ ನೋಡಿದರೆ ಅಂಬಾನಿಗೆ ಬಿಜೆಪಿಯಲ್ಲಿ ವೈರಿಗಳೇನೂ ಇರಲಿಲ್ಲ. ಕಾಂಗ್ರೆಸ್‌ಗೆ ನಿಷ್ಟರಾಗಿದ್ದುಕೊಂಡೇ ಅವರು ಬಿಜೆಪಿಗೂ ನಿಯಮಿತವಾಗಿ ನೆರವು ನೀಡುತ್ತಾ ಬಂದಿದ್ದರು. ವಾಜಪೇಯಿ ಮತ್ತು ಅವ್ತತಿನ ಬಿಜೆಪಿಯ ಚಾಣಾಕ್ಷ ಪ್ರಮೋದ್‌ ಮಹಾಜನ್‌ಗೆ ತೀರಾ ಹತ್ತಿರದಲ್ಲಿದ್ದರು. 1995 ರಿಂದ 97ರ ಮಧ್ಯೆ ಮಾತ್ರ ಅವರು ಬಿಜೆಪಿ ಬಂಡಾಯ ನಾಯಕ ಶಂಕರ್‌ ಸಿನ್ಹಾ ವಘೇಕಲಾರಿಗೆ ಫಂಡ್‌ ಮಾಡಿ ಅಡ್ವಾಣಿ ಮುಖ ಕೆಂಪಗಾಗಿಸಿದ್ದರು. ಆದರೆ ಗುಜರಾತ್‌ ರಿಫೈನರಿಯನ್ನು ಅತ್ಯಂತ ವೇಗವಾಗಿ ಸ್ಥಾಪಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ಈ ಕಪ್ಪ ಕೊಡುವುದು ಅಂಬಾನಿಗೆ ಅನಿವಾರ್ಯವಾಗಿತ್ತು. ಮುಂದೆ ಪರಿಸ್ಥಿತಿ ಸುಧಾರಿಸಿ ಅಂಬಾನಿ ಕೇಸರಿ ಪಕ್ಷಕ್ಕೆ ಒಳ್ಳೆಯವರಾಗಿದ್ದರು.

ಬಿಜೆಪಿಯೊಳಗೆ ರಿಲಯನ್ಸ್‌ ಪರ ಬ್ಯಾಟ್‌ ಬೀಸುತ್ತಿದ್ದ ಧೀರೂಭಾಯಿ ಅಂಬಾನಿ ಆಪ್ತ ದಿವಂಗತ ಪ್ರಮೋದ್‌ ಮಹಾಜನ್‌
ಬಿಜೆಪಿಯೊಳಗೆ ರಿಲಯನ್ಸ್‌ ಪರ ಬ್ಯಾಟ್‌ ಬೀಸುತ್ತಿದ್ದ ಧೀರೂಭಾಯಿ ಅಂಬಾನಿ ಆಪ್ತ ದಿವಂಗತ ಪ್ರಮೋದ್‌ ಮಹಾಜನ್‌
/ರೆಡಿಫ್

ಈ ಸಂದರ್ಭದಲ್ಲಿ ಇದು ಚುನಾವಣೆ ಗೆಲ್ಲಲು ಬಿಜೆಪಿ ಮಾಡಿದ ತಂತ್ರ ಎಂಬುದಾಗಿ ವಿರೋಧ ಪಕ್ಷಗಳು ಕರೆದವು. ಇನ್ನೊಂದು ಕಡೆ ರೊಮೇಶ್‌ ಶರ್ಮಾ ಬಂಧನ ರಾಜಕಾರಣಿಗಳ ಬುಡಕ್ಕೆ ಬರುತ್ತದೆ ಎಂಬುದನ್ನು ತಪ್ಪಿಸಲು ಈ ದಾಳಿ ನಡೆಸಲಾಗಿದೆ ಎಂಬ ವಾದವೂ ಕೇಳಿ ಬರುತ್ತಿತ್ತು.

ಇವೆಲ್ಲಾ ವಾದ ಸರಣಿಯ ಮಧ್ಯೆ ರಿಲಯನ್ಸ್‌ ಮೇಲೆ ಇಂಥಹದ್ದೊಂದು ದಾಳಿ ನಡೆಯುತ್ತದೆ ಎಂಬ ಅನುಮಾನ ಎಲ್ಲರಿಗೂ ಇತ್ತು. ಮುಂಬೈ ಬಿಸಿನೆಸ್‌ ಪತ್ರಕರ್ತರ ವಲಯ, ಉದ್ಯಮಿಗಳ ವಲಯದಲ್ಲಿ ದಾಳಿಗಳು ನಡೆಯಬಹುದು ಎಂಬ ಗಾಳಿ ಸುದ್ದಿಗಳು ಹಬ್ಬಿದ್ದವು. ಕನಿಷ್ಠ ಮೂರು ದಿನಕ್ಕೂ ಮೊದಲು ಈ ಬಗ್ಗೆ ಖಚಿತ ವರ್ತಮಾನಗಳು ಕೇಳಿ ಬಂದಿದ್ದವು. ಒಂದೊಮ್ಮೆ ರಿಲಯನ್ಸ್‌ಗೆ ದಾಖಲೆಗಳನ್ನು ಮುಚ್ಚಿಡಬೇಕಿದ್ದರೆ ಅದಕ್ಕೆ ಸಾಕಷ್ಟು ಸಮಯವಿತ್ತು. ಆದರೆ ಅವರು ಯಾರೂ ಅಂಬಾನಿ ಮನೆ ಮೇಲೆ ದಾಳಿ ನಡೆಯಬಹುದು ಎಂದು ಅಂದುಕೊಂಡಿರಲೇ ಇಲ್ಲ. ಇದು ಸ್ವತಃ ರಿಲಯನ್ಸ್‌ ಸಮೂಹವನ್ನೇ ಅಚ್ಚರಿಗೆ ಕೆಡವಿತ್ತು.

ಒಂದು ಹಂತದಲ್ಲಿ ಧೀರೂಬಾಯಿ ಅಂಬಾನಿ, ಅವರ ಇಬ್ಬರು ಮಕ್ಕಳಾದ ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ ಬಂಧನಕ್ಕೂ ಸಿಬಿಐ ನಿರ್ದೇಶಕರು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸ್ವಷ್ಟವಾಗಿ ಅವಕಾಶ ನಿರಾಕರಿಸಿದ್ದರು. ಇದರ ನಡುವೆಯೇ ನಡೆದ ದಾಳಿ, ದಾಳಿ ನಂತರ ಸರಕಾರ ತೆಗೆದುಕೊಳ್ಳಬಹುದಾದ ತೀರ್ಮಾನಗಳು ಅವತ್ತಿಗೆ ಭಾರೀ ಕುತೂಹಲ ಸೃಷ್ಟಿಸಿತ್ತು. ರಿಲಯನ್ಸ್‌ ಸಮೂಹದ ಮೇಲಿನ ತನಿಖೆ ತಾರ್ಕಿಕ ಅಂತ್ಯ ತಲುಪಲಿದೆಯೇ ಎಂಬುದು ದೇಶ ಜನರ ಬಳಿ ಇದ್ದ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿತ್ತು.

ಆದರೆ ರಾಜಕೀಯ ಪ್ರಭಾವಗಳನ್ನು ಢಾಳಾಗಿ ಹೊಂದಿದ್ದ ರಿಲಯನ್ಸ್‌ಗೆ ಇಡೀ ತನಿಖೆಯನ್ನು ಹಳ್ಳ ಹಿಡಿಸಲು ತನ್ನದೇ ಆದ ಆಯ್ಕೆಗಳಿದ್ದವು. ಮೊದಲನೆಯದಾಗಿ ಬಾಲು ಕಚೇರಿಯಲ್ಲಿ ದಾಖಲೆಗಳು ಸಿಕ್ಕಾಗ ಅದಕ್ಕಿನ್ನೂ ಗೌಪ್ಯತೆಯ ಟ್ಯಾಗ್‌ ಸಿಕ್ಕಿರಲಿಲ್ಲ ಎಂದು ವಾದಿಸುವುದು. ರೈಡ್‌ ನಡೆದ ಎರಡು ವಾರದ ನಂತರ ಈ ದಾಖಲೆಗಳನ್ನು ಗೌಪ್ಯತೆಯ ಅಡಿಯಲ್ಲಿ ತರಲಾಗಿತ್ತು. ಅದನ್ನು ನಿರ್ಧರಿಸಲೆಂದು ಪ್ರಾಧಿಕಾರವಿದ್ದು ಇದು ದಾಳಿ ನಡೆಯುವ ಹೊತ್ತಿಗೆ ದಾಖಲೆಗಳನ್ನು ಗೌಪ್ಯತೆ ಅಡಿಯಲ್ಲಿ ತಂದಿರಲಿಲ್ಲ.

ರಿಲಯನ್ಸ್‌ ಸಂಸ್ಥೆಯ ನಡೆಗಳ ಬಗ್ಗೆ ಭಾರೀ ಕುತೂಹಲಗಳಿತ್ತು. ಆದರೆ ಅವತ್ತಿಗೆ ಒಂದು ಮಾತ್ರ ಸ್ಪಷ್ಟವಿತ್ತು. ಅಂಬಾನಿಗಳಿಗೆ ಕ್ಷಮಿಸುವ ಮತ್ತು ಮರೆಯುವ ಗುಣ ಇಲ್ಲವೇ ಇಲ್ಲ. ಅದು ಹಳೆಯದಿರಲಿ, ಹೊಸದಿರಲಿ, ಹೋರಾಡದೆ ಅವರು ಸುಮ್ಮನಿರುತ್ತಿರಲಿಲ್ಲ. ತಮ್ಮ ಬಾಸ್‌ ಧೀರೂಭಾಯಿ ಅಂಬಾನಿ ಮನೆ ಮೇಲೆಯೇ ದಾಳಿ ಮಾಡಿದ್ದು ರಿಲಯಲ್ಸ್‌ ಸಾಮ್ರಾಜ್ಯಕ್ಕೆ ಇನ್ನಿಲ್ಲದ ಅವಮಾನ ತಂದಿತ್ತು. ಈ ಬಾರಿ ತಾವೇ ಹಾಕಿಕೊಂಡಿದ್ದ ನಿಯಂತ್ರಣ ರೇಖೆಗಳನ್ನು ಅಂಬಾನಿಗಳು ಮೀರಲು ಸಜ್ಜಾಗಿದ್ದರು. ಸಮರದ ಕಹಳೆ ಊದಿಯೇ ಬಿಟ್ಟರು.

ದಾಳಿ ನಡೆದು ಕೇವಲ 45 ದಿನಗಳು ಕಳೆದಿತ್ತು. ಜನವರಿ 4, 1999ರಂದು ತ್ರಿನಾಥ್‌ ಮಿಶ್ರಾ ಸಿಬಿಐನಿಂದಲೇ ವರ್ಗಾವಣೆಗೊಂಡರು. ಸಿಬಿಐನ ಇತಿಹಾಸದಲ್ಲಿ ಮೊದಲ ಬಾರಿಗೆ ನಿರ್ದೇಶಕರನ್ನು ಅರ್ಧದಲ್ಲೇ ಹುದ್ದೆಯಿಂದ ತೆಗೆದು ಹಾಕುವ ಪರಿಪಾಠ ಹೀಗೆ ಆರಂಭವಾಯಿತು. ಇದಕ್ಕೆ ಚಾಲನೆ ಕೊಟ್ಟವರು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ.

ಇಂದು ಮೋದಿ:

ನರೇಂದ್ರ ಮೋದಿ - ಅನಿಲ್‌ ಅಂಬಾನಿ ಸಲುಗೆ
ನರೇಂದ್ರ ಮೋದಿ - ಅನಿಲ್‌ ಅಂಬಾನಿ ಸಲುಗೆ
/ರೆಡಿಫ್‌

ಈ ಘಟನೆ ಬಳಿಕ ನಿರ್ದೇಶಕರ ಅವಧಿ ಕನಿಷ್ಟ 2 ವರ್ಷಗಳಿರಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತು. ಹೀಗಿದ್ದೂ ಅಂದು ಧೀರೂಭಾಯಿ ಅಂಬಾನಿ ಬುಡ ಕಾದಿದ್ದ ಬಿಜೆಪಿ ಸರಕಾರ ಇಂದು ಅವರ ಪುತ್ರ ಅನಿಲ್‌ ಅಂಬಾನಿಯ ರಕ್ಷಣೆಗೆ ನಿಂತ ಆರೋಪ ಎದುರಿಸುತ್ತಿದೆ. ಪರಿಣಾಮ ಅಂಬಾನಿ ಪಾಲುದಾರರಾಗಿರುವ ರಫೇಲ್‌ ಯುದ್ಧ ವಿಮಾನ ಖರೀದಿಯ ಹಗರಣದ ತನಿಖೆಗೆ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ವಿಶೇಷ ಆಸಕ್ತಿ ತಾಳುತ್ತಿದ್ದಂತೆ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಅವತ್ತು ಎನ್‌ಡಿಎ ಅವಧಿಯಲ್ಲಿ ಸ್ವಾಯತ್ತ ಸಂಸ್ಥೆ ಸಿಬಿಐ ವಿಚಾರದಲ್ಲಿ ನಡೆದ ಹಸ್ತಕ್ಷೇಪ ಮುಂದಿನ ದಿನಗಳಲ್ಲಿ ನಾನಾ ರೀತಿಯಲ್ಲಿ ಅನುರಣಿಸುತ್ತಲೇ ಬಂದಿದೆ. ಆದರೆ ಮುಖ್ಯಸ್ಥರನ್ನೇ ಸ್ಥಾನದಿಂದ ಹೊರಗಿಡುವ ಪ್ರಯತ್ನ ಭಾರತದ ಇತಿಹಾಸದಲ್ಲಿ ನಡೆದಿರುವುದು ಕೇವಲ ಎರಡೇ ಸಾರಿ. ಒಂದು ವಾಜಪೇಯಿ ಅವಧಿಯಲ್ಲಿ, ಮತ್ತೊಂದು ಈಗ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ. ವಿಪರ್ಯಾಸ ಏನೆಂದರೆ, ಅವತ್ತಿಗೂ, ಇವತ್ತಿಗೂ ಎರಡೂ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಳಿಬರುತ್ತಿರುವ ಉದ್ಯಮದ ಹೆಸರು ‘ರಿಲಯನ್ಸ್ ಕೇರ್‌ ಆಫ್ ಅಂಬಾನೀಸ್’. ಇದು ಭಾರತದ ರಾಜಕೀಯ- ಉದ್ಯಮ ಇತಿಹಾಸದಲ್ಲಿ ಲಭ್ಯವಾಗುವ ಕ್ರೂರ ಅಧ್ಯಾಯ ಅಷ್ಟೆ.

ಪೂರಕ ಮಾಹಿತಿ: ಔಟ್‌ಲುಕ್.