‘ವ್ಹಾ ಮೋದಿಜಿ ವ್ಹಾ...’:  ಕೊನೆಗೂ ಸಿಬಿಐಗೆ ಮಧ್ಯರಾತ್ರಿ #ಮೀಟೂ ಮಾಡಿಸಿ ಬಿಟ್ರಿ!
COVER STORY

‘ವ್ಹಾ ಮೋದಿಜಿ ವ್ಹಾ...’: ಕೊನೆಗೂ ಸಿಬಿಐಗೆ ಮಧ್ಯರಾತ್ರಿ #ಮೀಟೂ ಮಾಡಿಸಿ ಬಿಟ್ರಿ!

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಪ್ರಧಾನಿ ಮೋದಿ ‘ನೀಲಿ ಕಣ್ಣಿನ ಹುಡುಗ’ ರಾಕೇಶ್ ಅಸ್ತಾನರನ್ನು ಒತ್ತಾಯದ ರಜೆಯ ಮೇಲೆ ಕಳುಹಿಸಿದೆ. ಸಧ್ಯಕ್ಕೆ ಕಡು ಭ್ರಷ್ಟ ಅಧಿಕಾರಿಯೊಬ್ಬರ ಕೈಗೆ ದೇಶದ ಪ್ರಮುಖ ತನಿಖಾ ಸಂಸ್ಥೆಯ ಚುಕ್ಕಾಣಿ ನೀಡಲಾಗಿದೆ.

ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ‘ಸಿಬಿಐ v/s ಸಿಬಿಐ’ ನಾಟಕದಲ್ಲಿ ಮಂಗಳವಾರ ಮಧ್ಯರಾತ್ರಿ ಹೊಸ ಅಂಕವೊಂದು ಆರಂಭವಾಗಿದೆ. ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾದ, ಪ್ರಧಾನಿ ಮೋದಿ ‘ನೀಲಿ ಕಣ್ಣಿನ ಹುಡುಗ’ ರಾಕೇಶ್ ಅಸ್ತಾನರನ್ನು ಕೇಂದ್ರ ಸರಕಾರ ಒತ್ತಾಯದ ರಜೆಯ ಮೇಲೆ ಕಳುಹಿಸಿದೆ. ಸಧ್ಯಕ್ಕೆ ಕಡು ಭ್ರಷ್ಟ ಅಧಿಕಾರಿಯೊಬ್ಬರ ಕೈಗೆ ದೇಶದ ಪ್ರಮುಖ ತನಿಖಾ ಸಂಸ್ಥೆಯ ಚುಕ್ಕಾಣಿ ನೀಡಲಾಗಿದೆ.

ಸಿಬಿಐ ತನ್ನ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ವಿರುದ್ಧವೇ ಎಫ್ಐಆರ್ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಚಿಂತನೆ ನಡೆಸಿದ್ದರು. ಸಿಬಿಐ ಕೇಂದ್ರ ಕಚೇರಿ ಮೇಲೆ ಸ್ವತಃ ಸಿಬಿಐ ದಾಳಿ ನಡೆಸಿದ ಬೆಳವಣಿಗಳೆಲ್ಲಾ ಇದರ ಹಿನ್ನೆಲೆಯಲ್ಲಿ ನಡೆದಿತ್ತು. ಹೀಗೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಬೆಳವಣಿಗೆಗಳು ಮಂಗಳವಾರ ತಾರಕಕ್ಕೇರಿದ್ದವು. ಇದೇ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಡರಾತ್ರಿ ನಿರ್ದೇಶಕ ವರ್ಮಾರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ. ವಿವಾದದ ಕೇಂದ್ರ ಬಿಂದು, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಸ್ತಾನಾರಿಗೂ ರಜೆ ನೀಡಿದ್ದಾರೆ.

ಸದ್ಯ ಸಿಬಿಐನ ಜಂಟಿ ನಿರ್ದೇಶಕ ಎಂ. ನಾಗೇಶ್ವರ್‌ ರಾವ್‌ಗೆ ತಾತ್ಕಾಲಿಕ ನೆಲೆಯಲ್ಲಿ ಸಂಸ್ಥೆಯ ಹೊಣೆ ಹೊತ್ತುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ವರ್ಮಾ ಅವರ ಕಚೇರಿ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸಲಾಗಿದ್ದು, ಕಚೇರಿಯನ್ನು ಸೀಲ್‌ ಹಾಕಿ ಮುಚ್ಚಲಾಗಿದೆ.

ಅಲೋಕ್‌ ವರ್ಮಾ ಅವಧಿ 2019ರ ಜನವರಿವರೆಗೆ ಇತ್ತು. ಅದಕ್ಕೂ ಮೊದಲೇ ಅವರನ್ನು ಇದೀಗ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಸಾಮಾನ್ಯವಾಗಿ ಸಿಬಿಐ ನಿರ್ದೇಶಕರಿಗೆ ಸುರಕ್ಷತೆಯ ಅಧಿಕಾರವಧಿಯನ್ನು ಅನುಭವಿಸಲು ಅವಕಾಶವಿರುತ್ತದೆ. ಅವರ ಮೇಲೆ ರಾಜಕೀಯ ಪ್ರಭಾವಗಳು ಬೀರಬಾರದು ಎಂಬ ಕಾರಣಕ್ಕೆ ಸೋ ಕಾಲ್ಡ್‌ ಸ್ವತಂತ್ರ ಸಂಸ್ಥೆಯಲ್ಲಿ ಹೀಗೊಂದು ವ್ಯವಸ್ಥೆ ಮಾಡಲಾಗಿದೆ. ಆದರೆ ಇದರ ನಡುವೆಯೇ ಅಲೋಕ್‌ ವರ್ಮಾರನ್ನು ರಜೆಯ ಮೇಲೆ ಕಳುಹಿಸಿರುವುದು ಸಿಬಿಐ ಅಧಿಕಾರಿಗಳನ್ನೇ ಅಘಾತಕ್ಕೆ ಕೆಡವಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ನವದೆಹಲಿಯಲ್ಲಿ ದಾಖಲಾದ ಎಫ್ಐಆರ್‌.

ಅಕ್ಟೋಬರ್‌ 15ರಂದು ಸಿಬಿಐ ಭ್ರಷ್ಟಾಚಾರ ಪ್ರಕರಣವೊಂದನ್ನು ಅಸ್ತಾನಾ ವಿರುದ್ಧ ದಾಖಲಿಸಿತ್ತು. ಹೇಳಿ ಕೇಳಿ ಅಸ್ತಾನಾ ಪ್ರಧಾನಿ ನರೇಂದ್ರ ಮೋದಿಯವರ ನೀಲಿ ಕಣ್ಣಿನ ಹುಡುಗ. ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿರುವ ಪ್ರಧಾನಿ ನಿರ್ದೇಶಕರನ್ನೇ ರಜೆ ಮೇಲೆ ಕಳುಹಿಸಿ ತಮ್ಮ ಗೆಳೆಯನನ್ನು ಮುಜುಗರದಿಂದ ತಪ್ಪಿಸಿದ್ದಾರೆ.

‘ಈ ಸಂಬಂಧ ಆದೇಶ ಹೊರಡಿಸಲಾಗಿದ್ದು ಜಂಟಿ ನಿರ್ದೇಶಕ ಎಂ. ನಾಗೇಶ್ವರ್‌ ರಾವ್‌ರಿಗೆ ತಾತ್ಕಾಲಿಕ ನೆಲೆಯಲ್ಲಿ ಸಿಬಿಐ ನಿರ್ದೇಶಕರ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ಬೆನ್ನಿಗೆ ಸಿಬಿಐ ಕೇಂದ್ರ ಕಚೇರಿಯನ್ನೇ ಮುಚ್ಚಲಾಗಿದೆ. ಯಾರಿಗೂ ಸಿಬಿಐ ಕಚೇರಿಗೆ ಪ್ರವೇಶ ನೀಡುತ್ತಿಲ್ಲ’ ಎಂದು ಪಿಟಿಐ ವರದಿ ಮಾಡಿದೆ.

ಸೋಮವಾರ ಸಿಬಿಐ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರ ನಡುವೆ ನಡೆಯುತ್ತಿದ್ದ ಸಂಘರ್ಷದ ಸಂಬಂಧ ಚರ್ಚೆ ಮಾಡಲು ವರ್ಮಾ ಮತ್ತು ಅಸ್ತಾನಾ ಇಬ್ಬರಿಗೂ ಪ್ರಧಾನಿ ಸಮನ್ಸ್‌ ನೀಡಿದ್ದರು. ಇದಕ್ಕೂ ಮೊದಲೇ ಮಂಗಳವಾರ ಅಸ್ತಾನಾ ಅವರ ಎಲ್ಲಾ ಜವಾಬ್ದಾರಿಗಳನ್ನು ಕಿತ್ತುಕೊಳ್ಳಲಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅಲೋಕ್‌ ವರ್ಮಾ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ.

ಪ್ರಧಾನಿ ನಿರ್ಧಾರ ಅಕ್ರಮ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ವಾದಿಸಿದ್ದು, ಇದನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದ್ದಾರೆ. ಇದೇ ಭೂಷಣ್‌ ಮಾಜಿ ಕೇಂದ್ರ ಸಚಿವರಾದ ಅರುಣ್‌ ಶೌರಿ ಮತ್ತು ಯಶವಂತ್‌ ಸಿನ್ಹಾ ಜತೆ ಸೇರಿ ರಫೇಲ್‌ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ನೀಡಿದ್ದರು. ಇದೀಗ ಅದೇ ಪ್ರಧಾನಿ ಸಿಬಿಐ ನಿರ್ದೇಶಕರನ್ನೇ ಬದಲಿಸಿದ್ದಾರೆ. ಯಾರು ಯಾರ ವಿರುದ್ಧ ಹೇಗೆ ತನಿಖೆ ನಡೆಸಬೇಕು ಎಂಬ ಗೊಂದಲ ನಿಮ್ಮನ್ನು ಕಾಡಿದ್ದರೆ ಅದಕ್ಕೆ ನಾವು ಜವಾಬ್ದಾರರಲ್ಲ.

ಯಾರು ಈ ಎಂ. ನಾಗೇಶ್ವರ್‌ ರಾವ್‌?

ಎಂ. ನಾಗೇಶ್ವರ್‌ ರಾವ್‌
ಎಂ. ನಾಗೇಶ್ವರ್‌ ರಾವ್‌
ಸವುಕ್ಕು

ಎಂ. ನಾಗೇಶ್ವರ್‌ ರಾವ್‌ ಎಂದ ತಕ್ಷಣ ನೆನಪಿಗೆ ಬರುವುದು ಭ್ರಷ್ಟಾಚಾರದ ಪ್ರಕರಣಗಳು. 1986ರ ಒಡಿಶಾ ಕೇಡರ್‌ ಐಪಿಎಸ್‌ ಅಧಿಕಾರಿಯಾಗಿರುವ ಅವರು ಇಂದು ಸಿಬಿಐ ನಿರ್ದೇಶಕರಾಗಿದ್ದಾರೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಅವರನ್ನು ಜಂಟಿ ನಿರ್ದೇಶಕರ ಸ್ಥಾನದಿಂದ ನಿರ್ದೇಶಕರ ಸ್ಥಾನಕ್ಕೆ ತಂದು ಕೂರಿಸಲಾಗಿದೆ.

ನಾಗೇಶ್ವರ್‌ ರಾವ್‌ ಈ ಹಿಂದೆ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪವನ್ನು ಹೊತ್ತುಕೊಂಡಿದ್ದಾರೆ. ಒಡಿಶಾದ ಅಗ್ನಿ ಶಾಮಕ ದಳದಲ್ಲಿದ್ದಾಗ ಯುನಿಫಾರ್ಮ್‌ ಖರೀದಿಯಲ್ಲಿ ಸುಮಾರು ಮೂರು ಕೋಟಿ ರೂಪಾಯಿ ಅಕ್ರಮ ಎಸಗಿದ ಆರೋಪವನ್ನು ಅವರು ಎದುರಿಸಿದ್ದರು.

‘ವಿಜಿಎನ್‌ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌’ ಮೇಲಿನ ಭ್ರಷ್ಟಾಚಾರ ಪ್ರಕರಣವನ್ನೂ ಹಳ್ಳ ಹಿಡಿಸಲು ಇದೇ ನಾಗೇಶ್ವರ್‌ ರಾವ್‌ ಕಾರಣ ಎಂಬುದಾಗಿ ತಮಿಳಿನ ಸವುಕ್ಕು ತನಿಖಾ ವದಿಯನ್ನು 2014ರಲ್ಲಿ ಪ್ರಕಟಿಸಿತ್ತು. ಈ ಸಂಬಂಧ ರಾವ್‌ ವಿರುದ್ಧವೇ ಸಿಬಿಐಗೆ ದೂರು ನೀಡಲಾಗಿತ್ತು. ವರದಿಯಲ್ಲಿ ಕಡು ಭ್ರಷ್ಟ ರಾವ್‌ ಸಿಬಿಐ ಮನೆ ಸೇರಲು ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಾರಣ ಎಂದು ಆರೋಪಿಸಲಾಗಿತ್ತು. ತನಿಖಾ ವರದಿಯಲ್ಲಿ ಹಲವು ಜಾಗಗಳನ್ನು ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮವಾಗಿ ಖರೀದಿ ಮಾಡಿದ ಗಂಭೀರ ಆರೋಪಗಳ ಸರಣಿಯನ್ನೇ ರಾವ್‌ ವಿರುದ್ಧ ಮಾಡಲಾಗಿತ್ತು.

ಅಂಥಹವರನ್ನು ಪ್ರಧಾನಿ ನರೇಂದ್ರ ಮೋದಿ ತಾತ್ಕಾಲಿಕ ನೆಲೆಯಲ್ಲಿ ದೇಶದ ಪ್ರಖ್ಯಾತ ತನಿಖಾ ಸಂಸ್ಥೆ ಸಿಬಿಐನ ನಿರ್ದೇಶಕರ ಜಾಗಕ್ಕೆ ಕೂರಿಸಿದ್ದಾರೆ. ಇದಲ್ಲವೇ ನಿಜವಾದ #ಮೀಟೂ!