samachara
www.samachara.com
ರಾಯಭಾರ ಕಚೇರಿಯಲ್ಲೇ ಪತ್ರಕರ್ತ ಹಶೋಗ್ಜಿ ಭೀಕರ ಹತ್ಯೆ; ಒಪ್ಪಿಕೊಂಡ ಸೌದಿ ಅರೇಬಿಯಾ
COVER STORY

ರಾಯಭಾರ ಕಚೇರಿಯಲ್ಲೇ ಪತ್ರಕರ್ತ ಹಶೋಗ್ಜಿ ಭೀಕರ ಹತ್ಯೆ; ಒಪ್ಪಿಕೊಂಡ ಸೌದಿ ಅರೇಬಿಯಾ

ಅಂತರಾಷ್ಟ್ರೀಯ ಒತ್ತಡ ಹೆಚ್ಚಾಗುತ್ತಿದ್ದಂತೆ ಸೌದಿ ಅರೇಬಿಯಾ ಸತ್ಯ ಒಪ್ಪಿಕೊಂಡಿದೆ. ‘ಕಾದಾಟದಲ್ಲಿ ಹಶೋಗ್ಜಿ ಸಾವನ್ನಪ್ಪಿದ್ದಾರೆ’ ಎಂದು ಕೊಲೆಗೆ ತೇಪೆ ಹಚ್ಚುವ ಕೆಲಸಕ್ಕೆ ಅದು ಕೈ ಹಾಕಿದೆ.

ಕೊನೆಗೂ ಸೌದಿ ಅರೇಬಿಯಾ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದ ಹತ್ಯೆಯ ಹೊಣೆ ಹೊತ್ತುಕೊಂಡಿದೆ. ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯೊಳಗೇ ಪತ್ರಕರ್ತ ಜಮಾಲ್‌ ಹಶೋಗ್ಜಿ ಕೊಲೆಯಾಗಿದ್ದಾರೆ ಎಂದು ಸೌದಿ ಸರಕಾರ ಬರೋಬ್ಬರಿ 17 ದಿನಗಳ ನಂತರ ಅನಿವಾರ್ಯವಾಗಿ ಒಪ್ಪಿಕೊಂಡಿದೆ.

‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಕರ್ತ ಜಮಾಲ್ ಹಶೋಗ್ಜಿ ಅಕ್ಟೋಬರ್‌ 2ರಂದು ಮಧ್ಯಾಹ್ನ ಸೌದಿ ರಾಯಭಾರ ಕಚೇರಿಯೊಳಕ್ಕೆ ಹೊಕ್ಕಿದ್ದರು. ಹೊರಗಡೆ ತಮ್ಮ ಭಾವೀ ಪತ್ನಿಯನ್ನು ನಿಲ್ಲಿಸಿ ಅವರು ಒಳ ಹೋಗಿದ್ದರು. ಈ ಹಿಂದಿನ ಮದುವೆಯ ವಿಚ್ಛೇದನ ಪತ್ರ ಪಡೆಯಲು ಅವರು ಒಳ ಹೋಗಿದ್ದರು. ಆದರೆ ಹಾಗೆ ಹೋದವರು ಮರಳಿ ಬರದೆ ನಾಪತ್ತೆಯಾಗಿದ್ದರು. ಘಟನೆ ಹೊರ ಬಂದ ಬೆನ್ನಿಗೆ ಅವರು ರಾಯಭಾರ ಕಚೇರಿಯಲ್ಲೇ ಕೊಲೆಯಾಗಿದ್ದಾರೆ ಎಂದು ಟರ್ಕಿಯ ತನಿಖಾ ಸಂಸ್ಥೆಗಳು ವಾದಿಸಿದ್ದವು.

ಚಿತ್ರ ಹಿಂಸೆ ನೀಡಿ ಹತ್ಯೆ

ಬುಧವಾರ ಟರ್ಕಿ ಸರಕಾರದ ಪರವಾಗಿರುವ ಪತ್ರಿಕೆ ‘ಯೆನಿ ಸಫಕ್‌’ ಹಶೋಗ್ಜಿಯನ್ನು ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಹೇಳಿತ್ತು. ಕೊಲೆಯ ಆಡಿಯೋ ರೆಕಾರ್ಡಿಂಗ್‌ ಆಧರಿಸಿ ತಾನು ವರದಿ ಬರೆಯುತ್ತಿರುವುದಾಗಿ ಹೇಳಿರುವ ಪತ್ರಿಕೆ, ಹಶೋಗ್ಜಿ ರಾಯಭಾರ ಕಚೇರಿ ಹೊಕ್ಕ ತಕ್ಷಣ 15 ಜನ ಕೊಲೆಗಡುಕರ ತಂಡ ಮುಖಾಮುಖಿಯಾಗಿದೆ. ಈ ವೇಳೆ ಮೊದಲಿಗೆ ಹಶೋಗ್ಜಿ ಬೆರಳುಗಳನ್ನು ತುಂಡು ತುಂಡು ಮಾಡಿ ನಂತರ ಶಿರಚ್ಛೇದನ ಮಾಡಲಾಗಿದೆ ಎಂದು ವರದಿ ಮಾಡಿತ್ತು.

ಈ ವಾರದ ಆರಂಭದಲ್ಲಿ ಟರ್ಕಿಯ ತನಿಖಾ ತಂಡ ಸೌದಿ ಧೂತವಾಸ ಕಚೇರಿ, ರಾಯಭಾರಿಯ ಮನೆಯಲ್ಲಿ ಹುಡುಕಾಟ ನಡೆಸಿತ್ತು. ನಂತರ ಬ್ಯಾಗುಗಳು ಮತ್ತು ಬಾಕ್ಸ್‌ಗಳ ಸಮೇತ ಹೊರ ಬಂದಿತ್ತು. ಸೌದಿ ರಾಯಭಾರ ಕಚೇರಿಯ ಅಧಿಕಾರಿಗಳ ಈ ಸಂದರ್ಭದಲ್ಲಿ ವಿಚಾರಣೆಗೆ ಗುರಿಪಡಿಸಿತ್ತು. ತನಿಖೆ ವೇಳೆ ಅವರು ಕೊಲೆಯಾಗಿದ್ದಾರೆ ಎಂದು ತಿಳಿದು ಬಂದಿತ್ತಾದರೂ ಅವರ ಮೃತ ದೇಹ ಪತ್ತೆಯಾಗಿರಲಿಲ್ಲ.

ಅಕ್ಟೋಬರ್ 2ರಂದು ರಾಯಭಾರಿ ಕಚೇರಿ ಹೊಕ್ಕಿದ್ದ ಜಮಾಲ್‌ ಹಶೋಗ್ಜಿಯ ಕೊನೆಯ ಚಿತ್ರ
ಅಕ್ಟೋಬರ್ 2ರಂದು ರಾಯಭಾರಿ ಕಚೇರಿ ಹೊಕ್ಕಿದ್ದ ಜಮಾಲ್‌ ಹಶೋಗ್ಜಿಯ ಕೊನೆಯ ಚಿತ್ರ

ಹೀಗಿದ್ದೂ ರಾಯಭಾರ ಕಚೇರಿಯೊಳಗೆ ಹಶೋಗ್ಜಿ ಕೊಲೆಯಾಗಿರುವುದನ್ನು ಸೌದಿ ಅರೇಬಿಯಾ ತಳ್ಳಿ ಹಾಕುತ್ತಲೇ ಬಂದಿತ್ತು. ಇದೀಗ ಅಂತರಾಷ್ಟ್ರೀಯ ಒತ್ತಡ ಹೆಚ್ಚಾಗುತ್ತಿದ್ದಂತೆ ಸೌದಿ ಸತ್ಯ ಒಪ್ಪಿಕೊಂಡಿದೆ. ‘ಕಾದಾಟದಲ್ಲಿ ಅವರು ಸಾವನ್ನಪ್ಪಿದ್ದಾರೆ’ ಎಂದು ಕೊಲೆಗೆ ತೇಪೆ ಹಚ್ಚುವ ಕೆಲಸಕ್ಕೆ ಸೌದಿ ಇಳಿದಿದೆ. ಆದರೆ ಅವರ ಮೃತದೇಹದ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸೌದಿ ಅರೇಬಿಯಾ ಅಟಾರ್ನಿ ಜನರಲ್‌ ಶೇಖ್‌ ಸೌದ್‌ ಅಲ್‌ ಮೊಜೆಬ್‌, ಹಶೋಗ್ಜಿ ರಾಯಭಾರ ಕಚೇರಿ ಒಳಹೊಕ್ಕ ಬೆನ್ನಲ್ಲೇ, “ಅವರಿಗೆ ಮತ್ತು ಅವರನ್ನು ಭೇಟಿ ಮಾಡಿದ ವ್ಯಕ್ತಿಗಳ ನಡುವೆ ಚರ್ಚೆ ಆರಂಭವಾಗಿತ್ತು.. ಇಸ್ತಾಂಬುಲ್‌ನಲ್ಲಿರುವ ಸೌದಿ ದೂತಾವಾಸದಲ್ಲಿ ನಡೆದ ಈ ಘಟನೆ ಕಾದಾಟದ ತನಕ ಹೋಗಿತ್ತು. ಈ ಜಗಳ ನಾಗರಿಕ ಪ್ರಜೆ ಜಮಾಲ್‌ ಹಶೋಗ್ಜಿ ಸಾವಿಗೆ ಕಾರಣವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ,” ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.

ತನಿಖೆ ಇನ್ನೂ ನಡೆಯುತ್ತಿದೆ. ಈ ಸಂಬಂಧ 18 ಸೌದಿ ಪ್ರಜೆಗಳನ್ನು ಬಂಧಿಸಲಾಗಿದೆ. ರಾಜಮನೆತನ ಕಾನೂನು ಸಲಹೆಗಾರ ಸೌದ್ ಅಲ್‌ ಖ್ವಹ್ತಾನಿ ಮತ್ತು ಉಪ ಗುಪ್ತಚರ ಮುಖ್ತಸ್ಥ ಅಹಮದ್‌ ಅಲ್‌ ಅಸಿರಿ ಅವರನ್ನು ತಮ್ಮ ಹುದ್ದೆಯಿಂದ ಕಿತ್ತೊಗೆಯಲಾಗಿದೆ ಎಂಬ ವಿವರಗಳನ್ನು ಅವರು ನೀಡಿದ್ದಾರೆ. ಈ ಮೂಲಕ ಸೌದಿ ಅರೇಬಿಯಾ ತಾನೇ ಕೊಲೆ ಮಾಡಿ ಈಗ ಅದನ್ನು ಬೇರೆಯವರ ತಲೆಗೆ ಕಟ್ಟುವ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ತಮ್ಮದೇ ದೇಶದವರನ್ನು ಜೈಲಿಗಟ್ಟುವ ನಾಟಕವಾಡುತ್ತಿದೆ.

ಕೊಲೆಗೂ ಮೊದಲು 15 ಜನರು ವಿಶೇಷ ವಿಮಾನಗಳಲ್ಲಿ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಿಂದ ಇಸ್ತಾಂಬುಲ್‌ಗೆ ಬಂದಿದ್ದರು. ಹೀಗಿರುವಾಗ ಇವರೆಲ್ಲಾ ಸೌದಿ ಆಡಳಿತವನ್ನು ಹಿಡಿತದಲ್ಲಿಟ್ಟುಕೊಂಡಿರುವ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅಣತಿ ಇಲ್ಲದೆ ಬರಲು ಸಾಧ್ಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಸೌದಿ ರಾಜ ಸಲ್ಮಾನ್‌ ಬಿನ್‌ ಅಬ್ದುಲ್‌ ಅಜೀಜ್‌ ಅಲ್‌ ಸೌದ್‌ ತಮ್ಮ ಮಗನನ್ನು ಯುವರಾಜನ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಅಮೆರಿಕಾದ ರಾಷ್ಟ್ರೀಯ ಭದ್ರತಾ ಕೇಂದ್ರದ ನಿರ್ದೇಶಕಿ ಕರೆನ್‌ ಗ್ರಿನ್‌ಬರ್ಗ್‌ ಒತ್ತಾಯಿಸಿದ್ದಾರೆ.

ಶಸ್ತ್ರಾಸ್ತ್ರ ಡೀಲ್‌ನಲ್ಲಿ ನಿರತರಾಗಿರುವ ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 
ಶಸ್ತ್ರಾಸ್ತ್ರ ಡೀಲ್‌ನಲ್ಲಿ ನಿರತರಾಗಿರುವ ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 
/ಬಿಸಿನೆಸ್‌ ಇನ್‌ಸೈಡರ್‌

Also read: ಸೌದಿಯಲ್ಲ ಇದು ‘ಸಲ್ಮಾನ್‌ ಅರೇಬಿಯಾ’: ಹಶೋಗ್ಜಿ ಸಾವು ಮತ್ತು ಭವಿಷ್ಯದ ಸರ್ವಾಧಿಕಾರಿಯ ಸುತ್ತ...

ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಒಂದೊಮ್ಮೆ ಸೌದಿ ಅರೇಬಿಯಾ ಈ ಸಾವಿನ ಹಿಂದಿದ್ದರೆ ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ 8 ಲಕ್ಷ ಕೋಟಿ ರೂಪಾಯಿ ವೆಚ್ಚದ (110 ಬಿಲಿಯನ್‌ ಡಾಲರ್‌) ಶಸ್ತ್ರಾಸ್ತ್ರ ಖರೀದಿ ಡೀಲ್‌ನ್ನು ಮಾತ್ರ ರದ್ದುಗೊಳಿಸುವುದಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ.

ಇದಕ್ಕೆ ಅಮೆರಿಕಾದಲ್ಲೇ ವಿರೋಧ ವ್ಯಕ್ತವಾಗಿದೆ. ಸೌದಿ ಅರೇಬಿಯಾದ ಜತೆಗಿನ ಎಲ್ಲಾ ವ್ಯವಹಾರಗಳನ್ನು ಅಮೆರಿಕಾ ಕಡಿತಗೊಳಿಸಬೇಕು ಎಂದು ರಿಪಬ್ಲಿಕ್‌ ಪಕ್ಷದ ಸೆನೆಟರ್‌ ರಾಂಡ್‌ ಪೌಲ್‌ ಆಗ್ರಹಿಸಿದ್ದಾರೆ. “ಎಲ್ಲಾ ನೆರವು, ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟ, ಸಹಕಾರವನ್ನು ತಕ್ಷಣ ನಿಲ್ಲಿಸಬೇಕು. ಸೌದಿ ಅರೇಬಿಯಾದ ಈ ಕೃತ್ಯಕ್ಕೆ ತಕ್ಕ ಬೆಲೆ ತೆರಲೇಬೇಕು,” ಎಂದು ಅವರು ಕಿಡಿಕಾರಿದ್ದಾರೆ. ಆದರೆ ಧನದಾಹಿ ಅಮೆರಿಕಾ ಸೌದಿ ಬಗ್ಗೆ ಮೃದು ಧೋರಣೆ ತಳೆಯುತ್ತಿದ್ದು, ಆಪ್ತ ಮಿತ್ರನ ಮೇಲೆ ನಿರ್ಬಂಧಗಳನ್ನು ಹೇರಲು ಹಿಂದೆ ಮುಂದೆ ನೋಡುತ್ತಿದೆ. ಇರಾನ್‌ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿ ಸದ್ದು ಮಾಡುತ್ತಿರುವ ‘ದೊಡ್ಡಣ್ಣ’ ಸೌದಿ ಮೇಲೆ ಮಾತ್ರ ಕೈ ಎತ್ತುತ್ತಿಲ್ಲ. ಪರಿಣಾಮ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಆರಾಮವಾಗಿ ತಿರುಗಾಡಿಕೊಂಡಿದ್ದಾನೆ. ದುಡ್ಡಿದ್ದರೆ ಏನು ಮಾಡಿದರೂ ನಡೆಯುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ!