samachara
www.samachara.com
‘ರಫೇಲ್‌ ಕಮಿಷನ್‌’ ಮತ್ತು ಮೋದಿಗೆ ಸವಾಲ್; 10%ಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ
COVER STORY

‘ರಫೇಲ್‌ ಕಮಿಷನ್‌’ ಮತ್ತು ಮೋದಿಗೆ ಸವಾಲ್; 10%ಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

ರಫೇಲ್‌ ಹಗರಣವನ್ನು ಪ್ರಸ್ತಾಪಿಸುವ ಮೂಲಕ ಸಿದ್ದರಾಮಯ್ಯ ಮತ್ತೆ ಮೋದಿ ವಿರುದ್ಧ ಗುಡುಗಲು ತಯಾರಾಗಿರುವಂತಿದೆ.

ಅದು ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಗಣನೆ ಆರಂಭವಾಗಿದ್ದ ಸಂದರ್ಭ. ಚುನಾವಣಾ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಅರಮನೆ ಮೈದಾನದಲ್ಲಿ ಕಮಿಷನ್‌ ಲೆಕ್ಕಾಚಾರದ ಬಗ್ಗೆ ಮಾತನಾಡಿದ್ದರು. ರಾಜ್ಯ ಸರಕಾರ 10% ಕಮಿಷನ್ ಸರಕಾರ ಎಂದು ಕುಟುಕಿದ್ದ ಮೋದಿಗೆ ಈಗ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

"ಹಿಂದೊಮ್ಮೆ ನಮ್ಮ ರಾಜ್ಯ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದ ಪ್ರಧಾನಿ ನರೇಂದ್ರ ಅವರೇ, ಈ ರಫೇಲ್‌ ಡೀಲ್‌ನಲ್ಲಿ ತಮಗೆಷ್ಟು ಪ್ರತಿಶತ ಕಮಿಷನ್ ಸಿಕ್ಕಿದೆ ಎಂದು ನೀವು ದೇಶದ ಜನತೆಗೆ ಉತ್ತರಿಸುವ ಸಮಯ ಬಂದಿದೆ. ನಿಮ್ಮಂತಹ ಮಹಾನ್ ಭಾಷಣಕಾರರು ಹೀಗೆ ಮೌನವಾದರೆ ಹೇಗೆ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಫೇಲ್‌ ತಯಾರಿಕೆ ಗುತ್ತಿಗೆಯನ್ನು ಎಚ್‌ಎಎಲ್‌ ಬದಲಿಗೆ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಂಪನಿಗೆ ಕೊಟ್ಟಿದ್ದನ್ನು ಪ್ರಶ್ನಿಸುತ್ತಲೇ ಬರುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಿನ್ಸ್ಕ್‌ ಚೌಕದ ಬಳಿ ಶನಿವಾರ ಎಚ್‌ಎಎಲ್‌ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ್ದರು. ಈ ಸಂವಾದಕ್ಕೂ ಮುನ್ನಾ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ ದೇಶದ ಜನತೆಗೆ ಮೋದಿ ಈಗ ಉತ್ತರಿಸಬೇಕು ಎಂದು ಸವಾಲು ಹಾಕಿದ್ದಾರೆ.

"ದೇಶದ ಪ್ರಧಾನಿಯೊಬ್ಬರು ಬಂಡವಾಳ ಶಾಹಿಗಳ ಪರವಾಗಿ ವ್ಯವಹಾರ ಕುದುರಿಸಲು ವಿದೇಶ ಯಾತ್ರೆಗಳನ್ನು ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿಯೇ ಖಾಸಗಿ ಸಂಸ್ಥೆಗಳ ಪರವಾಗಿ ಮಧ್ಯವರ್ತಿಯಾದಾಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗತಿಯೇನು?” ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

“ನರೇಂದ್ರ ಮೋದಿ ಅವರೇ, ಪ್ರಧಾನ ಸೇವಕರಾಗಿ ಜನ ಸೇವೆಯನ್ನು ಮಾಡಲಿಲ್ಲ, ಚೌಕಿದಾರರಾಗಿ ಕಣ್ಣ ಮುಂದೆಯೇ ಸಾಲಗಾರರು ಓಡಿ ಹೋದರೂ ಮಾತನಾಡಲಿಲ್ಲ, ರಫೇಲ್‌ ಡೀಲ್‌ ಬಗ್ಗೆಯಾದರೂ ಮಾತನಾಡಿ. ರಫೇಲ್‌ ಡೀಲ್‌ನಲ್ಲಿ ತಾವು ಅಂಬಾನಿಯವರಿಗೆ ತೋರುತ್ತಿರುವ ನಿಷ್ಠೆಯನ್ನು ದೇಶದ ಬಗೆಗೆ ತೋರಿದ್ದರೆ ಡಾಲರ್ ಮೌಲ್ಯ ಇಂದು ರೂ.74ರ ಗಡಿ ದಾಟುತ್ತಿರಲಿಲ್ಲ” ಎಂದು ಸಿದ್ದರಾಮಯ್ಯ ಮೋದಿ ಅವರನ್ನು ಕುಟುಕಿದ್ದಾರೆ.

ತಮ್ಮ ವಿರುದ್ಧ ಮೋದಿ ಮಾಡಿದ್ದ ಆರೋಪ ನಿರಾಧಾರ ಎಂದು ಚುನಾವಣೆಯ ಸಂದರ್ಭದಲ್ಲೇ ಮರುಉತ್ತರ ನೀಡಿದ್ದ ಸಿದ್ದರಾಮಯ್ಯ ಈಗ ರಫೇಲ್‌ ಹಗರಣದ ವಿಚಾರವಾಗಿ ಮೋದಿಗೆ ಕಮಿಷನ್‌ ಬಗ್ಗೆ ಉತ್ತರಿಸುವ ಸವಾಲ್‌ ಎಸೆದಿದ್ದಾರೆ. ರಫೇಲ್‌ ಹಗರಣವನ್ನು ಪ್ರಸ್ತಾಪಿಸುವ ಮೂಲಕ ಸಿದ್ದರಾಮಯ್ಯ ಮತ್ತೆ ಮೋದಿ ವಿರುದ್ಧ ಗುಡುಗಲು ತಯಾರಾಗಿರುವಂತಿದೆ.