samachara
www.samachara.com
46 ವರ್ಷಗಳ ಹಿಂದೆ ದೇವರಾಜ ಅರಸು ಎಸಗಿದ ಪ್ರಮಾದದ ಹೆಸರು: ಮೈಸೂರು ದಸರಾ!
COVER STORY

46 ವರ್ಷಗಳ ಹಿಂದೆ ದೇವರಾಜ ಅರಸು ಎಸಗಿದ ಪ್ರಮಾದದ ಹೆಸರು: ಮೈಸೂರು ದಸರಾ!

ಕುವೆಂಪು ಸೇರಿದಂತೆ ಹಲವರು, ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವವನ್ನು ಮೆರೆಸುವ ದಸರಾ ನಡೆಸುವುದು ಬೇಡ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಆಕ್ಷೇಪಗಳ ನಡುವೆಯೂ ಮತ್ತೆ ಜಂಬೂ ಸವಾರಿ, ದಸರಾ ಆಚರಣೆಗೆ ನಡೆದುಕೊಂಡೇ ಬಂತು.

ದಯಾನಂದ

ದಯಾನಂದ

ನಾಲ್ಕು ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ನಿರ್ಧಾರದ ಕಾರಣದಿಂದ ಇಂದಿಗೂ ರಾಜಪ್ರಭುತ್ವದ ಕುರುಹುಗಳು ಮೈಸೂರು ದಸರಾ ಹೆಸರಿನಲ್ಲಿ ಸಂಪ್ರದಾಯದಂತೆ ನಡೆಯುತ್ತಿವೆ.

ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು ಎನ್ನಲಾಗುವ ಹಾಗೂ ಹಳೇ ಮೈಸೂರು ಭಾಗದ ಜನರು ಅತ್ಯಂತ ಭಾವನಾತ್ಮಕವಾಗಿ ಕಾಣುವ ಮೈಸೂರು ದಸರಾ 1970 ಹಾಗೂ 71ರಲ್ಲಿ ಬಹುತೇಕ ಇಲ್ಲವಾಗಿತ್ತು. ಅಂದು ರಾಜನ ಸ್ಥಾನದಲ್ಲಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರೇ ಅರಸೊತ್ತಿಗೆಯ ಕುರುಹುಗಳನ್ನು ಪ್ರಜಾಪ್ರಭುತ್ವದಲ್ಲಿ ಮುಂದುವರಿಸದಿರಲು ಆ ಎರಡು ವರ್ಷ ಸರಳ ಹಾಗೂ ಸಾಂಕೇತಿಕವಾಗಿ ದಸರಾ ಆಚರಿಸಿದ್ದರು.

1972ರಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಚಿನ್ನದ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನು ಇಟ್ಟು ಖಾಸಗಿ ದಸರಾ ಆಚರಿಸಿದರು. ಆದರೆ, ಆ ವರ್ಷದಿಂದ ಜಂಬೂ ಸವಾರಿಯನ್ನು ಸರಕಾರವೇ ಆಚರಿಸಲು ಮುಂದಾಗಿತ್ತು. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಫೊಟೋ ಇಟ್ಟು ಸರಕಾರದ ವತಿಯಿಂದಲೇ ದಸರಾ ಆಚರಿಸಲಾಯಿತು. ಮೈಸೂರು ದಸರಾ ಹಬ್ಬವನ್ನು ಸರಕಾರದಿಂದ ನಡೆಸುವ ನಿರ್ಧಾರ ತೆಗೆದುಕೊಂಡಿದ್ದು ಅಂದು ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಅವರ ಸರಕಾರ.

Also read: ಸೋ ಕಾಲ್ಡ್ ನಾಡಹಬ್ಬ ದಸರಾ; ರಾಜವಂಶಸ್ಥರ ‘ಗೌರವಧನ’ಕ್ಕೆ ಬ್ರೇಕ್‌ ಯಾವಾಗ?

1971ರಲ್ಲಿ ಕೇಂದ್ರದಲ್ಲಿ ಇಂದಿರಾ ಗಾಂಧಿ ಸರಕಾರ ರಾಯಧನ ನಿಲ್ಲಿಸುವ ತೀರ್ಮಾನ ತೆಗೆದುಕೊಂಡಿದ್ದರೆ, ರಾಜ್ಯದಲ್ಲಿ ಮೈಸೂರು ಅರಸರೇ ನಿಲ್ಲಿಸಿದ್ದ ‘ವೈಭವ’ದ ದಸರಾ ಹಾಗೂ ಜಂಬೂ ಸವಾರಿಯನ್ನು ದೇವರಾಜ ಅರಸು ಮುಂದುವರಿಸಲು ನಿರ್ಧರಿಸಿದ್ದರು. ಕುವೆಂಪು ಸೇರಿದಂತೆ ಹಲವರು, ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವವನ್ನು ಮೆರೆಸುವ ದಸರಾ ನಡೆಸುವುದು ಬೇಡ ಎಂಬ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಆಕ್ಷೇಪಗಳ ನಡುವೆಯೂ ಮತ್ತೆ ಜಂಬೂ ಸವಾರಿ, ದಸರಾ ಆಚರಣೆಗೆ ನಡೆದುಕೊಂಡೇ ಬಂತು.

ಇಂತಹ ಹಲವು ಆಕ್ಷೇಪಗಳ ನಡುವೆಯೂ ಇಂದಿಗೂ ವಿಜೃಂಭಣೆಯಿಂದ ಮೈಸೂರು ದಸರಾ ನಡೆಯುತ್ತಿದೆ. ಮೈಸೂರಿನಲ್ಲಿ ಮಾತ್ರವಲ್ಲ ನಾಡಿನ ಹಲವು ಕಡೆಗಳಲ್ಲಿ ಆನೆ ಮೇಲೆ ಅಂಬಾರಿ ಹೊರಿಸಿ ಈ ‘ಸಂಪ್ರದಾಯ’ವನ್ನು ಉತ್ಸವದ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಇಂದಿಗೆ, “ನಮ್ಮ ದಸರಾ, ನಮ್ಮ ಪರಂಪರೆ” ಎನ್ನುವ ಮನಸ್ಸುಗಳು ಈ ಆಚರಣೆ ರಾಜಪ್ರಭುತ್ವದ ಕುರುಹು ಎಂಬುದನ್ನು ಒಪ್ಪದ ಮಟ್ಟಕ್ಕೆ ಬಂದಿವೆ.

ದೇವರಾಜ ಅರಸು ಅವರು ಅರಸು ಸಮುದಾಯದಿಂದ ಬಂದ ಕಾರಣಕ್ಕೇನೂ ಮತ್ತೆ ನಿಂತುಹೋಗಿದ್ದ ಜಂಬೂ ಸವಾರಿ ಆಚರಣೆಯನ್ನು ಪುನರಾರಂಭ ಮಾಡಲಿಲ್ಲ. ಮೈಸೂರಿನಲ್ಲಿ ನಿಂತು ಹೋಗಿದ್ದ ದಸರಾ ಉತ್ಸವವನ್ನು ಮುಂದುವರಿಸುವ ಉದ್ದೇಶದಿಂದ ಆ ನಿರ್ಧಾರಕ್ಕೆ ಬಂದಿದ್ದರು. ರಾಜಪ್ರಭುತ್ವದ ಕುರುಹನ್ನುಅಳಿಸುವ ಸಂಕೇತವಾಗಿಯೇ ಆಗ ಅಂಬಾರಿ ಮೇಲೆ ಚಾಮುಡೇಶ್ವರಿ ಫೋಟೊ ಇರಿಸಲಾಗಿತ್ತು.
-ಎನ್‌.ಎಸ್. ಶಂಕರ್‌, ಹಿರಿಯ ಪತ್ರಕರ್ತ ಹಾಗೂ ‘ಅರಸು ಯುಗ’ ಪುಸ್ತಕದ ಲೇಖಕ

ದಸರಾ ಬಗ್ಗೆ ಅರಸು ಅವರ ಅಭಿಪ್ರಾಯ ಇದು:

“ದಸರಾ ಮಹೋತ್ಸವ ನಡೆಸುವುದು ಸರ್ವಾಧಿಕಾರದ ಅಥವಾ ಊಳಿಗಮಾನ್ಯ ಪದ್ಧತಿಯ ಪುನರುಜ್ಜೀವನವಾಗುತ್ತದೆ ಎಂದು ಅವರು ಇದನ್ನು ಟೀಕೆ ಮಾಡುತ್ತಾ ಇದ್ದರು. ಸಮಾಜವಾದಿಗಳೆಂದು ಹೇಳಿಕೊಂಡು ಇಂಥ ಟೀಕೆಯಲ್ಲಿ ತೊಡಗುವ ಈ ಜನ ‘ಮಾತನಾಡುವುದು’ ಅಪ್ಪಟ ಸಮಾಜವಾದ; ಆದರೆ ಅವರ ಜೀವನ, ನಡವಳಿಕೆ ಇವುಗಳನ್ನು ನೋಡಿದರೆ ಅವರದು ಎಂಥ ಸಮಾಜವಾದ ಎಂಬುದು ಗೊತ್ತಾಗುತ್ತದೆ…… ಇದು ನಮ್ಮ ಗತವೈಭವದ ಪುನರುಜ್ಜೀವನದ ಪ್ರಶ್ನೆ ಅಲ್ಲ; ಮೈಸೂರು ದಸರಾ ದೊರೆಗಳಿಗೆ ಮಾತ್ರ ಮೀಸಲಾಗಿದ್ದಂಥ ಉತ್ಸವ ಅಲ್ಲ; ಹಿಂದಿನಿಂದಲೂ ಜನತೆ ಇದರಲ್ಲಿ ಭಾಗವಹಿಸುತ್ತಾ ಇದ್ದರು. ಈಗಲೂ ಭಾಗವಹಿಸುತ್ತಾ ಇದ್ದಾರೆ”.

(ದೇವರಾಜ ಅರಸು ಅವರ ಆಯ್ದ ಭಾಷಣಗಳ ಸಂಕಲನ ‘ಪ್ರಗತಿಪಥ’ ಪುಸ್ತಕದಿಂದ)

1975ರ ನವೆಂಬರ್‌ 4ರಂದು ಮೈಸೂರು ದಸರಾ ವಸ್ತು ಪ್ರದರ್ಶನದ ಮುಕ್ತಾಯ ಸಮಾರಂಭದಲ್ಲಿ ಅರಸು ಈ ಮಾತುಗಳನ್ನು ಆಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಪ್ರಭುತ್ವದ ಕುರುಹುಗಳು ಅಳಿಯಬೇಕು ಎಂಬ ಆಕ್ಷೇಪಗಳನ್ನೇ ಅರಸು ಉಪೇಕ್ಷೆ ಮಾಡಿದ್ದಂತೆ ಕಾಣುತ್ತದೆ. ಹೀಗಾಗಿ ಮೈಸೂರು ಭಾಗದ ಬಹುಸಂಖ್ಯಾತರ ‘ಬಯಕೆ’ಯನ್ನು ತಾವು ಪುನರಾರಂಭಿಸಿದ್ದೇವೆ ಎಂಬ ‘ಹೆಮ್ಮೆ’ ಹಾಗೂ ಸಮಾಧಾನ ಅರಸು ಅವರಿಗೆ ಇದ್ದಂತೆ ಕಾಣುತ್ತದೆ.

ದೇವರಾಜ ಅರಸು ಅವರೂ ಮೈಸೂರು ಅರಸು ಸಮುದಾಯಕ್ಕೆ ಸೇರಿದ್ದವರು. ಆದರೆ, ಅರಮನೆಯ ಬಗ್ಗೆಯಾಗಲೀ, ರಾಜರ ಬಗ್ಗೆಯಾಗಲೀ ಅವರಿಗೆ ಅತಿಯಾದ ಆದರವಾಗಲೀ ಇರಲಿಲ್ಲ, ರಾಜರ ಓಲೈಕೆಗೂ ಅರಸು ಮುಂದಾಗುತ್ತಿರಲಿಲ್ಲ; ಅವರು ವಿದ್ಯಾಭ್ಯಾಸ ಮುಗಿಸಿದ ಮೇಲೆ ಸರಕಾರಿ ಕೆಲಸಕ್ಕೆಂದು ಅರಮನೆಗೆ ಅಲೆದು ಸಾಕಾಗಿ ಕೊನೆಗೆ ಸರಕಾರಿ ಕೆಲಸವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ ಎಂಬ ಮಾತುಗಳಿವೆ.

ಇಂತಹ ಅರಸು ಅವರು 46 ವರ್ಷಗಳ ಹಿಂದೆ ಮನಸ್ಸು ಮಾಡಿದ್ದರೆ ಅಥವಾ ದಸರಾ ವಿಚಾರದಲ್ಲಿ ಯಾವ ಮನಸ್ಸು ಮಾಡದೆಯೂ ಇದ್ದರೆ ರಾಜಪ್ರಭುತ್ವದ ಕುರುಹನ್ನು ಅಳಿಸಿ ಹಾಕಬಹುದಿತ್ತು. ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಿಸಿದ ಅರಸು, ಮೈಸೂರು ದಸರಾ ಆಚರಣೆಗಳ ವಿಷಯದಲ್ಲಿ ‘ಸುಧಾರಣೆ’ಯ ನಿಲುವನ್ನು ತೋರಲಿಲ್ಲ. ನಡೆದುಕೊಂಡು ಬಂದ ಸಂಪ್ರದಾಯವನ್ನು ನಿಲ್ಲಿಸುವುದು ಅರಸು ಅವರಿಗೂ ಬೇಕಾಗಿರಲಿಲ್ಲ.

Also read: ರಾಯಲ್ಟಿ ಆಫ್ ಮೈಸೂರ್, ಖಾಸಗಿ ದರ್ಬಾರ್ ಹಾಗೂ ದಸರಾ ಸಮಯದಲ್ಲಿ ಕಾನೂನಿನ ಪಾಠ!

ಆವರೆಗೆ ನಡೆದುಕೊಂಡು ಬಂದಿದ್ದ ರಾಜಪ್ರಭುತ್ವದ ಸಂಪ್ರದಾಯಗಳನ್ನು ಮುರಿಯುವ ಅವಕಾಶ ಅರಸು ಅವರಿಗಿತ್ತು. ಅರಮನೆಯ ಹೊರಗೆ ಕಾಣುವ ಜಂಬೂ ಸವಾರಿಯಲ್ಲಿ ಚಾಮುಂಡಿ ವಿಗ್ರಹ ಕೂರಿಸುವ ಹೊಸ ಸಂಪ್ರದಾಯ ಆರಂಭವಾದಂತೆ, ಆಗಲೇ ಸಿಂಹಾಸನದ ಮೇಲೂ ಚಾಮುಂಡಿ ವಿಗ್ರಹ ಇಟ್ಟು ಪೂಜಿಸುವ ಸಂಪ್ರದಾಯವೊಂದನ್ನು ಆರಂಭಿಸುವ ಅವಕಾಶ, ಅಧಿಕಾರ ದೇವರಾಜ ಅರಸು ಅವರಿಗಿತ್ತು.

ವಿಜಯನಗರ ಸಾಮ್ರಾಜ್ಯ ಅಳಿದ ಮೇಲೆ ನಿಂತಿದ್ದ ದಸರಾ ಆಚರಣೆಯನ್ನು ಮೈಸೂರು ಅರಸರು ಮುಂದುವರಿಸಿದ್ದರು, ಮೈಸೂರು ಅರಸರು ನಿಲ್ಲಿಸಿದ್ದ ದಸರಾ ಆಚರಣೆಯನ್ನು ದೇವರಾಜ ಅರಸರು ಮುಂದುವರಿಸಿದರು!