samachara
www.samachara.com
ರಾಯಲ್ಟಿ ಆಫ್ ಮೈಸೂರ್, ಖಾಸಗಿ ದರ್ಬಾರ್ ಹಾಗೂ ದಸರಾ ಸಮಯದಲ್ಲಿ ಕಾನೂನಿನ ಪಾಠ!
COVER STORY

ರಾಯಲ್ಟಿ ಆಫ್ ಮೈಸೂರ್, ಖಾಸಗಿ ದರ್ಬಾರ್ ಹಾಗೂ ದಸರಾ ಸಮಯದಲ್ಲಿ ಕಾನೂನಿನ ಪಾಠ!

1974ರ ಸೆಪ್ಟೆಂಬರ್‌ 23ರಂದು ಜಯಚಾಮರಾಜೇಂದ್ರ ಒಡೆಯರ್‌ ಬೆಂಗಳೂರು ಅರಮನೆಯಲ್ಲಿ ನಿಧನರಾದರು. ಅದೇ ವರ್ಷ ನಡೆದ ದಸರಾ ಸಂದರ್ಭದಲ್ಲೇ ಮಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಚಿನ್ನದ ಸಿಂಹಾಸನ ಏರಿ ಕುಳಿತು ದರ್ಬಾರ್‌ ನಡೆಸಿದರು...

ದಯಾನಂದ

ದಯಾನಂದ

ಅದು 1970ರ ದಸರಾ ಸಂದರ್ಭ. ಅಂದಿನ ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್‌ ಸಿಂಹಾಸನದ ಮೇಲೆ ಕುಳಿತು ದರ್ಬಾರ್‌ ನಡೆಸಲಿಲ್ಲ. ಚಿನ್ನದ ಅಂಬಾರಿ ಏರಿ ಜಂಬೂ ಸವಾರಿಯನ್ನೂ ಮಾಡಲಿಲ್ಲ. ಅದೊಂದೇ ವರ್ಷ ಅಲ್ಲ, ಮುಂದೆ ಜಯಚಾಮರಾಜೇಂದ್ರ ಒಡೆಯರ್‌ ಬದುಕಿರುವವರೆಗೂ ಸಿಂಹಾಸನ ಹಾಗೂ ಅಂಬಾರಿ ಏರಲಿಲ್ಲ.

ಜಯಚಾಮರಾಜೇಂದ್ರ ಒಡೆಯರ್‌ ಅವರ ಈ ನಿರ್ಧಾರಕ್ಕೆ 1969ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರಕಾರ ಭಾರತ ಗಣರಾಜ್ಯದೊಳಗಿರುವ ಎಲ್ಲಾ ರಾಜಮನೆತನಗಳಿಗೆ ನೀಡಿದ್ದ ವಿಶೇಷ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳಲು ಸಂಸತ್ತಿನಲ್ಲಿ ಮಂಡಿಸಿದ್ದ ರಾಯಧನ ನಿಷೇಧ ವಿದೇಯಕ ಕಾರಣವಾಗಿತ್ತು. ಆದರೆ, ಇದೊಂದೇ ಕಾರಣಕ್ಕೆ ಜಯಚಾಮರಾಜೇಂದ್ರ ಖಾಸಗಿ ದಸರಾದಿಂದ ದೂರ ಉಳಿಯಲಿಲ್ಲ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಇದ್ದ ಗೌರವವೂ ಇಂತಹದೊಂದು ಪ್ರತಿ ಸಂಪ್ರದಾಯವಾದಿ ನಿಲುವು ತಳೆಯಲು ಕಾರಣ ಎನ್ನುತ್ತಾರೆ ಇತಿಹಾಸಕಾರರು.

1974ರ ಸೆಪ್ಟೆಂಬರ್‌ 23ರಂದು ಜಯಚಾಮರಾಜೇಂದ್ರ ಒಡೆಯರ್‌ ಬೆಂಗಳೂರು ಅರಮನೆಯಲ್ಲಿ ನಿಧನರಾದರು. ಅದೇ ವರ್ಷ ನಡೆದ ದಸರಾ ಸಂದರ್ಭದಲ್ಲೇ ಮಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಚಿನ್ನದ ಸಿಂಹಾಸನ ಏರಿ ಕುಳಿತು ದರ್ಬಾರ್‌ ನಡೆಸಿದರು. ತಂದೆ ಹಿಂದೆ ಬಿಟ್ಟು ಹೊರಟಿದ್ದ ರಾಜಶಾಹಿಯ ಕುರುಹನ್ನು ಅವರು ಮುಂದುವರಿಸಿದರು. ಅರಮನೆ ನಗರಿ ಎಂದು ಕರೆಸಿಕೊಳ್ಳುವ ಮೈಸೂರಿನಲ್ಲಿ ‘ನಾಡ ಹಬ್ಬ’ದ ಜತೆಜತೆಗೆ ವ್ಯಕ್ತಿ ಪೂಜೆಯಲ್ಲಿ ಅಂತ್ಯವಾಗುವ ಸಂಪ್ರದಾಯ ಪುನರಾರಂಭಕ್ಕೆ ಅದು ನಾಂದಿ ಹಾಡಿತು. ಈ ಮೂಲಕ ಹಳೆಯ ಸಂಪ್ರದಾಯವೊಂದು ಐದು ವರ್ಷಗಳಲ್ಲೇ ಮತ್ತೆ ಶುರುವಾಯಿತು. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳ ಜನರು ಸರಕಾರದ ಹಣದಲ್ಲಿ ದಸರಾ ಆಚರಿಸಿದರೆ, ರಾಜ ಕುಟುಂಬ ಮಾತ್ರ ಹೆಚ್ಚು ಕಡಿಮೆ ಸರಕಾರ ನೀಡುವ ಹಣದಲ್ಲಿ ಖಾಸಗಿ ದಸರಾ ಆಚರಿಸಿಕೊಂಡು ಬರುತ್ತಿದೆ.

ಈ ಬಾರಿಯೂ ಮತ್ತೆ ದಸರಾ ಬಂತು. ಯದುವೀರ ನರಸಿಂಹದತ್ತ ಚಾಮರಾಜ ಒಡೆಯರ್‌ ಎರಡನೇ ಬಾರಿಗೆ ರಾಜಪೋಷಾಕಿನಲ್ಲಿ ಚಿನ್ನದ ಸಿಂಹಾಸನವೇರಿ ಖಾಸಗಿ ದರ್ಬಾರ್‌ ನಡೆಸಿದರು. ಯಾವುದನ್ನು ಅವರು ಬದುಕುತ್ತಿರುವ ಅರಮನೆಯ ಪೂರ್ವಜರು ಆಚರಿಸಿಕೊಂಡು ಬಂದಿದ್ದಾರೋ, ಅದನ್ನು ಇವರು ಪುನರಾವರ್ತನೆ ಮಾಡಿದರು. ಇದಿಷ್ಟು ನೀವು ದಸರಾ ಹಿನ್ನೆಲೆಯಲ್ಲಿ ಈವರೆಗೆ ಕೇಳಿದ, ಓದಿದ ಸುದ್ದಿಗಳು. ಆದರೆ, ಸಂವಿಧಾನದ 26ನೇ ತಿದ್ದುಪಡಿ ಹಾಗೂ ಮೈಸೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಕಾಯ್ದೆಯ (1998ರ 32ನೇ ಅಧಿನಿಯಮ) ಪ್ರಕಾರ ಇಂತಹದೊಂದು ಖಾಸಗಿ ದರ್ಬಾರ್ ನಡೆಸುವುದಕ್ಕೆ ಯದುವೀರ್‌ಗೆ ಯಾವುದೇ ‘ಹಕ್ಕು’ ಇಲ್ಲ.

ಜಯಚಾಮರಾಜೇಂದ್ರ ಒಡೆಯರ್‌
ಜಯಚಾಮರಾಜೇಂದ್ರ ಒಡೆಯರ್‌

ಕಾನೂನಿನ ಇತಿಹಾಸ:

1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ರಾಜಮನೆತನಗಳಿಗೆ ನೀಡುವ ರಾಯಧನ ಹಾಗೂ ವಿಶೇಷ ಸೌಲಭ್ಯಗಳನ್ನು (ಪ್ರಿವಿ ಪರ್ಸ್) ನಿಲ್ಲಿಸುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಲೋಕಸಭೆಯಲ್ಲಿ ಈ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕರೂ ರಾಜ್ಯಸಭೆಯಲ್ಲಿ ಮೂರನೇ ಎರಡರ ಬಹುಮತ ಸಿಗಲಿಲ್ಲ. ರಾಜ್ಯಸಭೆಯಲ್ಲಿ ವಿಧೇಯಕದ ಪರವಾಗಿ 149 ಮತಗಳು ಮತ್ತು ಅದರ ವಿರುದ್ಧವಾಗಿ 75 ಮತಗಳು ಚಲಾವಣೆಯಾಗಿದ್ದವು.

1971ರ ಸಾರ್ವತ್ರಿಕ ಚುನಾವಣೆಗೂ ಮುನ್ನಾ ಇಂದಿರಾ ಗಾಂಧಿ ಎರಡು ಮುಖ್ಯ ಭರವಸೆಗಳನ್ನು ನೀಡಿದ್ದರು. ಈ ಭರವಸೆಗಳ ಬಲದಿಂದಲೇ ಇಂದಿರಾ ಸರಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು ಎನ್ನುವ ಮಾತುಗಳಿವೆ. ಆ ಎರಡು ಭರವಸೆಗಳೆಂದರೆ ಮತ್ತೆ ಅಧಿಕಾರಕ್ಕೆ ಬಂದರೆ ರಾಜಮನೆತನಗಳಿಗೆ ನೀಡುತ್ತಿರುವ ರಾಯಧನ ಸ್ಥಗಿತ ಹಾಗೂ ಬ್ಯಾಂಕ್‌ಗಳ ರಾಷ್ಟ್ರೀಕರಣ. “ಗರೀಬಿ ಹಠಾವೋ” ಘೋಷಣೆಯ ಭಾಗವಾಗಿ ಈ ಎರಡೂ ದೊಡ್ಡ ಭರವಸೆಗಳನ್ನು ನೀಡಿದ್ದ ಇಂದಿರಾ ಗಾಂಧಿ 1971ರಲ್ಲಿ ಮತ್ತೆ ಪ್ರಧಾನಿಯಾಗಿ ಪುನರಾಯ್ಕೆಯಾದರು.

ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದ ಕೂಡಲೇ ಈ ಎರಡೂ ಭರವಸೆಗಳನ್ನು ಈಡೇರಿಸುವ ಕ್ರಮಕ್ಕೆ ಮುಂದಾದರು. ಅದರ ಭಾಗವಾಗಿ ರಾಜಮನೆತನಗಳ ರಾಯಧನ ಹಾಗೂ ವಿಶೇಷ ಸೌಲಭ್ಯಗಳನ್ನು ನಿಲ್ಲಿಸಲು ಸಂವಿಧಾನಕ್ಕೆ 26ನೇ ತಿದ್ದುಪಡಿ ತಂದರು. ಸ್ವಾತಂತ್ರ್ಯಾನಂತರ ಭಾರತ ಸರಕಾರದೊಳಗೆ ವಿಲೀನವಾಗಲು ಒಪ್ಪಿದ್ದ ಅಂದಿನ 562 ರಾಜಮನೆತನಗಳ ಅಧಿಕಾರ ‘ತ್ಯಾಗ’ಕ್ಕಾಗಿ ‘ನ್ಯಾಯಯುತ’ ರಾಯಧನ ಹಾಗೂ ವಿಶೇಷ ಸೌಲಭ್ಯಗಳನ್ನು ನೀಡಲು ಅಂದಿನ ಕೇಂದ್ರ ಗೃಹ ಸಚಿವ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಇಂದಿಗೆ ಸರಿಯಾಗಿ 69 ವರ್ಷಗಳ ಹಿಂದೆ (1949ರ ಅಕ್ಟೋಬರ್‌ 12) ಸಂವಿಧಾನದ 291 ಹಾಗೂ 362ನೇ ಪರಿಚ್ಛೇದಗಳನ್ನು ಸೇರಿಸಲು ಪ್ರಸ್ತಾವ ಸಲ್ಲಿಸಿದ್ದರು.

ಸಂವಿಧಾನದ 291ನೇ ಪರಿಚ್ಛೇದ ಈ ರಾಜಮನೆತನಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಿದರೆ, 362ನೇ ಪರಿಚ್ಛೇದವು ರಾಯಧನ ಹಾಗೂ ವಿಶೇಷ ಸೌಲಭ್ಯಗಳನ್ನು ಒದಗಿಸಿತ್ತು. ಆದರೆ, 1971ರಲ್ಲಿ ಸಂವಿಧಾನಕ್ಕೆ 26ನೇ ತಿದ್ದುಪಡಿ ತರುವ ಮೂಲಕ ಈ ಎರಡೂ ಪರಿಚ್ಛೇದಗಳನ್ನು ತೆಗೆದು ಹಾಕಲಾಯಿತು. ಇದರ ಬದಲಿಗೆ 363ಎ ಪರಿಚ್ಛೇದವನ್ನು ಸೇರಿಸಿ, “1971ರ ಸಂವಿಧಾನ ತಿದ್ದುಪಡಿಗೆ ಮೊದಲು ದೇಶದ ರಾಷ್ಟ್ರಪತಿಗಳಿಂದ ಯಾರು ‘ರಾಜ’ ಎಂದು ಗುರುತಿಸಲ್ಪಟ್ಟಿದ್ದಾರೋ ಅವರು ಮಾತ್ರ ರಾಜ ಎನಿಸಿಕೊಳ್ಳುತ್ತಾರೆ” ಎಂದು ಹೇಳಲಾಯಿತು.

ಈ ಕಾಯ್ದೆಗಳ ಪ್ರಕಾರವೇ ಯದುವೀರ್‌ ಈಗ ರಾಜ ಅಲ್ಲ. ಅಲ್ಲದೆ, ಮೈಸೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಕಾಯ್ದೆಯ ಪ್ರಕಾರ ಅರಮನೆಯ ನಿಗದಿತ ಭಾಗದಲ್ಲಿ ಜೀವಿತಾವಧಿವರೆಗೆ ವಾಸಿಸಲು ಅವಕಾಶವಿರುವುದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹಾಗೂ ಅವರ ಪತ್ನಿ ಪ್ರಮೋದಾ ದೇವಿಗೆ ಮಾತ್ರ. ಕರ್ನಾಟಕ ಸರಕಾರ ‘ಮಾನವೀಯತೆ’ ದೃಷ್ಟಿಯಿಂದ ನಡೆದುಕೊಳ್ಳುತ್ತಾ ಬಂದಿರುವುದರಿಂದ ರಾಯಧನ ಹಾಗೂ ಖಾಸಗಿ ದರ್ಬಾರ್‌ಗೆ ಅವಕಾಶ ನೀಡಲಾಗಿದೆ. ಸಂವಿಧಾನದ 26ನೇ ತಿದ್ದುಪಡಿ ರಾಜ್ಯ ಸರಕಾರಗಳು ನೀಡುವ ರಾಯಧನದ ಬಗ್ಗೆ ಏನನ್ನೂ ಹೇಳಿಲ್ಲ. ಪ್ರತಿ ವರ್ಷ ರಾಯಧನ ನೀಡುವ ವಿಷಯದ ಬಗ್ಗೆ ಮೈಸೂರು ಅರಮನೆ ಕಾಯ್ದೆಯಲ್ಲೂ ಎಲ್ಲೂ ಸ್ಪಷ್ಟವಾಗಿ ಹೇಳಲಾಗಿಲ್ಲ. ಹೀಗಾಗಿ ಪ್ರತಿ ವರ್ಷ ರಾಜವಂಶಸ್ಥರಿಗೆ ರಾಯಧನ ನೀಡುವುದು ಮುಂದುವರಿದೇ ಇದೆ, ಅದರ ಜತೆಗೆ ಖಾಸಗಿ ದರ್ಬಾರ್‌ ಕೂಡಾ ನಡೆಯುತ್ತಲೇ ಇದೆ.

ಸಿಂಹಾಸನದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಸಿಂಹಾಸನದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್

ಕಾಯ್ದೆ ರೂಪುಗೊಂಡಿದ್ದು ಹೀಗೆ:

ಜಯಚಾಮರಾಜೇಂದ್ರ ಒಡೆಯರ್ ನಿಧನದ ಬಳಿಕ ಅವರ ಪತ್ನಿ ತ್ರಿಪುರ ಸುಂದರಿ ಅಮ್ಮಣ್ಣಿ ಮತ್ತು ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅರಮನೆ ನಿರ್ವಹಣೆ ಕಷ್ಟವಾಗಿದ್ದರಿಂದ 18/8/1975, 3/9/1975, 7/2/1976 ಮತ್ತು 10/2/1976ರಲ್ಲಿ ಒಟ್ಟು ನಾಲ್ಕು ಬಾರಿ ರಾಜ್ಯ ಸರಕಾರಕ್ಕೆ ಪತ್ರ ಬರೆದು, ಅರಮನೆಯಲ್ಲಿ ತಾವು ವಾಸಿಸುತ್ತಿರುವ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವಂತೆ ಕೋರಿದ್ದರು. ರಾಜವಂಶಸ್ಥರ ಈ ಕೋರಿಕೆಯ ಮೇರೆಗೆ 26/2/1976ರಲ್ಲಿ ಆದೇಶ ಹೊರಡಿಸಿದ ಸರಕಾರ (ಆದೇಶ ಸಂಖ್ಯೆ ಜಿಎಡಿ 2 ಪಿಎಸ್‌ಆರ್ 76) ಮೈಸೂರು ಅರಮನೆಯ ಭಾಗ ಹಾಗೂ ಅದರ ಚರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿತ್ತು.

ಅರಮನೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ಸರಕಾರ ರಾಜವಂಶಸ್ಥರು ಕೇಳಿದ್ದ ಪರಿಹಾರ ಹಣವನ್ನು ಪಾವತಿಸಿರಲಿಲ್ಲ. ಇದನ್ನು ಪ್ರಶ್ನಿಸಿ ರಾಜವಂಶಸ್ಥರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಒಂದು ಆದೇಶದ ಮೂಲಕ ಅರಮನೆ ಸ್ವಾಧೀನ ಸರಿಯಲ್ಲ ಎಂದಿದ್ದ ಹೈಕೋರ್ಟ್‌ ಇದಕ್ಕಾಗಿ ಕಾಯ್ದೆಯೊಂದನ್ನು ರೂಪಿಸಲು ಸೂಚನೆ ನೀಡಿತ್ತು. ಹೈಕೋರ್ಟ್‌ ಸೂಚನೆಯಂತೆ ಅಧಿನಿಯಮ ರೂಪಿಸಿದ ರಾಜ್ಯ ಸರಕಾರ ಇದನ್ನು 30/11/1998ರಂದು ಕಾಯ್ದೆಯಾಗಿ ಜಾರಿಗೆ ತಂದಿತು. ಈ ಕಾಯ್ದೆ ರೂಪಿಸಲು ಪ್ರಮುಖ ಪಾತ್ರ ವಹಿಸಿದ್ದು ಅಂದು ಸಮಾಜವಾದಿ ಎಂದು ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಕಾಯ್ದೆಯೇನೋ ಜಾರಿಗೆ ಬಂದು 20 ವರ್ಷಗಳಾಗಿವೆ. ಆದರೆ, ಅದನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಸಿದ್ದರಾಮಯ್ಯ ಸೇರಿದಂತೆ ಯಾವ ಜನಪ್ರತಿನಿಧಿಗಳೂ, ಹಿರಿಯ ಅಧಿಕಾರಿಗಳೂ ಮಾಡಲಿಲ್ಲ. ಹೀಗಾಗಿ ‘ಪರಂಪರೆ’ಯ ಹೆಸರಿನಲ್ಲಿ ಇಂದಿಗೂ ಕುರುಡು ಸಂಪ್ರದಾಯಗಳು ಮೈಸೂರು ಅರಮನೆಯೊಳಗೆ ‘ರಾಯಲ್‌’ ಆಗಿ ನಡೆಯುತ್ತಲೇ ಇವೆ.

ಕಾಯ್ದೆ ಹೇಳುವುದೇನು?:

ಈ ಕಾಯ್ದೆಯ ಪ್ರಕಾರ, “ಮೈಸೂರು ಅರಮನೆ ಹಾಗೂ ಅದರ ಸುತ್ತಲಿನ ಉದ್ಯಾನ, ತೋಟ ಮತ್ತು ಖಾಲಿ ಜಾಗ, ರಾಜ ಸಿಂಹಾಸನಗಳು, ರಾಜ ಮುಕುಟಗಳು, ಅಂಬಾರಿ, ರಾಜರ ಉಡುಗೆ ತೊಡುಗೆಗಳು ಮತ್ತು ಆಭರಣಗಳೂ ಸೇರಿದಂತೆ ರಾಜ ಭಂಡಾರ ಮತ್ತು ಅರಮನೆಗೆ ಸೇರಿದ ಅಥವಾ ಅರಮನೆಯಲ್ಲಿ ಇರುವ ಇತರ ಎಲ್ಲಾ ಕಲಾಕೃತಿಗಳು, ರಾಜ ಲಾಂಛನಗಳು, ವರ್ಣ ಚಿತ್ರಗಳು, ಶಿಲ್ಪಗಳು ಮತ್ತು ಪೀಠೋಪಕರಣಗಳು” ಈಗ ಸರಕಾರದ ಆಸ್ತಿ. ಸರಕಾರದ ಆಸ್ತಿಯಾಗಿರುವ ಇವುಗಳ ಮೇಲೆ ಸದ್ಯ ರಾಜವಂಶಸ್ಥರಿಗೆ ಯಾವುದೇ ಹಕ್ಕು, ಅಧಿಕಾರವಿಲ್ಲ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮತ್ತು ಅವರ ಪತ್ನಿ ಬದುಕಿರುವವರೆಗೆ ಮೈಸೂರು ಅರಮನೆಯ ಅವರಿಗೆ ಬಿಟ್ಟುಕೊಟ್ಟಿರುವ ಭಾಗದಲ್ಲಿ ವಾಸವಿರಲು ಮಾತ್ರ ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಇದನ್ನು ಬಿಟ್ಟು ಯದುವೀರ್‌ ಅಥವಾ ಅವರ ಪತ್ನಿ, ಮಕ್ಕಳಿಗೆ ಅರಮನೆಯ ಮೇಲೆ ಯಾವುದೇ ಅಧಿಕಾರವಿಲ್ಲ. ಆದರೂ ಯದುವೀರ್‌ ದಸರಾ ಸಂದರ್ಭದಲ್ಲಿ ‘ರಾಜ’ನಾಗಿ ಖಾಸಗಿ ದರ್ಬಾರ್‌ ನಡೆಸುತ್ತಿದ್ದಾರೆ!

ಮೈಸೂರು ಅರಮನೆಗೆ ಸಂಬಂಧಿಸಿದಂತೆ ಇಂಥದೊಂದ್ದು ಕಾಯ್ದೆ ಇದೆ ಎಂಬುದು ಬಹಳಷ್ಟು ರಾಜಕಾರಣಿಗಳು, ಅಧಿಕಾರಿಗಳಿಗೆ ಗೊತ್ತಿಲ್ಲ. ಅರಮನೆ ಆಡಳಿತ ಮಂಡಳಿಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯೇ ಅಧ್ಯಕ್ಷರು. ಆದರೆ, ಕಾಯ್ದೆ ಅನುಷ್ಠಾನಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ರಾಜವಂಶಸ್ಥರ ವಿಷಯವನ್ನು ಕೆದಕಿದರೆ ಓಟ್‌ ಬ್ಯಾಂಕ್‌ ಕಳೆದುಕೊಳ್ಳುವ ಭಯದಲ್ಲಿ ರಾಜಕಾರಣಿಗಳು ಇದ್ದಾರೆ.
- ಪ್ರೊ. ಪಿ.ವಿ. ನಂಜರಾಜ ಅರಸ್‌

ಮೈಸೂರು ರಾಜ್ಯದ ಅಭಿವೃದ್ಧಿಗೆ ಮೈಸೂರಿನ ಹಿಂದಿನ ಅರಸರ ಕೊಡುಗೆ ಸಾಕಷ್ಟಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ನಾಡಿಗೆ ನೀಡಿದ ಕೊಡುಗೆ, ಆಡಳಿತ ಸುಧಾರಣೆ, ಕೈಗಾರಿಕಾ ಅಭಿವೃದ್ಧಿ, ನೀರಾವರಿ ಯೋಜನೆಗಳು ಹಾಗೂ ಸಾಮಾಜಿಕ ಸಮಾನತೆಯ ಬಗ್ಗೆ ಶೋಷಿತ ವರ್ಗದ ಜನ, “ಮರೆಯೋದುಂಟೇ ಮೈಸೂರು ದೊರೆಯ ಶ್ರೀನಾಲ್ವಡಿ ಕೃಷ್ಣರಾಜ ಒಡೆಯ” ಎಂದು ಇಂದಿಗೂ ಹಾಡುತ್ತಿದ್ದಾರೆ. ಆದರೆ, ಪ್ರಶ್ನೆ ಇರುವುದು ವ್ಯಕ್ತಿ ಪೂಜೆ ನಡೆಸುವ ಆಚರಣೆಗಳನ್ನು ಸಂಪ್ರದಾಯದ ಹೆಸರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದುವರಿಸುವುದು ಎಷ್ಟು ಸರಿ ಎಂಬುದು.

“ಸಂಪ್ರದಾಯ ಮುಂದುವರಿಸಲೇ ಬೇಕು ಎಂದಾದರೆ ರಾಜವಂಶಸ್ಥರ ಬದಲಿಗೆ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನು ಅಥವಾ ಚಾಮುಂಡಿ ವಿಗ್ರಹವನ್ನು ಇಟ್ಟು ಸಂಪ್ರದಾಯ ಮುಂದುವರಿಸಲಿ. ನಿಜಕ್ಕೂ ನಾವು ಪ್ರಜಾಪ್ರಭುತ್ವ ಎಂಬುದನ್ನು ಸರಕಾರ ಸಾಂಕೇತಿಕವಾಗಿ ಸಾಕಾರಗೊಳಿಸಬೇಕಿದ್ದರೆ ಪ್ರತಿ ವರ್ಷ ಸಾಧಕರೊಬ್ಬರನ್ನು ಚಿನ್ನದ ಸಿಂಹಾಸನದ ಮೇಲೆ ಕೂರಿಸಿ ಗೌರವಿಸಲಿ. ಇದೆಲ್ಲವೂ ಒಪ್ಪಿತವಲ್ಲದಿದ್ದರೆ ನಾಡಿಗೆ ಹೆಚ್ಚು ಕೊಡುಗೆ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಅಥವಾ ಅವರ ಭಾವಚಿತ್ರವನ್ನು ಸಿಂಹಾಸನದ ಮೇಲಿಡಲಿ. ಅದನ್ನು ಬಿಟ್ಟು ರಾಜವಂಶಸ್ಥ ಎಂಬ ಕಾರಣಕ್ಕೆ ಅವರ ಮಕ್ಕಳನ್ನು ಸಿಂಹಾಸನದಲ್ಲಿ ಕೂರಿಸುವುದು ಸರಿಯಲ್ಲ” ಎನ್ನುತ್ತಾರೆ ಮೈಸೂರಿನ ಹಿರಿಯರೊಬ್ಬರು.

Also read: ಸೋ ಕಾಲ್ಡ್ ನಾಡಹಬ್ಬ ದಸರಾ; ರಾಜವಂಶಸ್ಥರ ‘ಗೌರವಧನ’ಕ್ಕೆ ಬ್ರೇಕ್‌ ಯಾವಾಗ?

ಕಾಯ್ದೆಯೊಂದು ಇಲ್ಲದಿದ್ದ ಸಂದರ್ಭದಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ತೋರುವ ನೈತಿಕತೆಯನ್ನು ತೋರಿದ್ದರು ಜಯಚಾಮರಾಜೇಂದ್ರ ಒಡೆಯರ್‌. ಆದರೆ, ಸಂವಿಧಾನಕ್ಕೆ 26ನೇ ತಿದ್ದುಪಡಿ ಆಗಿ ಸುಮಾರು ಅರ್ಧ ಶತಮಾನವಾದರೂ, ಅರಮನೆಗಾಗಿ ಕಾಯ್ದೆಯೊಂದು ಜಾರಿಗೆ ಬಂದು 20 ವರ್ಷವಾದರೂ ಇಂದಿಗೂ ರಾಜನಿಗೆ ತಲೆಬಾಗುವ ‘ಆಚರಣೆ’ಗಳು ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಲೇ ಇವೆ. ಜಯಚಾಮರಾಜೇಂದ್ರ ಒಡೆಯರ್‌ ಅವರ ಬದ್ಧತೆಯನ್ನು ಮಾದರಿಯಾಗಿ ಸ್ವೀಕರಿಸಲು ಯದುವೀರ್‌ಗೆ ಇನ್ನೂ ಅವಕಾಶವಿದೆ.

ಸರಕಾರ ರಾಯಧನ ಹಾಗೂ ವಿಶೇಷ ಸೌಲಭ್ಯಗಳನ್ನು ನಿಲ್ಲಿಸಿದನ್ನು ಪ್ರಶ್ನಿಸಿ ರಾಜಮನೆತನಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮನವಿಯ ಸಾಕಷ್ಟು ಪ್ರಕರಣಗಳು ಇನ್ನೂ ನಡೆಯುತ್ತಲೇ ಇವೆ. ಆಸ್ತಿ ಹಕ್ಕು ಬಾಧ್ಯತೆಯ ವಿಚಾರಗಳನ್ನು ಯದುವೀರ್‌ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅದು ಬೇರೆಯದೇ ವಿಷಯ. ಆದರೆ, ಖಾಸಗಿ ದರ್ಬಾರ್‌ ಹೆಸರಿನಲ್ಲಿ ಸಿಂಹಾಸನದ ಮೇಲೆ ಕುಳಿತು ಪ್ರಜಾಪ್ರಭುತ್ವವನ್ನು ಅಣಕಿಸುವ ಪದ್ಧತಿಗೆ ಕೊನೆ ಹಾಡಬೇಕಿದೆ. ನಾಡಿಗೆ ಮೈಸೂರು ರಾಜರ ಅಪಾರ ಕೊಡುಗೆಯನ್ನು ಗೌರವಿಸುತ್ತಲೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಪ್ರಭುತ್ವದ ಕುರುಹುಗಳನ್ನು ಅಳಿಸುವ ಕಡೆಗೂ ಯೋಚಿಸುವುದು ಅಗತ್ಯ.