samachara
www.samachara.com
‘ಇದು ಖಶೋಗಿ  ಕುಟುಂಬ’: ರಾಣಿ ಡಯಾನಾ ಜತೆ ಡೇಟಿಂಗ್‌, ಬೋಫೋರ್ಸ್‌ ಹಗರಣ & ರಾಜಮನೆತನದ ಒಡನಾಟ!
COVER STORY

‘ಇದು ಖಶೋಗಿ ಕುಟುಂಬ’: ರಾಣಿ ಡಯಾನಾ ಜತೆ ಡೇಟಿಂಗ್‌, ಬೋಫೋರ್ಸ್‌ ಹಗರಣ & ರಾಜಮನೆತನದ ಒಡನಾಟ!

ಭಾರತೀಯರ ಮಟ್ಟಿಗೆ ‘ಖಶೋಗಿ’ ಎಂಬ ಉಪನಾಮ ಕಿವಿಗೆ ಬಿದ್ದಿದ್ದು 80ರ ದಶಕ ಅಂತ್ಯದಲ್ಲಿ. ಅದಕ್ಕೆ ಕಾರಣವಾಗಿದ್ದು ಬೋಫೋರ್ಸ್‌ ಹಗರಣ.

ಸಾಮಾನ್ಯ ಜನರು ನಂಬಲಸಾಧ್ಯವಾದ ರೀತಿಯಲ್ಲಿ ಸೌದಿ ಅರೇಬಿಯಾ ಮೂಲದ ಪತ್ರಕರ್ತ ಜಮಾಲ್‌ ಖಶೋಗಿ (ಹಶೋಗ್ಜಿ- ಅರೆಬಿಕ್ ಉಚ್ಛಾರಣೆ) ಕೊಲೆಯಾಗಿದ್ದಾರೆ. ಟರ್ಕಿಯ ವಾಣಿಜ್ಯ ನಗರಿ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಕಚೇರಿಯೊಳಗೆ ಅವರ ಭಯಾನಕ ಹತ್ಯೆ ಜರುಗಿ 20 ದಿನಗಳು ಕಳೆದಿವೆ.

ಪ್ರಖ್ಯಾತ ಪತ್ರಿಕೆ ‘ವಾಷಿಂಗ್ಟನ್‌ ಪೋಸ್ಟ್‌' ಒಪಿನಿಯನ್‌ ಎಡಿಟರ್‌ ಆಗಿದ್ದ ಅವರ ಸಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ಕಾಲದಲ್ಲಿ ಇದೇ ಜಮಾಲ್‌ ಖಶೋಗಿ ಶ್ರೀಮಂತ ದೇಶ ಸೌದಿ ಅರೇಬಿಯಾ ದೊರೆಗಳ ಅಂತರಂಗದ ಗೆಳೆಯರಾಗಿದ್ದವರು. ಅಲ್ಲಿಂದ ಹೊರ ಬಂದ ಅವರು ಮುಂದಿನ ದಿನಗಳನ್ನು ಇದೇ ದೊರೆಗಳನ್ನು ಟೀಕಿಸಲು ಮೀಸಲಿಟ್ಟರು. ಪರಿಣಾಮ ಅವರಿವತ್ತು ಕೊಲೆಯಾಗಿದ್ದಾರೆ. ಅವರ ಕೊಲೆಯ ‘ಬೆತ್ತಲೆ ಸತ್ಯ’ಗಳನ್ನು ಮಂಗಳವಾರ ಬಹಿರಂಗಪಡಿಸುತ್ತೇನೆ ಎಂದು ಸ್ವತಃ ಟರ್ಕಿ ಅಧ್ಯಕ್ಷ ಎಸಿಪ್‌ ತಯ್ಯಿಪ್‌ ಎರ್ಡೋಗನ್‌ ಗುಡುಗಿದ್ದಾರೆ. ಹೀಗೊಂದು ಅಂತರಾಷ್ಟ್ರೀಯ ಚರ್ಚೆಯ ವಸ್ತುವಾಗಿರುವ ಖಶೋಗಿ ಕೌಟುಂಬಿಕ ಹಿನ್ನಲೆಗಳನ್ನು ಕೆದಕಿದರೆ ಹಲವು ಆಸಕ್ತಿಕರ ಅಂಶಗಳು ತೆರೆದುಕೊಳ್ಳುತ್ತವೆ. ಅದರಲ್ಲಿ ಭಾರತದ ಬೋಫೋರ್ಸ್‌ ಹಗರಣ, ರಾಜಕುಮಾರಿ ಡಯಾನಾ ಅಪಘಾತ ಮೊದಲಾದ ಚರಿತ್ರೆಗಳು ಎದುರಾಗುತ್ತವೆ.

ಭಾರತೀಯರ ಮಟ್ಟಿಗೆ ‘ಖಶೋಗಿ’ ಎಂಬ ಉಪನಾಮ ಕಿವಿಗೆ ಬಿದ್ದಿದ್ದು 80ರ ದಶಕ ಅಂತ್ಯದಲ್ಲಿ. ಅದಕ್ಕೆ ಕಾರಣವಾಗಿದ್ದು ಬೋಫೋರ್ಸ್‌ ಹಗರಣ.

ಅದು 1987-88:

ದೇಶದ ಪ್ರಧಾನಿಯಾಗಿದ್ದವರು ರಾಜೀವ್‌ ಗಾಂಧಿ. ಭಾರತದಲ್ಲಿ ಬೋಫೋರ್ಸ್‌ ಹಗರಣ ಸದ್ದು ಮಾಡಿ, ಅದಾಗಲೇ ತನಿಖೆ ಆರಂಭವಾಗಿತ್ತು. ಏಕಕಾಲಕ್ಕೆ ಸ್ವೀಡನ್‌ನಲ್ಲೂ ತನಿಖೆ ಚಾಲ್ತಿಗೆ ಬಂದಿತ್ತು. ಬೋಫೋರ್ಸ್‌ ಕಂಪನಿಯ ಉನ್ನತ ಅಧಿಕಾರಿಯಾಗಿದ್ದ ಮಾರ್ಟಿನ್‌ ಅರ್ಡ್‌ಬೋ ಡೈರಿಗಳನ್ನು ಸ್ವೀಡನ್‌ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅದರಲ್ಲಿ ರಾಜೀವ್‌ ಗಾಂಧಿ ಜತೆಗಿನ ಭೇಟಿಯ ವಿವರಗಳಿದ್ದವು. ಆದರೆ ತಾವು ಅರ್ಡ್‌ಬೋ ಭೇಟಿಯಾಗೇ ಇಲ್ಲ ಎಂದು ವಾದಿಸಿದರು ರಾಜೀವ್‌ ಗಾಂಧಿ.

ಅದ್ನಾನ್‌ ಖಶೋಗಿ (ಎಡದಿಂದ), ಮಾರ್ಟಿನ್‌ ಅರ್ಡ್‌ಬೋ ಮತ್ತು ಚಂದ್ರಸ್ವಾಮಿ. 
ಅದ್ನಾನ್‌ ಖಶೋಗಿ (ಎಡದಿಂದ), ಮಾರ್ಟಿನ್‌ ಅರ್ಡ್‌ಬೋ ಮತ್ತು ಚಂದ್ರಸ್ವಾಮಿ. 

ಇದಾಗಿ ಸ್ವಲ್ಪ ದಿನಗಳಿಗೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಸ್ಫೋಟಕ ಫೊಟೋವೊಂದು ಪ್ರಕಟವಾಯಿತು. ಆ ಚಿತ್ರದಲ್ಲಿ 90ರ ದಶಕದಲ್ಲಿ ಹವಾಲಾ ಹಗರಣದ ಮೂಲಕ ಕುಖ್ಯಾತಿ ಗಳಿಸಿದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರ ಖಾಸಾ ದೋಸ್ತ್‌ ಚಂದ್ರಸ್ವಾಮಿ, ಅರ್ಡ್‌ಬೋ ಮತ್ತು ಅದ್ನಾನ್‌ ಖಶೋಗಿ ಇದ್ದರು. ಅಸಲಿಗೆ ಆರ್ಡ್‌ಬೋ ರಾಜೀವ್‌ರನ್ನು ಭೇಟಿಯಾಗಿದ್ದರು ಎಂಬ ಮಾಹಿತಿ ಹೊರ ಬಂದಿದ್ದೇ ಈ ಅದ್ನಾನ್‌ ಖಶೋಗಿ ಮತ್ತು ಚಂದ್ರಸ್ವಾಮಿಯಿಂದ. ವಾಸ್ತವದಲ್ಲಿ ಇವರಿಬ್ಬರು ಈ ಡೀಲ್‌ನ ಮಧ್ಯವರ್ತಿಗಳಾಗಿದ್ದರು. ಖಶೋಗಿ ನೆರವಿನ ಮೇಲೆ ಯುರೋಪ್‌ನ ಪ್ರಮುಖ ನಗರಗಳಿಗೆ ಪ್ರಯಾಣ ಬೆಳೆಸಿದ್ದ ಚಂದ್ರಸ್ವಾಮಿ ಡೀಲ್‌ನ ಮಧ್ಯವರ್ತಿಯಾಗಿ ನಡೆದುಕೊಂಡಿದ್ದರು. ಈ ಡೀಲ್‌ನದ್ದು ಇನ್ನೊಂದು ಪ್ರತ್ಯೇಕ ಕಥೆ.

ಹೀಗೆ, ಅದ್ನಾನ್‌ ಖಶೋಗಿ ಎಂಬ ಹೆಸರು ಭಾರತದಲ್ಲಿ ಜನರ ಕಿವಿಗಳನ್ನು ತಲುಪಿತ್ತು. ಅದ್ನಾಲ್‌ ಖಶೋಗಿ ಮೂಲತಃ ಸೌದಿ ಅರೇಬಿಯಾದ ಉದ್ಯಮಿ ಮತ್ತು ಶಸ್ತ್ರಾಸ್ತ್ರ ಮಧ್ಯವರ್ತಿ. ಭಾರತದ ಮಾಜಿ ಪ್ರಧಾನಿ ಚಂದ್ರಶೇಖರ್‌, ಬಿಜೆಪಿ ನಾಯಕ ಡಾ. ಜೆ.ಕೆ. ಜೈನ್‌ ಅದ್ನಾನ್‌ ಖಶೋಗಿಯ ಆತ್ಮೀಯ ಗೆಳೆಯರ ಪಟ್ಟಿಯಲ್ಲಿದ್ದರು. ಚಂದ್ರಸ್ವಾಮಿ ಮತ್ತು ಅವರು ಕೆಲವು ಉದ್ಯಮಗಳನ್ನೂ ನಡೆಸುತ್ತಿದ್ದರು. 1982ರ ಮಿಸ್‌ ಇಂಡಿಯಾ ಪಮೆಲ್ಲಾ ಬಾರ್ಡರ್ಸ್‌ ಎಂಬಾಕೆ ಖಶೋಗಿ ಜತೆ ಐದು ದಿನಗಳನ್ನು ಕಳೆದಿದ್ದರು. ಹೀಗೊಂದು ಐಷಾರಾಮಿ ಬದುಕು, ಉನ್ನತ ಸಂಪರ್ಕಗಳನ್ನು ಹೊಂದಿದ್ದ ವ್ಯಕ್ತಿ ಅದ್ನಾನ್‌ ಖಶೋಗಿ ಆಗರ್ಭ ಶ್ರೀಮಂತರಾಗಿದ್ದರು. 1980ರ ಸುಮಾರಿಗೆ 4 ಬಿಲಿಯನ್‌ ಅಮೆರಿಕನ್‌ ಡಾಲರ್‌ ಮೌಲ್ಯದ ಉದ್ದಿಮೆ ಸಮೂಹವನ್ನು ಅವರು ಮುನ್ನಡೆಸುತ್ತಿದ್ದರು. ಇದೇ ಅದ್ನಾನ್‌ ಖಶೋಗಿಯ ಸೋದರಳಿಯನೇ ಸದ್ಯ ಕೊಲೆಯಾಗಿರುವ ಪತ್ರಕರ್ತ ಜಮಾಲ್‌ ಖಶೋಗಿ.

ಜಮಾಲ್‌ ಅಜ್ಜ ಅಂದರೆ ಅದ್ನಾನ್‌ ಖಶೋಗಿ ತಂದೆ ಮುಹಮ್ಮದ್ ಖಶೋಗಿ ಸೌದಿ ಅರೇಬಿಯಾ ದೊರೆಯ ಖಾಸಗಿ ವೈದ್ಯರಾಗಿದ್ದರು. ಹೀಗೊಂದು ರಾಜಕುಟುಂಬದ ಒಡನಾಟ ಜಮಾಲ್‌ ಖಶೋಗಿಗೆ ಹುಟ್ಟುವಾಗಲೇ ಬಂದಿತ್ತು.

ಅವರು ರಾಜರಲ್ಲದಿದ್ದರೂ ಅದೇ ವೈಭೋಗವನ್ನು ನೋಡಿಕೊಂಡು ಅನುಭವಿಸಿಕೊಂಡು ಬಂದಿದ್ದರು. ತಮ್ಮ ಜೀವನದುದ್ದಕ್ಕೂ ಖಶೋಗಿ ಹಲವು ಉನ್ನತ ಸ್ತರದವರ ಜತೆ ಸಂಬಂಧಗಳನ್ನು ಇಟ್ಟುಕೊಂಡಿದ್ದರು. ಅಮೆರಿಕಾ ಅಧ್ಯಕ್ಷ ಬರಾಕ್‌ ಒಬಾಮಾರಿಂದ ಹಿಡಿದು ಅಲ್‌ಖೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡನ್‌ ಜತೆ ಅವರಿಗೆ ಒಡನಾಟಗಳಿತ್ತು. ಹಲವು ಪತ್ರಿಕೆಗಳ ಸಂಪಾದಕರಾಗಿದ್ದ, ಸೌದಿ ಅರೇಬಿಯಾದ ಅಮೆರಿಕಾ ರಾಯಭಾರಿಯಾಗಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದ ಅವರು ರಾಜರ ರೀತಿಯಲ್ಲೇ ಬದುಕಿದ್ದರು.

ಅವರ ಅಣ್ಣ (ದೊಡ್ಡಮ್ಮನ ಮಗ) ದುದಿ ಫಾಯದ್ ವೇಲ್ಸ್‌ ರಾಜಕುಮಾರಿ ಡಯಾನ ಜತೆ ಹೊಂದಿದ್ದ ಸಂಬಂಧ 90ರ ದಶಕದ ಅಂತ್ಯಕ್ಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅದ್ನಾನ್‌ ಖಶೋಗಿಯ ಸೋದರಿ ಸಮೀರಾ ಖಶೋಗಿಯ ಮಗನಾಗಿದ್ದ ದುದಿ ಫಾಯದ್ ಸಿನಿಮಾ ನಿರ್ಮಾಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.

ಡಯಾನಾ ಜತೆ ಅವರ ಸಂಬಂಧ ಆರಂಭವಾಗುವುದಕ್ಕೆ ಮುಂಚೆಯೇ ಅವರಿಗೆ ಮದುವೆಯಾಗಿತ್ತು. 1986ರಲ್ಲಿ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಅವರು 1997ರ ಜುಲೈ ಹೊತ್ತಿಗೆ ಡಯಾನಾ ಪ್ರೀತಿಯಲ್ಲಿ ಬಿದ್ದರು. ರಾಜಕುಮಾರಿ ಡಯಾನಾ ಫಾಯದ್‌ ಜತೆ ಸುತ್ತಾಡಲು ಆರಂಭಿಸಿದಾಗ ಆಕೆಯೂ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. 1966ರಲ್ಲಿ ವಿಚ್ಛೇದನ ಪಡೆದ ಡಯಾನ 1997ರಲ್ಲಿ ಫಾಯದ್‌ ಜತೆ ಸುತ್ತಾಟ ಆರಂಭಿಸಿದ್ದರು. ಹೀಗಿರುವಾಗಲೇ ದುರಂತವೊಂದು ನಡೆದು ಹೋಯಿತು.

ಲಂಡನ್‌ನ ಹ್ಯಾರೋಡ್ಸ್‌ನಲ್ಲಿರುವ ರಾಯಕುಮಾರಿ ಡಯಾನ ಮತ್ತು ದುದಿ ಫಾಯದ್‌ ಸ್ಮಾರಕ.
ಲಂಡನ್‌ನ ಹ್ಯಾರೋಡ್ಸ್‌ನಲ್ಲಿರುವ ರಾಯಕುಮಾರಿ ಡಯಾನ ಮತ್ತು ದುದಿ ಫಾಯದ್‌ ಸ್ಮಾರಕ.

ಆಗಸ್ಟ್‌ 31, 1997ರಲ್ಲಿ ಪ್ಯಾರಿಸ್‌ನಲ್ಲಿ ಐಶಾರಾಮಿ ಹಡಗಿನಲ್ಲಿ ರಜೆಯ ದಿನಗಳನ್ನು ಕಳೆದು ಡಯಾನಾ ಮತ್ತು ಫಾಯದ್‌ ಲಂಡನ್‌ಗೆ ವಾಪಸಾಗುತ್ತಿದ್ದರು. ಹೋಟೆಲ್‌ ರಿಟ್ಜ್‌ ಪ್ಯಾರಿಸ್‌ನಿಂದ ಹೊರಟಿದ್ದ ಅವರ ಕಾರನ್ನು ಪಾಪರಜ್ಜಿಗಳು ಬೆನ್ನು ಹತ್ತಿದರು. ಇವರಿಂದ ತಪ್ಪಿಸಿಕೊಳ್ಳಲು ಚಾಲಕ ವೇಗವಾಗಿ ಕಾರು ಓಡಿಸಿದ. ಮುಂದಿನ ಕೆಲವೇ ಕ್ಷಣಗಳಲ್ಲಿ ಕಾರು ಅಪಘಾತಕ್ಕೆ ಗುರಿಯಾಯಿತು. ಡಯಾನಾ, ಫಾಯದ್‌. ಕಾರು ಚಾಲಕ ಎಲ್ಲರೂ ಸ್ಥಳದಲ್ಲೇ ಪ್ರಾಣ ಬಿಟ್ಟರು.

ಹೀಗೊಂದು ದುರಂತ ಅಂತ್ಯ ಕಂಡ ಪ್ರೇಮಿಗಳ ಸವಿನೆನಪಿಗಾಗಿ ಫಾಯದ್‌ ತಂದೆ ಲಂಡನ್‌ನ ಹ್ಯಾರೋಡ್ಸ್‌ನಲ್ಲಿ 1998ರಲ್ಲಿ ಸ್ಮಾರಕವನ್ನು ನಿರ್ಮಿಸಿದರು. ಮುಂದೆ ಮತ್ತೊಂದು ಸ್ಮಾರಕವನ್ನು 2005ರಲ್ಲಿ ಸ್ಥಾಪಿಸಿದರು. ಇದೀಗ ಅಣ್ಣ ದುದಿ ಫಾಯದ್‌ ದಾರಿಯಲ್ಲೇ ತಮ್ಮ ಜಮಾಲ್‌ ಖಶೋಗಿಯೂ ಅಕಾಲಿಕ ಸಾವಿಗೆ ಗುರಿಯಾಗಿದ್ದಾರೆ. ಅಣ್ಣನನ್ನು ಕಾರು ಬಲಿ ಪಡೆದರೆ, ತಮ್ಮನನ್ನು ಸೌದಿ ಅರೇಬಿಯಾ ದೊರೆಗಳು ಕೊಂದು ಹಾಕಿದ್ದಾರೆ. ಸಮಾಜದ ಭಿನ್ನ ಸ್ಥರದಿಂದ ಬಂದು ಪತ್ರಕರ್ತರಾಗಿದ್ದ ಜಮಾಲ್ ಖಶೋಗಿ ಕುಟುಂಬದ ಪುಟ್ಟ ಹಿನ್ನೆಲೆ ಇದು.