#MeToo:  ಕನ್ನಡದ ಬರ್ಕಾ ದತ್‌ ಮಾಡುತ್ತೇನೆಂದು ಮನೆಗೆ ಕರೆದೊಯ್ದ ಸಂಪಾದಕರ ಪುರಾಣಂ!
COVER STORY

#MeToo: ಕನ್ನಡದ ಬರ್ಕಾ ದತ್‌ ಮಾಡುತ್ತೇನೆಂದು ಮನೆಗೆ ಕರೆದೊಯ್ದ ಸಂಪಾದಕರ ಪುರಾಣಂ!

ಬಾಸ್ ಕರೆದವರು “ಸಂಜೆ ಏನು ಕೆಲಸ?” ಎಂದರು. “ಏನಿಲ್ಲ ಸರ್, ಪಿಜಿಗೆ ಹೋಗಬೇಕು,” ಅಂದೆ. “ನನ್ನ ಮನೆಯ ಹತ್ತಿರ ಒಂದು ಹೋಟೆಲ್ ಇದೆ. ಅಲ್ಲಿಗೆ ಬಾ, ಒಳ್ಳೆಯ ಊಟ ಕೊಡಿಸುತ್ತೇನೆ,’’ ಎಂದರು. ಹೋಗಬಾರದು ಅಂದುಕೊಂಡರೂ...

ಇದನ್ನು ನಾನು ಬರೆಯುತ್ತಿರುವ ವೇಳೆಗೆ, ಅವತ್ತು ಅನುಭವಿಸಿದ ಅಸಹಾಯಕತೆಯೇ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಕೈ ಕಾಲು ತಣ್ಣಗಾದಂತೆ ಆಗುತ್ತದೆ. ವಿಚಿತ್ರ ಎಂದರೆ ನಾನು ಟಿವಿ ಚಾನಲ್‌ ಒಂದರಲ್ಲಿ ಕಾಪಿ ಎಡಿಟರ್; ಸ್ವಲ್ಪ ಸೀನಿಯರ್ ಕೂಡ. ದಿನಕ್ಕೆ ಸಾವಿರಾರು ಪದಗಳನ್ನು ನಾನಾ ವಿಚಾರಗಳಲ್ಲಿ ಬರೆಯುತ್ತೇನೆ. ಆದರೆ ನನ್ನದೇ ಬಗ್ಗೆ ಬರೆಯಲು ಹೊರಟಾಗ, ಅದೂ ನಾನು ಅನುಭವಿಸಿದ #MeToo ಘಟನೆ ವಿವರಿಸಲು ಹೊರಟಾಗ ಟೈಪಿಂಗ್ ಮಾಡಲು ಕೈ ನಡುಗುತ್ತಿದೆ...

ಇವತ್ತು ಪತ್ರಕರ್ತೆಯರು ಕೆಲಸ ಮಾಡುವ ಜಾಗಗಳಲ್ಲಿ, ಅಥವಾ ಕೆಲಸದ ಕಾರಣಕ್ಕೆ ಅವರುಗಳ ಬಾಸ್‌ಗಳ ಕಡೆಯಿಂದ ನಡೆದ ‘ಲೈಂಗಿಕ ದೌರ್ಜನ್ಯ’ಗಳನ್ನು ಮುಂದಿಡುವ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇಂಗ್ಲಿಷ್ ಪತ್ರಕರ್ತೆಯರಂತೂ ವೃತ್ತಿ ಬದುಕಿನಲ್ಲಿ ಯಾರು ಹೇಗೆಲ್ಲಾ ತಮ್ಮನ್ನು ನಡೆಸಿಕೊಂಡಿದ್ದರು ಎಂಬುದನ್ನು ವಿವರಿಸುತ್ತಿದ್ದಾರೆ. ಅದರ ಹಿಂದೆ #ನಾನೂಕೂಡ ಎಂದು ಹಲವರು ಹೊರಟಿದ್ದಾರೆ. ಈ ಸಮಯದಲ್ಲಿ ಪ್ರಾದೇಶಿಕ ಭಾ‍ಷೆಯೊಂದರ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವ ನನ್ನಂತವಳ ಅನುಭವವೂ ಅದರ ಜತೆಗಿರಲಿ ಎಂದು ಇದನ್ನು ಬರೆಯುತ್ತಿದ್ದೇನೆ. ಆದರೆ ನನಗೆ ಮಿತಿಗಳಿವೆ. ನಾನು ಯಾರು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಹಾಗೆಯೇ ನನ್ನ ಮೇಲೆ ಅವತ್ತು ‘ಲೈಂಗಿಕ ಕಿರುಕುಳ’ ಎಸಗಿದ ಸಂಪಾದಕ ಯಾರು ಎಂದು ಹೇಳುವುದಿಲ್ಲ. ಆದರೆ ಅವತ್ತು ನಡೆದಿದ್ದು ಏನು ಎಂಬುದನ್ನು ಪ್ರಾಮಾಣಿಕವಾಗಿ ವಿವರಿಸುತ್ತೇನೆ. ಈ ಮೂಲಕ ‘ಯಾರು ಯಾರನ್ನೋ ಇಟ್ಟುಕೊಂಡಿದ್ದಾರಂತೆ’ ಎಂಬ ಗಾಳಿ ಸುದ್ದಿಗಳ ಇನ್ನೊಂದು ಆಯಾಮವೂ ನಿಮ್ಮ ಗಮನಕ್ಕೆ ಬರಬಹುದು ಎಂಬ ಆಶಯದೊಂದಿಗೆ ಈ ಕತೆಯನ್ನು ಆರಂಭಿಸುತ್ತೇನೆ...

ನಾನು ಮಧ್ಯ ಕರ್ನಾಟಕದ, ಗಂಡನಿಂದ ವಿಚ್ಚೇದನ ಪಡೆದ ಒಂಟಿ ಮಹಿಳೆ. ಇನ್ನೂ ಮಕ್ಕಳಿಲ್ಲ. ವಯಸ್ಸು ಮುವತ್ತೂ ದಾಟಿಲ್ಲ. ಕುಟುಂಬದಲ್ಲಿಯೇ ಪತ್ರಕರ್ತರಾಗಿದ್ದರು. ನಾನೂ ಕೂಡ ಪತ್ರಕರ್ತೆಯಾಗಬೇಕು ಅಂದುಕೊಂಡೆ. ಮದುವೆ ಸಂಬಂಧ ಮುರಿದು ಬೀಳುವ ಮುನ್ನವೇ ಟೈಪಿಂಗ್ ಕಲಿತಿದ್ದೆ. ವರದಿ ತಯಾರಿಸುವುದು ಗೊತ್ತಿತ್ತು. ಬದುಕು ತಿರುವಿಗೆ ಬಂದು ನಿಂತಾಗ ಇದ್ದ ಕೌಶಲ್ಯವನ್ನೇ ಬಳಸಿಕೊಂಡು ನನ್ನ ತಾಲೂಕಿನಲ್ಲೇ ಬಿಡಿ ಸುದ್ದಿ ನೀಡುವ ವರದಿಗಾರಳಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಅಲ್ಲಿಂದ ಮುಂದೆ ಬೆಂಗಳೂರು ಎಂಬ ಮಾಯಾನಗರಿಯಲ್ಲಿ ಸುದ್ದಿ ವಾಹಿನಿಯೊಂದರ ಸಂದರ್ಶನಕ್ಕೆ ಬಂದು ಆಯ್ಕೆಯೂ ಆದೆ. ನನಗೆ ಡೆಸ್ಕ್‌ನಲ್ಲಿ ಕುಳಿತು ಕಾಪಿ ತಿದ್ದುವ ಕೆಲಸ ನೀಡಿದರು.

ನನ್ನ ವಾಹಿನಿಯ ಸಂಪಾದಕರು ಬಹಳ ರಸಿಕರು ಎಂದು ಸ್ನೇಹಿತೆಯರು ಮೊದಲ ದಿನವೇ ಹೇಳಿದರು. ಯಾವಾಗಲೂ ಅವರು ಕೃಷ್ಣನ ಕುರಿತು ತಮ್ಮ ಜ್ಞಾನ ಭಂಡಾರ ಹರಿಸದೆ ಮಾತು ನಿಲ್ಲಿಸಿದ್ದೇ ಇಲ್ಲ ಎಂದು ತಮಾಷೆ ಮಾಡಿಕೊಳ್ಳುತ್ತಿದ್ದರು. ಆದರೆ ನನಗೆ ಅವರ ಬಗ್ಗೆ ಗೌರವ ಇತ್ತು. ಅದಕ್ಕಿಂತ ಹೆಚ್ಚಾಗಿ ನನಗೆ ಸುದ್ದಿ ವಾಹಿನಿಯಲ್ಲಿ ಕೆಲಸ ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾದರಲ್ಲ ಎಂಬ ಅಭಿಮಾನ ಇತ್ತು. ಬಾಸ್ ಎಲ್ಲರನ್ನೂ ಮಾತನಾಡಿಸುವಂತೆ ನನ್ನನ್ನೂ ಮಾತನಾಡಿಸುತ್ತಿದ್ದರು. ಕೆಲವು ದಿನಗಳ ನಂತರ ನಂಬರ್ ಕೇಳಿ ಪಡೆದುಕೊಂಡರು. ಮೊದಲು ಗುಡ್‌ ನೈಟ್, ನಂತರ ಗುಡ್ ಮಾರ್ನಿಂಗ್ ಮೆಸೇಜ್‌ಗಳು ಶುರುವಾದವು.

ಕೆಲವು ದಿನಗಳಲ್ಲಿ ಬಾಸ್ ನನ್ನ ಬದುಕಿನ ಸರ್ವಸ್ವವೂ ಆದರು. ಹಾಗಂತ ನಾನು ಅವರ ಜತೆ ಮಲಗಲಿಲ್ಲ. ತಮ್ಮಲ್ಲಿ ಅಂತಹ ಭಾವನೆ ಇದೆ ಎಂಬುದನ್ನು ಅವರೂ ತೋರ್ಪಡಿಸಿಕೊಳ್ಳಲಿಲ್ಲ. ಹೊಸ ಊರಿನಲ್ಲಿ ಸ್ವತಂತ್ರವಾಗಿ ಕೆಲಸ ಹುಡುಕಿಕೊಂಡು ಬದುಕು ಕಟ್ಟಿಕೊಳ್ಳಲು ಇವರೇ ಮಾರ್ಗದರ್ಶಕರು ಎಂದುಕೊಳ್ಳದಿರಲು ನನಗೆ ಕಾರಣಗಳೇ ಇರಲಿಲ್ಲ. ಹೀಗಿರುವಾಗಲೇ ಮನೆಯಲ್ಲಿ ತಾಯಿ ಕಾಯಿಲೆಗೆ ಬಿದ್ದರು. ನನಗೆ ಅರ್ಜೆಂಟಾಗಿ 30 ಸಾವಿರ ಬೇಕಾಯಿತು. ಬೇರೆ ದಾರಿ ಕಾಣದೆ, ಬಾಸ್ ಹತ್ತಿರ ಸ್ಯಾಲರಿ ಅಡ್ವಾನ್ಸ್ ಆದರೂ ಕೊಡಿಸಿ ಎಂದೆ. ಅವರೇ ಹಣ ತೆಗೆದು ಕೊಟ್ಟರು; ಅವತ್ತಿಗೆ ಅವರ ಮೇಲೆ ನಿಜಕ್ಕೂ ತನ್ನ ತಂದೆಯ ಮೇಲಿದ್ದ ಗೌರವವೇ ಹುಟ್ಟಿತು.

ನಾನು ಹಣ ಪಡೆದುಕೊಂಡು ವಾರ ಕಳೆದಿತ್ತು ಅಷ್ಟೆ. ಊರಿಗೆ ಹೋಗಿ ಬಂದಿದ್ದೆ. ಬಾಸ್ ಕರೆದವರು “ಸಂಜೆ ಏನು ಕೆಲಸ?” ಎಂದರು. “ಏನಿಲ್ಲ ಸರ್, ಪಿಜಿಗೆ ಹೋಗಬೇಕು,” ಅಂದೆ. “ನನ್ನ ಮನೆಯ ಹತ್ತಿರ ಒಂದು ಹೋಟೆಲ್ ಇದೆ. ಅಲ್ಲಿಗೆ ಬಾ, ಒಳ್ಳೆಯ ಊಟ ಕೊಡಿಸುತ್ತೇನೆ,’’ ಎಂದರು. ಹೋಗಬಾರದು ಅಂದುಕೊಂಡರೂ, ಹೋಗದೆ ಇದ್ದರೆ ಎಂಬ ಭಯ ಹೋಟೆಲ್‌ವರೆಗೆ ಎಳೆದೊಯ್ದಿತು.

ಸಿಮೆಂಟ್ ಕಲರ್ ಟಾಪ್, ಕೆಳಗೆ ಜೀನ್ಸ್ ತೊಟ್ಟಿದ್ದೆ. ಬಾಸ್ ಬಂದರು, ಹೋಟೆಲ್ ಒಳಕ್ಕೆ ಕರೆದೊಯ್ದರು. ಅವರಿಗೆ ಡ್ರಿಂಕ್ಸ್ ಆರ್ಡರ್‌ ಮಾಡಿದರು. ನನಗೆ ಮೀನಿನ ಊಟ ಕೊಡಿಸಿದರು. ಏಳುವ ಹೊತ್ತಿಗೆ ಅವರು ತೂರಾಡಲು ಆರಂಭಿಸಿದ್ದರು. ನಾನೇ ಓಲಾ ಬುಕ್ ಮಾಡಿ, ಅವರ ಮನೆಗೆ ಕರೆದೊಯ್ದೆ. ಮನೆಯ ಎದುರಿಗೆ ಇಳಿಸಿ, ಒಳಕ್ಕೆ ಕರೆದೊಯ್ದೆ. ಒಳಕ್ಕೆ ಕಾಲುಡುತ್ತಲೇ ಮನೆಯಲ್ಲಿ ಒಂದು ನಾಯಿ ಬಂದು ಮೈಮೇಲೆ ಹಾರಲು ಶುರುಮಾಡಿತು. ನಾನು ಅದರ ಕಡೆಗೆ ಗಮನ ಹರಿಸುತ್ತಿದ್ದಂತೆ ಬಾಸ್ ಹಿಂದಿನಿಂದ ಹಿಡಿದು ಎಳೆದುಕೊಂಡರು. ಎದುರಿನ ಗೋಡೆಗೆ ಒರಗಿಸಿಕೊಂಡು ಎದೆ ಮುಟ್ಟಿದರು. ನನ್ನ ಮೈ ತಣ್ಣಗಾಗಿತ್ತು. ಒಂದು ಕ್ಷಣ ನಡೆದಿದ್ದು ಏನು ಎಂಬುದು ಅರ್ಥವಾಗುವ ಮೊದಲೇ, ಬಾಸ್ ಹಿಂದೆ ಹೆಜ್ಜೆ ಇಟ್ಟರು. “ಐ ಯಾಮ್ ಸಾರಿ” ಎಂದರು. ನಾನು ಹೊರಗೆ ಓಡಿ ಬಂದು ಹೊರಟಿದ್ದ ಓಲಾ ಹತ್ತಿ ಪಿಜಿ ಹಾದಿ ಹಿಡಿದೆ.

ಅಷ್ಟೆ. ಮುಂದೆ ಯಾವತ್ತೂ ಒಂಟಿಯಾಗಿ ಸಿಗುವಂತೆ ಅವರು ಕೇಳಲಿಲ್ಲ. ನಾನು ಕೂಡ ಅದರ ಬಗ್ಗೆ ಮಾತನಾಡಲಿಲ್ಲ. ನನಗೆ ಕೆಲಸದ ಭದ್ರತೆಯ ಪ್ರಶ್ನೆ ಅವತ್ತು, ಇವತ್ತಿಗೂ ಕಾಡುತ್ತಿದೆ. ನಾನು ಇಲ್ಲಿ ಕೆಲಸ ಮಾಡಲೇಬೇಕಿದೆ. ಏನೂ ನಡೆದಿಲ್ಲ ಎಂದುಕೊಳ್ಳಬೇಕಿದೆ. ಇಷ್ಟು ದಿನ ಯಾರಿಗೂ ಹೇಳಿಕೊಳ್ಳಲು ಆಗದ ಇದೊಂದು ಘಟನೆ ಇವತ್ತಿಗೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಆದರೆ ಬಾಸ್ ಒಮ್ಮೆ ನನ್ನನ್ನು ಕನ್ನಡದ ಬರ್ಕಾ ದತ್ ಮಾಡುತ್ತೇನೆ ಎಂದಿದ್ದರು. ಇವತ್ತಿಗೆ ಬರ್ಕಾ ದತ್ ಆಗುವ ಯಾವ ಆಸೆಯೂ ಉಳಿದಿಲ್ಲ.