samachara
www.samachara.com
‘ರೌಡಿ ರಂಗ’ನ ಸಾವಿಗೆ ಮರುಗುವವರಿಗಿಂತ ನ್ಯಾಯ ಕೊಡಿಸುವವರು ಬೇಕಾಗಿದ್ದಾರೆ...
COVER STORY

‘ರೌಡಿ ರಂಗ’ನ ಸಾವಿಗೆ ಮರುಗುವವರಿಗಿಂತ ನ್ಯಾಯ ಕೊಡಿಸುವವರು ಬೇಕಾಗಿದ್ದಾರೆ...

ಇಂತಹ ಸಾವುಗಳನ್ನು ಹುಡುಕಿಕೊಂಡು ಹೊರಟರೆ ಮೊದಲು ಎದುರಾಗುವುದು ವ್ಯವಸ್ಥೆಯೊಳಗಿನ ಲೋಪಗಳು. ಎರಡು ಸರಕಾರಿ ಇಲಾಖೆಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಒಂದು ಆನೆಯನ್ನು ನಮ್ಮ ಜತೆ ಇವತ್ತು ಉಳಿಸಿಕೊಳ್ಳಬಹುದಿತ್ತು. 

ವಸಂತ ಕೊಡಗು

ವಸಂತ ಕೊಡಗು

ಇದು ಕೊಂದವರೇ ಮರುಕು ಪಡುಬೇಕಾದ ಸುದ್ದಿ. ಹಾಗೆಯೇ, ಸಾವಿನ ಸೂತಕದ ಜತೆ ಆತ್ಮಾವಲೋಕನಕ್ಕೆ ಇಳಿಯಬೇಕಾದ ಸಮಯ ಕೂಡ. ಸೋಮವಾರ ಬಸ್ ಢಿಕ್ಕಿಯಾಗಿ ಅರಣ್ಯ ಇಲಾಖೆಯ ಸಾಕಾನೆ ರೌಡಿ ರಂಗ ಮೃತಪಟ್ಟಿದ್ದಾನೆ. ಇದು ವನ್ಯ ಪ್ರೇಮಿಗಳಿಗೆ ಮಾತ್ರವಲ್ಲ, ಸಾವಿನ ಸುದ್ದಿ ತಿಳಿದ ಸಾಮಾನ್ಯರಿಗೂ ದುಃಖವನ್ನು ಉಂಟು ಮಾಡಿದೆ. ಮರುಕು ವ್ಯಕ್ತಪಡಿಸಬೇಕಾದ ವೇಳೆಯಲ್ಲಿ, ಯಾಕೆ ಸಾಕಾನೆಯೊಂದು ರಸ್ತೆ ನಡುವೆ ಅಪಘಾತಕ್ಕೆ ಈಡಾಯಿತು ಎಂದು ನೋಡಲು ಹೊರಟರೆ, ಮತ್ತದೇ ವ್ಯವಸ್ಥೆಯ ಲೋಪಗಳು ಕಣ್ಣಿಗೆ ಬೀಳುತ್ತವೆ.

ರೌಡಿ ರಂಗ ಮೂಲತಃ ಬನ್ನೇರುಘಟ್ಟದವ. ಬನ್ನೇರುಘಟ್ಟ ಅರಣ್ಯದಲ್ಲಿ ಸ್ವಚ್ಚಂದವಾಗಿ ವಿಹರಿಸುತಿದ್ದ. ಎರಡು ವರ್ಷಗಳ ಕೆಳಗೆ ಈತ ಇಲ್ಲಿ ಪುಂಡಾಟ ಆರಂಭಿಸಿದ. ಅಕ್ಕ ಪಕ್ಕದ ಗ್ರಾಮಸ್ಥರಿಗೆ ಉಪಟಳ ನೀಡಲಾರಂಭಿಸಿದ. ಕೊನೆಗೆ ಈತನ ಕಾಟ ತಾಳಲಾರದೆ ಗ್ರಾಮಸ್ಥರ ಒತ್ತಾಯದ ಮೇರೆಗೆ ಆನೆಯನ್ನು ಸೆರೆ ಹಿಡಿಯಲಾಗಿತ್ತು. ಇಂತಹ ಒಂಟಿ ಪುಂಡ ಆನೆಗಳ ಕಾಟ ರಾಜ್ಯದ ಹಲವು ಭಾಗಗಳಲ್ಲಿದೆ. ಅದಕ್ಕೆ ಸೆರೆ ಹಿಡಿಯುವುದು, ಪಳಗಿಸುವುದು ಮಾತ್ರವೇ ಪರಿಹಾರ ಎಂದು ಇಲಾಖೆ, ಜನ ಎಲ್ಲರೂ ನಂಬಿಕೊಂಡಿದ್ದಾರೆ. ರಂಗನ ವಿಚಾರದಲ್ಲೂ ಅದೇ ನಡೆದಿತ್ತು.

ಅವತ್ತು ಕಾಡಿನಲ್ಲಿ ಸೆರೆ ಹಿಡಿದ ರಂಗನನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪದಲ್ಲೇ ಇರುವ ಮತ್ತಿಗೋಡು ಆನೆ ಶಿಬಿರದಲ್ಲಿ ಆನೆಗಳನ್ನು ಪೋಷಿಸುವ ಕೇಂದ್ರಕ್ಕೆ ತರಲಾಗಿತ್ತು. ಕಟ್ಟು ಮಸ್ತಾಗಿದ್ದ ರಂಗ ಸ್ವಭಾವತಃ ರೌಡಿ ನಡವಳಿಕೆ ಹೊಂದಿದ್ದ; ಹೀಗಾಗಿ ರೌಡಿ ರಂಗನಾದ. ತಾನು ನಡೆದಿದ್ದೇ ಹಾದಿ ಎನ್ನುತ್ತಿದ್ದ ರಂಗನನ್ನು ಮತ್ತಿಗೋಡು ಆನೆ ಕೇಂದ್ರದಲ್ಲಿ ಪಳಗಿಸಲಾಯಿತು. ಹೀಗಾಗಿ ತನ್ನ ರೌಡಿ ಚಟುವಟಿಕೆಯನ್ನೆಲ್ಲಾ ಬಿಟ್ಟು ಸುಧಾರಣೆಗೊಂಡಿದ್ದ. ವಯಸ್ಸು ಕೂಡ ಮಾಗಿಸಿತ್ತು. ಮತ್ತಿಗೋಡಿನ ಸುತ್ತಮುತ್ತಾ ತಿರುಗಾಡುತ್ತಾ, ಮೇಯುತ್ತಾ ಹಾಯಾಗಿದ್ದ.

ಹೀಗಿರುವಾಗಲೇ, ಸೋಮವಾರ ಮತ್ತಿಗೋಡು ಸಮೀಪದಲ್ಲೇ ಹಾದು ಹೋಗುವ ಹೆದ್ದಾರಿಯಲ್ಲಿ ಆತ ಹೆಣವಾದ. ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಹಾಗೂ ವಿರಾಜಪೇಟೆ ವಿಭಾಗದ ತಿತಿಮತಿ ವಲಯದ ನಡುವೆ ಸುಮಾರು 8 ಕಿಲೋಮೀಟರ್ ರಾಜ್ಯ ಹೆದ್ದಾರಿಯೊಂದು ಹಾದು ಹೋಗುತ್ತದೆ. ಇದು ಪ್ರವಾಸಿ ಬಸ್‌ಗಳಿಂದ ಹಿಡಿದು ಕೇರಳ ಸಂಪರ್ಕಕ್ಕೆ ಇರುವ ಪ್ರಮುಖ ರಸ್ತೆಯಾಗಿದೆ.

ಇದೇ ಹೆದ್ದಾರಿಯಲ್ಲಿ ಬಂದ ಬಸ್‌ ಒಂದು ರಂಗನಿಗೆ ಕತ್ತಲಿನಲ್ಲಿ ಗುದ್ದಿದೆ. ಅಪಘಾತವಾಗುವ ಮುನ್ನ ವಾಹನದ ವೇಗ ಎಷ್ಟಿತ್ತು ಎಂದರೆ, ಬಸ್‌ನ ಮುಂಭಾಗ ನಜ್ಜು ಗುಜ್ಜಾಗಿ ಹೋಗಿದೆ. ರಂಗನ ಬೆನ್ನು ಮೂಳೆ ಮುರಿದಿದೆ. ತನಗೆ ಬಸ್‌ ಗುದ್ದಿದ ಸಿಟ್ಟಿನಲ್ಲಿ ಎರಡು ಮೂರು ಬಾರಿ ರಂಗ ತನ್ನ ಕೋರೆಗಳಿಂದ ಬಸ್‌ನ ಎಡ ಭಾಗಕ್ಕೆ ತಿವಿದು, ಗುದ್ದಿ ರೋಷ ತೀರಿಸಿಕೊಂಡಿದ್ದಾನೆ. ನಂತರ ಸಮೀಪದಲ್ಲಿ ನಿತ್ರಾಣಗೊಂಡು ಬಿದ್ದು ಸತತ 4 ಘಂಟೆಗಳ ಜೀವನ್ಮರಣದ ಹೋರಾಟ ನಡೆಸಿ ಬೆಳಿಗ್ಗಿನ ಜಾವ ಪ್ರಾಣ ಬಿಟ್ಟಿದ್ದಾನೆ.

ನೇರ ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ಬಂದು ಗುದ್ದಿದ ಖಾಸಗಿ ಬಸ್‌
ನೇರ ರಸ್ತೆಯಲ್ಲಿ ಅಪರಿಮಿತ ವೇಗದಲ್ಲಿ ಬಂದು ಗುದ್ದಿದ ಖಾಸಗಿ ಬಸ್‌

ಆತನ ಅದೃಷ್ಟ ಚೆನ್ನಾಗಿದ್ದಿದ್ದರೆ ಇಷ್ಟೊತ್ತಿಗೆ ರಂಗ ಮೈಸೂರಿನಲ್ಲಿ ಇರುತ್ತಿದ್ದ. ದಸರಾದಲ್ಲಿ ಭಾಗವಹಿಸಲು ಹೋಗಬೇಕಾಗಿದ್ದ ರಂಗನನ್ನು ಕೊನೆಯ ಕ್ಷಣದಲ್ಲಿ ಕೈ ಬಿಡಲಾಗಿತ್ತು. ಒಂದೊಮ್ಮೆ ರಂಗ ಹೋಗಿದ್ದರೆ ಇವತ್ತು ರಾಜ ಮರ್ಯಾದೆಯಲ್ಲಿ ಮೈಸೂರಿನ ಬೀದಿಗಳಲ್ಲಿ ಸುತ್ತಾಡುತ್ತಿದ್ದ. ಆದರೆ ಹೆದ್ದಾರಿಯಲ್ಲಿ ಹೆಣವಾಗಿದ್ದಾನೆ.

ಈ ಸಾವಿಗೆ ಹೊಣೆ ಯಾರು?

ರಂಗ ಸಾವನ್ನಪ್ಪಿದ ಅರಣ್ಯ ಪ್ರದೇಶ ತಿತಿಮತಿ ವಲಯದಲ್ಲಿದೆ. ಇಲ್ಲಿ ಕಾಡಾನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಸಾಕಷ್ಟು ಕಾಡು ಪ್ರಾಣಿಗಳು ವಾಸಿಸುತ್ತವೆ. ಹಗಲೂ ಪ್ರಾಣಿಗಳು ಕಂಡು ಬರುತ್ತವಾದರೂ ರಾತ್ರಿ ಹೊತ್ತಿನಲ್ಲಿ ಅವುಗಳ ಓಡಾಟ ಜಾಸ್ತಿ. ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಇಂಥಹ ಮಾರ್ಗದಲ್ಲಿ ರಾತ್ರಿ ಹೊತ್ತು ಸಂಚಾರ ನಿಷೇಧ ವಿಧಿಸಬೇಕಿದೆ. ಇದೇ ಕಾರಣಕ್ಕೆ ಪ್ರಾಣಿಗಳ ಓಡಾಟ ಹೆಚ್ಚಿರುವ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧವಿದೆ. . ಆದರೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿಲ್ಲ. ಜತೆಗೆ ಇದು ಕೇರಳ – ಮೈಸೂರು ಸಂಪರ್ಕ ಕಲ್ಪಿಸುವ ಹೆದ್ದಾರಿ ಆಗಿರುವುದರಿಂದ ರಾತ್ರಿ ವೇಳೆಯಲ್ಲಿ ಸಾಕಷ್ಟು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ವಿಪರ್ಯಾಸವೆಂದರೆ ಹೀಗಿದ್ದೂ ಎಂಟು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕೇವಲ ಒಂದೇ ಒಂದು ವೇಗ ನಿಯಂತ್ರಕ ಉಬ್ಬು ಇದೆ. ಆನೆಚೌಕೂರು ಗೇಟ್ ಬಳಿ ಮಾತ್ರ ಈ ಉಬ್ಬು ಇದ್ದು ಉಳಿದೆಡೆ ನೇರ ರಸ್ತೆ ಇರುವುದರಿಂದ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತವೆ. ಇದೇ ರೀತಿ ಸೋಮವಾರ ವಿಪರೀತ ವೇಗದಲ್ಲಿ ಸಂಚರಿಸಿದ ಬಸ್‌ ಗುದ್ದಿ ರಂಗ ಸಾವನ್ನಪ್ಪಬೇಕಾಯಿತು.

ಹಾಗಂಥ ಇದೆಲ್ಲಾ ಈ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳಿಗೆ ವಾಹನಗಳಿಂದ ಅಪಾಯವಿದೆ ಎಂಬುದು ಅರಣ್ಯ ಇಲಾಖೆಗೆ ಗೊತ್ತಿಲ್ಲ ಎಂದಲ್ಲ. ಈ ಹಿಂದೆ 2015 ಜೂನ್ 18ರಂದು ಕಾಡುಕೋಣವೊಂದು ಇದೇ ರಸ್ತೆಯಲ್ಲಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದು ಮೃತಪಟ್ಟಿತ್ತು. ಬಳಿಕ, “ಜೂನ್‌ 23ರಂದೇ ನಾವು ರಸ್ತೆ ಉಬ್ಬು ನಿರ್ಮಿಸುವಂತೆ ಹುಣಸೂರು ಹಾಗೂ ಕೊಡಗಿನ ಲೋಕೋಪಯೋಗಿ ಅಧಿಕಾರಿಗಳಿಗೆ ಪತ್ರ ಬರೆದು ಪ್ರತ್ಯೇಕ ಮನವಿ ಸಲ್ಲಿಸಿದೆವು. ಆದರೆ ಈವರೆಗೆ ಯಾವುದೇ ಪ್ರಗತಿಯಾಗಿಲ್ಲ,” ಎನ್ನುತ್ತಾರೆ ಹುಣಸೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕುಮಾರ್.

ಮತ್ತೊಂದೆಡೆ ವನ್ಯಜೀವಿ ವಲಯದಲ್ಲಿ ವಾಹನಗಳು 30 ಕಿ. ಮೀ. ವೇಗದಲ್ಲಿ ಮಾತ್ರ ಸಂಚರಿಸಬೇಕು ಎಂಬ ನಿಯಮವಿದೆ. ಈ ಸಂಬಂಧ ರಸ್ತೆ ಬದಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಅದು ನೋಡುವುದಕ್ಕೆ ಮಾತ್ರ ಸೀಮಿತವಾಗಿದೆ! ಅತೀ ವೇಗದಲ್ಲಿ ಹೋಗುವ ವಾಹನಗಳ ವಿರುದ್ಧ ಈವರೆಗೆ ಎಲ್ಲೂ, ಯಾವುದೇ ರೀತಿಯ ಕ್ರಮ ಜರುಗಿಸಿಲ್ಲವಾದ್ದರಿಂದ ಅದನ್ನು ಪಾಲಿಸಲು ಯಾರೂ ಮುಂದಾಗಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮತ್ತಿಗೋಡಿನ ಮಾವುತ ಅಹಮ್ಮದ್ ಅಶ್ರಫ್, “ಕ್ಯಾಂಪ್‍ನ ಆನೆಗಳು ಹಗಲು ಹೊತ್ತಲ್ಲಿ ಟ್ರೈನಿಂಗ್ ಮತ್ತಿತರ ಕೆಲಸದಲ್ಲಿ ತೊಡಗಿರುತ್ತವೆ. ಹೀಗಾಗಿ ರಾತ್ರಿ ಹೊತ್ತು ಸರಪಳಿ ಹಾಕಿ ಮೇಯಲು ಬಿಡುತ್ತೇವೆ. ಹೀಗೆ ಹೊರಗೆ ಬಿಟ್ಟಾಗ ಹಲವು ಸಂದರ್ಭದಲ್ಲಿ ಆನೆಗಳು ರಸ್ತೆ ದಾಟಿ ಅರಣ್ಯಕ್ಕೆ ಹೋಗುತ್ತವೆ. ಅಂಥ ಜಾಗಗಳಲ್ಲಿ ಹಂಪ್ ಮಾಡಿದ್ರೆ ಅಪಘಾತ ಆಗುವುದನ್ನು ತಪ್ಪಿಸಬಹುದು,” ಎನ್ನುತ್ತಾರೆ. ವಾಹನಗಳ ವೇಗಕ್ಕೆ ಮಿತಿ ಹೇರಬೇಕು ಎಂಬ ಬೇಡಿಕೆಯನ್ನು ಪ್ರಸನ್ನ ಕುಮಾರ್‌ ಕೂಡ ಮುಂದಿಡುತ್ತಾರೆ. ಆದರೆ ಅದನ್ನು ಪಾಲಿಸುವಂತೆ ಮಾಡುವವರು ಯಾರು ಎಂಬುದೇ ಪ್ರಶ್ನೆಯಾಗಿದೆ.

ಮುಂದೆ ಇಂಥಹ ಅನಾಹುತಗಳಾಗದಂತೆ ಅಧಿಕಾರಿಗಳು ಮತ್ತು ಇಲಾಖೆ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಗೌರವ ವನ್ಯಜೀವಿ ಪರಿಪಾಲಕ ಬೋಸ್ ಮಾದಪ್ಪ. “ಅರಣ್ಯ ಪ್ರದೇಶದಲ್ಲಿ ರಸ್ತೆಗಳಲ್ಲಿ ಹಾದು ಹೋಗುವಾಗ ಪ್ರಾಣಿಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಮುಂದೆ ಇಂಥಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಗಮನಕ್ಕೆ ತರಲಾಗಿದೆ. ನಾನು ಕೂಡಾ ವೈಯಕ್ತಿಕವಾಗಿ ಸಿಸಿಎಫ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ. ಈ ಸಲವೂ ಆಗದಿದ್ದಲ್ಲಿ ನ್ಯಾಯಾಲಯದ ಮೂಲಕ ಹೋರಾಟ ಮಾಡಬೇಕಾಗುತ್ತದೆ,” ಎಂದರು.

ಕೊನೆಗೆ ನ್ಯಾಯಾಲಯವೊಂದೆ ಉಳಿದಿರುವ ಮಾರ್ಗವಾಗಿದೆ. ಒಂದು ವ್ಯವಸ್ಥೆ ಬದುಕಿದ್ದೂ ತನ್ನೊಳಗಿನ ಅಂತರಾತ್ಮವನ್ನು ಕಳೆದುಕೊಂಡ ಪರಿಣಾಮ ಇಂತಹ ಸಾವುಗಳಿಗೆ ಕಿವಿಯಾಗುತ್ತಲೇ ಬದುಕಬೇಕಿದೆ.