‘ಉಚಿತ ಉಡುಗೊರೆ’ಗಳಲ್ಲೇ ಮಗಳ ಅದ್ಧೂರಿ ಮದುವೆ, ಇದು ರಾಕೇಶ್‌ ಅಸ್ತಾನಾ ‘ಬುದ್ಧಿವಂತಿಕೆ’
COVER STORY

‘ಉಚಿತ ಉಡುಗೊರೆ’ಗಳಲ್ಲೇ ಮಗಳ ಅದ್ಧೂರಿ ಮದುವೆ, ಇದು ರಾಕೇಶ್‌ ಅಸ್ತಾನಾ ‘ಬುದ್ಧಿವಂತಿಕೆ’

‘ಉಡುಗೊರೆ’ ರೂಪದಲ್ಲಿ ಮದುವೆಗೆ ಸೇವೆ ನೀಡಿದವರಲ್ಲಿ ಉದ್ಯಮಿ ಚೇತನ್‌ ಸಂದೇಸರ ಕೂಡ ಒಬ್ಬರು. ಬ್ಯಾಂಕ್‌ಗೆ 5,000 ಕೋಟಿ ರೂ. ಸಾಲ ಕಟ್ಟದೆ ಸುಸ್ತಿದಾರರಾಗಿರುವ ಹಿನ್ನೆಲೆ ಇವರಿಗಿದ್ದು, ಸ್ವತಃ ಸಿಬಿಐ ಇವರ ವಿರುದ್ಧ ತನಿಖೆ ನಡೆಸುತ್ತಿದೆ.

2016ರಲ್ಲಿ ವಡೋದರದಲ್ಲಿ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಮಗಳ ಮದುವೆ ನಡೆದಿತ್ತು. ಅದ್ಧೂರಿಯಾಗಿ ನಡೆದಿದ್ದ ಈ ಮದುವೆಗೆ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಸ್ವತಃ ಸಿಬಿಐ ಅನ್ನು ಕಾಡುತ್ತಿದೆ. ಇದೇ ಅನುಮಾನದಲ್ಲಿ ತನಿಖೆಗೆ ಇಳಿದಾಗ ಹಲವು ಅಚ್ಚರಿಯ ಮಾಹಿತಿಗಳು ಹೊರಬಿದ್ದಿವೆ.

ತನಿಖೆಗೆ ಇಳಿದ ಸಿಬಿಐ ಮೊದಲು ಮದುವೆ ಆಯೋಜನೆಯಲ್ಲಿ ಪಾಲ್ಗೊಂಡಿದ್ದ 12 ಜನ ಬೇರೆ ಬೇರೆ ಉದ್ಯಮಿಗಳಿಗೆ ಪ್ರಶ್ನೆಗಳನ್ನು ಕೇಳಿದೆ. ಇದಕ್ಕೆ ನಾಲ್ವರು ಮಾತ್ರ ಉತ್ತರ ನೀಡಿದ್ದಾರೆ. ಇವರಲ್ಲಿ ಮೂವರು ತಾವು ಮದುವೆಗೆ ಲಕ್ಷಾಂತರ ರೂಪಾಯಿ ವೆಚ್ಚದ ಸೌಲಭ್ಯಗಳನ್ನು ‘ಉಡುಗೊರೆ’ ರೂಪದಲ್ಲಿ ನೀಡಿದ್ದೆವು ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಸಿಬಿಐ ನಿರ್ದೇಶಕ ಎ.ಕೆ. ಶರ್ಮಾ ಕೈಕೆಳಗಿರುವ ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ ನಡೆಸಿದ ತನಿಖೆಯಲ್ಲಿ ಈ ಅಂಶಗಳು ಬಯಲಾಗಿವೆ.

ಹೀಗೆ ಉಡುಗೊರೆ ರೂಪದಲ್ಲಿ ಸೇವೆ ನೀಡಿದವರಲ್ಲಿ ಉದ್ಯಮಿ ಚೇತನ್‌ ಸಂದೇಸರ ಕೂಡ ಒಬ್ಬರು. ಬ್ಯಾಂಕ್‌ಗೆ 5,000 ಕೋಟಿ ಸಾಲ ಕಟ್ಟದೆ ಸುಸ್ತಿದಾರರಾಗಿರುವ ಹಿನ್ನೆಲೆ ಇವರಿಗಿದ್ದು, ಸ್ವತಃ ಸಿಬಿಐ ಇವರ ವಿರುದ್ಧ ತನಿಖೆ ನಡೆಸುತ್ತಿದೆ. ಆದರೆ ಅವರು ಮದುವೆ ಸಮಯದಲ್ಲಿ ಮಾತ್ರ ಆರೋಪಿಯಾಗಿರಲಿಲ್ಲ.

ಒಟ್ಟು ಎರಡು ದಿನಗಳ ಕಾಲ 2016ರಲ್ಲಿ ಮದುವೆ ನಡೆದಿತ್ತು. ಮದುವೆಗೆಂದೇ ಲಕ್ಷ್ಮೀ ವಿಲಾಸ್‌ ಪ್ಯಾಲೆಸ್‌, ಹೋಟೆಲ್‌ ಎಕ್ಸ್‌ಪ್ರೆಸ್‌ ಟವರ್ಸ್‌, ಸನ್‌ಸಿಟಿ ಕ್ಲಬ್‌ ಮತ್ತು ರೆಸಾರ್ಟ್‌ ಮತ್ತು ಸೂರ್ಯ ಪ್ಯಾಲೇಸ್‌ ಹೋಟೆಲ್‌ ಬುಕ್‌ ಮಾಡಲಾಗಿತ್ತು. ಇದರಲ್ಲಿ ಹೆಚ್ಚಿನವರು ಅಸ್ತಾನಾ ಕಡೆಯಿಂದ ಹಣವನ್ನು ತೆಗೆದುಕೊಂಡಿಲ್ಲ. ಬದಲಿಗೆ ಉಡುಗೊರೆ ರೂಪದಲ್ಲಿ ಸಿಬಿಐ ವಿಶೇಷ ನಿರ್ದೇಶಕ ಕುಟುಂಬಸ್ಥರಿಗೆ ಉಚಿತ ‘ಆತಿಥ್ಯ’ ನೀಡಿದ್ದಾರೆ. ಉಳಿದವರಿಗೆ ಚೆಕ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿ ಮಾಡಲಾಗಿದೆ.

ಮದುವೆ ನಿಮಿತ್ತ ಮದರಂಗಿ ಕಾರ್ಯಕ್ರಮ ನವೆಂಬರ್ 24ರಂದು ನಡೆದಿತ್ತು. ಇದು ಚೇತನ್‌ ಸಂದೇಸರ ಫಾರ್ಮ್‌ ಹೌಸ್‌ನಲ್ಲಿ ನಡೆದಿತ್ತು. ಈ ಸಂಗೀತ್ ಕಾರ್ಯಕ್ರಮಕ್ಕೆ ಹೋಟೆಲ್‌ ಎಕ್ಸ್‌ಪ್ರೆಸ್‌ ಟವರ್ಸ್‌ನಿಂದ ಆಹಾರ ಪೂರೈಕೆ ಮಾಡಲಾಗಿತ್ತು. ಅದೂ ಉಚಿತವಾಗಿ. ‘ಉಡುಗೊರೆ ರೂಪದಲ್ಲಿ ಈ ಕಾರ್ಯಕ್ರಮಕ್ಕೆ ಆಹಾರ ಪೂರೈಕೆ ಮಾಡಲಾಗಿತ್ತು.. ಹೀಗಾಗಿ ಬಿಲ್‌ ಪಡೆದಿಲ್ಲ’ ಎಂದು ಹೋಟೆಲ್‌ ಹೇಳಿದೆ.

ಮಗಳು ಅಪೇಕ್ಷಾ ಮದುವೆಯಲ್ಲಿ ರಾಕೇಶ್‌ ಅಸ್ತಾನಾ
ಮಗಳು ಅಪೇಕ್ಷಾ ಮದುವೆಯಲ್ಲಿ ರಾಕೇಶ್‌ ಅಸ್ತಾನಾ
/ಟೈಮ್ಸ್‌ ಆಫ್‌ ಇಂಡಿಯಾ

ಆಹಾರವನ್ನು ಮಾತ್ರ ಹೋಟೆಲ್‌ನವರು ನೀಡಿದ್ದರು. ಅದನ್ನು ಬಡಿಸಲು ಜನರು ಮಾತ್ರ ಮನೀಶ್‌ ತೆಕ್ಕರ್‌ ಅವರ ಲಾಭ್‌ ಡೆಕೊರೇಟರ್ಸ್‌ ಕಡೆಯಿಂದ ಬಂದಿದ್ದರು. ಇವರಿಗೆ ಮದುವೆ ಕಾರ್ಯಕ್ರಮದಲ್ಲಿ ಅಲಂಕಾರ ಮಾಡಿದ್ದಕ್ಕೆ ಮತ್ತು ಊಟ ಬಡಿಸಿದವರ ಮಜೂರಿ ಸೇರಿ 9.55 ಲಕ್ಷ ರೂಪಾಯಿ ಮತ್ತು 8 ಲಕ್ಷ ರೂಪಾಯಿ (ಒಟ್ಟು 17.55 ಲಕ್ಷ ರೂ.) ಗಳನ್ನು ಪಾವತಿ ಮಾಡಲಾಗಿತ್ತು. ಈ ಸಂಗೀತ್‌ ಕಾರ್ಯಕ್ರಮದ ಉಳಿದ ಖರ್ಚನ್ನು ಚೇತನ್‌ ಸಂದೇಸರ ನೋಡಿಕೊಂಡಿದ್ದರು. .

ಮದುವೆ ಕಾರ್ಯಕ್ರಮವನ್ನು ಸನ್‌ಕೆನ್‌ ಗಾರ್ಡನ್‌ ಮತ್ತು ಲಕ್ಷ್ಮೀ ವಿಲಾಸ್‌ ಪ್ಯಾಲೆಸ್‌ನಲ್ಲಿ ಆಯೋಜಿಸಲಾಗಿತ್ತು. ಸಿಬಿಐಗೆ ನೀಡಿದ ಪ್ರತಿಕ್ರಿಯೆಯಲ್ಲಿ ಪ್ಯಾಲೆಸ್‌ನ ಅಧಿಕಾರಿಗಳು ಅಸ್ತಾನಾ ಕುಟುಂಬಕ್ಕೆ ಉಡುಗೊರೆ ರೂಪದಲ್ಲಿ ನಾವು ಈ ಸೇವೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಹೊಟೇಲ್‌ ಮೂಲಗಳನ್ನು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಸಂಪರ್ಕಿಸಿದರೂ ಪ್ರತಿಕ್ರಿಯೆ ಸಿಕ್ಕಿಲ್ಲ.

ಅಸ್ತಾನಾ ಕುಟುಂಬದ ಮೂಲಗಳ ಪ್ರಕಾರ, 2008 ರಿಂದ 2011ರ ವರೆಗೆ ವಡೋದರ ಪೊಲೀಸ್‌ ಕಮಿಷನರ್‌ ಆಗಿದ್ದ ಅಸ್ತಾನಾ ತಮ್ಮ ‘ಸಾಮಾಜಿಕ ಸಂಪರ್ಕ’ ಹಾಗೂ ಪ್ರಭಾವ ಬಳಸಿಕೊಂಡು ಈ ಸಮಾರಂಭಗಳನ್ನು ಆಯೋಜನೆ ಮಾಡಿದ್ದರು. ಈ ಮದುವೆ ಸಮಾರಂಭದ ಭೋಜನ ವಡೋದರಾದ ಹಳೆಯ ಫೈವ್ ಸ್ಟಾರ್‌ ಹೊಟೇಲ್‌ ಗ್ರ್ಯಾಂಡ್‌ ಮೆರ್ಕುರ್‌ ಸೂರ್ಯ ಪ್ಯಾಲೆಸ್‌ನವರು ಮಾಡಿದ್ದರು. ಆದರೆ ಇಲ್ಲೂ ಬಿಲ್‌ ಪಾವತಿ ಮಾಡಿದ ದಾಖಲೆಗಳು ಕಾಣಿಸುವುದಿಲ್ಲ. ಬದಲಿಗೆ 10 ಲಕ್ಷ ರೂಪಾಯಿಗೂ ಹೆಚ್ಚಿನ ಮೊತ್ತದ ಬಿಲ್‌ನ್ನು ಅಸ್ತಾನಾ ಪತ್ನಿ ಪಾವತಿಸಿದರು ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಪ್ರತಿಕ್ರಿಯೆಗೆ ಹೊಟೇಲ್‌ ಮಾಲೀಕ ಪಿಯೂಷ್‌ ಶಾ ಲಭ್ಯರಾಗಿಲ್ಲ.

ಇದರ ಜೊತೆಗೆ ಅಸ್ತಾನಾ ಕುಟುಂಬ ಅತಿಥಿಗಳು ಉಳಿದುಕೊಳ್ಳಲು ‘ಸನ್‌ ಸಿಟಿ ಕ್ಲಬ್‌ ಮತ್ತು ರೆಸಾರ್ಟ್’ನಲ್ಲಿ 35 ಕೊಠಡಿಗಳನ್ನು ಕಾಯ್ದಿರಿಸಿತ್ತು. ಇಲ್ಲೂ ಕೂಡ ಕ್ಲಬ್‌ ತಾವು ಉಡುಗೊರೆ ರೂಪದಲ್ಲಿ ರೂಮುಗಳನ್ನು ನೀಡಿದ್ದೇವೆ ಎಂದು ಹೇಳಿದೆ. “ನಮ್ಮ ರೆಸಾರ್ಟ್‌ ಅವತ್ತಿಗೆ ಹೊಸದಾಗಿತ್ತು. ಹೀಗಾಗಿ ಪ್ರತಿಷ್ಠಿತ ವ್ಯಕ್ತಿಗಳ ಮದುವೆಗೆ ಉಡುಗೊರೆ ರೂಪದಲ್ಲಿ ಈ ಸೇವೆ ನೀಡುವ ನಿರ್ಧಾರಕ್ಕೆ ಬಂದಿದ್ದೆವು,” ಎಂದು ಅದರ ಮಾಲೀಕರು ಹೇಳಿದ್ದಾರೆ. ಇದು ಸಮೀರ್ ಶಾ ಒಡೆತನಕ್ಕೆ ಸೇರಿದ್ದು ಸದ್ಯ ಮನೀಷ್‌ ಥಕ್ಕರ್‌ ನೋಡಿಕೊಳ್ಳುತ್ತಿದ್ದಾರೆ.

ಇನ್ನು ಮದುವೆ ಸಂದರ್ಭದಲ್ಲಿ ಓಡಾಟಕ್ಕೆ ಬಿಎಂಡ್ಬ್ಯೂ ಮತ್ತು ಹೋಂಡಾ ಸಿಆರ್‌ವಿ ಕಾರುಗಳನ್ನು ಅಸ್ತಾನಾ ಕುಟುಂಬದವರು ಪಡೆದುಕೊಂಡಿದ್ದರು. ಇದನ್ನು ನೀಡಿದವರು ಮತ್ತದೇ ಚೇತನ್‌ ಸಂದೇಸರ ಕಡೆಯವರು.

ಹೀಗೆ ಉಡುಗೊರೆ, ಬಿಟ್ಟಿ ಸೇವೆಗಳಲ್ಲೇ ತಮ್ಮ ಮಗಳ ಮದುವೆ ಮುಗಿಸಿದ್ದಾರೆ ಕೇಂದ್ರ ತನಿಖಾ ದಳದ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ. ಇಂಥಹ ಭಾಗ್ಯ ಎಷ್ಟು ಜನರಿಗೆ ಇದ್ದೀತು?

ಪ್ರತಿ ದೂರು:

ವಿಚಿತ್ರ ಬೆಳವಣಿಗೆಯಲ್ಲಿ ತಮ್ಮ ಇಲಾಖೆ ಮುಖ್ಯಸ್ಥರ ವಿರುದ್ಧವೇ ರಾಕೇಶ್‌ ಅಸ್ತಾನಾ ದೂರು ನೀಡಿದ್ದಾರೆ. ತಮ್ಮ ವಿರುದ್ಧದ ಸಿಬಿಐ ತನಿಖೆ ಬೇರೆ ಬೇರೆ ಸ್ತರಗಳಿಗೆ ವಿಸ್ತರಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅವರು ಸಿಬಿಐ ನಿರ್ದೇಶಕರ ವಿರುದ್ಧ ಕೇಂದ್ರ ಜಾಗೃತ ದಳಕ್ಕೆ ದೂರು ಸಲ್ಲಿಸಿದ್ದಾರೆ. ‘ನಿರ್ದೇಶಕ ಎ.ಕೆ. ಶರ್ಮಾ ತಮ್ಮ ಕುಟುಂಬದವರನ್ನು ವಿಚಾರಣೆ ಗುರಿಪಡಿಸುವ ಮೂಲಕ ಚೇತನ್‌ ಸಂದೇಸರ ಜೊತೆ ತಮಗೆ ಇಲ್ಲದ ಸಂಬಂಧವನ್ನು ಕಲ್ಪಿಸಲು ಯತ್ನಿಸುತ್ತಿದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಮೂಲಕ ಸಿಬಿಐನ ನಿರ್ದೇಶಕ ಮತ್ತು ವಿಶೇಷ ನಿರ್ದೇಶಕರ ನಡುವಿನ ಸಂಘರ್ಷ ದಿನೇ ದಿನೇ ಹೊಸ ಎತ್ತರಗಳಿಗೆ ತಲುಪುತ್ತಿದೆ.