samachara
www.samachara.com
#MeToo: ಮೇಕಪ್ ರೂಮಿನ ಮುಂದೆ ತುಟಿ ಕಚ್ಚಲಾ ಅಂದ ಮಳ್ಳ ‘ಅನುಭವಿ ಪತ್ರಕರ್ತ’ನಾಗಿದ್ದ!
COVER STORY

#MeToo: ಮೇಕಪ್ ರೂಮಿನ ಮುಂದೆ ತುಟಿ ಕಚ್ಚಲಾ ಅಂದ ಮಳ್ಳ ‘ಅನುಭವಿ ಪತ್ರಕರ್ತ’ನಾಗಿದ್ದ!

ಅವತ್ತಿಗೆ ನಾನು ಅನುಭವಿಸಿದ ಯಾತನೆ, ಒತ್ತಡಗಳಿಗೆ ಆತನೇ ಕಾರಣ ಅಂತ ಅವನಿಗೆ ಹೇಳಬೇಕಿದೆ. ಹಾಗಾಗಿಯೇ, ಇಲ್ಲಿ ನನ್ನ ಕತೆಯನ್ನು ಬರೆಯಲು ಒಪ್ಪಿಕೊಂಡಿದ್ದೇನೆ.

Team Samachara

ಜಗತ್ತಿನ ಎಲ್ಲಾ ವಿಚಾರದ ಬಗ್ಗೆ ಬರೆಯುವ, ಓದುವ ನಮಗೆ ನಮ್ಮದೇ ಬದುಕಿನ ಇಂತಹ ಕತೆಗಳು ತಳಮಳ ಮೂಡಿಸುತ್ತವೆ. ಒಡಲ ಒಳಗಿನ ಕಿಚ್ಚು ಉರಿಯಲು ಶುರುವಾಗುತ್ತದೆ. ಎಲ್ಲೋ ನನ್ನಂತವರು ಒಬ್ಬರು ಅವರ ಬದುಕಿನ ಇಂತಹ ಕತೆಯನ್ನು ಹೇಳಿಕೊಂಡಾಗ, ನಮ್ಮೊಳಗಿನ ಅದೇ ರೀತಿಯ ನೆನಪು ಎದೆಯಲ್ಲಿ ಢವಢವ ಮೂಡಿಸುತ್ತದೆ. ಯಾಕೋ ಗೊತ್ತಿಲ್ಲ, ಮೊದಲಿನಿಂದಲೂ ನಾನು ನಾನಾಗಲು ಇವರು ಬಿಡಲಿಲ್ಲ ಅನ್ನಿಸುತ್ತದೆ. ಅವತ್ತಿಗೆ ನಾನು ಅನುಭವಿಸಿದ ಯಾತನೆ, ಒತ್ತಡಗಳಿಗೆ ಆತನೇ ಕಾರಣ ಅಂತ ಅವನಿಗೆ ಹೇಳಬೇಕಿದೆ. ಹಾಗಾಗಿಯೇ, ಇಲ್ಲಿ ನನ್ನ ಕತೆಯನ್ನು ಬರೆಯಲು ಒಪ್ಪಿಕೊಂಡಿದ್ದೇನೆ. ನೀವು ಇದನ್ನು ಓದಿದ ನಂತರ, ಅದರಲ್ಲೂ ನೀವು ಗಂಡಸರಾಗಿದ್ದರೆ, ದಯವಿಟ್ಟು ಇಂತಹ ಸನ್ನಿವೇಶವನ್ನು ಯಾವ ಹೆಣ್ಣಿಗೂ ಸೃಷ್ಟಿಸಬೇಡಿ. ಅಷ್ಟಾದರೂ ನಿಮ್ಮಲ್ಲಿ ಬದಲಾವಣೆಯಾದರೆ ನನ್ನ ಈ ಬರವಣಿಗೆ ಸಾರ್ಥಕ ಅಂತ ಭಾವಿಸುತ್ತೇನೆ.

ಇದು ನಡೆದಿದ್ದು ಕೆಲವೇ ತಿಂಗಳುಗಳ ಹಿಂದೆ. ನಾನು ಒಂದು ಚಾನಲ್ ಬಿಟ್ಟು ಹೊಸತಾಗಿ ಆರಂಭವಾಗಿದ್ದ ವಾಹಿನಿಯೊಂದರಲ್ಲಿ ವಾರ್ತಾ ವಾಚಕಿಯಾಗಿ ಸೇರಿಕೊಂಡೆ. ಪ್ರತಿ ಹೊಸ ನ್ಯೂಸ್ ಚಾನಲ್ ಬರುವಾಗಲೂ, ಏನೋ ಬದಲಾವಣೆ ಆಗುತ್ತೆ ಎಂಬ ಭರವಸೆ ಮೂಡಿಸಲಾಗುತ್ತದೆ. ನಮಗೂ ಕೂಡ ನಮ್ಮ ವೃತ್ತಿ ಬದುಕಿನ ಸಾಧನೆಗೆ ಇದು ಮೆಟ್ಟಿಲಾಗುತ್ತದೆ ಅಂತ ಅನ್ನಿಸುತ್ತದೆ. ಆದರೆ ವಾಹಿನಿಯೊಳಗೆ 200 ಜನ ಸೇರಿಕೊಳ್ಳುವ ಮೂಲಕ ಆಂತರಿಕ ವ್ಯವಸ್ಥೆಯೊಂದು ಹುಟ್ಟಿಕೊಳ್ಳುತ್ತದೆ. ಅದು ನಿಧಾನವಾಗಿ ತನ್ನ ಮೂಲ ಉದ್ದೇಶವನ್ನೇ ಮರೆತು ಬದುಕಲು ಶುರುಮಾಡುತ್ತದೆ. ಅಂತಹದೊಂದು ವಾತಾವರಣ ನಾನು ಸೇರಿದ್ದ ಹೊಸ ವಾಹಿನಿಯಲ್ಲಿ ಅನುಭವಕ್ಕೆ ಬಂದಾಗ ಪಕ್ಕದಲ್ಲಿ ನಿಂತು ಮಾತನಾಡಿಸಲು ಶುರುಮಾಡಿದ್ದು ಆತ; ಸುಮಾರು 15 ವರ್ಷಗಳ ಅನುಭವಿ ಪತ್ರಕರ್ತ. ಮದುವೆಯಾಗಿತ್ತು; ಎರಡು ಮುದ್ದಾದ ಮಕ್ಕಳಿದ್ದವು. ಸಾಲದ್ದಕ್ಕೆ ತನ್ನ ಮನೆಯ ಬೀದಿಯ ಸಮೀಪವೇ ಮತ್ತೊಂದು ಸಂಬಂಧವನ್ನು ಸಾಕಿಕೊಂಡಿದ್ದ. ಆತನಿಗೆ ನನ್ನ ಮೇಲೆ ಕಣ್ಣು ಬಿತ್ತು.

ನನಗೆ ರಜೆ ಬೇಕಾದರೆ, ನನ್ನ ದಿನನಿತ್ಯದ ಅಸೈನ್‌ಮೆಂಟ್‌ಗೆ ಆತನನ್ನೇ ಕೇಳಬೇಕಿತ್ತು. ಪ್ರತಿ ದಿನ ಗ್ರೂಪಲ್ಲಿ ಆತ ಹಾಕುತ್ತಿದ್ದ ಕೆಲಸದ ದಿನಚರಿಯನ್ನು ನೋಡಬೇಕಾಗಿತ್ತು. ಹೀಗಾಗಿ, ಆತನಿಂದ ನಾನು ತಪ್ಪಿಸಿಕೊಂಡು ಓಡಾಡುವ ಸೌಭಾಗ್ಯವೇ ಇರಲಿಲ್ಲ. ಜತೆಗೆ, ಆಗಷ್ಟೆ ಸೇರಿಕೊಂಡ ಕೆಲಸ ಬೇರೆ. ಬಿಟ್ಟರೆ ಬೇರೆ ದಾರಿಯೂ ಇರಲಿಲ್ಲ. ಆತನಿಗೆ ನನ್ನ ಈ ಅಸಹಾಯಕತೆಯೇ ಸಮ್ಮತಿ ಅನ್ನಿಸಿತೋ ಏನೋ? ನಿಧಾನವಾಗಿ ಆತ ತನ್ನ ವರಸೆ ಶುರುಮಾಡಿದ.

“ಸಂಜೆ ಶಿಫ್ಟ್ ಮುಗಿಸಿ ಹೋಗೋ ಮುಂಚೆ ಕಾಲ್ ಮಾಡು. ನಾನೇ ಮನೆಗೆ ಡ್ರಾಪ್ ಮಾಡುತ್ತೇನೆ,’’ ಎಂದ. ನಾನು ಇದನ್ನು ಕೇಳಿಸಿಯೂ ಕೇಳಿಸಿದಂತೆ ಇದ್ದೆ. ಆದರೆ ಮಾರನೇ ದಿನವೇ ಆತನ ಕಾಳಜಿ ಕೋಪವಾಗಿ ಬದಲಾಗಿತ್ತು. “ಏನ್ರಿ ಕೆಲಸ ಸಿಗೋವರೆಗೆ ಸರ್ ಸರ್ ಅಂತ ಹತ್ತಿರ ಬರ್ತೀರ. ಆಮೇಲೆ ದೊಡ್ಡ ಜನ ಆಗ್ತೀರ. ನಿಮಗೆಲ್ಲಾ ಹೆಂಗೆ ಕಂಟ್ರೋಲ್ ಮಾಡಬೇಕು ಎಂಬುದು ಗೊತ್ತಿದೆ,’’ ಎಂಬ ಧಮಕಿ. ಸಂಜೆ ಅನಿವಾರ್ಯವಾಗಿ ಬಸ್ ನಿಲ್ದಾಣದವರೆಗೆ ಅವನನ್ನು ಸಹಿಸಿಕೊಳ್ಳಬೇಕಾಯಿತು.

ಬಸ್ ನಿಲ್ದಾಣದಲ್ಲಿ ಹೋಗಿ ಕುಳಿತವಳ ಪಕ್ಕದಲ್ಲಿ ಬಂದು ಕುಳಿತ. ಮಧ್ಯದಲ್ಲಿ ನನ್ನ ಬ್ಯಾಗ್ ಇಟ್ಟಿದ್ದೆ. ಅದನ್ನು ಎತ್ತಿ ತೊಡೆಯ ಮೇಲೆ ಇಟ್ಟುಕೊಂಡವನು, “ನಮ್ಮನ್ನು ಕಂಡರೆ ಪ್ರೀತಿ ಇಲ್ವೇನ್ರಿ,’’ ಅಂದ. ಮನಸ್ಸಿನಲ್ಲಿ ಅಸಹ್ಯ ಭಾವನೆ ಹುಟ್ಟಿತ್ತು. ಕಾಲಲ್ಲಿ ಇದ್ದದ್ದನ್ನು ಕೈಗೆ ತೆಗೆದುಕೊಳ್ಳಬೇಕು ಅನ್ನಿಸಿತು. ಮನೆ ನೆನಪಾಯಿತು. ಅಪ್ಪ, ಅಮ್ಮ, ನನ್ನ ಸಂಬಳ ನಂಬಿಕೊಂಡ ಕುಟುಂಬ ನೆನಪಾಯಿತು. ಅವತ್ತು ಸಹಿಸಿಕೊಂಡು, ರೂಮು ತಲುಪಿ ಬಾಗಿಲು ಹಾಕಿಕೊಂಡು ಜೋರಾಗಿ ಅತ್ತೆ. ಅಷ್ಟೆ. ಮತ್ತೆ ಮಾರನೇ ದಿನ ಮಾರ್ನಿಂಗ್ ಅಸೈನ್‌ಮೆಂಟ್. ನಿದ್ದೆ ಇಲ್ಲದ ರಾತ್ರಿ ಕಳೆದು ಬೆಳಗ್ಗೆ ಕಚೇರಿ ತಲುಪಿದೆ.

ಆ ಸಮಯದಲ್ಲಿ ನಾನು ಸರಿಯಾಗಿ ಊಟ ಮಾಡಲು ಆಗುತ್ತಿರಲಿಲ್ಲ. ಮನೆಯಲ್ಲಿ ಒಂದಷ್ಟು ಸಮಸ್ಯೆಗಳಿದ್ದವು. ತಲೆ ತುಂಬ ನಾನಾ ಚಿಂತೆಗಳು ಓಡುತ್ತಿದ್ದವು. ದಿನದಿಂದ ದಿನಕ್ಕೆ ಸಣ್ಣಗಾಗುತ್ತಲಿದ್ದೆ. ಆದರೆ ಈತ ಮಾತ್ರ, “ಏನ್ರಿ ವರ್ಕ್‌ಔಟ್ ಜೋರಾ? ಸೊಂಟ ಸಣ್ಣಗೆ ಆಗಿದೆ,’’ ಎಂದ ಒಂದು ದಿನ. ಯಾಕೋ ಇದು ಸರಿಯಾಗುವ ಗಿರಾಕಿ ಅನ್ನಿಸಲಿಲ್ಲ. ಸಾಧ್ಯವಾದಷ್ಟು ದೂರ ಇರಲು ವಿಫಲ ಪ್ರಯತ್ನ ಮಾಡುತ್ತಲೇ ಇದ್ದೆ.

ಇದಾದ ಕೆಲವು ದಿನಗಳ ನಂತರ ಬೆಳಗ್ಗೆ ಯಥಾಪ್ರಕಾರ ಕಚೇರಿಗೆ ಹೋಗಿದ್ದೆ. ಎದುರಿಗೆ ಬಂದವನು ‘ಗುಡ್ ಮಾರ್ನಿಂಗ್’ ಅಂದ. ನಾನು ಪ್ರತಿಕ್ರಿಯೆ ನೀಡಲು ಹೋಗಲಿಲ್ಲ. ಮೇಕಪ್‌ ರೂಮಿಗೆ ಹೋಗಿದ್ದೆ. ಮುಖಕ್ಕೆ ಪೌಡರ್ ಹಚ್ಚಿ, ತುಟಿಗೆ ಲಿಪ್ಸ್‌ಸ್ಟಿಕ್ ಹಚ್ಚಿಕೊಂಡು ಹೊರಗೆ ಬಂದೆ. ಎದುರಿಗೆ ನಿಂತಿದ್ದವನು, “ಸಕ್ಕತ್ತಾಗಿ ಕಾಣ್ತಾ ಇದೀರ. ತುಟಿ ಕಚ್ಚಲಾ,” ಅಂದ. ನನ್ನ ತಾಳ್ಮೆಯ ಕಟ್ಟೆ ಒಡೆಯಿತು. ಸೀದಾ ಹೋಗಿ ನನ್ನ ಚಾನಲ್‌ನ ಮಾಲೀಕರು, ಬಂಗಾರದ ಅಂಗಡಿ ಮಾಲೀಕರಲ್ಲಿ ಕಷ್ಟ ತೋಡಿಕೊಂಡೆ. ಅವರು ಸಂಪಾದಕರನ್ನು ಕರೆದು ಕ್ರಮ ಕೈಗೊಳ್ಳಿ ಎಂದರು. ಆತನನ್ನು ವಾಹಿನಿಯಿಂದ ಹೊರಗೆ ಕಳುಹಿಸಲಾಯಿತು. ಇದಾದ 15 ದಿನಗಳ ನಂತರ ವಾಹಿನಿಯೊಳಗೆ ಸಂಬಳದ ಗಲಾಟೆ ಶುರುವಾಯಿತು. ನಾವು ಕೆಲಸ ಬಿಡಬೇಕಾಯಿತು. ನಾವೆಲ್ಲಾ ಹೊರಬಿದ್ದ ಮೇಲೆ ಈತ ಮತ್ತೆ ವಾಹಿನಿಗೆ ಬಂದ. ಇವತ್ತು ಅಲ್ಲೇ ಕೆಲಸ ಮಾಡುತ್ತಿದ್ದಾನೆ. ಯಾವ ಹುಡುಗಿ ಈತನ ವಕ್ರದೃಷ್ಟಿಗೆ ಒಳಗಾಗಿದ್ದಾಳೋ ಗೊತ್ತಿಲ್ಲ.

ಇಂತಹ ಕಿರುಕುಳ ಕೇವಲ ಮಾಧ್ಯಮದಲ್ಲಿ ಮಾತ್ರವೇ ಇದೆ ಎಂದು ನನಗೆ ಅನ್ನಿಸುವುದಿಲ್ಲ. ಎಲ್ಲಾ ಕಡೆಯೂ ಇಂತಹ ಹೆಣ್ಣುಬಾಕರು ಇದ್ದೇ ಇರುತ್ತಾರೆ. ಇವರ ಸಂಖ್ಯೆ ಒಳ್ಳೆಯ ಗಂಡಸರಿಗಿಂತ ಹೆಚ್ಚೇ ಇದೆ ಅನ್ನಿಸುತ್ತದೆ. ಆದರೆ ಮಾಧ್ಯಮದಲ್ಲಿ ಇರುವ ಗಂಡಸರಲ್ಲಿ ಬಹುತೇಕರು ಒಳ್ಳೆಯವರಿದ್ದಾರೆ. ಸೂಕ್ಷ್ಮತೆಗಳು ಅವರಿಗಿರುತ್ತವೆ. ಎಲ್ಲೋ ಒಂದೆರಡು ಇಂತಹ ಹುಳಗಳಿಂದ ಇಡೀ ಸಮುದಾಯ ಹೀಗೆ ಅಂತ ಭಾವನೆ ಬೆಳೆದು ಬಿಡುತ್ತದೆ. ಇವತ್ತು ನಾನು ನನ್ನದೇ ಜಂಜಾಟದಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದೇನೆ. ಇದನ್ನು ಓದುತ್ತಿರುವ ನಿಮ್ಮೆಲ್ಲರಲ್ಲೂ ಒಂದೇ ವಿನಂತಿ ಏನೆಂದರೆ, ಯಾವುದೇ ಹುಡುಗಿಗೆ ಮಾಧ್ಯಮದಲ್ಲಿ ಕೆಲಸ ನೀಡುವ ಅವಕಾಶ ನಿಮಗಿದ್ದರೆ, ಯಾವ ಪ್ರತಿಫಲಗಳ ನಿರೀಕ್ಷೆ ಇಲ್ಲದೆ ಕೆಲಸ ಕೊಡಿ. ಕೊಟ್ಟ ಮೇಲೆ ಅವರನ್ನು ಕೆಲಸಕ್ಕಾಗಿ ಮಾತ್ರವೇ ಬಳಸಿಕೊಳ್ಳಿ. ನಿಮ್ಮ ನಡವಳಿಕೆಗಳು ಇನ್ನೊಬ್ಬರಿಗೆ ಸಮಸ್ಯೆಯಾಗುತ್ತಿದೆಯಾ ಎಂದು ಆಗಾಗ ಪರೀಕ್ಷೆ ಮಾಡಿಕೊಂಡು ಬದುಕಿ. ಇದನ್ನು ಬಿಟ್ಟು, ‘ಅಯ್ಯೋ ಹುಡುಗೀರು ಕೂಡ ಸರಿ ಇರಲ್ಲ’ ಅಂತ ಜನರಲ್ ಸ್ಟೇಟ್‌ಮೆಂಟ್ ಕೊಟ್ಟುಕೊಂಡು ಇರಬೇಡಿ. ಹಾಗಿದ್ದರೆ ನಷ್ಟ ನಿಮಗೆ ಮಾತ್ರ ಅಲ್ಲ; ಇಡೀ ಪತ್ರಿಕೋದ್ಯಮ ನಿಮ್ಮ ಮಸಿಯಿಂದಾಗಿ ಕುರೂಪವಾಗುತ್ತದೆ ಎಂಬ ಎಚ್ಚರಿಕೆ ಇರಲಿ.

(ಕನ್ನಡ ಪತ್ರಿಕೋದ್ಯಮವನ್ನು ಕೇಂದ್ರವಾಗಿಟ್ಟುಕೊಂಡು ‘ಸಮಾಚಾರ’ #MeToo ಅಭಿಯಾನವನ್ನು ಮುನ್ನಡೆಸುತ್ತದೆ. ಇದು ಸರಣಿಯ ಎರಡನೇ ಭಾಗ. ನಿಮ್ಮಲ್ಲೂ ಇಂತಹ ಅನುಭವಗಳಿದ್ದರೆ samachara2016@gmail.comಗೆ ಕಳುಹಿಸಿ ಕೊಡಿ. ನೀವು ಬಯಸಿದರೆ, ಮುಂದಿನ ಪ್ರಕ್ರಿಯೆಗಳ ಜತೆ ನಿಲ್ಲುವುದಾದರೆ ಹೆಸರುಗಳನ್ನೂ ಪ್ರಕಟಿಸಲು ‘ಸಮಾಚಾರ’ ಸಿದ್ಧವಿದೆ)