samachara
www.samachara.com
ಅತಂತ್ರ ಸ್ಥಿತಿಯಲ್ಲಿ ಮಹಾಬಲೇಶ್ವರ: ಕೊನೆ ಕ್ಷಣದಲ್ಲಿ ರದ್ದಾದ ಗೋಕರ್ಣ ದೇವಸ್ಥಾನ  ಹಸ್ತಾಂತರ...
COVER STORY

ಅತಂತ್ರ ಸ್ಥಿತಿಯಲ್ಲಿ ಮಹಾಬಲೇಶ್ವರ: ಕೊನೆ ಕ್ಷಣದಲ್ಲಿ ರದ್ದಾದ ಗೋಕರ್ಣ ದೇವಸ್ಥಾನ ಹಸ್ತಾಂತರ...

ಕಳೆದ ಮೂರು ದಿನಗಳಲ್ಲಿ ನಡೆದಿರುವ ಬೆಳವಣಿಗೆಗಳು ಅಂದುಕೊಂಡಂತೆ ಮುಂದುವರಿದಿದ್ದರೆ ಇಷ್ಟೊತ್ತಿಗೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಕೀಲಿ ಕೈ ರಾಮಚಂದ್ರಾಪುರ ಮಠದ ಕೈಯಲ್ಲಿ ಇರಬೇಕಾಗಿತ್ತು. ಆದರೆ ಹಾಗೆ ಆಗಲಿಲ್ಲ.  

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಗೋಕರ್ಣ ಮಹಬಲೇಶ್ವರ ದೇವಸ್ಥಾನ ವಿವಾದ ಸದ್ಯಕ್ಕಂತೂ ಮುಗಿಯುವಂತೆ ಕಾಣುತ್ತಿಲ್ಲ. ಒಂದು ಕಡೆ ನ್ಯಾಯಾಲಯದಲ್ಲಿ ಪರ ವಿರೋಧದ ವಾದ ವಿವಾದಗಳು ನಡೆಯುತ್ತಿವೆ. ಇನ್ನೊಂದು ಕಡೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ಗೊಂದಲ ಮುಂದುವರಿದಿದ್ದು, ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಹಸ್ತಾಂತರಿಸಲು ನಿಗದಿಯಾಗಿದ್ದ ಕಾರ್ಯಕ್ರಮ ಅಂತಿಮ ಹಂತದಲ್ಲಿ ರದ್ದಾಗಿದೆ. ಈ ನಡೆ ಮಠದ ಭಕ್ತರನ್ನು ನಿರಾಸೆಗೆ ದೂಡಿದೆ.

ಕಳೆದ ಮೂರು ದಿನಗಳಲ್ಲಿ ನಡೆದಿರುವ ಬೆಳವಣಿಗೆಗಳು ಅಂದುಕೊಂಡಂತೆ ಮುಂದುವರಿದಿದ್ದರೆ ಇಷ್ಟೊತ್ತಿಗೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಕೀಲಿ ಕೈ ರಾಮಚಂದ್ರಾಪುರ ಮಠದ ಕೈಯಲ್ಲಿ ಇರಬೇಕಾಗಿತ್ತು. ಆದರೆ ಇಂದು ಮುಂಜಾನೆ ನಡೆದ ಮಿಂಚಿನ ಬೆಳವಣಿಗೆಯಲ್ಲಿ ಕೊನೆಯ ಕ್ಷಣದಲ್ಲಿ ಕೀಲಿ ಕೈ ಸರಕಾರದ ಬಳಿಯೇ ಉಳಿದುಕೊಂಡಿದೆ.

ಆಗಿದ್ದೇನು?

ಅಕ್ಟೋಬರ್‌ 3 ರಂದು ನ್ಯಾ. ಕುರಿಯನ್‌ ಜೋಸೆಫ್‌ ಮತ್ತು ನ್ಯಾ. ಎ. ಎಂ. ಖನ್ವಿಲ್ಕರ್‌ ಅವರಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ತನ್ನ ಹಳೆಯ ಆದೇಶವನ್ನು ಎತ್ತಿ ಹಿಡಿದಿತ್ತು. ಸ್ಪಷ್ಟೀಕರಣ ರೂಪದಲ್ಲಿ ‘ಸೆಪ್ಟಂಬರ್‌ 7 ರಂದು ನೀಡಿದ ಆದೇಶದಂತೆ ಅಂದಿನ ದಿನಾಂಕದಂದು ದೇವಸ್ಥಾನದ ಆಡಳಿತದಲ್ಲಿ ಇದ್ದ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವಂತೆ’ ಹೇಳಿತ್ತು. ಇದನ್ನು ಮತ್ತಷ್ಟು ವಿವರಿಸಿರುವ ನ್ಯಾಯಾಲಯ, “ಸೆಪ್ಟೆಂಬರ್‌ 18 ರಂದು ದೇವಸ್ಥಾನದ ಆಡಳಿತವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ನೇತೃತ್ವದ ಮೇಲುಸ್ತುವಾರಿ ಸಮಿತಿಗೆ ಸರಕಾರ ನೀಡಿದ್ದ ಆದೇಶ ರದ್ದಾಗುತ್ತದೆ,” ಎಂದು ಹೇಳಿತ್ತು.

ಈ ಸಂದರ್ಭದಲ್ಲೇ ದೇವಸ್ಥಾನದ ಆಡಳಿತವು ರಾಮಚಂದ್ರಪುರ ಮಠದ ಕೈಗೆ ಹಸ್ತಾಂತರವಾಗಲಿದೆ ಎಂಬ ಸುದ್ದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಠದ ಕಡೆಯವರು ಸಂಭ್ರಮಾಚರಣೆಯಲ್ಲೂ ತೊಡಗಿದ್ದರು. ಆದರೆ ಮುಜುರಾಯಿ ಇಲಾಖೆ ಅಧಿಕಾರಿ ಎಚ್‌ ಹಾಲಪ್ಪ ತಾವು ಆಗಸ್ಟ್‌ 30ರಂದೇ ಗೋಕರ್ಣದ ಚಾರ್ಜ್‌ ತೆಗೆದುಕೊಂಡಿರುವುದಾಗಿ ಹೇಳಿದ್ದರಿಂದ ಈ ಪ್ರಕರಣಕ್ಕೆ ಹೊಸ ಟ್ಟಿಸ್ಟ್‌ ಸಿಕ್ಕಿತ್ತು. ಹಿರಿಯ ವಕೀಲರೂ ದೇವಸ್ಥಾನವನ್ನು ಮಠಕ್ಕೆ ನೀಡಿ ಎಂದು ಸುಪ್ರೀಂ ಕೋರ್ಟ್‌ ಹೇಳಿಲ್ಲ ಎಂದೇ ವಾದಿಸಿದ್ದರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಮಾತ್ರ, "ಆದೇಶದ ಪ್ರತಿ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ,” ಎಂದು ಹೇಳಿದ್ದರು.

ಆದೇಶದ ಪ್ರತಿ ಓದಿ ಅಕ್ಟೋಬರ್ 6 ರಂದು ವಕೀಲರ ಹೇಳಿಕೆಗಳಿಗೆ ವ್ಯತಿರಿಕ್ತ ನಿರ್ಧಾರ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಕುಮಟಾ ಸಹಾಯಕ ಆಯುಕ್ತರು ಮತ್ತು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದದರು. ಪತ್ರದಲ್ಲಿ “ಸುಪ್ರೀಂ ಕೋರ್ಟ್‌ನ ಆದೇಶದಂತೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಸಂಪೂರ್ಣ ಆಡಳಿತವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಂತೆ ಮತ್ತು ಈ ಸಂಬಂಧ ವೀಡಿಯೋ ಸಹಿತ ಈ ಕಚೇರಿಗೆ ರಿಪೋರ್ಟ್‌ ಮಾಡುವಂತೆ ಸೂಚಿಸಲಾಗಿದೆ,” ಎಂದಿದ್ದರು.

ಜಿಲ್ಲಾಧಿಕಾರಿ ಕುಮಟಾದ ಸಹಾಯಕ ಆಯುಕ್ತರಿಗೆ ಅಕ್ಟೋಬರ್‌ 6ರಂದು ಬರೆದ ಪತ್ರ
ಜಿಲ್ಲಾಧಿಕಾರಿ ಕುಮಟಾದ ಸಹಾಯಕ ಆಯುಕ್ತರಿಗೆ ಅಕ್ಟೋಬರ್‌ 6ರಂದು ಬರೆದ ಪತ್ರ

ಅದರಂತೆ ರಾಮಚಂದ್ರಾಪುರದ ಆಡಳಿತಾಧಿಕಾರಿಗೆ ಪತ್ರ ಬರೆದಿದ್ದ ಕುಮಟಾದ ನೂತನ ಸಹಾಯಕ ಆಯುಕ್ತೆ ಪ್ರೀತಿ ಗೆಹ್ಲೋಟ್, “ಅಕ್ಟೋಬರ್‌ 9ರಂದು ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದ ಆಡಳಿತವನ್ನು ಮಠಕ್ಕೆ ಹಸ್ತಾಂತರಿಸಲಾಗುವುದು. ಅಂದು ಖುದ್ದು ಉಪಸ್ಥಿತರಿರುವಂತೆ ಕೋರಲಾಗಿದೆ,” ಎಂದಿದ್ದವರು.

ಪತ್ರದಲ್ಲಿ ತಿಳಿಸಿರುವಂತೆ ಮಂಗಳವಾರ ಬೆಳಿಗ್ಗೆ ದೇವಸ್ಥಾನ ಹಸ್ತಾಂತರ ಪ್ರಕ್ರಿಯೆ ಆರಂಭವಾಗಿತ್ತು. “ಚಿನ್ನ, ಬೆಳ್ಳಿ ವಸ್ತುಗಳನ್ನೆಲ್ಲಾ ತೂಕ ಮಾಡಿ ವಾಪಸ್‌ ಕೊಡುತ್ತಿದ್ದರು. ಎಲ್ಲಾ ಪ್ರಕ್ರಿಯೆಯೂ ಅಂತಿಮ ಹಂತಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ಎಸಿಯವರಿಗೆ ಕರೆಯೊಂದು ಬಂದಿದೆ. ಅದಾದ ಬಳಿಕ ಅವರು ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ,” ಎನ್ನುತ್ತಾರೆ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೇಶ್‌.

ಹೀಗೆ ಅಚಾನಕ್‌ ಆಗಿ ಮಠದ ಹಸ್ತಾಂತರ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಬಗ್ಗೆ ಪುನಃ ಮಠದ ಆಡಳಿತಾಧಿಕಾರಿಗೆ ಪತ್ರ ಬರೆದಿರುವ ಕುಮಟಾ ಎಸಿ‌, “ಕಾರಣಾಂತರಗಳಿಂದ ಸದ್ರಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಬಗ್ಗೆ ಸಹಕರಿಸಲು ಕೋರಿದೆ,” ಎಂದಿದ್ದಾರೆ. ಆದರೆ ಯಾವ ಕಾರಣಾಂತರಗಳಿಂದ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಹೀಗಿದ್ದೂ ಇದರ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡ ಇರಬಹುದು ಎಂದು ಮಠದ ವಕ್ತಾರರು ಅನುಮಾನಿಸಿದ್ದಾರೆ.

ಹಸ್ತಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಸಹಾಯಕ ಆಯುಕ್ತರು ಬರೆದ ಪತ್ರ
ಹಸ್ತಾಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಸಹಾಯಕ ಆಯುಕ್ತರು ಬರೆದ ಪತ್ರ

ಆದರೆ ಮೂಲಗಳ ಪ್ರಕಾರ ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಡ್ವೋಕೇಟ್ ಜನರಲ್ ಅಭಿಪ್ರಾಯ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಸಿಕ್ಕಿಲ್ಲ. ಈ ಕುರಿತು ಪ್ರತಿಕ್ರಿಯೆಗಾಗಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲಾಯಿತಾದರೂ ರಜೆಯ ಮೇಲಿರುವ ಅವರು ಕರೆಯನ್ನು ಸ್ವೀಕರಿಸಿಲ್ಲ.

ಹೀಗೆ ಗೋಕರ್ಣ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸುವ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಈ ಬೆಳವಣಿಗೆಯ ಬಗ್ಗೆ ಮಠದ ಅನುಯಾಯಿಗಳು ತಕರಾರುಗಳನ್ನು ತೆಗೆಯುತ್ತಿದ್ದು ಹಸ್ತಾಂತರ ಪ್ರಕ್ರಿಯೆಯ ಸುತ್ತ ಗರಿಗೆದರಿದ ಚಟುವಟಿಕೆಗಳಿಗೆ ಮಂಗಳವಾರ ಸಾಕ್ಷಿಯಾಯಿತು.