samachara
www.samachara.com
#MeToo ಪಟ್ಟಿಯ ಹೊಸ ಹೆಸರು; ಮಾಜಿ ಸಂಪಾದಕ ಎಂ. ಜೆ. ಅಕ್ಬರ್ c/o ಟೆಲಿಗ್ರಾಫ್!
COVER STORY

#MeToo ಪಟ್ಟಿಯ ಹೊಸ ಹೆಸರು; ಮಾಜಿ ಸಂಪಾದಕ ಎಂ. ಜೆ. ಅಕ್ಬರ್ c/o ಟೆಲಿಗ್ರಾಫ್!

ಕಳೆದ ಕೆಲವು ದಿನಗಳಿಂದ ದೇಶದ ನ್ಯೂಸ್‌ ರೂಂಗಳಲ್ಲಿ ಕುಳಿತ ಪ್ರಮುಖರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿವೆ. ಆ ಸರಣಿ ಆರೋಪಗಳೀಗ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಬುಡಕ್ಕೆ ಬಂದು ನಿಂತಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಅದು ಕೊಲ್ಕೊತ್ತಾ ಮೂಲದ ಪ್ರಖ್ಯಾತ ಇಂಗ್ಲೀಷ್‌ ಪತ್ರಿಕೆ. ಅದರ ಸಂಸ್ಥಾಪಕ ಸಂಪಾದಕರು ಸದ್ಯ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವರು. ಅವರ ವಿರುದ್ಧ ಈಗ #ಮೀಟೂ ಆರೋಪ ಕೇಳಿ ಬಂದಿದೆ. ಅದನ್ನು ಸ್ವತಃ ಅದೇ ಪತ್ರಿಕೆ ವರದಿ ಮಾಡಿದೆ. ಮತ್ತು ವರದಿಯಲ್ಲಿ ಅವರು ನಮ್ಮ ಪತ್ರಿಕೆಯ ಸಂಸ್ಥಾಪಕ ಸಂಪಾದಕರು ಎಂದು ದಪ್ಪ ಅಕ್ಷರಗಳಲ್ಲಿ ಬರೆದುಕೊಂಡಿದೆ. ಕಳೆದ ಹಲವು ದಿನಗಳಲ್ಲಿ ವಿಧ ವಿಧದ ಮೀಟೂ ಆರೋಪಗಳು ಕೇಳಿ ಬಂದಿವೆ. ಅವುಗಳಲ್ಲಿ ಈ ಆರೋಪ ವಿಶೇಷವಾದುದು. ಇನ್ನೊಂದು ಅರ್ಥದಲ್ಲಿ ಇದು ‘ಹೈಟ್ ಆಫ್ ಮೀಟೂ'; ಪತ್ರಿಕೋದ್ಯಮದಲ್ಲಿ ಮಾತ್ರ ಸಾಧ್ಯ!

ಕಳೆದ ಕೆಲವು ದಿನಗಳಿಂದ ದೇಶದ ನ್ಯೂಸ್‌ ರೂಂಗಳಲ್ಲಿ ಕುಳಿತ ಪ್ರಮುಖರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿ ಬಂದಿವೆ. ಆ ಸರಣಿ ಆರೋಪಗಳೀಗ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಬುಡಕ್ಕೆ ಬಂದು ನಿಂತಿದೆ. ಮಾಜಿ ಪತ್ರಕರ್ತ ಹಾಗೂ ಹಾಲಿ ವಿದೇಶಾಂಗ ಖಾತೆ ರಾಜ್ಯ ದರ್ಜೆ ಸಚಿವ ಎಂ. ಜೆ. ಅಕ್ಬರ್‌ ವಿರುದ್ಧ ಪತ್ರಕರ್ತೆಯೊಬ್ಬರು ಧ್ವನಿ ಎತ್ತಿದ್ದಾರೆ.

“ನನ್ನ ಈ ತುಣುಕನ್ನು ನನ್ನ ಎಂಜೆ ಅಕ್ಬರ್ ಕಥೆಯೊಂದಿಗೆ ಪ್ರಾರಂಭಿಸಿದೆ. ಆತ ಏನೂ ಮಾಡಲಿಲ್ಲ ಎಂಬ ಕಾರಣಕ್ಕೆ ಆತನ ಹೆಸರನ್ನು ಹೇಳುತ್ತಿಲ್ಲ. ಆದರೆ ಇವರ ಬಗ್ಗೆ ಹಲವು ಮಹಿಳೆಯರ ಬಳಿ ಕೆಟ್ಟ ಕಥೆಗಳಿವೆ,” ಎಂದು ಪ್ರಿಯಾ ರಮಣಿ ಟ್ಟೀಟ್‌ ಮಾಡಿದ್ದಾರೆ. 2017ರಲ್ಲಿ ವೋಗ್‌ ಮ್ಯಾಗಜಿನ್‌ಗೆ ತಾವು ಬರೆದ ಬರಹವನ್ನು ಉಲ್ಲೇಖಿಸಿ ಅವರು ಈ ಟ್ಟೀಟ್‌ ಮಾಡಿದ್ದಾರೆ.

‘ಡಿಯರ್‌ ಮೇಲ್‌ ಬಾಸ್‌’ ಎಂಬ ಒಕ್ಕಣೆಯೊಂದಿಗೆ ಅವರ ವೋಗ್‌ ಮ್ಯಾಗಜೀನ್‌ನ ಬಹಿರಂಗ ಪತ್ರದ ಲೇಖನ ಆರಂಭವಾಗುತ್ತದೆ. 1994ರಲ್ಲಿ ಮುಂಬೈನಲ್ಲಿ ನಡೆದ ಉದ್ಯೋಗ ಸಂದರ್ಶನಕ್ಕೆ ಸಂಬಂಧಿಸಿದಂತೆ ಈ ಬಹಿರಂಗ ಪತ್ರವನ್ನು ಅವರು ಕಳೆದ ವರ್ಷ ಬರೆದಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರ್ವೆ ವಿನ್‌ಸ್ಟೆನ್‌ರಿಂದ ಆರಂಭವಾದ #ಮೀಟೂ ಅಭಿಯಾನದ ಸಂದರ್ಭದಲ್ಲೇ ಈ ಲೇಖನ ಪ್ರಕಟವಾಗಿತ್ತು. ಸಂದರ್ಶನ ನಡೆದಾಗ ‘ಬಾಸ್‌’ ವಯಸ್ಸು 43 ವರ್ಷ ಎಂದು ಅವರು ಉಲ್ಲೇಖಿಸಿದ್ದರು.

“ ಆ ರಾತ್ರಿ ನಾನು ತಪ್ಪಿಸಿಕೊಂಡೆ. ನೀವು ನನ್ನನ್ನು ಕೆಲಸಕ್ಕೆ ಸೇರಿಸಿಕೊಂಡಿರಿ. ಹಲವು ತಿಂಗಳುಗಳ ಕಾಲ ನಿಮಗಾಗಿ ಕೆಲಸ ಮಾಡಿದೆ. ಆದರೆ ನಿಮ್ಮ ಜತೆ ಮತ್ತೆಂದೂ ರೂಮಿನಲ್ಲಿ ಒಬ್ಬಂಟಿಯಾಗಿ ಇರಲಿಲ್ಲ,” ಎಂದು ವಿವರಿಸಿದ್ದಾರೆ. ಈ ಆರೋಪಗಳು ಇಷ್ಟಕ್ಕೇ ನಿಂತಿಲ್ಲ. ಮತ್ತೋರ್ವ ಅನಾಮಿಕ ಪತ್ರಕರ್ತೆ ಫಸ್ಟ್‌ಪೋಸ್ಟ್‌ಗೆ ತನ್ನ ಕಥೆಯನ್ನು ಹೇಳಿದ್ದು, ಆಕೆಯೂ ಮುಂಬೈನ ಹೊಟೇಲ್‌ ರೂಂನಲ್ಲಿ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ರಾಷ್ಟ್ರೀಯ ದೈನಿಕವೊಂದರ ಸಂಪಾದಕರ ಮೇಲೆ ಆರೋಪ ಮಾಡಿದ್ದಾರೆ. ಬರಹಗಾರ್ತಿ ಸಂಪಾದಕರ ಹೆಸರನ್ನು ಉಲ್ಲೇಖಿಸಿಲ್ಲವಾದರೂ, ಅವರು ಪ್ರಮುಖ ಸರಕಾರಿ ಹುದ್ದೆಯನ್ನು ಹೊಂದಿದ್ದಾರೆ ಎಂದಿದ್ದಾರೆ.

“ನಾನು ಈ ವಾತಾವರಣದಲ್ಲಿ ಅವರ ಹೆಸರನ್ನು ಹೇಳಲಾಗದು. ಏಕೆಂದರೆ ಅವರ ಪ್ರಮುಖ ಕೆಲಸದಲ್ಲಿದ್ದಾರೆ. ತಾನು ಸುರಕ್ಷಿತನಾಗಿದ್ದೇನೆಂದು ಅವರು ನಂಬಿದಂತೆ ಕಾಣಿಸುತ್ತದೆ,” ಎಂದು ಹೇಳಿದ್ದಾರೆ. ಅವರು ಅಕ್ಬರ್‌ ಹೆಸರನ್ನು ಉಲ್ಲೇಖಿಸಿಲ್ಲವಾದರೂ  ಪ್ರಿಯಾ ರಮಣಿ ಆರೋಪ ಮತ್ತು ಇದರಲ್ಲಿ ಸಾಮ್ಯತೆಗಳಿದ್ದು ಎಂ.ಜೆ. ಅಕ್ಬರ್‌ ಕುರಿತಾಗಿಯೇ ಆರೋಪ ಮಾಡಿರುವಂತೆ ತೋರುತ್ತದೆ. ಇದಕ್ಕೆ ಇನ್ನೂ ಹಲವರು ಧ್ವನಿ ಗೂಡಿಸಿತ್ತು, ಕೊಲ್ಕೊತ್ತಾದ ‘ತಾಜ್‌ ಬೆಂಗಾಲ್‌’ನಲ್ಲಿ 1995ರಲ್ಲಿ ನನಗೂ ಹೀಗೆ ನಡೆದಿತ್ತು ಎಂದು ಶುಮಾ ರಾಹಾ ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಹಲವು ಸಂಪಾದಕರ ವಿರುದ್ಧ ಇದೇ ರೀತಿಯ ಆರೋಪಗಳು ಕೇಳಿ ಬಂದಿದ್ದವು. ಅವುಗಳಲ್ಲಿ ಅತ್ಯಂತ ಪ್ರಮುಖ ಆರೋಪ ಇದು. 1970-80ರ ಕಾಲದಲ್ಲಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದ ಎಂ.ಜೆ. ಅಕ್ಬರ್‌  ‘ಸೆಲೆಬ್ರಿಟಿ ಪತ್ರಕರ್ತ’ರಾಗಿ ಗುರುತಿಸಿಕೊಂಡಿದ್ದರು. ಏಷಿಯನ್‌ ಏಜ್, ದಿ ಟೆಲಿಗ್ರಾಫ್‌ ರೀತಿಯ ಹಲವು ಪತ್ರಿಕೆಗಳನ್ನು ಅವರೇ ಆರಂಭಿಸಿದ್ದರು. ಇವುಗಳಲ್ಲಿ ಟೆಲಿಗ್ರಾಫ್‌ನಲ್ಲಿ ಅವರು 1989ರವರಗೆ ಸಂಪಾದಕರಾಗಿ ಮುಂದುವರಿದಿದ್ದರು.

ಟೆಲಿಗ್ರಾಫ್‌ ಇವತ್ತಿಗೆ ಭಿನ್ನ ಹಾದಿಯ ಪತ್ರಿಕೋದ್ಯಮವಾಗಿ ಭಾರತದಲ್ಲಿ ಗುರುತಿಸಿಕೊಂಡಿದೆ. ತನ್ನ ಹೆಡ್ಲೈನ್‌ಗಳ ಕಾರಣ ಈ ಪತ್ರಿಕೆ ಆಗಾಗ ಸುದ್ದಿಗೆ ಗ್ರಾಸವಾಗುತ್ತಿರುತ್ತದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ‘ಆಂಟಿ ನ್ಯಾಷನಲ್‌’ ಎಂದು ಪತ್ರಿಕೆ ಕರೆದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಂಥಹದ್ದೊಂದು ಬೋಲ್ಡ್‌ ನಡೆಗಳ ಇಟ್ಟುಕೊಂಡ ಬಂದ ಕೋಲ್ಕತ್ತಾ ಮೂಲದ ಟೆಲಿಗ್ರಾಫ್‌ ಇಂದು ತನ್ನ ಸಂಸ್ಥಾಪಕ ಸಂಪಾದಕರ ವಿರುದ್ಧವೇ ಬಿಚ್ಚು ಮನಸ್ಸಿನಿಂದ ಮೀಟೂ ಆರೋಪದ ಬಗ್ಗೆ ವರದಿ ಮಾಡಿದೆ.