samachara
www.samachara.com
ರಾಮಚಂದ್ರಾಪುರ ಮಠಕ್ಕೆ ನಿರಾಸೆ: ಗೋಕರ್ಣ ಹಸ್ತಾಂತರಕ್ಕೆ ‘ಎಜಿ’ ವಿಘ್ನ
COVER STORY

ರಾಮಚಂದ್ರಾಪುರ ಮಠಕ್ಕೆ ನಿರಾಸೆ: ಗೋಕರ್ಣ ಹಸ್ತಾಂತರಕ್ಕೆ ‘ಎಜಿ’ ವಿಘ್ನ

ಅಡ್ವೊಕೇಟ್‌ ಜನರಲ್‌ ಅಭಿಪ್ರಾಯದಂತೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿಗಳು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು ಹಸ್ತಾಂತರ ಪ್ರಕ್ರಿಯೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಅಕ್ಟೋಬರ್‌ 3ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ತಮ್ಮ ಪಾಲಾಗಲಿದೆ ಎಂದು ಕಾದು ಕುಳಿತಿದ್ದ ರಾಮಚಂದ್ರಾಪುರ ಮಠದವರಿಗೆ ಮತ್ತೆ ನಿರಾಸೆಯಾಗಿದೆ.

ಸುಪ್ರೀಂ ಕೋರ್ಟ್‌ ಕಳೆದ ಬುಧವಾರ ನೀಡಿದ ಆದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ಆರಂಭದಲ್ಲೇ ಗೊಂದಲ ಎದುರಾಗಿತ್ತು. ಹೀಗಿದ್ದೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ದೇವಸ್ಥಾನವನ್ನು ಹಸ್ತಾಂತರಿಸುವಂತೆ ಅಕ್ಟೋಬರ್‌ 6ರಂದು ಕುಮಟಾ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿದ್ದರು. ಈ ಸೂಚನೆ ಮೇರೆಗೆ ಅಕ್ಟೋಬರ್‌ 9ರಂದು ದೇಗಲು ಹಸ್ತಾಂತರ ಪ್ರಕ್ರಿಯೆ ಆರಂಭವಾಗಿತ್ತು. ಕುಮಟಾ ಎಸಿ ಪ್ರೀತಿ ಗೆಹ್ಲೋಟ್‌ ಹಸ್ತಾಂತರ ಪ್ರಕ್ರಿಯೆಯನ್ನು ಹೆಚ್ಚು ಕಡಿಮೆ ಮುಗಿಸಿದ್ದರು. ಈ ಸಂದರ್ಭದಲ್ಲಿ ಬಂದ ತುರ್ತು ಆದೇಶದ ಹಿನ್ನೆಲೆಯಲ್ಲಿ ದೇಗುಲ ಹಸ್ತಾಂತರ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿತ್ತು.

ಈ ವೇಳೆ, ‘ಸುಪ್ರೀಂ ಕೋರ್ಟ್‌ ಆದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ರಾಜ್ಯದ ಅಡ್ವೊಕೇಟ್‌ ಜನರಲ್‌ (ಎಜಿ) ಅಭಿಪ್ರಾಯ ಪಡೆದು ಮುಂದುವರಿಯಲು ನಿರ್ಧರಿಸಲಾಗಿದೆ’ ಎಂಬ ಮಾಹಿತಿಗಳು ಬಂದಿದ್ದವು. ಇದೀಗ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯದಂತೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿಗಳು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು ಹಸ್ತಾಂತರ ಪ್ರಕ್ರಿಯೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನೀಡಿರುವ ಆದೇಶ
ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನೀಡಿರುವ ಆದೇಶ

ಅಕ್ಟೋಬರ್‌ 3ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌, ಸೆಪ್ಟೆಂಬರ್‌ 7ರಂದು ಇದ್ದ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಹೇಳಿದೆ. ಅದಕ್ಕೂ ಮೊದಲು ಆಗಸ್ಟ್‌ 30ರಂದೇ ದೇವಸ್ಥಾನದ ಆಡಳಿತದ ಪ್ರಭಾರವನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್‌. ಹಾಲಪ್ಪ ವಹಿಸಿಕೊಂಡಿದ್ದರು. ಈ ಕಾರಣದಿಂದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಿಸಲು ಹಾಲಪ್ಪ ಅವರು ಹೆಚ್ಚುವರಿ ಪ್ರಭಾರದಲ್ಲಿ ಮುಂದುವರಿಯಬೇಕು ಎಂಬ ಸೂಚನೆಯನ್ನು ಪತ್ರದಲ್ಲಿ ನೀಡಲಾಗಿದೆ.

ಪತ್ರದಲ್ಲಿ ಅಡ್ವೊಕೇಟ್‌ ಜನರಲ್‌ ನೀಡಿರುವ ಅಭಿಪ್ರಾಯವನ್ನೂ ಲಗತ್ತಿಸಲಾಗಿದ್ದು, ಅವರು ಕೂಡ ಸ್ಪಷ್ಟವಾಗಿ ‘ಹಾಲಪ್ಪ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯಬೇಕಾಗುತ್ತದೆ’ ಎಂಬ ಅಭಿಪ್ರಾಯವನ್ನು ನೀಡಿದ್ದಾರೆ. ಇದರಿಂದ ಗೋಕರ್ಣ ದೇವಸ್ಥಾನ ಮುಂದಿನ ಸುಪ್ರೀಂ ಕೋರ್ಟ್‌ ಆದೇಶದವರೆಗೆ ಸರ್ಕಾರದ ಬಳಿಯಲ್ಲೇ ಉಳಿದುಕೊಳ್ಳಲಿದೆ.

ತಮ್ಮ ಪಾಲಿಗೆ ದೇವಸ್ಥಾನವನ್ನು ನೀಡುತ್ತಾರೆ ಎಂದು ಕಾದು ಕುಳಿತಿದ್ದ ಮಠದವರಿಗೆ ಇದರಿಂದ ನಿರಾಸೆಯಾಗಿದ್ದು, ಸರಕಾರದ ಕ್ರಮವನ್ನು ಟೀಕಿಸಿದ್ದಾರೆ. “ಮೊನ್ನೆಯ ಹಸ್ತಾಂತರ ಪ್ರಕ್ರಿಯೆ ರಾಜಕೀಯ ಒತ್ತಡಗಳಿಂದ ನಿಂತಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಎಜಿ ಅಭಿಪ್ರಾಯ ನೀಡಿ ಹಸ್ತಾಂತರ ಮಾಡದಂತೆ ಸೂಚನೆ ನೀಡಿದ್ದಾರೆ. ಅಡ್ವೊಕೇಟ್ ಜನರಲ್‌ ಅವರು ಇದೇ ಸರಕಾರದ ಇನ್ನೊಂದು ಮುಖವಷ್ಟೇ,” ಎಂದು ರಾಘವೇಶ್ವರ ಸ್ವಾಮಿಗಳ ಸಹ ಮಾಧ್ಯಮ ಕಾರ್ಯದರ್ಶಿ ಸಂದೇಶ ತಲಕಾಲಕೊಪ್ಪ ಪ್ರತಿಕ್ರಿಯಿಸಿದ್ದಾರೆ. “ನಿನ್ನೆಯಷ್ಟೇ ಈ ಆದೇಶ ಬಂದಿದೆ. ನಾವು ಈ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿ ಅವರ ಸಲಹೆಯಂತೆ ಮುಂದುವರಿಯಲಿದ್ದೇವೆ,” ಎಂದು ಅವರು ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

ಕಳೆದ ಬಾರಿ ಸೆಪ್ಟೆಂಬರ್‌ 18ರಂದು ಜಿಲ್ಲಾಧಿಕಾರಿಗಳು ಗೋಕರ್ಣ ದೇವಸ್ಥಾನವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಹೋದಾಗ ಇದೇ ಮಠದವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಇದೀಗ ಎಜಿ ಅಭಿಪ್ರಾಯದ ವಿರುದ್ಧ ಮಠದವರು ಯಾವ ನಡೆ ಅನುಸರಿಸಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ.