samachara
www.samachara.com
ಪ್ರಧಾನಿ ಮೋದಿಯ ‘ನೀಲಿ ಕಣ್ಣಿನ ಹುಡುಗ’ ರಾಕೇಶ್‌ ಅಸ್ತಾನಾ; ಸಿಬಿಐ ಟಾಪ್‌ ಕಾಪ್‌ನ ವಿವಾದಿತ ಚರಿತ್ರೆ ಇದು!
COVER STORY

ಪ್ರಧಾನಿ ಮೋದಿಯ ‘ನೀಲಿ ಕಣ್ಣಿನ ಹುಡುಗ’ ರಾಕೇಶ್‌ ಅಸ್ತಾನಾ; ಸಿಬಿಐ ಟಾಪ್‌ ಕಾಪ್‌ನ ವಿವಾದಿತ ಚರಿತ್ರೆ ಇದು!

ರಾಕೇಶ್‌ ಅಸ್ತಾನಾರಿಗೆ ಗುಜರಾತ್‌ನಲ್ಲಿದ್ದಷ್ಟು ದಿನ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಹೀಗೊಂದು ಅವಕಾಶ ಸೃಷ್ಟಿಸಿದವರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ.

ಭಾನುವಾರ ಕೇಂದ್ರ ತನಿಖಾ ದಳ (ಸಿಬಿಐ)ನ ವಿಶೇಷ ನಿರ್ದೇಶಕ, ಗುಜರಾತ್‌ ಮೂಲದ ಐಪಿಎಸ್‌ ಅಧಿಕಾರಿ ರಾಕೇಶ್ ಆಸ್ತಾನ ವಿರುದ್ಧ ಹೈದಾರಾಬಾದ್‌ನ ಸಿಬಿಐ ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್‌ ದಾಖಲಿಸಿಕೊಂಡಿದೆ. ತನ್ನ ಸಂಸ್ಥೆಯ ಉನ್ನತ ಅಧಿಕಾರಿ ವಿರುದ್ಧವೇ ಪ್ರಕರಣ ದಾಖಲಿಸಿರುವ ಅಪರೂಪದ ಪ್ರಕರಣ ಇದು.

ಲೇವಾದೇವಿ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣವೊಂದನ್ನು ಮುಚ್ಚಿ ಹಾಕಲು 2 ಕೋಟಿ ರೂಪಾಯಿ ಲಂಚ ಪಡೆದುಕೊಂಡ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಹಾಗಂಥ ಅವರ ವಿರುದ್ಧ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಇದೆಲ್ಲಾ ಹೊರ ಜಗತ್ತಿಗೆ ಗೊತ್ತಿರಲಿಲ್ಲ ಎಂದಲ್ಲ. ಈ ಹಿಂದೆ ಹಲವು ಬಾರಿ ಅವರು ಗಂಭೀರ ಆರೋಪಗಳಿಗೆ ಗುರಿಯಾಗಿದ್ದಾರೆ.

ಇದಕ್ಕಿಂತಲೂ ಗಮನಾರ್ಹ ಸಂಗತಿಗಳು ಅಸ್ತಾನಾ ಹಿನ್ನೆಲೆಯಲ್ಲಿ ಸಿಗುತ್ತವೆ.

ಗುಜರಾತ್‌ನಿಂದ ದೆಹಲಿವರೆಗೆ

ರಾಕೇಶ್‌ ಅಸ್ತಾನಾ ಮೂಲತಃ 1984ರ ಬ್ಯಾಚ್‌ನ ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿ. ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮಾ ಮಾಡಿಕೊಂಡು ನಂತರ ಪೊಲೀಸ್‌ ಇಲಾಖೆಗೆ ಕಾಲಿಟ್ಟವರು ಅವರು. ಸೂರತ್‌, ವಡೋದರಾ ನಗರಗಳ ಪೊಲೀಸ್‌ ಆಯುಕ್ತರಾಗಿದ್ದರು. ಮುಂದೆ ಅಹಮದಾಬಾದ್ ನಗರದ ಜಂಟಿ ಆಯುಕ್ತರಾದರು. ಅಲ್ಲಿಂದ ವಡೋದರಾ ಭಾಗದ ಡಿಜಿಪಿ ಮತ್ತು ಸಿಐಡಿ ಡಿಐಜಿ ಹುದ್ದೆಗಳನ್ನು ನಿಭಾಯಿಸಿದ್ದರು.

ಅವರು ಗುಜರಾತ್‌ನಲ್ಲಿದ್ದಷ್ಟು ದಿನ ಅವರನ್ನು ಹೇಳುವವರು ಕೇಳುವವರು ಯಾರೂ ಇರಲಿಲ್ಲ ಎನ್ನುತ್ತಾರೆ ಅಲ್ಲಿನ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು. ಕುಖ್ಯಾತ ಗೋಧ್ರಾ ಗಲಭೆಗೆ ಮೂಲ ಕಾರಣವಾದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಇಟ್ಟ ಪ್ರಕರಣದ ತನಿಖೆ ಅವರ ನೇತೃತ್ವದಲ್ಲಿ ನಡೆದಿತ್ತು. ಈ ಪ್ರಕರಣದಲ್ಲಿ ಅವರು ಮುಗ್ಧ ಮುಸ್ಲಿಮರನ್ನು ಬಂಧನಕ್ಕೆ ಗುರಿಪಡಿಸಿದರು ಎಂಬ ಆರೋಪಗಳಿವೆ. ಗುಜರಾತ್‌ನಲ್ಲಿ ಇದ್ದಷ್ಟೂ ದಿನ ಅವರು ಯಾವ ಹುದ್ದೆಗೆ ಹೋದರೂ ಡಿಜಿಪಿ ಮಾತನ್ನೇ ಕೇಳುತ್ತಿರಲಿಲ್ಲ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಹೀಗೊಂದು ಅವಕಾಶ ಸೃಷ್ಟಿಸಿದವರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ.

ಇದರ ನಡುವೆ ಅವರು 1994ರಿಂದ 2002ರ ನಡುವೆ ಅವರು ಸಿಬಿಐಗೂ ಹೋಗಿ ಬಂದಿದ್ದರು. ಸಿಬಿಐ ಪಾಟ್ನಾ ಕಚೇರಿಯಲ್ಲಿ ಎಸ್‌ಪಿಯಾಗಿದ್ದ ಸಂದರ್ಭ ಅವರು ಲಾಲು ಪ್ರಸಾದ್‌ ಯಾದವ್‌ ಮೇಲೆ ಸಮರವನ್ನೇ ಸಾರಿದ್ದರು. ಸ್ವತಃ ಲಾಲು ಪ್ರಸಾದ್‌ ಅವರನ್ನು ಬಂಧಿಸಿದ್ದರು. ಅಸರಾಂ ಬಾಪು ಅತ್ಯಾಚಾರ ಪ್ರಕರಣವನ್ನು ತನಿಖೆಗೆ ಒಳಪಡಿಸಿದವರಲ್ಲಿಯೂ ಇವರು ಒಬ್ಬರಾಗಿದ್ದರು.

ಹೀಗಿರುವಾಗಲೇ 2001ರಲ್ಲಿ ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾದವರು. ಗದ್ದುಗೆ ಏರಿದವರೇ ಆಸ್ತಾನಾರನ್ನು ವಾಪಸ್‌ ಗುಜರಾತ್‌ಗೆ ಕರೆಸಿಕೊಂಡರು. ಮುಂದಿನದು ಸಾಬರಮತಿ ಎಕ್ಸ್‌ಪ್ರೆಸ್‌ ತನಿಖೆ. ಪೊಲೀಸ್‌ ಇಲಾಖೆಯಲ್ಲಿ ಸ್ವಚ್ಛಂದದ ಹಕ್ಕಿಯಾಗಿದ್ದ ಆಸ್ತಾನ, ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ದೆಹಲಿ ವಿಮಾನ ಹತ್ತಿದರು. ಸಿಬಿಐ ಒಳಹೊಕ್ಕ ಆಸ್ತಾನಾ ಮತ್ತೆ ಲಾಲು ಪ್ರಸಾದ್‌ ಯಾದವ್‌ ಮೇಲೆ ಮುಗಿ ಬಿದ್ದರು.

ಜುಲೈ 7, 2017ರಲ್ಲಿ ಐಆರ್‌ಸಿಟಿಸಿ ಹೋಟೆಲ್‌ ಹಗರಣದಲ್ಲಿ ಆರೋಪಿಯಾಗಿದ್ದ ಲಾಲು ಪ್ರಸಾದ್‌ ಯಾದವ್‌ ಮನೆ, ಕಚೇರಿಗಳ ಮೇಲೆ ಆಸ್ತಾನಾ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ರಾಜಕೀಯ ಪ್ರೇರಿತ ದಾಳಿಗಳಿಗೆ ತಡೆಯೊಡ್ಡಲು ಸ್ವತಃ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮುಂದಾದರೂ ಆಸ್ತಾನಾ ಹಿರಿಯಾಧಿಕಾರಿ ಮಾತು ಕೇಳಲಿಲ್ಲ. ಈ ಕಾರಣಕ್ಕೆ ಸಿಬಿಐ ನಿರ್ದೇಶಕರಲ್ಲೇ ಒಡಕು ಹುಟ್ಟಿಕೊಂಡಿತು. ನಿರ್ದೇಶಕರ ಅಣತಿಯನ್ನೇ ಮೀರಿ ಹೀಗೊಂದು ದಾಳಿ ನಡೆಸಲು ಅವರಿಗೆ ದೆಹಲಿ ದರ್ಬಾರ್‌ನವರ ಶ್ರೀರಕ್ಷೆಯೇ ಕಾರಣವಾಗಿತ್ತು.

ಹೀಗೊಂದು ಮುನ್ಸೂಚನೆ ಇದ್ದೇ, 2017ರಲ್ಲಿ ಅವರ ನೇಮಕದ ಸಂದರ್ಭದಲ್ಲಿ ಆಕ್ಷೇಪಗಳು ಕೇಳಿ ಬಂದಿದ್ದವು. ‘ಕಾಮನ್‌ ಕಾಸ್‌’ ಎಂಬ ಸರಕಾರೇತರ ಸಂಸ್ಥೆ ಅವರ ನೇಮಕವನ್ನು ಪ್ರಶ್ನಿಸಿ ಅಂದೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಈ ಹಿಂದಿನ ಯುಪಿಎ ಸರಕಾರಕ್ಕೆ ಮುಳುವಾಗಿದ್ದ ಕೋಲ್‌ ಸ್ಕ್ಯಾಮ್‌, ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ, ಕಪ್ಪು ಹಣ, ಕಿಂಗ್‌ಫಿಷರ್‌ ಏರ್‌ಲೈನ್ಸ್‌, ಲೇವಾದೇವಿಗೆ ಸಂಬಂಧಿಸಿದ 40ಕ್ಕೂ ಹೆಚ್ಚು ಪ್ರಕರಣಗಳನ್ನು ಅವರು ತನಿಖೆಗೆ ಒಳಪಡಿಸಿದ ಹಿನ್ನಲೆ ಅವರಿಗಿತ್ತು. ಜತೆಗೆ ‘ಸ್ಟೆರ್ಲಿಂಗ್‌ ಬಯೋಟೆಕ್‌’ ಪ್ರಕರಣದಲ್ಲಿಯೂ ಅವರ ಪಾತ್ರವಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕಾರಣಕ್ಕೆ ಅವರನ್ನು ಸಿಬಿಐಗೆ ನೇಮಕ ಮಾಡಬಾರದು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್‌ ಆಗ್ರಹಿಸಿದ್ದರು.

ಹೀಗಿದ್ದೂ ಅವರು ಸಿಬಿಐನ ವಿಶೇಷ ನಿರ್ದೇಶಕರಾದರು. ಇದಕ್ಕೆ ಮತ್ತದೇ ನರೇಂದ್ರ ಮೋದಿ ಕೃಪಾಕಟಾಕ್ಷವಿತ್ತು. ಇದೀಗ ಇಲ್ಲಿಯೂ ಅವರು ಸ್ವಚ್ಛಂದ ಹಕ್ಕಿಯಾಗಿದ್ದರು. ಸಾಲದ್ದಕ್ಕೆ ಇಲಾಖೆಯ ನಿರ್ದೇಶಕರ ವಿರುದ್ಧವೇ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದು ಆರೋಪಗಳ ಸುರಿಮಳೆ ಸುರಿಸುತ್ತಿದ್ದರು. ಆದರೆ, ನಡೆಯುವ ವ್ಯಕ್ತಿಯೇ ಮುಗ್ಗಿರಿಸುವಾಗ, ಓಡುವ ವ್ಯಕ್ತಿ ಮುಗ್ಗರಿಸದೇ ಇರಲು ಹೇಗೆ ಸಾಧ್ಯ? ಅಸ್ತಾನಾ ಕೂಡ ತಮ್ಮ ಇಷ್ಟೆಲ್ಲಾ ಹಿನ್ನೆಲೆಗಳ ನಡುವೆಯೂ ಎಡುವಿದ್ದಾರೆ. ಅವರು ಕೆಲಸ ಮಾಡುವ ಇಲಾಖೆಯೇ ಅವರ ಮೇಲೆ ದೂರು ದಾಖಲಿಸಿ ತನಿಖೆ ಆರಂಭಿಸಿದೆ. ಈಗ ಕೇಂದ್ರ ಸರಕಾರ ತಳೆಯುವ ನಿಲುವು ಮೋದಿ ಸರಕಾರದ ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಓರೆಗೆ ಹಚ್ಚುವ ಸಮಯ ಬಂದಿದೆ.