samachara
www.samachara.com
‘ಮಾಯಾ’ಜಿಂಕೆ ಓಟ: ಎನ್‌. ಮಹೇಶ್‌ ರಾಜೀನಾಮೆಗೆ ಅಸಲಿ ಕಾರಣ ಏನ್ ಗೊತ್ತಾ?
COVER STORY

‘ಮಾಯಾ’ಜಿಂಕೆ ಓಟ: ಎನ್‌. ಮಹೇಶ್‌ ರಾಜೀನಾಮೆಗೆ ಅಸಲಿ ಕಾರಣ ಏನ್ ಗೊತ್ತಾ?

ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಕನಸು ಕಾಣುತ್ತಿರುವ ಮಾಯಾವತಿ ತಮ್ಮ ಮಹತ್ವಾಕಾಂಕ್ಷೆಗಾಗಿ ಮಹೇಶ್‌ ರಾಜೀನಾಮೆಯ ಕೊನೇ ದಾಳ ಉರುಳಿಸಿದ್ದಾರೆ.

ದಯಾನಂದ

ದಯಾನಂದ

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೊಳ್ಳೇಗಾಲದಲ್ಲಿ ಅಮ್ಮ ಭಗವಾನ್‌ ಪಾದುಕೆಗಳನ್ನು ಹೆಗಲಿಗೇರಿಸಿಕೊಂಡ ಕಾರಣಕ್ಕೆ ಎದ್ದಿದ್ದ ವಿವಾದದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಸಚಿವ ಎನ್‌. ಮಹೇಶ್‌, “ಸಮುದಾಯದ ಭಾವನೆಗಳನ್ನು ಗೌರವಿಸುವ ಸಲುವಾಗಿ ಎಲ್ಲಾ ಆಚರಣೆಗಳನ್ನು ಮಾಡಿದ್ದೇನೆ, ಮಾಡುತ್ತೇನೆ. ಧರ್ಮಗಳು ಮೈ ಮೇಲೆ ಧರಿಸಿದ ಅಂಗಿ ಇದ್ದಂತೆ. ಸಂದರ್ಭಕ್ಕೆ ತಕ್ಕಂತೆ ಒಂದೊಂದು ಅಂಗಿ ಹಾಕುತ್ತೇನೆ. ಅದೊರಳಗಿರುವ ನನ್ನ ಚರ್ಮ ಶುದ್ಧವಾಗಿದೆ” ಎಂಬರ್ಥದಲ್ಲಿ ಮಾತನಾಡಿದ್ದರು.

“ನಾನು ಮಾನಸಿಕವಾಗಿ ಯಾವುದಕ್ಕೂ ಅಂಟಿಕೊಂಡಿಲ್ಲ. ನಾನು ಮೊದಲಿನಿಂದಲೂ ಹೀಗೇ ಇರುವುದು. ನನ್ನನ್ನು ಪ್ರಗತಿಪರ ಎಂದು ತಪ್ಪಾಗಿ ಅರ್ಥೈಸಿದ್ದಾರೆ” ಎಂದು ಅಂದು ಹೇಳಿದ್ದ ಮಹೇಶ್‌ ಇಂದು ‘ಪಕ್ಷ ಕಟ್ಟುವ’ ಕೆಲಸಕ್ಕಾಗಿ ತಮ್ಮ ಸಚಿವ ಸ್ಥಾನವನ್ನೇ ‘ತ್ಯಾಗ’ ಮಾಡಿದ್ದಾರೆ. ಐದು ತಿಂಗಳ ಅವಧಿಯಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಮಹೇಶ್‌ ಗುರುವಾರ ಏಕಾಏಕಿ ರಾಜೀನಾಮೆ ನೀಡುವ ಮೂಲಕ ರಾಜ್ಯದಲ್ಲಿ ಬಿಎಸ್‌ಪಿಯನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ‘ಮಾಯಾ’ಜಿಂಕೆಯ ಬೆನ್ನ ಹಿಂದೆ ಬಿದ್ದಿದ್ದಾರೆ. ಅದರಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಲ ಹೇಳಬೇಕಿದೆ. ಆದರೆ ಸದ್ಯ, ದೇಶದ ಏಕೈಕ ಬಿಎಸ್‌ಪಿ ಸಚಿವರೊಬ್ಬರು ರಾಜೀನಾಮೆ ನೀಡುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ.

Also read: ಸಚಿವ ಸ್ಥಾನಕ್ಕೆ ಎನ್‌. ಮಹೇಶ್‌ ರಾಜೀನಾಮೆ; ಪತ್ರದಲ್ಲಿ ಹೇಳಿದ್ದೇನು? 

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಮಹೇಶ್‌ ಅವರಿಗೆ ಜೆಡಿಎಸ್‌ ಜತೆ ಬಿಎಸ್‌ಪಿ ಚುನಾವಣಾ ಪೂರ್ವದಲ್ಲಿಯೇ ಮಾಡಿಕೊಂಡ ಮೈತ್ರಿಯ ಕಾರಣಕ್ಕೆ ಸಚಿವ ಸ್ಥಾನ ಅನಾಯಾಸವಾಗಿ ಒಲಿದು ಬಂದಿತ್ತು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಎಂಬ ಜವಾಬ್ದಾರಿಯುತ ಖಾತೆಯೂ ಮಹೇಶ್‌ ಅವರಿಗೆ ಸಿಕ್ಕಿತ್ತು. ಶಾಲಿನಿ ರಜನೀಶ್ ಅವರಂಥ ಅಧಿಕಾರಿಯ ಜತೆಗೆ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆಯ ತರುವ ಅವಕಾಶವೂ ಅವರಿಗೆ ಇತ್ತು. ಈ ಬಗೆಗೆ ಒಂದಷ್ಟು ಕಾರ್ಯ ಚಟುವಟಿಕೆಗಳನ್ನೂ ಅವರು ನಡೆಸಿದ್ದರು.

ಹಾಗಂತ ಮಹೇಶ್ ಇದ್ದಿದ್ದರೆ ಅದ್ಭುತವಾದ ಆಡಳಿತ ನೀಡುತ್ತಿದ್ದರು ಎಂದು ಹೇಳುವುದು ಕಷ್ಟ ಇತ್ತು. ತೆರೆದ ಪಠ್ಯ ಪುಸ್ತಕ ಪರೀಕ್ಷೆ, ಶಿಕ್ಷಕರ ವರ್ಗಾವಣೆ, ಪರೀಕ್ಷಾ ಸುಧಾರಣೆಗಳ ವಿಚಾರದಲ್ಲಿ ಮಹೇಶ್‌ ತಮ್ಮ ಕಾರ್ಯವನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬುದನ್ನು ಇಲಾಖೆಯ ಸಾಮಾನ್ಯ ಶಿಕ್ಷಕರೂ ಹೇಳುತ್ತಾರೆ. ಇದೇ ಕಾರಣಕ್ಕೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಿಕ್ಷಣ ಖಾತೆಯನ್ನು ಮಹೇಶ್‌ ಅವರಿಗೆ ಕಿತ್ತುಕೊಂಡು ಅವರಿಗೆ ಬೇರೆ ಖಾತೆ ನೀಡಲಾಗುತ್ತದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆ ಮಾತುಗಳು ನಿಜವೋ, ಸುಳ್ಳೋ ಆಗುವ ಮೊದಲೇ ಮಹೇಶ್‌ ಸಚಿವ ಸ್ಥಾನದಿಂದಲೇ ದೂರಾಗಿದ್ದಾರೆ. ಇದು ವೈಯಕ್ತಿಕವಾಗಿ ಎನ್. ಮಹೇಶ್ ಅವರಿಗೆ ನಷ್ಟ ಮಾತ್ರವಲ್ಲ, ರಾಜ್ಯದಲ್ಲಿ ಬಿಎಸ್‌ಪಿಗೂ ನಷ್ಟವಾಗಲಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಮುಂದಿನ ಲೋಕಸಭೆ ಚುನಾವಣೆ ವೇಳೆ ಬಿಎಸ್‌ಪಿಯ ನಿಲುವು ಏನಾಗಿರಲಿದೆ ಎಂಬುದಕ್ಕೆ ಸ್ಪಷ್ಟ ಮುನ್ಸೂಚನೆಯೊಂದು ಸಿಕ್ಕಿದೆ.

Also read: ‘ಕಾಂಗ್ರೆಸ್- ಬಿಜೆಪಿಯಿಂದ ಸಮಾನ ಅಂತರ’: ಬಿಎಸ್‌ಪಿ ನಾಯಕಿ ಮಾಯಾವತಿ ಮನಸ್ಸಿನಲ್ಲೇನಿದೆ? 

ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿ ಇಲ್ಲ ಎಂಬ ನಿರ್ಧಾರವನ್ನು ಘೋಷಿಸುವ ಮೂಲಕ ಮಾಯಾವತಿ ಮಹಾಮೈತ್ರಿ ಜತೆಗೆ ತಾವು ಇಲ್ಲ ಎಂಬ ಸ್ಪಷ್ಟ ಸಂದೇಶವನ್ನಂತೂ ಈಗಾಗಲೇ ರವಾನಿಸಿದ್ದಾರೆ. ಇದಕ್ಕೆ ಕಾರಣ, ಬಿಎಸ್‌ಪಿ ಸ್ವತಂತ್ರ ಶಕ್ತಿಯಾಗಿ ಲೋಕಸಭೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಪಕ್ಷದಲ್ಲಿದೆ. ಆದರೆ ಪಕ್ಷಕ್ಕೊಂದು ಇನ್ನೂ ಅಧಿಕೃತ ಟ್ವಿಟರ್ ಅಕೌಂಟ್‌ನಲ್ಲಿ ಇರುವುದು 6 ಸಾವಿರ ಅನುಯಾಯಿಗಳು. ಉತ್ತರ ಪ್ರದೇಶ ಹೊರತು ಪಡಿಸಿದರೆ ಹೇಳಿಕೊಳ್ಳುವ ಸಂಘಟನಾ ಬಲವೂ ಇಲ್ಲ. ಆದರೆ ಒಂದು ಪುಟ್ಟ ವರ್ಗ ಪ್ರತಿ ರಾಜ್ಯದಲ್ಲಿಯೂ ಪಕ್ಷ ಸಂಘಟನೆಯನ್ನು ಜೀವಂತವಾಗಿಟ್ಟಿವೆ.

ಕರ್ನಾಟಕದಲ್ಲಿಯೂ ಪಕ್ಷ ಒಬ್ಬರು ಸಚಿವರನ್ನು ನೀಡುವ ಮೂಲಕ ಬೆಳೆಯುವ ಹಾದಿಯಲ್ಲಿತ್ತು. ಎನ್. ಮಹೇಶ್ ಸಚಿವರಾದ ನಂತರ ‘ಬಹು ಜನರಿಗೆ ಬಂದ ಅಧಿಕಾರ’ದ ಸವಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತಿತ್ತು. ಯುವ ಪಡೆಯೊಂದು ಪಕ್ಷವನ್ನು ಬೆಳೆಯುವ ಉತ್ಸಾಹದಲ್ಲಿ ಕೆಲಸ ಮಾಡುತ್ತಿತ್ತು. ಆದರೆ, ರಾಷ್ಟ್ರ ನಾಯಕರ ಆಲೋಚನೆಯೇ ಬೇರೆ ಇತ್ತು. ಅವರಿಗೆ ಕರ್ನಾಟಕ ಎಂಬುದು ಅಗತ್ಯ ಬಿದ್ದಾಗ ದಾಳ ಉರುಳಿಸಲು ಅಧಿಕಾರ ನೀಡಿದ ರಾಜ್ಯವಾಗಿ ಕಂಡಂತಿದೆ. ಈ ಮೂಲಕ ‘ಮಹಾ ಮೈತ್ರಿ’ಯಲ್ಲಿ ತಮ್ಮದು ಆನೆ ನಡಿಗೆ ಎಂಬುದ ಮುನ್ಸೂಚನೆ ನೀಡಲು ರಾಜೀನಾಮೆ ದಾಳಿ ಉರುಳಿಸಿದ್ದಾರೆ. ಎನ್. ಮಹೇಶ್ ಯಾವ ಮುನ್ಸೂಚನೆಯೂ ಸಿಗದೆ ಏಕಾಏಕಿ ರಾಜೀನಾಮೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Also read: ಅಂದು ಕೆಎಎಸ್‌, ಇಂದು ಕ್ಯಾಬಿನೆಟ್: ಏಕೈಕ ಬಿಎಸ್‌ಪಿ ಶಾಸಕರಿಗೆ ಒಲಿದ ಸಚಿವ ಸ್ಥಾನ!

ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಬಿಎಸ್‌ಪಿ ರಾಜ್ಯ ಕಾರ್ಯಕಾರಿ ಸಮತಿಯಲ್ಲಿ ವೈಮನಸ್ಸು ಕಾಣಿಸಿಕೊಂಡಿತ್ತು. ಗೆಲ್ಲುವ ಸಾಧ್ಯತೆ ಇರುವ ಪ್ರದೇಶಗಳನ್ನು ಬಿಟ್ಟು ಮತ್ತೇಲ್ಲೋ ಚುನಾವಣೆ ಕೆಲಸಕ್ಕೆ ಕಳುಹಿಸಿದ್ದು ಕೆಲವು ರಾಜ್ಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಚುನಾವಣಾ ಫಲಿತಾಂಶದ ಬಳಿಕ ಪಕ್ಷದ ರಾಜ್ಯ ಘಟಕದೊಳಗಿನ ಬದಲಾವಣೆಗಳೂ ಭಿನ್ನಾಭಿಪ್ರಾಯಗಳನ್ನು ಹೆಚ್ಚಾಗಿಸಿತ್ತು. ಈ ಸಮಯದಲ್ಲಿ ಎನ್. ಮಹೇಶ್ ಅವರನ್ನು ಅಧಿಕಾರದಿಂದ ಇಳಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಇಳಿಸುವುದು ಕೇವಲ ನೆಪ ಅಷ್ಟೆ.

ಬಿಎಸ್‌ಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಕನಸು ಕಾಣುತ್ತಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ಮಹತ್ವಾಕಾಂಕ್ಷೆಗಾಗಿ ದೇಶದ ಏಕೈಕ ಬಿಎಸ್‌ಪಿ ಸಚಿವರಾಗಿದ್ದ ಮಹೇಶ್‌ ಅವರ ರಾಜೀನಾಮೆ ಕೊಡಿಸಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಭಾಗವಾಗಿ ಬಿಎಸ್‌ಪಿ ಇರಲಿದೆ ಎಂಬ ಭ್ರಮೆಯಲ್ಲಿ ‘ಬಹುಜನ’ ಇರುವ ಅಗತ್ಯವಿಲ್ಲ ಎಂಬ ಸಂದೇಶವನ್ನೂ ರವಾನಿಸಿದ್ದಾರೆ. ರಾಜಕಾರಣ ಬಂದಾಗ ಅದಕ್ಕೆ ಸ್ಥಳೀಯ ಆಯಾಮವೇ ಇರಬೇಕು ಎಂಬ ನಿಯಮ ಇಲ್ಲ. ಮತ್ತು, ಎನ್. ಮಹೇಶ್ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ತರುವ ಸಾಧ್ಯತೆಯೂ ಕಡಿಮೆ ಇದೆ.