samachara
www.samachara.com
ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!
COVER STORY

ಶಬರಿಮಲೆ ಎಂಬ ಸ್ಥಾಪಿತ ನಂಬಿಕೆ ಮತ್ತು 250 ಕೋಟಿ ರೂ. ವಾರ್ಷಿಕ ಆದಾಯದ ಹಿಂದಿನ ಅಸಲಿ ಕತೆ!

ಶಬರಿಮಲೆ ಕೇರಳ ಸರಕಾರಕ್ಕೆ ಕೇವಲ ಧಾರ್ಮಿಕ ವಿಚಾರ ಮಾತ್ರವಲ್ಲ. ವಾರ್ಷಿಕ ನೂರಾರು ಕೋಟಿ ರೂಪಾಯಿ ಆದಾಯ ತರುವ ಅಯ್ಯಪ್ಪ ಕ್ಷೇತ್ರದ ಹಿಂದೆ ಆರ್ಥಿಕ ಲೆಕ್ಕಾಚಾರಗಳೂ ಇವೆ. 

ಶಬರಿಮಲೆ ದೇಗುಲದ ಬಾಗಿಲು ತೆರೆದು ಒಂದು ದಿನವಾದರೂ ಇನ್ನೂ ಸುಪ್ರೀಂಕೋರ್ಟ್‌ ತೀರ್ಪು ಅನುಷ್ಠಾನ ಆಗಿಲ್ಲ. ಶಬರಿಮಲೆಗೆ ಬರುತ್ತಿರುವ ಮಹಿಳೆಯರನ್ನು ಭಕ್ತರ ವೇಷದ ಗೂಂಡಾಗಳು ಬೆದರಿಸಿ ವಾಪಸ್‌ ಕಳಸುತ್ತಿದ್ದಾರೆ. ಶಬರಿಮಲೆಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಕೇರಳ ಸರಕಾರ ಯಾವುದೇ ‘ಗಟ್ಟಿಯಾದ’ ನಿರ್ಧಾರಕ್ಕೆ ಇನ್ನೂ ಬಂದಿಲ್ಲ.

ಕೇರಳ ಸರಕಾರ ಈಗಷ್ಟೇ ಅಲ್ಲ ಎಂದಿಗೂ ಶಬರಿಮಲೆ ವಿಚಾರದಲ್ಲಿ ಯಾವುದೇ ಗಟ್ಟಿ ನಿರ್ಧಾರಗಳಿಗೆ ಮುಂದಾದ ಉದಾಹರಣೆಗಳು ಸಿಗುವುದಿಲ್ಲ. ಇದಕ್ಕೆ ಕಾರಣ ಶಬರಿಮಲೆಯಿಂದ ಕೇರಳ ಸರಕಾರಕ್ಕೆ ಪ್ರತಿ ವರ್ಷ ಬರುತ್ತಿರುವ ನೂರಾರು ಕೋಟಿ ರೂಪಾಯಿ ಆದಾಯ. ವರ್ಷಕ್ಕೆ ಸುಮಾರು 250 ಕೋಟಿ ಆದಾಯ ಶಬರಿಮಲೆಯಿಂದ ಬರುತ್ತಿದೆ. ಹೀಗಾಗಿ ಅಲ್ಲಿನ ಕಮ್ಯುನಿಷ್ಟ್‌ ಸರಕಾರಕ್ಕೂ ಶಬರಿಮಲೆ ಹಾಗೂ ಅಯ್ಯಪ್ಪ ಅನಿವಾರ್ಯ.

ಜಗತ್ತು ಎಷ್ಟೇ ಮುಂದುವರಿದಿದೆ ಎಂದರೂ ಸ್ಥಾಪಿತ ನಂಬಿಕೆಗಳ ವಿಚಾರದಲ್ಲಿ ಕಾಲ ಯಾವತ್ತಿಗೂ ಪುರಾತನವಾಗಿಯೇ ಇರುತ್ತದೆ. ಈ ಸ್ಥಾಪಿತ ನಂಬಿಕೆಗಳ ಹೇರುವಿಕೆ ಪ್ರತಿ ವರ್ಷ, ಪ್ರತಿ ಕ್ಷಣ ಪುನರಾವರ್ತನೆಯಾಗುತ್ತಲೇ ಇರುತ್ತದೆ. ಈ ನಂಬಿಕೆಗಳ ಜತೆಗೆ ಬೆಳೆದುಬಂದ ಆರ್ಥಿಕತೆಯೂ ಇದಕ್ಕೆ ಕಾರಣ. ಹೀಗಾಗಿ ಇಂಥ ಆರ್ಥಿಕತೆಯನ್ನು ಕಳೆದುಕೊಳ್ಳಲು ಸರಕಾರಗಳಿಗೂ ಇಷ್ಟವಿಲ್ಲ. ಹೀಗಾಗಿ ಈ ನಂಬಿಕೆಗಳನ್ನು ಸರಕಾರಗಳೂ ಪೋಷಿಸುತ್ತಲೇ ಬರುತ್ತಿವೆ. ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ಇರುವಂತೆ ಕೇರಳದಲ್ಲೂ ದೇಗುಲ, ಧಾರ್ಮಿಕ ಕ್ಷೇತ್ರಗಳಿಗಾಗಿ ದೇವಸ್ವಂ ಇಲಾಖೆಯೇ ಇದೆ. ಈ ಇಲಾಖೆಗೆ ಒಬ್ಬ ಪ್ರತ್ಯೇಕ ಸಚಿವರೂ ಇದ್ದಾರೆ.

ಪ್ರತಿ ವರ್ಷ ಅಕ್ಟೋಬರ್‌- ನವೆಂಬರ್‌ನಿಂದ ಜನವರಿ- ಫೆಬ್ರುವರಿವರೆಗೆ ಸುಮಾರು ಮೂರು ತಿಂಗಳ ಕಾಲ ನಡೆಯುವ ಮಂಡಳ ಯಾತ್ರೆಗೆ ಕೋಟಿ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಗೆ ಬರುತ್ತಾರೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸಹಜವಾಗಿಯೇ ಆದಾಯವೂ ಏರುತ್ತಿದೆ. ಈ ಯಾತ್ರೆಯಿಂದ 2016-17ರಲ್ಲಿ 210 ಕೋಟಿ ರೂಪಾಯಿ ಆದಾಯ ಬಂದಿದ್ದರೆ, 2017-18ರಲ್ಲಿ 255 ಕೋಟಿ ರೂಪಾಯಿ ಆದಾಯ ಬಂದಿದೆ. ಹೀಗಾಗಿ ದೊಡ್ಡ ಆದಾಯದ ಮೂಲವಾಗಿರುವ ಶಬರಿಮಲೆಯನ್ನು ಬಿಡಲು ಸರಕಾರ ಸಿದ್ಧವಿಲ್ಲ.

ಪ್ರವಾಸೋದ್ಯಮದಿಂದ ಹೆಚ್ಚು ಆದಾಯ ಗಳಿಸುವ ಕೇರಳದಲ್ಲಿ ಧಾರ್ಮಿಕ ಪ್ರವಾಸೋದ್ಯಮವೂ ಪ್ರಮುಖ ಆದಾಯದ ಮೂಲವೇ ಕೇರಳ ಸರಕಾರಕ್ಕೆ 2017ರಲ್ಲಿ ಪ್ರವಾಸೋದ್ಯಮದಿಂದ ಬಂದ ಆದಾಯ 33,383.68 ಕೋಟಿ ರೂಪಾಯಿ. ಧಾರ್ಮಿಕ ಪ್ರವಾಸೋದ್ಯಮದಿಂದ ಬರುವ ಆದಾಯಗಳ ಪೈಕಿ ಶಬರಿಮಲೆಯಿಂದ ಬರುವ ಆದಾಯದ ಪ್ರಮಾಣ ಹೆಚ್ಚು. ಕೇವಲ ಪ್ರವಾಸೋದ್ಯಮದ ಪರೋಕ್ಷ ಆದಾಯವಲ್ಲದೆ ಶಬರಿಮಲೆ ದೇಗುಲಕ್ಕೆ ಬರುವ ನೇರ ಆದಾಯವೂ ಹೆಚ್ಚು.

Also read: ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?

ಮೇಲ್ಮೋಟಕ್ಕೆ ಶಬರಿಮಲೆ ಯಾತ್ರೆ ಎಂಬುದು ಕಪ್ಪು, ನೀಲಿ, ಕೇಸರಿ ಬಟ್ಟೆ ಧರಿಸಿ, ತಲೆಯ ಮೇಲೆ ಗಂಟೊಂದನ್ನು ಹೊತ್ತು ಬೆಟ್ಟ ಹತ್ತಲು ಹೋಗುವ ಭಕ್ತರ ಗುಂಪು. ಆದರೆ, ಪಡಿಪೂಜೆ, ಉಷಾ ಪೂಜೆ, ನಿತ್ಯ ಪೂಜೆ, ಉತ್ಸವ ಬಲಿ, ಲಕ್ಷಾರ್ಚನೆ, ಸಹಸ್ರ ಕಳಸಮ್‌, ಅರವಣ – ಹೀಗೆ ಪೂಜೆ, ಅರ್ಚನೆಗಳ ಹೆಸರಿನಲ್ಲೂ ಅಯ್ಯಪ್ಪ ದೇಗುಲಕ್ಕೆ ನೇರ ಆದಾಯ ಬರುತ್ತಿದೆ. ಪಡಿ ಪೂಜೆಗೆ 75 ಸಾವಿರ, ಸಹಸ್ರ ಕಳಸಮ್‌ಗೆ 50 ಸಾವಿರ, ಉದಯಾಸ್ತಮಾನ ಪೂಜೆಗೆ 40 ಸಾವಿರ ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ. ಶಬರಿಮಲೆಯ 57 ಸೇವೆಗಳು ಹಾಗೂ ಪಂಪಾದ 7 ಸೇವೆಗಳ ಪಟ್ಟಿ ಹಾಗೂ ದರ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

ನೆಯ್ಯಾಭಿಷೇಕಮ್‌ (ತುಪ್ಪದ ಕಾಯಿ) ಸೇವೆಗೆ 10 ರೂಪಾಯಿ ದರವಿದೆ. ಆದರೆ, ಭಕ್ತರು ತರುವ ಈ ತುಪ್ಪದ ಕಾಯಿಯಿಂದಲೇ ಕೋಟಿಗಟ್ಟಲೆ ಆದಾಯ ಶಬರಿಮಲೆಗೆ ಬರುತ್ತದೆ ಎನ್ನಲಾಗುತ್ತದೆ. ಶಬರಿಮಲೆಗೆ ಭಕ್ತರೊಂದಿಗೆ ಬರುವ ತುಪ್ಪ ಹಾಗೂ ಕಾಯಿ ಕೂಡಾ ಪ್ರಮುಖ ಆದಾಯದ ಮೂಲವೇ.

ಕೇವಲ ನೇರ ಆದಾಯ ಮಾತ್ರವಲ್ಲದೆ ಶಬರಿಮಲೆಯ ಸುತ್ತಲೇ ಆರ್ಥಿಕತೆ ವ್ಯವಸ್ಥೆಯೊಂದು ಬೆಳೆದುಕೊಂಡಿದೆ. ಸದ್ಯ ಕೇರಳ ಸರಕಾರಕ್ಕೆ ಶಬರಿಮಲೆಯೂ ಬೇಕು, ಭಕ್ತರೂ ಬೇಕು, ಭಕ್ತರಿಂದ ಬರುವ ಆದಾಯವೂ ಬೇಕು. ಜತೆಗೆ ಸುಪ್ರೀಂಕೋರ್ಟ್‌ ಆದೇಶವನ್ನು ಅನುಷ್ಠಾನಕ್ಕೆ ತರುವ ‘ಬದ್ಧತೆ’ಯನ್ನೂ ಪ್ರದರ್ಶಿಸಬೇಕು. ಸದ್ಯಕ್ಕೆ ಶಬರಿಮಲೆ ವಿಚಾರದ ಮೂಲಕ ಕೇರಳ ಪ್ರವೇಶಿಸಿರುವ ಬಿಜೆಪಿ ಇದೇ ವಿಚಾರವಾಗಿ ‘ದೇವರ ಸ್ವಂತ ನಾಡಿನಲ್ಲಿ’ ತನ್ನ ಅಸ್ಥಿತ್ವದ ಬೀಜವನ್ನೂ ಆಳವಾಗಿ ಬೇರೂರುವ ಪ್ರಯತ್ನ ನಡೆಸುತ್ತಿದೆ.

ಶಬರಿಮಲೆಯ ಹಿಂಸಾಚಾರ ತಡೆಯುವ ಹಾಗೂ ಮಹಿಳಾ ಭಕ್ತರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೇರಳ ಸರಕಾರ ಈವರೆಗೆ ಗಂಭೀರ ಪ್ರಯತ್ನಗಳನ್ನು ನಡೆಸಿದಂತಿಲ್ಲ. ಹಿಂಸಾಚಾರ ಆರಂಭವಾಗಿ 24 ಗಂಟೆ ಕಳೆದರೂ, ಲಿಂಗತ್ವದ ಕಾರಣಕ್ಕೆ ಪತ್ರಕರ್ತೆಯರು ಸೇರಿದಂತೆ ಎಲ್ಲಾ ಮಹಿಳೆಯರನ್ನೂ ಶಬರಿಮಲೆಯಿಂದ ವಾಪಸ್‌ ಕಳಿಸುತ್ತಿರುವ ಭಕ್ತ ವೇಷಧಾರಿ ಗೂಂಡಾಗಳನ್ನು ತಡೆಯುವಲ್ಲಿ ಕೇರಳ ಸರಕಾರ ವಿಫಲವಾಗಿದೆ. ಈ ವಿಫಲತೆಯ ಹಿಂದೆಯೂ ಇರುವುದು ಶಬರಿಮಲೆಯ ಆದಾಯವನ್ನು ಕಳೆದುಕೊಳ್ಳುವ ಭೀತಿಯೇ.

Also read: ಉದ್ವಿಗ್ನ ಶಬರಿಮಲೆ; ಹಿಂಸಾಚಾರ, ನಿಷೇಧಾಜ್ಞೆ ಮತ್ತು ದೇಗುಲದಲ್ಲಿ ದರ್ಶನ