samachara
www.samachara.com
ದೂರು- ಆರೋಪ- ಗುಮಾನಿ: ‘ಪಂಜರದ ಗಿಳಿ’ ಸಿಬಿಐ ಒಳಗೆ ನಿಜಕ್ಕೂ ಏನು ನಡೆಯುತ್ತಿದೆ?
COVER STORY

ದೂರು- ಆರೋಪ- ಗುಮಾನಿ: ‘ಪಂಜರದ ಗಿಳಿ’ ಸಿಬಿಐ ಒಳಗೆ ನಿಜಕ್ಕೂ ಏನು ನಡೆಯುತ್ತಿದೆ?

ಪ್ರಕರಣ ಸಂಬಂಧ ನಡೆದ ವಾಟ್ಸಾಪ್‌ ಕರೆಗಳು, ಮೆಸೇಜ್‌ಗಳು ಹಾಗೂ ದ್ವನಿ ಮುದ್ರಿತ ಕರೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಮೂಲಕ ಸಿಬಿಐನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಗುಮಾನಿಗಳಿಗೆ ಪ್ರಬಲ ಸಾಕ್ಷ್ಯ ಸಿಕ್ಕಂತಾಗಿದೆ.

ಆಡಳಿತ ಪಕ್ಷದ ‘ಪಂಜರ ಗಿಳಿ’ ಎಂಬ ಆರೋಪಗಳೇನೆ ಇದ್ದರೂ, ಸಿಬಿಐ ಅಥವಾ ಕೇಂದ್ರ ತನಿಖಾ ದಳ ಇವತ್ತಿಗೂ ದೇಶದ ಪ್ರಮುಖ ತನಿಖಾ ಸಂಸ್ಥೆ ಎಂಬ ಹೆಸರು ಉಳಿಸಿಕೊಂಡು ಬಂದಿತ್ತು. ಆದರೆ ಭಾನುವಾರ ಹೊರಬಿದ್ದ ಭ್ರಷ್ಟಾಚಾರ ಪ್ರಕರಣ ಸಿಬಿಐ ಎಂಬ ಪಂಜರಕ್ಕೆ ಗೆದ್ದಲು ಮೆತ್ತಿದ್ದನ್ನು ದೇಶದ ಜನರ ಮುಂದಿಟ್ಟಿದೆ.

ತನಿಖಾ ಸಂಸ್ಥೆಯ ಎರಡನೇ ಉನ್ನತ ಉದ್ದೆಯಲ್ಲಿದ್ದ ಗುಜರಾತ್ ಮೂಲದ ರಾಕೇಶ್ ಅಸ್ತಾನ ವಿರುದ್ಧ ಭ್ರಷ್ಟಾಚಾರದ ಪ್ರಕರಣವನ್ನು ಹೈದ್ರಾಬಾದ್‌ನ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿದೆ. ಅಷ್ಟೆ, ಅಲ್ಲ ಈ ಪ್ರಕರಣದಲ್ಲಿ ಲಂಚ ಪಡೆಯಲು ಮಧ್ಯವರ್ತಿಯಾಗಿದ್ದ ದುಬೈ ಮೂಲದ ಬೇನಾಮಿ ಹೂಡಿಕೆದಾರ ಮನೋಜ್ ಪ್ರಸಾದ್ ಎಂಬಾತನನ್ನು ಬಂಧಿಸಲಾಗಿದೆ. ಜತೆಗೆ, ಪ್ರಕರಣ ಸಂಬಂಧ ನಡೆದ ವಾಟ್ಸಾಪ್‌ ಕರೆಗಳು, ಮೆಸೇಜ್‌ಗಳು ಹಾಗೂ ದ್ವನಿ ಮುದ್ರಿತ ಕರೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಮೂಲಕ ಸಿಬಿಐನಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಗುಮಾನಿಗಳಿಗೆ ಪ್ರಬಲ ಸಾಕ್ಷ್ಯ ಸಿಕ್ಕಂತಾಗಿದೆ.

ಏನಿದು ಪ್ರಕರಣ?:

2014ರಲ್ಲಿ ಮೊಯಿನ್ ಖುರೇಶಿ ಎಂಬ ಮಾಂಸ ರಫ್ತು ಮಾಡುತ್ತಿದ್ದ ಉದ್ಯಮಿಯ ಮೇಲೆ ಐಟಿ ಇಲಾಖೆ ದಾಳಿ ನಡೆಸಿತ್ತು. ಈತ ಅಕ್ರಮ ಲೇವಾದೇವಿ ನಡೆಸುತ್ತಿದ್ದ ಆರೋಪದ ಮೇಲೆ ಪ್ರರಕಣವನ್ನು ದಾಖಲಿಸಿಕೊಂಡಿತ್ತು. ಈ ಸಮಯದಲ್ಲಿ ಖುರೇಶಿ ಬಳಿ ಸಿಕ್ಕಿದ್ದ ಬ್ಲಾಕ್‌ ಬೆರಿ ಮೆಸೇಜ್‌ಗಳ ಮೂಲಕ ಮಾಜಿ ಸಿಬಿಐ ನಿರ್ದೇಶಕ ಎ. ಪಿ. ಸಿಂಗ್ ಅಕ್ರಮಗಳ ಮಾಹಿತಿ ಲಭ್ಯವಾಗಿತ್ತು. ಅಂದಿಗೆ ಯುಪಿಎಸ್‌ಸಿಯಲ್ಲಿ ಸದಸ್ಯರಾಗಿದ್ದ ಸಿಂಗ್ ರಾಜೀನಾಮೆ ನೀಡಲು ಇದು ಕಾರಣವಾಗಿತ್ತು. ಇದಾಗಿ ಮೂರು ವರ್ಷಗಳ ನಂತರ ಅಂದರೆ 2017ರಲ್ಲಿ ಸಿಬಿಐಗೆ ಪ್ರಕರಣ ವರ್ಗಾವಣೆಯಾಗಿತ್ತು. ತನಿಖೆಗೆ ತನಿಖಾ ಸಂಸ್ಥೆಯ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು.

ಇದೇ ಲೇವಾದೇವಿ ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದ ಸಿಬಿಐನ ಎಸ್‌ಐಟಿ, ಹೈದ್ರಾಬಾದ್ ಮೂಲಕ ಉದ್ಯಮಿ ಸತೀಶ್ ಸನ ಎಂಬಾತನನ್ನು ವಿಚಾರಣೆ ನಡೆಸಲು ಆರಂಭಿಸಿತ್ತು. ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಸತೀಶ್ ಸನ ವಿಚಾರಣೆಗೆ ಹಾಜರಾಗಿ, ‘ತಾವು ಖುರೇಶಿಗೆ 50 ಲಕ್ಷ ಹೂಡಿಕೆ ಮಾಡಿದ್ದಾಗಿಯೂ, ಅದು ಕಾನೂನು ಬದ್ಧವಾಗಿತ್ತು’ ಎಂದು ಹೇಳಿಕೆ ನೀಡಿದ್ದರು. ಆದರೆ ಪದೇ ಪದೇ ಅದೇ ವಿಚಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸನಗೆ ನೋಟಿಸ್ ಜಾರಿಯಾಗುತ್ತಿತ್ತು.

ಹೀಗಿರುವಾಗ, 2017ರ ಡಿಸೆಂಬರ್ ತಿಂಗಳಿನಲ್ಲಿ ದುಬೈ ಮೂಲದ ಹೂಡಿಕೆದಾರ ಮನೋಜ್ ಪ್ರಸಾದ್‌ ಮೂಲಕ ಸತೀಶ್ ಸನ ಸಿಬಿಐ ವಿಚಾರಣೆಯಿಂದ ಕೈಬಿಡಲು ‘ಲಂಚ’ ನೀಡಲು ಮುಂದಾಗುತ್ತಾರೆ. ಅಲ್ಲಿಂದ ಮುಂದೆ 10 ತಿಂಗಳುಗಳ ಅಂತರದಲ್ಲಿ ಸುಮಾರು 3 ಕೋಟಿ ರೂಪಾಯಿ ಲಂಚ ನೀಡಿದ್ದಾಗಿ ಈಗ ಸತೀಶ್ ಸನ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಮತ್ತು, ಇಷ್ಟು ಹಣವನ್ನು ರಾಕೇಶ್ ಅಸ್ತಾನ ಅವರ ಹೆಸರಿನಲ್ಲಿ ಪಡೆಯಲಾಗಿದೆ ಎಂದು ಕರೆಗಳ ಸಾಕ್ಷಿ ಸಮೇತ ಮುಂದಿಟ್ಟಿದ್ದಾರೆ. ಸಿಬಿಐ ದೂರು ದಾಖಲಿಸಿಕೊಂಡು ಕೊನೆಯ ಕಂತಿನ ಲಂಚ ಪಡೆಯಲು ಮನೋಜ್ ಭಾರತಕ್ಕೆ ಬಂದಾಗಲೇ ಬಂಧಿಸಿದೆ.

ಸಿಬಿಐ ಒಳಗೆ:

ದೂರು- ಆರೋಪ- ಗುಮಾನಿ: ‘ಪಂಜರದ ಗಿಳಿ’ ಸಿಬಿಐ ಒಳಗೆ ನಿಜಕ್ಕೂ ಏನು ನಡೆಯುತ್ತಿದೆ?

ವಿಶೇಷ ಅಂದರೆ ನಾಲ್ಕು ತಿಂಗಳ ಹಿಂದೆ ರಾಜೇಶ್ ಅಸ್ತಾನ ಇದೇ ಪ್ರಕರಣದಲ್ಲಿ ಸಿಬಿಐನ ನಿರ್ದೇಶಕ ಅಲೋಕ್ ವರ್ಮಾ ಮೇಲೆ ಆರೋಪ ಮಾಡಿದ್ದರು. ತೆಲಗು ದೇಸಂ ಪಕ್ಷದ ಮುಖಂಡರೊಬ್ಬರ ಮೂಲಕ ಸತೀಶ್ ಸನ, ನೇರವಾಗಿ ಸಿಬಿಐ ನಿರ್ದೇಶಕ ಜತೆ ‘ಸೆಟಲ್‌ಮೆಂಟ್’ ಮಾಡಿಕೊಂಡಿದ್ದಾನೆ ಎಂದು ಅಸ್ತಾನ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಕೆಲವು ವರದಿಗಳ ಪ್ರಕಾರ, ಸಿಬಿಐನ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐನ ವಿಶೇಷ ನಿರ್ದೇಶಕ ಅಸ್ತಾನ ನಡುವೆ ವೈಮನಸ್ಸು ಹುಟ್ಟುಕೊಂಡಿತ್ತು. ‘ಅಸ್ತಾನ ಸಿಬಿಐ ನಿರ್ದೇಶಕರ ಹೆಸರು ಕೆಡಿಸಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂಬ ಅಸಹನೆ ಹುಟ್ಟಿತ್ತು. ಆದರೆ ಅದೀಗ ಅಸ್ತಾನ ವಿರುದ್ಧವೇ ಪ್ರಕರಣ ದಾಖಲಾಗುವ ಮೂಲಕ ಸಿಬಿಐನ ಹಿರಿಯ ಅಧಿಕಾರಿಗಳ ನಡುವಿನ ಕಿತ್ತಾಟ ಬಹಿರಂಗವಾಗಿದೆ. ಇಷ್ಟೆ ಅಲ್ಲ, ಇದೇ ಪ್ರಕರಣದಲ್ಲಿ ದೇಶದ ಪ್ರಮುಖ ಬೇಹುಗಾರಿಕಾ ಸಂಸ್ಥೆ ರಾನ ಹಿರಿಯ ಅಧಿಕಾರಿಯೊಬ್ಬರ ಭಾಗೀದಾರಿಕೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಸಾಮಾನ್ಯವಾಗಿ ಪ್ರಕರಣಗಳು ಸಿಬಿಐಗೆ ವಹಿಸಿದರೆ ನ್ಯಾಯ ಸಿಗುತ್ತದೆ ಎಂಬ ಭರವಸೆಯೊಂದು ದೇಶದಲ್ಲಿದೆ. ಭ್ರಷ್ಟಾಚಾರದಂತಹ ಪ್ರಕರಣಗಳನ್ನು ಸಿಬಿಐ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಿದ ಉದಾಹರಣೆಗಳೂ ಇವೆ. ಆದರೆ ಇದೀಗ ಸಿಬಿಐ ಒಳಗಡೆಯೇ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದು ತನಿಖಾ ಸಂಸ್ಥೆ ಹೊಂದಿದ್ದ ಮೆರಗಿಗೆ ದೊಡ್ಡ ಹೊಡೆತ ಕೊಟ್ಟಿದೆ. ಈ ಮೂಲಕ ದೇಶದ ತನಿಖಾ ಪ್ರಮುಖ ತನಿಖಾ ಸಂಸ್ಥೆಯ ಸುತ್ತ ಗುಮಾನಿಗಳು ಎದ್ದಿವೆ. ಇದನ್ನು ಕೇಂದ್ರ ಸರಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.