samachara
www.samachara.com
ಏಕಸ್ವಾಮ್ಯತೆ ಕಡೆಗೆ ದೇಶದ ಟಿವಿ ಮಾಧ್ಯಮ: ಕೇಬಲ್ ಜಾಲಕ್ಕೂ ಕಾಲಿಟ್ಟ ಮುಖೇಶ್ ಅಂಬಾನಿ
COVER STORY

ಏಕಸ್ವಾಮ್ಯತೆ ಕಡೆಗೆ ದೇಶದ ಟಿವಿ ಮಾಧ್ಯಮ: ಕೇಬಲ್ ಜಾಲಕ್ಕೂ ಕಾಲಿಟ್ಟ ಮುಖೇಶ್ ಅಂಬಾನಿ

ಕಳೆದ 4 ವರ್ಷಗಳಲ್ಲಿ ದೇಶದ ಹಲವು ಉದ್ಯಮಗಳಿಗೆ ದಾಗುಂಡಿ ಇಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಆಪ್ತ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಮುಖ್ಯಸ್ಥ ಮುಖೇಶ್‌ ಅಂಬಾನಿ ಇದೀಗ ಕೇಬಲ್‌ ಟಿವಿ ವಲಯಕ್ಕೂ ಕಾಲಿಟ್ಟಿದ್ದಾರೆ.

ನಿಮ್ಮ ಹಣೆಬರಹ ಬರೆಯುವವನು ಬ್ರಹ್ಮ ಅಲ್ಲ, ಮುಖೇಶ್ ಅಂಬಾನಿ; ಹೀಗೊಂದು ಮಾತು ನಿಜವಾಗುವ ದಿನಗಳು ದೂರವಿದ್ದಂತೆ ಕಾಣಿಸುತ್ತಿಲ್ಲ. ದೇಶದ ಕೋಟ್ಯಾಂತ ಜನರ ಅಭಿಪ್ರಾಯವನ್ನು ರೂಪಿಸುವ, ಕೋಟ್ಯಾಂತರ ಜನರಿಗೆ ಸುದ್ದಿ ಹಾಗೂ ಮನೋರಂಜನೆ ನೀಡುವ ಮೂಲಕ ಅವರ ಆಲೋಚನಾ ಕ್ರಮವನ್ನು ಬದಲಿಸುವ ಟಿವಿ ಮಾಧ್ಯಮ ಏಕಸ್ವಾಮ್ಯತೆ ಕಡೆಗೆ ಸಾಗುತ್ತಿದೆ.

ಗುಜರಾತ್ ಮೂಲದ ನರೇಂದ್ರ ಮೋದಿ ಬಿಜೆಪಿ ಅಡಿಯಲ್ಲಿ ಚುನಾವಣೆ ಗೆದ್ದು ದೇಶದ ಚುಕ್ಕಾಣಿ ಹಿಡಿದಿದ್ದು 2014ರಲ್ಲಿ. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಮುಖೇಶ್ ಅಂಬಾನಿ ದೇಶದ ಪ್ರಖ್ಯಾತ ಪ್ರಾದೇಶಿಕ ವಾಹಿನಿ ಸಮೂಹ ‘ಈ ಟಿವಿ’ಯನ್ನು ಕೊಂಡುಕೊಂಡರು. ಅದಿವತ್ತು ನೆಟ್ವರ್ಕ್‌ 18 ಹೆಸರಿನಲ್ಲಿ ದೇಶದ ಹಲವು ಭಾಷೆಗಳಲ್ಲಿ ಸುದ್ದಿ ಹಾಗೂ ಮನೋರಂಜನಾ ಸರಕನ್ನು ಮಾರಾಟ ಮಾಡುತ್ತಿದೆ. ಹೀಗಿರುವಾಗಲೇ, ಕೇಬಲ್‌ ಟಿವಿ ವಲಯಕ್ಕೂ ಮುಖೇಶ್ ಅಂಬಾನಿ ಕಾಲಿಟ್ಟ ಸುದ್ದಿ ಹೊರಬಿದ್ದಿದೆ.

ಕೇಬಲ್ ನೆಟ್ವರ್ಕ್‌ ಪ್ರಮುಖ ಯಾಕೆ?:

ಕಾರ್ಪೊರೇಟ್ ಭಾಷೆಯಲ್ಲಿ 'ಕಂಟೆಂಟ್’ ಎಂದು ಕರೆಯುವ ಸುದ್ದಿ ಹಾಗೂ ಮನೋರಂಜನೆಯ ಸರಕುಗಳನ್ನು ವಾಹಿನಿಗಳು ಉತ್ಪಾದಿಸಿ ಬಿತ್ತರಿಸುವ ಕೆಲಸ ಮಾಡುತ್ತಿವೆ. ಹಾಗೆ ಬಿತ್ತರಗೊಂಡ ಕಂಟೆಂಟ್‌ನ್ನು ಮನೆಮನೆಗೆ ತಲುಪಿಸುವ ಕೆಲಸವನ್ನು ಮಲ್ಟಿ ಸಿಸ್ಟಂ ಆಪರೇಟರ್ಸ್‌ (ಎಂಎಸ್‌ಓ)ಗಳು ಮಾಡುತ್ತಿವೆ. ಇವನ್ನೇ ಹಿಂದೆ ‘ಕೇಬಲ್’ ಎಂದು ಜನಪ್ರಿಯ ಭಾಷೆಯಲ್ಲಿ ಕರೆಯಲಾಗುತ್ತಿತ್ತು. ಕೇಬಲ್ ಎಂಬುದು ಮಾಫಿಯಾವಾಗಿ ಬದಲಾದ ದಿನಗಳಲ್ಲಿ ಅಂದಿನ ಯುಪಿಎ ಸರಕಾರ, ಡಿಜಿಟಲೀಕರಣಕ್ಕೆ ಮುಂದಾಗಿತ್ತು. ಮುಂದೆ, ಹಳೆಯ ಕೇಬಲ್ ವ್ಯವಸ್ಥೆ ಎಂಎಸ್‌ಓಗಳಾಗಿ ಅಸ್ಥಿತ್ವದಲ್ಲಿದ್ದವು. ಅವುಗಳಲ್ಲಿ ದೈತ್ಯ ಕಂಪನಿಗಳಾದ ‘ಡೆನ್‌’ ಮತ್ತು ‘ಹಾಥ್‌ವೇ ಕೇಬಲ್‌ ಆಂಡ್‌ ಡಾಟಾಕಾಂ ಲಿ.’ಗಳನ್ನು ಈಗ ಮುಖೇಶ್ ಅಂಬಾನಿ ಖರೀದಿಸಿದ್ದಾರೆ. ಅಂದರೆ, ಒಂದು ಕಡೆ ಜನರಿಗೆ ಸುದ್ದಿ ಹಾಗೂ ಮನೋರಂಜನಾ ಸರಕನ್ನು ಉತ್ಪಾದಿಸುವ ಟಿವಿಗಳಲ್ಲಿ ಬಹುಪಾಲು ರಿಲಯನ್ಸ್‌ ಕೈಲಿತ್ತು. ಈಗ ಅದನ್ನು ಮನೆಮನೆಗಳಿಗೆ ವಿತರಿಸುವ ವ್ಯವಸ್ಥೆಯಲ್ಲಿಯೂ ಅರ್ಧದಷ್ಟು ಷೇರುಗಳನ್ನು ಅವರೇ ಖರೀದಿಸಿದ್ದಾರೆ. ಈ ಮೂಲಕ ಟಿವಿ ಮಾಧ್ಯಮದ ಎಲ್ಲಾ ಅಂಗಗಳಲ್ಲೂ ಸ್ವಾಮ್ಯತೆಯನ್ನು ಮುಖೇಶ್ ಅಂಬಾನಿ ಹೊಂದಿದಂತಾಗಿದೆ.

ಡೆನ್‌ನ ಶೇಕಡಾ 66 ಶೇರುಗಳನ್ನು ಅವರು ಖರೀದಿಸಲಿದ್ದು ಬರೋಬ್ಬರಿ 2,290 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದಾರೆ. ಹಾಥ್‌ವೇನಲ್ಲಿ 2.940 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿ ಶೇಕಡಾ 51.3 ಶೇರುಗಳನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳಲಿದ್ದಾರೆ. ಹೀಗೆ ಒಟ್ಟು 5,230 ಕೋಟಿ ರೂಪಾಯಿ ಹಣವನ್ನು ಅವರು ಬ್ರಾಡ್‌ಬ್ಯಾಂಡ್‌ ಮತ್ತು ಕೇಬಲ್‌ ಟಿವಿ ಮಾರುಕಟ್ಟೆಯಲ್ಲಿ ಚೆಲ್ಲಲಿದ್ದಾರೆ.

ಈ ಡೀಲ್‌ನೊಂದಿಗೆ ರಿಲಯನ್ಸ್‌ 1,100 ನಗರಗಳ 5 ಕೋಟಿ ಜನರನ್ನು ತಲುಪುವ ತನ್ನ ಯೋಜನೆಯನ್ನು ಸುಲಭದಲ್ಲಿ ಕಾರ್ಯರೂಪಕ್ಕೆ ತರಲಿದೆ. ಹಾಥ್‌ವೇ ಮತ್ತು ಡೆನ್‌ ಪ್ರಮುಖ ಪಾಲುದಾರ ಕಂಪನಿಗಳು ಒಟ್ಟಾಗಿ ದೇಶದ 750 ನಗರಗಳಲ್ಲಿ ಅಸ್ತಿತ್ವದಲ್ಲಿದ್ದು 2.4 ಕೋಟಿ ಗ್ರಾಹಕರನ್ನು ಹೊಂದಿವೆ.

“ಇದಿನ್ನೂ ಆರಂಭವಷ್ಟೇ. ಪ್ರಾದೇಶಿಕ ಮಾರುಕಟ್ಟೆಯಲ್ಲಿ ಗಟ್ಟಿ ಹಿಡಿತ ಹೊಂದಿರುವ ಇನ್ನೂ ಹಲವು ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯೋಜನೆ ರಿಲಯನ್ಸ್‌ ಮುಂದಿದೆ. ಅಂಬಾನಿ ಒಟ್ಟು ಸುಮಾರು 7.5 ಸಾವಿರ ಕೋಟಿ ರೂಪಾಯಿಗಳನ್ನು ಬ್ರಾಂಡ್‌ಬ್ಯಾಂಡ್‌ ಮತ್ತು ಕೇಬಲ್‌ ಜಾಲದ ವಿಸ್ತರಣೆಯಲ್ಲಿ ಹೂಡಿಕೆ ಮಾಡಲು ಸಿದ್ಧರಿದ್ದಾರೆ,” ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾಗಿ ‘ಎಕಾನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ.

ಅಲ್ಲಿಗೆ ದೇಶದ ಸಕಲವನ್ನೂ ವ್ಯಾಪಿಸಿರುವ ‘ಆರ್‌ಐಎಲ್‌’ ಕೇಬಲ್‌ ಟಿವಿ ಮಾರುಕಟ್ಟೆಯನ್ನೂ ಪೂರ್ತಿಯಾಗಿ ರಿಲಯನ್ಸ್‌ ತನ್ನ ಹತೋಟಿಗೆ ತೆಗೆದುಕೊಳ್ಳಲಿದೆ. ಈಗಾಗಲೇ ಜಾಹೀರಾತು ರೂಪದಲ್ಲಿ ಪತ್ರಿಕೆಗಳ ಮೇಲಿನ ಹಿಡಿತ ರಿಲಯನ್ಸ್‌ ಕೈಗೆ ಸಿಕ್ಕಾಗಿದೆ. ಜತೆಗೆ ಒಂದಷ್ಟು ವೆಬ್‌ಸೈಟ್‌ಗಳು ಮುಖೇಶ್‌ ಅಂಬಾನಿ ಒಡೆತನದಲ್ಲಿವೆ. 60 + ಚಾನಲ್‌ಗಳನ್ನು ಹೊಂದಿರುವ ಅವರು ಜಿಯೋ ಲಾಂಚ್ ಸಮಯದಲ್ಲಿಯೇ ತಮ್ಮ ಮಾಧ್ಯಮ ಪ್ರಾಬಲ್ಯ ಎಷ್ಟಿದೆ ಎಂದು ಹೇಳಿದ್ದರು.

“ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳ ಕ್ಷೇತ್ರದಲ್ಲಿ ಕಂಪನಿ (ರಿಲಯನ್ಸ್‌) ದಾಪುಗಾಲು ಇಡುತ್ತಿದೆ. ಸಿಎನ್ಬಿಸಿ, ಸಿಎನ್ಎನ್, ಫೋರ್ಬ್ಸ್ ಹಾಗೂ ಎ ಪ್ಲಸ್ ಇ ಕಂಪನಿಗಳ ಜತೆಗೂಡಿ, ರಿಲಯನ್ಸ್ ಸುದ್ದಿ ಹಾಗೂ ಮನೋರಂಜನೆ ವಿಭಾಗಗಳಲ್ಲಿ ವಹಿವಾಟು ನಡೆಸುತ್ತಿದೆ. ಸದ್ಯ ದೇಶದಲ್ಲಿ ಸುಮಾರು 58 ಸುದ್ದಿ ಹಾಗೂ ಮನೋರಂಜನೆ ವಾಹಿನಿಗಳನ್ನು ರಿಲಯನ್ಸ್ ಹೊಂದಿದೆ. ಇದರಲ್ಲಿ 11 ವಾಹಿನಿಗಳು ಅನಿವಾಸಿ ಭಾರತೀಯರನ್ನು ಗುರಿಯಾಗಿಸಿ ಬಿತ್ತರಗೊಳ್ಳುತ್ತಿವೆ. ಒಟ್ಟಾರೆ, ಒಂದು ತಿಂಗಳಿಗೆ 50 ಕೋಟಿ ಭಾರತೀಯರನ್ನು ರಿಲಯನ್ಸ್ ನೇತೃತ್ವದ ಟಿವಿ ವಾಹಿನಿಗಳು ತಲುಪುತ್ತಿವೆ. ಅಂದರೆ, ದೇಶದ ಪ್ರತಿ ಐದು ಜನರಲ್ಲಿ ಇಬ್ಬರು ನಮ್ಮ ವಾಹಿನಿಗಳನ್ನು ವೀಕ್ಷಿಸುತ್ತಿದ್ದಾರೆ,” ಎಂದು ಮುಖೇಶ್ ಅಂಬಾನಿ ಅಂದು ತಮ್ಮ ಭಾಷಣದಲ್ಲಿ ವಿವರಿಸಿದ್ದರು.

Also read: ದೇಶದ ನಂ. 1 ಶ್ರೀಮಂತ ಬಿಚ್ಚಿಟ್ಟ ಮಾಧ್ಯಮ ವಹಿವಾಟಿನ ವಿವರ ಮತ್ತು 'ರಿಲಯನ್ಸ್ ಜಿಯೋ'!

ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಟಿವಿ ಮಾಧ್ಯಮ ಸಾಮಾನ್ಯ ಜನರ ಮೇಲೆ ತಮ್ಮದೇ ಆದ ಪರಿಣಾಮಗಳನ್ನು ಹೊಂದಿದೆ. ಮಹಾನಗರಗಳಿಂದ ಹಿಡಿದು ಹಳ್ಳಿಗಾಡಿನ ಜನರವರೆಗೆ ಜನ ಸುದ್ದಿಗಾಗಿ, ಮನೋರಂಜನೆಗಾಗಿ ಟಿವಿ ಮಾಧ್ಯಮವನ್ನು ಆಶ್ರಯಿಸಿದ್ದಾರೆ. ಹೀಗಿರುವಾಗ ಟಿವಿ ಮಾರುಕಟ್ಟೆ ಏಕಸ್ವಾಮ್ಯತೆಗೆ ಒಳಗಾಗುವುದು ಪ್ರಜಾಪ್ರಭುತ್ವ ಹೊಂದಿರುವ ದೇಶದಲ್ಲಿ ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು. ಈ ಹಿಂದೆ ಪಶ್ಚಿಮದ ದೇಶಗಳಲ್ಲಿ ಇಂತಹದ್ದೇ ಒಂದು ಟ್ರೆಂಡ್‌ ಒಂದನ್ನು ರೂಪರ್ಟ್ ಮುರ್ಡೋಕ್ ತರಹದ ಮಾಧ್ಯಮ ಉದ್ಯಮಿಗಳು ಹುಟ್ಟುಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಮುದಾಯಿಕ ಆತಂಕಗಳನ್ನೂ ದೇಶ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಟಿವಿ ಮಾಧ್ಯಮದಲ್ಲಿ ನಡೆದ ಈ ಬೆಳವಣಿಗೆಯ ಪರಿಣಾಮಗಳನ್ನು ಕಾಲ ಮಾತ್ರವೇ ಅರ್ಥಪಡಿಸಲು ಸಾಧ್ಯ.