ಪ್ರತಿಷ್ಠೆಯಾದ ಉಪ ಚುನಾವಣೆ; ಫಲಕೊಡಲಿದೆಯೇ ಜೆಡಿಎಸ್- ಕಾಂಗ್ರೆಸ್‌ ಮೈತ್ರಿ?
COVER STORY

ಪ್ರತಿಷ್ಠೆಯಾದ ಉಪ ಚುನಾವಣೆ; ಫಲಕೊಡಲಿದೆಯೇ ಜೆಡಿಎಸ್- ಕಾಂಗ್ರೆಸ್‌ ಮೈತ್ರಿ?

ಪ್ರತಿಷ್ಠೆಯಂತಾಗಿರುವ ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ ತಲಾ ಎರಡು ಹಾಗೂ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲ್ಲುವ ನಿರೀಕ್ಷೆ ಇದೆ.

ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಕಾವು ಹೆಚ್ಚಾಗುತ್ತಿದೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಪಕ್ಷಗಳು ಉಪ ಸಮರದಲ್ಲಿ ಕಾದಾಡಲು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿವೆ.

ನವೆಂಬರ್‌ 3ರಂದು ನಡೆಯಲಿರುವ ಒಟ್ಟು ಐದು ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಮತ್ತೊಂದು ಕಡೆ ಟಿಕೆಟ್‌ ಕೈತಪ್ಪಿದ ಕಾರಣದಿಂದ ಅತೃಪ್ತರಾಗಿರುವವರನ್ನು ಸಮಾಧಾನಗೊಳಿಸಲು ಪಕ್ಷಗಳ ಮುಖಂಡರು ಮುಂದಾಗಿದ್ದಾರೆ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಹಾಗೂ ಅತೃಪ್ತಿಗಳು ಎಲ್ಲಾ ಚುನಾವಣೆಗಳಲ್ಲೂ ಸಾಮಾನ್ಯ. ಹೀಗಾಗಿ ಜಮಖಂಡಿ ಕ್ಷೇತ್ರವೊಂದನ್ನು ಬಿಟ್ಟರೆ ಅತೃಪ್ತಿಯ ವಿಚಾರ ಬೇರೆ ಕ್ಷೇತ್ರಗಳಲ್ಲಿ ಹೆಚ್ಚು ಪರಿಣಾಮ ಬೀರುವುದು ಕಡಿಮೆ.

ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವಿನ ಮೈತ್ರಿ ಬಗ್ಗೆ ಆರಂಭದಲ್ಲಿ ಎರಡೂ ಪಕ್ಷಗಳ ಮುಖಂಡರಲ್ಲಿ ಅಸಮಾಧಾನ ಸಣ್ಣಗೆ ಹೊಗೆಯಾಡಿತ್ತು. ಸಣ್ಣದಾದರೂ ಈ ಹೊಗೆಯನ್ನು ಆರಿಸುವ ಹೊಣೆ ಹೊತ್ತಿರುವ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಮಖಂಡಿ ಕ್ಷೇತ್ರದಲ್ಲಿ ಬಂಡಾಯ ‘ದುಷ್ಪರಿಣಾಮ’ ಬೀರದಂತೆ ತಡೆಯಲು ಸೋಮವಾರ ರಾತ್ರಿ ಜಮಖಂಡಿಗೆ ಪ್ರಯಾಣ ಬೆಳೆಸಿದ್ದಾರೆ.

ಜೆಡಿಎಸ್‌ ಭದ್ರಕೋಟೆ ಎನಿಸಿರುವ ರಾಮನಗರ ಹಾಗೂ ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಮಂಡ್ಯದಲ್ಲಿ ಎಲ್‌.ಆರ್. ಶಿವರಾಮೇಗೌಡ ಹಾಗೂ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರನ್ನು ಜೆಡಿಎಸ್‌ ಕಣಕ್ಕಿಳಿಸಿದೆ. ಆದರೆ, ಶಿವಮೊಗ್ಗದಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿಜೆಪಿಗೆ ಪ್ರಬಲ ಪೈಪೋಟಿಯನ್ನಷ್ಟೇ ಕೊಡಲು ಸಾಧ್ಯ ಎನ್ನಲಾಗುತ್ತಿದೆ. ಶಿವಮೊಗ್ಗದ ಫಲಿತಾಂಶ ಏನೇ ಆದರೂ ರಾಮನಗರ ಹಾಗೂ ಮಂಡ್ಯದಲ್ಲಿ ಜೆಡಿಎಸ್ ನಿರಾಯಾಸವಾಗಿ ಗೆಲ್ಲಲು ಸಾಧ್ಯತೆ ಹೆಚ್ಚಾಗಿದೆ.

ಮಲೆನಾಡಲ್ಲಿ ‘ಕುಮಾರ’ರ ಕಾದಾಟ:

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಮತ್ತು ಬಿಜೆಪಿ ಅಭ್ಯರ್ಥಿ ಹಾಗೂ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಎದುರಾಳಿಗಳಾಗಿದ್ದಾರೆ. ಇಬ್ಬರು ಹಿರಿಯ ಮುಖಂಡರ ಎರಡನೇ ತಲೆಮಾರಿನ ರಾಜಕಾರಣಿಗಳು ಲೋಕಸಭೆಗಾಗಿ ಮೊದಲ ಬಾರಿಗೆ ಸೆಳೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗಿದ್ದು, ರಾಘವೇಂದ್ರ ಗೆಲುವು ಖಚಿತ ಎನ್ನುವ ಮತುಗಳೂ ಕೇಳಿಬರುತ್ತಿವೆ.

ರಾಮನಗರ, ಮಂಡ್ಯ ಮತ್ತು ಶಿವಮೊಗ್ಗ ಈ ಮೂರೂ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಳ್ಳಾರಿ ಲೋಕಸಭೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನಾಗಿ ಬಳ್ಳಾರಿ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್‌ ಪ್ರಸಾದ್‌ ಅವರನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ, ಸೋಮವಾರ ಮಧ್ಯಾಹ್ನ ಕಾಂಗ್ರೆಸ್‌ ವಿ.ಎಸ್‌. ಉಗ್ರಪ್ಪ ಅವರನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿದೆ.

ಎಸ್‌ಟಿ ಮೀಸಲು ಕ್ಷೇತ್ರವಾದ ಬಳ್ಳಾರಿಯಲ್ಲಿ ವಾಲ್ಮೀಕಿ ಸಮುದಾಯದ ನಾಗೇಂದ್ರ ವರ್ಚಸ್ಸಿನಿಂದ ವೆಂಕಟೇಶ್‌ ಪ್ರಸಾದ್‌ ಅವರನ್ನು ಗೆಲ್ಲಿಸಿಕೊಳ್ಳುವ ಲೆಕ್ಕಾಚಾರವನ್ನು ಸ್ಥಳೀಯ ಕೈ ಮುಖಂಡರು ನಡೆಸಿದ್ದರು. ಆದರೆ, ಅದೇ ಸಮುದಾಯಕ್ಕೆ ಸೇರಿದ ಉಗ್ರಪ್ಪ ಅವರನ್ನು ನಿರೀಕ್ಷಿತವಾಗಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಹೊಸ ಲೆಕ್ಕಾಚಾರಕ್ಕೆ ಇಳಿದಿದೆ.

ಕೈ-ಕಮಲಕ್ಕೆ ಪ್ರತಿಷ್ಠೆಯಾದ ಬಳ್ಳಾರಿ ಕ್ಷೇತ್ರ:

ಈ ಹಿಂದೆ ಬಳ್ಳಾರಿ ಸಂಸದರಾಗಿದ್ದ ಬಿ. ಶ್ರೀರಾಮುಲು ತಮ್ಮ ಸೋದರಿ ಶಾಂತಾ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಶ್ರೀರಾಮುಲು ಪ್ರಭಾವ ಹಾಗೂ ವಾಲ್ಮೀಕಿ ಸಮುದಾಯ ಶಾಂತಾ ಅವರನ್ನು ಗೆಲ್ಲಿಸಬಹುದು ಎಂಬ ನಿರೀಕ್ಷೆ ಬಿಜೆಪಿಗಿದೆ. ಆದರೆ, ಕಾಂಗ್ರೆಸ್‌ ಬಳ್ಳಾರಿಯಲ್ಲಿ ಶತಾಯಗತಾಯ ಬಿಜೆಪಿಯನ್ನು ಹಣಿಯಲು ಸಜ್ಜಾಗಿ ನಿಂತಿದೆ. ಬಳ್ಳಾರಿ ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ್‌ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

ರಾಜ್ಯದ ದಕ್ಷಿಣ ಭಾಗದ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್‌ ಬಳ್ಳಾರಿ ಹಾಗೂ ಜಮಖಂಡಿಯಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದೆ. ಬಳ್ಳಾರಿಯನ್ನು ಡಿ.ಕೆ. ಶಿವಕುಮಾರ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವಂತೆ ಜಮಖಂಡಿ ಕ್ಷೇತ್ರವನ್ನು ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ತೆರವಾಗಿರುವ ಜಮಖಂಡಿ ಕ್ಷೇತ್ರದಲ್ಲಿ ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್‌ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್‌ ನ್ಯಾಮಗೌಡ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ಅನುಕಂಪದ ಅಲೆಯಲ್ಲಿ ಆನಂದ್‌ ಗೆದ್ದು ಬರುವುದು ಕಾಂಗ್ರೆಸ್‌ಗೆ ಸದ್ಯ ಸವಾಲಲ್ಲ. ಬದಲಾಗಿ ಇಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದ ಸುಶೀಲ್‌ ಕುಮಾರ್‌ ಬೆಳಗಲಿ ಅಸಮಾಧಾನ ಶಮನ ಸದ್ಯಕ್ಕೆ ಕಾಂಗ್ರೆಸ್‌ಗಿರುವ ಸವಾಲು. ಹೊರ ನೋಟಕ್ಕೆ ಸುಶೀಲ್‌ ಕುಮಾರ್‌ ಅತೃಪ್ತಿ ಅಷ್ಟೋಂದು ಹೆಚ್ಚಾಗಿರದಂತೆ ಕಂಡರೂ ಒಳಗೆ ಅದು ಕಾಂಗ್ರೆಸ್‌ಗೆ ತಕ್ಕಮಟ್ಟಿಗಿನ ಡ್ಯಾಮೇಜ್‌ ಮಾಡುವ ಸಾಧ್ಯತೆಗಳಂತೂ ಇವೆ.

ಟಿಕೆಟ್‌ ಹಂಚಿಕೆ ಹಾಗೂ ಕ್ಷೇತ್ರಗಳ ಹೊಂದಾಣಿಕೆ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಎರಡೂ ಪಕ್ಷಗಳ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಎರಡೂ ಪಕ್ಷಗಳ ನಾಯಕರು ಚರ್ಚಿಸಿಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಎರಡೂ ಪಕ್ಷಗಳಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದಿದ್ದಾರೆ.

ಐದು ಕ್ಷೇತ್ರಗಳಲ್ಲಿ ಮೂರೂ ಪಕ್ಷಗಳ ಬಲಾಬಲವನ್ನು ನೋಡಿದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಲಾ ಒಂದೊಂದು ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳು ಹಾಗೂ ಬಿಜೆಪಿ ಒಂದು ಲೋಕಸಭಾ ಕ್ಷೇತ್ರದ ಗೆಲುವು ಒಲಿಯುವ ನಿರೀಕ್ಷೆಯಿದೆ. ಆದರೆ, ಯಾರು ಯಾರು ಎಲ್ಲೆಲ್ಲಿ ಗೆಲ್ಲಲಿದ್ದಾರೆ ಎಂಬ ಗುಟ್ಟು ಮುಂದಿನ 22 ದಿನಗಳಲ್ಲಿ (ನವೆಂಬರ್‌ 6) ರಟ್ಟಾಗಲಿದೆ.