ಚುನಾವಣೆಗೂ ಮುನ್ನವೇ ಫಲಿತಾಂಶ ಘೋಷಣೆ; ಎದುರಾಳಿಗಳ ಮಣಿಸಲು ಮೈತ್ರಿ ಪಕ್ಷಗಳ ತಂತ್ರ!
COVER STORY

ಚುನಾವಣೆಗೂ ಮುನ್ನವೇ ಫಲಿತಾಂಶ ಘೋಷಣೆ; ಎದುರಾಳಿಗಳ ಮಣಿಸಲು ಮೈತ್ರಿ ಪಕ್ಷಗಳ ತಂತ್ರ!

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ ಎನ್ನುತ್ತಿರುವ ಜೆಡಿಎಸ್‌ ಚುನಾವಣೆಗೂ ಮುನ್ನವೇ ಫಲಿತಾಂಶ ಘೋಷಿಸುತ್ತಿದೆ.

ರಾಜ್ಯದ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಗಣನೆ ಶುರುವಾಗಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರಗಳೂ ನಡೆಯುತ್ತಿವೆ, ಈ ಮಧ್ಯೆ ಚುನಾವಣೆಗೂ ಮುನ್ನವೇ ಎದುರಾಳಿಗಳ ಮಣಿಸುವ ತಂತ್ರಕ್ಕೆ ಪಕ್ಷಗಳು ಮುಂದಾಗಿವೆ.

ರಾಮನಗರ ವಿಧಾನಸಭೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಬಹುತೇಕ ಖಚಿತ ಮತ್ತು ಬಳ್ಳಾರಿಯಲ್ಲಿ ಕಾಂಗ್ರೆಸ್ – ಬಿಜೆಪಿ ನಡುವ ಜಿದ್ದಾಜಿದ್ದಿ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ಆಯಾ ಕ್ಷೇತ್ರಗಳಲ್ಲಿ ಪ್ರಬಲವಾಗಿರುವ ಪಕ್ಷಗಳು ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಎದುರಾಳಿಗಳ ಸೋಲು ಘೋಷಿಸುವ ಮಟ್ಟಕ್ಕೆ ಬಂದಿವೆ.

ಬಿಜೆಪಿಯನ್ನು ಸೋಲಿಸಲೇಬೇಕೆಂಬ ಕಾರಣಕ್ಕೆ ಕಾಂಗ್ರೆಸ್‌- ಜೆಡಿಎಸ್ ಚುನಾವಣಾ ಮೈತ್ರಿ ಮಾಡಿಕೊಂಡಿವೆ. ಈ ಉಪ ಚುನಾವಣೆಯಲ್ಲಿ ಮಾತ್ರವಲ್ಲ, ಮುಂಬರುವ ಲೋಕಸಭಾ ಚುನಾವಣೆಯನ್ನೂ ಮೈತ್ರಿಯೊಂದಿಗೇ ಎದುರಿಸುತ್ತೇವೆ ಎಂದು ಎರಡೂ ಪಕ್ಷಗಳು ಮುಖಂಡರು ಒಟ್ಟಿಗೇ ಕುಳಿತು ಘೋಷಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಒಂದು ಲೋಕಸಭೆ ಹಾಗೂ ಒಂದು ವಿಧಾನಸಭಾ ಕ್ಷೇತ್ರ ಮತ್ತು ಜೆಡಿಎಸ್‌ ಒಂದು ವಿಧಾನಸಭಾ ಕ್ಷೇತ್ರ ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಹಂಚಿಕೊಂಡಿವೆ.

ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಜೆಡಿಎಸ್‌ ಪ್ರಬಲವಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಷ್ಟ. ಆದರೆ, ಮಂಡ್ಯದಲ್ಲಿ ತಕ್ಕಮಟ್ಟಿಗೆ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ, ರಾಮನಗರದಲ್ಲಿ ಈಗಾಗಲೇ ಸೋಲೊಪ್ಪಿಕೊಂಡು ಪ್ರಚಾರವನ್ನೇ ನಡೆಸುತ್ತಿಲ್ಲ ಎಂಬ ಸುದ್ದಿಯನ್ನು ಹಬ್ಬಲಾಗಿದೆ. ರಾಮನಗರ ಕ್ಷೇತ್ರದ ಪ್ರಚಾರದ ಉಸ್ತುವಾರಿ ಬಿಜೆಪಿ ಮುಖಂಡ ಡಿ.ವಿ. ಸದಾನಂದ ಗೌಡ ಪ್ರಚಾರಕ್ಕೆ ಬಂದಿಲ್ಲ ಎನ್ನಲಾಗಿದೆ. ಬಿಜೆಪಿಯನ್ನು ಉಳಿದ ಕ್ಷೇತ್ರಗಳಲ್ಲೂ ಹಣಿಯಲು ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ಈ ವಿಷಯ ಸದ್ಯಕ್ಕೆ ಅಸ್ತ್ರವಾಗಿದೆ.

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ಪರ ಪ್ರಚಾರಕ್ಕೆ ಬಿಜೆಪಿ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಮನಗರದಲ್ಲಿ ಬಿಜೆಪಿಗೆ ಈಗಾಗಲೇ ಸೋಲು ಖಚಿತವಾಗಿದೆ ಎಂದು ಜೆಡಿಎಸ್‌ ಹೇಳುತ್ತಿದೆ. ರಾಮಗರದಲ್ಲಿ ಬಿಜೆಪಿಯ ಸದ್ದೇ ಇಲ್ಲ ಎನ್ನುತ್ತಿರುವ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಇದೇ ಬಿಜೆಪಿ ಅಭ್ಯರ್ಥಿಗಳಿಗೆ ಸೋಲಿನ ಭೀತಿ ಎದುರಾಗಿದೆ ಎಂದು ಉಳಿದ ಕ್ಷೇತ್ರಗಳಲ್ಲೂ ಹೇಳುತ್ತಿವೆ.

ಮಂಡ್ಯದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ. ಸಿದ್ದರಾಮಯ್ಯ ಗೆಲುವು ಕೂಡಾ ಸುಲಭವಲ್ಲ. ಜಮಖಂಡಿ ಕ್ಷೇತ್ರದಲ್ಲಿ ಸಿದ್ದು ನ್ಯಾಮಗೌಡ ಸಾವಿನ ಅನುಕಂಪ ಕಾಂಗ್ರೆಸ್‌ಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಇಲ್ಲಿ ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಕೂಡಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನಲಾಗುತ್ತಿದೆ. ಹಾಗೆ ನೋಡಿದರೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಿಜವಾಗಿ ಪೈಪೋಟಿ ನೀಡುತ್ತಿರುವುದು ಶಿವಮೊಗ್ಗ ಮತ್ತು ಬಳ್ಳಾರಿ ಕ್ಷೇತ್ರಗಳಲ್ಲಿ.

ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದಲೇ ಒಟ್ಟಾಗಿರುವುದಾಗಿ ಘೋಷಿಸಿಕೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರಿಸ್ಥಿತಿ ಎಲ್ಲಾ ಕ್ಷೇತ್ರಗಳ ತಳಮಟ್ಟದಲ್ಲೂ ಒಂದೇ ರೀತಿಯಲ್ಲಿಲ್ಲ. ರಾಮನಗರ ಹಾಗೂ ಮಂಡ್ಯದಲ್ಲಿ ಮೇಲ್ಮಟ್ಟದ ನಾಯಕರನ್ನು ಬಿಟ್ಟರೆ ಜೆಡಿಎಸ್‌- ಕಾಂಗ್ರೆಸ್‌ನ ತಳಮಟ್ಟದ ಕಾರ್ಯಕರ್ತರು ಒಟ್ಟೊಟ್ಟಾಗಿ ಕೆಲಸ ಮಾಡುವ ಸಾಧ್ಯತೆಗಳು ತೀರಾ ಕಡಿಮೆ. ಸ್ವಂತ ಬಲ ಹಾಗೂ ಕಾಂಗ್ರೆಸ್‌ನ ಬೆಂಬಲದಿಂದ ಇಲ್ಲಿ ಜೆಡಿಎಸ್‌ ಗೆಲುವು ನಿರಾಯಾಸ. ಹೀಗಾಗಿ ಬಿಜೆಪಿ ನಾಮಕಾವಸ್ಥೆಗೆಂದು ಈ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಹಳೇ ಮೈಸೂರು ಭಾಗದಲ್ಲಿ ಸದ್ಯ ಕಾಂಗ್ರೆಸ್‌ ಬೆಂಬಲ ಪಡೆದಿರುವ ಜೆಡಿಎಸ್ ವಿರುದ್ಧ ಗುದ್ದಾಡುವುದು ಕಷ್ಟ ಎಂಬುದು ಖುದ್ದು ಬಿಜೆಪಿಗೂ ಗೊತ್ತಿದೆ. ಆದರೆ, ಸೋಲುತ್ತೇವೆಂಬ ಕಾರಣಕ್ಕೆ ಚುನಾವಣೆಯಿಂದಲೇ ಹೊರಗುಳಿಯುವ ಬದಲು ಬಿಜೆಪಿ ‘ಡಮ್ಮಿ ಕ್ಯಾಂಡಿಡೇಟ್‌’ಗಳನ್ನು ಇಲ್ಲಿ ಅಭ್ಯರ್ಥಿಗಳನ್ನಾಗಿಸಿದೆ. ಆದರೆ, ಬಿಜೆಪಿಯ ಈ ನಡೆಯನ್ನು ಜೆಡಿಎಸ್‌- ಕಾಂಗ್ರೆಸ್‌ ಅಣಕಿಸುತ್ತಾ ಬಿಜೆಪಿ ಬಲ ಕುಗ್ಗಿಸುವ ಪ್ರಯತ್ನಕ್ಕಿಳಿದಿವೆ.

ಜೆಡಿಎಸ್‌ ಪ್ರಭಾವ ಹಾಗೂ ಶಿವರಾಮೇಗೌಡ ಹಣಬಲದ ಮುಂದೆ ಮಂಡ್ಯದಲ್ಲಿ ಡಾ. ಸಿದ್ದರಾಮಯ್ಯ ಗೆಲುವು ಮತ್ತು ಕುಮಾರಸ್ವಾಮಿ ಪ್ರಭಾವ ಹಾಗೂ ಡಿ.ಕೆ.ಶಿವಕುಮಾರ್‌ ತೋಳ್ಬಲದ ಮುಂದೆ ರಾಮನಗರದಲ್ಲಿ ಚಂದ್ರಶೇಖರ್‌ ಗೆಲವುದು ಸುಲಭವಲ್ಲ. ಹಾಗೆಂದು ತಮ್ಮ ಅಭ್ಯರ್ಥಿಗಳ ಪರವಾಗಿ ಸರಿಯಾದ ಪ್ರಚಾರ ನಡೆಸದೇ ಹೋದರೆ ಬಿಜೆಪಿ ಈ ಎರಡೂ ಕ್ಷೇತ್ರಗಳನ್ನೂ ಕೈಚೆಲ್ಲಿದಂತೆಯೇ.

ಬಿಜೆಪಿ ಇಲ್ಲಿ ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಂತೆ ನಡೆದುಕೊಂಡರೆ ಅದರ ಪರಿಣಾಮ ಉಳಿದ ಕ್ಷೇತ್ರಗಳ ಮೇಲೂ ತಕ್ಕಮಟ್ಟಿಗೆ ಆಗಬಹುದು. ಶಿವಮೊಗ್ಗದಲ್ಲಿ ಅಲ್ಲದಿದ್ದರೂ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಉಗ್ರಪ್ಪ ಹಾಗೂ ಬಿಜೆಪಿಯ ಶಾಂತಾ ನಡುವಿನ ಪೈಪೋಟಿಯ ಮೇಲೆ ಈ ಅಂಶ ಪರಿಣಾಮ ಬೀರಬಹುದು. ಬಿಜೆಪಿಯ ಬಿ. ಶ್ರೀರಾಮುಲು ಬಳ್ಳಾರಿ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವಂತೆಯೇ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಕೂಡಾ ಬಳ್ಳಾರಿಯ ಗೆಲುವಿಗಾಗಿ ತೊಡೆತಟ್ಟಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಂತೆ ವರ್ತಿಸುತ್ತಾ ಪ್ರಚಾರದಿಂದ ದೂರ ಉಳಿದರೆ ಅದರಿಂದ ಜೆಡಿಎಸ್‌ ಅಥವಾ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವೇನೂ ಆಗಲಾರದು. ಆದರೆ, ಅದರಿಂದ ಬಿಜೆಪಿಗಂತೂ ತಕ್ಕಷ್ಟು ಪೆಟ್ಟು ಬೀಳುವುದರಲ್ಲಿ ಅನುಮಾನವಿಲ್ಲ.