samachara
www.samachara.com
ಸುರಿದಿದ್ದು 4 ಸಾವಿರ ಕೋಟಿ, ಆಗಿದ್ದು ಗಂಗೆ ಮತ್ತಷ್ಟು ಮಲಿನ; ಇದು ಮೋದಿಯ ‘ನಮಾಮಿ ಗಂಗೆ’ ಕಥೆ!
COVER STORY

ಸುರಿದಿದ್ದು 4 ಸಾವಿರ ಕೋಟಿ, ಆಗಿದ್ದು ಗಂಗೆ ಮತ್ತಷ್ಟು ಮಲಿನ; ಇದು ಮೋದಿಯ ‘ನಮಾಮಿ ಗಂಗೆ’ ಕಥೆ!

ಕೇಂದ್ರ ಸರಕಾರ ಗಂಗೆಯ ಒಡಲಿಗೆ ನೀರಿನಂತೆ ಹಣ ಸುರಿಯುತ್ತಲೇ ಇದೆ. ಹೀಗಿದ್ದೂ ಮತ್ತಷ್ಟು ಮಲಿನಗೊಂಡ ಗಂಗೆ ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರದಿಂದಲೇ ಹಾದು ಹೋಗುತ್ತಿದ್ದಾಳೆ. ಗಂಗೆಯನ್ನು ‘ತಾಯಿ’ ಎಂದವರು ಇದನ್ನು ಗಮನಿಸಬೇಕಿದೆ.

ಗಂಗೆಯ ಉಳಿವಿಗಾಗಿ ಹಲವಾರು ವರ್ಷಗಳ ಕಾಲ ಹೋರಾಟ ಮಾಡಿ ಅಕ್ಟೋಬರ್‌ 11ರಂದು ಪ್ರಾಣ ಬಿಟ್ಟವರು ಜಿ.ಡಿ. ಅಗರ್ವಾಲ್‌. 112 ದಿನಗಳ ಕಾಲ ಉಪವಾಸವಿದ್ದ ಅವರು ಪ್ರಧಾನಿ ನರೇಂದ್ರ ಮೋದಿಗೆ ಮೂರು ಬಾರಿ ಪತ್ರ ಬರೆದು ಗಂಗಾ ನದಿಯ ಶುದ್ಧೀಕರಣಕ್ಕೆ ಒತ್ತಾಯಿಸಿದ್ದರು. ಆದರೆ ಗಂಗಾ ನದಿಯನ್ನು ‘ತಾಯಿ’ ಎಂದು ಕರೆದಿದ್ದ ಮೋದಿ ಕಡೆಯಿಂದ ಉತ್ತರವೇ ಬರದೆ ಅವರು ಕೊನೆಗೆ ಪ್ರಾಣವನ್ನೇ ತ್ಯಜಿಸಿದರು.

ಈ ಮೂಲಕ 2019ರ ಚುನಾವಣೆಗೂ ಮೊದಲು ಗಂಗಾ ನದಿಯ ಶುದ್ಧೀಕರಣದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ನದಿಯ ಶುದ್ಧೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೇರಿದ ಸಂದರ್ಭದಲ್ಲೇ ಆರಂಭ ಶೂರತ್ವ ತೋರಿದ್ದರು. ಅವರ ಅವಧಿಯಲ್ಲಿ ಗಂಗಾ ನದಿಯ ಶುದ್ಧೀಕರಣಕ್ಕೆ 2014ರಿಂದ 2018ರ ಜೂನ್‌ವರೆಗೆ 5,523 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬರೋಬ್ಬರಿ 3,867 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಹಾಗಂಥ ಗಂಗಾ ನದಿ ಶುದ್ಧವಾಯಿತೇ? ಇಲ್ಲ. ಬದಲಿಗೆ ಮತ್ತಷ್ಟು ಮಲಿನವಾಗಿದೆ ಎಂದು ಸ್ವತಃ ನರೇಂದ್ರ ಮೋದಿ ಸರಕಾರದ ವರದಿಯೇ ಹೇಳುತ್ತಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಈ ಸಂಬಂಧ ಮಾಹಿತಿ ನೀಡಿದ್ದು ನದಿಯಲ್ಲಿ ಬಯೋಲಾಜಿಕಲ್‌ ಆಕ್ಷಿಜನ್‌ ಡಿಮಾಂಡ್‌ (ಬಿಒಡಿ-ಜೈವಿಕ ಆಮ್ಲಜನಕದ ಬೇಡಿಕೆ) 2017ರಲ್ಲಿ ಎಂದಿಗಿಂತ ಹೆಚ್ಚಾಗಿದೆ ಎಂದು ಹೇಳಿದೆ. ಹೆಚ್ಚಿನ ಸ್ಥಳಗಳಲ್ಲಿ ಡಿಸಾಲ್ವ್‌ಡ್‌ ಆಕ್ಸಿಜನ್‌ (ಡಿಒ) ಪ್ರಮಾಣ ನಿರಂತರವಾಗಿ ಕುಸಿತವಾಗುತ್ತಿದೆ ಎಂಬುದಾಗಿ ಈ ಮಾಹಿತಿಯಲ್ಲಿ ಉಲ್ಲೇಖವಾಗಿದೆ. ಸರಳವಾಗಿ ಹೇಳಬೇಕೆಂದರೆ ಬಿಒಡಿ ಹೆಚ್ಚಾಗಿದ್ದರೆ ಅದು ನದಿ ಮತ್ತು ಅದರಲ್ಲಿರುವ ಪ್ರಾಣಿಗಳು ಇಬ್ಬರಿಗೂ ಕೆಟ್ಟದ್ದು. ಇನ್ನು ಡಿಒ ಪ್ರಮಾಣ ಕುಸಿಯುತ್ತಿದೆ ಎಂದರೆ ನದಿ ಮಲಿನವಾಗುತ್ತಿದೆ ಎಂದರ್ಥ.

ವೈಜ್ಞಾನಿಕವಾಗಿ ಹೇಳಬೇಕೆಂದರೆ ಶುದ್ಧ ನೀರಿನಲ್ಲಿ ಬಿಒಡಿ ಲೀಟರ್‌ಗೆ 3 ಮಿಲಿಗ್ರಾಂಗಿಂತ ಕಡಿಮೆ ಇರಬೇಕು. ಡಿಒ ಲೀಟರ್‌ಗೆ 4 ಮಿಲಿಗ್ರಾಂಗಿಂತ ಜಾಸ್ತಿ ಇರಬೇಕು. ಇದನ್ನು ಲೆಕ್ಕ ಹಾಕಲು ಸಿಪಿಸಿಬಿ ನದಿಗಳಿಂದ ಮಾದರಿಗಳನ್ನು ಸಂಗ್ರಹಿಸುತ್ತದೆ. 2,525 ಕಿಲೋಮೀಟರ್‌ ಉದ್ದದ ಗಂಗಾ ನದಿಯಲ್ಲಿ ಒಟ್ಟು 80 ಜಾಗಗಳಲ್ಲಿ ಹೀಗೆ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.

ಈ ರೀತಿ 2013ರಲ್ಲಿ ಮಾದರಿಗಳನ್ನು ಸಂಗ್ರಹಿಸಿದಾಗ 80ರಲ್ಲಿ 31 ಜಾಗಗಳಲ್ಲಿ ಬಿಒಡಿ ಲೀಟರ್‌ಗೆ 3 ಮಿಲಿಗ್ರಾಂಗಿಂತ ಹೆಚ್ಚು ಇತ್ತು. 24 ಸ್ಥಳಗಳಲ್ಲಿ 2-3 ಮಿಲಿ ಗ್ರಾಂನಷ್ಟ ಇತ್ತು. 2017ಕ್ಕೆ ಬಂದಾಗ 36 ಸ್ಥಳಗಳಲ್ಲಿ ಬಿಒಡಿ 3 ಮಿಲಿಗ್ರಾಂಗಿಂತ ಜಾಸ್ತಿ ಇದೆ. 30 ಸ್ಥಳಗಳಲ್ಲಿ 2-3 ಮಿಲಿ ಗ್ರಾಂ ಇದೆ. ಬಿಒಡಿ ಹೆಚ್ಚಾಗಿರುವ ಸ್ಥಳಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ.

ಗಂಗಾ ನದಿಯ ಮಾಲಿನ್ಯದ ಮಟ್ಟ
ಗಂಗಾ ನದಿಯ ಮಾಲಿನ್ಯದ ಮಟ್ಟ
/ದಿ ವೈರ್‌

ಸಿಪಿಸಿಬಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಒಂದೊಮ್ಮೆ ಬಿಒಡಿ ಲೀಟರ್‌ಗೆ 2 ಮಿಲಿ ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಮತ್ತು ಡಿಒ ಲೀಟರ್‌ಗೆ 6 ಮಿಲಿ ಗ್ರಾಂಗಿಂತ ಹೆಚ್ಚಾಗಿದ್ದಾರೆ ಆ ನೀರನ್ನು ಶುದ್ಧೀಕರಿಸದೆ ನೇರವಾಗಿ ಕುಡಿಯಬಹುದಾಗಿದೆ. ಒಂದೊಮ್ಮೆ ಡಿಒ 2-3 ಮಿಲಿ ಗ್ರಾಂ/ಲೀ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ನೀರನ್ನು ಶುದ್ದೀಕರಿಸದೇ ಕುಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಎಲ್ಲಿಯಾದರೂ ಬಿಒಡಿ 3 ಮಿಲಿ ಗ್ರಾಂ/ಲೀ ಗಿಂತ ಹೆಚ್ಚಾಗಿದ್ದರೆ, ಡಿಒ 5 ಮಿಲಿ ಗ್ರಾಂ/ಲೀ ಗಿಂತ ಕಡಿಮೆಯಾಗಿದ್ದರೆ ಆ ನೀರನ್ನು ಸ್ನಾನಕ್ಕೂ ಬಳಸುವಂತಿಲ್ಲ. ಇದೀಗ ಸಿಪಿಸಿಬಿ ವರದಿಗಳ ಪ್ರಕಾರ ಗಂಗಾನದಿಯ ಅರ್ಧಕ್ಕರ್ಧ ಜಾಗದಲ್ಲಿ ನೀರು ಕುಡಿಯಲು ಮತ್ತು ಮನ ಬಳಕೆಗೂ ಯೋಗ್ಯವಲ್ಲ.

ಉತ್ತರಾಖಂಡ್‌ನಲ್ಲಿ ಮಾತ್ರ ಗಂಗೆ ಪವಿತ್ರ:

ಸದ್ಯ ಉತ್ತರಾಖಂಡ್‌ ಭಾಗದಲ್ಲಿ ಹರಿಯುವ ಗಂಗಾನದಿಯ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಗಂಗಾ ನದಿ ಹುಟ್ಟಕೊಳ್ಳುವ ಗಂಗೋತ್ರಿ, ರುದ್ರಪ್ರಯಾಗ, ದೇವಪ್ರಯಾಗ ಮತ್ತು ರಿಷಿಕೇಶದಲ್ಲಿ ನೀರು ಬಳಕೆಗೆ ಯೋಗ್ಯವಾಗಿದೆ. ಅಲ್ಲಿಂದ ಮುಂದೆ ನದಿಯ ನೀರು ಮಲಿನವಾಗುತ್ತಾ ಸಾಗುತ್ತದೆ.

ಅದರಲ್ಲೂ ಉತ್ತರಾಖಂಡ್‌ನ ಪ್ರಖ್ಯಾತ ಧಾರ್ಮಿಕ ಸ್ಥಳ ಹರಿದ್ವಾರದಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಇಲ್ಲಿ ಬಿಒಡಿ 6.6 ಮಿಲಿ ಗ್ರಾಂ/ಲೀ ಇದೆ. ಆದರೆ ಇಲ್ಲಿ 2013ರಲ್ಲಿ ಇದ್ದ 7.8 ಮಿಲಿಗ್ರಾಂ/ಲೀ ನಿಂದ ಸ್ವಲ್ಪ ಇಳಿಕೆಯಾಗಿದೆ ಎಂಬುದಷ್ಟೇ ಖುಷಿಯ ವಿಚಾರ.

ವಾರಣಾಸಿ, ಅಲಹಾಬಾದ್‌, ಕನೌಜ್‌, ಕಾನ್ಪುರ್‌, ಪಾಟ್ನಾ, ರಾಜ್‌ ಮಹಲ್‌, ದಕ್ಷಿಣೇಶ್ವರ್‌, ಹೌರಾ ಮತ್ತು ದರ್ಭಂಗದಲ್ಲಿ ಹರಿಯುವ ಗಂಗಾ ನದಿಯ ಮಾಲಿನ್ಯದಲ್ಲಿ 2013ರಿಂದ ಇಲ್ಲಿಯವರೆಗೆ ಯಾವುದೇ ಬದಲಾವಣೆ ಆಗಿಲ್ಲ. ಮೋದಿಯ ಸ್ವಕ್ಷೇತ್ರ ವಾರಣಾಸಿಯಲ್ಲಿ 2013ರಲ್ಲಿ ಇದ್ದ ಬಿಒಡಿ ಮಟ್ಟ 5.1 ಮಿಲಿ ಗ್ರಾಂ/ಲೀ ನಿಂದ 2017ರಲ್ಲಿ 6.1 ಮಿಲಿ ಗ್ರಾಂ/ಲೀಟರ್‌ಗೆ ಏರಿಕೆಯಾಗಿದೆ. ಅಲಹಾಬಾದ್‌ನಲ್ಲೂ 4.4 ಮಿಲಿ ಗ್ರಾಂ/ಲೀ ನಿಂದ 5.7 ಮಿಲಿ ಗ್ರಾಂ/ಲೀಟರ್‌ಗೆ ಏರಿಕೆಯಾಗಿದೇ. ಇದೇ ರೀತಿಯಲ್ಲಿ ಉತ್ತರ ಪ್ರದೇಶದ ಅಲಿಗಢ್‌, ಬುಲಂದ್‌ಶಹರ್‌ ಮತ್ತು ಪಶ್ಚಿಮ ಬಂಗಾಳದ ಟ್ರಿಬೆನಿ, ಡೈಮಂಡ್‌ ಹಾರ್ಬರ್‌ನಲ್ಲೂ ಬಿಒಡಿ ಮಟ್ಟ ಹೆಚ್ಚಳವಾಗಿದೆ.

‘ನಮಾಮಿ ಗಂಗೆ’:

ಇಂಥಹದ್ದೊಂದು ನದಿಯ ಶುದ್ಧೀಕರಣದ ಕನಸು ಇಟ್ಟುಕೊಂಡು ಮೇ 2015ರಲ್ಲಿ ‘ನಮಾಮಿ ಗಂಗೆ’ ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದರು ಪ್ರಧಾನಿ ನರೇಂದ್ರ ಮೋದಿ. ಇದರಲ್ಲಿ ಗಂಗಾ ನದಿಯ ಶುದ್ಧೀಕರಣಕ್ಕೆ ಸೂತ್ರಗಳನ್ನು ಸಿದ್ಧಪಡಿಸಲಾಗಿತ್ತು. ಕೈಗಾರಿಕೆ ಮತ್ತು ನಗರಗಳ ಕೊಳಚೆ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವುದು. ನದಿಯ ನೀರಿನಲ್ಲಿರುವ ಕಸವನ್ನು ತೆಗೆಯುವುದು, ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ನಿರ್ಮಾಣ, ನದಿಯ ಎರಡೂ ತೀರಗಳ ಅಭಿವೃದ್ಧಿ, ನದಿ ದಂಡೆಗಳ ನಿರ್ಮಾಣ, ಸಮಾಧಿ ಸ್ಥಳಗಳ ರಚನೆ, ಗಿಡಗಳನ್ನು ನೆಡುವುದು ಮತ್ತು ಜೀವ ವೈವಿಧ್ಯವನ್ನು ಕಾಪಾಡುವುದು ಇದರಲ್ಲಿ ಸೇರಿದ್ದವು.

ಗಂಗಾ ನದಿ ದಂಡೆಯಲ್ಲಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ
ಗಂಗಾ ನದಿ ದಂಡೆಯಲ್ಲಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೋ ಅಬೆ
/ಪಿಐಬಿ

ಈ ಕಾರ್ಯಕ್ರಮದ ಅಡಿಯಲ್ಲಿ 221 ಯೋಜನೆಗಳನ್ನು ಸಿದ್ಧಪಡಿಸಲಾಗಿತ್ತು. ಇದಕ್ಕೆ 22,238 ಕೋಟಿ ರೂಪಾಯಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿತ್ತು. ಇದರಲ್ಲಿ 105 ನೀರು ಶುದ್ಧಿಕರಿಸುವ 17,485 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭವಾಗಿವೆ. 26 ಘಟಕಗಳ ಕೆಲಸ ಸಂಪೂರ್ಣಗೊಂಡಿದೆ. ನದಿ ತೀರಗಳ ಅಭಿವೃದ್ಧಿ, ನದಿ ದಂಡೆಗಳ ನಿರ್ಮಾಣ, ಸಮಾಧಿ ಸ್ಥಳಗಳ ರಚನೆ ಮತ್ತು ನದಿ ಹರಿಯುವಿಕೆಯ ಶುದ್ಧೀಕರಣಕ್ಕೆ ಸಂಬಂಧಿಸಿದ 67 ಯೋಜನೆಗಳಲ್ಲಿ 24 ಸಂಪೂರ್ಣಗೊಂಡಿವೆ.

ಯೋಜನೆಗಳೇನೋ ಒಂದಷ್ಟು ಪೂರ್ಣಗೊಂಡಿವೆ, ಇನ್ನೊಂದಷ್ಟು ನಡೆಯುತ್ತಿವೆ. ಆದರೆ ಇವುಗಳ ಕಾರ್ಯಕ್ಷಮತೆ ಬಗ್ಗೆಯೇ ಖ್ಯಾತ ಪರಿಸರ ತಜ್ಞರೂ ಆದ ಅಗರ್ವಾಲ್‌ ಅನುಮಾನ ವ್ಯಕ್ತಪಡಿಸಿದ್ದರು. ಮತ್ತು ಇದನ್ನವರು ಮೋದಿ ಗಮನಕ್ಕೂ ಪತ್ರದ ಮುಖೇನ ತಂದಿದ್ದರು. ಈ ಯೋಜನೆಗಳು ಗಂಗೆಯ ಶುದ್ಧೀಕರಣಕ್ಕೆ ಕಡಿಮೆ ಕೊಡುಗೆ ನೀಡುತ್ತವೆ. ಬದಲಿಗೆ ಕಾರ್ಪೊರೇಟ್‌ ಕಂಪನಿಗಳಿಗಷ್ಟೇ ಲಾಭವನ್ನು ತಂದು ಕೊಡುತ್ತವೆ ಎಂಬುದು ಅವರ ಆರೋಪವಾಗಿತ್ತು.

ಇದೇ ವೇಳೆ ಸಿಎಜಿ ಕೆಲವು ಯೋಜನೆಗಳ ಬಗ್ಗೆ ಆಕ್ಷೇಪಗಳನ್ನೂ ಎತ್ತಿತ್ತು. ಐಐಟಿ ಜತೆ ‘ನ್ಯಾಷನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ’ ಯೋಜನೆಗಾಗಿ ಕೈ ಜೋಡಿಸಿ ಆರೂವರೆ ವರ್ಷಗಳು ಕಳೆದ ನಂತರವೂ ಯೋಜನೆ ಪೂರ್ಣಗೊಂಡಿಲ್ಲ. ‘ರಾಷ್ಟ್ರೀಯ ಗಂಗಾ ನದಿ ಪಾತ್ರ ಪ್ರಾಧಿಕಾರ’ ಆರಂಭವಾಗಿ 8 ವರ್ಷವಾದರೂ ನದಿ ಪಾತ್ರದ ಶುದ್ಧೀಕರಣಕ್ಕೆ ಸಂಬಂಧಿಸಿದ ಯಾವುದೇ ಯೋಜನೆಗಳ ರೂಪುರೇಷೆಗಳೂ ಇವರ ಬಳಿಯಲ್ಲಿ ಇಲ್ಲ ಎಂದು ಕಿಡಿಕಾರಿತ್ತು.

ಕೃಷಿಗೂ ಬಳಕೆಗೆ ಯೋಗ್ಯವಲ್ಲ:

ಬಿಒಡಿ ಮತ್ತು ಡಿಒಗಳಲ್ಲದೆ ಗಂಗಾ ನದಿಯ ನೀರಿನ ಗುಣಮಟ್ಟವನ್ನು ‘ಪೆಕಲ್‌ ಕ್ಯಾಲಿಫಾರ್‌ಮ್‌’ ಮತ್ತು ‘ಟೋಟಲ್‌ ಕ್ಯಾಲಿಫಾರ್ಮ್‌ ಬ್ಯಾಕ್ಟೀರಿಯಾ’ಗಳ ಸಂಖ್ಯೆ, ಜತೆಗೆ ‘ಪಿಎಚ್‌ (pH)’ ಮಟ್ಟ ಮತ್ತು ಹರಿಯುವಿಕೆ ಪ್ರಮಾಣವನ್ನು ಇಟ್ಟುಕೊಂಡು ಅಳೆಯಲಾಗುತ್ತದೆ.

ಸಿಪಿಸಿಬಿ ನಿಯಮಗಳ ಪ್ರಕಾರ ಕುಡಿಯಲು ಯೋಗ್ಯವಾದ ನೀರಿನಲ್ಲಿ 100 ಮಿಲಿ ಲೀಟರ್‌ನಲ್ಲಿ 50 ಎಂಪಿಎನ್‌ (ಮೋಸ್ಟ್‌ ಪ್ರೊಬಾಬಲ್‌ ನಂಬರ್‌) ಗಿಂತ ಕಡಿಮೆ ಟೋಟಲ್‌ ಕ್ಯಾಲಿಫಾರ್ಮ್‌ ಬ್ಯಾಕ್ಟೀರಿಯಾಗಳು ಇರಬೇಕು. ಮನೆ ಬಳಕೆಗೆ ಇದು 500 ಎಂಪಿಎನ್‌ಗಿಂತ ಕಡಿಮೆ ಇರಬೇಕು. ಒಂದೊಮ್ಮೆ ಹೆಚ್ಚಿದ್ದರೆ ವಿವಿಧ ನೀರಿನ ಸಂಬಂಧಿ ಖಾಯಿಲೆಗಳನ್ನು ಈ ನೀರು ಹೊತ್ತು ತರುತ್ತದೆ. ಗಂಗೆಯ ನೀರು ಗಂಗೋತ್ರಿ, ರುದ್ರಪ್ರಯಾಗ ಮತ್ತು ದೇವಪ್ರಯಾಗದಲ್ಲಿ ಮಾತ್ರ ಈ ಮಟ್ಟವನ್ನು ಕಾಯ್ದುಕೊಂಡಿದೆ. ಉಳಿದ ಕಡೆ ಪರಿಸ್ಥಿತಿ ಆಘಾತಕಾರಿಯಾಗಿದೆ. ಹರಿದ್ವಾರದಲ್ಲಿ ಕ್ಯಾಲಿಫಾರ್ಮ್‌ ಬ್ಯಾಕ್ಟೀರಿಯಾಗಳು 1,600 ಎಂಪಿಎನ್‌ರಷ್ಟಿದ್ದರೆ. ಅಲಹಾಬಾದ್‌ನಲ್ಲಿ 48,000, ವಾರಣಾಸಿಯಲ್ಲಿ 70,000, ಕಾನ್ಪುರದಲ್ಲಿ 1,30,000, ಬಿಹಾರ ಬಕ್ಸಾರ್‌ನಲ್ಲಿ 1,60,000 ಮತ್ತು ಹೌರಾದಲ್ಲಿನ ಹೌಹಾರುವಂತೆ 2,40,000 ಎಂಪಿಎನ್‌ ಇದೆ!

ಪಿಎಚ್‌ ಮಟ್ಟವನ್ನು ಅಳೆದು ನೀರನ್ನು ಕೃಷಿಗೆ ಬಳಸಬಹುದೋ ಇಲ್ಲವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಒಂದೊಮ್ಮೆ ಪಿಎಚ್‌ 6 ರಿಂದ 8.5 ಇದ್ದರೆ ನೀರನ್ನು ಕೃಷಿ ಬಳಕೆಗೆ ಬಳಸಬಹುದಾಗಿದೆ. 2017ರ ವರದಿ ಪ್ರಕಾರ ಗಂಗಾ ನದಿಯ ನೀರಿನಲ್ಲಿ ಪಿಎಚ್‌ ಮಟ್ಟ ಹೆಚ್ಚಿನ ಸ್ಥಳಗಳಲ್ಲಿ 8.5 ಕ್ಕಿಂತ ಹೆಚ್ಚಾಗಿದ್ದು ಕೃಷಿ ಬಳಕೆಗೂ ಯೋಗ್ಯವಾಗಿಲ್ಲ.

ಒಟ್ಟು ಐದು ರಾಜ್ಯಗಳಲ್ಲಿ ಗಂಗಾ ನದಿ ಹರಿಯುತ್ತದೆ. ಐದೂ ರಾಜ್ಯಗಳಲ್ಲಿರುವ ರಾಜ್ಯ ನಿಯಂತ್ರಣ ಮಂಡಳಿಗಳು ನದಿಯ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ಪರೀಕ್ಷೆಗೆ ಒಳಪಡಿಸಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಕೊಡುತ್ತವೆ. ಇದನ್ನು ಒಟ್ಟುಗೂಡಿಸಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ತಯಾರಿಸುತ್ತದೆ.

ಪ್ರತೀ ತಿಂಗಳು ಈ ರೀತಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಮಾಹಿತಿಗಳ ಮೇಲೆ ಕಣ್ಣಾಡಿಸಿದರೆ ತಿಂಗಳು ತಿಂಗಳಿಗೂ ಗಂಗಾ ನದಿಯ ಸ್ಥಿತಿ ವಿಷಮಗೊಳ್ಳುತ್ತಿದೆ. ಒಂದು ಕಡೆ ಕೇಂದ್ರ ಸರಕಾರ ಗಂಗೆಯ ಒಡಲಿಗೆ ನೀರಿನಂತೆ ಹಣ ಸುರಿಯುತ್ತಲೇ ಇದೆ. ಹೀಗಿದ್ದೂ ಮಲಿನಗೊಂಡ ಗಂಗೆ ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರದಿಂದಲೇ ಹಾದು ಹೋಗುತ್ತಿದ್ದಾಳೆ. ಗಂಗೆಯನ್ನು ‘ತಾಯಿ’ ಎಂದವರು ಇದನ್ನು ಗಮನಿಸಬೇಕಿದೆ.

ಕೃಪೆ: ದಿ ವೈರ್‌