samachara
www.samachara.com
ಸಲೆಬ್ರಿಟಿಗಳ ಆರೋಪದ ಆಚೆಗೆ ವೃತ್ತಿ ಸ್ಥಳದ ಸೂಕ್ಷ್ಮಗಳನ್ನೂ ಕಲಿಸಲಿ #MeToo ಅಭಿಯಾನ
COVER STORY

ಸಲೆಬ್ರಿಟಿಗಳ ಆರೋಪದ ಆಚೆಗೆ ವೃತ್ತಿ ಸ್ಥಳದ ಸೂಕ್ಷ್ಮಗಳನ್ನೂ ಕಲಿಸಲಿ #MeToo ಅಭಿಯಾನ

ಮೀ ಟೂ ಅಭಿಯಾನ ಆರೋಪ- ಪ್ರತ್ಯಾರೋಪಗಳಿಗೆ ಮಾತ್ರ ಸೀಮಿತವಾಗದೆ, ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆ- ಪುರುಷರಿಬ್ಬರೂ ಸೂಕ್ಷ್ಮವಾಗಿರಬೇಕೆಂಬ ಪಾಠವನ್ನು ಕಲಿಸಬೇಕಿದೆ.

#Metoo ಅಭಿಯಾನ ಸದ್ಯ ಸ್ಯಾಂಡಲ್‌ವುಡ್‌ನಲ್ಲೂ ದೊಡ್ಡ ಸದ್ದು ಮಾಡುತ್ತಿದೆ. ಅರ್ಜುನ್‌ ಸರ್ಜಾ ವಿರುದ್ಧದ ಆರೋಪ ಪ್ರಕರಣಕ್ಕೆ ತಾರ್ತಿಕ ಅಂತ್ಯ ಸಿಗುವವರೆಗೂ ಹೋರಾಡುತ್ತೇನೆ ಎಂದು ನಟಿ ಶ್ರುತಿ ಹರಿಹರನ್‌ ಹೇಳಿದ್ದಾರೆ. ಶ್ರುತಿ ಪರವಾಗಿ ಒಂದಷ್ಟು ನಟ-ನಟಿಯರು, ನಿರ್ದೇಶಕರು ನಿಂತಿದ್ದಾರೆ. ಹೆಚ್ಚಿನ ಸಂಖ್ಯೆಯ ಹಿರಿಯ ನಟ-ನಟಿಯರು ‘ನಾವು ಈ ಆಟಕ್ಕಿಲ್ಲ’ ಎಂಬಂತೆ ದೂರವೇ ಉಳಿದು ಮೌನ ಮುಂದುವರಿಸಿದ್ದಾರೆ.

ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಅನುಭವಿಸುವ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆಗಳು ಕೇವಲ ಚಿತ್ರರಂಗಕ್ಕಷ್ಟೇ ಸೀಮಿತವಾದಂಥವಲ್ಲ. ಎಲ್ಲಾ ವೃತ್ತಿಗಳಲ್ಲೂ ಈ ಸಮಸ್ಯೆ ಇದ್ದೇ ಇದೆ. ಗಂಡು ಮತ್ತು ಹೆಣ್ಣು ಇರುವ ಕಡೆಯಲ್ಲೆಲ್ಲಾ ಇಂಥ ಲೈಂಗಿಕ ಕಿರುಕುಳದ ಸಂದರ್ಭ ಎದುರಾಗಬಹುದು. ಅದು ಮಲ್ಟಿ ನ್ಯಾಷನಲ್‌ ಕಂಪನಿಯಾಗಿರಲಿ, ಗಾರ್ಮೆಂಟ್‌ ಫ್ಯಾಕ್ಟರಿಯಾಗಿರಲಿ, ಕಟ್ಟಡ ನಿರ್ಮಾಣದ ಸ್ಥಳವಾಗಿರಲಿ, ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ದ್ವಿತೀಯ ದರ್ಜೆಯ ನಾಗರಿಕಳಂತೆ ಕಾಣುವ ಮನೋವೃತ್ತಿ ಇನ್ನೂ ಬದಲಾಗಿಲ್ಲ.

ಈ ತಾರತಮ್ಯ ಹಾಗೂ ಕಿರುಕುಳಕ್ಕೆ ವಿದ್ಯಾವಂತರು, ಅನಕ್ಷರಸ್ಥರು ಎಂಬ ಭೇದವೇನಿಲ್ಲ. ಮನೆಯಿಂದಲೇ ಆರಂಭವಾಗುವ ಗಂಡು ಮೇಲೆ, ಹೆಣ್ಣು ಕೀಳು ಎಂಬ ಅಂತರ ಸಮಾಜದಲ್ಲೂ ಇನ್ನೂ ಮುಂದುವರಿದಿದೆ. ಹೀಗಾಗಿ ಅರ್ಹತೆ ಇದ್ದರೂ ಹಲವು ಕ್ಷೇತ್ರಗಳಲ್ಲಿ ಹೆಣ್ಣು ಗಂಡಿನ ಅಡಿಯಾಳಾಗಿ ದುಡಿಯಬೇಕಾಗಿದೆ. ಆದರೆ, ವೃತ್ತಿಯಲ್ಲಿ ಮೇಲೇರಬೇಕೆಂದರೆ ‘ಕಾಂಪ್ರೊಮೈಸ್’ ಅಗತ್ಯ ಎಂಬ ಮಾತುಗಳನ್ನು ಮೀರಿ ಈಗ ಮೀ ಟೂ ಆರೋಪಗಳು ಕೇಳಿಬರುತ್ತಿವೆ. ಈ ಆರೋಪಗಳು ಕೇವಲ ಪ್ರಚಾರಕ್ಕಾಗಿ ನಡೆಯುತ್ತಿರುವಂಥವು ಎಂದು ತಳ್ಳಿ ಹಾಕಲು ಸಾಧ್ಯವಿಲ್ಲ.

Also read: #MeToo ಸಮಯ ಬಂದಾಗ ಸಾಕ್ಷ್ಯ ಒದಗಿಸುತ್ತೇನೆ: ಶ್ರುತಿ ಹರಿಹರನ್‌

ವೃತ್ತಿಯಲ್ಲಿ ಬೆಳೆಯಬೇಕೆಂಬ ಕಾರಣಕ್ಕೆ ಒಪ್ಪಿತ ‘ಸಂಬಂಧ’ವನ್ನು ಬೆಳೆಸುವುದು ಅವರವರ ಆಯ್ಕೆ ಎಂಬ ವಾದಗಳಿವೆ. ಆದರೆ, ವೃತ್ತಿಯಲ್ಲಿ ಬೆಳೆಯಬೇಕೆಂದರೆ ಇಂಥ ಸಂಬಂಧಗಳೂ ‘ಅನಿವಾರ್ಯ’ ಎಂಬ ಸ್ಥಿತಿಗೆ ವ್ಯವಸ್ಥೆಯನ್ನು ತಂದು ನಿಲ್ಲಿಸಿರುವುದೇನೂ ಒಳ್ಳೆಯ ಮಾದರಿಯಲ್ಲ. ಇಂಥ ಅನಿವಾರ್ಯಗಳು ಕೆಲಸ ಮಾಡುವ ಸ್ಥಳದಲ್ಲಿನ ಉಳಿದ ಮಹಿಳೆಯರಿಗೂ ಕಿರಿಕಿರಿ ಉಂಟು ಮಾಡುತ್ತವೆ.

ಇಷ್ಟು ದಿನ ದುಡಿಯುವ ಮಹಿಳೆಯರಿಗೆ ‘ಇದನ್ನೆಲ್ಲಾ’ ಸಹಿಸಿಕೊಳ್ಳುವುದು ಅನಿವಾರ್ಯ ಎಂಬಂತಾಗಿತ್ತು. ಆದರೆ, ಮೀ ಟೂ ಅಭಿಯಾನ ಆರಂಭವಾದ ಬಳಿಕ ಸಿನಿಮಾ ನಟಿಯರು, ಪತ್ರಕರ್ತೆಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ದನಿ ಎತ್ತಿದ್ದಾರೆ. ಸಿನಿಮಾ ಹಾಗೂ ಪತ್ರಿಕೋದ್ಯಮಕ್ಕಿರುವ ಸುದ್ದಿಸಾಮೀಪ್ಯ ಉಳಿದ ಕ್ಷೇತ್ರಗಳಿಗೆ ಇಲ್ಲದಿರುವುದರಿಂದ, ಇತರೆ ಕ್ಷೇತ್ರಗಳ ಮಹಿಳೆಯರ ಮೀ ಟೂ ಹೆಚ್ಚು ಸುದ್ದಿಯಾಗುತ್ತಿಲ್ಲ.

ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಲೈಂಗಿಕ ಕಿರುಕುಳ ನೀಡಿದರೆ ದೂರು ನೀಡಲು ಸಮಿತಿಯೊಂದು ಇರುತ್ತದೆ. ಬಹುತೇಕ ಕಚೇರಿಗಳಲ್ಲಿ ಇಂಥದ್ದೊಂದು ಸಮಿತಿ ಇರುವುದೇ ಹಲವು ಸಿಬ್ಬಂದಿಗೆ ಗೊತ್ತಿರುವುದಿಲ್ಲ. ಲೈಂಗಿಕ ಕಿರುಕುಳದ ದೂರು ನೀಡಿದರೆ ಕಚೇರಿಯ ಇತರೆ ಸಿಬ್ಬಂದಿಯ ಕಣ್ಣಲ್ಲಿ ಬೇರೆಯದೇ ಆಗಿ ಕಾಣಿಸಿಕೊಳ್ಳಬೇಕಾಗುತ್ತದೆ ಎನ್ನುವ ಭಯ ಹಾಗೂ ವೃತ್ತಿ ಬದುಕಿನ ಈ ಕಿರುಕುಳ ವೈಯಕ್ತಿಕ ಬದುಕನ್ನೂ ಹಾಳು ಮಾಡಬಹುದು ಎಂಬ ಅಳುವಿನ ಕಾರಣಕ್ಕೆ ಹಲು ಮಹಿಳೆಯರು ಇಂಥ ಕಿರುಕುಳಗಳನ್ನು ಸಹಿಸಿಕೊಳ್ಳುವುದೇ ಹೆಚ್ಚು.

ವೃತ್ತಿ ಬದುಕಿನ ಅನಿವಾರ್ಯಗಳಲ್ಲಿ ಲೈಂಗಿಕ ಕಿರುಕುಳಗಳನ್ನು ಸಹಿಸಿಕೊಳ್ಳುವುದೂ ಒಂದು ಎಂಬ ಮನಸ್ಥಿತಿಯನ್ನು ಮೀರಿ ಮಹಿಳೆಯರು ತಮ್ಮ ಮೇಲಾದ ಕಿರುಕುಳದ ಬಗ್ಗೆ ಮೌನ ಮುರಿಯುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯೇ. ಈ ಬೆಳವಣಿಗೆಯಿಂದ ಜಾಗತಿಕ ಮಟ್ಟದ ದೊಡ್ಡ ಸಾಹಿತಿಯೊಬ್ಬ ನೊಬೆಲ್‌ ಪ್ರಶಸ್ತಿ ಕಳೆದುಕೊಂಡಿದ್ದು, ಭಾರತದಲ್ಲಿ ಕೇಂದ್ರದ ಸಚಿವರೊಬ್ಬರು ರಾಜೀನಾಮೆ ನೀಡಿದ್ದು ಈ ಅಭಿಯಾನದ ಫಲವೇ.

Also read: ಕೊನೆಗೂ #MeToo ತಲೆಡಂಡ; ಸಚಿವ ಸ್ಥಾನಕ್ಕೆ ಎಂ.ಜೆ. ಅಕ್ಬರ್‌ ರಾಜೀನಾಮೆ

ಸದ್ಯ ಸೆಲೆಬ್ರಿಟಿಗಳೆನಿಸಿಕೊಂಡವರ ಮೀ ಟೂ ಆರೋಪಗಳು ಮಾತ್ರ ಹೆಚ್ಚು ಸದ್ದು ಮಾಡುತ್ತಿವೆ. ತನುಶ್ರೀ ದತ್ತಾ, ಘಜಲಾ ವಹಾಬ್‌, ಪ್ರಿಯಾ ರಮಣಿ, ಶ್ರುತಿ ಹರಿಹರನ್‌, ಸಂಜನಾ – ಮೀ ಟೂ ಅಭಿಯಾನದಲ್ಲಿ ಸದ್ಯ ದೊಡ್ಡದಾಗಿ ಕೇಳುತ್ತಿರುವ ಹೆಸರುಗಳು ಇವು. ಇವರು ಮಾತ್ರವಲ್ಲದೆ ಹಲವು ನಟಿಯರು, ಪತ್ರಕರ್ತೆಯರು ತಮ್ಮ ಮೇಲೂ ಕಿರುಕುಳ ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ, ಕಿರುಕುಳ ನೀಡಿದವರು ಯಾರು ಎಂಬುದನ್ನು ಬಹಿರಂಗ ಪಡಿಸಿದವರು ಕೆಲವರು ಮಾತ್ರ.

ಮೀ ಟೂ ಅಭಿಯಾನ ಈಗ, “ಈ ಹಿಂದೆ ನಮ್ಮ ಮೇಲೆ ನಡೆದಿರುವ ಕಿರುಕುಳಗಳನ್ನೂ ನಾವು ಸಹಿಸುವುದಿಲ್ಲ. ಅದನ್ನು ಹೇಳಲು ಇದು ಸಕಾಲ” ಎಂದು ಕೆಲವರು ಮುಂದೆ ಬರುವಂತೆ ಮಾಡಿದೆ. ಒಂದು ಕಡೆ ಈ ಮಹಿಳೆಯರು ಕಿರುಕುಳ ನೀಡಿದವರ ಹೆಸರುಗಳನ್ನು ಬಹಿರಂಗ ಪಡಿಸಿರುವುದರ ಬೆನ್ನಲ್ಲೇ ಆರೋಪ ಹೊತ್ತಿರುವವರು ಮಾನನಷ್ಟ ಮೊಕದ್ದಮೆಯ ಬೆದರಿಕೆ ಹಾಕುತ್ತಿದ್ದಾರೆ. ಕಾನೂನು ಹೋರಾಟದ ಜತೆಗೆ ಆರೋಪ ಹೊರಿಸಿದವರ ಚಾರಿರ್ತ್ಯ ಹರಣಕ್ಕೂ ಮುಂದಾಗಿದ್ದಾರೆ.

ಮೀ ಟೂ ಅಭಿಯಾನ ಆರೋಪ- ಪ್ರತ್ಯಾರೋಪಗಳಿಗೆ ಮಾತ್ರ ಸೀಮಿತವಾಗದೆ, ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆ- ಪುರುಷರಿಬ್ಬರೂ ಸೂಕ್ಷ್ಮವಾಗಿರಬೇಕೆಂಬ ಪಾಠವನ್ನು ಕಲಿಸಬೇಕಿದೆ. ಇಲ್ಲವಾದರೆ, ಇದು ಕೇವಲ ಸೆಲಬ್ರಿಟಿಗಳ ವಿರುದ್ಧ ಕೆಲವರು ಪ್ರಚಾರಕ್ಕಾಗಿ ಮಾಡುತ್ತಿರುವ ಆರೋಪದ ಅಭಿಯಾನ ಎಂದು ಜನ ಮಾತಾಡಿಕೊಳ್ಳುವಂತೆ ಮಾಡಬಹುದು. ಮೀ ಟೂ ಅಭಿಯಾನ ಹಲವರನ್ನು ಬೆತ್ತಲೆ ಮಾಡುತ್ತಿರುವುದು ಒಂದು ಕಡೆಯಾದರೆ, ಕೆಲಸ ಮಾಡುವ ಸ್ಥಳಗಳಲ್ಲಿ ಹಿರಿಯರಿರಲಿ, ಕಿರಿಯರಿರಲಿ ಕಚ್ಚೆ ಸಡಿಲ ಬಿಡಬಾರದೆಂಬ ಎಚ್ಚರಿಕೆಯನ್ನೂ ನೀಡುತ್ತಿದೆ.

Also read: ‘ಸಹಾನುಭೂತಿ- ಸಬಲೀಕರಣ’: ತರಾನ ಬುರ್ಕೆ ದಶಕದ ಹಿಂದೆ ಹುಟ್ಟುಹಾಕಿದ್ದು ‘#MeToo ಅಭಿಯಾನ’!