samachara
www.samachara.com
ಸಿಬಿಐ ಕೇಂದ್ರ ಕಚೇರಿಯಲ್ಲಿ ಮಧ್ಯರಾತ್ರಿ ನಡೆದ ಮಹಾ ನಾಟಕದ ಇಂಚಿಂಚು ವಿವರ ಇಲ್ಲಿದೆ...
COVER STORY

ಸಿಬಿಐ ಕೇಂದ್ರ ಕಚೇರಿಯಲ್ಲಿ ಮಧ್ಯರಾತ್ರಿ ನಡೆದ ಮಹಾ ನಾಟಕದ ಇಂಚಿಂಚು ವಿವರ ಇಲ್ಲಿದೆ...

ರಾತ್ರಿ ಸುಮಾರು 12 ಗಂಟೆ 45 ನಿಮಿಷ. ಪೊಲೀಸರು ಬಂದು ಸಿಬಿಐ ಕಟ್ಟಡವನ್ನು ಸುತ್ತುವರಿಯಲು ಆರಂಭಿಸಿದರು. ನೋಡು ನೋಡುತ್ತಿದ್ದಂತೆ ಲೋಧಿ ರಸ್ತೆಯಲ್ಲಿದ್ದ ಸಿಬಿಐ ಕಟ್ಟಡದ ಸುತ್ತ ಖಾಕಿ ಪಡೆ ಸರ್ಪಗಾವಲು ವಿಧಿಸಿತು. 

ಇತ್ತ ದೇಶವಾಸಿಗಳು ಸವಿ ನಿದ್ದೆಗೆ ಜಾರಿದ್ದಾಗ ಅತ್ತ ದೆಹಲಿಯ ಕೇಂದ್ರ ತನಿಖಾ ದಳ (ಸಿಬಿಐ)ದ ಕಚೇರಿ ಮುಂದೆ ಮಂಗಳವಾರ ಮಧ್ಯ ರಾತ್ರಿ ‘ಮಹಾನಾಟಕ’ವೊಂದು ನಡೆದು ಹೋಗಿತ್ತು. ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಈ ನಾಟಕ ಯಾವ ಸಿನಿಮಾ ಕಥೆಗೂ ಕಡಿಮೆ ಇರಲಿಲ್ಲ. ಇಷ್ಟಕ್ಕೂ ಸಿಬಿಐ ವರ್ಸಸ್‌ ಸಿಬಿಐ ಮಹಾನಾಟಕ ನಡೆದಿದ್ದು ಹೇಗೆ ಎಂಬ ಇಂಚಿಂಚು ಮಾಹಿತಿಯನ್ನು ‘ಸಮಾಚಾರ’ ನಿಮಗಿಲ್ಲಿ ಕಟ್ಟಿಕೊಟ್ಟಿದೆ.

ಅದು ಮಧ್ಯರಾತ್ರಿ

ದೆಹಲಿಯ ಸಿಬಿಐ ಕಚೇರಿ ಮುಂದೆ ಮಾಧ್ಯಮಗಳ ದಂಡು ನೆರೆಯುವ ಹೊತ್ತಿಗೆ ಮಂಗಳವಾರ ಕಳೆದು ಬುಧವಾರ ಕಾಲಿಟ್ಟಿತ್ತು. ದೂರದಲ್ಲಿ ನಿಂತವರಿಗೆ ಸಿಬಿಐಗೆ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರಿಗೆ ಕಡ್ಡಾಯ ರಜೆ, ಜಂಟಿ ನಿರ್ದೇಶಕ ಎಂ. ನಾಗೇಶ್ವರ್‌ ರಾವ್‌ರನ್ನು ಸಿಬಿಐ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂಬುದಷ್ಟೇ ಕಿವಿ ಮೇಲೆ ಬೀಳುತ್ತಿದ್ದವು.

ರಾತ್ರಿ ಸುಮಾರು 12 ಗಂಟೆ 45 ನಿಮಿಷ. ಪೊಲೀಸರು ಬಂದು ಸಿಬಿಐ ಕಟ್ಟಡವನ್ನು ಸುತ್ತುವರಿಯಲು ಆರಂಭಿಸಿದರು. ನೋಡು ನೋಡುತ್ತಿದ್ದಂತೆ ಲೋಧಿ ರಸ್ತೆಯಲ್ಲಿದ್ದ ಸಿಬಿಐ ಕಟ್ಟಡದ ಸುತ್ತ ಖಾಕಿ ಪಡೆ ಸರ್ಪಗಾವಲು ಹಾಕಿತ್ತು.

1 ಗಂಟೆ ಸಮೀಪಿಸುತ್ತಿದ್ದಂತೆ ಪ್ರಧಾನ ಮಂತ್ರಿಗಳ ರಕ್ಷಣಾ ಸಲಹೆಗಾರ ಅಜಿತ್‌ ದೋವಲ್‌ ಪ್ರಧಾನ ಮಂತ್ರಿ ಕಾರ್ಯಾಲಯದ ಸಿಬ್ಬಂದಿಗಳಿಗೆ ಕಚೇರಿಗೆ ಬರುವಂತೆ ತುರ್ತು ಸೂಚನೆ ನೀಡಿದರು. ನೇಮಕಾತಿ ಆದೇಶಗಳನ್ನು ನೀಡುವ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡವರೇ ಕೆಲಸಕ್ಕೆ ಹಚ್ಚಿದರು. ‘ಸಿಬಿಐ ನಿರ್ದೇಶಕರನ್ನು ರಜೆಯ ಮೇಲೆ ಕಳುಹಿಸುವ ಆದೇಶ’ ಸಿದ್ಧಪಡಿಸುವಂತೆ ಹೇಳಿದರು.

ಕೆಲವೇ ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿಯ ಆದೇಶ ಹೊರಬಿತ್ತು. ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ, ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾರನ್ನು ರಜೆಯ ಮೇಲೆ ಕಳುಹಿಸಲಾಯಿತು. ನಿರ್ದೇಶಕರ ಹುದ್ದೆ ವಹಿಸಿಕೊಳ್ಳುವಂತೆ ಜಂಟಿ ನಿರ್ದೇಶಕ ಎಂ. ನಾಗೇಶ್ವರ್‌ ರಾವ್‌ (ಇವರ ಹಿನ್ನೆಲೆ ಕುರಿತು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ) ಅವರಿಗೆ ಸೂಚನೆ ನೀಡಲಾಯಿತು.

ಅಧಿಕಾರ ಸ್ವೀಕಾರ

ಗಂಟೆ ಮುಳ್ಳು 2ರ ಸಮೀಪ ಬಂದಿತ್ತು. ನಿಮಿಷದ ಮುಳ್ಳು 9ರಲ್ಲಿ ನಿಂತಿತ್ತು. ಎಂ. ನಾಗೇಶ್ವರ್‌ ರಾವ್‌ ಕಾರು ಹತ್ತಿಕೊಂಡು ತಮ್ಮ ಬೆಂಗಾವಲು ವಾಹನಗಳೊಂದಿಗೆ ಸಿಬಿಐ ಕೇಂದ್ರ ಕಚೇರಿಯತ್ತ ತೆರಳಿದರು. ಹೋದವರೇ ಅಧಿಕಾರ ಸ್ವೀಕರಿಸಿದರು. ಬೆನ್ನಿಗೆ ಅಸ್ತಾನಾ ಕಚೇರಿಗೂ ಬೀಗ ಹಾಕಿದರು.

ನಂತರ ತಮ್ಮ ಕಚೇರಿಯ ಕುರ್ಚಿಯಲ್ಲಿ ಆಸೀನರಾದ ರಾವ್‌ ಪೆನ್ನು ಕೈಗೆತ್ತಿಕೊಂಡರು. ಮಧ್ಯರಾತ್ರಿಯೇ ಎರಡು ಆದೇಶಗಳಿಗೆ ಸಹಿ ಗೀಚಿದರು. ಅಲೋಕ್‌ ವರ್ಮಾ ತಂಡದ ಅಧಿಕಾರಿಗಳಾದ ಎ.ಕೆ. ಶರ್ಮಾ ಮತ್ತು ಮನೀಷ್‌ ಸಿನ್ಹಾರನ್ನು ರಜೆ ಮೇಲೆ ಕಳುಹಿಸುವ ಪತ್ರಗಳು ಅವಾಗಿದ್ದವು. ಇವೆಲ್ಲಾ ಬೆಳವಣಿಗೆಗಳ ಬಳಿಕ ಅಧಿಕೃತವಾಗಿ ಅಲೋಕ್‌ ವರ್ಮಾ ಮತ್ತು ರಾಕೇಶ್‌ ಅಸ್ತಾನಾರಿಗೆ ಕಡ್ಡಾಯ ರಜೆಯ ಮೇಲೆ ತೆರಳುವ ಆದೇಶವನ್ನು ತಲುಪಿಸಲಾಯಿತು.

10 ಮತ್ತು 11ನೇ ಮಹಡಿಯಲ್ಲಿರುವ ಇವರುಗಳ ಕಚೇರಿಗಳ ಮೇಲೆ ದಾಳಿ ನಡೆಸಿದ ಬೆನ್ನಿಗೆ ಇಡೀ ಸಿಬಿಐ ಕಚೇರಿಗೆ ಬೀಗ ಜಡಿಯಲಾಯಿತು. ಸಿಬ್ಬಂದಿ, ಹೊರಗಿನವರ ಪ್ರವೇಶವನ್ನೇ ನಿರ್ಬಂಧಿಸಲಾಯಿತು. ವರದಿಗಳ ಪ್ರಕಾರ ಇಂದು ಮುಂಜಾನೆ ಕಚೇರಿ ಪ್ರವೇಶಿಸಲು ಬಂದ ಅಲೋಕ್‌ ವರ್ಮಾರನ್ನು ತಡೆ ಹಿಡಿಯಲಾಯಿತು. ಜತೆಗೆ ಅವರ ಚಾಲಕರನ್ನೂ ಹಿಂಪಡೆಯಲಾಗಿದೆ.

ಬೆಳಿಗ್ಗೆ ಕೆಲಸಕ್ಕೆ ಬಂದ ಸಿಬ್ಬಂದಿಗಳನ್ನೂ ಮಧ್ಯಾಹ್ನ ನಂತರ ಬರುವಂತೆ ತಿಳಿಸಲಾಗಿದೆ. ‘ಸದ್ಯ ವರ್ಮಾ ಮತ್ತು ಅಸ್ತಾನಾ ಕಚೇರಿಯತ್ತ ಒಬ್ಬರೇ ಒಬ್ಬರು ವ್ಯಕ್ತಿಯೂ ಸುಳಿದಾಡುತ್ತಿಲ್ಲ,’ ಎಂದು ಮೂಲಗಳು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸಿಬಿಐನ ನಿಯಂತ್ರಣಾಧಿಕಾರಿಯಾಗಿರುವ ಮುಖ್ಯ ಜಾಗೃತ ಆಯುಕ್ತ ಕೆ.ವಿ. ಚೌಧರಿ ಮಂಗಳವಾರ ಸಿಬಿಐನಲ್ಲಿ ನಡೆಯುತ್ತಿರುವ ತಿಕ್ಕಾಟದ ಬಗ್ಗೆ ಪ್ರಧಾನಿಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಅವರು ಅಲೋಕ್‌ ವರ್ಮಾ, ರಾಕೇಶ್ ಅಸ್ತಾನಾ ಮತ್ತು ಇನ್ನೂ ಹಲವರನ್ನು ರಜೆ ಮೇಲೆ ಕಳುಹಿಸುವಂತೆ ಶಿಫಾರಸ್ಸು ಮಾಡಿದ್ದರು. ಅವರಿಗೆ ಸಿಬಿಐ ಬೆಳವಣಿಗೆಗಳ ಬಗ್ಗೆ ವರದಿ ನೀಡುವಂತೆ ಸೋಮವಾರ ಪ್ರಧಾನಿ ಕಾರ್ಯಾಲಯ ಸೂಚನೆ ನೀಡಿತ್ತು. ಅದರಂತೆ ಅವರು ವರದಿ ನೀಡಿದ್ದರು.

ಮೋದಿಯ ‘ಸಿಬಿಐ ಗೇಟ್‌’

ಹೀಗೊಂದು ಮಧ್ಯರಾತ್ರಿ ಮಹಾನಾಟಕದ ಬೆನ್ನಿಗೆ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಕೇಂದ್ರದ ವಿರುದ್ಧ ಕೆಂಡ ಕಾರಿದ್ದಾರೆ. ನಿರ್ದೇಶಕ ವರ್ಮಾರನ್ನು ರಜೆಯ ಮೇಲೆ ಕಳುಹಿಸಿದ್ದ ತೀರ್ಮಾನ ಅಕ್ರಮ ಮತ್ತು ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.

ಅವರೀಗ ಅಧಿಕಾರಿಗಳ ವರ್ಗಾವಣೆಯನ್ನು ಮೋದಿಯ ‘ಸಿಬಿಐ ಗೇಟ್‌’ ಎಂದು ಕರೆದಿದ್ದಾರೆ. ಅಕ್ರಮವಾಗಿ ಅಲೋಕ್‌ ವರ್ಮಾರನ್ನು ಕಿತ್ತೊಗೆದ ನಂತರ ಅವರ ಜಾಗಕ್ಕೆ ಭ್ರಷ್ಟ ನಾಗೇಶ್ವರ್‌ ರಾವ್‌ರನ್ನು ಅಕ್ರಮ ದಾರಿಯಲ್ಲೇ ನೇಮಮಾಡಲಾಗಿದೆ. ಹೀಗೊಂದು ನೇಮಕದ ಬೆನ್ನಿಗೆ ಎಸಿಬಿ ತಂಡವನ್ನು ಅದರಲ್ಲೂ ಮುಖ್ಯವಾಗಿ ‘ಪ್ರಧಾನಿಯ ನೀಲಿ ಕಣ್ಣಿನ ಹುಡುಗ’ ಅಸ್ತಾನಾ (ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ) ಪ್ರಕರಣವನ್ನು ತನಿಖೆಗೆ ಒಳಪಡಿಸುತ್ತಿದ್ದ ಅಧಿಕಾರಿಗಳನ್ನು ವರ್ಗ ಮಾಡಲಾಗಿದೆ. ಇದು ಮೋದಿಯ ಸಿಬಿಐ ಗೇಟ್‌ ಎಂದು ಅವರು ಕಿಡಿಕಾರಿದ್ದಾರೆ.

ಇನ್ನೊಂದು ಕಡೆ ಅಲೋಕ್‌ ವರ್ಮಾ ತಮ್ಮನ್ನು ರಜೆ ಮೇಲೆ ಕಳುಹಿಸಿರುವ ಕೇಂದ್ರದ ತೀರ್ಮಾನವನ್ನು ಪ್ರಶ್ನಿಸಿ ಇಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಪೀಠದ ಮುಂದೆ ಅವರ ವಕೀಲ ಗೋಪಾಲ್‌ ಶಂಕರನಾರಾಯಣನ್‌ ಮನವಿ ಮಾಡಿಕೊಂಡಿದ್ದರು. ಆದರೆ ಸುಪ್ರೀಂ ಕೋರ್ಟ್‌ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 26ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಸದ್ಯ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪು ಮಹತ್ವ ಪಡೆದುಕೊಂಡಿದೆ ಮತ್ತು ಕುತೂಹಲ ಹುಟ್ಟಿಸಿದೆ. ಇಷ್ಟಕ್ಕೂ ಮಧ್ಯರಾತ್ರಿ ಕೇಂದ್ರ ಸರಕಾರ ತರಾತುರಿಯಲ್ಲಿ ತನ್ನ ಅಧಿಕಾರವನ್ನು ಈಮಟ್ಟಿಗೆ ಬಳಸಿದ್ದಾದರೂ ಯಾಕೆ? ಮಹಾ ನಾಟಕವೊಂದನ್ನು ರಾಜಧಾನಿಯಲ್ಲಿ ನಡೆಸಿದ್ದಾದರೂ ಯಾಕೆ? ಉತ್ತರ ಊಹೆಗೆ ಬಿಟ್ಟಿದ್ದು.

ಆದರೆ, ಸದ್ಯ ರಜೆಯ ಮೇಲೆ ಕಳುಹಿಸಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಇತ್ತೀಚೆಗಷ್ಟೆ ರಫೇಲ್ ಡೀಲ್ ಸಂಬಂಧ ಮಾಹಿತಿ ಕೋರಿದ್ದರು ಎಂಬ ಸುದ್ದಿ ಹೊರಬಿದ್ದಿದೆ, ಅಷ್ಟೆ.