samachara
www.samachara.com
ಬಳ್ಳಾರಿಗೆ ವಿ. ಎಸ್‌. ಉಗ್ರಪ್ಪ ಕಾಂಗ್ರೆಸ್‌ ಅಭ್ಯರ್ಥಿ; ಯಾರಿಗೆ ವರವಾಗಲಿದೆ ‘ಸಮುದಾಯ ಪ್ರಜ್ಞೆ’?
COVER STORY

ಬಳ್ಳಾರಿಗೆ ವಿ. ಎಸ್‌. ಉಗ್ರಪ್ಪ ಕಾಂಗ್ರೆಸ್‌ ಅಭ್ಯರ್ಥಿ; ಯಾರಿಗೆ ವರವಾಗಲಿದೆ ‘ಸಮುದಾಯ ಪ್ರಜ್ಞೆ’?

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯಾಗಿ ವಿ.ಎಸ್‌. ಉಗ್ರಪ್ಪ ಅವರ ಹೆಸರನ್ನು ಘೋಷಿಸಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯಾಗಿ ವಿ. ಎಸ್‌. ಉಗ್ರಪ್ಪ ಅವರ ಹೆಸರನ್ನು ಘೋಷಿಸಿದೆ. ಕೊನೆ ಕ್ಷಣದವರೆಗೂ ಕೂಡ್ಲಿಗಿ ಶಾಸಕ ನಾಗೇಂದ್ರ ಸೋದರ ವೆಂಕಟೇಶ್‌ ಪ್ರಸಾದ್‌ ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಲಿದೆ ಎಂಬ ಪರಿಸ್ಥಿತಿಯೇ ಇತ್ತು. ಆದರೆ, ಸೋಮವಾರದ ಮಧ್ಯಾಹ್ನದ ವೇಳೆ ಕಾಂಗ್ರೆಸ್‌ ಪಾಳಯದ ಅಂತಿಮ ಲೆಕ್ಕಾಚಾರ ಹೊರಬಿದ್ದಿದೆ.

ಉಗ್ರಪ್ಪ ಮೂಲತಃ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ವೆಂಕಟಾಪುರದವರು. ಉಗ್ರಪ್ಪ ಅವರನ್ನು ರಾಷ್ಟ್ರಮಟ್ಟದ ನಾಯಕರನ್ನಾಗಿ ಬೆಳೆಸುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್‌ ಉಗ್ರಪ್ಪ ಅವರ ಹೆಸರನ್ನೇ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ. ಅಲ್ಲದೆ ಬಳ್ಳಾರಿಯಲ್ಲಿ ವಾಲ್ಮೀಕಿ ಸಮುದಾಯದ ಮತಗಳ ಜತೆಗೆ ಕುರುಬ ಹಾಗೂ ಮುಸ್ಲಿಂ ಸಮುದಾಯದ ಮತಗಳೂ ನಿರ್ಣಾಯಕವಾಗಲಿವೆ. ಹೀಗಾಗಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಉಗ್ರಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಬಳ್ಳಾರಿ ಜಿಲ್ಲೆಯ ಒಟ್ಟು 9 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಹಾಗೂ ಉಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಾಂಗ್ರೆಸ್‌ ಶಾಸಕರು ಹೆಚ್ಚಾಗಿರುವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಪ್ರಭಾದ ಮೇಲೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಯಾವ ಅಭ್ಯರ್ಥಿಯಾದರೂ ಗೆಲ್ಲುತ್ತಾರೆ ಎಂಬ ವಿಶ್ವಾಸ ಕಾಂಗ್ರೆಸ್‌ಗಿದೆ. ಹೀಗಾಗಿ ಬಳ್ಳಾರಿಗೆ ಹೊರಗಿನವರಾದ ಉಗ್ರಪ್ಪ ಅವರನ್ನು ಕಾಂಗ್ರೆಸ್‌ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ.

ಉಗ್ರಪ್ಪ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿರುವುದರಿಂದ ನಾಗೇಂದ್ರ ಹಾಗೂ ಅವರ ಸೋದರ ವೆಂಕಟೇಶ್ ಪ್ರಸಾದ್‌ ಅವರಿಗೆ ಸಹಜವಾಗಿಯೇ ನಿರಾಸೆಯಾಗಿದೆ. ಆದರೆ, ಈ ನಿರಾಸೆ ಕಾಂಗ್ರೆಸ್‌ಗೆ ಮುಳುವಾಗದಂತೆ ತಡೆಯುವ ಸವಾಲು ಈಗ ಕಾಂಗ್ರೆಸ್‌ ಮುಂದಿದೆ.

ಶ್ರೀರಾಮುಲು ಸೋದರಿ ಶಾಂತಾ ಬಳ್ಳಾರಿಯ ಸ್ಥಳೀಯ ಅಭ್ಯರ್ಥಿ ಎಂಬ ಅಂಶವೂ ಬಳ್ಳಾರಿಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಬಹುದು. ಅಲ್ಲದೆ, ಬಳ್ಳಾರಿ ಕ್ಷೇತ್ರವನ್ನು ಕಾಂಗ್ರೆಸ್‌ಗಿಂತಳೂ ಹೆಚ್ಚಿನ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮಾಜಿ ಸಂಸದ ಹಾಗೂ ಹಾಲಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು ಇಲ್ಲಿ ಗೆಲುವಿಗಾಗಿ ಸಮುದಾಯದ ಅನುಕಂಪವನ್ನು ತಮ್ಮ ಪಾಳಯದ ಕಡೆಗೆ ಹೆಚ್ಚು ಒಲಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ.

Also read: ಪ್ರತಿಷ್ಠೆಯಾದ ಉಪ ಚುನಾವಣೆ; ಫಲಕೊಡಲಿದೆಯೇ ಜೆಡಿಎಸ್- ಕಾಂಗ್ರೆಸ್‌ ಮೈತ್ರಿ?

ವಾಲ್ಮೀಕಿ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿರುವವರ ಪೈಕಿ ಶ್ರೀರಾಮುಲು ಮುಂಚೂಣಿಯಲ್ಲಿದ್ದಾರೆ. ಆದರೆ, ಉಗ್ರಪ್ಪ ವಾಲ್ಮೀಕಿ ಸಮುದಾಯದಿಂದ ತಮ್ಮನ್ನು ಗುರುತಿಸಿಕೊಂಡವರಲ್ಲ. ಕಾಂಗ್ರೆಸ್‌ ಪಕ್ಷದೊಳಗೆ ಹಂತ ಹಂತವಾಗಿ ಬೆಳೆದು ಬಂದ ಉಗ್ರಪ್ಪ ಸಮುದಾಯಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಮುಖಂಡ ಎಂದು ಗುರುತಿಸಿಕೊಂಡವರು. ಹೀಗಾಗಿ ಉಗ್ರಪ್ಪ ಪರವಾಗಿ ಬಳ್ಳಾರಿಯಲ್ಲಿ ‘ಸಮುದಾಯ ಪ್ರಜ್ಞೆ’ ಕೆಲಸ ಮಾಡುವುದು ಕಷ್ಟ.

ಹಿಂದೆ ಬಳ್ಳಾರಿ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಈಗ ಉಪ ಚುನಾವಣಾ ಯಾತ್ರೆಯ ಮೂಲಕ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಗೆಲುವಿನ ಕನಸು ಕಂಡಿದ್ದಾರೆ. ಆದರೆ, ಕಾಂಗ್ರೆಸ್‌ ಸ್ಥಳೀಯ ನಾಯಕರನ್ನು ಬಿಟ್ಟು ‘ವಲಸೆ ಅಭ್ಯರ್ಥಿ’ಯನ್ನು ಬಳ್ಳಾರಿಗೆ ಹಾಕಿರುವುದು ಕೈಗೆ ಸ್ವಲ್ಪ ಪೆಟ್ಟು ಕೊಡುವ ಸಾಧ್ಯತೆಗಳಂತೂ ಇವೆ. ಬಳ್ಳಾರಿ ಉಪ ಚುನಾವಣೆಯಲ್ಲಿ ಗೆಲುವು ಯಾರಿಗೇ ಒಲಿದರೂ ಕಾಂಗ್ರೆಸ್‌ - ಬಿಜೆಪಿ ನಡುವೆ ಜಿದ್ದಾಜಿದ್ದಿಯಂತೂ ಪ್ರಬಲವಾಗಿರಲಿದೆ.