samachara
www.samachara.com
‘ವ್ಯಕ್ತಿ ಪರಿಚಯ’: ಮೆಡಿಕಲ್ ಕಾಲೇಜು ಸ್ಥಾಪನೆ ಒಂದು ದಂಧೆ ಎಂದವರು ತೋಂಟದಾರ್ಯ ಶ್ರೀ!
COVER STORY

‘ವ್ಯಕ್ತಿ ಪರಿಚಯ’: ಮೆಡಿಕಲ್ ಕಾಲೇಜು ಸ್ಥಾಪನೆ ಒಂದು ದಂಧೆ ಎಂದವರು ತೋಂಟದಾರ್ಯ ಶ್ರೀ!

ಕಾವಿ ಒಳಗೆ ಅಂತಃಕರಣವನ್ನು ಮಾತ್ರವೇ ಉಳಿಸಿಕೊಂಡು, ಇತರೆ ವಸೂಲಿಬಾಜಿಗಳಿಂದ ದೂರವೇ ಉಳಿದಿದ್ದ ಅಪರೂಪದ ಸ್ವಾಮಿಗಳ ಪೈಕಿ ತೋಂಟದಾರ್ಯ ಶ್ರೀಗಳೂ ಒಬ್ಬರು.

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಇನ್ನಿಲ್ಲ.

ತಮ್ಮನ್ನು ತಾವು ಮಠಕ್ಕೆ ಸೀಮಿತಗೊಳಿಸದೆ ಕರ್ನಾಟಕದ ಮಟ್ಟಿಗೆ ವಿಶಿಷ್ಟವಾಗಿ ಗುರುತಿಸಿಕೊಂಡ ಸ್ವಾಮೀಜಿಗಳಲ್ಲಿ ಇವರು ಅಗ್ರಮಾನ್ಯರು. ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಹೇಳಿಕೆಗಳನ್ನು ನೀಡುವ ವಿಚಾರಕ್ಕೆ ಬಂದಾಗ, ರಾಜಕೀಯ, ರಾಜಕಾರಣಿಗಳನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಅಚ್ಚರಿಯ ರೀತಿಯಲ್ಲಿ ಶ್ರೀರಾಮುಲು ತರಹದವರನ್ನೇ ಹೊಗಳಿ ಅಟ್ಟಕ್ಕೇರಿಸುತ್ತಿದ್ದಿದ್ದೂ ಉಂಟು.

ಸಿದ್ಧಲಿಂಗ ಮಹಾಸ್ವಾಮಿಗಳು ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿಯವರು. ಇದೇ ಊರಿನಿಂದ ಬಂದಿದ್ದ ಕನ್ನಡದ ಖ್ಯಾತ ವಿದ್ವಾಂಸ ಡಾ. ಎಂ. ಎಂ ಕಲಬುರ್ಗಿ ಇವರ ಗುರುಗಳಾಗಿದ್ದರು. ಸ್ವಾಮಿಗಳು ಪ್ರತೀವಾರ ತಮ್ಮ ಮಠದಲ್ಲಿ ಶಿವಾನುಭವ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದರು. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಪ್ರವಚನಕ್ಕೆ ಸೀಮಿತವಾದರೆ ಇಲ್ಲಿ ವಿಶೇಷವಾಗಿ ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು.

ಬರವಣಿಗೆಯಲ್ಲಿ ನಿರತ ಸ್ವಾಮಿಗಳ ಚಿತ್ರ. 
ಬರವಣಿಗೆಯಲ್ಲಿ ನಿರತ ಸ್ವಾಮಿಗಳ ಚಿತ್ರ. 

ಲಿಂಗಾಯತ ಮಠದ ಸ್ವಾಮೀಜಿಯಾಗಿದ್ದ ಅವರು ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. 89 ಶಿಕ್ಷಣ ಸಂಸ್ಥೆಗಳನ್ನು ಮಠದ ಕಡೆಯಿಂದ ನಡೆಸುತ್ತಿದ್ದರು. ಕೋಮು ಸೌಹಾರ್ದ ಅವರ ಆಸಕ್ತಿಯ ಕ್ಷೇತ್ರವಾಗಿತ್ತು. ‘ಕರ್ನಾಟಕ ಕೋಮು ಸೌಹಾರ್ದ ವೇದಿಕೆ’ ಜತೆ ಅವರು ತುಂಬಾ ನಿಟಕವಾದ ಒಡನಾಟವನ್ನು ಇಟ್ಟುಕೊಂಡಿದ್ದರು.

“ಯಾದಗಿರಿ ಜಿಲ್ಲೆಯ ಸುರಪುರದ ಹತ್ತಿರ ಚಿಂತಣಿ ಎಂಬಲ್ಲಿ ವಿಶಿಷ್ಟವಾದ ಸೌಹಾರ್ದ ಕೇಂದ್ರವೊಂದಿದೆ. ಅದನ್ನು ಅವರೇ ಉದ್ಘಾಟನೆ ಮಾಡಿದ್ದರು. ಗೌರಿ ಲಂಕೇಶ್‌ ಬಗ್ಗೆ, ವೇದಿಕೆಯ ಬಗ್ಗೆ, ನಾವು ಮಾಡುತ್ತಿದ್ದ ಸೌಹಾರ್ದ ಕೆಲಸಗಳ ಬಗ್ಗೆ ಅವರಿಗೆ ವಿಶೇಷವಾದ ಪ್ರೀತಿ ಮತ್ತು ಮಮಕಾರವಿತ್ತು,” ಎನ್ನುತ್ತಾರೆ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಕೆ.ಎಲ್‌. ಅಶೋಕ್‌.

ಸೌಹಾರ್ದ ಪರಂಪರೆಯ ಬಗ್ಗೆ ಬಹಳ ಆಳವಾದ ಮತ್ತು ವಿಶಾಲವಾದ ಜ್ಞಾನವನ್ಹು ಅವರು ಹೊಂದಿದ್ದರು. ಪ್ರಸಕ್ತ ಕರ್ನಾಟಕದ ಬಸವ ಯುಗದ ಪ್ರವರ್ತಕರು ಅವರು ಎನ್ನುತ್ತಾರೆ ಅಶೋಕ್‌. “ಬೆಂಗಳೂರಿನ ಸಮಾವೇಶಗಳಿಗೆ, ಚಿಕ್ಕಮಗಳೂರಿನ ಸಮಾವೇಶಗಳಿಗೆ ಅವರನ್ನು ಕರೆದಿದ್ದೆವು. ಅವರ ಭಾಷಣ ಕೇಳುವುದೇ ಒಂದು ರೋಮಾಂಚನ. ಸರಳತೆ, ವೈಚಾರಿಕತೆಯನ್ನು ಅವರು ಪ್ರತಿಪಾದಿಸುತ್ತಿದ್ದರು. ಮತ್ತು ಅದೇ ರೀತಿಯಲ್ಲಿ ಬದುಕಿದ್ದರು. ಅವರಿಗೆ ಹೆಚ್ಚೇನು ವಯಸ್ಸಾಗಿರಲಿಲ್ಲ. ಅವರ ನಿಧನದಿಂದ ಸೌಹಾರ್ದದ ದೊಡ್ಡ ಕೊಂಡಿ ಕಳಚಿತು,” ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾಮಿಗಳ ಕೋಮು ಸೌಹಾರ್ದ, ಎಲ್ಲಾ ಜಾತಿಗಳನ್ನು ಒಳಗೊಳ್ಳುವ ನೇರ ಮತ್ತು ನಿಷ್ಠೂರ ನಡೆಗೆ ಸಾಕಷ್ಟು ಘಟನೆಗಳನ್ನು ಉದಾಹರಣೆಯಾಗಿ ಮುಂದಿಡುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. “ಶಿವಯೋಗಿ ಮಂದಿರಕ್ಕೆ ನೂರು ವರ್ಷ ತುಂಬಿದ ಸಮಯದಲ್ಲಿ ಸಮಾರಂಭಕ್ಕೆ ಬಂದಿದ್ದರು. ಎದುರಿಗೆ ಸಾವಿರಾರು ಆಸನಗಳನ್ನು ಹಾಕಿದ್ದರೂ ಕೆಲವೇ ಜನ ಬಂದು ಕುಳಿತಿದ್ದರು. ಭಾಷಣ ಆರಂಭಿಸಿದ ಸ್ವಾಮಿಗಳು, ನೀವು ಲಿಂಗಾಯತರು ಜಾತಿಯತೆ ಮಾಡುವ ಕಾರಣಕ್ಕೆ ಜನ ಸೇರುತ್ತಿಲ್ಲ. ಶಿವಯೋಗಿ ಮಂದಿರದಲ್ಲಿ ಇತರೆ ಜಾತಿಗಳಿಗೆ ಅವಕಾಶ ಇಲ್ಲ ಎಂದು ಬೈಲಾ ಮಾಡಿಸಿದಿರಿ. ಜಾತಿ ಜಂಗಮರ ನಡುವೆ ವಿಚ್ಛಿದ್ರಕಾರಿ ಶಕ್ತಿಗಳು ಬಂದು ಕುಳಿತಿವೆ ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ವಾಪಾಸ್ ಬರುವಾಗ ಸ್ವಾಮಿಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆದಿತ್ತು,’’ ಎಂದು ನೆನಪಿಸಿಕೊಳ್ಳುತ್ತಾರೆ ವಿಶ್ವಾರಾದ್ಯ ಸತ್ಯಂಪೇಟೆ.

ಇದೇ ಕೋಮು ಸೌಹರ್ದ ವಲಯದಲ್ಲಿ ಅವರ ಸೇವೆಯನ್ನು ಗುರುತಿಸಿ 2001ರಲ್ಲಿ ‘ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ’ ಇವರನ್ನು ಅರಸಿಕೊಂಡು ಬಂದಿತ್ತು. ಹಾಗೆ ನೋಡಿದರೆ ಇಂಥಹ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ಸ್ವಾಮಿಗಳು ಕೋಮು ಸೌಹಾರ್ಧವಲ್ಲದೆ ಪರಿಸರ ಹೋರಾಟಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಗದಗದಲ್ಲಿ ಪೋಸ್ಕೋ ಕಂಪನಿ ವಿರುದ್ಧ ಚಳವಳಿ ನಡೆಸಿ ಕಂಪನಿಯನ್ನು ಒದ್ದೋಡಿಸಿದ್ದರು. 2017ರ ಆರಂಭದಲ್ಲಿ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಬಲ್ದೋಟ ಕಂಪನಿ ಹುನ್ನಾರ ನಡೆಸಿದಾಗ ಬೀದಿಗೆ ಧುಮಿಕಿದ್ದರು. ಅವರು ಇಂದು ಕೂಡ ಕಪ್ಪತ್ತಗುಡ್ಡ ಕುರಿತಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.

ಗದುಗಿನ ತೋಂಟದಾರ್ಯ ಮಠವೇ ಹಾಗೆ, ರಾಜ್ಯದ ಹಲವು ಪ್ರಗತಿಪರ ಚಳವಳಿಗಳ ತವರು ಮನೆ ಅನ್ನಿಸಿಕೊಂಡಿತ್ತು. ಇದಕ್ಕೆ ಕಾರಣ, ಸ್ವಾಮೀಜಿ ವೈಚಾರಿಕತೆ ಕಡೆಗೆ ಹೊಂದಿದ್ದ ಆಸಕ್ತಿ. ವಚನಗಳನ್ನು ಅಧ್ಯಯನ ಮಾಡಿದ್ದ ಅವರು, ಬಸವಣ್ಣ, ಅಂಬೇಡ್ಕರ್ ಹಾಗೂ ಬುದ್ಧನನ್ನು ಸಮಾನ ಅಂತರದಲ್ಲಿ ನೋಡುತ್ತಿದ್ದರು. ಅಂಬೇಡ್ಕರ್ ಬಗೆಗೆ ‘ಭೀಮ ಪುರಾಣ’ದ ಹೆಸರಿನಲ್ಲಿ ಪುಸ್ತಕವನ್ನೂ ಪ್ರಕಟಿಸಿದ್ದರು. ಜತೆಗೆ, ಲಿಂಗಾಯತ ಗ್ರಂಥಮಾಲದ ಹೆಸರಿನಲ್ಲಿ, ಪುಣ್ಯ ಪುರುಷರ ಮಾಲಿಕೆ ಹೆಸರಿನಲ್ಲಿ ಲಕ್ಷಾಂತರ ವಿಚಾರಪೂರ್ಣ ಪುಸ್ತಕಗಳನ್ನು ಪ್ರಕಟಿಸಿ ಹಿನ್ನೆಲೆ ಇವರಿಗಿತ್ತು.

ಗೋಕಾಕ್ ಚಳವಳಿಯಿಂದ ಹಿಡಿದು, ಇತ್ತೀಚಿನ ಪರಿಸರ ಹೋರಾಟಗಳವರೆಗೆ ಸ್ವಾಮೀಜಿ ಭಾಗೀದಾರಿಕೆ ಅವರ ಕಾಳಜಿಗೆ ಹಿಡಿದ ಕನ್ನಡಿಯಾಗಿವೆ. ದಲಿತರನ್ನು ಮಠಾಧೀಶರನ್ನಾಗಿಸುವ ಅವರ ಪ್ರಯತ್ನದ ವಿರುದ್ಧ ವಿವಾದಗಳನ್ನು ಎಬ್ಬಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ವಿವಾದಗಳನ್ನು ಮೀರಿದ ಜನಪ್ರಿಯತೆ ಅವರ ವೈಚಾರಿಕೆ ನಡಿಗೆಗೆ ಸಮಸ್ಯೆಯಾಗಲಿಲ್ಲ. ಒಟ್ಟಾರೆ, ಕಾವಿ ತೊಟ್ಟೂ ಧಾರ್ಮಿಕ ಉದ್ಯಮದಿಂದ ದೂರವೇ ಉಳಿದ ಅಪರೂಪದ ಸ್ವಾಮಿಗಳ ಪೈಕಿ ತೋಂಟದಾರ್ಯ ಶ್ರೀಗಳೂ ಒಬ್ಬರು. ಹಿಂದೊಮ್ಮೆ, “ಸ್ವಾಮಿ ನೀವು ಯಾಕೆ ಮೆಡಿಕಲ್ ಕಾಲೇಜು ಆರಂಭಿಸಲಿಲ್ಲ ಎಂದು ಕೇಳಿದೆ. ಅಯ್ಯೋ ಮೆಡಿಕಲ್ ಕಾಲೇಜು ಅಂದರೆ ಹಣ ಮಾಡುವ ದಂಧೆ ಅಷ್ಟೆ. ನಮಗೆ ಹಣ ಯಾಕೆ ಬೇಕು ತಮ್ಮಾ ಎಂದಿದ್ದರು,’’ ಎಂದು ನೆನಪಿಸಿಕೊಳ್ಳುತ್ತಾರೆ ವಿಶ್ವಾರಾದ್ಯ. ಇದು ಕಾವಿ ಒಳಗೆ ಅಂತಃಕರಣವನ್ನು ಮಾತ್ರವೇ ಉಳಿಸಿಕೊಂಡು, ಇತರೆ ವಸೂಲಿಬಾಜಿಗಳಿಂದ ದೂರವೇ ಉಳಿದಿದ್ದ ಸ್ವಾಮೀಜಿ ಅವರ ವ್ಯಕ್ತಿತ್ವದ ಪರಿಚಯ.

ಚಿತ್ರಕೃಪೆ: ಕನ್ನಡಪ್ರಭ