samachara
www.samachara.com
ರಾಘವೇಶ್ವರ ಸ್ವಾಮಿ ವರ್ಸಸ್ ಶ್ಯಾಮ್ ಭಟ್: #LakhsPerSignatureನ ಅಸಲಿ ಕತೆ!
COVER STORY

ರಾಘವೇಶ್ವರ ಸ್ವಾಮಿ ವರ್ಸಸ್ ಶ್ಯಾಮ್ ಭಟ್: #LakhsPerSignatureನ ಅಸಲಿ ಕತೆ!

ಸಾಮಾಜಿಕ ಜಾಲತಾಣದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ #LakhsPerSignature ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಪೋಸ್ಟ್‌ ಒಂದನ್ನು ಹಾಕಿದರು. ಇದರಲ್ಲಿ, ‘ಮಾಡದ ತಪ್ಪಿಗೆ ಯಾರನ್ನೋ ಕಾಡಿದರೆ...” ಎಂಬ ಒಕ್ಕಣೆಯೂ ಸೇರಿಸಿದ್ದರು.

Team Samachara

ಇದು ಸಣ್ಣ ಸಮುದಾಯವೊಂದರ ಒಳಗೆ ನಡೆಯುತ್ತಿರುವ ಆಂತರಿಕ ಯುದ್ಧಗಳ ಬಹಿರಂಗ ಚಹರೆ. ಖಾಸಗಿ ಸಂಗತಿಯೊಂದು ಸಾರ್ವಜನಿಕಗೊಳ್ಳುವಾಗ ಹೇಗೆಲ್ಲಾ ಅನಾವರಣವಾಗುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ. ಅಂದಹಾಗೆ, ನಾವಿಲ್ಲಿ ಹೇಳಲು ಹೊರಟಿದ್ದು ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಸ್ವಾಮಿ ಹಾಗೂ ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಮ್‌ ಭಟ್ ನಡುವೆ ಶುಕ್ರವಾರ ತೆರೆಕಂಡ ಕದನದ ವಿಚಾರವನ್ನು.

ಹೆಚ್ಚು ಕಡಿಮೆ ಎಲ್ಲಾ ಮಾಧ್ಯಮಗಳು ದಸರಾ ಸಂಭ್ರಮದಲ್ಲಿದ್ದಾಗ ಬಿಜೆಪಿ ಎಂಪಿ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುವರ್ಣ ನ್ಯೂಸ್ 24/7, ಶ್ಯಾಮ್ ಭಟ್ ಲಂಚ ಕೇಳುವ, ರಹಸ್ಯವಾಗಿ ಚಿತ್ರೀಕರಣ ಮಾಡಿದ ದೃಶ್ಯಗಳನ್ನು ಭಿತ್ತರಿಸಲು ಆರಂಭಿಸಿತು. ಶ್ಯಾಮ್ ಭಟ್ ಹಿಂದೆ ಬಿಡಿಎ ಆಯುಕ್ತರಾಗಿದ್ದಾಗ ಫೈಲ್‌ಗಳ ಕ್ಲಿಯರ್ ಮಾಡಲು ತನ್ನ ಸಹಿಗೆ ಬೆಲೆ ನಿಗದಿ ಮಾಡಿದ ಮಾತುಗಳು ಇದರಲ್ಲಿದ್ದವು.

ಇಡೀ ದಿನ ಶ್ಯಾಮ್ ಭಟ್ ಲಂಚಬಾಕತನವನ್ನು ವಾಹಿನಿ ತೋರಿಸಿತು. ಇದಕ್ಕೆ ಪರ್ಯಾಯದ ರೂಪದಲ್ಲಿ ಬಿಟಿವಿ ಕೂಡ ಅಖಾಡಕ್ಕೆ ಇಳಿಯಿತು. ಒಟ್ಟಾರೆ, ದಸರಾ ಸಮಯದಲ್ಲಿ ರಾಜ್ಯದ ಜನ ಕೆಪಿಎಸ್‌ಸಿ ಅಧ್ಯಕ್ಷರ ಲಂಚಾವತಾರದ ಪರ- ವಿರೋಧಗಳ ಎಪಿಸೋಡಗಳನ್ನು ವೀಕ್ಷಿಸುವಂತಾಯಿತು. ಇದಿಷ್ಟು ಟಿವಿ ಪರದೆಗಳಲ್ಲಿ ನಡೆದ ವಿಚಾರ.

ಇದೇ ವೇಳೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ #LakhsPerSignature ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಪೋಸ್ಟ್‌ ಒಂದನ್ನು ಹಾಕಿದರು. ಇದರಲ್ಲಿ, ‘ಮಾಡದ ತಪ್ಪಿಗೆ ಯಾರನ್ನೋ ಕಾಡಿದರೆ...” ಎಂಬ ಒಕ್ಕಣೆಯೂ ಸೇರಿಸಿದ್ದರು.

ಶುಕ್ರವಾರ ರಾಘವೇಶ್ವರ ಸ್ವಾಮಿ ಹಾಕಿದ ಎಫ್‌ಬಿ ಪೋಸ್ಟ್‌. 
ಶುಕ್ರವಾರ ರಾಘವೇಶ್ವರ ಸ್ವಾಮಿ ಹಾಕಿದ ಎಫ್‌ಬಿ ಪೋಸ್ಟ್‌. 

ನಂತರ ಇದೇ ಹ್ಯಾಶ್ ಟ್ಯಾಗ್‌ ಇಟ್ಟುಕೊಂಡು ರಾಘವೇಶ್ವರ ಸ್ವಾಮಿ ಅನುಯಾಯಿಗಳು ಶ್ಯಾಮ್ ಭಟ್ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿಕೊಂಡು ಹೋದರು. ಇಷ್ಟಕ್ಕೂ, ‘ಮಾಡದ ತಪ್ಪಿಗೆ ಯಾರನ್ನೋ ಕಾಡಿದರೆ...’ ಎಂದು ರಾಘವೇಶ್ವರ ಸ್ವಾಮಿ ಹೇಳುವ ಮೂಲಕ ಒಟ್ಟಾರೆ ಶ್ಯಾಮ್ ಭಟ್ ವಿರುದ್ಧ ಸುವರ್ಣ ನ್ಯೂಸ್‌ ನಡೆಸಿದ ಸುದ್ದಿ ಪ್ರಹಾರದಲ್ಲಿ ತಮ್ಮ ನೋವೂ ಅಡಗಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ಇಷ್ಟಕ್ಕೂ ಏನದು ನೋವು? ಕೆಲವು ದಿನಗಳ ಹಿಂದಷ್ಟೆ ರಾಘವೇಶ್ವರ ಸ್ವಾಮಿ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದ ಹಿಂದೆ ಇರುವವರು ಶ್ಯಾಮ್ ಭಟ್ ಎಂಬ ಜನಪ್ರಿಯ ಅಭಿಪ್ರಾಯವೊಂದು ಚಲಾವಣೆಯಲ್ಲಿದೆ.

“ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಯುವತಿಗೆ ಬೆಂಬಲವಾಗಿ ನಿಂತವರು ಶ್ಯಾಮ್ ಭಟ್. ಅವರು ಆರ್‌ಟಿಓ ಆಯುಕ್ತರಾಗಿದ್ದಾಗ ಮಠದ ಹೊಸ ವಾಹನಗಳಿಗೆ ಫ್ಯಾನ್ಸಿ ನಂಬರ್ ಕೊಡಿಸುವಷ್ಟು ಪೀಠಕ್ಕೆ ಹತ್ತಿರದಲ್ಲಿದ್ದರು. ಆದರೆ ನಂತರದ ದಿನಗಳಲ್ಲಿ ಸ್ವಾಮಿ ಮತ್ತು ಶ್ಯಾಮ್ ಭಟ್ ನಡುವೆ ವಿರಸ ಹುಟ್ಟಿಕೊಂಡಿತು. ಪರಿಣಾಮ ಸ್ವಾಮಿ ವಿರುದ್ಧ ಎರಡನೇ ಅತ್ಯಾಚಾರ ಪ್ರಕರಣ ದಾಖಲಾಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಇವತ್ತಿಗೂ ಸದರಿ ಸಂತ್ರಸ್ಥೆಗೆ ಭಟ್ ಬೆಂಬಲವಾಗಿ ನಿಂತಿದ್ದಾರೆ. ಈ ಮೂಲಕ ಸ್ವಾಮಿಯನ್ನು ಎಡಬಿಡದೆ ಕಾಡುತ್ತಿದ್ದಾರೆ,’’ ಎನ್ನುತ್ತವೆ ರಾಮಚಂದ್ರಾಪುರ ಮಠದ ಬೆಳವಣಿಗೆಗಳನ್ನು ಬಲ್ಲ ಮೂಲಗಳು.

ಇದಕ್ಕೆ ಪೂರಕ ಎಂಬಂತೆ ಶುಕ್ರವಾರ ನಡೆದ ಬೆಳವಣಿಗೆ ಒಂದಷ್ಟು ಸಾಕ್ಷಿಗಳನ್ನು ನೀಡಿದೆ. ಒಂದು ಕಡೆ ಸುವರ್ಣ ನ್ಯೂಸ್, ಶ್ಯಾಮ್ ಭಟ್ ವಿರುದ್ಧ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ, ಖುದ್ದು ರಾಘವೇಶ್ವರ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಅಖಾಡಕ್ಕೆ ಇಳಿದರು. ಜತೆಗೆ, ಅವರ ಅನುಯಾಯಿಗಳೂ ಅದೇ ಲಹರಿಯನ್ನು ಅನುಸರಿಸಿದ್ದು ಕಂಡು ಬಂತು. ಶನಿವಾರ ‘ಕನ್ನಡ ಪ್ರಭ’ (ಸುವರ್ಣ ನ್ಯೂಸ್ ಸಹೋದರ ಸಂಸ್ಥೆ) #LakhsPerSignature ಹ್ಯಾಶ್ ಟ್ಯಾಗ್ ತಮ್ಮ ವರದಿಯ ಕಾರಣಕ್ಕೇ ಟ್ರೆಂಡಿಂಗ್ ಆಯಿತು ಎಂದು ವರದಿ ಪ್ರಕಟಿಸಿದೆ.

ಕನ್ನಡ ಪ್ರಭದ ಫಾಲೋಅಪ್ ವರದಿ. 
ಕನ್ನಡ ಪ್ರಭದ ಫಾಲೋಅಪ್ ವರದಿ. 

ಮೇಲ್ನೋಟಕ್ಕೆ ಇದು ಸರಕಾರಿ ಅಧಿಕಾರಿಯೊಬ್ಬರ ಲಂಚಾವತಾರ ಹಾಗೂ ಅದರ ಬಗೆಗಿನ ಮಾಧ್ಯಮ ವರದಿ ಅಂತ ಅನ್ನಿಸುತ್ತದೆ. ಆದರೆ ಆಳದಲ್ಲಿ, ರಾಮಚಂದ್ರಾಪುರ ಮಠದ ಒಳಗೆ ನಡೆಯುತ್ತಿರುವ ಕಿತ್ತಾಟ- ಕೆಸರೆರಚಾಟಗಳ ಪರಿಣಾಮಗಳು ಕಣ್ಣಿಗೆ ರಾಚುತ್ತಿವೆ. ಇದು ಸುದ್ದಿ ಪ್ರಸಾರ ಮಾಡಿದ ಸಂಸ್ಥೆಗಳಿಗೆ ಗೊತ್ತಿರಲು ಸಾಧ್ಯವಿಲ್ಲ ಎಂದರೆ ನಂಬಲು ಯಾರೂ ತಯಾರಿಲ್ಲ.