ಶಬರಿಮಲೆಗೆ ಮಹಿಳೆಯರ ಪ್ರವೇಶ; ಬ್ಲಾಕ್‌ಮೇಲ್‌ಗೆ ಮುಂದಾದ ಹಿಂದೂ ಸಂಘಟನೆಗಳು
COVER STORY

ಶಬರಿಮಲೆಗೆ ಮಹಿಳೆಯರ ಪ್ರವೇಶ; ಬ್ಲಾಕ್‌ಮೇಲ್‌ಗೆ ಮುಂದಾದ ಹಿಂದೂ ಸಂಘಟನೆಗಳು

ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೂ ಅವಕಾಶ ಕೊಟ್ಟಿರುವ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಇಷ್ಟು ದಿನ ಕೇರಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳ ಸ್ವರೂಪ ಇಂದು ಬದಲಾಗಿದೆ.

ಶಬರಿಮಲೆ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಕೊನೆಗೂ ಅಮಾಯಕ ಮಹಿಳೆಯರ ಜೀವಹಾನಿಗೆ ಹಿಂದೂಪರ ಸಂಘಟನೆಗಳು ಮುಂದಾಗಿವೆ. “ನಿಷೇಧಿತ ವಯೋಮಾನದ ಮಹಿಳೆಯರು ಶಬರಿಮಲೆ ಪ್ರವೇಶಿಸಿದರೆ ಪ್ರತಿಭಟನಾನಿರತ ಮಹಿಳೆಯರು ಪಂಪಾ ನದಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ” ಎಂದು ಕೇರಳ ಶಿವಸೇನೆ ಬೆದರಿಕೆ ಹಾಕಿದೆ.

ಶಬರಿಮಲೆ ವಿಚಾರವಾಗಿ ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಿಸಿ ಬುಧವಾರ ಹೆಚ್ಚಾಗಿದೆ. ಇಂದಿನಿಂದ ಶಬರಿಮಲೆ ಯಾತ್ರೆ ಆರಂಭವಾಗಿದೆ. ಅಯ್ಯಪ್ಪ ದೇಗುಲಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಲು ಮುಂದಾಗಿದ್ದು, ಅವರನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ಈ ಇಬ್ಬರನ್ನೂ ವಾಪಸ್‌ ಕಳಿಸುವಂತೆ ಪ್ರತಿಭಟನಾನಿರತರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ.

ಶಬರಿಮಲೆಗೆ ಹೊರಟಿರುವ ಎಲ್ಲಾ ವಾಹನಗಳನ್ನೂ ಮಾರ್ಗ ಮಧ್ಯೆಯೇ ತಡೆದು ತಪಾಸಣೆ ನಡೆಸುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು, ವಾಹನಗಳಲ್ಲಿದ್ದ ಮಹಿಳೆಯರಿಗೆ ವಾಪಸ್‌ ಹೋಗುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೂ ಅವಕಾಶ ಕೊಟ್ಟಿರುವ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಇಷ್ಟು ದಿನ ಕೇರಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳ ಸ್ವರೂಪ ಇಂದು ಬದಲಾಗಿದೆ. ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ ಹಾಕಿರುವ ಪ್ರತಿಭಟನಾಕಾರನ್ನು ತಡೆಯುವುದು ಪೊಲೀಸರಿಗೆ ಸವಾಲಾಗಿದೆ. ಶಬರಿಮಲೆಗೆ ಹರಿದುಬರುತ್ತಿರುವ ಸಾವಿರಾರು ಭಕ್ತರ ಮಧ್ಯೆ ಪ್ರತಿಭಟನಾಕಾರರನ್ನು ಗುರುತಿಸುವುದೇ ಕಷ್ಟವಾಗಿದೆ.

Also read: ಮಹಿಳೆಯರ ಹಣಿಯಲು ಮಹಿಳೆಯರೇ ಗುರಾಣಿ; ಸುಪ್ರೀಂ ತೀರ್ಪಿನ ವಿರುದ್ಧ ಬೀದಿಗಿಳಿದವರು ಯಾರು?

“ನಿಷೇಧಿಸಲಾಗಿರುವ ವಯೋಮಾನದ ಮಹಿಳೆಯರು ಶಬರಿಮಲೆ ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಮ್ಮ ಮಹಿಳಾ ಕಾರ್ಯಕರ್ತೆಯರು ಪಂಪಾ ನದಿ ಬಳಿ ಸೇರಿದ್ದಾರೆ. ಒಂದು ವೇಳೆ ಸರಕಾರ ನಿಷೇಧಿತ ವಯೋಮಾನದ ಮಹಿಳೆಯರನ್ನು ದೇಗುಲ ಪ್ರವೇಶಿಸದಂತೆ ತಡೆಯದಿದ್ದರೆ ನಮ್ಮ ಕಾರ್ಯಕರ್ತೆಯರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ” ಎಂದು ಕೇರಳ ಶಿವಸೇನೆಯ ಮುಖಂಡ ಪೆರಿಗಮ್ಮಾಳ ಅಜಿ ಹೇಳಿದ್ದಾರೆ.

ಇಷ್ಟು ದಿನಗಳ ಕಾಲ 10ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಶಬರಿಮಲೆ ಪ್ರವೇಶವನ್ನು ನಿಷೇದಿಸಲಾಗಿತ್ತು. ಈ ನಿಷೇಧವನ್ನು ತೆಗೆದು ಹಾಕಿರುವ ಸುಪ್ರೀಂಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ತೀರ್ಪು ನೀಡಿದೆ.

ಈ ತೀರ್ಪನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರವೂ ಮುಂದಾಗಿದೆ. ಸುಪ್ರೀಂಕೋರ್ಟ್‌ ತೀರ್ಪು ಹಾಗೂ ರಾಜ್ಯ ಸರಕಾರದ ನಿಲುವಿನ ವಿರುದ್ಧ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿವೆ. ಈ ನಡುವೆ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ಪಂದಳಂ ರಾಜವಂಶಸ್ಥರು ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದ ಪತ್ರಕರ್ತೆ ಸಿ.ಎಸ್‌. ಲಿಬಿ ಮತ್ತು ಆಂಧ್ರಪ್ರದೇಶದ ಮಾಧವಿ ಅವರನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ನಾಲ್ಕು ಮಂದಿ ಸ್ನೇಹಿತರು ಶಬರಿಮಲೆಗೆ ಹೋಗುತ್ತಿರುವುದಾಗಿ ಲಿಬಿ ಮಂಗಳವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದರು. ಲಿಬಿ ಅವರು ಪಂಪಾಗೆ ಹೋಗುವ ಮಾರ್ಗದಲ್ಲಿ ಪಟನಂಥಿಟ ಬಸ್‌ ನಿಲ್ದಾಣಕ್ಕೆ ಬಂದಾಗ ಪ್ರತಿಭಟನಾಕಾರರು ಅವರನ್ನು ತಡೆದಿದ್ದಾರೆ. ಅವರು ವಾಪಸ್‌ ಹೋಗದಿದ್ದರೆ ಅವರಿದ್ದ ಬಸ್‌ಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ.

ತಮ್ಮ ಇಬ್ಬರು ಮಕ್ಕಳೊಂದಿಗೆ ಕುಟುಂಬ ಸಮೇತ ಪಂಪಾಗೆ ಬಂದಿದ್ದ ಮಾಧವಿ ಅವರು ಪಂಪಾದಿಂದ ನೂರು ಮೀಟರ್‌ ದಾಟುವುದರೊಳಗೆ ಪ್ರತಿಭಟನಾಕಾರರು ಅವರನ್ನು ತಡೆದು ಬೆದರಿಕೆ ಒಡ್ಡಿದ್ದಾರೆ. ಪ್ರತಿಭಟನಾಕಾರರ ದಾಳಿಯಿಂದ ಬೆದರಿದ ಮಾಧವಿ ಕುಟುಂಬ ಯಾತ್ರೆಯನ್ನು ಮೊಟಕುಗೊಳಿಸಿ ವಾಪಸ್‌ ಹೋಗಲು ನಿರ್ಧರಿಸಿದೆ ಎನ್ನಲಾಗಿದೆ.

ಪ್ರತಿಭಟನಾಕಾರರಿಂದ ಲಿಬಿ ಮತ್ತು ಮಾಧವಿ ಅವರನ್ನು ರಕ್ಷಿಸಿರುವ ಪೊಲೀಸರು ಬಿಗಿ ಭದ್ರತೆಯಲ್ಲಿ ಅವರನ್ನು ದೇಗುಲಕ್ಕೆ ಕಳಿಸುವ ಬಗ್ಗೆ ಉನ್ನತ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಉಗ್ರ ಪ್ರತಿಭಟನಾಕಾರರ ನಡುವೆ ಇವರಿಬ್ಬರನ್ನು ದೇಗುಲಕ್ಕೆ ಕಳಿಸುವ ಬಗ್ಗೆ ಇನ್ನೂ ಕೇರಳ ಸರಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.