#MeToo: ಯಕ್ಷಗಾನದ ಮಹಾಗುರು ಶಿಷ್ಯೆಗೆ ಹೇಳಿಕೊಟ್ಟಿದ್ದು ‘ದೌರ್ಜನ್ಯ’ದ ಪಾಠ!
COVER STORY

#MeToo: ಯಕ್ಷಗಾನದ ಮಹಾಗುರು ಶಿಷ್ಯೆಗೆ ಹೇಳಿಕೊಟ್ಟಿದ್ದು ‘ದೌರ್ಜನ್ಯ’ದ ಪಾಠ!

ಕಲೆಯ ಬದ್ಧತೆಯಿಂದಲೂ ಯಕ್ಷಗಾನ ಕುಣಿತವನ್ನು ನೂರಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಅಂತವರ ಪೈಕಿ ಈತನೊಬ್ಬನ ಹಿರಿಮೆ ಮಾತ್ರ ಉ’ತ್ತುಂಗ’ದಲ್ಲಿತ್ತು. 

ಇದು ಸುಮಾರು ನಾಲ್ಕೈದು ವರ್ಷದ ಹಿಂದಿನ ಘಟನೆ. ದಕ್ಷಿಣ ಭಾರತದ ಶ್ರೀಮಂತ ಕಲೆಯಾದ ಯಕ್ಷಗಾನವನ್ನು ಕಲಿಯಬೇಕು, ತಾನೂ ಇತರರಂತೆ ವೇಷ ಮಾಡಿ ರಂಗದಲ್ಲಿ ಸೈ ಅನಿಸಿಕೊಳ್ಳಬೇಕು ಎಂಬ ಕನಸಿನ ಬೆನ್ನತ್ತಿದ್ದೆ. ಹೀಗಾಗಿ ಯಕ್ಷಗಾನ ಕಲಿಯಲು ಸಿಗುವ ಅವಕಾಶ ಒಂದನ್ನೂ ಬಿಡದೆ ನಿಷ್ಠೆಯಿಂದ ಕಲಿಯುತ್ತಿದ್ದೆ. ಮಹಾನಗರ ಬೆಂಗಳೂರಲ್ಲೂ ಈ ಕಲೆ ಸಾಕಷ್ಟು ಪ್ರಚಾರದಲ್ಲಿದೆ. ಒಂದಷ್ಟು ಜನ ದುಡ್ಡಿಗಾಗಿ, ಇನ್ನೊಂದಷ್ಟು ಜನ ಜೀವನೋಪಾಯವಾಗಿ, ಕೆಲವೊಂದಷ್ಟು ಜನ ಕಲೆಯ ಬದ್ಧತೆಯಿಂದಲೂ ಯಕ್ಷಗಾನ ಕುಣಿತವನ್ನು ನೂರಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ. ಅಂತವರ ಪೈಕಿ ಈತನೊಬ್ಬನ ಹಿರಿಮೆ ಮಾತ್ರ ಉ’ತ್ತುಂಗ’ದಲ್ಲಿತ್ತು.

ಸಾಂಪ್ರದಾಯಿಕ ಬಡಗು ಯಕ್ಷಗಾನವನ್ನು ಹೇಳಿಕೊಡುವ ಹಾಗೂ ಅತ್ಯುತ್ತಮ ಶಿಷ್ಯರನ್ನು ತಯಾರು ಮಾಡುತ್ತಾರೆ ಎಂಬ ಹೆಸರು ಆತನಿಗಿತ್ತು. ಆ ವ್ಯಕ್ತಿಗೆ ಕೇಂದ್ರದಿಂದ ಸಾಂಪ್ರದಾಯಿಕವಾಗಿ ಕಲಿತು ಬಂದಿದ್ದೆ, ಅಲ್ಲಿ ಗುರುಗಳಾಗಿದ್ದೆ, ಹಿಮ್ಮೇಳ, ಮುಮ್ಮೇಳ ಎಲ್ಲವೂ ಗೊತ್ತು ಎಂಬ ಸಹಜ ಅಹಂಕಾರವೂ ಇತ್ತು.

ಆತ ಕೃಷ್ಣನ ಅಪರಾವತಾರದ ಮೂರ್ತಿ ಎಂಬ ಅರಿವಿಲ್ಲದೆ, ಕೇವಲ ಯಕ್ಷಗಾನ ಕಲೆ ಕಲೆಯುವ ಆಸೆಯಿಂದ ನಾನು ಆತನ ತರಗತಿಗೆ ಸೇರಿಕೊಂಡೆ. ಪ್ರತಿನಿತ್ಯ ಬೆಳಗ್ಗೆ ಅವನ ಮನೆಯ ನೆಲಮಹಡಿಯಲ್ಲಿ ಯಕ್ಷಗಾನವನ್ನು ಕಲಿಸಿಕೊಡುತ್ತಿದ್ದ. ಬೆಳಗ್ಗಿನ ಜಾವ ತರಗತಿ ನಡೆಯುತ್ತಿದ್ದರಿಂದ ಇಬ್ಬರೇ ವಿದ್ಯಾರ್ಥಿಗಳು ಅವನಲ್ಲಿ ಯಕ್ಷಗಾನ ಕಲಿಯುತ್ತಿದ್ದೆವು. ಆರಂಭದಲ್ಲಿ ಆತ ಯಕ್ಷಗಾನ ಕಲಿಸುವ ಶಿಸ್ತಿಗೆ ನಿಜಕ್ಕೂ ಅವನಲ್ಲಿ ಇದ್ದ ಗುರುಭಕ್ತಿ ದುಪ್ಪಟ್ಟಾಗಿತ್ತು, ಅಷ್ಟೇ ಚೆನ್ನಾಗಿ ಕಲಿಯುತ್ತಿದ್ದೆ ಕೂಡಾ. ಆದರೆ ಒಂದೆರಡು ದಿನಗಳಲ್ಲಿ ಆತ ನಾಟ್ಯ ಕಲಿಸುವ ಸಮಯದಲ್ಲಿ "ನೀನು ಕುಣಿಯುವಾಗ ತುಂಬಾ ಮುಂದೆ ಬಾಗುತ್ತೀಯ, ನೆಟ್ಟಗೆ ಮಾಡು ಭುಜ ಎಂದು,” ಆಗಾಗ ಬಂದು ಭುಜ ಮುಟ್ಟಿ ಸರಿಮಾಡುತ್ತಿದ್ದ. ಮೂರು ನಾಲ್ಕು ಬಾರಿ ಹಾಗೆ ಮಾಡಿದಾಗ ಇದ್ಯಾಕೋ ಸರಿ ಅನಿಸುತ್ತಿಲ್ಲ, ದೂರದಿಂದಲೇ ಹೇಳಿದರೇ ಸರಿಮಾಡಿಕೊಳ್ಳುವುದಿಲ್ಲವೇ, ಮೈ ಮುಟ್ಟಿಯೇ ಹೇಳಿಕೊಡಬೇಕೇ ಎಂದು ನನ್ನ ಸಹಪಾಠಿಯಲ್ಲೂ ಅಸಮಾಧಾನ ಹೊರಹಾಕಿದ್ದೆ. ಆದರೆ ಪ್ರಯೋಜನವಾಗಿಲ್ಲ.

ಮುಂದೊಂದು ದಿನ ಸಹಪಾಠಿ ರಜೆಯಲ್ಲಿ ಇದ್ದಿದ್ದರಿಂದ ನಾನು ಒಬ್ಬಳೇ ಆತನ ನಾಟ್ಯ ತರಗತಿಗೆ ಹೋಗಬೇಕಾದ ದಿನ ಬಂತು. ಆ ದಿನವೇ ಆತನ ರಾಕ್ಷಸ ಬುದ್ದಿಯನ್ನು ತೋರಿಸಿಬಿಟ್ಟ. ಭುಜ ಸರಿಮಾಡಲು ಬಂದವನು ನನ್ನನ್ನು ಹಿಂದಿಂದ ಅಪ್ಪಿಕೊಂಡುಬಿಟ್ಟ. ಬಲವಂತವಾಗಿ ಮುತ್ತನ್ನೂ ಕೊಟ್ಟ. ನನ್ನ ಬದುಕು, ನನ್ನ ಕನಸೂ ಎರಡೂ ಮೇಲಿಂದ ಬಿದ್ದ ಕನ್ನಡಿಯಂತೆ ಛಿದ್ರವಾದ ಅನುಭವವಾಯಿತು. ಭಯದಿಂದ ನಡುಗುತ್ತಲೇ ಅಸಹಾಯಕಳಾಗಿ ಅಲ್ಲಿಂದ ಹೊರಟು ಓಡಿ ಬಂದೆ.

ಆತ ಮಧ್ಯವಯಸ್ಸನ್ನೂ ಮೀರಿದ ಗಂಡಸು. ನಾನು ಇನ್ನೂ ಬೌದ್ಧಿಕವಾಗಿಯೂ, ದೈಹಿಕವಾಗಿಯೂ ಪ್ರಬುದ್ಧೆಯಾಗಿರದ ವಯಸ್ಸು. ಆ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದೇ ತಿಳಿಯದೆ ಕೈಕಾಲುಗಳಲ್ಲಿ ನಡುಕ ಉಂಟಾಗಿತ್ತು. ಇನ್ನೇನು ಸತ್ತೇ ಹೋದೆ ಎನ್ನುವಷ್ಟು ಎದೆಯಲ್ಲಿ ಭಯ. ಈ ಭಯ ಬಹುಷಃ ಬದುಕಿನ ಕೊನೆಯವರೆಗೂ ದುಸ್ವಪ್ನವಾಗಿ ಕಾಡುವಂತಹ ಘಟನೆ.

ನಾನು ನಂಬಿದ್ದ ಮಹಾನ್ ಗುರು ಮಾತ್ರ ಏನೂ ನಡೆದಿಲ್ಲ ಎನ್ನುವಂತೆ “ಹೆದರಿಕೊಳ್ಳಬೇಡ, ಬಾ ಮನೆಗೆ ತಿಂಡಿ ತಿಂದು ಹೋಗು,” ಎಂದು ವಿಕಾರವಾಗಿ ಹೇಳಿದ್ದ ಬೇರೆ. ಅಲ್ಲಿಂದ ನನ್ನ ಯಕ್ಷಗಾನ ಕಲಿಯುವ ಕನಸೂ ನುಚ್ಚುನೂರಾಯ್ತು. ಆ ವ್ಯಕ್ತಿಯ ಮುಖ ಎಲ್ಲೇ ಕಂಡರೂ ಮುಖಕ್ಕೆ ಹೋಗಿ ಉಗುಳಬೇಕು ಎಂದು ಆಕ್ರೋಶ ಹುಟ್ಟುತ್ತದೆ. ಹೆಣ್ಣು ಜೀವ ಈ ಪುರುಷ ಪ್ರಧಾನ ಸಮಾಜದ ಮುಂದೆ ಅನ್ನಿಸಿದ್ದನ್ನು ಮಾಡಲು ಸಾಧ್ಯ ಇದೆಯಾ?

ಅವತ್ತಿಗೆ ನನಗಿದ್ದ ಮುಗ್ಧತೆ, ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲೂ ಆಗದೆ, ಆತನಿಗೆ ಪ್ರತಿರೋಧ ಒಡ್ಡಲೂ ಆಗದೆ ಅತಿಕ್ರಮಣಕ್ಕೆ ಒಳಗಾಗಿದ್ದೆ...

ಇಂದು ವಿದೇಶ, ದೇಶದಾದ್ಯಂತ ಆಗುತ್ತಿರುವ ಮೀಟೂ (#ನಾನೂಕೂಡಾ) ಅಭಿಯಾನದ ಬಗ್ಗೆ ಓದುತ್ತಿದ್ದರೆ, ಕೆಲಸದ ಸ್ಥಳದಲ್ಲಿ, ಸಿನಿಲೋಕದಲ್ಲಿ, ಮಾಧ್ಯಮದಲ್ಲಿ, ಅಷ್ಟೇ ಅಲ್ಲ , ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಎಂದು ಪೂಜಿಸುವ ಕಲೆ- ಕ್ರೀಡೆಯ ಕೋಚ್ , ಗುರುಗಳೂ ಕೂಡಾ ಇಂತಹದ್ದೇ ಕೂಪವನ್ನು ನಿರ್ಮಿಸಿದ್ದಾರೆ ಎಂಬುದನ್ನು ಹೇಳಬೇಕಿದೆ. ಈ ಲೇಖನ ಮಹಾನ್ ಕಲೆ ಯಕ್ಷಗಾನಕ್ಕೆ ಅಗೌರವ ತರುವಂತದ್ದು ಎಂದು ಭಾವಿಸದೆ, ನನ್ನಂತೆ ಕಲೆಯನ್ನು ಕಲಿಯಲು ಬರುವ ನೂರಾರು ಮಹಿಳಾ ವಿದ್ಯಾರ್ಥಿಗಳ ನೆಲೆಯಿಂದ ನಿಮ್ಮೊಳಗೆ ಏನು ಬದಲಾವಣೆ ಬರಬೇಕಿದೆ ಎಂಬುದನ್ನು ಹುಡುಕಿಕೊಳ್ಳಿ. ಹೆಣ್ಣುಬಾಕ, ಕಿರುಕುಳ ನೀಡುವವವರ ಕಪಿಮುಷ್ಠಿಗೆ, ಶೋಷಣೆಗೆ ಮತ್ತೊಬ್ಬಳು ಆಸಕ್ತ ವಿದ್ಯಾರ್ಥಿನಿ ಬಲಿಯಾಗದ ವಾತಾವರಣ ನಿರ್ಮಾಣವಾಗಲಿ. ಆ ಕಾರಣಕ್ಕೆ ನನ್ನ ಬದುಕಿನಲ್ಲಿ ನಡೆದ ಈ ಘಟನೆ ಹೊರ ಹಾಕಿದ್ದೇನೆ.

ನನ್ನ ಮೇಲೆ ದೌರ್ಜನ್ಯ ಎಸಗಿದ ಈ ವ್ಯಕ್ತಿಗೂ ಒಂದು ಬದುಕಿದೆ, ಸಂಸಾರವಿದೆ. ಹಾಗಾಗಿ ತಮ್ಮ ತಪ್ಪು ತಿದ್ದಿಕೊಂಡು, ಮುಂದೆದೂ ಈ ಅನ್ಯಾಯ ಎಸಗದೆ ಬದುಕಿದರೆ ಸಾಕೆನ್ನುವುದಷ್ಟೇ ಈ ಲೇಖನದ ಉದ್ದೇಶ. ಇದನ್ನು ಹೊರತುಪಡಿಸಿಯೂ ಅದೆಷ್ಟೋ ಕಲಾವಿದರು, ಯಕ್ಷಗಾನ ರಂಗದಲ್ಲೂ ಮಹಿಳಾ ಕಲಾವಿದರನ್ನು ಹಿಂಸಿಸುವ ಅದೆಷ್ಟೋ ಘಟನೆ ನಡೆದಿದೆ. ಪಾಪ ಹೆಣ್ಣುಮಕ್ಕಳು ಈ ಕಿರುಕುಳದ ಬಗ್ಗೆ ತುಟಿಬಿಚ್ಚಲಾರದೆ ಸಹಿಸಿದ್ದಾರೆ. ಮುಂದೊಂದು ದಿನ ಕಾಲ ಬಂದರೆ, ಪ್ರತಿಯೊಬ್ಬ ವಂಚಕ ವೇಷಧಾರಿಯ ಮುಖವಾಡ ಕಳಚುವುದಂತೂ ಸತ್ಯ..!

(ಕನ್ನಡ ಪತ್ರಿಕೋದ್ಯಮವನ್ನು ಕೇಂದ್ರವಾಗಿಟ್ಟುಕೊಂಡು ‘ಸಮಾಚಾರ’ #MeToo ಅಭಿಯಾನವನ್ನು ಆರಂಭಿಸಿತ್ತು. ಆದರೆ ಬರುತ್ತಿರುವ ಪ್ರತಿಕ್ರಿಯೆಗಳು ಎಲ್ಲಾ ಕ್ಷೇತ್ರಗಳನ್ನೂ ಆವರಿಸಿದೆ. ನಿಮ್ಮಲ್ಲೂ ಇಂತಹ ಅನುಭವಗಳಿದ್ದರೆ samachara2016@gmail.comಗೆ ಕಳುಹಿಸಿ ಕೊಡಿ. ನೀವು ಬಯಸಿದರೆ ಮಾತ್ರ, ಮುಂದಿನ ಪ್ರಕ್ರಿಯೆಗಳ ಜತೆ ನಿಲ್ಲುವುದಾದರೆ ಹೆಸರುಗಳನ್ನೂ ಪ್ರಕಟಿಸಲು ‘ಸಮಾಚಾರ’ ಸಿದ್ಧವಿದೆ)