samachara
www.samachara.com
ಯಾವುದೂ ಶಾಶ್ವತ ಅಲ್ಲ; ಇದಕ್ಕೆ ದೇವೇಗೌಡ, ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ!
COVER STORY

ಯಾವುದೂ ಶಾಶ್ವತ ಅಲ್ಲ; ಇದಕ್ಕೆ ದೇವೇಗೌಡ, ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ!

ನಾಗಮಂಗಲದ ಪ್ರವಾಸಿ ಮಂದಿರದಿಂದ ಸಮಾವೇಶದ ಜಾಗಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರಿಗಾಲಿನಲ್ಲಿ ಪಾದಯಾತ್ರೆ ನಡೆಸಿದ್ದರು. ತಲೆಯ ಮೇಲೆ ಕಂಚನಹಳ್ಳಿ ಗಂಗಾಧರಮೂರ್ತಿ ಅವರ ಭಾವಚಿತ್ರವನ್ನು ಅವರು ಹಿಡಿದಿದ್ದರು. 

ಇದು ರಾಜಧಾನಿಯಿಂದ 119 ಕಿ.ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಸರಿಯಾಗಿ 26 ವರ್ಷಗಳ ಹಿಂದೆ ನಡೆದ ಪತ್ರಕರ್ತರೊಬ್ಬರ ಹತ್ಯೆಯ ಕತೆ; ಅವತ್ತು ಸೆ. 23, 1992. ನಾಗಮಂಗಲದ ಪಕ್ಕದ ಕಂಚನಹಳ್ಳಿಯಿಂದ ವಕೀಲ, ಅವತ್ತಿನ 'ಲಂಕೇಶ್ ಪತ್ರಿಕೆ'ಯ ಅರೆಕಾಲಿಕ ವರದಿಗಾರ ಗಂಗಾಧರಮೂರ್ತಿ ಮನೆಯಿಂದ ತಾಲೂಕು ಕೇಂದ್ರದ ಕಡೆಗೆ ಹೊರಟಿದ್ದರು. ಆಗ ಸಮಯ 8.45. ಮನೆಯಿಂದ ತರಾತುರಿಯಲ್ಲಿ ಹೊರಟ ಗಂಗಾಧರಮೂರ್ತಿ ಅವರನ್ನು ಬಜಾಜ್‌ ಸ್ಕೂಟರ್‌ನಲ್ಲಿ ಲೋಕೇಶ್ ಮತ್ತು ಇತರರು ಹಿಂಬಾಲಿಸಿದ್ದನ್ನು ಪತ್ನಿ ನಾಗಮ್ಮ ನೋಡಿದ್ದರು. ಸ್ವಲ್ಪ ಹೊತ್ತಿನ ನಂತರ ಗಂಗಾಧರಮೂರ್ತಿ ಕೊಲೆ ನಡೆದಿದೆ ಎಂಬ ಮಾಹಿತಿ ವಾಪಾಸ್ ಬಂದಿದೆ. ಹೀಗೆ, ಕರ್ನಾಟಕದಲ್ಲಿ 90ರ ದಶಕದಲ್ಲಿ ಭಾರಿ ಸುದ್ದು ಮಾಡಿದ್ದ ಪತ್ರಕರ್ತರೊಬ್ಬರ ಹತ್ಯೆ ಪ್ರಕರಣ ನಡೆದು ಹೋಗಿತ್ತು. ಅವತ್ತು ಮುಖ್ಯಮಂತ್ರಿಯಾಗಿದ್ದವರು ಸಾರೇಕೊಪ್ಪ ಬಂಗಾರಪ್ಪ.

"ಗಂಗಾಧರಮೂರ್ತಿ ವಕೀಲರಾಗಿದ್ದರೂ, ಪಿ. ಲಂಕೇಶ್ ಅವರ ಜತೆಗೆ ಚೆನ್ನಾಗಿದ್ದರು. ಅವರ ಪತ್ರಿಕೆಗಳಲ್ಲಿ ಕ್ಷೇತ್ರದ ಶಾಸಕ ಎಲ್‌. ಆರ್. ಶಿವರಾಮೇಗೌಡ ಅವರ ವಿರುದ್ಧ ವರದಿಗಳನ್ನು ಬರೆಯುತ್ತಿದ್ದರು. ಲಂಕೇಶರ ಪ್ರಗತಿ ರಂಗದ ರಾಜಕೀಯ ಪ್ರಯೋಗದಲ್ಲಿಯೂ ಪಾಲ್ಗೊಂಡಿದ್ದರು. ಹೀಗಾಗಿ ಗಂಗಾಧರಮೂರ್ತಿ ಕೊಲೆ ಪ್ರಕರಣದ ತನಿಖೆಗೆ ರಾಜ್ಯಮಟ್ಟದ ಪ್ರತಿರೋಧಗಳು ಬಂದಿದ್ದವು. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್, ಜನತಾದಳ, ಬಿಜೆಪಿ ಕೂಡ ಕೊಲೆಗಾರರ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು. ಎಲ್‌. ಆರ್. ಶಿವರಾಮೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದು ಇದಕ್ಕೆ ಕಾರಣ ಇರಬಹುದು. ನಾನಾ ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಕಂಚನಹಳ್ಳಿಯಿಂದ ನಾಗಮಂಗಲಕ್ಕೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಾಗಮಂಗಲದ ಪ್ರವಾಸಿ ಮಂದಿರದಿಂದ ಸಮಾವೇಶದ ಜಾಗಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರಿಗಾಲಿನಲ್ಲಿ ಬಾಯಿಗೆ ಕಟ್ಟುಪಟ್ಟಿ ಕಟ್ಟುಕೊಂಡು ಪಾದಯಾತ್ರೆ ನಡೆಸಿದ್ದರು. ಈ ಸಮಯದಲ್ಲಿ ತಲೆಯ ಮೇಲೆ ಕಂಚನಹಳ್ಳಿ ಗಂಗಾಧರಮೂರ್ತಿ ಅವರ ಭಾವಚಿತ್ರವನ್ನು ಹಿಡಿದು ಹೆಜ್ಜೆಹಾಕಿದ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅವತ್ತು 'ಪ್ರಜಾವಾಣಿ'ಗೆ ಕುಸುಮಾ ಶಾನುಭಾಗ್ ಎಂಬ ಪತ್ರಕರ್ತೆ ಸಾಕಷ್ಟು ವರದಿಗಳನ್ನು ಬರೆದಿದ್ದರು,'' ಎಂದು 25 ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಕಣ್ಣಿಗೆ ಕಟ್ಟಿದಂತೆ ಹಿಂದೊಮ್ಮೆ ‘ಸಮಾಚಾರ’ಕ್ಕೆ ವಿವರಿಸಿದ್ದರು ಕಂಚನಹಳ್ಳಿಯವರೇ ಆದ ಬಾಲು.

ಪ್ರವಾಸಿ ಮಂದಿರದಿಂದ ಸಮಾವೇಶದ ಜಾಗಕ್ಕೆ ತಲೇ ಮೇಲೆ ಗಂಗಾಧರ ಮೂರ್ತಿ ಫೋಟೋ ಹಿಡಿದು ಬರಿಗಾಲಿನಲ್ಲಿ ನಡೆದು ಬಂದಿದ್ದ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ. 
ಪ್ರವಾಸಿ ಮಂದಿರದಿಂದ ಸಮಾವೇಶದ ಜಾಗಕ್ಕೆ ತಲೇ ಮೇಲೆ ಗಂಗಾಧರ ಮೂರ್ತಿ ಫೋಟೋ ಹಿಡಿದು ಬರಿಗಾಲಿನಲ್ಲಿ ನಡೆದು ಬಂದಿದ್ದ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ. 

ಕೊಲೆಯಾಗಿದ್ದ ಪತ್ರಕರ್ತ ಕಂಚನಹಳ್ಳಿ ಗಂಗಾಧರ ಮೂರ್ತಿ ವಕೀಲರೂ ಆಗಿದ್ದರಿಂದ ಅವರ ಕೊಲೆ ಪ್ರಕರಣದ ಆರೋಪಿಗಳಾದ ಶಿವರಾಮೇಗೌಡರ ಪರವಾಗಿ ವಕಾಲತ್ತು ವಹಿಸದಂತೆ ವಕೀಲರ ಸಂಘ ತೀರ್ಮಾನ ತೆಗೆದುಕೊಂಡಿತ್ತು. ಇದನ್ನು ಮೀರಿ ಹಿರಿಯ ವಕೀಲ ಸಿ. ಎಚ್. ಹನುಂತರಾಯಪ್ಪ ಕೇಸು ನಡೆಸಿದರು. ಇದರ ಅನುಭವಗಳನ್ನು ಹನುಮಂತರಾಯರೇ 'ಟಾಕ್ ಮ್ಯಾಗ್ಸೀನ್‌' ಗೆ ಬರೆದ 'ಡೆತ್ ಆಫ್‌ ಎ ಜರ್ನಲಿಸ್ಟ್' ಲೇಖನ (ಈಗ ಅಂತರ್ಜಾಲದಲ್ಲಿ ಲೇಖನ ಲಭ್ಯವಿಲ್ಲ)ದಲ್ಲಿ ಬಿಡಿಸಿಟ್ಟಿದ್ದರು.

ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳಾಗಿದ್ದರು. ಘಟನೆ ನಡೆದು 5-6 ತಿಂಗಳ ನಂತರ ಕರ್ನಾಟಕದಲ್ಲಿ ಸಿಎಂ ಬದಲಾದರು. ವೀರಪ್ಪ ಮೋಯ್ಲಿ ಮುಖ್ಯಮಂತ್ರಿಯಾಗಿ ಬಂಗಾರಪ್ಪರಿಂದ ಅಧಿಕಾರವಹಿಸಿಕೊಂಡರು. ನಾಗಮಂಗಲ ಶಾಸಕ, ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎಲ್‌. ಆರ್‌. ಶಿವರಾಮೇಗೌಡ ಬಂಧನಕ್ಕೊಳಗಾದರು. ಕೊನೆಗೆ, ನ್ಯಾಯಾಲಯದಲ್ಲಿ ವಾದ ವಿವಾದಗಳು ಹಲವು ವರ್ಷಗಳ ಕಾಲ ನಡೆದು 17 ಜನರಲ್ಲಿ 3 ಜನರಿಗೆ ಜೀವಾವಧಿ ಶಿಕ್ಷೆಯಾಯಿತು. ಅದರಲ್ಲಿ ಇಬ್ಬರು ಬಾಲು ಅವರ ಸಂಬಂಧಿಗಳು, ಮತ್ತೊಬ್ಬರು ಶಿವರಾಮೇಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ; ಅವರೀಗ ಸಾವನ್ನಪ್ಪಿದ್ದಾರೆ.

ಎಲ್‌. ಆರ್‌. ಶಿವರಾಮೇಗೌಡ ಪ್ರಕರಣದಲ್ಲಿ ಖುಲಾಸೆಗೊಂಡರು.

ಕೊಲೆ ಖಂಡಿಸಿ ನಡೆದ ಸಭೆ ಮತ್ತು ಭಾಷಣ ಮಾಡುತ್ತಿರುವವರು ಎಚ್. ಡಿ. ದೇವೇಗೌಡ. 
ಕೊಲೆ ಖಂಡಿಸಿ ನಡೆದ ಸಭೆ ಮತ್ತು ಭಾಷಣ ಮಾಡುತ್ತಿರುವವರು ಎಚ್. ಡಿ. ದೇವೇಗೌಡ. 

ಪಾಠಗಳು:

ಅವತ್ತು ಗಂಗಾಧರಮೂರ್ತಿ ಅವರ ಕೊಲೆ ನಡೆದ ಸಮಯದಲ್ಲಿ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದವರು ಕಂಚನಹಳ್ಳಿ ಬಾಲು. ಸ್ನೇಹಿತನ ಕೊಲೆ ನಡೆದ ತಕ್ಷಣ ಕೆಲಸ ಬಿಟ್ಟು ಊರಿಗೆ ಹೋಗಿ ಹೋರಾಟಕ್ಕೆ ಇಳಿದರು. ಮುಂದೆ, ರಾಜಕೀಯಕ್ಕೂ ಸೇರಿ ಜಿಲ್ಲಾ ಪಂಚಾಯ್ತಿ ಸದಸ್ಯರೂ ಆದರು. ಇವತ್ತು ಕಂಚನಹಳ್ಳಿಯಲ್ಲೇ ಅವರು ಕೃಷಿ ಮಾಡಿಕೊಂಡಿದ್ದಾರೆ.

"ಗಂಗಾಧರಮೂರ್ತಿ ಕೊಲೆ ನಡೆದಾಗ ಪಿ. ಲಂಕೇಶ್ ಹೋರಾಟಕ್ಕೆ ಬಂದರು. ತಮ್ಮ ಪತ್ರಿಕೆ ಮೂಲಕ 1.5 ಲಕ್ಷದಷ್ಟು ಚಂದಾ ಎತ್ತಿ ಗಂಗಾಧರಮೂರ್ತಿ ಕುಟುಂಬದವರಿಗೆ ನೀಡಿದರು. ಇವತ್ತು ಗಂಗಾಧರಮೂರ್ತಿ ಅವರ ಇಬ್ಬರು ಗಂಡು ಮಕ್ಕಳು ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದಾರೆ,'' ಎನ್ನುತ್ತಾರೆ ಬಾಲು.

ಹಿಂದುಳಿದ ವಿಶ್ವಕರ್ಮ ಸಮುದಾಯಕ್ಕೆ ಸೇರಿದ್ದ ಗಂಗಾಧರಮೂರ್ತಿ ಅವರ ಪ್ರಕರಣದ ತನಿಖೆ ಹಂತದಲ್ಲಿ ಜಾತಿ ರಾಜಕೀಯ ಜೋರಾಗಿ ಬೀಸಲಾರಂಭಿಸಿತು. ಕಂಚನಹಳ್ಳಿ ಸಮೀಪದಲ್ಲಿಯೇ ಇರುವ ಆದಿಚುಂಚನಗಿರಿ ಮಠದ ಅಂದಿನ ಮುಖ್ಯಸ್ಥರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಆರೋಪಿ ಎಲ್‌. ಆರ್‌. ಶಿವರಾಮೇಗೌಡದ ಪರವಾಗಿ ನಿಂತರು ಎಂಬ ಆರೋಪಗಳೂ ಇವೆ.

ಅಂದು - ಇಂದು

ಎಲ್‌.ಆರ್‌. ಶಿವರಾಮೇಗೌಡರ ಮೇಲಿನ ಆಕ್ರೋಶ ಇಷ್ಟಕ್ಕೇ ನಿಲ್ಲಲಿಲ್ಲ. ಒಂದು ವರ್ಷದ ನಂತರ ಕೆಂಚನಹಳ್ಳಿಯಲ್ಲಿ ಸೆಪ್ಟೆಂಬರ್‌ 23, 1993ರಲ್ಲಿ ನಡೆದ ಗಂಗಾಧರಮೂರ್ತಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲೂ ಎಚ್‌.ಡಿ. ದೇವೇಗೌಡರು ಭಾಗವಹಿಸಿದರು. ಅವರ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಳಿತಿದ್ದರು. ಅವತ್ತು ಅಲ್ಲಿ ಸೇರಿದ್ದ ಜನ, ಪ್ರಬಲ ರಾಜಕಾರಣಿಗಳ ವಿರೋಧದ ಹಿನ್ನೆಲೆಯಲ್ಲಿ ಶಿವರಾಮೇಗೌಡರ ರಾಜೀಕೀಯ ಬದುಕು ಇಲ್ಲಿಗೆ ಮುಗಿಯಿತು ಎಂದುಕೊಂಡವರೇ ಜಾಸ್ತಿ.

ಆ ಕಡೆ ಸಿದ್ದರಾಮಯ್ಯ ಈ ಕಡೆ ದೇವೇಗೌಡರು...
ಆ ಕಡೆ ಸಿದ್ದರಾಮಯ್ಯ ಈ ಕಡೆ ದೇವೇಗೌಡರು...

ಆದರೆ ಹಾಗಾಗಲಿಲ್ಲ. 1994ರಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅವರು ಜಯಗಳಿಸಿದರು. ನಂತರ ದೇವೇಗೌಡರು ಅವರನ್ನು ಪಕ್ಷಕ್ಕೆ ಕರೆಸಿಕೊಂಡರು. ಇವತ್ತು ಅದೇ ಶಿವರಾಮೇಗೌಡರು ಮಂಡ್ಯ ಲೋಕಸಭೆ ಉಪಚುನಾವಣೆಗೆ ಜೆಡಿಎಸ್‌-ಕಾಂಗ್ರೆಸ್‌ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅಂದು ಪಾದಯಾತ್ರೆ ಹೊರಟಿದ್ದ ದೇವೇಗೌಡರು ಮತ್ತು ಅವರ ಪಕ್ಕದಲ್ಲಿದ್ದ ಸಿದ್ದರಾಮಯ್ಯ ಯಾರ ವಿರುದ್ಧ ತೊಡೆ ತಟ್ಟಿದ್ದರೋ ಅವರ ಪರವಾಗಿಯೇ ಇಂದು ಪ್ರಚಾರಕ್ಕೆ ಹೊರಟಿದ್ದಾರೆ. ಒಬ್ಬರು ಜೆಡಿಎಸ್‌ನಿಂದ ಮತ್ತೊಬ್ಬರು ಕಾಂಗ್ರೆಸ್‌ನಿಂದ ಅಷ್ಟೇ ವ್ಯತ್ಯಾಸ.

ಇಲ್ಲಿ ಬದಲಾವಣೆಯೊಂದನ್ನು ಹೊರತು ಪಡಿಸಿ ಯಾವುದೂ ಶಾಶ್ವತ ಅಲ್ಲ. ಅದಕ್ಕೆ ದೇವೇಗೌಡ ಇರಲಿ, ಸಿದ್ದರಾಮಯ್ಯ ಇರಲಿ, ಯಾರೂ ಹೊರತಾಗಿಲ್ಲ, ಅಷ್ಟೆ.