samachara
www.samachara.com
ಫ್ರೆಂಚ್ ಮೀಡಿಯಾ EXCLUSIVE: ಮೋದಿ, ಅಂಬಾನಿ ರಫೇಲ್ ಬಲೆ ಹೆಣೆದಿದ್ದು ಹೇಗೆ?
COVER STORY

ಫ್ರೆಂಚ್ ಮೀಡಿಯಾ EXCLUSIVE: ಮೋದಿ, ಅಂಬಾನಿ ರಫೇಲ್ ಬಲೆ ಹೆಣೆದಿದ್ದು ಹೇಗೆ?

ಫ್ರಾನ್ಸ್‌ ತನಿಖಾ ವೆಬ್‌ಸೈಟ್‌ ‘ಮೀಡಿಯಾಪಾರ್ಟ್‌’ಗೆ ಡಸಾಲ್ಟ್‌ ಕಂಪನಿಯ ದಾಖಲೆಗಳು ಸಿಕ್ಕಿದ್ದು, ‘ವಿಧಿಯಿಲ್ಲದೆ’ ರಿಲಯನ್ಸ್‌ ಜತೆ ಕೆಲಸ ಮಾಡಲು ಒಪ್ಪಿಕೊಳ್ಳಬೇಕಾಯಿತು ಎಂದು ಕಂಪನಿಯ ಅಧಿಕಾರಿ ಹೇಳಿರುವುದಾಗಿ ತಿಳಿದು ಬಂದಿದೆ.

Team Samachara

ಮೂಲ: ‘ಮೀಡಿಯಾ ಪಾರ್ಟ್’/ ಕನ್ನಡಕ್ಕೆ: ಎನ್. ಸಚ್ಚಿದಾನಂದ.

ಫ್ರಾನ್ಸ್‌ನಿಂದ ಭಾರತ ಖರೀದಿಸಲು ಹೊರಟಿರುವ ರಫೇಲ್‌ ಯುದ್ಧ ವಿಮಾನಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಅನಿಲ್‌ ಅಂಬಾನಿಯನ್ನು ಸುತ್ತಿಕೊಳ್ಳುತ್ತಿದೆ. ಸುಮಾರು 68 ಸಾವಿರ ಕೋಟಿ ರೂಪಾಯಿ ಮೊತ್ತದ 36 ಯುದ್ಧ ವಿಮಾನಗಳ ಖರೀದಿ ಒಪ್ಪಂದ ಇದಾಗಿದೆ.

ಒಪ್ಪಂದದ ಭಾಗವಾಗಿ ಫ್ರಾನ್ಸ್ ಮೂಲದ ಡಸಾಲ್ಟ್‌ ಕಂಪನಿಯ ಬಿಡಿ ಭಾಗಗಳನ್ನು ತಯಾರಿಸಲು ಅನಿಲ್‌ ಅಂಬಾನಿ ಕಂಪನಿ ಆಯ್ಕೆಯಾಗಿತ್ತು. ಯಾವುದೇ ವೈಮಾನಿಕ ವಸ್ತುಗಳ ಉತ್ಪಾದನೆಯ ಹಿನ್ನಲೆಯೂ ಇಲ್ಲದೆ ರಿಲಯನ್ಸ್‌ ಈ ಡೀಲ್‌ ಒಳಕ್ಕೆ ಸೇರಿಕೊಂಡಿತ್ತು. ಈ ಮೂಲಕ ಮುಳುಗುತ್ತಿರುವ ಅನಿಲ್‌ ಅಂಬಾನಿಯ ಉದ್ಯಮ ಸಾಮ್ರಾಜ್ಯದ ಹಡಗನ್ನು ರಕ್ಷಿಸಲು ಮೋದಿ ಈ ಜಂಟಿ ಉದ್ಯಮದ ಕೊಡುಗೆ ನೀಡಿದ್ದಾರೆ ಎಂದು ಸಿಬಿಐಗೆ ದೂರು ನೀಡಲಾಗಿದೆ.

ಇದೀಗ ಫ್ರಾನ್ಸ್‌ ತನಿಖಾ ವೆಬ್‌ಸೈಟ್‌ ‘ಮೀಡಿಯಾಪಾರ್ಟ್‌’ಗೆ ಡಸಾಲ್ಟ್‌ ಕಂಪನಿಯ ದಾಖಲೆಗಳು ಸಿಕ್ಕಿದ್ದು, ‘ವಿಧಿಯಿಲ್ಲದೆ’ ರಿಲಯನ್ಸ್‌ ಜತೆ ಕೆಲಸ ಮಾಡಲು ಒಪ್ಪಿಕೊಳ್ಳಬೇಕಾಯಿತು ಎಂದು ಕಂಪನಿಯ ‘ಸಿಒಒ’ ಹೇಳಿರುವುದಾಗಿ ತಿಳಿದು ಬಂದಿದೆ. ಈ ಒಪ್ಪಂದ ಉಳಿಸಿಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ಅನಿವಾರ್ಯವಾಗಿ ರಿಲಯನ್ಸ್‌ ಸಂಸ್ಥೆಯನ್ನು ಡೀಲ್‌ನೊಳಕ್ಕೆ ಸೇರಿಕೊಳ್ಳಬೇಕಾಯಿತು ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. 'ಮೀಡಿಯಾಪಾರ್ಟ್‌’ ಪ್ರಕಟಿಸಿದ ವರದಿಯ ಕನ್ನಡಾನುವಾದ ಇಲ್ಲಿದೆ;

ಅಕ್ಟೋಬರ್‌ 27, 2017

ಅಂದು ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲೋರೆನ್ಸ್‌ ಪಾರ್ಲಿ ಮಹಾರಾಷ್ಟ್ರದ ನಾಗಪುರಕ್ಕೆ ಬಂದಿಳಿದಿದ್ದರು. ಹೀಗೆ ಬಂದವರನ್ನು ಹೆಗಲ ಮೇಲೆ ಕೈ ಹಾಕಿ ಅನಿಲ್‌ ಅಂಬಾನಿ ಆದರದಿಂದ ಸ್ವಾಗತಿಸಿದ್ದರು. ಫ್ರಾನ್ಸ್‌ ಭಾರತಕ್ಕೆ ಮಾರಾಟ ಮಾಡಲು 2016ರಲ್ಲಿ ನಿರ್ಧರಿಸಿದ್ದ 36 ಯುದ್ಧ ವಿಮಾನಗಳ ಬಿಡಿ ಭಾಗಗಳ ತಯಾರಿಕಾ ಘಟಕ ಇಲ್ಲಿ ಆರಂಭವಾಗಲಿತ್ತು. ಅದಕ್ಕೆ ನಿಗದಿಯಾಗಿದ್ದ ಸ್ಥಳವನ್ನು ಉದ್ಘಾಟನೆ ಮಾಡಲು ಬಂದಿದ್ದರು.

ನಾಗಪುರದಲ್ಲಿರುವ ಡಸಾಲ್ಟ್‌ ರಿಲಯನ್ಸ್‌ ಏರೋಸ್ಪೇಸ್‌ ಲಿ.ನ ಸೋ ಕಾಲ್ಡ್‌ ನಿರ್ಮಾಣ ಘಟಕ
ನಾಗಪುರದಲ್ಲಿರುವ ಡಸಾಲ್ಟ್‌ ರಿಲಯನ್ಸ್‌ ಏರೋಸ್ಪೇಸ್‌ ಲಿ.ನ ಸೋ ಕಾಲ್ಡ್‌ ನಿರ್ಮಾಣ ಘಟಕ
/ಮೀಡಿಯಾಪಾರ್ಟ್‌

ಹಾಗೂ ಹೀಗೂ ನಾಗಪುರದ ಜಮೀನಿನಲ್ಲಿ ಭೂಮಿ ಪೂಜೆ ನಡೆಯಿತು. ಆದರೆ ಅಲ್ಲಿಂದ ಇಲ್ಲಿವರೆಗೆ ಇಲ್ಲಿ ನಡೆದಿದ್ದು ಏನು ಎಂದು ಹುಡುಕಿದರೆ ಜಮೀನಿನಲ್ಲಿ ಒಂದು ಸಣ್ಣ ಕಟ್ಟಡ ಕಾಣಿಸುತ್ತದೆ. ಇನ್ನೊಂದು ಸಣ್ಣ ಭಾಗದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದು ಬಿಟ್ಟರೆ ಇಲ್ಲಿ ಇರುವುದು ಖಾಲಿ ಜಮೀನು ಮತ್ತು ಮಣ್ಣು ಮಾತ್ರ. ನಾಗಪುರದ ಮಿಹಾನ್‌ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಈ 119 ಜಾಗವನ್ನು 2015ರ ಆಗಸ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ರಿಲಯನ್ಸ್‌ ಖರೀದಿ ಮಾಡಿತ್ತು. ಅವತ್ತಿಗೆ ಈ ಬೆಲೆಬಾಳುವ ಜಮೀನಿಗೆ ಮಹಾರಾಷ್ಟ್ರ ಸರಕಾರಕ್ಕೆ ಕಟ್ಟಿದ ಹಣ ಜಸ್ಟ್‌ 55 ಕೋಟಿ ರೂಪಾಯಿ!

ಈ ಜಾಗದ ಬಗ್ಗೆ ಇತ್ತೀಚೆಗೆ ಸಿಬಿಐಗೆ ನೀಡಿದ ದೂರಿನಲ್ಲಿಯೂ ಉಲ್ಲೇಖಗಳಿವೆ. ಮಾಜಿ ಸಚಿವರಾದ ಅರುಣ್‌ ಶೌರಿ, ಯಶವಂತ್‌ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ರಫೇಲ್ ಡೀಲ್‌ಗಾಗಿ ತಮ್ಮ ಕಚೇರಿಯನ್ನು ಪ್ರಧಾನಿ ನರೇಂದ್ರ ಮೋದಿ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ತಮ್ಮ ಗೆಳೆಯ ಅಂಬಾನಿಗೆ ಸಲ್ಲದ ಲಾಭ ಮಾಡಿಕೊಟ್ಟಿದ್ದಾರೆ ಎಂದು ಸಿಬಿಐಗೆ ದೂರು ನೀಡಿದ್ದರು.

ದೂರಿನಲ್ಲಿ ವ್ಯಂಗ್ಯದ ಮಾತೊಂದನ್ನು ಸೇರಿಸಿರುವ ಮೂವರು ಹಿರಿಯರು, ನಾಗಪುರದಲ್ಲಿರುವ ಈ ಉತ್ಪಾದನಾ ಘಟಕದ ಚಿತ್ರವನ್ನು ಲಗತ್ತಿಸಿದ್ದರು. “ಲಗತ್ತಿಸಿರುವ 2018 ರ ಸೆಪ್ಟೆಂಬರ್ 29 ರ ಉಪಗ್ರಹ ಚಿತ್ರ 289ಯ ಎಕರೆ ಧೀರೂಭಾಯಿ ಅಂಬಾನಿ ಏರೋಸ್ಪೇಸ್ ಪಾರ್ಕ್‌ನದಾಗಿದೆ. ಇಲ್ಲಿರುವ ಸೌಕರ್ಯವನ್ನು ಭೂತಗನ್ನಡಿಯಲ್ಲಿ ನೋಡಬಹುದೇ ಎಂದು ದಯವಿಟ್ಟು ಪ್ರಯತ್ನಿಸಿ,” ಎಂದು ಬರೆದಿದ್ದರು.

ನಾಗಪುರದಲ್ಲಿರುವ ಡಸಾಲ್ಟ್‌ ರಿಲಯನ್ಸ್‌ ಏರೋಸ್ಪೇಸ್‌ ಲಿ.ನ ನಿರ್ಮಾಣ ಘಟಕದ ಸ್ಯಾಟಲೈಟ್‌ ಚಿತ್ರ
ನಾಗಪುರದಲ್ಲಿರುವ ಡಸಾಲ್ಟ್‌ ರಿಲಯನ್ಸ್‌ ಏರೋಸ್ಪೇಸ್‌ ಲಿ.ನ ನಿರ್ಮಾಣ ಘಟಕದ ಸ್ಯಾಟಲೈಟ್‌ ಚಿತ್ರ
/ಮೀಡಿಯಾಪಾರ್ಟ್‌

ದೂರಿನಲ್ಲಿ ಉಲ್ಲೇಖಿಸಿದ ರಫೇಲ್‌ ಡೀಲ್‌ ಮೊದಲಿಗೆ ಸರಕಾರಿ ಸ್ವಾಮ್ಯದ ಎಚ್‌ಎಎಲ್‌ ಜತೆಗೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಒಪ್ಪಂದ ಮುರಿದು ಬಿದ್ದಿತ್ತು. ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಎಚ್‌ಎಎಲ್‌ ಜಾಗದಲ್ಲಿ ಅಂಬಾನಿ ಜಾಗ ಪಡೆದುಕೊಂಡರು. ಹೊಸ ಒಪ್ಪಂದದ ಪ್ರಕಾರ ಡಸಾಲ್ಟ್‌ 68 ಸಾವಿರ ಕೋಟಿ ರೂಪಾಯಿ ಮೊತ್ತದಲ್ಲಿ ಶೇಕಡಾ 50ನ್ನು ಭಾರತದಲ್ಲಿ ಮರು ಹೂಡಿಕೆ ಮಾಡಲು ಒಪ್ಪಿಕೊಂಡಿತ್ತು. ಇದು ‘ಆಫ್‌ಸೆಟ್‌’ ಡೀಲ್‌ ಆಗಿತ್ತು. ರಕ್ಷಣಾ ಒಪ್ಪಂದಗಳಲ್ಲಿ ಇಂಥಹದ್ದೊಂದು ಹೂಡಿಕೆ ಸಾಮಾನ್ಯ.

ಅದರಂತೆ ಅಕ್ಟೋಬರ್‌ 2017ರಂದು ಮಾತನಾಡಿದ್ದ ಡಸಾಲ್ಟ್‌ ಮುಖ್ಯಸ್ಥ ಟ್ರಾಫಿಯರ್‌, ನಾಗಪುರ ಘಟಕದಲ್ಲಿ 854 ಕೋಟಿ ರೂಪಾಯಿಗಳನ್ನು ಸಂಸ್ಥೆ ಹೂಡಿಕೆ ಮಾಡಲಿದ್ದು, ಉತ್ಪಾದನೆ 2018ರಲ್ಲಿ ಆರಂಭವಾಗಲಿದೆ ಎಂದಿದ್ದರು. ಅಂದಹಾಗೆ ಇವತ್ತು ಅದೇ 2018 ಮುಗಿಯುತ್ತಾ ಬಂದಿದೆ. ಆದರೆ ಧೀರೂಭಾಯ್‌ ಅಂಬಾನಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಕೇವಲ ಕಟ್ಟಡವೊಂದು ಮಾತ್ರ ತಲೆ ಎತ್ತಿದೆ.

ವರುಷ ಕಳೆದರೂ ಪ್ರಗತಿ ಸಾಧಿಸದ ಅನಿಲ್‌ ಅಂಬಾನಿಯ ರಿಲಯನ್ಸ್‌ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದ್ದು ಯಾರು? ಎಂಬುದು ಮೊದಲು ವಿವಾದಕ್ಕೆ ಕಾರಣವಾಗಿತ್ತು. ಈ ಹೊರೆಯನ್ನು ಫ್ರಾನ್ಸ್‌ ತಲೆಗೆ ಕಟ್ಟಲು ಕೇಂದ್ರ ಸರಕಾರ ಮುಂದಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಇದೇ ‘ಮೀಡಿಯಾಪಾರ್ಟ್‌’ಗೆ ಹೇಳಿಕೆ ನೀಡಿದ್ದ ಫ್ರಾನ್ಸ್‌ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡ್‌, ‘ಒಪ್ಪಂದದಲ್ಲಿ ಅಂಬಾನಿ ಕಂಪನಿ ನಮ್ಮ ಆಯ್ಕೆಯಾಗಿರಲಿಲ್ಲ’ ಎನ್ನುವ ಮೂಲಕ ಬಾಂಬ್‌ ಹಾಕಿದ್ದರು. ಹೊಲಾಂಡ್‌ ಹೇಳಿಕೆ ಆಧರಿಸಿ ಈ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ಸಿಎಜಿಗೆ ವಿರೋಧ ಪಕ್ಷಗಳು ಮನವಿ ಸಲ್ಲಿಸಿವೆ. ಈ ಸಂದರ್ಭದಲ್ಲಿ ಮೋದಿ ಸರಕಾರದ ನೆರವಿಗೆ ಬಂದಿದ್ದ ಡಸಾಲ್ಟ್‌ ‘ರಿಲಯನ್ಸ್‌ ತನ್ನ ಆಯ್ಕೆ’ ಎಂದು ತೇಪೆ ಹಚ್ಚುವ ಪ್ರಯತ್ನ ಮಾಡಿತ್ತು. ಆದರೆ ‘ಮೀಡಿಯಾಪಾರ್ಟ್‌’ಗೆ ಸಿಕ್ಕಿರುವ ದಾಖಲೆಗಳು ಇದನ್ನು ಅಲ್ಲಗಳೆಯುತ್ತಿವೆ.

ಡಸಾಲ್ಟ್‌ನ ಆಂತರಿಕ ಮಾಹಿತಿ ಪ್ರಕಾರ, ರಫೇಲ್‌ ಡೀಲ್‌ ಉಳಿಸಿಕೊಳ್ಳಲು ಕಂಪನಿಗೆ ರಿಲಯನ್ಸ್‌ ಆಯ್ಕೆಯೊಂದೇ ಪರಿಹಾರವಾಗಿತ್ತು ಎನ್ನುವ ಅರ್ಥದಲ್ಲಿ ಕಂಪನಿಯ ಎರಡನೇ ಉನ್ನತಾಧಿಕಾರಿ (ಸಿಒಒ) ಲೋಕ್‌ ಸೆಗಲನ್‌ ಈ ಹಿಂದೆ ಹೇಳಿದ್ದಾರೆ. ಮೇ 11, 2017ರಲ್ಲಿ ಕಂಪನಿಯ ಮುಖ್ಯ ನಿರ್ವಹಣಾಧಿಖಾರಿ (ಸಿಒಒ) ತಮ್ಮ ಸಿಬ್ಬಂದಿಗಳಿಗೆ ಪ್ರೆಸಂಟೇಷನ್‌ ಒಂದನ್ನು ಸಿದ್ದಪಡಿಸಿದ್ದರು. ನಾಗ್ಪುರದ ಜಂಟಿ ಘಟಕದ ಬಗೆಗಿನ ವಿವರಣೆ ಇದಾಗಿತ್ತು. ಇದರ ಸಾರಾಂಶ ಇಷ್ಟೇ, "ರಫೇಲ್ ರಫ್ತು ಒಪ್ಪಂದವನ್ನು ಪಡೆಯಲು ಡಸ್ಸಾಲ್ಟ್ ಏವಿಯೇಷನ್‌ಗೆ ಇದೊಂದೇ ಪರಿಹಾರವಾಗಿತ್ತು. ರಿಲಯನ್ಸ್‌ ಆಯ್ಕೆ ನಮ್ಮ ಪಾಲಿಗೆ ಅನಿವಾರ್ಯ ಮತ್ತು ಕಡ್ಡಾಯವಾಗಿದೆ,” ಎಂದಿದ್ದರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಡಸಾಲ್ಟ್‌ ಕಂಪನಿಯನ್ನು ‘ಮೀಡಿಯಾಪಾರ್ಟ್‌’ ಸಂಪರ್ಕಿಸಿತಾದರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೋದಿ-ಅಂಬಾನಿ ಕಳ್ಳಾಟ:

ಅಸಲಿಗೆ ಏಪ್ರಿಲ್‌ 10, 2015ರಂದು ಹೋಲಾಂಡ್‌ರನ್ನು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ನಲ್ಲಿ ಭೇಟಿಯಾದ ತರುವಾಯ ರಫೇಲ್‌ ಒಪ್ಪಂದದೊಳಕ್ಕೆ ರಿಲಯನ್ಸ್‌ ಪ್ರವೇಶ ಪಡೆದಿತ್ತು.  ಈ ಸಂದರ್ಭದಲ್ಲಿ ಮೋದಿ ಮೂಲ ಒಪ್ಪಂದವನ್ನು ಬದಲಾಯಿಸಿದ್ದರು. ಈ ಸಂಬಂಧ ಸಿಬಿಐಗೆ ಸಲ್ಲಿಸಿಲಾದ ದೂರಿನಲ್ಲಿ, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮತ್ತು ಸರಕಾರಿ ಕೆಲಸವನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಆಪ್ತ ಸ್ನೇಹಿತ ಅನಿಲ್‌ ಅಂಬಾನಿಗೆ ಸಲ್ಲದ ಲಾಭವನ್ನು ಮಾಡಿಕೊಟ್ಟಿದ್ದಾರೆ ಎಂದು ದೂರಲಾಗಿತ್ತು.

ಗಮನಾರ್ಹ ಅಂಶವೆಂದರೆ ಮೋದಿ ಡೀಲ್ ಬದಲಾಯಿಸಿದ ನಂತರದ ಬೆಳವಣಿಗೆ ಜನವರಿ 2016ರಲ್ಲಿ ನಡೆದಿತ್ತು. ಜನವರಿ 24ರಂದು ಹೊಲಾಂಡ್‌ ದೆಹಲಿಯಲ್ಲಿ ಕಾಲೂರಿದ ಕ್ಷಣವೇ ಅನಿಲ್‌ ಅಂಬಾನಿ ಅವರ ಪತ್ನಿ ಜೂಲಿ ಗಯಟ್‌ ಸಿನಿಮಾಗೆ ಹಣ ಹೂಡಿವ ನಿರ್ಧಾರ ಘೋಷಿಸಿದ್ದರು. ಆರಂಭದಲ್ಲಿ 3 ಮಿಲಿಯನ್‌ ಯೂರೋ ಹೂಡಿಕೆಗೆ ಮುಂದಾಗಲಾಗಿತ್ತು. ನಂತರ ಸ್ವಲ್ಪ ಇಳಿಕೆ ಮಾಡಿ ಅಂಬಾನಿ ಕಂಪನಿ 1.6 ಮಿಲಿಯನ್‌ ಯೂರೋ ಹಣ ಹೂಡಿತ್ತು. ಸಿನಿಮಾ ಸಂಕಷ್ಟದಲ್ಲಿದ್ದ ಸಮಯದಲ್ಲೇ ಇಂಥಹದ್ದೊಂದು ಹೂಡಿಕೆ ಮಾಡಿ ಅನಿಲ್‌ ಅಂಬಾನಿ ಆಪದ್ಭಾಂದವರಾಗಿದ್ದರು.

ಫ್ರಾಂಕೋಯಿಸ್‌ ಹೊಲಾಂಡ್‌ ಜತೆ ಅನಿಲ್‌ ಅಂಬಾನಿ ಆಪ್ತ ಕ್ಷಣ..
ಫ್ರಾಂಕೋಯಿಸ್‌ ಹೊಲಾಂಡ್‌ ಜತೆ ಅನಿಲ್‌ ಅಂಬಾನಿ ಆಪ್ತ ಕ್ಷಣ..
/ಮೀಡಿಯಾಪಾರ್ಟ್‌

ಇದು ಹೊಲಾಂಡ್‌ರನ್ನು ಇಕ್ಕಟ್ಟಿಕೆ ಸಿಲುಕಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಅವರು, “ನಂಗೆ ರಿಲಯನ್ಸ್‌ ಕಂಪನಿ ಬಗ್ಗೆಯೂ ಗೊತ್ತಿಲ್ಲ. ನನ್ನ ಹೆಂಡತಿ ಸಿನಿಮಾಗೆ ಹಣ ಹಾಕಿದ್ದೂ ತಿಳಿದಿಲ್ಲ,” ಎಂದಿದ್ದರು. ಮುಂದುವರಿದು ಆಫ್‌ಸೆಟ್‌ ಕಾಂಟ್ರಾಕ್ಟ್‌ಗೆ ರಿಲಯನ್ಸ್‌ ನಮ್ಮ ಆಯ್ಕೆಯೇ ಅಲ್ಲ, ಹೀಗಿರುವಾಗ ನನಗೆ ರಿಲಯನ್ಸ್‌ ಲಾಭ ತಂದು ಕೊಡುವ ಯಾವ ಅಗತ್ಯವೂ ಉದ್ಭವಿಸುವುದೇ ಇಲ್ಲ ಎನ್ನುವ ಅರ್ಥದಲ್ಲಿ ಹೇಳಿಕೆ ನೀಡಿದ್ದರು.

ಈ ಹೂಡಿಕೆ ಘೋಷಣೆ, ಹೊಲಾಂಡ್‌ ಭೇಟಿ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಂದಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ನಾನು ಅಧ್ಯಕ್ಷ ಹೊಲಾಂಡ್‌ ಅವರ ಬಳಿ ಭಾರತಕ್ಕೆ 36 ಸಿದ್ಧಪಡಿಸಿದ ರಫೇಲ್‌ ಯುದ್ಧವಿಮಾನಗಳನ್ನು ಪೂರೈಸುವಂತೆ ಕೇಳಿಕೊಂಡಿದ್ದೇನೆ. ನಮ್ಮ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದು ಕೊಡುಕೊಳ್ಳುವಿಕೆ ಮುಂದುವರಿದಿದೆ,” ಎಂದಿದ್ದರು.

ಆದರೆ ಹೀಗೊಂದು ಡೀಲ್‌ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ ಎಂದು ಸಿಬಿಐಗೆ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ. ಭಾರತೀಯ ವಾಯುಸೇನೆ, ಎಚ್‌ಎಎಲ್‌, ವಿದೇಶಾಂಗ ಇಲಾಖೆ ಮತ್ತು ರಕ್ಷಣಾ ಸಚಿವರನ್ನು ಕತ್ತಲೆಯಲ್ಲಿಟ್ಟು ಈ ಡೀಲ್‌ ಕುದುರಿಸಲಾಗಿದೆ. ಡೀಲ್‌ ಬಗ್ಗೆ ಫ್ರಾನ್ಸ್‌ಗೆ ಪ್ರಧಾನಿ ಜತೆ ತೆರಳಿದ್ದ ಅಂಬಾನಿ ಮತ್ತು ಮೋದಿಗೆ ಮಾತ್ರ ತಿಳಿದಿದೆ. ಒಪ್ಪಂದಕ್ಕೆ ಸಹಿ ಬೀಳುವಾಗ ರಕ್ಷಣಾ ಸಚಿವರು ಗೋವಾದಲ್ಲಿ ಮೀನಿನ ಅಂಗಡಿ ಉದ್ಘಾಟನೆ ಮಾಡುತ್ತಿದ್ದರು ಎಂದು ಉಲ್ಲೇಖಿಸಿದ್ದರು. ವಿಪರ್ಯಾಸವೆಂದರೆ ರಫೇಲ್‌ ಭ್ರಷ್ಟಾಚಾರದ ಅಪರಾಧ ನಡೆದ ಜಾಗದಲ್ಲಿ ಸಂಚುಕೋರರು ಹಾಜರಿದ್ದರು, ಆದರೆ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕಿದ್ದ ಉಳಿದ ಅಧಿಕಾರಿಗಳು ಗೈರಾಗಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇವತ್ತು ಡಸಾಲ್ಟ್‌ ಸಿಇಒ ಬೇರೆ ಬೇರೆ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಏಪ್ರಿಲ್‌ 10ರಂದು ನೀಡಿದ್ದ ಹೇಳಿಕೆಯಲ್ಲಿಯೂ ಅವರು ಹೆಚ್ಚಿನ ವಿಮಾನಗಳ ಮಾರಾಟಕ್ಕೆ ಯತ್ನಿಸುತ್ತಿದ್ದೇವೆ ಎಂದಿದ್ದರು. ಜೂನ್‌ 2015ರಲ್ಲಿ ಮಾತು ಬದಲಿಸಿದ್ದ ಅವರು ‘ನನಗೆ 36 ವಿಮಾನಗಳ ಮಾರಾಟ ಸಾಕು’ ಎಂದಿದ್ದರು. “ನಮ್ಮ ಉಪ ಗುತ್ತಿಗೆದಾರರನ್ನು ಆಯ್ಕೆ ಮಾಡುವಲ್ಲಿ ನಾವು ಮುಂದಾಳತ್ವ ವಹಿಸಲಿದ್ದೇವೆ. ಯಾರು ಅರ್ಹತೆ ಇದ್ದಾರೋ ಅವರನ್ನು ಪಡೆದುಕೊಳ್ಳುತ್ತೇವೆ. ಒಂದೊಮ್ಮೆ ಅವರಿಗೆ ಅರ್ಹತೆ ಇಲ್ಲದಿದ್ದಲ್ಲಿ ಬದಲಿಸುತ್ತೇವೆ,” ಎಂದಿದ್ದರು.

ಮುಂದೆ ಸೆಪ್ಟೆಂಬರ್‌ 21ರಂದು ನೀಡಿದ ಹೇಳಿಕೆಯಲ್ಲಿ ‘ರಕ್ಷಣಾ ಸ್ವಾಧೀನ ಪ್ರಕ್ರಿಯೆಯ ನಿಯಮ’ಗಳ ಅನ್ವಯ ಮತ್ತು ‘ಮೇಕ್‌ ಇನ್‌ ಇಂಡಿಯಾ’ ಚೌಕಟ್ಟಿನಲ್ಲಿ ರಿಲಯನ್ಸ್‌ ಜೊತೆ ಕೈಜೋಡಿಸಲು ಡಸಾಲ್ಟ್‌ ನಿರ್ಧರಿಸಿದೆ ಎಂದು ಪತ್ರಿಕಾ ಪ್ರಕಟಣೆಯನ್ನು ಕಂಪನಿ ಬಿಡುಗಡೆ ಮಾಡಿತ್ತು. ಮತ್ತು ‘ರಿಲಯನ್ಸ್‌ ನಮ್ಮ ಆಯ್ಕೆ’ ಎಂದು ಏಪ್ರಿಲ್ 17, 2018ರ ಸಂದರ್ಶನದಲ್ಲಿ ‘ಮಿಂಟ್‌’ಗೆ ಎರಿಕ್‌ ಟ್ರಾಪಿಯರ್‌ ಹೇಳಿದ್ದರು.

ಆದರೆ ಡಸಾಲ್ಟ್‌ ಸಿಇಒ ಹೇಳಿದ ಯಾವ ಅರ್ಹತೆಗಳೂ ರಿಲಯನ್ಸ್‌ಗೆ ಇದ್ದಂತೆ ಕಾಣಿಸುವುದಿಲ್ಲ. ಒಪ್ಪಂದದ ವೇಳೆಗಾಗಲೇ ಭಾರತದಲ್ಲಿ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ಅನಿಲ್‌ ಅಂಬಾನಿ ಸಾಲದ ಸುಳಿಯಲ್ಲಿದ್ದರು. ವಿಮಾನಯಾನ ಮತ್ತು ರಕ್ಷಣಾ ಉತ್ಪಾದನೆ ಕ್ಷೇತ್ರದಲ್ಲಿ ಅವರ ಕಂಪನಿಯದ್ದು ಶೂನ್ಯ ಅನುಭವವಾಗಿತ್ತು. ಈ ಒಪ್ಪಂದ ನಡೆದ ನಂತರವಷ್ಟೇ ಅವರು ‘ಒಪಿಪವಾವ್‌ ಡಿಫೆನ್ಸ್‌ ಮತ್ತು ಎಂಜಿನಿಯರಿಂಗ್‌ ಕಂಪನಿ’ಯ ಷೇರುಗಳನ್ನು ಖರೀದಿಸಿದ್ದರು. ಇದು ಭಾರತಕ್ಕೆ ಸಬ್‌ ಮೆರೀನ್‌ ಉತ್ಪಾದನೆ ಮಾಡಿಕೊಡುವ ಕಾಂಟ್ರಾಕ್ಟ್‌ ಪಡೆದು, ಅದನ್ನಿನ್ನೂ ಪೂರ್ಣಗೊಳಿಸದ ಇತಿಹಾಸ ಹೊಂದಿದೆ.

ಇನ್ನು ಡೀಲ್‌ಗೆ ಸಂಬಂಧಿಸಿದ ರಿಲಯನ್ಸ್‌ ಡಿಫೆನ್ಸ್ ಕಂಪನಿಯನ್ನು ನರೇಂದ್ರ ಮೋದಿ ಏಪ್ರಿಲ್‌ 2015ರಲ್ಲಿ ಪ್ಯಾರಿಸ್‌ಗೆ ತೆರಳುವ 12 ದಿನಗಳ ಮೊದಲು ಸ್ಥಾಪಿಸಲಾಗಿತ್ತು. ಭೇಟಿಯ ಎರಡು ವಾರಗಳ ನಂತರ ರಿಲಯನ್ಸ್‌ ‘ಏರೋಸ್ಟ್ರಕ್ಚರ್‌ ಲಿ.’ ಸಂಸ್ಥೆಯನ್ನು ಅಂಬಾನಿ ಸ್ಥಾಪಿಸಿದ್ದರು. ಸದ್ಯ ಇದು ಡಸಾಲ್ಟ್‌ ಕಂಪನಿಯ ಜತೆಗಾರ. ಹೀಗೊಂದು ಹಿನ್ನೆಲೆಯ ಕಂಪನಿಯು, ಡಸಾಲ್ಟ್‌ ಆಯ್ಕೆಯಾಗಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಶೌರಿ, ಭೂಷಣ್‌ ಮತ್ತು ಸಿನ್ಹಾ.

2016ರ ಜನವರಿ, ದೆಹಲಿಯಲ್ಲಿ ರಫೇಲ್‌ ಡೀಲ್‌ಗೆ ಅಧಿಕೃತ ಮುದ್ರೆ ಬಿದ್ದ ಕ್ಷಣ
2016ರ ಜನವರಿ, ದೆಹಲಿಯಲ್ಲಿ ರಫೇಲ್‌ ಡೀಲ್‌ಗೆ ಅಧಿಕೃತ ಮುದ್ರೆ ಬಿದ್ದ ಕ್ಷಣ

ಎಲ್ಲರನ್ನೂ ಕತ್ತಲಿನಲ್ಲಿಟ್ಟು ಮೋದಿ ಮತ್ತು ಅಂಬಾನಿ ಮೊದಲೇ ರಚಿಸಲಾಗಿದ್ದ ನಾಟಕವಾಡಿ ಕೊನೆಯ ಕ್ಷಣದಲ್ಲಿ ಡೀಲ್‌ ಬದಲಿಸಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಡೀಲ್‌ ಬದಲಿಸಿ, ಬೇಕಿದ್ದರೆ ಇದನ್ನು ‘ತೆಗೆದುಕೊಳ್ಳಿ ಅಥವಾ ಬಿಡಿ’ ಎಂಬ ಸ್ಥಿತಿಯನ್ನು ಡಸಾಲ್ಟ್‌ ಮತ್ತು ಫ್ರಾನ್ಸ್‌ಗೆ ತಂದಿಟ್ಟಿದ್ದರು. ಕೊನೆಗೆ ಅನಿವಾರ್ಯವಾಗಿ ಕಂಪನಿಯ ಉನ್ನತ ಅಧಿಕಾರಿಯೇ ಹೇಳಿದಂತೆ 36 ಯುದ್ಧ ವಿಮಾನಗಳ ಖರೀದಿಗೆ 2016ರ ಜನವರಿಯಲ್ಲಿ ಸಹಿ ಬಿತ್ತು.

ವಿಚಿತ್ರವೆಂದರೆ ಈ ಸಂದರ್ಭದಲ್ಲಿ ಡೀಲ್‌ನ ಆರ್ಥಿಕ ವಿಚಾರಗಳು ಬಗೆಹರಿದಿರಲಿಲ್ಲ, ಕೊನೆಗೆ ಸೆಪ್ಟೆಂಬರ್ ವೇಳೆಗೆ ಕಾಂಟ್ರಾಕ್ಟ್‌ನ ಶೇಕಡಾ 50ರಷ್ಟು ಹಣವನ್ನು ಸ್ಥಳೀಯ ಉದ್ದಿಮೆಯಲ್ಲಿ ಹೂಡಿಕೆ ಮಾಡಲು ಫ್ರಾನ್ಸ್‌ ಒಪ್ಪಿಕೊಂಡಿತು. ಅದೂ ಹಲವು ತಾಂತ್ರಿಕ ಷರತ್ತುಗಳಿಗೆ ಫ್ರಾನ್ಸ್‌ ರಕ್ಷಣಾ ಸಚಿವ ಜೀನ್‌ ವ್ಯೆಸ್‌ ಕೆ ಡ್ರಿಯನ್ ಸಹಿ ಹಾಕಿದ ನಂತರವಷ್ಟೇ ಇದಕ್ಕೆ ಒಪ್ಪಿಕೊಳ್ಳಲಾಗಿತ್ತು.

ಈ ವೇಳೆ ಭಾರತದಲ್ಲಿ ಹೂಡಿಕೆ ಮಾಡುವ ಹಣದ ಒಂದು ಭಾಗವನ್ನು ಪರಿಹಾರ ರೂಪದಲ್ಲಿ ತನಗೆ ನೀಡಬೇಕು ಎಂದು ಡಸಾಲ್ಟ್‌ ಬೇಡಿಕೆ ಮುಂದಿಟ್ಟಿತ್ತು. ಈ ಕಾರಣಕ್ಕೆ ಪ್ರತಿ ವಿಮಾನದ ಬೆಲೆಯನ್ನು 118 ಮಿಲಿಯನ್‌ ಯೂರೋದಿಂದ 188 ಮಿಲಿಯನ್‌ ಯೂರೋಗೆ ಹೆಚ್ಚಿಸಲಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ.

ವಿಶೇಷವೆಂದರೆ, ಡಸಾಲ್ಟ್‌ ಜತೆ ಒಪ್ಪಂದ ಪೂರ್ಣಗೊಳ್ಳುವ ಸಂದರ್ಭದಲ್ಲಿ ಅಂಬಾನಿ ಕಂಪನಿಗೆ ಅಧಿಕೃತವಾಗಿ ಕೈಗಾರಿಕಾ ಪರವಾನಿಗೆಯೇ ಸಿಕ್ಕಿರಲಿಲ್ಲ. ಕೊನೆಗೆ ಲೈಸನ್ಸ್‌ ಪಡೆದಾಗಲೂ ಮಿಲಿಟರಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ನಿರ್ಮಾಣ ಮತ್ತು ಸೇವೆ ನೀಡಲು ಅನುಮತಿ ಪಡೆಯಲಾಗಿತ್ತು. ಒಪ್ಪಂದದಲ್ಲಿ ಇದ್ದಂತೆ ಡಸಾಲ್ಟ್‌ ಸಿವಿಲಿಯನ್ಸ್‌ ಬಿಸಿನೆಸ್‌ ಜೆಟ್‌ಳ ಜೋಡಣೆಗೆ ಅನುಮತಿ ಪಡೆದಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಇನ್ನು ಅಂಬಾನಿ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸುವ ಮೂವರೂ ಗಣ್ಯರು, “ಯಾವುದೇ ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ಅಥವಾ ರಕ್ಷಣಾ ಸೇವೆಗಳನ್ನು ಒದಗಿಸುವುದರಲ್ಲಿ ತೊಡಗಿಸಿಕೊಂಡಿಲ್ಲ. ಅವರ ಬಳಿ ಯಂತ್ರಗಳಿಲ್ಲ. ಉತ್ಪಾದನಾ ಘಟಕಗಳಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿ ಇಲ್ಲ. ಯಾವುದೇ ತಾಂತ್ರಿಕ ತಿಳುವಳಿಕೆ ಇಲ್ಲ. ರಕ್ಷಣೆಗೆ ಸಂಬಂಧಿಸಿದಂತೆ ಸಮರ್ಥ ಮಾನವ ಸಂಪನ್ಮೂಲಗಳು ಇಲ್ಲ. ಸರಬರಾಜು ಜಾಲ ಇಲ್ಲ. ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಪಡೆಯಲು ಅನುಮತಿ ಇಲ್ಲ. ಅಂಬಾನಿ ಈ ಜಂಟಿ ಒಪ್ಪಂದಗಳಲ್ಲಿ ಯಾವುದೇ ಹೂಡಿಕೆ ಮಾಡುತ್ತಿಲ್ಲ ಅಥವಾ ಅತ್ಯಂತ ಕಡಿಮೆ ಹೂಡಿಕೆ ಮಾಡುತ್ತಿದ್ದಾರೆ. ಇನ್ನೂ ವಿವರಿಸಬೇಕೆಂದರೆ ‘ರಿಲಯನ್ಸ್ ರಾಫೆಲ್ ಡಿಫೆನ್ಸ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್’ ಇಸ್ರೇಲ್‌ನ ರಫೇಲ್‌ ಸಂಸ್ಥೆಯ ಜತೆಗಿನ ಜಂಟಿ ಸಂಸ್ಥೆಯಾಗಿದೆ. ಅಂಬಾನಿ ಇದುವರೆಗಿನ ಈ ಉದ್ಯಮದಲ್ಲಿ ಹೂಡಿಕೆ ಮಾಡಿರುವುದು ಶೂನ್ಯ. ಈ ಜಂಟಿ ಉತ್ಪಾದನಾ ಕಂಪನಿ ಏನನ್ನೂ ಉತ್ಪಾದಿಸುವುದಿಲ್ಲ. ಇವೆಲ್ಲವೂ ಬೋಗಸ್‌ ಕಂಪನಿಗಳು,” ಎಂದು ಮೂವರು ಗಣ್ಯರು ಷರಾ ಬರೆದಿದ್ದಾರೆ.

ಈ ಬಗ್ಗೆ ಸಂದರ್ಶನಕ್ಕಾಗಿ ‘ಮೀಡಿಯಾ ಪಾರ್ಟ್‌’ ಅನಿಲ್‌ ಅಂಬಾನಿಯನ್ನು ಕೇಳಿಕೊಂಡಿದೆ. ಆದರೆ ಅವರು ಇದಕ್ಕೆ ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ. ಅಷ್ಟಕ್ಕೂ ಮೀನು ಅದಾಗಿ ಹೋಗಿ ಬಲೆಗೆ ಬೀಳುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲವಲ್ಲ!

(ಇದು ‘ಮೀಡಿಯಾ ಪಾರ್ಟ್’ ಪ್ರಕಟಿಸಿದ ಫ್ರೆಂಚ್ ವರದಿಯ ಸಂಕ್ಷಿಪ್ತ ಕನ್ನಡಾನುವಾದ. ಆಸಕ್ತರು ಮೂಲ ವರದಿಯನ್ನು ಒಂದು ಯೂರೋ ನೀಡಿ ಓದಬಹುದು.)