ಪೆಪ್ಸಿಕೋ, ಕೋಕಾ ಕೋಲ ಬ್ಯಾನ್; ಹೀಗೊಂದು ಘೋಷಣೆ ಮಾಡಬಲ್ಲರೇ ಪ್ರಧಾನಿ ಮೋದಿ? 
COVER STORY

ಪೆಪ್ಸಿಕೋ, ಕೋಕಾ ಕೋಲ ಬ್ಯಾನ್; ಹೀಗೊಂದು ಘೋಷಣೆ ಮಾಡಬಲ್ಲರೇ ಪ್ರಧಾನಿ ಮೋದಿ? 

ಹೀಗೊಂದು ಪ್ರಶ್ನೆ ಈಗ ಹುಟ್ಟಿಕೊಳ್ಳಲು ಎರಡು ಪ್ರತ್ಯೇಕ ಘಟನೆಗಳು ಕಾರಣ...

ಪ್ರಧಾನಿ ನರೇಂದ್ರ ಮೋದಿ ಯಾಕೆ ಪರಿಸರಕ್ಕೆ ಮಾರಕವಾಗಿರುವ ಪೆಪ್ಸಿಕೊ ಮತ್ತು ಕೋಕಾ ಕೋಲ ಕಂಪನಿಗಳನ್ನು ಭಾರತದಿಂದ ಹೊರಹಾಕಬಾರದು?

ಹೀಗೊಂದು ಪ್ರಶ್ನೆ ಈಗ ಹುಟ್ಟಿಕೊಳ್ಳಲು ಎರಡು ಪ್ರತ್ಯೇಕ ಘಟನೆಗಳು ಕಾರಣ. ಕಳೆದ ವಾರ ವಿಶ್ವಸಂಸ್ಥೆ ಪರಿಸರ ರಕ್ಷಣೆಗೆ ನೀಡುವ ‘ಚಾಂಪಿಯನ್ಸ್ ಆಫ್‌ ದ ಅರ್ಥ್’ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿದೆ. 2022ರ ಹೊತ್ತಿಗೆ ‘ಒಮ್ಮೆ ಬಳಸುವ ಪ್ಲಾಸ್ಟಿಕ್ ಉತ್ಪನ್ನ’ಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು ಎಂದು ಅವರು ಹೇಳಿಕೊಂಡಿದ್ದಾರೆ. ಈಗ ನೋಡಿದರೆ, ಗ್ರೀನ್ ಪೀಸ್ ಎಂಬ ಸಂಸ್ಥೆಯೊಂದು 'ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಅತಿ ದೊಡ್ಡ ಪ್ರಮಾಣವನ್ನು ಪೆಪ್ಸಿಕೋ ಹಾಗೂ ಕೋಕಾ ಕೋಲಾಗಳು ಉತ್ಪಾದನೆ ಮಾಡುತ್ತಿವೆ’ ಎಂದು ಹೇಳಿದೆ. ಹೀಗಾಗಿ, ಮೋದಿ ಈ ಎರಡೂ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನೈತಿಕ ಅವಕಾಶವೊಂದು ಸಿಕ್ಕಂತಾಗಿದೆ. ಜತೆಗೆ, ಭಾರತದಲ್ಲಿ ಈ ಕೆಮಿಕಲ್ ಪಾನೀಯ ಉತ್ಪಾದನಾ ಕಂಪನಿಗಳ ಮೇಲೆ ನಿಷೇಧ ಹೇರಿದ ಇತಿಹಾಸವೂ ಇರುವುದರಿಂದ, ಜಾಗತಿಕ ಮಟ್ಟದಲ್ಲಿ ಕಂಪನ ಮೂಡಿಸುವ ಕಠಿಣ ನಿರ್ಧಾರವೊಂದು ಮೋದಿ ಅವರಿಂದ ಹೊರಬೀಳಬಹುದಾಗಿದೆ.

ವರದಿ ಏನು ಹೇಳಿದೆ?:

ಇದಕ್ಕೂ ಮೊದಲು ಗ್ರೀನ್ ಪೀಸ್ ನೀಡಿದ ವರದಿ ಏನು ಹೇಳಿದೆ ನೋಡಿ. ತಂಪು ಪಾನೀಯ ಮಾರುಕಟ್ಟೆಯ ದಿಗ್ಗಜರಾದ ಕೋಕಾ ಕೋಲಾ, ಪೆಪ್ಸಿಕೋ ಹಾಗೂ ನೆಸ್ಟ್ಲೇ ಜಗತ್ತಿನ ಅತೀ ದೊಡ್ಡ ತ್ಯಾಜ್ಯ ಉತ್ಪಾದಕರು ಎಂದ ಮಂಗಳವಾರದ ಈ ವರದಿ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. 42 ದೇಶಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ 239 ಕಾರ್ಯಕ್ರಮಗಳನ್ನು ನಡೆಸಿತ್ತು ಈ ಸಂಸ್ಥೆ ನಡೆಸಿತ್ತು. ಈ ಕಾರ್ಯಕ್ರಮಗಳ ನಂತರ ಅಧ್ಯಯನ ವರದಿಯೊಂದನ್ನು ಸಂಸ್ಥೆ ಹೊರ ತಂದಿದೆ. ದೊಡ್ಡ ದೊಡ್ಡ ಕಂಪನಿಗಳು ಹೇಗೆ ಭೂಮಿಗೆ ಹೆಚ್ಚೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸೇರಿಸುತ್ತಿವೆ ಎಂದು ಅದು ವಿವರಿಸಿದೆ.

ಸಾಫ್ಟ್‌ ಡ್ರಿಂಕ್‌ ತಯಾರಿಕೆಯ ಜಗತ್ತಿನ ಅತೀ ದೊಡ್ಡ ಕಂಪನಿ ಕೋಕಾ ಕೋಲಾದ ಪ್ಲಾಸ್ಟಿಕ್‌ಗಳು 40 ರಿಂದ 42 ದೇಶಗಳಲ್ಲಿ ಪತ್ತೆಯಾಗಿವೆ. “ಜಾಗತಿಕ ಪ್ಲಾಸ್ಟಿಕ್‌ ಮಾಲಿನ್ಯದ ಸಮಸ್ಯೆಗೆ ದೊಡ್ಡ ದೊಡ್ಡ ಕಂಪನಿಗಳು ಕೊಡುಗೆ ನೀಡುತ್ತಿವೆ ಎನ್ನುವುದಕ್ಕೆ ಇದು ನಿರಾಕರಿಸಲಾಗದ ಸಾಕ್ಷ್ಯ,” ಎಂದು ವರದಿ ಬಗೆಗೆ ‘ಬ್ರೇಕ್‌ ಫ್ರೀ ಫ್ರಂ ಪ್ಲಾಸ್ಟಿಕ್‌’ನ ಜಾಗತಿಕ ಸಂಚಾಲಕ ವಾನ್‌ ಹರ್ನಾಂಡೆಜ್‌ ಹೇಳಿದ್ದಾರೆ.

ವರದಿಯಲ್ಲಿ ಭಾರತದಲ್ಲಿಯೂ ಈ ಕಂಪನಿಗಳು ನಡೆಸುತ್ತಿರುವ ಪರಿಸರ ಹಾನಿಯ ಕುರಿತು ವಿಸ್ತೃತ ಮಾಹಿತಿ ಇದ್ದು, ಪ್ರತ್ಯೇಕ ವರದಿಯೇ ಆಗುಷ್ಟಿದೆ.

ಚಿತ್ರ ಸಾಂದರ್ಭಿಕ. 
ಚಿತ್ರ ಸಾಂದರ್ಭಿಕ. 

ವರದಿ ಪ್ರಕಾರ, 42 ದೇಶಗಳಲ್ಲಿ ಪತ್ತೆಯಾದ ಕಸದಲ್ಲಿ ಹೆಚ್ಚಿನ ಪಾಲು ಪಾಲಿಸ್ಟಿರೇನ್‌ನದಾಗಿದೆ. ಇದನ್ನು ಪ್ಯಾಕ್‌ ಮಾಡಲು ಮತ್ತು ಕಾಫಿ ಲೋಟಗಳಲ್ಲಿ ಬಳಸುತ್ತಾರೆ. ಇದು ಬಿಟ್ಟರೆ ನಂತರದ್ದು PET (Polyethylene terephthalate). ಇದನ್ನು ಬಾಟಲಿಗಳು ಮತ್ತು ಡಬ್ಬಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಮತ್ತು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಕಂಪನಿಗಳು ಕೋಕಾ ಕೋಲಾ, ಪೆಪ್ಸಿ ಮತ್ತು ನೆಸ್ಟ್ಲೇ.

ಈ ಕಂಪನಿಗಳು PET ಬಾಟಲಿಗಳಲ್ಲಿ ಹಾಕಿ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತವೆ. ಇವುಗಳನ್ನು ಬಳಸಿ ಜನರು ಎಸೆಯುವುದರಿಂದ ದೊಡ್ಡ ಮಟ್ಟದ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ‘ಇದಕ್ಕೆ ನಾವು ಪರಿಹಾರ ಕಂಡು ಹುಡುಕಲು ಯತ್ನಿಸುತ್ತಿದ್ದೇವೆ’ ಎಂದು ಕಂಪನಿಗಳು ಹೇಳಿಕೊಳ್ಳುತ್ತಲೇ ಬಂದಿವೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಇವುಗಳಿಗೆ ಬ್ರೇಕ್‌ ಹಾಕಲು ಇರುವ ಒಂದೇ ದಾರಿ ಎಂದರೆ ಈ ಕಂಪನಿಗಳ ಉತ್ಪನ್ನಗಳಿಗೆ ಭಾರತದಲ್ಲಿ ನಿಷೇಧ ಹೇರುವುದು; ಅಥವಾ ಹೆಚ್ಚಿನ ಸುಂಕ ವಿಧಿಸುವ ಅಥವಾ ಇನ್ಯಾವುದಾರೂ ಕಾನೂನು ಬಳಸುವ ಮೂಲಕ ಅವರೇ ದೇಶದಿಂದ ಹೊರಹೋಗುವಂತೆ ಮಾಡುವುದು.

ಈ ಹಿಂದೆ 1977 ರಲ್ಲಿ ಕೊಕಾ ಕೋಲಾ ಕಂಪನಿಯನ್ನು ಜಾರ್ಜ್‌ ಫೆರ್ನಾಂಡಿಸ್‌ ಭಾರತದಿಂದಲೇ ಒದ್ದೋಡಿಸಿದ್ದರು. ಜನತಾ ಪಕ್ಷದ ಸರಕಾರದಲ್ಲಿ ಸಚಿವರಾಗಿದ್ದ ವೇಳೆ ಸ್ವದೇಶಿ ಕಂಪನಿಗಳನ್ನು ಉತ್ತೇಜಿಸಲು ವಿದೇಶಿ ಹೂಡಿಕೆಗೆ ಶೇಕಡಾ 40ರ ಮಿತಿ ಹೇರಿದ್ದರು. ಆದರೆ ಈ ವಿದೇಶ ವಿನಿಮಯ ನಿಯಂತ್ರಣ ಕಾಯ್ದೆಯನ್ನು ಪಾಲಿಸಲು ಕೋಕಾ ಕೋಲಾ ಒಪ್ಪಲಿಲ್ಲ. ತನ್ನ ಪಾನೀಯದ ಸೀಕ್ರೆಟ್‌ನ್ನು ಭಾರತೀಯ ಕಂಪನಿ ಜತೆ ಹಂಚಿಕೊಳ್ಳಲು ಒಪ್ಪದ ಕಾರಣ ಕೋಕ್‌ ಭಾರತದಿಂದ ಹೊರಟು ಹೋಯಿತು. ಈ ಸಂದರ್ಭದಲ್ಲಿ ಕೋಕಾ ಕೋಲಾ ಕಂಪನಿಯಲ್ಲಿದ್ದ ಸಿಬ್ಬಂದಿಗಳು ನಿರುದ್ಯೋಗಿಗಳಾದರು. ಇವರಿಗೆ ಉದ್ಯೋಗ ನೀಡಲೆಂದು ಸರಕಾರವೇ ‘ಡಬಲ್‌ ಸೆವೆನ್‌’ ಎಂಬ ಪಾನೀಯದ ಬ್ರ್ಯಾಂಡ್‌ ಆರಂಭಿಸಿತು. ಇದಕ್ಕೆ ಪಾನೀಯದ ಸೂತ್ರವನ್ನು ಮೈಸೂರಿನಲ್ಲಿರುವ ‘ಸಿಎಫ್‌ಟಿಆರ್‌ಐ’ ತಯಾರಿಸಿ ಕೊಟ್ಟಿತ್ತು. ಆರಂಭದಲ್ಲಿ ಇದು ಚೆನ್ನಾಗಿಯೇ ನಡೆಯಿತು. ಆದರೆ ಮುಂದೆ 1980ರ ವೇಳೆಗೆ ಕಂಪನಿಯೇ ಮುಚ್ಚಿಕೊಂಡಿತು ಎಂಬುದು ಬೇರೆ ವಿಷಯ.

1977ರಲ್ಲಿ ಬಿಡುಗಡೆಯಾದ ಸರಕಾರಿ ಸ್ವಾಮ್ಯದ ತಂಪು ಪಾನೀಯ ಬ್ರ್ಯಾಂಡ್‌ ‘77’ನ ಜಾಹೀರಾತು.
1977ರಲ್ಲಿ ಬಿಡುಗಡೆಯಾದ ಸರಕಾರಿ ಸ್ವಾಮ್ಯದ ತಂಪು ಪಾನೀಯ ಬ್ರ್ಯಾಂಡ್‌ ‘77’ನ ಜಾಹೀರಾತು.

ಮುಂದೆ 1993ರಲ್ಲಿ ಸರಕಾರ ಜಾಗತೀಕರಣದ ಹೆಸರಿನಲ್ಲಿ ಬಂದ ಹೊಸ ನೀತಿಗಳ ಬಾಲ ಹಿಡಿದು ಮತ್ತೆ ವಿದೇಶಿ ಕಂಪನಿಗಳಿಗೆ ರತ್ನಗಂಬಳಿ ಹಾಸಲಾಯಿತು. ಇದನ್ನು ಬಳಸಿಕೊಂಡ ಕೋಕಾ ಕೋಲಾ, ಪೆಪ್ಸಿ, ನೆಸ್ಟ್ಲೆ ತರಹದ ಕಂಪನಿಗಳು ಭಾರತದ ಮಾರುಕಟ್ಟೆಗೆ ಬಂದವು.

ಇದಕ್ಕೆ ತಡೆ ಒಡ್ಡಲೆಂದು ವರ್ಷದ ಹಿಂದೆ ತಮಿಳುನಾಡು ಸರಕಾರ ಕೋಕಾ ಕೋಲಾ, ಪೆಪ್ಸಿಗೆ ರಾಜ್ಯದಲ್ಲಿ ನಿಷೇಧ ಹೇರಿತ್ತು. ಜತೆಗೆ ಅಂತರ್ಜಲವನ್ನು ಮಿತಿ ಮೀರಿ ಬಳಸುವ ಆರೋಪವನ್ನೂ ಎರಡೂ ಕಂಪನಿಗಳ ವಿರುದ್ಧ ಹೊರಿಸಲಾಗಿತ್ತು. ಆದರೆ ಮುಂದೆ ಮದ್ರಾಸ್‌ ಹೈಕೋರ್ಟ್‌ ನದಿಯಲ್ಲಿ ಸಾಕಷ್ಟು ನೀರಿದೆ ಎಂದು ಹೇಳಿ ಕಂಪನಿಗಳಿಗೆ ನೀರನ್ನು ಬಳಸಲು ಅವಕಾಶ ನೀಡಿ ನಿಷೇಧವನ್ನು ತೆರವುಗೊಳಿಸಿತ್ತು.

ಹೀಗೆ ಇಲ್ಲಿಯವರೆಗೆ ಭಾರತದಲ್ಲಿ ಕೋಕಾ ಕೋಲಾ ಮತ್ತು ಪೆಪ್ಸಿಕೋಗೆ ನಿಯಂತ್ರಣ ಹೇರುವ ಎಲ್ಲಾ ಯತ್ನಗಳು ವಿಫಲವಾಗಿವೆ. ಆದರೆ ಇದೀಗ ಜಾಗತಿಕ ಮಟ್ಟದಲ್ಲಿ ಎರಡೂ ಕಂಪನಿಗಳ ವಿರುದ್ದ ಭಾರೀ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದೇ ಸುಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಗಟ್ಟಿ ನಿಲುವು ತಾಳಿ ಎರಡೂ ಕಂಪನಿಗಳಿಗೆ ಗೇಟ್‌ ಪಾಸ್‌ ನೀಡಬೇಕಾಗಿದೆ. ಆಗ ಮಾತ್ರ ಅವರು ಪಡೆದು ಚಾಂಪಿಯನ್ಸ್‌ ಆಫ್‌ ದ ಅರ್ಥ್‌ ಪ್ರಶಸ್ತಿಗೆ ಒಂದು ಅರ್ಥ ಬರಲಿದೆ. ಇದಕ್ಕೆ ಅಂದು ಜಾರ್ಜ್‌ ಫೆರ್ನಾಂಡಿಸ್‌ ತೋರಿದ ಛಾತಿಯನ್ನು ಅವರು ಇವತ್ತು ತೋರಿಸಿದರೆ ಸಾಕಾಗುತ್ತದೆ.

ಇದರ ಜತೆಗೆ, ಭಾರತದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಎಷ್ಟರ ಮಟ್ಟಿಗೆ ಗಾಢವಾಗಿದೆ ಮತ್ತು ಅದಕ್ಕೆ ಪರಿಹಾರಗಳೇನು ಎಂಬ ವಿವರಗಳು ಇಲ್ಲಿವೆ.