samachara
www.samachara.com
ಸೋ ಕಾಲ್ಡ್ ನಾಡಹಬ್ಬ ದಸರಾ; ರಾಜವಂಶಸ್ಥರ ‘ಗೌರವಧನ’ಕ್ಕೆ ಬ್ರೇಕ್‌ ಯಾವಾಗ?
COVER STORY

ಸೋ ಕಾಲ್ಡ್ ನಾಡಹಬ್ಬ ದಸರಾ; ರಾಜವಂಶಸ್ಥರ ‘ಗೌರವಧನ’ಕ್ಕೆ ಬ್ರೇಕ್‌ ಯಾವಾಗ?

ನಾಡಹಬ್ಬದ ಹೆಸರಿನಲ್ಲಿ ಸರಕಾರ ಪ್ರತಿವರ್ಷ ಕೋಟಿ ಕೋಟಿ ಖರ್ಚು ಮಾಡಿ ದಸರಾ ಆಚರಿಸುವ ಅಗತ್ಯವಿದೆಯೇ?

ದಯಾನಂದ

ದಯಾನಂದ

ಮೈಸೂರು ದಸರಾ ಆಚರಣೆಗೆಂದು ರಾಜ್ಯ ಸರಕಾರ ಘೋಷಿಸಿರುವ ಹಣ 25 ಕೋಟಿ ರೂಪಾಯಿ. ಮೈಸೂರು ರಾಜವಂಶಸ್ಥರಿಗೆ ಈ ಬಾರಿ ರಾಜ್ಯ ಸರಕಾರ ನೀಡಿರುವ ‘ಗೌರವಧನ’ 36 ಲಕ್ಷ ರೂಪಾಯಿ. ಕಳೆದ ಐದು ವರ್ಷಗಳಲ್ಲಿ ಸರಕಾರ ರಾಜವಂಶಸ್ಥರಿಗೆ ನೀಡಿರುವ ಹಣ 1.36 ಕೋಟಿ ರೂಪಾಯಿ. ‘ಪರಂಪರೆ’ಯ ಹೆಸರಿನಲ್ಲಿ ದಸರಾ ಆಚರಣೆಗೆ ಸರಕಾರ ನೀಡುವ ಹಣ ಆಕಾಶದಿಂದ ಉದುರಿದ್ದಲ್ಲ. ಸರಕಾರ ಪರಂಪರೆ ಉಳಿಸಲು ನೀರಿನಂತೆ ಖರ್ಚು ಮಾಡುತ್ತಿರುವುದು ರಾಜರ ಹಣವನ್ನಲ್ಲ ಬದಲಿಗೆ ಸಾರ್ವಜನಿಕರ ಹಣ.

ಪ್ರತಿ ವರ್ಷ ದಸರಾ ಆಚರಣೆಗೆ ಖರ್ಚು ಮಾಡುತ್ತಿರುವ ಹಾಗೂ ರಾಜವಂಶಸ್ಥರಿಗೆ ನೀಡುತ್ತಿರುವ ಹಣವನ್ನು ಸರಕಾರ ಏರಿಸುತ್ತಲೇ ಇದೆ. ಬರ, ನೆರೆಯ ಕಾರಣದಿಂದ ಕೆಲವು ವರ್ಷಗಳಲ್ಲಿ ಅನುದಾನ ಕಡಿಮೆ ಮಾಡಿರುವುದು ಬಿಟ್ಟರೆ ವರ್ಷದಿಂದ ವರ್ಷಕ್ಕೆ ಖರ್ಚು ಹೆಚ್ಚಾಗುತ್ತಲೇ ಇದೆ. ನಾಡಹಬ್ಬದ ಹೆಸರಲ್ಲಿ ನಡೆಯುವ ದುಂದು ವೆಚ್ಚ ಹೆಚ್ಚಾಗುತ್ತಿದ್ದಷ್ಟೂ ಮಧ್ಯವರ್ತಿಗಳ ‘ಲಾಭ’ದ ಪ್ರಮಾಣವೂ ಹೆಚ್ಚಾಗುತ್ತಿದೆ.

ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಸಂವಿಧಾನವನ್ನು ಒಪ್ಪಿಕೊಂಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಒಂದು ರಾಜ್ಯವಾಗಿರುವ ಕರ್ನಾಟಕದಲ್ಲಿ ವೈದಿಕಶಾಹಿ ಆಚರಣೆಯಾದ ದಸರಾ ಅನ್ನು ನಾಡಹಬ್ಬ ಎಂದು ವಿಜೃಂಭಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳೂ ಈಗ ಏಳುತ್ತಿವೆ. ವೈದಿಕಶಾಹಿಯ ಅಡಿಯಾಳಾಗಿ ಸರಕಾರ ಜಂಬೂ ಸವಾರಿ ನಡೆಸುವುದು ಎಷ್ಟು ಸರಿ, ಅರಮನೆಯ ರಾಜರೇ ನಿಲ್ಲಿಸಿದ್ದ ಜಂಬೂ ಸವಾರಿ ಎಂಬ ದುಂದು ವೆಚ್ಚದ ಆಚರಣೆಗೆ ಸರಕಾರ ಯಾಕೆ ಕಡಿವಾಣ ಹಾಕುತ್ತಿಲ್ಲ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

“ಮೂಲತಃ ಹಿಂದೂ ಧಾರ್ಮಿಕ ಆಚರಣೆಯಾದ ದಸರಾ, ವಿಜಯದಶಮಿಗೆ ಸರಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿರುವುದು ಪ್ರಜಾಪ್ರಭುತ್ವದ ಅಣಕದಂತಿದೆ. ಮಹಿಷ ಎಂಬ ದೊರೆಯನ್ನು ಚಾಮುಂಡಿ ಸಂಹಾರ ಮಾಡಿದಳು ಎಂಬ ಸುಳ್ಳು ಕಥೆಯನ್ನು ಕಟ್ಟಿದ ವೈದಿಕಶಾಹಿಯ ಅಡಿಯಾಳಂತೆ ಸರಕಾರ ಈಗ ದಸರಾ ಆಚರಿಸುತ್ತಿದೆ. ಜನರ ಹಣದಿಂದ ದಸರಾ ಆಚರಣೆ ಮಾಡುತ್ತಿರುವುದು ಜಾತ್ಯತೀತೆಯ ಕಗ್ಗೊಲೆ. ಸಂವಿಧಾನವನ್ನು ಒಪ್ಪಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಆಚರಣೆ ಸರಿಯಲ್ಲ. ಈ ವರ್ಷ ಸರಕಾರ ದಸರಾ ಆಚರಣೆಯ ಬದಲು ಅದೇ ಹಣವನ್ನು ಕೊಡಗಿನ ಪರಿಹಾರಕ್ಕೆ ಕೊಡಬೇಕಿತ್ತು” ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು.

ಮಹೇಶ್‌ಚಂದ್ರ ಗುರು ಮತ್ತಿತರ ಸಾಮಾಜಿಕ ಕಾರ್ಯಕರ್ತರು ಮೈಸೂರಿನಲ್ಲಿ ಸರಕಾರ ಆಚರಿಸುವ ದಸರಾಗೆ ಪರ್ಯಾಯವಾಗಿ ಸುಮಾರು 7 ವರ್ಷಗಳಿಂದ ಮಹಿಷ ದಸರಾ ಆಚರಿಸುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ಸರಕಾರ ದುಂದು ವೆಚ್ಚ ಮಾಡುವ ದಸರಾ ಆಚರಣೆಯನ್ನು ನಿಲ್ಲಿಸಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲೂ ಇವರು ನಿರ್ಧರಿಸಿದ್ದಾರೆ.

ಮೂಲದಲ್ಲಿ ದಸರಾ ಆಚರಣೆಯೇ ಜನವಿರೋಧಿಯಾದುದು. ರಾಜಪ್ರಭುತ್ವ ಕೊನೆಯಾದ ಮೇಲೆ ಆ ಆಚರಣೆಯನ್ನು ನಿಲ್ಲಿಸಬೇಕಾಗಿತ್ತು. ವೈದಿಕ ದೈವವಾದ ಚಾಮುಂಡಿಯನ್ನು ದಸರಾದಲ್ಲಿ ಅಂಬಾರಿ ಮೆರವಣಿಗೆ ಮಾಡಲು ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುವುದು ಪ್ರಜಾಪ್ರಭುತ್ವದ ಅಣಕದಂತಿದೆ. ದಸರಾ ಆಚರಣೆ ನಿಲ್ಲಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಸಮಾನ ಮನಸ್ಕರು ನಿರ್ಧರಿಸಿದ್ದೇವೆ.
- ಪ್ರೊ. ಮಹೇಶ್‌ಚಂದ್ರ ಗುರು

48 ವರ್ಷದ ಹಿಂದೆ ಬಾಡಿಗೆ ಆನೆಯಿಂದ ಆರಂಭ:

1969ರಲ್ಲಿ ಕೇಂದ್ರದಲ್ಲಿದ್ದ ಇಂದಿರಾ ಗಾಂಧಿ ಸರಕಾರ ರಾಜವಂಶಸ್ಥರಿಗೆ ನೀಡುತ್ತಿದ್ದ ‘ವಿಶೇಷ ಸೌಲಭ್ಯ’ಗಳನ್ನು ನಿಲ್ಲಿಸಿತು. ಇದಾದ ಮರು ವರ್ಷ ಅಂದಿನ ಮೈಸೂರು ರಾಜವಂಶಸ್ಥ ಜಯಚಾಮರಾಜೇಂದ್ರ ಒಡೆಯರ್‌ ತಾವು ಸಿಂಹಾಸನದ ಮೇಲೆ ಕೂರದೆ, ಜಂಬೂ ಸವಾರಿ ನಡೆಸದೆ ತಮ್ಮ ಕಾರಿನಲ್ಲಿ ಬನ್ನಿಮಂಟಪಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದಿದ್ದೆಲ್ಲವೂ ಈಗ ಇತಿಹಾಸ.

1970ರಲ್ಲೇ ನಿಂತು ಹೋಗಬಹುದಾಗಿದ್ದ ಜಂಬೂ ಸವಾರಿ ನಿಲ್ಲಬಾರದೆಂಬ ಕಾರಣಕ್ಕೆ ಮೈಸೂರಿನ ಕನ್ನಡ ಹೋರಾಟಗಾರರ ಗುಂಪು ಅಂದು ಮೃಗಾಲಯದಿಂದ ಬಾಡಿಗೆ ಆನೆ ತಂದು ಮರದ ಅಂಬಾರಿಯಲ್ಲಿ ಕನ್ನಡಾಂಬೆಯ ಪ್ರತಿಮೆ ಇಟ್ಟು ಸಣ್ಣ ಮೆರವಣಿಗೆ ನಡೆಸಿದ್ದರು. ಮರು ವರ್ಷ 1971ರಲ್ಲಿ ಈ ಬಾಡಿಗೆ ಆನೆಯ ಜಂಬೂಸವಾರಿ ಆಚರಣೆಗೆ ಮೈಸೂರಿನ ಉದ್ಯಮಿಗಳು ಕೈ ಜೋಡಿಸಿದ್ದರು. ಅದರ ಮುಂದಿನ ವರ್ಷ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಮೈಸೂರು ಅರಮನೆಯನ್ನು ಸರಕಾರದ ವಶಕ್ಕೆ ತೆಗೆದುಕೊಂಡು ಸರಕಾರದಿಂದಲೇ ದಸರಾ ಆಚರಣೆಗೆ ತೀರ್ಮಾನ ತೆಗೆದುಕೊಂಡರು.

ಅಂದಿನಿಂದ ದಸರಾ ಆಚರಣೆಯನ್ನು ಸರಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡೇ ಬರುತ್ತಿದೆ. ಪ್ರವಾಸೋದ್ಯಮದ ಅಭಿವೃದ್ಧಿ ಹೆಸರಿನಲ್ಲಿ ದಸರಾ ಆಚರಣೆಗೆ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಅದರ ಜತೆಗೇ ರಾಜವಂಶಸ್ಥರಿಗೆ ನೀಡುತ್ತಿರುವ ‘ಗೌರವಧನ’ವನ್ನೂ ಸರಕಾರ ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಲೇ ಇದೆ.

“ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮೈಸೂರು ರಾಜವಂಸ್ಥರಿಗೆ ನೀಡುತ್ತಿದ್ದ ಗೌರವಧನವನ್ನು 5 ಲಕ್ಷಕ್ಕೆ ಹೆಚ್ಚಿಸಲಾಯಿತು. ಈಗ ಈ ಹಣ 36 ಲಕ್ಷ ರೂಪಾಯಿಗೆ ಬಂದಿದೆ. ಇದು ಇಲ್ಲಿಗೇ ನಿಲ್ಲುವುದಿಲ್ಲ, ಈ ಹಣದ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ಯಾವ ಕಾರಣಕ್ಕಾಗಿ ಈ ಗೌರವಧನ ನೀಡುತ್ತಿದ್ದೇವೆ ಎಂಬ ಸಕಾರಣ ಸರಕಾರಕ್ಕಿಲ್ಲ. ‘ಹಿಂದಿನಿಂದ ನಡೆದುಬಂದ ಸಂಪ್ರದಾಯ’ದ ಹೆಸರಿನಲ್ಲಿ ಸರಕಾರ ಲಕ್ಷಗಟ್ಟಲೆ ಸಾರ್ವಜನಿಕ ಹಣವನ್ನು ರಾಜವಂಶಸ್ಥರಿಗೆ ನೀಡುತ್ತಿರುವುದು ತಪ್ಪು” ಎಂಬುದು ಮೈಸೂರಿನ ಪ್ರೊ. ಪಿ.ವಿ. ನಂಜರಾಜ ಅರಸ್‌ ಅವರ ಅಭಿಪ್ರಾಯ.

“ಜಯಚಾಮರಾಜ ಒಡೆಯರ್ ನಿಧನದ ನಂತರ ತಮ್ಮಿಂದ ಅರಮನೆ ನಡೆಸಲು ಆಗುತ್ತಿಲ್ಲ, ಸರಕಾರವೇ ಅರಮನೆಯನ್ನು ತಮ್ಮ ವಶಕ್ಕೆ ಪಡೆಯಲಿ ಎಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸರಕಾರಕ್ಕೆ ನಾಲ್ಕು ಪತ್ರ ಬರೆದಿದ್ದರು. ಅರಮನೆಯನ್ನು ವಶಕ್ಕೆ ಪಡೆದಿದ್ದ ಸರಕಾರ ರಾಜವಂಶಸ್ಥರು ಕೇಳಿದ್ದಷ್ಟು ಹಣ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿ ಶ್ರೀಕಂಠದತ್ತ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರಮನೆಯನ್ನು ಸರಕಾರ ಕೇವಲ ಒಂದು ಆದೇಶದ ಮೂಲಕ ವಶಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದ ಹೈಕೋರ್ಟ್ ಅರಮನೆ ಸ್ವಾಧೀನಕ್ಕಾಗಿ ಕಾಯ್ದೆಯೊಂದನ್ನು ತರಲು ಸೂಚಿಸಿತ್ತು. 1998ರಲ್ಲಿ ‘ಮೈಸೂರು ಅರಮನೆ (ಅರ್ಜನೆ ಮತ್ತು ವರ್ಗಾವಣೆ) ಕಾಯ್ದೆ’ ಜಾರಿಗೆ ತಂದ ಸರಕಾರ ಅರಮನೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿತು” ಎಂದು ವಿವರಿಸುತ್ತಾರೆ ಅವರು.

ಹಿಂದಿನ ಮೈಸೂರು ಅರಸರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ ನಿಜ. ಆದರೆ, ಈಗಿರುವ ರಾಜವಂಶಸ್ಥರು ಸಮಾಜಕ್ಕೆ ನೀಡಿರುವ ಕೊಡುಗೆ ಏನು? ಕೇವಲ ರಾಜವಂಶಸ್ಥರು ಎಂಬ ಕಾರಣಕ್ಕೆ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ಗೌರವಧನ ಎಂದು ಕೊಡುತ್ತಿರುವುದು ಏಕೆ? ಕಿತ್ತೂರು ರಾಣಿ ಚೆನ್ನಮ್ಮ, ಚಿತ್ರದುರ್ಗದ ಮದಕರಿ ನಾಯಕರ ವಂಶಸ್ಥರಿಗೂ ಸರಕಾರ ಇದೇ ರೀತಿ ಗೌರವಧನವನ್ನು ಯಾಕೆ ಕೊಡುತ್ತಿಲ್ಲ?
- ಪ್ರೊ. ಪಿ.ವಿ. ನಂಜರಾಜ ಅರಸ್‌

“ಮೈಸೂರು ಅರಮನೆ ಕಾಯ್ದೆಯ ಪ್ರಕಾರ ಶ್ರೀಕಂಠದತ್ತ ಹಾಗೂ ಅವರ ಪತ್ನಿ ಜೀವತಾವಧಿವರೆಗೆ ಅರಮನೆಯ ಒಂದು ಭಾಗದಲ್ಲಿ ಅವರು ಇಚ್ಛಿಸುವ ಜಾಗದಲ್ಲಿ ವಾಸಿಸಲು ಅವಕಾಶ ಕಲ್ಪಿಸಲಾಗಿತ್ತು. ಅರಮನೆ ನಿರ್ವಹಣೆಗೆಂದು ಒಂದು ಮಂಡಳಿ ರಚಿಸಲಾಗಿತ್ತು. ಆದರೆ, ಈಗ ಶ್ರೀಕಂಠದತ್ತರ ಪತ್ನಿ ಪ್ರಮೋದಾದೇವಿಯೇ ಅನಧಿಕೃತವಾಗಿ ಅರಮನೆಯನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಸರಕಾರ ಜಂಬೂ ಸವಾರಿ ನಡೆಸಲು ಅಂಬಾರಿ ಕೊಡಬೇಕೆಂದರೆ ವಾರಕ್ಕೆ ಮೊದಲು ಆಕೆಗೆ ಗೌರವಧನದ ಚೆಕ್‌ ತಲುಪಿಸಬೇಕು. ಗೌರವಧನ ತಲುಪದಿದ್ದರೆ ಅಂಬಾರಿ ಕೊಡುವುದಿಲ್ಲ ಎಂದು ಆಕೆ ಬೆದರಿಕೆ ಹಾಕುತ್ತಾರೆ. ಈ ವಿಚಾರ ವಿವಾದವಾಗಿ ರಾಜಕೀಯ ನಷ್ಟ ಮಾಡಿಕೊಳ್ಳಲೂ ಸರಕಾರದಲ್ಲಿರುವವರಿಗೆ ಇಷ್ಟವಿಲ್ಲ. ಹೀಗಾಗಿ ಅಂಧಾನುಕರಣೆಯಂತೆ ಲಕ್ಷಾಂತರ ರೂಪಾಯಿ ಗೌರವಧನವನ್ನು ಸರಕಾರ ನೀಡುತ್ತಲೇ ಬರುತ್ತಿದೆ” ಎನ್ನುತ್ತಾರೆ ಪ್ರೊ.ಅರಸ್‌.

ಒಟ್ಟಿನಲ್ಲಿ ಹಿಂದೂ ಧಾರ್ಮಿಕ ಆಚರಣೆಯಾದ ದಸರಾವನ್ನು ನಾಡಹಬ್ಬ ಎಂದು ಕರೆದು, ಅದರ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿ ರಾಜಕಾರಣಿಗಳು, ಅಧಿಕಾರಿಗಳು, ಮಧ್ಯವರ್ತಿಗಳು, ಮೈಸೂರಿನ ಪುಢಾರಿಗಳು ಹಣ ಮಾಡಿಕೊಳ್ಳಲು ಸರಕಾರವೇ ಅವಕಾಶ ಮಾಡಿಕೊಟ್ಟಿರುವುದು ಹಾಗೂ ರಾಜವಂಶಸ್ಥರಿಗೆ ಪ್ರತಿ ವರ್ಷ ಲಕ್ಷಗಟ್ಟಲೆ ಹಣವನ್ನು ಗೌರವಧನವಾಗಿ ಕೊಡುತ್ತಿರುವುದು ನಮ್ಮ ವ್ಯವಸ್ಥೆಯ ದುರಂತ.