samachara
www.samachara.com
ವಿದೇಶ ಸುತ್ತುವ ಪ್ರಧಾನಿ; ದೇಶ ಸುತ್ತವ ಮೇವಾನಿ: ಮಾಡೆಲ್ ಆಫ್‌ ಗುಜರಾತ್‌ನಲ್ಲಿ ಏನು ನಡೆಯುತ್ತಿದೆ? 
COVER STORY

ವಿದೇಶ ಸುತ್ತುವ ಪ್ರಧಾನಿ; ದೇಶ ಸುತ್ತವ ಮೇವಾನಿ: ಮಾಡೆಲ್ ಆಫ್‌ ಗುಜರಾತ್‌ನಲ್ಲಿ ಏನು ನಡೆಯುತ್ತಿದೆ? 

ಒಂದು ಅತ್ಯಾಚಾರ ಪ್ರಕರಣ, ಅದನ್ನು ತಮ್ಮ ರಾಜಕೀಯ ದಾಳವಾಗಿಸಲು ಹೊರಟ ಪಕ್ಷಗಳು ಮತ್ತು ಮಾದರಿಯಾಗದ ರಾಜ್ಯದ ಅವ್ಯವಸ್ಥೆ 60,000 ಕ್ಕೂ ಹೆಚ್ಚು ಜನರ ಉದ್ಯೋಗ ಕಿತ್ತುಕೊಂಡಿದೆ.

Team Samachara

ಇದು ಜಾಗತೀಕರಣದ ಯುಗ. ಇಲ್ಲಿ ಒಂದು ಪ್ರದೇಶ, ರಾಜ್ಯ, ದೇಶದ ಜನರು ಬೇರೆ ಬೇರೆ ಭಾಗಗಳಿಗೆ ಹೋಗಿ ನೆಲೆ ಕಂಡು ಕೊಳ್ಳುವುದು ಸಾಮಾನ್ಯ. ಈ ಸಂದರ್ಭದಲ್ಲಿ ‘ವಲಸೆ ಕಾರ್ಮಿಕ’ರನ್ನು ಗುರುತಿಸಿ ಆಯಾಯ ಪ್ರದೇಶದಿಂದ ಹೊರಗಟ್ಟಲು ಆರಂಭಿಸಿದರೆ ಏನಾಗುತ್ತದೆ? ಉತ್ತರ ಬೇಕು ಎಂದರೆ ಒಂದು ಕಾಲದಲ್ಲಿ ‘ಮಾದರಿ’ಯನ್ನು ದೇಶಕ್ಕೆ ಹಂಚಿದ್ದ ಗುಜರಾತ್ ರಾಜ್ಯದ ಕಡೆಗೆ ನೋಡಬೇಕು.

ಪ್ರಧಾನಿ ನರೇಂದ್ರ ಮೋದಿಯ ತವರು 2014ರ ಲೋಕಸಭೆ ಚುನಾವಣೆಯಲ್ಲಿ ‘ಮಾದರಿ ರಾಜ್ಯ’ವಾಗಿ ಚರ್ಚೆಗೆ ಬಂದಿದ್ದ ಗುಜರಾತ್‌ನಲ್ಲಿ ಇವತ್ತು ನಡೆಯುತ್ತಿರುವ ಬೆಳವಣಿಗೆಗಳು ಕಳವಳ ಮೂಡಿಸುತ್ತಿವೆ. ಹೊರ ರಾಜ್ಯದ ಕಾರ್ಮಿಕರ ವಿರುದ್ಧ ದೊಡ್ಡ ಮಟ್ಟದ ಅಸಹನೆ ಇಲ್ಲೀಗ ಹುಟ್ಟಿಕೊಂಡಿದೆ. ವಲಸೆ ಕಾರ್ಮಿಕರು ಸಾಗರೋಪಾದಿಯಲ್ಲಿ ಗುಜರಾತ್‌ನ್ನು ತೊರೆಯುತ್ತಿದ್ದಾರೆ. ಒಂದೆಡೆ ಇದು ಗುಜರಾತ್‌ನ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ಮತ್ತೊಂದಡೆ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಎಂದಿಗಿಂತ ಹೆಚ್ಚಾಗಿರುವ ಕಾಲದಲ್ಲೇ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ. ಇಂಥಹದ್ದೊಂದು ಬೆಳವಣಿಗೆ ಯಾಕೆ ನಡೆಯಿತು ಎಂದು ಹುಡುಕಿಕೊಂಡು ಹೊರಟರೆ ಅಲ್ಲಿ ಒಂದು ಅತ್ಯಾಚಾರ ಪ್ರಕರಣ ಮತ್ತು ಅದನ್ನು ತಮ್ಮ ರಾಜಕೀಯ ದಾಳವಾಗಿಸಲು ಹೊರಟ ಪಕ್ಷಗಳು ಮತ್ತು ಮಾದರಿಯಾಗದ ರಾಜ್ಯದ ಅವ್ಯವಸ್ಥೆ ಎದುರಾಗುತ್ತದೆ.

ಆಗಿದ್ದೇನು?

ಸೆಪ್ಟೆಂಬರ್‌ 28ರಂದು ಗುಜರಾತ್‌ನ ಸಬರಕಾಂತ ಜಿಲ್ಲೆಯ ಹಿಮ್ಮಂತ್‌ನಗರದ ಧುಂಧರ್‌ ಗ್ರಾಮದಲ್ಲಿ 14 ವರ್ಷದ ಅಪ್ರಾಪ್ತೆಯ ಮೇಲೆ ಸಂಜೆ 7 ಗಂಟೆ ಸುಮಾರಿಗೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದೇ ರವೀಂದ್ರ ಸಾಹು ಎಂಬ ಗ್ರಾನೈಟ್‌ ಅಂಗಡಿ ಕಾರ್ಮಿಕನನ್ನು ಬಂಧನಕ್ಕೆ ಒಳಪಡಿಸಲಾಯಿತು. ಆತ ಕೆಲಸ ಮಾಡುತ್ತಿದ್ದ ಗ್ರಾನೈಟ್‌ ಅಂಗಡಿಗೆ ಉದ್ರಿಕ್ತ ಜನರು ಬೆಂಕಿ ಇಟ್ಟರು. ಈತ ಬಿಹಾರಿ ಮೂಲದ ವಲಸೆ ಕಾರ್ಮಿಕನಾಗಿದ್ದ. ಹೀಗಾಗಿ ಇಡೀ ಪರಕರಣ ‘ಹಿಂದಿ ಮಾತನಾಡುವ ರಾಜ್ಯಗಳ ವಲಸೆ ಕಾರ್ಮಿಕರ’ ವಿರುದ್ಧದ ಹೋರಾಟಕ್ಕೆ ತಿರುಗಿತು. ಹೊರ ರಾಜ್ಯದ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದ ಹಲವು ಫ್ಯಾಕ್ಟರಿಗಳ ಮೇಲೆ ದಾಳಿಗಳು ನಡೆದು ಹೋದವು.

ಆರೋಪಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಉದ್ರಿಕ್ತ ಜನರಿಂದ ಬೆಂಕಿ.
ಆರೋಪಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಉದ್ರಿಕ್ತ ಜನರಿಂದ ಬೆಂಕಿ.
/ಸ್ಕ್ರಾಲ್‌

ಇದರ ಹಿಂದೆ ಗುಜರಾತ್‌ನ ಠಾಕೂರ್‌ ಸಮುದಾಯದ ಪ್ರಮುಖ ನಾಯಕ, ಠಾಕೂರ್‌ ಸೇನಾ ಮುಖ್ಯಸ್ಥ ಮತ್ತು ಹಾಲಿ ಕಾಂಗ್ರೆಸ್ ಶಾಸಕ ಅಲ್ಪೇಶ್‌ ಠಾಕೂರ್‌ ಪಾತ್ರವೂ ಇತ್ತು. ಅತ್ಯಾಚಾರ ಪ್ರಕರಣದ ನಡೆದ ಎರಡು ದಿನಗಳ ತರುವಾಯ ಉಗ್ರ ಭಾಷಣ ಮಾಡಿದ್ದ ಠಾಕೂರ್‌, ಹಿಂದಿ ಮಾತನಾಡುವ ವಲಸೆ ಕಾರ್ಮಿಕರ ವಿರುದ್ಧ ಕೆಂಡಕಾರಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು.

ವಿಡಿಯೋದಲ್ಲಿ ಅವರು, “ಇವರೆಲ್ಲಾ ಹೊರಗಿನಿಂದ ಬಂದು ಇಲ್ಲಿ ಅಪರಾಧ ಚಟುವಟಿಕೆ ನಡೆಸುತ್ತಿದ್ದಾರೆ. ನಂತರ ತಮ್ಮ ಊರುಗಳಿಗೆ ವಾಪಾಸಾಗಿ ತಪ್ಪಿಸಿಕೊಳ್ಳುತ್ತಾರೆ” ಎಂದು ಹರಿಹಾಯ್ದಿದ್ದರು. “ಕಂಪನಿಗಳ ಟ್ರಕ್‌ಗಳನ್ನು ತಡೆಯಲಾಗುತ್ತದೆ, ಬಾಗಿಲುಗಳನ್ನು ಮುರಿಯಲಾಗುತ್ತದೆ. ಅವರ ಜಾಗಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಇದನ್ನೆಲ್ಲಾ ಮಾಡಲು ಎಷ್ಟು ಜನರು ತಯಾರಾಗಿದ್ದೀರಿ ಎಂದು ನೆರೆದಿದ್ದ ಜನರಲ್ಲಿ ಕಿಚ್ಚು ಹಚ್ಚಿದ್ದರು. ಅಲ್ಪೇಶ್‌ ಠಾಕೂರ್ ಆಪ್ತೆ, ಶಾಸಕಿ ಗನಿಬೆನ್‌ ಠಾಕೂರ್‌ ಅವರಂತೂ ಅತ್ಯಾಚಾರ ಆರೋಪಿಯನ್ನು ಪೊಲೀಸರಿಗೆ ನೀಡುವ ಬದಲು ಜೀವಂತ ಸುಡಬೇಕು ಎಂದೆಲ್ಲಾ ಬಾಷಣ ಮಾಡಿದ್ದರು.

ಬೆನ್ನಿಗೆ ಸಬರಕಾಂತ ಸುತ್ತ ಮುತ್ತ ನೆಲೆನಿಂತಿದ್ದ ಗ್ರಾನೈಟ್‌ ಫ್ಯಾಕ್ಟರಿಗಳು ಮತ್ತು ಅದರಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರ ಮೇಲಿನ ದಾಳಿ ಗುಜರಾತ್‌ನ ಇತರ ಜಿಲ್ಲೆಗಳಿಗೆ ಹಬ್ಬಿಕೊಂಡಿತು. ರಾಜ್ಯದ ಉತ್ತರ ಭಾಗದಲ್ಲಿದ್ದ ಸುಮಾರು 7 ಜಿಲ್ಲೆಗಳಲ್ಲಿ ದಾಳಿಗಳು ಆರಂಭವಾದವು. ಹಲವು ಫ್ಯಾಕ್ಟರಿಗಳು ಅಘೋಷಿತ ಮುಷ್ಕರ ಘೋಷಿಸಿದವು. ಗುಂಪು ಹಲ್ಲೆಗಳು, ದಾಳಿಗಳು ಎಗ್ಗಿಲ್ಲದೆ ನಡೆದವು. ಪರಿಣಾಮ 450 ಕ್ಕೂ ಹೆಚ್ಚು ಜನರು ಬಂಧಿತರಾದರೆ, 60 ಸಾವಿರಕ್ಕೂ ಅಧಿಕ ಜನರು ಗುಜರಾತ್‌ ತೊರೆದಿದ್ದಾರೆ.

ಅತ್ಯಾಚಾರ ಪ್ರಕರಣ ಹೀಗೊಂದು ಸ್ವರೂಪ ಯಾಕೆ ಪಡೆದುಕೊಂಡಿತು ಎಂಬುದಕ್ಕೆ ಸರಳ ವಿಶ್ಲೇಷಣೆಯನ್ನು ಮುಂದಿಡಲಾಗುತ್ತಿದೆ. ಮುಖ್ಯವಾಗಿ ತಮ್ಮ ಊರಿಗೆ ವಾಪಸ್‌ ತೆರಳಿದವರಲ್ಲಿ ಬಿಹಾರಿಗಳು ಮತ್ತು ಮಧ್ಯಪ್ರದೇಶದವರು ಹೆಚ್ಚಾಗಿದ್ದರು. ಮಧ್ಯ ಪ್ರದೇಶದಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಅದರಲ್ಲೂ ಮೋದಿ ತವರು ಗುಜರಾತ್‌ನಿಂದ ನಮ್ಮನ್ನು ಹೊಡೆದು ಅಟ್ಟಿದರು ಎಂದರೆ ಅದು ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ನಷ್ಟ ಉಂಟು ಮಾಡಲಿದೆ ಎಂಬುದು ಕಾಂಗ್ರೆಸ್‌ ಪಕ್ಷದ ಸರಳ ಲೆಕ್ಕಾಚಾರ ಎನ್ನಲಾಗಿದೆ.

ಇದಕ್ಕಾಗಿ ಅಲ್ಪೇಶ್‌ ಠಾಕೂರ್‌ ಹಿಂಸೆಗೆ ಪ್ರೇರೇಪಿಸಿದರು ಎಂಬ ಮಾತುಗಳಿವೆ. ಇದಕ್ಕೆ ಸಾಕ್ಷಿಯಾಗಿ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾದ ಹಲವು ದೂರುಗಳಲ್ಲಿ ಠಾಕೂರ್‌ ಸೇನೆಯ ಹೆಸರಿದೆ.

ಅಲ್ಪೇಶ್‌ ಠಾಕೂರ್‌ ಶುಕ್ರವಾರದ ಉಪವಾಸ.
ಅಲ್ಪೇಶ್‌ ಠಾಕೂರ್‌ ಶುಕ್ರವಾರದ ಉಪವಾಸ.
/ಇಂಡಿಯನ್‌ ಎಕ್ಸ್‌ಪ್ರೆಸ್‌

ಆದರೆ ಇದನ್ನು ನಿಯಂತ್ರಿಸಬೇಕಾದ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಅಲ್ಪೇಶ್‌ ಠಾಕೂರ್‌ರನ್ನು ವಿರೋಧಿಸುತ್ತಾ ಕುಳಿತುಕೊಂಡರು. ಯಾವಾಗ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ತಿಳಿಯಿತೋ ಶುಕ್ರವಾರ ಅಲ್ಪೇಶ್‌ ಠಾಕೂರ್ ಉಪವಾಸ ಕುಳಿತುಕೊಂಡು ಬಿಟ್ಟರು. ಶಾಂತಿ ಮತ್ತು ಸೌಹಾರ್ದತೆಗಾಗಿ ಈ ಉಪವಾಸ ಎಂದು ಅವರು ಕರೆದುಕೊಂಡರು. ಸಂಜೆ ಹೊತ್ತಿಗೆ ವಲಸಿಗ ಕಾರ್ಮಿಕ ಮಗುವಿನ ಕೈಯಿಂದ ಪಾನೀಯ ತೆಗೆದುಕೊಂಡು ಅವರು ಉಪವಾಸ ಅಂತ್ಯಗೊಳಿಸಿದರು. ಆದರೆ ಅಷ್ಟೊತ್ತಿಗಾಗಲೇ 500 ಚಿಲ್ಲರೆ ಜನ ದೊಂಬಿ, ಹಲ್ಲೆ ಪ್ರಕರಣಗಳಲ್ಲಿ ಜೈಲು ಸೇರಿದ್ದರು. 60,000 ಕ್ಕೂ ಅಧಿಕ ಕಾರ್ಮಿಕರು ಕೆಲಸ ಕಳೆದುಕೊಂಡು ಊರಿಗೆ ವಾಪಸಾಗಿದ್ದರು. ಮಾಡೆಲ್‌ ಗುಜರಾತ್‌ ಮಕಾಡೆ ಮಲಗಿತ್ತು.

“ಇಲ್ಲಿ ಎಲ್ಲವೂ ರಾಜಕೀಯದಲ್ಲಿಯೇ ಅಂತ್ಯವಾಗುತ್ತವೆ. ಒಂದು ಕಾಲದಲ್ಲಿ ವಲಸೆ ಬಂದವರಿಗೆ ಜನ ಜೋಪಡಿಗಳನ್ನು ಕಟ್ಟಿಕೊಳ್ಳಲು ಚಿಕ್ಕ ಜಾಗಗಳನ್ನು ಬಾಡಿಗೆಗೆ ನೀಡಿದರು. ಇವತ್ತು ಅವರಿಗೆ ಜಾಗ ಖಾಲಿ ಮಾಡಿಸಬೇಕಿತ್ತು. ಅದಕ್ಕೆ ಅತ್ಯಾಚಾರ ನೆಪವಾಯಿತು. ಇದನ್ನು ರಾಜಕಾರಣಿಗಳು ಬಳಸಿಕೊಳ್ಳುವ ಮೂಲಕ ದೊಂಬಿ ಎಬ್ಬಿಸಿದರು,’’ ಎನ್ನುತ್ತಾರೆ ನವಗುಜರಾತ್ ಸಮಯ್‌ನ ಹಿರಿಯ ಪತ್ರಕರ್ತ ಆಶೀಶ್ ಅಮೀನ್.

‘ಸಮಾಚಾರ’ದ ಜತೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಖೇದ ವ್ಯಕ್ತಪಡಿಸಿದ ಅವರು, “ನಮಗೆ ದೊಂಬಿ, ಗಲಾಟೆಗಳು ಹೊಸತಲ್ಲ. ಆದರೆ ಅದನ್ನು ರಾಜಕೀಯಕ್ಕೆ ಬಳಸುವ ಜನರು ಇರುವವರೆಗೆ ಪರಿಸ್ಥಿತಿ ಬದಲಾಗುವುದು ಕಷ್ಟ. ಬಿಜೆಪಿ ಸಬ್‌ ಕಾ ಸಾಥ್ ಅನ್ನುವ ಮೂಲಕ ಪರ ರಾಜ್ಯ ವಿರೋಧಿ ಮನಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿತು. ಕಾಂಗ್ರೆಸ್ ವಿಚಾರದಿಂದ ದೂರವೇ ಉಳಿದುಕೊಂಡಿತು. ಅಂತಿಮವಾಗಿ ಜುಗ್ಗಿ, ಜೋಪಡಿಯ ಜನ ಒದೆ ತಿಂದರು. ಸ್ಥಳೀಯರು ಜೈಲಿಗೆ ಹೋದರು. ನಮ್ಮಲ್ಲಿ ಪರ್ಯಾಯ ಕಟ್ಟಲು ಬಂದ ಯುವ ನಾಯಕರಿಗೆ ರಾಜ್ಯ ಚಿಕ್ಕದಾಗಿದೆ. ಇತರೆ ರಾಜ್ಯಕ್ಕೆ ಹೋಗಿ ಹೇಳಿಕೆ ಕೊಡುತ್ತಿದ್ದಾರೆ,’’ ಎಂದರು.

ಇದೇ ರಾಜ್ಯದಿಂದ ಬಂದ ಪ್ರಧಾನಿ ವಿದೇಶ ಸುತ್ತುವುದರಲ್ಲೇ ಹೆಚ್ಚು ಕಾಲ ಕಳೆದರು. ಪರ್ಯಾಯ ಶಕ್ತಿಯಾಗಿ ಪರಿಮೂಡಿದ ಜಿಗ್ನೇಶ್ ಮೇವಾನಿ ರಾಜ್ಯವನ್ನು ಬಿಟ್ಟು ದೇಶ ಸುತ್ತುವುದಲ್ಲೇ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಈ ನಡುವೆ ಓಬಿಸಿ ಮೀಸಲಾತಿ ವಿಚಾರ ಇಟ್ಟುಕೊಂಡು ಅಖಾಡಕ್ಕಿಳಿದ ಠಾಕೂರ್ ಸಮುದಾಯ ಯುವ ನಾಯಕರು ಹೊರರಾಜ್ಯಗಳ ಸಾಮಾನ್ಯ ಜನರನ್ನುಹೊಡೆದಟ್ಟುತ್ತಿದ್ದಾರೆ. ಒಂದು ಕಾಲದಲ್ಲಿ ‘ಗುಜರಾತ್ ಮಾದರಿ’ ಎಂದು ಹೇಳುತ್ತಿದ್ದ ರಾಜ್ಯ ಇದೆನಾ?