samachara
www.samachara.com
ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ ಕೊಡಗಿನ 30 ಸಾವಿರಕ್ಕೂ ಅಧಿಕ  ಕಾಫಿ ಬೆಳೆಗಾರರು 
COVER STORY

ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ ಕೊಡಗಿನ 30 ಸಾವಿರಕ್ಕೂ ಅಧಿಕ ಕಾಫಿ ಬೆಳೆಗಾರರು 

ಕಾಫಿಯ ತವರೂರಿನ ಸಾವಿರಾರು ಬೆಳೆಗಾರರು ವಿಕೋಪದಿಂದ ಸಂತ್ರಸ್ಥರಾಗಿದ್ದು ಕಾಫಿ ಮಂಡಳಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಕೂತಿದ್ದಾರೆ.

ವಸಂತ ಕೊಡಗು

ವಸಂತ ಕೊಡಗು

ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಸೂರ್ಯನ ದರ್ಶನವಾಗುತ್ತಿದೆ. ಇದೇ ಸುಸಂದರ್ಭದಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದಾದ ನಷ್ಟದ ಪ್ರಾಥಮಿಕ ಅಂದಾಜನ್ನು ಸರ್ಕಾರದ ಅಧಿಕಾರಿಗಳು ಲೆಕ್ಕ ಹಾಕಿದ್ದಾರೆ. ಆದರೆ ವಿಪರ್ಯಾಸವೆಂದರೆ ವಿಕೋಪ ನಡೆದು ಎರಡು ತಿಂಗಳಾಗುತ್ತಾ ಬಂದರೂ ಪರಿಹಾರದ ಹಣ ಜನರ ಜೇಬು ಸೇರಿಲ್ಲ.

ಮನೆ ಕಳೆದುಕೊಂಡವರನ್ನು ಆದ್ಯ ಸಂತ್ರಸ್ಥರೆಂದು ಗುರುತಿಸಲಾಗಿದ್ದು ಅವರಿಗೆ ಮನೆ ಕಟ್ಟಿಕೊಡಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಹೀಗಿದ್ದೂ ನಿಧಾನಗತಿಯ ಕಾರ್ಯವೈಖರಿ ಜನರನ್ನು ಕಂಗೆಡಿಸಿದೆ. ಇನ್ನೂ ಪರಿಹಾರ ನೀಡುವುದಾಗಿ ಪತ್ರಿಕಾ ಹೇಳಿಕೆಗಳನ್ನು ನೀಡಿದವರು, ಫೇಸ್‌ಬುಕ್‌ ಲೈವ್‌ ಬಂದವರೆಲ್ಲಾ ಇಂದು ನಾಪತ್ತೆಯಾಗಿದ್ದಾರೆ.

ಪರಿಣಾಮ ಇನ್ನೂ ಒಂದು ಸಾವಿರದಷ್ಟು ಜನರು ನಿರಾಶ್ರಿತರ ಕೇಂದ್ರಗಳಲ್ಲೇ ಉಳಿದುಕೊಂಡಿದ್ದಾರೆ. ಕಾಫಿಯ ತವರೂರಿನ ಸಾವಿರಾರು ಬೆಳೆಗಾರರೂ ಸಂತ್ರಸ್ಥರಾಗಿದ್ದು ಕಾಫಿ ಮಂಡಳಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಕೂತಿದ್ದಾರೆ. ಅಂದಾಜು 1 ಲಕ್ಷದಷ್ಟು ಕುಟುಂಬಗಳಿರುವ ಕೊಡಗಿನಲ್ಲಿ ಬರೋಬ್ಬರಿ 30 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಪರಿಹಾರಕ್ಕಾಗಿ ಕಾಫಿ ಮಂಡಳಿಗೆ ಸಲ್ಲಿಕೆಯಾಗಿವೆ. ಇದು ಸಂಭವಿಸಿದ ವಿಕೋಪದ ತೀವ್ರತೆಯನ್ನು ತೋರಿಸುತ್ತಿದೆ.

ಒಂದು ಕಡೆ ಅರ್ಜಿ ಸಲ್ಲಿಸಿ ಒಂದಷ್ಟು ಜನರು ಪರಿಹಾರದ ಮೊರೆ ಹೋಗಿದ್ದರೆ ಉಳಿದವರು ಈ ವರ್ಷ ಭಾರೀ ನಷ್ಟದ ಚಿಂತೆಯಲ್ಲಿದ್ದಾರೆ. ಅದಕ್ಕೆ ಕಾರಣ ಬೆಲೆ ಇಳಿಕೆ. ಎರಡು ವರ್ಷಗಳ ಹಿಂದೆ 50 ಕೆಜಿ ಅರೇಬಿಕಾ ಪಾರ್ಚ್‍ಮೆಂಟ್ ಕಾಫಿಯ ಬೆಲೆ ಚೀಲಕ್ಕೆ 9 ಸಾವಿರ ರೂಪಾಯಿಗಳಿಗೂ ಅಧಿಕವಿತ್ತು. ಅದೇ ಇವತ್ತು ಇದರ ಬೆಲೆ ಕೇವಲ 6 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿದೆ. ಕಾಫಿ ತೋಟದ ಮಿಶ್ರ ಬೆಳೆಯಾಗಿರುವ ಕರಿಮೆಣಸಿನ ದರವೂ ವಿಪರೀತ ಕುಸಿದಿದ್ದು ಎರಡು ವರ್ಷಗಳ ಹಿಂದೆ ಇದ್ದ 650 ರೂಪಾಯಿಗಳ ದರದಿಂದ 300 ರೂಪಾಯಿಗೆ ಇಳಿಕೆಯಾಗಿದೆ. ಹೀಗಾದರೆ ಬೆಳೆಗಾರರು ಬದುಕುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಸೋಮವಾರಪೇಟೆ ತಾಲ್ಲೂಕು ಬಿಳಿಗೇರಿ ಗ್ರಾಮದ ಸಣ್ಣ ಕಾಫಿ ಬೆಳೆಗಾರ ಎಂ.ಎ. ಶ್ಯಾಮ್ ಪ್ರಸಾದ್. “ಈ ವರ್ಷ ನಮ್ಮ ಊರಿನಲ್ಲಿ ದುಪಟ್ಟು ಮಳೆ ಆಗಿದ್ದು 150 ಇಂಚು ಮಳೆ ಬಿದ್ದಿದೆ. ಬಹುತೇಕ ಕಾಫಿ ಬೀಜಗಳು ಉದುರಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಬದುಕುವುದು ಹೇಗೆ?” ಎಂಬುದು ಅವರ ಪ್ರಶ್ನೆ.

ಕೊಡಗಿನಲ್ಲಿ ಶೇಕಡಾ 80 ರಷ್ಟು ಕಾಫಿ ಬೆಳೆ ಸಂಪೂರ್ಣ ನಾಶವಾಗಿದೆ. ಕಿತ್ತಲೆ ಹಾಗೂ ಕಾಳು ಮೆಣಸಿನ ಪರಿಸ್ಥಿತಿಯೂ ಇದೇ ಆಗಿದೆ. ಸರ್ಕಾರ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ. ಆದರೆ ವಿಳಂಬ ನೀತಿಯಿಂದಾಗಿ ಸಂಕಷ್ಟ ಇನ್ನೂ ಹೆಚ್ಚುತ್ತಿದೆ ಎನ್ನುತ್ತಾರೆ ಗೋಣಿಕೊಪ್ಪ ಸಮೀಪದ ಕೈಕೇರಿಯ ಕಾಫಿ ಬೆಳೆಗಾರರಾದ ಸುರೇಶ್ ತಮ್ಮಯ್ಯ.

ಇವುರುಗಳೆಲ್ಲಾ ಇದೀಗ ಸರಕಾರಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಬರಲಿದೆ ಎಂದು ಕಾದು ಕುಳಿತಿದ್ದಾರೆ. ಸೋಮವಾರಪೇಟೆಯಲ್ಲಿ ಈ ರೀತಿ 10 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದರೆ, ವೀರಾಜಪೇಟೆಯಲ್ಲಿ ಅಂದಾಜು 7 ಸಾವಿರ ಮತ್ತು ಮಡಿಕೇರಿಯಲ್ಲಿ 12 ಸಾವಿರಕ್ಕೂ ಅಧಿಕ ಅರ್ಜಿಗಳು ಪರಿಹಾರ ಕೋರಿ ಸಲ್ಲಿಕೆಯಾಗಿವೆ ಎಂಬ ಮಾಹಿತಿ ನೀಡುತ್ತಾರೆ ಮಡಿಕೇರಿ ಕಾಫಿ ಮಂಡಳಿಯ ಉಪನಿರ್ದೇಶಕ ಸತೀಶ್ ಚಂದ್ರ. ಈ ಅರ್ಜಿಗಳನ್ನೀಗ ಸೂಕ್ತ ಕ್ರಮಕ್ಕಾಗಿ ಕಂದಾಯ ಇಲಾಖೆಗೆ ರವಾನಿಸಲಾಗಿದೆ ಎಂಬ ಮಾಹಿತಿ ಮುಂದಿಡುತ್ತಾರೆ ಅವರು.

ನಿಯಮಗಳ ಪ್ರಕಾರ ಸಣ್ಣ ಕಾಫಿ ಬೆಳೆಗಾರರಿಗೆ ಬೆಳೆ ನಷ್ಟಕ್ಕೆ ಹೆಕ್ಟೇರ್‌ಗೆ 18,000 ರೂ. ಹಾಗೂ ತೋಟ ನಾಶಕ್ಕೆ ಹೆಕ್ಟೇರ್ ಒಂದಕ್ಕೆ 37,500 ರೂ.ವರೆಗೆ ಪರಿಹಾರ ನೀಡಲು ಅವಕಾಶವಿದೆ. ದೊಡ್ಡ ಬೆಳೆಗಾರರ ವಿಚಾರಕ್ಕೆ ಬಂದಾಗ ಬೆಳೆ ನಾಶಕ್ಕೆ 5 ಎಕರೆವರೆಗೆ ಪರಿಹಾರ ನೀಡಬಹುದಾಗಿದೆ.

ಕೊಡಗಿನಲ್ಲಿ ವಿಕೋಪದಿಂದ ಸಂಭವಿಸಿರುವ ನಷ್ಟದ ಅಂದಾಜನ್ನು ಕಾಫಿ ಮಂಡಳಿ ತಯಾರಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಗೆ ಸಲ್ಲಿಸಿದೆ. ಅವರು ಜಿಲ್ಲೆಗೆ ಬಂದು ಸ್ಥಳ ಪರಿಶೀಲನೆ ನಡೆಸಿ ನಷ್ಟದ ಅಂದಾಜನ್ನೂ ಮಾಡಿದ್ದಾರೆ. ಆದರೆ ಪರಿಹಾರ ಹಣ ಮಾತ್ರ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಸತೀಶ್‌ ಚಂದ್ರ. ಜಿಲ್ಲೆಯಲ್ಲಿ ಕೆಲವು ಭಾಗಗಳಲ್ಲಿ ಶೇಕಡಾ 80 ರಷ್ಟು ಹಾಗೂ ಕೆಲವು ಭಾಗಗಳಲ್ಲಿ ಶೇಕಡಾ 20 ರಷ್ಟು ಬೆಳೆ ಹಾನಿ ಸಂಭವಿಸಿದ್ದು ಒಟ್ಟಾರೆಯಾಗಿ ಶೇಕಡಾ 30 ರಿಂದ 40 ರಷ್ಟು ಫಸಲು ನಾಶ ಸಂಭವಿಸಿದೆ. ಜಿಲ್ಲೆಯಲ್ಲಿ ಬೆಳೆ ನಾಶವಲ್ಲದೆ ಭೂ ಕುಸಿತದಿಂದ ಸುಮಾರು 1,000 ದಿಂದ 1,500 ಎಕರೆ ತೋಟವೂ ನಾಶವಾಗಿದೆ ಎಂಬ ಸಮಗ್ರ ಮಾಹಿತಿಯನ್ನು ಅವರು ಮುಂದಿಡುತ್ತಾರೆ. ಇದಕ್ಕೆಲ್ಲಾ ಪರಿಹಾರ ನೀಡುವ ಕೆಲಸವಾಗಬೇಕಿದೆ. ಆದರೆ ಆ ಕೆಲಸ ನಿಧಾನಗತಿಯಲ್ಲಿರುವುದು ಜನರನ್ನು ತೊಂದರೆಗೆ ಸಿಲುಕಿಸಿದೆ.

ಕಾಫಿ ಪರಿಹಾರದ ಕಥೆ ಒಂದುಕಡೆಯಾದರೆ ಉಳಿದ ನೆರವೂ ಜನರಿಗೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಪರವಾಗಿ ಆಗಸ್ಟ್ ತಿಂಗಳಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ 8 ಕೋಟಿ ರೂಗಳ ಅಲ್ಪ ನೆರವನ್ನು ನೀಡಿದ್ದರು. ಇದು ಬಿಟ್ಟರೆ ಕೇಂದ್ರ ಸರ್ಕಾರದಿಂದ ಇಂದಿನವರೆಗೆ ಚಿಕ್ಕಾಸು ಬಂದಿಲ್ಲ.

‘ಎಲ್ಲವನ್ನೂ ಮೋದಿ ಸರಕಾರ ನೋಡಿಕೊಳ್ಳುತ್ತದೆ’ ಎಂದಿದ್ದ ಸಂಸದ ಪ್ರತಾಪ್‌ ಸಿಂಹ ‘ಲೈವ್‌’ ಕೂಡ ಸ್ಥಗಿತಗೊಂಡಿದೆ. 4 -5 ದಿನದಲ್ಲಿ ಕೊಡಗಿಗೆ ಮತ್ತೊಮ್ಮೆ ಬರುತ್ತೇನೆ ಎಂದಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅತ್ತ ತಲೆ ಕೂಡ ಹಾಕಿಲ್ಲ. ಇನ್ನು ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ಶಾಸಕರಾದ ಮಡಿಕೇರಿಯ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವೀರಾಜಪೇಟೆಯ ಕೆ.ಜಿ. ಬೋಪಯ್ಯ ವಿಧಾನ ಸೌಧದಲ್ಲಾಗಲೀ, ಕೇಂದ್ರ ಸರಕಾರದ ಮೇಲಾಗಲಿ ಒತ್ತಡ ಹೇರಿ ಪರಿಹಾರ ಕೊಡಿಸಲು ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪವನ್ನೂ ಎದುರಿಸುತ್ತಿದ್ದಾರೆ.

ಇತ್ತ ಜಿಲ್ಲಾಧಿಕಾರಿ ಶ್ರೀ ವಿದ್ಯಾ ಅವರು ಮೊದಲಿಗೆ ಸಂತ್ರಸ್ಥರಿಗೆ 900 ಮನೆಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿದ್ದರು. ಆದರೆ ಮನೆಗಳ ನಿರ್ಮಾಣ ಇನ್ನೂ ಆರಂಭವಾಗಿಲ್ಲ. ಜನರು ಮಾತ್ರ ಅತಂತ್ರರಾಗಿ ಇನ್ನೂ ಅಲೆಯುತ್ತಲೇ ಇದ್ದಾರೆ.